‘ನಾನು ನಿಮ್ಮ ಕಾಲ್ ರಿಸೀವ್ ಮಾಡದಿದ್ರೆ ತೋಟದಲ್ಲಿ ಕೃಷಿ ಮಾಡ್ತಾ ಇದ್ದೇನೆ ಅಂದುಕೊಳ್ಳಿ’ ಎನ್ನುವ ಶರತ್ ಕಲ್ಕೋಡ್ ಸಾಹಿತ್ಯ ಕೃಷಿಯಷ್ಟೇ ಮಣ್ಣಿನೊಡನಾಡುವುದನ್ನೂ ಪ್ರೀತಿಸಿದ್ದಾರೆ. ಸಾಹಿತ್ಯ ಕೃಷಿಯ ಬಗ್ಗೆ ಮಾತ್ರ ಓದುಗರಿಗೆ ಗೊತ್ತಿರುವ ಇವರು ಮಲೆನಾಡಿನ ಮಡಿಲಿನವರು.
ಕನ್ನಡ ಸ್ನಾತಕೋತ್ತರ ಪದವಿ ನಂತರ ತಮ್ಮ ಬರವಣಿಗೆಯ ಶಕ್ತಿಯನ್ನೇ ನಂಬಿ ಪತ್ರಿಕೋದ್ಯಮಕ್ಕೆ ಎಂಟ್ರಿ ಕೊಟ್ಟವರು. ಸಂತೋಷ, ತರಂಗ, ಸುಧಾ ಪತ್ರಿಕೆಗಳಲ್ಲಿ ಕೆಲಸ ಮಾಡಿದರು.
ಮಾಸ್ತಿ ಪ್ರಶಸ್ತಿ ವಿಜೇತ ಶರತ್ ಕಲ್ಕೋಡ್ ಅವರ ಹೊಸ ಕಾದಂಬರಿ ಇಂದಿನಿಂದ ಪ್ರತಿ ದಿನವೂ ಪ್ರಕಟವಾಗುತ್ತದೆ.
ಮೊದಲ ಕಂತು ಇಲ್ಲಿದೆ- ಕ್ಲಿಕ್ಕಿಸಿ
ಎರಡನೆಯ ಕಂತು ಇಲ್ಲಿದೆ- ಕ್ಲಿಕ್ಕಿಸಿ
ಮೂರನೆಯ ಕಂತು ಇಲ್ಲಿದೆ- ಕ್ಲಿಕ್ಕಿಸಿ
ನಾಲ್ಕನೆಯ ಕಂತು ಇಲ್ಲಿದೆ- ಕ್ಲಿಕ್ಕಿಸಿ
5
‘ತೇಲಪ್ಪನ ಕೊಟ್ಟೆ’ ಎಂಬ ಸ್ಪೆಷಲ್ ಬ್ರ್ಯಾಂಡ್
ಪಾತಾಳಂಕಣದೊಂದು ಕಡೆ ಕೋಳಿಗೂಡು. ಬಲಗಡೆ ದನ ಹಾಗೂ ಹಂದಿಹಟ್ಟಿ. ಎಡಗಡೆ ಅಡಿಕೆಸಿಪ್ಪೆ, ಕೊರಮಟ್ಟೆ, ಹಾಳೆ, ದಬ್ಬೆ, ಜಿಗ್ಗು ರಾಶಿ ಸಿಪ್ಪೆ ಗುಡ್ಡಿ. ಪಕ್ಕದಲ್ಲೇ ಸೌದೆ ಕೊಟ್ಟಿಗೆ. ಕಡುಮಾಡಲ್ಲಿ ಹಾಕಿದ ಹರಕಲು-ಮುರಕಲ ಕುರ್ಚಿಬೆಂಚ್, ಟೇಬಲ್. ಮೊಣಕಾಲೆತ್ತರದ ಸಿಮೆಂಟ್ ತಿಟ್ಟೆ-ಮದ್ಯ ಪ್ರಿಯರ ಪಾಲಿನ ಸುಖಾಸನ.
ಎದುರುಗಡೆ ಬೆಳೆದ ಹಲಸು, ಮಾವು, ಬೋಗಿ, ಜೀರಕ, ಮುರಗಲ, ಹೊಳೆಗಾರ, ನೇರಲ ಮರದ ಹನಕಲಲ್ಲಿ (ನೆರಳು) ನಿಂತೋ, ಅಲ್ಲಲ್ಲಿ ಬಿದ್ದ ಮರಬುಕಲ್ಲು, ಕೂಯ್ದ ಮರದಬೊಡ್ಡೆ ಮೇಲೆ ಕುಳಿತು ಸಿಲಾವರ ಲೋಟದಲ್ಲಿ ಕುಡಿವ ದೂರಾಳುಗಳ ಮೀಸಲ ಪಡಖಾನೆ.
ಹಿತ್ತಲ ಅಂಗಳದಲ್ಲಿ ಮೇಯುವ ಜಾನುವಾರು, ಮರಿಗಳಡನೆ ಹುಳಹಪ್ಪಟ್ಟೆ ಹೆಕ್ಕುತ್ತಾ ಬರುವ ಕೋಳಿಹಿಂಡು, ಅವುಗಳ ಜೊತೆಜೊತೆ ಕಾರುಬಾರು ನಡೆಸುತ್ತ ‘ಢೂಂ’ಕರಿಸುವ ಹಂದಿ, ಪಿಳ್ಳೆಪಿಸಕ. ದನದಕೊಟ್ಟಿಗೆ ಆ ಬದಿ ಗೊಬ್ಬರಗುಂಡಿ, ಅದರಾಚೆ ಸದಾ ತುಂಬಿ ತಳಕುವ ಗೊಚ್ಚೆಗುಂಡಿ. ಅದರಲ್ಲಿ ಬಿದ್ದೇಳುವ ಹಂದಿಮರಿಗಳು. ಗುಂಗುರು, ನೊಣಗಳು. ಹತ್ತಿರ ಬಂದ ಎಲ್ಲವನ್ನು ‘ಹಚಾ..ಹಚಾ…’ ಅಂತೆಬ್ಬಿ ಮೈಮರೆವ ಹರಟೆ ಮಲ್ಲರ ಪಾನಗೋಷ್ಠಿ.
ಡ್ರಿಂಕ್ಸ್ ಸರಬರಾಜಗುವುದು ಅರಬೆಳಕಿನ ನಡುಮನೆಯಿಂದ. ಇಲ್ಲೇ ಗ್ಲಾಸಿಗೆ ಅಳತೆ ಕಮ್ಮಿಯಾಗಿ, ನೀರು ಹೆಚ್ಚಾಗುವುದು, ಸೋಡಾ ಬಾಟ್ಲಿಗೂ ನೀರು ಸೇರುವುದು, ಪ್ರಖ್ಯಾತ ಬ್ರಾಂಡ್ ಬಾಟ್ಲಿಗೆ, ಕಳಪೆಬ್ರಾಂಡ್ ಮಿಕ್ಸಾಗುವುದು, ಬಾಟ್ಲುಗಳಲ್ಲಿ ಅಲ್ಪಸ್ವಲ್ಪ ಉಳಿದ ಎಲ್ಲಾ ಬ್ರಾಂಡುಗಳೂ ಮಿಕ್ಸಾಗಿ, ಊರವರ ಬಾಯಲ್ಲಿ ಪ್ರಖ್ಯಾತಿ ಪಡೆದ ‘ತೇಲಪ್ಪನ ಕೊಟ್ಟೆ’ ಸ್ಪೆಷಲ್‌ಬ್ರ್ಯಾಂಡ್ ತಯಾರಾಗುವುದು!
ಎಲ್ಲಾ ಮಾಯೆಯೋ, ಪ್ರಭುವೇ ಎಲ್ಲಾ ಕೊಟ್ಟೆ ಮಾಯೆಯೋ!! ಬದಿ ಕತ್ತಲಕೋಣೆ ನಾಗಂದಿಗೆ ಮೇಲೆ ಪೇರಿಸಿಟ್ಟ ಬೀರು, ಬ್ರಾಂಡಿ, ವಿಸ್ಕಿ, ಸೋಡಾ ಪೆಟ್ಟಿಗೆ ಸ್ಟಾಕ್‌ರೂಂ. ಬೋರ್ಡು,ಪ್ರಚಾರದಬ್ಬರವಿಲ್ಲದೆ ಪ್ರಸಿದ್ಧಿ ಪಡೆದ ಅಪ್ಪಟ ಮಲೆನಾಡ ದೇಸಿ ‘ಕೊಟ್ಟೆಬಾರ್!’
‘ತೇಲಪ್ಪನ ಕೊಟ್ಟೆ’ ಎಷ್ಟು ಪವರ್ ಫುಲ್ ಎಂದರೆ ಕೊರೊನಾ, ಲಾಕ್ಡೌನಿಗೂ ಕ್ಯಾರೇಯೆನ್ನದಷ್ಟು! ಕೊರೊನಾ ಕೈಯ್ಯಲ್ಲಿ ಸಿಲುಕಿ ಇಡೀ ಜಗತ್ತೇ ತಲ್ಲಣಿಸಿದರೂ, ಒಂದು ದಿನವಿರಲಿ, ಒಂದೇ ಒಂದು ಕ್ಷಣ ಸಹ ‘ತೇಲಪ್ಪನ ಕೊಟ್ಟೆ ಬಾರ್’ ಬೆದರಲಿಲ್ಲ, ಬೆಚ್ಚಲಿಲ್ಲ! ಅಂದ್ಮೇಲೆ ಅದರ ಹೈಪವರ್ ಎಷ್ಟಿರಬಹುದು ನೀವೇ ಲೆಕ್ಕಹಾಕಿ!
ತೇಲಪ್ಪನ ಕೊಟ್ಟೆ ನಮ್ಮೂರ ಜನಜೀವನ ಬದಲಾಯಿಸಿದ್ದು ಮಾತ್ರವಲ್ಲ; ಸದ್ದಿಲ್ಲದೇ ನಾನಾ ಬಗೆ ಕ್ರಾಂತಿ ಮಾಡಿರುವುದಂತೂ ಸತ್ಯ! ಆಳುಗಳಿಗೆ ಕೆಲಸಕ್ಕೆ ಕರೆಯಲು, ಹೆಚ್ಚು ಕೆಲಸ ಮಾಡಿಸಲು ಕೊಟ್ಟೆ ಕೊಡುಗೆ ಅದ್ಭತ ಮಂತ್ರದಂಡ! ಅಡಿಕೆಗದ್ದೆಕೂಯ್ಲು, ಕಡೇವಟ್ಲು, ವಿಶೇಷಗಟ್ಟಲೆ ಸಂಭ್ರಮಕ್ಕೆ, ಇಸ್ಪೀಟಾಟ ರಂಗೇರುವುದಕ್ಕೆ, ಬೇರೆಬೇರೆ ಸಭೆ, ಸಮಾರಂಭ ಸಡಗರ-ಕಳೆಗಟ್ಟುವುದಕ್ಕೆ ತೇಲಪ್ಪನ ಕೊಟ್ಟೆಯಿಲ್ಲದಿದ್ದರೆ, ರಂಗೇರುವುದಿಲ್ಲ!!
ಹೆಚ್ಚನವರ ಪ್ರಕಾರ ತೇಲಪ್ಪನ ಕೊಟ್ಟೆ ಮಹಿಮೆಯಿಂದಾದ ಉಪದ್ರ, ಅವಾಂತರಗಳೇ ಹೆಚ್ಚು. ಅನುಭವಸ್ಥರ ಉವಾಚದ ಕೆಲವು ಸ್ಯಾಂಪಲ್:
*ಐತೂ ಪೂಜಾರಿ ಯಾವಾಗಲೂ ಟೈಟ್ ಮಾಸ್ಟರೇ. ವರ್ಷಾನುಗಟ್ಟಲೆ ಕಳ್ಳಭಟ್ಟಿ ಕುಡಿದು, ಕುಡಿದು, ಟೈಟ್ ಆಗದೇಯಿದ್ದರೆ ಕೈಕಾಲು ನಡುಕ, ಹೆಜ್ಜೆ ಕಿತ್ತಿಟ್ಟರೆ ಹೊಂಗಿ ಬೀಳುವ ಸ್ಥಿತಿ ತಲುಪಿ ಕುಡಿದುಕುಡಿದೇ ಮೊನ್ನೆ ಸತ್ತ. ಐತೂ ತೇಲಪ್ಪನಕೊಟ್ಟೆ ಕಾಯಂ ಗಿರಾಕಿ. ಗಂಡನ ಸಾವಿಗೆ ತೇಲಪ್ಪನೇ ಕಾರಣವೆಂಬುದು ಪಿಂಚಲು ಗಾಢನಂಬಿಕೆ. ಹಾಗಾಗಿ ‘ನನ್ನ ಸಂಸಾರ ಕುಲಗೆಟ್ಟು ನಾಶ್ನವಾಗಲು ಆವಯ್ಯನೇ ಕಾರಣ. ನಮ್ಮಂತ ಬಡವ್ರು ಬೀದಿ ಪಾಲಾದರೂ ಚಿಂತೆಯಿಲ್ಲ, ಅವನಿಗೆ ಶ್ರೀಮಂತಿಗೆ ಬಂದ್ರೆ ಸಾಕು. ಬಡ್ಡೀಮಗನ ವಂಶನಿರ್ವಶ್ವಾಗಲಿ…’ ಪಿಂಚಲು ಅಳಲು ಮಾತ್ರವಲ್ಲ; ಅನೇಕ ಹೆಂಗಸರ ಶಾಪವೂ ಹೌದು.
*’ಕೆಲಸಕ್ಕೆ ಬಂದವರು ಹತ್ತು ಗಂಟೆ ಹೊತ್ತಿಗೆ ಈಗ ಬಂದೆ ಅನ್ನುತ್ತಾ ತೇಲಪ್ಪನ ಬಾರಿಗೆ ಹೋಗಿ ಕೊಟ್ಟೇಯೇರಿಸಿ ಟೈಟ್ ಆಗಿ ಬರುವುದುಂಟು, ಕೆಲವರು ಎಷ್ಟು ಟೈಟ್‌ಯೆಂದ್ರೆ, ಕಾರಿಕೊಂಡು ಸುಸ್ತಾಗಿ ಕಂವುಚಿ ಮಲಗಿ ಬಿಡ್ತಾರೆ. ಅವ್ರನ್ನ ನಾವೇ ಮನೆಗೆ ಕರೆದುಕೊಂಡು ಹೋಗಿ ಬಿಡಬೇಕು. ಕೆಲ್ಸವೂ ಹಾಳು, ಸಂಬಳ ಬೇರೆ ದಂಡ! ಏನ್ ಮಾಡೋಣ ಹೇಳಿ. ಒಟ್ಟಿನಲ್ಲಿ ನಂ ಗ್ರಾಚಾರ!’ ಸಣ್ಣ ಹಿಡುವಳಿದಾರರ ಗೋಳು.
*’ಅಡಿಕೆ ಕೊನೆ ತೆಗೆಯುವವರು ಕುಡ್ಕೊಂಡು ಬರ‍್ತಾರಾ? ಅರ್ಧ ಮರ ಹತ್ತಿ ದೋಟಿ ಹಾಕಿ ಕೊನೆ ವುಗೀತಾರೆ! ತಗೋಳ್ಳಿ ತೋಟದ ತುಂಬಾ ಉದರೇ ಉದರು. ಹೆಕ್ಕೋದಕ್ಕೆ ಒಂದಾಳಿಗೆ ಬದಲಾಗಿ ನಾಲ್ಕಾಳು ಬೇಕು. ಬೋಳಿಸಿಕೊಳ್ಳುವವರು ಯಾರು? ನಾವೇ ತಾನೇ! ಇನ್ನು ಔಷಧಿ ಹೊಡೆಯುವವರ ಕಥೆ ಬೇರೆ ಕೇಳ್ತೀರಾ? ಅವ್ರದ್ದು ಇನ್ನೂ ಉಗ್ರಾವತಾರ! ಗೊನೆ ಬಿಟ್ಟು ಅಡಿಕೆ, ಬಾಳೇ ಹೆಡಲುಗಳಿಗೆಲ್ಲಾ ಉಡಾಯಿಸುತ್ತಾರೆ. ಬಿಸಿಲು ಬಿದ್ದಾಗ ನೋಡಿದರೆ, ಇಡೀ ತೋಟಕ್ಕೇ ಔಷಧದ ಹುಲಿಬರಕ್ಲು! ಜಡಿಮಳೆ ಬಾರಿಸಿದರೆ ಔಷಧಿ ತಗಲದ ಗೊನೆಗೆ ಕೊಳೆ ಬಂದು ರಾಶಿರಾಶಿ ಉದುರಿ ಪಟದ ಉದ್ದಗಲ ಹಾಸಿಗೆ ಹಾಸಿಟ್ಟ ಹಾಗಿರುತ್ತೆ. ಒಟ್ಟಿನಲ್ಲಿ ನಮ್ಮ ವರ್ಷದ ಅನ್ನಕ್ಕೇ ತತ್ವಾರ..ಸಂಸಾರದ ಗತಿ ದೇವರೇಗತಿ….’ ಅಡಿಕೆ ಬೆಳೆಗಾರರ ದೂರು.
*’ಅಡಿಕೆ, ಗೋಟು ಕದ್ದುಮಾರಿ ಕುಡ್ದು ಬರ‍್ತಾರೆ. ಕುಡಿಯೋರಿಗೆ ಬುದ್ಧಿಯಿಲ್ಲಾಂದ್ರೆ ಕಳ್ಳಮಾಲು ತಗೋಂಡು ಕೊಟ್ಟೆಕೊಡೋನಿಗೂ ದ್ಯಾಸ ಬೇಡವೇನ್ರೀ? ಇದ್ಯಾವ ಸೀಮೆನ್ಯಾಯ ಹೇಳಿ…’ ಹೆಚ್ಚು-ಕಮ್ಮಿ ಕೃಷಿಕರಿಂದ ಕೇಳಿ ಬರುವ ಆರೋಪ!
*ಇವರೆಲ್ಲರಿಗಿಂತ ‘ಕ್ವಾರ್ಟ್ಲೇಡಿ’ ಎಂದೇ ಸುತ್ತಮುತ್ತಲೂರುಗಳಲ್ಲಿ ಪ್ರಸಿದ್ಧಿ ಪಡೆದು, ನಮ್ಮೂರಿನ ಹಿರಿಮೆಗೂ ಕೋಡು ಮೂಡಿಸಿರುವ ದುಗ್ಗಿ ಸಾಹಸ ಬಣ್ಣಿಸದಿದ್ದರೆ ತೇಲಪ್ಪನ ‘ಕೊಟ್ಟೆ ಮಹಾತ್ಮೆ’ ಯಕ್ಷಗಾನ ಅಪೂರ್ಣ ಮಾತ್ರವಲ್ಲ; ಅಸಂಗತ ಕೂಡ! ತೇಲಪ್ಪನ ಕೊಟ್ಟೆಬಾರ್ ಅ(ನ)ಧಿಕೃತ ಮಾಡೇಲೇ ದುಗ್ಗಿಯೆಂಬ ಕ್ವಾಟ್ರುಲೇಡಿ!
ಕೂಲಿನಾಲಿ ಮಾಡುವ ಹೆಂಗಸರು ಕ್ವಾಟ್ರು ಏರಿಸುವುದು ಮಲೆನಾಡಿನಲ್ಲಿ ಮಾಮೂಲು. ‘ಸಸಿ ನೆಟ್ಟಿ ಕಾಲದಲ್ಲಿ ಅಡಸಲಬಡಸಲ ಹೊಡೆವ ಮಳೆ, ಥಂಡೀಗಾಳಿ, ಕಾಲ್‌ಗಂಟವರೆಗೆ ಕೆಸ್ರಗದ್ದೆ ನರ‍್ನಲ್ಲಿ, ಬೆಳಗಿನಿಂದ ಕತ್ತಲ ತನಕ ನಿಂತೇ ಸಸಿ ನೆಟ್ಟಿ ಮಾಡುವುದು, ಕಳೆಕೀಳೋದೂಂದರೆ ಹುಡಗಾಟಿಕೆ ಮಾತೇನ್ರೀ? ಚಳಿಗಾಲದಲ್ಲಿ ಮೈಕೊರೆಯುವ ಚಳಿಯಲ್ಲಿ ರಾತ್ರಿ ಕುಳಿತು, ನಿದ್ದೆಗೆಟ್ಟು ಅಡಿಕೆ ಸುಲಿಯುವುದೆಂದರೆ ಮಕ್ಕಳಾಟಿಕೆಯೇ? ಕ್ವಾಟ್ರು ಹಾಕಿ ಬೆಚ್ಚಗಿರದೇಯಿದ್ರೆ ಉಡ್ರು ಹಿಡಿದು ಸಾಯೋದೇ ಸೈ’ – ಹೀಗೆ ಶ್ರಾಯಗಳಿಗನುಸಾರವಾಗಿ, ವರ್ಷವೀಡಿ ಬೇರೇಬೇರೆ ರೀತಿಯ ಕಠಿಣ ಪರಿಶ್ರಮದ ಕಾರಣ ನೀಡಿ-ಆರೋಗ್ಯ ದೃಷ್ಟಿಯಿಂದ, ನಿತ್ಯಕುಡಿತ ಅನಿವಾರ್ಯವೆಂದು ಸಮರ್ಥಿಸಿಕೊಳ್ಳುವ ಮಹಿಳೆಯರೂ ಇದ್ದಾರೆ! ಅವರ ವಾದ ಅಲ್ಲಗೆಳೆಯುವದಷ್ಟು ಸುಲಭ ಸಾಧ್ಯವಲ್ಲ!
ಆದರೆ ‘ಕ್ವಾರ್ಟ್ಲೇಡಿ’ ದುಗ್ಗಿ ಇವರೆಲ್ಲರಿಗಿಂತ ಸಂಪೂರ್ಣ ಭಿನ್ನ! ಬೆಳಗ್ಗೆ ಎದ್ದವಳೇ ಕಾಫಿಗೆ ಬದಲು ತೇಲಪ್ಪನಬಾರಿಗೆ ಬಂದು ಕ್ವಾಟ್ರು ಏರಿಸಿ ಬಿಡುತ್ತಾಳೆ. ಬಹಳ ವರ್ಷಗಳಿಂದ ನಾನಾ ರೀತಿಯಲ್ಲಿ ಸಹಕರಿಸಿದ ದುಗ್ಗಿ-ಸಿದ್ದ ಗಂಡಹೆಂಡತಿಗೆ ಉಪಕೃತ ತೇಲಪ್ಪನ (ನೀರು ಬೆರೆಸಿದ) ತೀರ್ಥ ಬಿಲ್ ಕುಲ್ ಫ್ರೀ. ಆದರೆ ಸಿದ್ದ ಸತ್ತ ಬಳಿಕ ಪುಕ್ಸಟೆ ತೀರ್ಥಕ್ಕೆ ಅಡ್ಡಿ ಆತಂಕ ಎದುರಾಗಬೇಕೆ?
ಕಾಸಿಲ್ಲದೇ ಕ್ವಾಟ್ರಿಲ್ಲವೆಂಬ ಸುಳಿವು ಸಿಕ್ಕಾಗ ದುಗ್ಗಿ ಪಿತ್ತಕೆರಳಿ ನೆತ್ತಿಗೇರಿ, ‘ಏನೇನು ನಿಮ್ಮ ಕಳ್ಳಭಟ್ಟಿ ತಯಾರಿಕೆಗೆ ನಾವು ಗಂಡಹೆಂಡತಿ ಬೇಕಿತ್ತು. ಪೊಲೀಸರು ಬರ‍್ತಾರೇಂದ್ರೆ ಹೊತ್ತುಕೊಂಡು ಹೋಗಿ ಎಲ್ಲೆಲ್ಲೋ ಅಡಗಿಸಿಡಕ್ಕೂ ನಮ್ಮನ್ನೇ ಕರೀತೀದ್ರೀ. ನಿಮ್ಮ ಗುಟ್ಟನ್ನೆಲ್ಲಾ ಬಾಯಿಬಿಡದೇ ಹೊಟ್ಟೆಯೊಳಗಿಟ್ಟುಕೊಂಡು ಮಾನ ಮರ್ಯಾದೆ ಕಾಪಾಡೋಕೆ ನಾವು ಬೇಕಾಗಿತ್ತು. ಈಗ ನಿಮಗೆ ದೊಡ್ಡಸ್ತಿಕೆ ಬಂತು ನೋಡಿ, ಅಲ್ಲದೆ ಅವ್ರು ಬೇರೇ ಇಲ್ಲ.
ಗಂಡ ಸತ್ತ ಈ ಮುಂಡೆ ಇನ್ನೇನ್ ಹರ‍್ಕತ್ತಾಳೆ ಅಂತಲ್ವಾ ನಿಮಗೆ? ದುಡ್ಡು ಕೊಟ್ಟು ಕುಡಿಬೇಕಾ ನಾನು? ಕುಡಸ್ತೀನಿ… ತಡೀರಿ, ನಿಮ್ಮ ಮಾನ ಹರಾಜ್ ಹಾಕದೇಯಿದ್ರೆ ಯಾವ ಬೋಸೂಡಿ ಮುಂಡೇಯಂತಾ ಕೇಳಿ ಹೇಸಗಟ್ಟವರೇ, ನಿಮ್ಮ ಕುಲನಾಶ್ನಾಗಿ ಹೋಗುತ್ತೋಯಿಲ್ಲೋ ನೋಡಿ!’ ರಾವುಬಲಿ ಬಿಡಿಸಿದ್ದಳು. ದುಗ್ಗಿ ಬಾಯಿಗೆ ಹೆದರಿ ತೇಲಪ್ಪ ಮುಂಚಿನಂತೆ ಕೊಟ್ಟೆ ಫ್ರೀ ನೀಡತೊಡಗಿದ. ಹಾಗಾಗಿ ದಿನವೀಡಿ ಹೆಚ್ಚುಕಮ್ಮಿ ಟೈಟೇಟೈಟು!
ಅಷ್ಟೇ ಅಲ್ಲ; ಕರೆದು ಹೆಚ್ಚು ಕೆಲಸ ಮಾಡಿಸುವವರು, ಬೇರೆಯವರಿಗೆ ಬೈಸುವವರು ದುಡ್ಡು ಕೊಟ್ಟು, ಕುಡಿಸುವ ಸಂಭ್ರಮ ಬೇರೆ! ಊರ ಜಾತ್ರೆ, ಗಡಿಮಾರಿ ಮೆರವಣಿಗೆ ಮುಂಚೂಣಿಯಲ್ಲೂ ದುಗ್ಗಿಯೇ! ವಾಯಿಲ್ ಸೀರೆಉಟ್ಟು ಅವಳದ್ದೇ ಸ್ಟೈಲಿನ ಉದ್ದ ತೋಳಿನ ಕೆಂಪು ರವಕೆ ತೊಟ್ಟ, ಮುಖಕ್ಕೆ ಮೇಕಪ್ ಮಾಡಿ, ನೆತ್ತಿ ಮೇಲೆ ತುರುಬು ಕಟ್ಟಿ, ಅದಕ್ಕೆ ಮಲ್ಲಿಗೆ/ ಗುಲಾಬಿ/ ಕೆಂಪುದಾಸವಾಳ ಮುಡಿದು ಹೊರಟರೆ ಅದೇ ಒಂದು ಬಗೆ ಸಂಭ್ರಮ, ಜಾತ್ರೆ, ಗಡಿಮಾರಿ ಮರದ ಗೊಂಬೆ ಮೆರವಣಿಗೆ ಮುಂಚೂಣಿಯಲ್ಲಿ ಇವಳೇ ಜೀವಂತ ಮಾರಿಗೊಂಬೆ! ತಲೆ ಮೇಲೆ ಟವಲ್ ಇರಿಕೆ ಮೇಲೆ ಬ್ರಾಂಡಿ ಯಾ ಬೀರ್ ಖಾಲಿ ಬಾಟ್ಲು, ಕೈಬಿಟ್ಟು ಮಾಡುವ ವಿವಿಧ ಭಂಗಿ ಡ್ಯಾನ್ಸ್ ನೋಡಲು ಸುತ್ತ ನೆರೆದ ಪ್ರೇಕ್ಷವೃಂದದ ಸಿಳ್ಳು, ಕೇಕೇ, ಚಪ್ಪಾಳೆ, ಕಿರುಚಾಟಗಳ ಗೌಜೇಗೌಜು…
। ಇನ್ನು ನಾಳೆಗೆ ।
0 Comments