
-ಅನಿತಾ ನರೇಶ್ ಮಂಚಿ
ಶನಿವಾರ, ವಾರದ ಎಲ್ಲ ದಿನಗಳಿಗಿಂತ ಪ್ರಿಯವಾದ ದಿನ ನನಗೆ.
ಮಧ್ಯಾಹ್ನವೇ ಬಿಡುವ ಕ್ಲಾಸ್ ಮುಗಿಯುವುದಕ್ಕಿನ್ನೂ ಸ್ವಲ್ಪ ಹೊತ್ತಿತ್ತು. ಉಪಾದ್ಯಾಯರು ಬೋರ್ಡ್‌ನಲ್ಲಿ ಏನನ್ನೊ ಬರೆಯುತ್ತ ಇದ್ದರು. ಅದು ನನಗೆ ಸಂಬಂಧಿಸಿದ ವಿಷಯವೇನಾಗಿರಲಿಲ್ಲ. ಯಾಕೆಂದರೆ ಅಲ್ಲಿ ಬರೆದಿದ್ದ ಯಾವ ಶಬ್ಧಗಳು ನನ್ನ ತಲೆಯೊಳಗೆ ಇಳಿಯಲು ಬಿಲ್ ಕುಲ್ ಒಪ್ಪುತ್ತಿರಲಿಲ್ಲ.
ಕಿಟಕಿ ಪಕ್ಕ ಕುಳಿತುಕೊಳ್ಳುತ್ತಿದ್ದ ನನ್ನ ದೃಷ್ಟಿ ಯೆಲ್ಲ ದೂರದಲ್ಲಿ ನೇರವಾಗಿ ಕಾಣುತ್ತಿದ್ದ ಗಂಟೆಯ ಕಡೆಗೇ ಇತ್ತು. ಬೇಗ ಒಮ್ಮೆ ಈ ಕ್ಲಾಸ್ ಮುಗಿಯಬಾರದೇ ಎಂದು ಮನದಲ್ಲಿ ಬೇಡಿಕೊಂಡಿದ್ದು ತಿಳಿತೇನೋ ಎಂಬಂತೆ ದೇವರ ರೂಪದಲ್ಲಿ ಜವಾನ ರಾಮಯ್ಯಣ್ಣ ಕೈಯಲ್ಲಿ ಗಂಟೆ ಭಾರಿಸುವ ದಪ್ಪ ಕೋಲನ್ನು ಹಿಡಿದು ಪ್ರತ್ಯಕ್ಷರಾದರು. ನನ್ನ ಕೈ ಆಗಲೇ ಬ್ಯಾಗಿನೊಳಗೆ ಪುಸ್ತಕಗಳನ್ನು ತುರುಕುತ್ತಿತ್ತು. ಗುರುಗಳು ಏನೋ ಹೇಳಲು ನಮ್ಮ ಕಡೆ ತಿರುಗಿದಾಗ, ಕರ್ಣಾನಂದಕರವಾದ ಢಣ ಢಣ ಗಂಟೆ ಕೇಳಿಸಿತು. ಕ್ಲಾಸಿನೊಳಗಿರುವ ಅವರನ್ನು ಲೆಕ್ಕಿಸದೆ ಹೋಯ್ ಎಂದು ಗದ್ದಲವೆಬ್ಬಿಸುತ್ತ ನಾವೆಲ್ಲ ಹೊರಗೆ ಧಾವಿಸಿದ್ದರೆ, ಅವರು ತಮ್ಮ ಹಾಜರಿ ಪುಸ್ತಕ , ಪೆನ್ನು, ಹೊಡೆಯಲು ತಂದಿದ್ದ ಕೋಲು ಎಲ್ಲವನ್ನು ಜೋಡಿಸುವುದರಲ್ಲಿ ನಿರತರಾಗಿದ್ದರು.
ನಾನಾಗಲೇ ಶಾಲೆಯ ಗೇಟ್ ದಾಟಿ ನನ್ನ ಜೊತೆಗೆ ಬರಬೇಕಿದ್ದ ನೈನಾಳನ್ನು ಹುಡುಕತೊಡಗಿದೆ.ಒಂದೇ ಕ್ಲಾಸ್ ಆದರೂ ಬೇರೆ ಬೇರೆ ಬೆಂಚಿನವಾಸಿಗಳಾಗಿದ್ದೆವು. ತರಗತಿಯ ಕಡೆಗೆ ನೋಡಿದೆ. ಸರ್ ನ ಹಿಂದಿನಿಂದಲೇ ಬರುತ್ತಿದ್ದವಳು, ನನ್ನನ್ನು ಕಂಡೊಡನೆ ಓಡಿ ಬಂದಳು. ಯಾಕೇ ನಿಧಾನ ಅಂದೆ. ಕೈಯಲ್ಲಿ ಬಚ್ಚಿಟ್ಟಿದ್ದ ಅರ್ಧ ಇಂಚು ಉದ್ದದ ಬಳಪದ ತುಂಡನ್ನು ತೋರಿಸಿದಳು. ನಾಳೆ ಚಿಲ್ಕಿ ಆಡುವಾಗ ಗೆರೆ ಎಳೆಯಕ್ಕಿದು ಅಂದ್ಲು.ನಾನು ಅದರತ್ತ ಗಮನ ಕೊಡದೇ ಬೇಗ ಹೋಗೋಣ ನಡಿ. ಇವತ್ತಿನ ಕೆಲ್ಸ ಮರೆತಿದೆಯಾ ನಿಂಗೆ ಅಂದೆ? ಅವಳೂ ಕಣ್ಣರಳಿಸಿ ಹೌದಲ್ವಾ.. ಓಡಿಕೊಂಡೆ ಹೋಗೋಣ ಮನೆಗೆ ಅಂತ ಓಡಲು ಪ್ರಾರಂಭಿಸಿದಳು. ನಾನು ಅವಳ ಜೊತೆ ಜೊತೆಗೆ ಓಡಿದೆ.
ಏದುಸಿರು ಬಿಡುತ್ತಾ ಮನೆ ತಲುಪಿದ ನಮ್ಮನ್ನು ಕಂಡ ನನ್ನಮ್ಮ ಯಾಕೇ ಈ ಬಿಸ್ಲಿಗೆ ಓಡಿಕೊಂಡು ಬರ್ತೀರ.. ಹೋಗು ಬೇಗ ಕೈಕಾಲು ತೊಳಿ ಅಂದಳು ನನ್ನ ಬೆವರಿದ ಮುಖ ನೋಡುತ್ತಾ.. ಅಮ್ಮಾ ಜೋರು ಹಸಿವು ಅಂದೆ.ನಿಲ್ಲು ಅಣ್ಣ ಬರಲಿ ಅಂದಳು. ಅವನೋ.. ನಿಧಾನಕ್ಕೆ ರಸ್ತೆ ಬದಿಯಲ್ಲಿದ್ದ ಕಲ್ಲನ್ನು ಕಾಲಿನಿಂದ ಒದೆಯುತ್ತಾ ಮನೆಯವರೆಗೆ ತರುವ ಪ್ರಯತ್ನದಲ್ಲಿದ್ದ.
ಅವನಿಗೆ ಬಯ್ದುಕೊಳ್ಳುತ್ತಾ ಮುಳ್ಳಿನ ಮೇಲೆ ಕುಳಿತವರಂತೆ ಚಡಪಡಿಸತೊಡಗಿದೆ. ನೈನಾ ಆಗಲೇ ಊಟ ಮಾಡಿ ನಾಲ್ಕಾರು ಸಲ ನನ್ನೆದುರು ಸುಳಿದಳು. ಕಣ್ಣಿನಲ್ಲೇ ಕಾಯುವಂತೆ ಸನ್ನೆ ಮಾಡಿದೆ.
ಅಂತೂ ಮತ್ತಷ್ಟು ಹೊತ್ತು ನನ್ನನ್ನು ಕಾಸಿ, ಕೊನೆಗೂ ಮನೆ ತಲುಪಿದ ಅಣ್ಣನ ಜೊತೆ ಕುಳಿತು ಅವಸರದಲ್ಲಿ ಊಟ ಮಾಡಿದ ಶಾಸ್ತ್ರ ಮುಗಿಸಿ, ಕೈಯಲ್ಲಿ ಟವೆಲ್ ಹಿಡಿದು ‘ಅಮ್ಮಾ.. ಹೊಳೆ ಹತ್ರ ಆಡಕ್ಕೆ ಹೋಗ್ತೀವಿ’ ಅಂದೆ.

ಯಾವತ್ತಿನಂತೆ ಜಾಗ್ರತೆ ಅಂದಳು ಅಮ್ಮ. ಮಂಡಿ ಮುಳುಗುವಷ್ಟು ನೀರಿರುವ ಅಲ್ಲಿ ಆಟ ಆಡುವುದು ನಮ್ಮ ಶನಿವಾರದ ಮಾಮೂಲಿನ ಕಾರ್ಯಕ್ರಮ. ಇನ್ನೂ ಊಟಕ್ಕೆ ಬಾರದಿದ್ದ ಅಪ್ಪನಿಗಾಗಿ ಅಮ್ಮ ಕಾಯುತ್ತಾ ಕೂತರೆ ನಾನಾಗಲೆ ನೈನಾಳೊಡನೆ ಹೊರಟಾಗಿತ್ತು.
ಕಾವೇರಿ ನದಿಯಲ್ಲಿನ ನೀರು ಬಿಸಿಲಿಗೆ ಪಳ ಪಳ ಹೊಳೆಯುತ್ತಿತ್ತು. ಬದಿಯಲ್ಲಿ ಆಗೊಮ್ಮೆ ಈಗೊಮ್ಮೆ ಕಾಣುವ ಮೀನುಗಳು. ಯಾವಾಗಲೂ ಕೈಯಲ್ಲಿದ್ದ ಟವೆಲ್‌ನಲ್ಲಿ ಅದನ್ನು ಹಿಡಿಯುತ್ತಿದ್ದೆವು. ದಡದಲ್ಲಿ ನಾಲ್ಕು ಬೊಗಸೆ ಮರಳನ್ನು ತೆಗೆದರೆ ನೀರು ಸಿಗುತ್ತಿತ್ತು. ಇದು ನಮ್ಮ ಕೆರೆ ಎನಿಸಿಕೊಳ್ಳುತ್ತಿತ್ತು. ಇದರೊಳಗೆ ಹಿಡಿದ ಮೀನುಗಳನ್ನು ಬಿಡುತ್ತಿದ್ದೆವು. ಅವು ಅತ್ತಿಂದಿತ್ತ ಈಜಾಡುವುದನ್ನು ನೋಡುತ್ತಾ ಕುಳಿತುಕೊಳ್ಳುತ್ತಿದ್ದೆವು. ನಂತರ ಅವುಗಳನ್ನು ಪುನಃ ನೀರಿಗೆ ಬಿಟ್ಟು ನಾವು ಸ್ವಲ್ಪ ಹೊತ್ತು ನೀರಲ್ಲಿ ಈಜಾಡುತ್ತಿದ್ದೆವು. ಒದ್ದೆ ಬಟ್ಟೆ ಒಣಗುವವರೆಗೆ ಕಲ್ಲಾಟ, ಮನೆ ಆಟ, ಅಡುಗೆ ಆಟ ಆಡಿ ಹಸಿವಾಗುವಾಗ ಮನೆ ನೆನಪಾಗಿ ಹೊರಡುತ್ತಿದ್ದೆವು.
ಆದರೆ ಇಂದು ನಮ್ಮ ಗುರಿ ಇದ್ದದ್ದೇ ಬೇರೆ ಕಡೆಗೆ.ಕಪ್ಪು ಬಣ್ಣದ ಹಣ್ಣುಗಳನ್ನು ತುಂಬಿಕೊಂಡ ನೇರಳೆ ಹಣ್ಣಿನ ಮರ ನಮ್ಮಿಬ್ಬರನ್ನು ಸೆಳೆದಿತ್ತು.ನನ್ನ ಅಣ್ಣನಿಗಾಗಲೀ, ಅವಳ ಅಣ್ಣನಿಗಾಗಲೀ ಸುಳಿವು ಸಿಕ್ಕದಂತೆ ನಾವೇ ಮರ ಹತ್ತಿ ಬೇಕಾದಷ್ಟು ಹಣ್ಣು ಕುಯ್ಯುವುದು ನಮ್ಮ ಕನಸಾಗಿತ್ತು. ಅವರಿಗೇನಾದ್ರು ಗೊತ್ತಾದ್ರೆ ಮರ ಹತ್ತುವುದರಲ್ಲಿ ನಮ್ಮಿಂದ ಚುರುಕಾಗಿದ್ದ ಅವರು ನಮ್ಮನ್ನು ಮರ ಹತ್ತಲು ಬಿಡದೆ ನಾವೇ ಕುಯ್ದು ಕೊಡ್ತೀವಿ ಅಂತ ಸ್ವಲ್ಪವೇ ಹಣ್ಣು ನಮಗೆ ಕೊಡುತ್ತಿದ್ದರು.
ನದಿಯ ಕಡೆಗೆ ವಾಲಿಕೊಂಡಿದ್ದ ದೊಡ್ಡ ಮರ. ಹತ್ತಲೇನೂ ಕಷ್ಟವಿರಲಿಲ್ಲ. ನಾವಿಬ್ಬರೂ ಸಾಕಷ್ಟು ಹಣ್ಣು ಇದ್ದ ದೊಡ್ದ ಕೊಂಬೆಗಳ ಮೇಲೇರಿದೆವು. ಗೊಂಚಲು ಗೊಂಚಲಾಗಿ ನೇತಾಡುತ್ತಿದ್ದ ಹಣ್ಣುಗಳು ಬಾಯಲ್ಲಿ ನೀರು ತರಿಸಿದವು. ಕೈಗೆ ಸಿಕ್ಕಿದ ಗೊಂಚಲಿನ ಎಲ್ಲಾ ಹಣ್ಣುಗಳು ಹಾಗೇ ಬಾಯೊಳಗೆ ನುಗ್ಗತೊಡಗಿತು. ಹೇ.. ನಿನ್ನ ನಾಲಿಗೆ ತೋರ್ಸು ಅಂದಳು ನೈನಾ.. ತೋರಿಸಿದೆ. ಅಬ್ಬಾ ಎಷ್ಟು ನೀಲಿ ಎಂದಳು. ನನ್ನದು ನೋಡೇ.. ಎಂದು ಬಾಯ್ದೆರೆದವಳ ತುಟಿಗಳೇ ಇಂಕಿನ ಬಣ್ಣ ಪಡೆದುಕೊಂಡಿತ್ತು. ರಾಕ್ಷಸಿ ತರ ಕಾಣ್ತೀಯ ಅಂದೆ.. ಇಬ್ಬರೂ ಜೋರಾಗಿ ನಕ್ಕೆವು. ಆಗಲೇ ನದಿಯ ನೀರಿನಲ್ಲಿ ಯಾರೋ ನಡೆದು ಬರುತ್ತಿರುವ ಶಬ್ಧ ಕೇಳಿಸಿತು.
ನೈನಾಳಿಗೆ ಪಿಸುಮಾತಿನಲ್ಲೇ ಸುಮ್ಮನಿರುವಂತೆ ತಿಳಿಸಿದೆ. ಹತ್ತಿರ ಬಂದಂತೆ ಕಾಣಿಸಿದ್ದು ನನ್ನಣ್ಣ ಪುಟ್ಟ ಮತ್ತು ಅವಳಣ್ಣ ಪಾಪುವಿನ ಮುಖ. ಅವರಿಂದ ಮೊದಲೇ ಮರವನ್ನಾಕ್ರಮಿಸಿಕೊಂಡಿರುವ ನಮ್ಮ ಬಗ್ಗೆ ಅಚ್ಚರಿ ವ್ಯಕ್ತ ಪಡಿಸುತ್ತಲೇ ಅವರಿಬ್ಬರೂ ಮೇಲಿನ ಕೊಂಬೆಗೇರಿ ಅಲ್ಲಿರುವ ಹಣ್ಣುಗಳನ್ನು ಕಿತ್ತು ತಿನ್ನತೊಡಗಿದರು.ಈಗ ಎಲ್ಲರೂ ಹಕ್ಕಿಗಳಂತೆ ಗಲಾಟೆ ಎಬ್ಬಿಸತೊಡಗಿದೆವು.
ಇದ್ದಕ್ಕಿಂದ್ದಂತೆ ಲಟ ಲಟ ಎಂಬ ಸದ್ದು ಕೇಳಿಸಿತು. ಅಪಾಯವನ್ನು ಗ್ರಹಿಸಿ ಎಲ್ಲರೂ ಮೌನವಾದೆವು.ಸದ್ದಿನ ಮೂಲ ಎಲ್ಲೆಂದು ಕಣ್ಣುಗಳು ಅರಸಲು ತೊಡಗಿದವು. ನನಗೇಕೋ ಮೇಲಿನಿಂದ ಕೇಳಿದಂತೆನಿಸಿತ್ತದು. ಹೇ..ಪಾಪು ಜಾಗ್ರತೆ ಕಣೊ.. ನೀನು ನಿಂತ ಗೆಲ್ಲಿನಿಂದಲೇ ಶಬ್ಧ ಬಂದಿದ್ದು ಎಂದೆ.
ಅಷ್ಟರಲ್ಲಿ ಮತ್ತೊಮ್ಮೆ ಲಟ ಲಟ ಎಂದಾಗಿ ಕೂಡಲೇ ದಡ್ಡಾಲ್ ಎಂಬ ಭಯಂಕರ ಸದ್ದಿನೊಂದಿಗೆ ಮರದ ದೊಡ್ಡ ಗೆಲ್ಲೊಂದು ತುಂಡಾಗಿ ನೀರಿಗೆ ಬಿತ್ತು. ಮರದಲ್ಲಿದ್ದ ಮೂವರು ಭಯಭೀತರಾಗಿದ್ದರೆ, ನಾಲ್ಕನೆಯವಳಾದ ನಾನು ಪುಷ್ಪಕ
ವಿಮಾನದಲ್ಲಿಳಿದಂತೆ ಕೊಂಬೆಯೊಂದಿಗೆ ನೀರಿಗೆ ಬಿದ್ದೆ.ಊರಿನ ಜಾತ್ರೆಯಲ್ಲಿ ಕುಳಿತ್ತಿದ್ದ ದೊಂಬರ ತೊಟ್ಲಿನ ಅನುಭವ ಇನ್ನೊಮ್ಮೆ ಆದಂತಾಯಿತು. ಮರದ ಗೆಲ್ಲು ನೆಟ್ಟಗೆ ಬಿದ್ದ ಕಾರಣ ಒಂದಿಷ್ಟೂ ಪೆಟ್ಟಾಗದ ನಾನು ಅದರಿಂದ ಇಳಿದು, ಮೊದಲು ಕೈಗೆಟುಕದೆ ತುದಿಯಲ್ಲುಳಿದಿದ್ದ ನೇರಳೆ ಹಣ್ಣುಗಳನ್ನು ಕುಯ್ಯತೊಡಗಿದೆ.
ಅಷ್ಟರಲ್ಲಾಗಲೇ ಪಾಪು ಅದ್ಯಾವ ಮಾಯದಲ್ಲೋ ಮರದಿಂದ ಇಳಿದು ಮನೆಗೆ ಓಡಿ ನನ್ನಪ್ಪ, ಅಮ್ಮನಿಗೆ ಸುದ್ಧಿ ಮುಟ್ಟಿಸಿದ್ದ. ಗಾಭರಿಯಿಂದ ಓಡಿ ಬಂದ ಅವರು ನಾನು ಆರಾಮವಾಗಿ ಹಣ್ಣು ಕುಯ್ಯುತ್ತಾ ನಿಂತಿರುವುದನ್ನು ಕಂಡು ಕೊಂಚ ನಿರಾಳವಾದರು.
ಅಮ್ಮ ಈಗ ಹೆದರಿಕೆಯ ಬದಲು ಆ ಜಾಗದಲ್ಲಿ ಸಿಟ್ಟನ್ನು ತುಂಬಿಕೊಂಡು ಅಲ್ಲಿ ಬಿದ್ದಿದ್ದ ಒಂದು ಕೋಲು ಎತ್ತಿಕೊಂಡು ಹೊಡೆಯಲು ಬಂದಳು. ನನ್ನ ಹತ್ತಿರ ಬಂದವಳೆ ಕೋಲನ್ನು ಬಿಸುಟು ನನ್ನನ್ನು ಅಪ್ಪಿಕೊಂಡು ಅಳ ಹತ್ತಿದಳು. ಅವಳು ಅಪ್ಪಿಕೊಂಡಾಗಲೇ ನನಗೆ ನೆನಪಾಗಿದ್ದು , ನಾನು ಮಡಿಲಲ್ಲಿ ತುಂಬಿಕೊಂಡಿದ್ದ ನೇರಳೆ ಹಣ್ಣುಗಳು. ಅವೆಲ್ಲ ನಾನು ಬೀಳುವಾಗ ನನ್ನಿಂದ ಮೊದಲೇ ನೀರಿಗೆ ಹಾರಿ ತೇಲಿಕೊಂಡು ಹೋಗಿದ್ದವೇನೋ.. ಛೆ! ಅಮ್ಮನಿಗೆ ಕೊಟ್ಟು ಅವಳನ್ನು ಕುಶಿ ಪಡಿಸಬೇಕೆಂದಿದ್ದ ಹಣ್ಣುಗಳು ಮಾಯವಾಗಿದ್ದನ್ನು ಕಂಡು ನಾನೂ ಅಮ್ಮನೊಂದಿಗೆ ಅಳತೊಡಗಿದೆ.
ಚಿತ್ರಗಳು : ರಾಮ್ ನರೇಶ್ ಮಂಚಿ
—







ಎಂತಹ ಸೊಗಸಾದ ಅನುಭವವನ್ನು ಹಂಚಿಕೊಂಡಿದ್ದೀರಿ. ಓದಿ ಖುಷಿಯಾಯಿತು.
ನನ್ನ ಬಾಲ್ಯದ ದಿನಗಳನ್ನು ನೆನಪಿಸಿದ ಸುಂದರ ಬರಹ.ನನಗೂ ನೇರಳೆ ಹಣ್ಣು ಇಷ್ಟ…..:))ಊರಿನ ಮನೆಯ ಬಳಿ ಎರಡು ನೇರಳೆ ಮರಗಳಿದ್ದವು .ಈಗಲೂ ಹೋದಾಗ ಆ ಮರದಲ್ಲಿ ಹಣ್ಣುಗಳಿವೆಯೇ ಎಂದು ನೋಡುತ್ತೇನೆ …:))
ಬರಹದ ಶೈಲಿ ತುಂಬಾ ಚೆನ್ನಾಗಿದೆ. ನಿರಾಯಾಸವಗಿ ಓದಿಸಿಕೊಂಡು ಹೋಯಿತು. ಬಾಲ್ಯದಲ್ಲಿ ನಾನೂ ಕೂಡ ಸ್ನೇಹಿತರೊಂದಿಗೆ ಕಾಡು ಹಣ್ಣುಗಳನ್ನು ಅರಸಿಕೊಂಡು ಅಲೆಯುತ್ತಿದ್ದೆ. ಒಂದು ಬಾರಿ ಹೀಗೆ ಬೆಟ್ಟವೊಂದಕ್ಕೆ ಹೋಗಿದ್ದಾಗ ಉತ್ಸಾಹದಲ್ಲಿ ಮೈಮರೆತು ಕತ್ತಲಾಗುತ್ತಿದ್ದದ್ದನ್ನು ಗಮನಿಸದೆ, ದಾರಿಯೂ ತಪ್ಪಿ ಹೋಗಿ ಮನೆ ಸೇರಲಾಗದೆ ಪಡ ಬಾರದ ಕಷ್ಟ ಪಟ್ಟಿದ್ದೆ :):)
well written 🙂
ಬಾಲ್ಯದ ಅನುಭವಗಳನ್ನು ತುಂಬ ಚೆಂದವಾಗಿ ಹಿಡಿದುಕೊಟ್ಟಿದ್ದೀರಿ….ನೀವು ನೆರಳೇಮರದ ಗೆಲ್ಲು ಲಟಲಟ ಶಬ್ದ ಮಾಡುತ್ತಾ ಮುರಿದು ಬಿದ್ದಿದ್ದು ಜೊತೆಯಲಿ ನೀವು ಕೂಡ ಬಿದ್ದಿದನ್ನು ಓದಿದಾಗ ನನ್ನ ಬಾಲ್ಯ ನೆನಪಾಯಿತು. ಹೈಯರ್ ಪ್ರೈಮರಿ ಸ್ಕೂಲ್ ನಲ್ಲಿದ್ದಾಗ ಮಳವಳ್ಳಿಯ ಟ್ರಾವೆಲ್ಸ್ ಸರಕಾರಿ ಬಂಗ್ಲೋ ಆವರಣದಲ್ಲಿರುವ ದೊಡ್ಡ ನೇರಳೇಮರವನ್ನು ಫ್ರೆಂಢ್ಸ್ ಜೊತೆ ಹತ್ತಿ ಗೊಂಚಲು ಗೊಂಚಲು ಹಣ್ಣುಗಳನ್ನು ಕಿತ್ತುಕೊಳ್ಳುತ್ತಿದ್ದಾಗ ರೆಂಬೆ ಮುರಿದು ಕೆಳಗೆ ಬಿದ್ದಿದ್ದೆ. ಕಾಲಿಗೆ ಪೆಟ್ಟಾಗಿತ್ತು. ಈಗ ನಿಮ್ಮ ಬರಹ ಓದಿದ ನಂತರ ಅದು ಮತ್ತೆ ನೆನಪಾಗಿ ನಗು ಬಂತು….ಬಾಲ್ಯದ ನೆನಪು ಮರುಕಳಿಸುವ ಬರಹ ನೀಡಿದಕ್ಕೆ ಥ್ಯಾಂಕ್ಸ್ ಕಣ್ರಿ…
very nice writing….
I will write detailed comment after some time.
I just wanted to write it later only. but now all I wanted to say that.. this is super… very good… thank you… 🙂
ಚೆನ್ನಾಗಿದೆ ಅನಿತಕ್ಕ ಬಾಲ್ಯದ ನೆನಹಿನ ಸಾಲುಗಳು. “ಒದ್ದೆ ಬಟ್ಟೆ ಒಣಗುವವರೆಗೆ ಕಲ್ಲಾಟ, ಮನೆ ಆಟ, ಅಡುಗೆ ಆಟ ಆಡಿ ಹಸಿವಾಗುವಾಗ ಮನೆ ನೆನಪಾಗಿ ಹೊರಡುತ್ತಿದ್ದೆವು”. ಹಸಿವಾದಾಗ ಮನೆ ನೆನಪಾಗಿದ್ದೆ ತಡ ಜೀವನದಾಟ ಅಲ್ಲೇ ಪ್ರಾರಂಭ..
ಆ ದಿನಗಳು (ಬಾಲ್ಯ)ಎಷ್ಟು ಸುಂದರ. ಇನ್ನೊಂದು ಜನುಮ ಎಂಬುದೊಂದಿದ್ದರೆ ಬರೀ ಬಾಲ್ಯ ಮಾತ್ರ ಸಾಕು.
balya,yavvana.muppu.ee muru stitigalalli.naavu nijavaglu sukapadodu balyadalle.alwa madam.but eegina makkalige balyavennuvude illa.avara pustakada hore,shchoolna ottada, tution,sylabus,heege heege,innu hattu otttadagala madye avaru balyavanne kaledukolluttiddare anisutte, naavu shalege hoguvaaga unasehannu bella kuttikondu jeballi ittukondu,shaleyalli.mestrige gottagadahage,tindu,pakkadavrigu kottu hosa kushi anubhavisuttedevu, ratriyalli namma ajjano,appano heluva,ramayana,mahabharatha,katheyanno.illave yavudo janapada kathe kelutta malagittiddevu.but unfortunately eegina makkalu they grow without all these wonderful opportunities,ivaru kabadiaadalla,markoti,goli,sabja,kannamuchhale,appa ammana aata,kuntabille, kolaata yavudu gottilla, idda swalpa samayadalli aa murkarapettige munde kutu murkaraguttiddare,who has to guide them
d.ravi varma hospet