(ಉದಯವಾಣಿಯಲ್ಲಿ ಪ್ರಕಟವಾದ ಸಂತೆಯೊಳಗೊಂದು ಮನೆ ಅಂಕಣಕ್ಕೆ ಪ್ರತಿಕ್ರಿಯೆ)
ಗಿರಿಜಾಶಾಸ್ತ್ರಿ, ಮುಂಬಯಿ
ಪ್ರೀತಿಯ ವೀಣಾ, ಯಾಕೆ ನಿನ್ನ ಮನೆ ಬಾಗಿಲನ್ನು ಹೀಗೆ ಮುಚ್ಚಿಬಿಟ್ಟೆ ? ಎಂಥ ಚಂದದ ಮನೆ ಮಾರಾಯ್ತೀ! ಮನೆಯ ಒಂದು ಝಲಕ್ಕನ್ನು ಹೀಗೆ ಒಮ್ಮೆ ತೋರಿಸಿಬಿಟ್ಟು ಪರದೆ ಎಳೆದು
ಬಿಡುವುದೇ? ಹಲವಾರು ವರುಷಗಳಿಂದ ಎಲ್ಲೋ ಮಾಯವಾಗಿ ಈಗ ಧುತ್ತನೇ ಬಂದು ಸಂತೆಯೊಳಗೊಂದು ಮನೆಯಮಾಡಿ ಓಡಿಬಿಡುವುದೆಂದರೆ? ನೀನು ಖಂಡಿತಾ ಶಬ್ದಕ್ಕೆ ನಾಚಿರಲಿಕ್ಕಿಲ್ಲ.
ಶಬ್ದಗಳು ನಿನ್ನನ್ನು ಸುಸ್ತಾಗಿಸಿರಬೇಕು. ಒಂದೋ ಮಾತು ಸುಸ್ತಾಗಿ ಮೌನಕ್ಕೆ ಶರಣುಹೋಗಬೇಕು, ಇಲ್ಲ ಮಾತು ಮಥಿಸಿ ನವನೀತವಾಗಬೇಕು. ಎರಡೂ ಚೆನ್ನವೇ. ಮತ್ತೆ ಎಂದು ಬರುತ್ತೀ?
ಸುಮಾರು ಹದಿನೈದು ಇಪ್ಪತ್ತು ವರುಷಗಳಹಿಂದೆ ಅಕ್ಕನ ಕುರಿತಾದ ನಿನ್ನ ಎಂ. ಫಿಲ್ ಅಧ್ಯಯನದ ಬಗ್ಗೆ ಉದಯವಾಣಿಯಲ್ಲಿ ಓದಿದ್ದೆ. ಆನಂತರ ನಿನ್ನ ಸುದ್ದಿಯೇ ಇಲ್ಲ. ಈಗೀಗ ಅಲ್ಲಲ್ಲ್ಲಿ
ವೀಣಾಧರಿಯ ಲೇಖನದಲ್ಲಿ, ವಿಜಯ ಕರ್ನಾಟಕ, ಚಂದನದಲ್ಲಿ ಕಾಣಿಸಿಕೊಂಡಿದ್ದೆ ನೀನು. ಅಥವಾ ಇದು, ದೂರದ ಮುಂಬಯಿಯಲ್ಲಿ ಕುಳಿತು ಖಬರಗೇಡಿಯಾದ ನನ್ನ ಮಿತಿಯೂ ಇರಬಹುದು
ಕ್ಷಮಿಸು. ಅಕ್ಕನನ್ನು ನೀ ಹಚ್ಚಿಕೊಂಡ ಪರಿ ನೋಡಿದರೆ ನನಗೆ ಹೊಟ್ಟೆಉರಿ ! ಎಷ್ಟು ಗಾವುದ ಗಾವುದ ದೂರ ನಡೆದು ಬಿಟ್ಟೆಯೇ ! ಅಕ್ಕನನ್ನು ಅಷ್ಟೇ ಗಾಢವಾಗಿ ಹಚ್ಚಿಕೊಂಡ ನಾನೂ ಇದ್ದೇನೆ
ಇದ್ದಲ್ಲೇ. ನಿನ್ನನ್ನು ಬಹಳ ದಿನಗಳಿಂದ ಕಾಣುವ ಹಂಬಲ. ನಡಿ, ಕಲ್ಲಳ್ಳಿಗೆ ಹೋಗಿಯೇ ಬಿಡುವ ಎಂಬ ಒಳಗಿನ ಒತ್ತಾಸೆ ಒಮ್ಮೊಮ್ಮೆ. ಈಗ ನೀನು ಕಲ್ಲಳ್ಳಿ ಬಿಟ್ಟಿದ್ದೀ ಎಂದು ತಿಳಿಯಿತು. ಸ್ಥಾವರಕ್ಕೆ
ತಾನೇ ಅಳಿವು? ನೀನು ಸ್ಥಾವರವಾಗದಂತೆ, ಇನ್ನೇನು ಬೇರು ಬಿಟ್ಟುಬಿಡುವೆಯೋ ಎನ್ನುವ ಸುಳಿವು ಸಿಕ್ಕ ತಕ್ಷಣ ನಿನ್ನ ಅಪ್ಪ ಸತ್ಯಕಾಮರು ನಿನ್ನನ್ನು ಎಬ್ಬಿಸಿಕೊಂಡು ಹಿಮಾಲಯದಲ್ಲೆಲ್ಲಾ ಸುತ್ತಾಡಿದ
ಜಂಗಮ ಜಕ್ಕ ಕೇಳಲು ಎಷ್ಟು ಚೆನ್ನ! ನಿನ್ನನ್ನು ಕಾಣುವ ಹಂಬಲ ಎಂದೆ. ಕಂಡೇ ಕಾಣಬೇಕೆ? ಟಿ.ವಿ.ಯಲ್ಲಿ ಕೂತಹಾಗೆ ಎದುರು ಬದುರು ಕೂತೇ ಸಂವಾದ ನಡೆಸಬೇಕೆ? ಎನ್ನುತ್ತಾನೆ ನನ್ನ ಗಂಡ.
ನಿಜ ಮಾರಾಯ್ತಿ ನಿನ್ನ ಜೊತೆ ಎಷ್ಟು ಹರಟಿಲ್ಲ? ಕುಕ್ಕರಿಡುವಾಗ, ತರಕಾರಿ ಹಚ್ಚುವಾಗ, ಮಾರುಕಟ್ಟೆಯ ಸಂದುಗೊಂದುಗಳಲ್ಲಿ ಹೊಗುವಾಗ, ಅಷ್ಟೇ ಏಕೆ ಈಗ ಇದೀಗ ಇದನ್ನು ಬರೆಯುವ
ಹೊತ್ತಿನಲ್ಲಿ? ಆದರೂ ಒಳಗೆಲ್ಲೋ ಅದು ನಿನಗೆ ತಲಪಬೇಕು. ತಲಪಿದ್ದರ ಗುರುತಾಗಿ ನಿನ್ನಿಂದ ಉತ್ತರ ಬರಬೇಕು… ಈ ಆಸೆ ಎಂಥ ಹುಚ್ಚು ಮಾರಾಯ್ತಿ !
ನೀ ಕೇಳಿದ್ರೆ ಕೇಳು ಬಿಟ್ರೆ ಬಿಡು, ನನಗೆ ನಿನ್ನ ಹಾಡನ್ನು ಹಾಡದಿರಲು ಸಾಧ್ಯವೇ ಇಲ್ಲ, ಎಂದು ಅಕ್ಕ ಹೊರಟು ಬಿಟ್ಟಳಲ್ಲ. ಕಂಡ ಕೆರೆ ಹಳ್ಳ ಬಾವಿ ತೊರೆ ಗಿರಿವನ ಗಿಳಿ ಕೋಗಿಲೆ ಅಂಚೆ ಸರೋವರ-
ಹೀಗೆ ಅವಳು ವಿಳಾಸ ಕೇಳದೇ ಬಿಟ್ಟದ್ದು ಯಾರನ್ನು ? ಅವು ವಿಳಾಸ ಹೇಳಿದುವೇ? ಉತ್ತರ ಕೊಟ್ಟವೇ? ವಸಂತ ದಿವಾಣಜಿಯವರು ಹೇಳುತ್ತಾರೆ ಕನ್ನಡ ಸಾಹಿತ್ಯದಲ್ಲಿ ಪ್ರೇಮಕಾವ್ಯ ಎನ್ನುವುದು
ಇಲ್ಲವೇ ಇಲ್ಲ ಎಲ್ಲವೂಸ ಠಟಟಠಡಣಜ ! ಕನ್ನಡ ಸಾಹಿತ್ಯ ಪ್ರಪಂಚದೊಳಗೆ ಅವರಂತಹ ಸಂತ ಇನ್ನೊಬ್ಬರಿಲ್ಲ ನೋಡು. ನೀನು ಅವರನ್ನು ಮಾಮ ಎಂದು ಕರೆಯುತ್ತೀಯಂತೆ. ನಾನಂತೂ
ಅವರನ್ನು ಕಾಕ ಎನ್ನುತ್ತೀನಿ. ಪಾಪ ಕಾಕನಿಗೆ ಇತ್ತೀಚೆಗೆ ಆರೋಗ್ಯವೇ ಸರಿಯಿಲ್ಲ. ಇದ್ದರೆ ಇದ್ದು ಬಿಡಬೇಕು ಕಾಕನಂತೆ. ಬರೆಯುವುದಷ್ಟೇ ಅವರ ಕರ್ಮ! ಈಚೀಚೆಗಂತೂ ಪಲ್ಲಣ್ಣ ಕಾಡಿಸಿ ಪೀಡಿಸಿ
ಬರೆಸಿಕೊಂಡು ಅಚ್ಚು ಹಾಕಿದರಷ್ಟೇ. ಅಗೋ ಕುಸುಮಾಕರ ದೇವರ ಗೆಣ್ಣೂರ! ಇಲ್ಲವಾದರೆ ಇಲ್ಲವೇ ಇಲ್ಲ. ಅಮಾಯಕ ಗುಬ್ಬಿ ಮರಿಯ ಹಾಗೆ ಕುಳಿತು ಬಿಡುವುದು, ಅವರ ಬರಹಗಳಿಗೂ ಅದರ
ಪ್ರಕಟಣೆಗೂ ಯಾವ ಸಂಬಂಧವೂ ಇಲ್ಲದಂತೆ. ಅವರ ಬಳಿ ಕುಳಿತು ಮಾತನಾಡಿದವರಿಗೆ ಮಾತ್ರ ಗೊತ್ತು. ಬಾಯಿ ತೆರೆದರೆ ಎಂಥ ಬ್ರಹ್ಮಾಂಡ ಮಾರಾಯ್ತಿ? ಜೆ.ಕೆ ಅವರನ್ನು ಆವರಿಸಿಕೊಂಡಿರುವ
ಪರಿ ! ಅದನ್ನು ಅವರು ಒಪ್ಪುವುದಿಲ್ಲ ಆ ಮಾತು ಬೇರೆ. ಜೆ.ಕ.ೆ ಗಿಂತಲೂ ಮುಂದೆ ಹೋಗಿರಬೇಕು, ಯಾರಿಗೆ ಗೊತ್ತು?

ನಿನ್ನ ‘ಅಕ್ಕನ ದ್ವೈತ’ವನ್ನು ಓದಿದೆ. ಕೊನೆಯಭಾಗ ಬಹಳ ಹಿಡಿಸಿತು. ಅಕ್ಕ ಕೊನೆಗೂ ಒಬ್ಬ ಪುರುಷನನ್ನೇ ಒಲಿದದ್ದು ಅವನ ಯಾಜಮಾನ್ಯವನ್ನು ಒಪ್ಪಿದ್ದು ನಮ್ಮ ಸ್ತ್ರೀವಾದಿಗಳಿಗೆ
ಆಕ್ಷೇಪಾರ್ಹವಾಗಿದೆ. ಇಷ್ಟ ದೈವವೆನ್ನುವುದು ಪುರುಷನೇ ಆಗಿರಬೇಕು ಅದನ್ನು ಅರಸುವವರೆಲ್ಲಾ ಸ್ತ್ರೀಯರೇ ಆಗಿರಬೇಕು ಅವನ ಒಡೆತನವನ್ನು ಒಪ್ಪಿಕೊಳ್ಳಬೇಕು ಏಕೆ ಎನ್ನುವುದು ಯಾವಾಗಲೂ
ಏಳುವ ಪ್ರಶ್ನೆ. ಆದರೆ ಪುರುಷಾರ್ಥ, ಪುರುಷಸೂಕ್ತ ಎನ್ನುವ ಪದಗಳ ಅರ್ಥವ್ಯಾಪ್ತಿಯನ್ನು ಅದರ ಪ್ರಾಚೀನತೆಯನ್ನು ನೋಡಿದರೆ, ಬಹುಷಃ ಪುರುಷ ಎನ್ನುವ ಪದಕ್ಕೆ ಕೇವಲ ಗಂಡು ಅಥವ ಗಂಡ
ಎನ್ನುವ ಸೀಮಿತ ಅರ್ಥದ ಆರೋಪ ಚರಿತ್ರೆಯ ಯಾವ ಘಟ್ಟದ ಶಬ್ದಕೋಶದಲ್ಲಿ ನುಸುಳಿಕೊಂಡುಬಿಟ್ಟಿತೋ ತಿಳಿಯದು. ಇದು ಸಂಶೋಧನೆಗೆ ಒಂದು ವಸ್ತುವಾಗಬಹುದು. ಪುರುಷ
ಎನ್ನುವ ಶಬ್ದಕ್ಕೆ ನಿಘಂಟಿನೊಳಗೆ ಆತ್ಮ, ಪರಮಾತ್ಮ ಎನ್ನುವ ಅರ್ಥವೂ ಇದೆ. ಆತ್ಮ, ಪರಮಾತ್ಮ ಇವೆಲ್ಲಾ ಮನುಷ್ಯನ ಶ್ರೇಷ್ಠತೆಯ ಆತ್ಯಂತಿಕ ಕಲ್ಪನೆಗಳಾದುದರಿಂದ ಚರಿತ್ರೆಯಲ್ಲಿ ಇವು
ಗಂಡುರೂಪಗಳಾಗಬೇಕಾದದ್ದು ಅನಿವಾರ್ಯವೇ! ಯಾಕೆಂದರೆ ಹೆಣ್ಣೆಂದರೆ ಆತ್ಮವಿಲ್ಲದವಳು ತಾನೇ!
ಆದರೆ ವಾಸ್ತವಿಕವಾಗಿ, ತಮಿಳುನಾಡಿನಿಂದ ಹಿಡಿದು ಪಶ್ಚಿಮ ಬಂಗಾಲದವರೆಗೆ ಹಬ್ಬಿ ಹರಡಿದ ಭಕ್ತಿಪಂಥದ ಅನುಭಾವಿಗಳಿಗೆ ಮಾತ್ರ ಅನುಭವಕ್ಕೆ ಬಂದ ಸಂಗತಿಯೆಂದರೆ, ಹೆಣ್ಣಾಗದೇ ಮುಕ್ತಿಯೇ
ಇಲ್ಲವೆಂಬುದು. ಅದಕ್ಕಾಗಿಯೇ ಇರಬೇಕು ಅವರೆಲ್ಲ ಹೆಣ್ಣುಗಳಾಗಿಬಿಟ್ಟರು!
ಅಕ್ಕ ಒಲಿದದ್ದು ಕೂಡ ಕಾಡ ಕಡಿದು ನಾಡ ಕಟ್ಟಿದ ಪುರುಷನನ್ನಲ್ಲ. ಬದಲಾಗಿ ಕಾಡಿನೊಳಗಿನ ಸ್ವಯಂಭೂ ಮಲ್ಲಿಗೆಯನ್ನು.
ಗುಜರಾತಿನಲ್ಲಿ ಒಂದು ಪದ್ಧತಿ ಇದೆ. ಹೆಂಡತಿ ಸತ್ತರೆ ಗಂಡ ಸ್ಮಶಾನಕ್ಕೆ ಹೋಗುವಂತಿಲ್ಲ. ಹಾಗೇನಾದರೂ ಹೋದರೆ ಅವನು ಮೂರುತಿಂಗಳುಗಳ ಕಾಲ ಮರುಮದುವೆ
ಮಾಡಿಕೊಳ್ಳುವಹಾಗಿಲ್ಲ. ಹಾಗೆಂದು ಗುಜರಾತಿನ ಕಾದಂಬರಿಕಾರ್ತಿ ಕುಂದಾನಿಕಾ ಕಪಾಡಿಯಾ ಹೇಳುತ್ತಾಳೆ.
ಈಗ ಹೇಳು ಬದುಕಿದ್ದಾಗ ಅಸ್ಥಿಗಳು ಪುಡಿಪುಡಿಯಾಗುವಂತೆ ಪ್ರೀತಿಮಾಡುವ ಗಂಡ, ಸತ್ತಮೇಲೆಯೂ ಶವವನ್ನು ಹೆಗಲ ಮೇಲೆ ಹೊತ್ತು ಲೋಕ ಲೋಕಾಂತರಗಳನ್ನು ಅಲೆಯುವ ಹುಚ್ಚು
ಪ್ರೇಮಿ ಯಾವ ಹೆಣ್ಣಿಗೆ ಬೇಡ ? ನಿಜವಾಗಿ ಸಖನೆಂದರೆ ಅವನೇ. ಅವಳನ್ನು ಮಾತಿಗೆ ಬಿಟ್ಟು ಇವನು ಮೌನವಾಗಿ ಕುಳಿತು ಬಿಟ್ಟ. ಅವಳು ಹಾಡುತ್ತಾ ಹೋದಳು ಮುನ್ನೂರಕ್ಕೂ ಮಿಕ್ಕ
ವಚನಗಳಲ್ಲಿ. ಇವನೋ ವಿಸ್ಮಯದಿಂದ ಅವುಗಳನ್ನೆಲ್ಲಾ ತನ್ನ ಜಟೆಯೊಳಗೆ ಪ್ರೀತಿಯಿಂದ ಸುತ್ತಿಕೊಂಡು ಬಿಟ್ಟಿರಬೇಕು ! ಜಟೆಯೆಂದರೆ ಅವನಂಗದ ಅವಿನಾಭಾವ ಅಂಶ ತಾನೇ ! ಅದಿಲ್ಲದೇ
ಅವನನ್ನು ಕಲ್ಪಿಸಿಕೊಳ್ಳುವುದಾದರೂ ಹೇಗೆ? ಅಕ್ಕ ಅಲ್ಲಿಂದಲೂ ಮುಂದೆ ಬೆಳೆದಳು ಅವನನ್ನೂ ಅರೂಪ ಬೆಳೆಸಿದಳು, ಆ ಮಾತು ಒತ್ತಟ್ಟಿಗೆ ಇರಲಿ. ಬದುಕಿನ ಯಾವ ಕ್ಷಣದಲ್ಲಿಯೂ ಅವಳಿಗೆ
ಯಾರೂ ಇಲ್ಲದವಳೆಂಬ ಅನಾಥ ಪ್ರಜ್ಞೆ ಕಾಡದಂತೆ ಸದಾ ಜೊತೆಗಿದ್ದವನು. ಉದಮದದ ಯೌವ್ವನದವಳು ಪಾಳು ದೇಗುಲಗಳಲ್ಲಿ ಒಬ್ಬಳೇ ಮಲಗುವಾಗ ಆತ್ಮಕ್ಕೆ ಶಕ್ತಿ ತುಂಬಿ ಸಾಂಗತ್ಯ
ಒದಗಿಸಿದವನು.
ತನ್ನ ಸಂಗಾತಿಯ ಮರ್ಯಾದೆಯೇ ತನ್ನ ಮರ್ಯಾದೆಯೆಂದು, ತನ್ನ ಪೂಜೆಯಲ್ಲಿ ಅವಳಿಗೂ ಸಮಪಾಲು ದೊರಕಬೇಕೆಂಬ ಒಂದೇ ಉದ್ದೇಶದಿಂದ ತನ್ನ ಒಡಲನ್ನೇ ಅರ್ಧ ಸೀಳಿಕೊಂಡು
ಅವಳೊಳಗೆ ಸೇರಿಕೊಂಡು ಬಿಟ್ಟನಲ್ಲಾ ! ಅವಳೊಡನೆ ಯೋಗ ರೂಪದಲ್ಲಿ ಮಾತ್ರ ಈ ಭೂಮಿಯಮೇಲೆ ಪೂಜೆಗೊಳ್ಳುವೆನೆಂಬ ಹಟ! ಎಂಥ ಪಾರಸ್ಪರಿಕತೆ! ಸೃಷ್ಟಿ ಶೀಲ ತತ್ವಗಳೆರೆಡು
ಒಂದು ಅಖಂಡ ಎರಕದಲ್ಲಿ ಹೊಯ್ದ ಸಮಾನತೆ! ಇಂಥ ಸಖನ ಸುಖ ಯಾರಿಗೆ ಬೇಡ ಹೇಳು?
ಅಕ್ಕ ಕೂಡ ಒಲಿದದ್ದು ಇಂತಹವನನ್ನು. ಇದನ್ನೆಲ್ಲಾ ಬದಿಗೆ ಒತ್ತಿಟ್ಟು ಕೇವಲ ಪುರುಷ, ಪುರುಷ ಎಂದು ಹುಯ್ಯಲಿಟ್ಟರೆ ಹೇಗೆ?
ಹಾಗೆ ನೋಡಿದರೆ ಚೈತನ್ಯವನ್ನು ಈ ಪುರುಷ ಸ್ತ್ರೀ ಎಂದು ಇಬ್ಬಾಗವಾಗಿ ಹೋಳುಮಾಡುವುದೇ ಸರಿಯಲ್ಲ. ಮೊಲೆ ಮುಡಿಗಳ ಗಡ್ಡಮೀಸೆಗಳ ನಡುವೆ ಸುಳಿವ ಆತ್ಮಕ್ಕೆ ಗಂಡು ಹೆಣ್ಣಿನ ಭೇದವಿಲ್ಲ
ಎಂದು ಅಂದೇ ಜೇಡರ ದಾಸಿಮ್ಮಯ್ಯ ಹೇಳಿಬಿಟ್ಟಿದ್ದಾನಲ್ಲ. ಅದೇ ದಾರಿಯಲ್ಲಿ ಮುಂದುವರೆದು ನೀನು ಲಿಂಗ ಭಾವನೆಯನ್ನು ಮೀರಬೇಕು ಎನ್ನುತ್ತೀ, ನನಗೆ ಲಿಂಗ ಭಾವನೆಯೇ ಇಲ್ಲವೆನ್ನುತ್ತೀ?
ನೌಕರಿ, ಅಧ್ಯಯನ, ರೈಲು, ಬಸ್ಸು, ಮನೆ ಇರಸರಿಕೆ, ಗಂಡ ಮಕ್ಕಳು, ಬ್ಯಾಂಕು, ಕೊರಿಯರ್ರು, ಚಪ್ಪಲಿ ಹರಿದು ಹೋಗುವ ಮಟ್ಟಿಗೆ ಸಕರ್ಾರಿ ಕಛೇರಿಗಳಿಗೆ ಅಲೆತೆ- ಹೀಗೆ ಇಷ್ಟೆಲ್ಲಾ ಓಡಾಟ ಹಚ್ಚಿಕೊಂಡ ಲೌಕಿಕದ ಹೆಣ್ಣುಗಳು ನಾವು. ಇಲ್ಲಿ ಹೆಜ್ಜೆ ಇಟ್ಟ ಕಡೆಯೆಲ್ಲಾ ನಮ್ಮನ್ನು ಹೆಣ್ಣುಗಳೆಂದು ನೆನಪಿಸುವ ವ್ಯವಸ್ಥೆ ಇದೆ. ಇದನ್ನು ಮೀರುವುದು ಹೇಗೆ ಮಾರಾಯ್ತಿ? ಮದುವೆಯಾಗದೆ ಉಳಿಯುವುದೇ ಒಂದು ಪರ್ಯಾಯವೆಂದರೆ, ಪ್ರಭುತ್ವದ ಅಧಿಕಾರ ಎನ್ನುವುದು ಮದುವೆಯೆಂಬ ವ್ಯವಸ್ಥೆಯ ಆಚೆಗೂ ಇದೆಯಲ್ಲಾ. ಹೆಜ್ಜೆ ಹೆಜ್ಜೆಗೂ ಅದಕ್ಕೆ ಮುಖಾಮುಖಿಯಾಗುತ್ತ ಇರಬೇಕಲ್ಲ.!
ಇಷ್ಟಂತೂ ನಿಜ. ಸುಮ್ಮನೇ ಹೆಣ್ಣಾಗಿ ಹುಟ್ಟೋಕ್ಕಿಂತ ಮಣ್ಣಾಗಿ ಹುಟ್ಟಿದರೆ, ಮರವಾಗಿ ಹುಟ್ಟಿದರೆ ಎಂದು ಗೋಳಾಡುವುದಕ್ಕಿಂತ, ನನ್ನನ್ನು ಯಾರೂ ಕೇಳೋದಿಲ್ವೇ ಎಂದು ಪರಿತಪಿಸುವುದರಲ್ಲೇ
ನಮ್ಮ ಶಕ್ತಿಯ್ಯನ್ನು ಹರಣ ಮಾಡಿಕೊಳ್ಳುವುದಕ್ಕಿಂತ, ನನ್ನೊಳಗಿನ ಶಕ್ತಿಸಂಚಯನಕ್ಕೆ ನಾನು ತೊಡಗಿಕೊಂಡರೆ ನನ್ನಗೋಳು ನಿಲ್ಲಬಹುದು. ಅಷ್ಟೇ ಅಲ್ಲ. ಆ ಶಕ್ತಿಯಿಂದ ಪುಷ್ಠಗೊಂಡು ನನ್ನ
ಚರಿತ್ರೆಯನ್ನು ಹೊಸ ಕಣ್ಣಿನಿಂದ ನೋಡಲು ಸಾಧ್ಯವಾಗಬಹುದು. ನನ್ನ ಈ ಧೀರ್ಘಮೌನವನ್ನು, ಅನುಕಂಪ, ತಾಳ್ಮೆ, ಪ್ರೀತಿ, ಭಾವುಕತೆ ಮುಂತಾದ ಗುಣಗಳನ್ನು ದೌರ್ಬಲ್ಯಗಳೆಂದು
ಅಪಮೌಲ್ಯಗೊಳಿಸಿದ ವ್ಯವಸ್ಥೆಗೆ ಉತ್ತರಕೊಡಲು ಸಾದ್ಯವಾಗಬಹುದು. ಹಾಗೆ ನೋಡಿದರೆ ವ್ಯಕ್ತಿ ಬೆಳೆಯಬೇಕಾದರೆ ಮೇಲಿನ ಗುಣಗಳ ಪೋಷಣೆ ಅಗತ್ಯವೇ ಹೊರತು, ದೇಶ ದೇಶಗಳ ಮೇಲೆ
ದಂಡೆತ್ತಿ ಹೋಗಿ ಯುದ್ಧ ಸಾರುವ ಆಕ್ರಮಣ ಶೀಲತೆಯಲ್ಲ. ಸಾಹಿತ್ಯ ಯಾವಾಗಲೂ ಯುದ್ಧದ ಪರವಲ್ಲ. ಅದು ಪ್ರೀತಿಪರ, ಮಾನವೀಯತೆಯ ಪರ, ಆದುದರಿಂದಲೇ ಅದು ಕಾಂತಾ ಸಂಹಿತೆ !
ಗೆಲ್ಲುವುದಾದರೆ ಬುದ್ಧನಹಾಗೆ ಪ್ರೀತಿಯಿಂದ ಗೆಲ್ಲೋಣ. ದುಷ್ಟರೆಂದು ಭಾವಿಸಿದ ಎದುರಾಳಿಗಳ ನಾಶದಿಂದಲ್ಲ. ದುಗರ್ೆ ಕಾಳಿಯರಿಗೆ ನಮ್ಮ ಸಂಸ್ಕೃತಿಯಲ್ಲಿ ಸಿಕ್ಕಿದ ಮಹತ್ವದ ಸ್ತಾನಕ್ಕೂ ಇದೇ
ಕಾರಣವಿರಬೇಕು. ಯಾಕೆಂದರೆ ಅವರು ಪ್ರತಿಪಾದಿಸುವ ಮೌಲ್ಯಗಳೆಲ್ಲಾ ವೀರ ಮೌಲ್ಯಗಳೇ ತಾನೇ!
ಇವರನ್ನು ಒಂಭತ್ತು ದಿನಗಳು ಪೂಜಿಸಿದ ನಂತರ ಕತ್ತಿ ಝಳಪಿಸುತ್ತಾ ವಿಜಯಕ್ಕೆ ಹೊರಡಬೇಕಲ್ಲ!
ಚರಿತ್ರೆಯಲ್ಲಿ ಹೆಣ್ಣು ಮೂಕಾಂಬಿಕೆಯಾದದ್ದು ಸಾಮಾನ್ಯದ ಸಂಗತಿಯೇನಲ್ಲ. ಮೂಕಾಸುರನನ್ನು ಸಂಹಾರ ಮಾಡಿದ ಮಾತು ಅಂತಿರಲಿ. ಅದಕ್ಕೂ ಮುಂಚೆ ಶಂಕರಚಾರ್ಯ ಹಾಗೂ ಮಂಡನ
ಮಿಶ್ರರ ನಡುವಿನ ವಾದ ಜಿಜ್ಞಾಸೆಗಳಿಗೆ ಅವಳು ಸಾಕ್ಷಿಯಾಗಿದ್ದಳು. ಅವರ ಸೋಲುಗೆಲುವಿನ ಪರೀಕ್ಷಕಳಾಗಿದ್ದಳು ಎನ್ನುವುದು ಎಷ್ಟು ಮಹತ್ವದ್ದು. ಆದರೆ ಅವಳು ಮೂಕಿಯಾಗಿಬಿಟ್ಟಳು. ಇದು
ಅವಳ ಮೂಕತನಕ್ಕಿಂತ ಹೆಚ್ಚಾಗಿ ಮೌನವನ್ನು ಎತ್ತಿಹೇಳುತ್ತದೆ. ಚರಿತ್ರೆಯಲ್ಲಿ ಅವಳ ಧೀರ್ಘ ಮೌನ ಅವಳ ಅಂತರಂಗ ಪರಿಪಾಕಗೊಂಡುದರ ಪ್ರತೀಕ. ವ್ಯಕ್ತಿ ಬೆಳವಣಿಗೆಯ ಸಾಧನೆಯೆಂದರೆ ಅದುವೆ!
ಮೌನದ ಪರೀಕ್ಷೆಯಲ್ಲಿ ಹೆಣ್ಣು ಗೆದ್ದಹಾಗೆ ಗಂಡು ಗೆದ್ದಿಲ್ಲ. ತುಂಬಿದ ಸಭೆಯಲ್ಲಿ ಗಾರ್ಗಿಗೆ ಬಾಯಿಮುಚ್ಚಿಕೋ ಇಲ್ಲದಿದ್ದರೆ ನಿನ್ನ ತಲೆ ಹೋಳಾಗುತ್ತದೆ ಎಂದವ ಗಂಡಸು. ಅವಳು
ಬಾಯಿಮುಚ್ಚಿಕೊಂಡದ್ದು ಅವಳ ದೌರ್ಬಲ್ಯವಲ್ಲ ಅದು ಅವಳ ಶಕ್ತಿ. ಹೀಗೆ ಮೌನವಾಗಿ ಬೆಳೆಯುತ್ತಾ ಹೋದವಳು ನಿಜವಾಗಿ ಬಲಿಪಶುವಲ್ಲ (ವಿಕ್ಟಿಮ್) ಮೌನ ಅವಳ ವಿಜಯ (ಸವರ್ೈವರ್). ಮೌನ ವ್ಯಕ್ತಿಯನ್ನು ಗಟ್ಟಿಮಾಡುವಹಾಗೆ ಇನ್ನಾವುದೂ ಮಾಡಲಾರದು.
ವೀಣಾ ನೀನು ಅದಕ್ಕೆಂದೇ ನಿನ್ನ ಮನೆಯ ಕದ ಮುಚ್ಚಿಬಿಟ್ಟೆಯೇನೋ, ಈ ಸಂತೆ ಸಾಕೆಂದು. ನಿನ್ನಂತೆ ನನಗೂ ಹಿಮಾಲಯದ ಕನಸು. ಅಲ್ಲಿ ನಿನ್ನ ಹಾಗೇ ಕೆಲವು ವರುಷ ಕಳೆಯಬೇಕೆಂಬ
ಬಯಕೆ. ಆದರೆ ಅಲ್ಲಿಗೆ ಹೋಗಲು ನಾನು ಸಂಸಾರದಿಂದ ರಿಟೈರ್ ಆಗಬೇಕು. ನಿನಗೆ ಗೊತ್ತಾ ಹಿಂದಿ ಹಾಗೂ ಮರಾಠಿಯಲ್ಲಿ ಪ್ರಸಿದ್ಧ ನಾಟಕವೊಂದಿದೆ-ಆಯಿ ರಿಟೈರ್ ನಹಿ ಹೋತಿ ಹೈ !.
ಈ ಧೀರ್ಘ ಪತ್ರಕ್ಕೊಮ್ಮೆ ವಿರಾಮ ಹೇಳುತ್ತೇನೆ.






ಚಂದದ ಪತ್ರ.
ಹೌದು , ಜಗ ಉಳಿಯಲು ಕೂಡ ಇಂದು ಬೇಕಿರುವುದು ಪ್ರೀತಿ , ತಾಳ್ಮೆ , ಅನುಕಂಪ.
ತೆಲುಗಿನಲ್ಲಿ ‘ಅಮ್ಮಾ ರಾಜಿನಾಮ ‘ ಅಂತೊಂದು ಸಿನೆಮಾ ನೋಡಿದ ನೆನಪು 🙂
nice..
enthaha baraha…wow….!!!!!!!!!!!!!!!!matte matte odide…..! veena nanna mechhina saahite..!!!!avra kavanagaLnnu naanu pade padee oduttene….!!!!
girija avre realy worth it…!!!simply great……………………….!
ಅಮ್ಮಾ,ನನಗಿವತ್ತು ಕಾಲೇಜಿಗೆ ಕೂಡ ಹೋಗಲು ಒಲ್ಲಾಗಿದೆ.ಇಡೀ ದಿನ ಈ ಚಿಂತನೆ ಸಾಕು.ಸಂಚಿ ಹೊನ್ನಮ್ಮನ ಸಾಲಿನ ನೆನಪು.ದುರ್ಗೆ ಕಾಳಿಯರ ನೆನಪು.ಎಂಥಾ ಅದ್ಭುತ ಪತ್ರ !ಅಕ್ಕನೊಳಗಿನ ಅವನ ಸಾಂಗತ್ಯದಂತೆ ಮನೆ ನಮಗೆ ಸದಾ ಕಾಡುತ್ತೆ.ಅಲ್ವಾ?
thanq friends for liking my article
girija
nice…