ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮೈಸೂರಿನಲ್ಲಿ ….', ವಿ ಎನ್ ಲಕ್ಷ್ಮಿ ನಾರಾಯಣ್ ಬರೀತಾರೆ

ಮೈಸೂರಿನಲ್ಲಿ ….

(ಮೈಸೂರಿನಲ್ಲಿ ಜನವರಿ 25 ರಿಂದ 31 ರ ವರೆಗೆ ನಡೆದ ಚಿತ್ರೋತ್ಸವ ಕುರಿತ 31 ರ ಸಂಜೆ ಏರ್ಪಾಟಾಗಿದ್ದ ಸಂವಾದ ಸಭೆಯಲ್ಲಿ ಲಿಖಿತವಾಗಿ ಮಂಡಿಸಿದ ಪ್ರಾಸ್ತಾವಿಕ ನುಡಿ)

ಫ್ರಾನ್ಸ್ ಸಿನಿಮಾದ ತವರುಮನೆ.ಫ್ರಾನ್ಸ್ ನ ಲೂಮಿಯೇರ್ ಸಹೋದರರು ಸಿನಿಮಾವನ್ನು ಅದರ ಪ್ರಾರಂಭಿಕ ಅವತಾರದಲ್ಲೇ ಹಣಗಳಿಸುವ ಸಾಧನವನ್ನಾಗಿ ಬಳಸಿಕೊಂಡರು. ಅದರ ಮುಂದುವರಿಕೆಯಾಗಿ ಅಮೆರಿಕನ್ ಸಿನಿಮಾ ಇಡೀ ಪ್ರಪಂಚವನ್ನೇ ಪ್ರಭಾವಿತಗೊಳಿಸುವಂಥ ಮನರಂಜನಾ ಉದ್ಯಮವಾಗಿ ಬೆಳೆಯಿತು. ಭಾರತದಂಥ ಬಹುಭಾಷಾ ಗಣರಾಜ್ಯದಲ್ಲಿ ಒಂದೊಂದು ಭಾಷಾವಾರು ಪ್ರಾಂತ್ಯವೂ ತನ್ನದೇ ಆದ ಪ್ರಾಂತೀಯ ಚಿತ್ರೋದ್ಯಮವನ್ನು ಇಂದು ಸ್ಥಾಪಿಸಿಕೊಂಡಿದೆ. ಆದರೆ ಹಿಂದಿ ಸಿನಿಮಾ ಬೇರೆಲ್ಲ ಪ್ರಾಂತೀಯ ಅಸ್ಮಿತೆಯನ್ನು ನುಂಗಿಹಾಕುವಂತೆ ಬೆಳೆದು ಭಾರತೀಯ ಸಿನಿಮಾ ಎಂದರೆ ಹಿಂದಿ ಸಿನಿಮಾ ಎಂಬಂಥ ರಾಜಕೀಯದಲ್ಲಿ ನಾವಿದ್ದೇವೆ. ಇಂಥ ಸನ್ನಿವೇಶದಲ್ಲಿ ಫ್ರೆಂಚ್ ಚಿತ್ರೋತ್ಸವದ 7 ಚಿತ್ರಗಳನ್ನು ನಾವು ನೋಡಿದ್ದೇವೆ.
ಚಿತ್ರೋದ್ಯಮದಲ್ಲಿ ಸೆರೆ ಸಿಕ್ಕಿರುವ ಸಿನಿಮಾಕ್ಕೆ ಹಣ ಗಳಿಕೆಯ ಉದ್ದೇಶವಲ್ಲದೆ ಇನ್ನೂ ಅನೇಕ ಮುಖಗಳಿವೆ. ಅವುಗಳಲ್ಲಿ ರಾಜಕೀಯ, ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಮುಖಗಳು ಮುಖ್ಯವಾದವುಗಳು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಚಿಂತಕರು, ಕಲಾವಿದರು ಮತ್ತು ಉದ್ಯಮಿಗಳು ತಮ್ಮ ಉದ್ದೇಶಗಳಾದ ಸೃಜನಶೀಲತೆ, ಅಭಿವ್ಯಕ್ತಿ ಮತ್ತು ಸಂಪತ್ತಿನ ಗಳಿಕೆಗಾಗಿ ಬಳಸುವ ಅತ್ಯಂತ ಶಕ್ತಿಶಾಲಿ, ದುಬಾರಿ ವೆಚ್ಚದ ರಾಜಕೀಯ-ಸಾಂಸ್ಕೃತಿಕ-ಆರ್ಥಿಕ ಸಾಧನ. ಹೀಗಾಗಿ ಸಿನಿಮಾ ಎರಡು ದೇಶಗಳ ಸಾಂಸ್ಕೃತಿಕ ಅನುಸಂಧಾನದ ಮಾಧ್ಯಮ ಎಂದು ಹೇಳುವಾಗಲೂ ಉಳಿದೆಲ್ಲ ಮುಖ-ಉದ್ದೇಶಗಳು ಇದ್ದೇ ಇವೆ ಎಂಬುದನ್ನು ಅನುಲಕ್ಷಿಸಬೇಕು. ಅದರಲ್ಲೂ ಆರ್ಥಿಕ ಮತ್ತು ರಾಜಕೀಯ ಅಂಶಗಳನ್ನು ಪರಿಗಣಿಸಬೇಕು. ವಿಶ್ವ ಮಟ್ಟದಲ್ಲಿ ಅತ್ಯಧಿಕ ಚಲನಚಿತ್ರಗಳನ್ನು ತಯಾರಿಸುವ ದೇಶಗಳಲ್ಲಿ ಫ್ರಾನ್ಸ್ ಗೆ ಮೂರನೆಯ ಸ್ಥಾನ. ಅಮೇರಿಕಾ ಮೊದಲನೆಯದು, ಭಾರತ ಎರಡನೆಯದು.
ಸಿನಿಮಾಗಳನ್ನು ತಯಾರಿಸಲು ಕೋಟ್ಯಾಂತರ ರೂ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಹಾಗೆಯೇ ಅವನ್ನು ಪ್ರದರ್ಶಿಸಲು ಸಾವಿರಾರು, ಲಕ್ಷಾಂತರ ರೂ ಖರ್ಚಾಗುತ್ತದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದ ಈ ಚಿತ್ರೋತ್ಸವದ ಉದಾಹರಣೆಯನ್ನೇ ನೋಡಬಹುದು. ಇದನ್ನು ಏರ್ಪಡಿಸಲು ಸುಮಾರು 50-60 ಸಾವಿರ ರೂ ಖರ್ಚಾಗಿದೆ. ಇದರಲ್ಲಿ ಚಿತ್ರವೀಕ್ಷಣೆಯ ಖರ್ಚು ಸೇರಿಲ್ಲ. ದಿನಕ್ಕೆ ಸರಾಸರಿ 500 ಮಂದಿ 7 ದಿನಗಳ ಕಾಲ ನಗರದ ವಿವಿಧ ಭಾಗಗಳಿಂದ ಚಿತ್ರಮಂದಿರಕ್ಕೆ ಬಂದ ಚಿತ್ರಪ್ರೇಮಿಗಳ ಸಂಖ್ಯೆ ಮೂರುವರೆ ಸಾವಿರ ಎಂದಿಟ್ಟುಕೊಂಡರೆ ಅವರ ಸಾಗಣೆಯ ವೆಚ್ಚವೇ ಒಬ್ಬರಿಗೆ ಕನಿಷ್ಠ 150 ರೂ ನಂತೆ 5 ಲಕ್ಷದ 25 ಸಾವಿರ ಆಗುತ್ತದೆ. ಅಂದರೆ ಜನಸಾಮಾನ್ಯರಿಗೆ ದುಬಾರಿಯೆನಿಸದ ಚಿತ್ರಮಂದಿರದಲ್ಲಿ ಏರ್ಪಾಡಾದ ಈ ಉಚಿತ ಪ್ರವೇಶದ ಚಿತ್ರೋತ್ಸವದ ಒಟ್ಟು ವೆಚ್ಚ 6 ಲಕ್ಷಕ್ಕೆ ಸಮೀಪ. ನೆಲದ ಮೇಲೆ ನಿಂತ ಚಿತ್ರಸ್ಥಾವರಗಳ ಸಿನಿಮಾದ ಆರ್ಥಿಕತೆಯೇ ಹೀಗಿರಬೆಕಾದರೆ ಇನ್ನು ಆಕಾಶದಿಂದ ಉಪಗ್ರಹಗಳ ಮೂಲಕ ಮಾಲ್ಗಳ ದುಬಾರಿ ಪರದೆಗಳ ಮೇಲೆ, ಕೇಬಲ್ ಟೀವಿಗಳ ಕಿರುಪರದೆ, ಮೊಬೈಲ್ ಕಿಂಡಿಗಳ ಮೇಲೆ ಬಿಂಬಿತವಾಗುವ ಪೇಯ್ಡ್ ಸಿನಿಮಾಗಳ ಆಥರ್ಿಕತೆ ಹೇಗಿರಬೇಡ! ಕೋಟಿಗಳಲ್ಲಿ ಲೆಕ್ಕ ಹಾಕುವ ಸಿನಿಮಾಗಳ ವೆಚ್ಚ-ಗಳಿಕೆಗಳ ವಿಶ್ವರೂಪವನ್ನು ನಾವು ಈಗಾಗಲೆ ಕಾಣುತ್ತಿದ್ದೇವೆ. ಇದರ ಹಿಂದಿರುವ ತಾತ್ವಿಕತೆ ಮತ್ತು ರಾಜಕೀಯಗಳಿಗೆ ಕುರುಡಾಗದಂತೆ ಸಿನಿಮಾ ಮೂಲದ ಸಾಂಸ್ಕೃತಿಕ ಅನುಸಂಧಾನವನ್ನು ನಡೆಸಬೇಕಾಗುತ್ತದೆ.
ಭಾರತ ಎಂದರೆ ತಾಜ್ಮಹಲ್, ಮೈಸೂರೆಂದರೆ ಅರಮನೆ, ಫ್ರಾನ್ಸ್ ಎಂದರೆ ಪ್ಯಾರಿಸ್, ಪ್ಯಾರಿಸ್ ಎಂದರೆ ಐಫೆಲ್ ಟವರ್ ಎಂದು ಸಂಭ್ರಮಿಸುವವರಿಗೆ ಫ್ರೆಂಚ್ಸಿನಿಮಾ ಒಂದು ಅದ್ಭುತ ಲೋಕವನ್ನೇ ತೆರೆದಿಡುತ್ತದೆ. ಜಾಗತಿಕ ಮಟ್ಟದಲ್ಲಿ ಫ್ರೆಂಚ್ ಸರ್ಕಾರ ಅನುಷ್ಠಾನಗೊಳಿಸುವ ಅಣುನೀತಿ, ಯುದ್ಧನೀತಿಗಳನ್ನು ಈ ಅದ್ಭತಲೋಕ ಮರೆಸಿಬಿಡುತ್ತದೆ. ಹಾಗಿಲ್ಲದೆಯೂ ಫ್ರೆಂಚ್ ಸಿನಿಮಾ ಅಮೆರಿಕನ್ ಸಿನಿಮಾದಂತೆ ಡಾಲರ್ ಮೇಲೆ ಮಾತ್ರ ಕಣ್ಣಿಡದೆ ಸಾಂಸ್ಕೃತಿಕ ಪರಂಪರೆಯನ್ನು ಕಟ್ಟುವಂಥ, ವಿಶಾಲ ತಳಹದಿಯ ಮಾನವೀಯ ಮೌಲ್ಯಗಳಿಗೆ ಬೆಲೆಕೊಡುವಂಥ ಚಿತ್ರಗಳನ್ನು ನಿರ್ಮಿಸುವಲ್ಲಿ ಫ್ರೆಂಚ್ ಸರ್ಕಾರದ ಸಿನಿಮಾ ನೀತಿ ಕಾರಣ. ಅಲ್ಲಿನ ಸರ್ಕಾರ ತನ್ನ ರಾಷ್ಟ್ರೀಯ ಗಳಿಕೆಯ ನಿರ್ದಿಷ್ಟ ಶತಾಂಶವನ್ನು ಕಲಾತ್ಮಕ ಚಿತ್ರಗಳ ಸಹಾಯಧನಕ್ಕಾಗೇ ತೆಗೆದಿಡುತ್ತದೆ. ಪ್ರಾನ್ಸ್ ದೇಶದೊಳಗೆ, ಅಥವಾ ಫ್ರೆಂಚ್ ನಾಗರಿಕರು ತಯಾರಿಸುವ ಎಲ್ಲಾ ಚಿತ್ರಗಳಿಗೂ ಸರಕಾರದ ಸಹಾಯ ಸಿಗುತ್ತದೆ. ಹೀಗಾಗಿ ಫ್ರೆಂಚ್ ಚಿತ್ರೋದ್ಯಮ ಮತ್ತು ಕಲಾತ್ಮಕ ಚಿತ್ರತಯಾರಿಕೆಗಳ ನಡುವೆ ಬೇರೆ ದೇಶಗಳಲ್ಲಿಲ್ಲದ ಚಿತ್ರನೀತಿ ಸಾಮರಸ್ಯವನ್ನು ಸಾಧಿಸುತ್ತದೆ. ಕೇವಲ ದೇಶೀಯ ಫ್ರೆಂಚ್ ಚಿತ್ರತಯಾರಕರನ್ನು ಮಾತ್ರವಲ್ಲ, ಫ್ರಾನ್ಸ್ನ ಚಿತ್ರೋದ್ಯಮ ಕಲಾತ್ಮಕ ಚಿತ್ರಮಾಡುವವರನ್ನು ವಿಶ್ವದ ಮೂಲೆ ಮೂಲೆಗಳಿಂದ ಆಕರ್ಷಿಸುತ್ತದೆ. ಇದರ ಒಟ್ಟು ಪರಿಣಾಮ ಫ್ರೆಂಚ್ ಚಿತ್ರೋತ್ಸವವೆಂದರೆ ಚಲನಚಿತ್ರಸಹೃದಯರ ಕಣ್ಣರಳುತ್ತವೆ.
ಸಿನಿಮಾ ಮಾರುಕಟ್ಟೆಯಲ್ಲಿ ಲಾಭ-ನಷ್ಟಗಳ ಮಾರುಕಟ್ಟೆ ಮತ್ತು ಪ್ರಶಸ್ತಿ ಮಾರುಕಟ್ಟೆ ಎಂದು ಎರಡು ವಿಧ. ವ್ಯಾಪಾರೀ ಸಿನಿಮಾ ಎಂದು ಕರೆಯುವ ಗುಂಪಿಗೆ ಸೇರುವ ಚಿತ್ರೋತ್ಪಾದಕರು ಮೊದಲ ರೀತಿಯ ಮಾರುಕಟ್ಟೆಯ ನಿಯಂತ್ರಕರು ಮತ್ತು ಬಿಕರಿದಾರರು. ಕಣ್ಣೀರು, ಕಾಮ, ಕ್ರೌರ್ಯ, ಮತ್ತು ತಾಂತ್ರಿಕ ಕಸರತ್ತುಗಳನ್ನು ಬಳಸಿಕೊಂಡು ಅವಕ್ಕೆ ಸುಲಭವಾಗಿ ಮನಸೋಲುವ ಬಳಕೆದಾರರನ್ನು ಆಕರ್ಷಿಸಲು ಪ್ರಯತ್ನಿಸುವವರು. ಲಾಭ-ನಷ್ಟಗಳ ಮಾರುಕಟ್ಟೆಯಲ್ಲಿ ಅವರ ಚಿತ್ರಗಳ ಸೋಲು-ಗೆಲುವುಗಳಿಗೆ ಬಳಕೆದಾರರನ್ನು ಗುರಿಮಾಡದೆ ತಮ್ಮ ಪ್ರತಿಸ್ಪರ್ಧಿಗಳನ್ನೋ, ಸರ್ಕಾರದ ಸಹಾಯಧನ ನೀತಿಯನ್ನೋ ಅಥವಾ ಅದೃಷ್ಟವನ್ನೋ ಹೊಣೆಮಾಡುವವರು. ಆದರೆ ಕಲಾತ್ಮಕ ಸಿನಿಮಾ ಎಂದು ಕರೆಯುವ ಗುಂಪಿನ ಚಿತ್ರತಯಾರಕರು ‘ಪ್ರಶಸ್ತಿ ಮಾರುಕಟ್ಟೆಯಲ್ಲಿ’ ತಮ್ಮ ಚಿತ್ರಗಳ ಸೋಲು-ಗೆಲುವುಗಳಿಗೆ ಗುಣಮಟ್ಟವನ್ನು ತಳಹದಿಯಾಗಿಸದೆ, ಜ್ಯೂರಿಗಳನ್ನು, ಚಿತ್ರರಸಿಕರನ್ನು ಮತ್ತು ಸಕರ್ಾರಗಳ ಪ್ರದರ್ಶನ ನೀತಿಗಳನ್ನು ಹೊಣೆಯಾಗಿಸುತ್ತಾರೆ. ಎರಡೂ ಬಗೆಯ ಸಿನಿಮಾದಲ್ಲೂ ಕಾಮ-ಕ್ರೌರ್ಯಗಳ ಅಂಶ ಸಾಂದರ್ಭಿಕವಾಗಿ ಅಥವ ಉದ್ದೇಶಪೂರ್ವಕವಾಗಿ ಇರಬಹುದು. ಆದರೆ ಚಿತ್ರನೋಡಲು ಬರುವವರೆಲ್ಲರೂ ಅವನ್ನು ನಿರೀಕ್ಷಿಸಿಕೊಂಡೇ ಬರುತ್ತಾರೆ ಎಂದು ಹೇಳಲಾಗದು. ದೊಡ್ಡ ದೊಡ್ಡ ಚಿತ್ರೋತ್ಸವಗಳಲ್ಲಿ ಸರ್ಟಿಫ಼ೈಡ್ಡ್ ಕಾಪಿಯಂಥ ಚಿತ್ರವನ್ನು ಕಿಕ್ಕಿರಿದ ಚಿತ್ರಮಂದಿರದಲ್ಲಿ ಉಸಿರು ಬಿಗಿಹಿಡಿದು ನೋಡುವ ಜನರನ್ನು ಕಂಡಾಗ ಅವರನ್ನು ಚಿತ್ರರಸಿಕರು ಮತ್ತು ಬಳಕೆದಾರರು ಎಂದು ಭಾಗಮಾಡಿ ನೋಡಲಾಗುವುದಿಲ್ಲ ಎಂಬ ಅಂಶ ನನಗೆ ಕಂಡಿದೆ. ಮೈಸೂರಿನಲ್ಲಿ ನಡೆದ ಫ್ರೆಂಚ್ ಚಿತ್ರೋತ್ಸವದಲ್ಲಿ ನನಗೆ ಕಂಡಿದ್ದು ಸಹ ಇದೇ. ಭಾರತೀಯ ಚಿತ್ರಗಳಿಗೆ ಫ್ರೆಂಚ್ ಚಿತ್ರರಸಿಕರ ಅಥವಾ ಬಳಕೆದಾರರ ನಿರೀಕ್ಷೆ ಅಥವಾ ಪ್ರತಿಕ್ರಿಯೆಯನ್ನು ತಿಳಿಯುವ ಸೌಲಭ್ಯ ನನಗಿಲ್ಲ. ಆದರೆ ಫ್ರೆಂಚ್ ಚಿತ್ರ ಕ್ಲಾಸಿಕ್ ಆಗಿರಲಿ ಅಥವಾ ಇಲ್ಲದಿರಲಿ ಬೇರೆ ಬೇರೆ ಉದ್ದೇಶಗಳಿಗಾಗಿ ಚಿತ್ರ ನೋಡಲು ಬರುವವರೆಲ್ಲರನ್ನೂ ಹಿಡಿದಿಡುವ ಗುಣ ಪಡೆದಿವೆ ಎಂದೆನಿಸುವಂತೆ ಮೈಸೂರಿನಲ್ಲಿ ನಡೆದ ಚಿತ್ರೋತ್ಸವದಲ್ಲಿನ ಪ್ರೇಕ್ಷಕರ ಚಿತ್ರಾಸ್ವಾದನೆ ಇತ್ತು.
ಇಂದು ಇಡೀ ವಿಶ್ವವೇ ಪ್ರಕ್ಷುಬ್ಧವಾಗಿದೆ. ದೇಶೀಯ ಅಣುನೀತಿ, ಪರಿಸರದ ಗಂಡಾಂತರ, ತಾಪಮಾನ ವೈಪರೀತ್ಯಗಳು, ಆರ್ಥಿಕ ಕುಸಿತ, ಹೆಚ್ಚುತ್ತಿರುವ ಬಡತನ-ಸಂಪತ್ತಿನ ಪೈಪೋಟಿಗಳು ಸಿನಿಮಾದ ವರ್ಚುಯಲ್ ಪ್ರಪಂಚದಲ್ಲಿ ಬಿಂಬಿತವಾಗುವ ವಸ್ತುಗಳಾಗಿವೆ. ಆರ್ಥಿಕ ಬಂಡವಾಳ,ಮಾರುಕಟ್ಟೆಯ ಬಂಡವಾಳ ಮುಂತಾಗಿ ಬೆಳೆಯುತ್ತಲೇ ಇರುವ ಜಾಗತಿಕ ಬಂಡವಾಳ ಈಗ ‘ಮೀಡಿಯಾ ಬಂಡವಾಳವಾಗಿ’ಕಲಾತ್ಮಕ ಸಿನಿಮಾವನ್ನೂ ನಿಯಂತ್ರಿಸುತ್ತಿದೆ. ಲಾಭ-ನಷ್ಟಗಳ ವ್ಯಾಪಾರಿ ಸಿನಿಮಾಗಳು ಪ್ರಶಸ್ತಿ ಮಾರುಕಟ್ಟೆಯಲ್ಲೂ ಮೇಲುಗೈ ಪಡೆಯಲು ಹವಣಿಸುತ್ತಿವೆ. ಸಿನಿಮಾಗಳ ಮೂಲಕ ನಾವು ನಡೆಸುವ ಸಾಂಸ್ಕೃತಿಕ ಅನುಸಂಧಾನದಲ್ಲಿ ಇವೆಲ್ಲವೂ ಇವೆ.

‍ಲೇಖಕರು G

5 February, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading