
ಎಸ್. ದಿವಾಕರ್
ಶ್ರೀಮತಿ ಉಷಾ ಪಿ. ರೈ ಅವರು ಕನ್ನಡ ಕಥನಲೋಕಕ್ಕೆ ಹೊಸಬರೇನಲ್ಲ. ಕಾದಂಬರಿಕಾರರೆಂದು ಹೆಸರಾಗಿರುವ ಅವರು ಈಗಾಗಲೇ ‘ಬದುಕೆಂಬ ಚದುರಂಗದಾಟದ ದಾಳಗಳು’, ‘ಒಂದೇ ದೋಣಿಯ ಪ್ರಯಾಣಿಕರು’ ಎಂಬ ಎರಡು ಕಥಾಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಪ್ರಸ್ತುತ ಸಂಕಲನದಲ್ಲಿ ಎಂಟು ಕತೆಗಳಿದ್ದು ಇವು ಬಹುಮಟ್ಟಿಗೆ ನಗರಕೇಂದ್ರಿತ ಕತೆಗಳಾಗಿವೆ.
ಉಷಾ ಅವರ ‘ಯಾವ ನಾಳೆಯೂ ನಮ್ಮದಲ್ಲ’ ಎಂಬ ಆತ್ಮಚರಿತ್ರೆಯನ್ನು ಓದಿದರೆ ಜೀವನದ ಉತ್ತರಾರ್ಧದಲ್ಲಿ ಅವರು ಅನುಭವಿಸಬೇಕಾಗಿ ಬಂದ ನೋವು, ಸಂಕಷ್ಟ, ದುರ್ಭಾಗ್ಯಗಳ ಸ್ಥೂಲ ಚಿತ್ರವೊಂದು ದೊರೆಯುತ್ತದೆ. ಮಾಸ್ತಿಯವರ ಪ್ರಕಾರ ಸಾಹಿತ್ಯವೆನ್ನುವುದು ನಮಗೆ ದುರ್ಭರ ಬದುಕನ್ನು ಹೇಗೆ ತಾಳಿಕೊಳ್ಳಬಹುದೆಂದು ಕಲಿಸುವ ಮಾರ್ಗ. ಇಲ್ಲಿನ ಬಹುಪಾಲು ಕತೆಗಳಲ್ಲಿ ಮಾತೃ ಸಹಜ ವ್ಯಕ್ತಿತ್ವವೊಂದು ತನ್ನ ನಿಡುಗಾಲದ ಅನುಭವದಿಂದ ಪಕ್ವಗೊಂಡು, ತನಗೆ ತಾನೇ ಮಾತಾಡಿಕೊಳ್ಳುವ ಧಾಟಿಯಲ್ಲಿ ವಿಚಾರ ಮಗ್ನವಾಗಿರುವುದನ್ನು ಕಾಣಬಹುದು.
ಅದು ಸಹಜವಾಗಿಯೇ ಸ್ವಗತದ ಧಾಟಿಯಲ್ಲಿರುವುದು ಆಕಸ್ಮಿಕವೇನಲ್ಲ. ಪ್ರಥಮ ಪುರುಷ ನಿರೂಪಣೆಯಲ್ಲಿರುವ ಕೆಲವು ಕತೆಗಳಲ್ಲಿ ಒಮ್ಮೊಮ್ಮೆ ನಿರೂಪಕಿ ಉತ್ತಮ ಪುರುಷ ನಿರೂಪಣೆಗೆ ತಿರುಗುವುದೂ ಉಂಟು. ಇದನ್ನು ಲೇಖಕಿಯ ಮಧ್ಯ ಪ್ರವೇಶ ಎನ್ನುವುದಕ್ಕಿಂತ ಕತೆಯ ವಾಸ್ತವ ಹೆಚ್ಚು ಅಥೆಂಟಿಕ್ ಆಗಿರಬೇಕೆಂಬ ಪ್ರಯತ್ನ ಎನ್ನಬೇಕು. ಬಹುಶಃ ಇದೇ ಕಾರಣದಿಂದ ಇಲ್ಲಿನ ಪಾತ್ರಗಳು ಪರಸ್ಪರ ಮುಖಾಮುಖಿಯಾಗುವುದೇ ಅಪರೂಪ.
ಇವತ್ತು ನಮ್ಮ ಲೇಖಕಿಯರ ಕಥಾಸಾಹಿತ್ಯದಲ್ಲಿ ಎದ್ದು ಕಾಣುವ ಮುಖ್ಯಾಂಶಗಳೆಂದರೆ ಹೆಣ್ಣಿನ ಅಸ್ಮಿತೆಯ ಅರಿವು, ರೂಢಿಗತ ಮೌಲ್ಯಗಳ ಪಲ್ಲಟ, ಕೌಟುಂಬಿಕ, ಸಾಮಾಜಿಕ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ, ಮನೋವೈಜ್ಞಾನಿಕ ಒಳನೋಟಗಳು, ಆತ್ಮಪ್ರಜ್ಞೆ, ಅಂತರ್ಮುಖತೆ, ವಿಚಾರಶೀಲತೆ ಮುಂತಾದುವು. ಈಗ ಮಹಿಳೆಯರ ಅನುಭವ ಪ್ರಪಂಚ ಹಿಂದೆಂದೂ ಇಲ್ಲದಿದ್ದ ವ್ಯಾಪ್ತಿ, ವೈವಿಧ್ಯಗಳನ್ನು ಪಡೆದುಕೊಂಡಿದೆ. ಸಾಮಾಜಿಕ ಧೋರಣೆಯಲ್ಲಿ, ಮನೋಧರ್ಮಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹೆಣ್ಣು ಗಂಡಿನಷ್ಟೇ ಸಾಮರ್ಥ್ಯದಿಂದ ಹೊರಗೆ ದುಡಿಯುತ್ತ ಆರ್ಥಿಕ ಸ್ವಾತಂತ್ರ್ಯವನ್ನು ಗಳಿಸಿದ್ದಾಳೆ. ಅವಿಭಕ್ತ ಕುಟುಂಬ ಕಣ್ಮರೆಯಾಗುತ್ತಿದೆ. ಕುಟುಂಬ ಹಾಗೂ ವಿವಾಹ ವ್ಯವಸ್ಥೆಗಳು ಹೊಸ ಮೌಲ್ಯಗಳ ಬೆಳಕಿನಲ್ಲಿ ಪ್ರಶ್ನಾರ್ಹವಾಗುತ್ತಿವೆ. ಗಂಡು ಹೆಣ್ಣಿನ ಸಂಬಂಧಗಳಲ್ಲಿ ಬಿಕ್ಕಟ್ಟು ತಲೆದೋರುತ್ತಿದೆ. ತತ್ಪರಿಣಾಮವಾಗಿ ವೈವಾಹಿಕ ಜೀವನದಲ್ಲಿ ವಿರಸವೊಂದು ಸ್ಥಾಯೀಭಾವವಾಗುತ್ತಿದೆ.
ಉಷಾ ಅವರ ಕಥಾಸೃಷ್ಟಿಯಲ್ಲಿ ಹೆಣ್ಣಿನ ಜೀವನವೆಂದರೆ ಪ್ರವರ್ಧಮಾನಕ್ಕೆ ಬರುವುದು, ಮದುವೆಯಾಗುವುದು, ಮಕ್ಕಳ ಏಳಿಗೆಗಾಗಿ ಆಸೆ ಪಡುವುದು, ಬಡತನ ಅನುಭವಿಸುವುದು, ಸದಾ ದುಡಿಯುವುದು, ಪ್ರೀತಿ ವಾತ್ಸಲ್ಯಗಳನ್ನು ಹಂಚುವುದು, ಇತ್ಯಾದಿ. ಜೊತೆಗೆ ಅವರ ಪಾತ್ರಗಳು ಕುಟುಂಬ ಸೌಖ್ಯ, ವಿಷಮ ವಿವಾಹ, ಹೆತ್ತವರನ್ನೇ ದೂರಮಾಡುವ ಮಕ್ಕಳು, ವೃದ್ಧಾಪ್ಯದ ದೈಹಿಕ ನೋವುಗಳು, ಮಾನಸಿಕ ಆಘಾತಗಳು, ಹೊಂದಾಣಿಕೆಯ ಸಮಸ್ಯೆ, ಆಶೋತ್ತರಗಳು, ನೈರಾಶ್ಯಗಳು ಮೊದಲಾದುವನ್ನೂ ಶೋಧಿಸುತ್ತವೆ. ಹಾಗಾಗಿಯೇ ಈ ಕತೆಗಳು ಮಹಿಳೆಯ ಅಂತರಂಗದ ಬದುಕು ಮತ್ತು ಸಮಾಜ ಅವಳಿಂದ ನಿರೀಕ್ಷಿಸುವ ಕರ್ತವ್ಯ ಇವುಗಳ ನಡುವಣ ವಿಘಟನೆಯನ್ನು ಇತ್ಯಾತ್ಮಕವಾಗಿ ಚರ್ಚಿಸುತ್ತವೆ.
ಈ ಸಂಕಲನದ ಕತೆಗಳು ಯಾರೊಬ್ಬರ ನಿರ್ಧಿಷ್ಟ ವಿಚಾರಗಳನ್ನು ಚಿತ್ರಿಸುವುದಿಲ್ಲ. ಪ್ರತಿಯಾಗಿ ಅವು ಮಾನವ ಅನುಭವದ ಸಂದಿಗ್ಧತೆಯನ್ನು ಪರಿಶೋಧಿಸುತ್ತವೆ. ಕತೆಗಳಲ್ಲಿರುವ ಮಹಿಳೆಯರು ದುರ್ವಿಧಿಯ ಬಲಿಪಶುಗಳೆಂದೋ ಅಥವಾ ಕೈಗೊಂಬೆಗಳೆಂದೋ ಖಚಿತವಾಗಿ ಹೇಳಲಾಗದು. ‘ಇದೊಂದು ಆತ್ಮಕಥೆ’ಯ ಹೆಣ್ಣು ಏಕಕಾಲಕ್ಕೆ ಬಲಿಪಶುವೂ ಹೌದು, ತನ್ನ ಅಂತರಂಗದ ದನಿಗೆ ಓಗೊಟ್ಟವಳೂ ಹೌದು. ಆಕೆಗೆ ನೋವಿದೆ, ಅದನ್ನು ತಾಳಿಕೊಂಡು ತನ್ನ ಬದುಕಿನ ಹೊಸ ಅಧ್ಯಾಯವೊಂದನ್ನು ತೆರೆಯುವ ಸಾಮಥ್ರ್ಯವೂ ಇದೆ.
ಈ ಸಂಕಲನದ ‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ?’ ಸಾಕಷ್ಟು ಸುದೀರ್ಘವಾಗಿರುವ ಕತೆ. ಹಾಗೆಯೇ ಇದು ಉಷಾ ಅವರ ಪ್ರಾತಿನಿಧಿಕ ಕತೆಯೂ ಹೌದು. ಇಲ್ಲಿ ಸೀಮಾ, ವಿವೇಕ್ ಇಬ್ಬರೂ ಉದ್ಯೋಗದಲ್ಲಿರುವವರು. ಸೀಮಾಗೆ ತನ್ನ ವೃತ್ತಿಯಲ್ಲಿ ತುಟ್ಟತುದಿಯನ್ನು ಮುಟ್ಟಬೇಕೆಂಬ ಆಸೆ. ಹಾಗಾಗಿ ಅವಳಿಗೆ ತನ್ನ ಮಗಳು ಪರಿಯನ್ನು ನೋಡಿಕೊಳ್ಳುವುದಕ್ಕೂ ಸಮಯವಿಲ್ಲ. ಅವಳ ಅತ್ತೆ (ವಿವೇಕ್ ನ ತಾಯಿ) ಪರಿಯನ್ನೂ ಸಂಸಾರವನ್ನೂ ನಿರ್ವಹಿಸುತ್ತಿರುವವರು. ಇಡೀ ಕತೆ ಅನಾವರಣಗೊಳ್ಳುವುದು ಅವರ ಮನಸ್ಸಿನಲ್ಲಿಯೇ. ಆರ್ಥಿಕ ಮತ್ತು ಸಾಮಾಜಿಕ ಸಂದರ್ಭದಲ್ಲಿ ತಾಯಿಯ ಪ್ರೀತಿಯನ್ನು ಕಾಣಿಸುವ ಈ ಕತೆ ಅನ್ಯಾಯವನ್ನು ಕುರಿತು ಕೂಡ ಹೇಳುತ್ತಿದೆಯೆನ್ನಬೇಕು.
ಆತ್ಮವಿಶ್ವಾಸ, ಅಹಮಿಕೆಗಳೇ ಮೇಲುಗೈ ಸಾಧಿಸಿದಾಗ ಜೀವದಾಯಿಯಾದ ಸಂಬಂಧಗಳಿಗೆ ಎಡೆಯೆಲ್ಲಿ? ಸೀಮಾಗೆ ವಿವಾಹ ವಿಚ್ಛೇದನೆಯೊಂದೇ ದಾರಿಯಾಗುವುದು ಪರಿಸ್ಥಿತಿಯ ವ್ಯಂಗ್ಯವೇ ಸರಿ. ‘ಕಟ್ಟಬೇಡಿ ಕನಸುಗಳ’ ಎಂಬ ಕತೆಯ ಧ್ವನಿಯೂ ಇದೇ ಆಗಿರುವಂತಿದೆ. ‘ಸದ್ದುಗಳು’ ಕತೆಯ ಕಥಾನಾಯಕಿ ತನ್ನ ಬಾಳಿನಲ್ಲಿ ಬಂದವರೆಲ್ಲರ ಊಳಿಗದವಳಾಗಿ ಕಡೆಗೆ ತನ್ನತನವನ್ನು ಸ್ಥಾಪಿಸುವಂಥ ನಿರ್ಧಾರ ತೆಗೆದುಕೊಳ್ಳುವಲ್ಲಿ, ‘ಇದೊಂದು ಆತ್ಮಕಥೆ’ಯ ಹೆಣ್ಣು ಬೇರೆಯವರಿಗಾಗಿಯೇ ಬದುಕಿ, ತಾನು ಹೆತ್ತ ಮಗನಿಗೇ ಎರವಾಗಿ ಕೊನೆಗೂ ಸ್ವತಂತ್ರ ಜೀವನ ನಡೆಸುವಲ್ಲಿ ಮಹಿಳೆಯರು ‘ಬಾಳು ಹೀಗಾಯಿತಲ್ಲ’ ಎಂದು ಕೊರಗದೆ, ಜೀವನ್ಮುಖಿಗಳಾಗುವುದು ಅರ್ಥಪೂರ್ಣ. ಈ ಎರಡೂ ಕತೆಗಳಲ್ಲಿ ‘ವೃದ್ಧಾಶ್ರಮ’ವೆನ್ನುವುದು ಬಾಳಿಗೊಂದು ಸಂಕೇತವಾಗುವುದನ್ನು ಗಮನಿಸಬೇಕು.
‘ಮಯಣದ ಗೊಂಬೆ’ ಎಂಬ ಕತೆ ಕೂಡ ಸಂಬಂಧಗಳ ಪಾವಿತ್ರ್ಯವನ್ನು ಬಯಸುವ ಹೆಣ್ಣಿನ ಆಂತರಂಗದ ತೊಳಲಾಟವನ್ನು ಚಿತ್ರಿಸುವಂಥದು. ಉಳಿದ ಕತೆಗಳಲ್ಲಿ ‘ಹಸಿದು ಬಂದವರಿಗೆ ಇಲ್ಲ ಎನಲಾದೀತೆ?’ ಎಂಬುದು ಮಹಾಭಾರತದ ದ್ರೌಪದಿಯನ್ನು ಕುರಿತಿದ್ದರೂ ಹೆಣ್ಣಿನ ಸಾಮಥ್ರ್ಯ, ಸಾಧಿಸುವ ಗುಣ, ಇವುಗಳಿಗೊಂದು ರೂಪಕವಾಗಿದೆ. ‘ಬಿಚ್ಚಿಕೊಂಡ ಜಗತ್ತು – ಬೆಸೆದುಕೊಂಡ ಮನಸ್ಸು’ ಇಂಟರ್ ನೆಟ್ಟಿನಲ್ಲಿ ಅನಿರೀಕ್ಷಿತವಾಗಿ ಚಾಟ್ಗೆ ಬಂದ ಒಬ್ಬ ಹುಡುಗಿಯ ಮೂಲಕ ಕಳಚಿಕೊಂಡಿದ್ದ ಸಂಬಂಧಗಳು ಕಾಕತಾಳೀಯವೆಂಬಂತೆ ಮತ್ತೆ ಒಂದಾಗುವುದನ್ನು ಚಿತ್ರಿಸುತ್ತದೆ.
ಹಾಗೆ ನೋಡಿದರೆ ಈ ಲೇಖಕಿ ಮನುಷ್ಯ ಸಂಬಂಧಗಳ ಒಳನೆಯ್ಗೆಯನ್ನು ಸೂಕ್ಷ್ಮವಾಗಿ ಪರಿಶೀಲಿಸುವವರು. ಒಂದು ಕತೆಯಲ್ಲಿ ಪಾತ್ರವೊಂದರ ಸ್ವಗತ ಹೇಗಿದೆಯೆಂದು ನೋಡಿ: ಸಂಬಂಧಗಳ ತಳಪಾಯ ಎಷ್ಟೊಂದು ದುರ್ಬಲವಾಗಿರುತ್ತೆ. ಎಷ್ಟು ಬೇಗ ಕಳಚಿಕೊಳ್ಳುತ್ತೆ. ಕೆಲವೊಮ್ಮೆ ಅನಿಸುತ್ತೆ ಈ ಪ್ರೀತಿ, ಪ್ರೇಮ, ನಮ್ಮವರೆನ್ನುವ ವಾಂಛೆ ಎಲ್ಲಾ ಸುಳ್ಳೇ ಎಂದು. ಯಾವುದಾದರೂ ಕಾರಣಕ್ಕೆ ನಾವು ಸ್ವಲ್ಪ ವಿಚಲಿತರಾದರೆ ಎಲ್ಲಾ ಸಂಬಂಧಗಳು ಕುಸಿದು ಬೀಳುತ್ತೆ. ಎಲ್ಲರಿಗೂ ಸಂಬಂಧಗಳನ್ನು ಉಳಿಸಬೇಕೆನ್ನುವ ಕಾಳಜಿ ಇದ್ದರೆ ಮಾತ್ರ ಸಂಬಂಧಗಳು ಉಳಿಯುತ್ತೆ. ಒಬ್ಬರಿಂದಲೇ ಎಲ್ಲಾ ಸಂಬಂಧಗಳನ್ನು ಹಿಡಿದಿಟ್ಟುಕೊಳ್ಳುವುದು ಸಾಧ್ಯವೇ ಇಲ್ಲ. ಹೆತ್ತವರ ಮಕ್ಕಳ ಸಂಬಂಧವೇ ಉಳಿಯದಿದ್ದರೆ ಬೇರೆ ಸಂಬಂಧಗಳು ಹೇಗೆ ಉಳಿದಾವು?
ಕತೆಯ ಕಲೆಯಿರುವುದು ಪಾತ್ರವನ್ನು ಅಭಿವ್ಯಕ್ತಿಗೊಳಿಸುವುದಕ್ಕೇ ಹೊರತು ತತ್ವಬೋದನೆಗಲ್ಲ ಎಂದ ಇಂಗ್ಲಿಷ್ ಲೇಖಕಿ ವರ್ಜಿನಿಯಾ ವೂಲ್ಫ್ ಹೆಣ್ಣು ಎಲ್ಲರೂ ಬಳಸುವ ಹಜಾರದಲ್ಲಿ ಜನರಿಂದ ಸುತ್ತುವರಿಯಲ್ಪಟ್ಟು ಸೂಕ್ಷ್ಮ ನಿರೀಕ್ಷಣೆಗಾಗಿ ಮನಸ್ಸನ್ನು ಉಪಯೋಗಿಸುವವಳು, ಪಾತ್ರ ವೈಶಿಷ್ಟ್ಯವನ್ನು ವಿಶ್ಲೇಶಿಸಬಲ್ಲವಳು. ಹಾಗಾಗಿ ಆಕೆ ಕವಿಯಲ್ಲ, ಒಬ್ಬ ಕಾದಂಬರಿಗಾರ್ತಿಯಾಗುವುದಕ್ಕಾಗಿಯೇ ತರಬೇತುಗೊಂಡವಳು ಎಂದೂ ಒಂದೆಡೆ ಬರೆದಿದ್ದಾಳೆ. ಈ ಮಾತಿಗೊಂದು ನಿದರ್ಶನವೆಂಬಂತೆ ಉಷಾ ಅವರ ಅನುಭವ ಅದೆಷ್ಟು ಸಮೃದ್ಧವಾಗಿದೆಯೆಂದರೆ ಅದಕ್ಕೆ ಕತೆಯ ಪ್ರಕಾರ ಒಡ್ಡುವ ಕಾಲಮಿತಿ ಏನೇನೂ ಸಾಲದು. ಅವರ ಕೆಲವು ಕಾದಂಬರಿಗಾಗುವಷ್ಟು ಸಾಮಗ್ರಿಯಿರುವುದನ್ನು ಅಲ್ಲಗಳೆಯುವಂತಿಲ್ಲ.
ಈ ಲೇಖಕಿಗೆ ಸ್ತ್ರೀವಾದಿ ಎಂಬ ಹಣೆಪಟ್ಟಿ ಹಚ್ಚಿಬಿಡುವುದೆಂದರೆ ಇವರನ್ನೊಂದು ಸುಲಭವಾದ ವರ್ಗಕ್ಕೆ ಸೇರಿಸಿ, ಇವರದು ಮನುಷ್ಯ ಜೀವನವನ್ನು ಇಡಿಯಾಗಿ ನೋಡುವ ದೃಷ್ಟಿಕೋನವಲ್ಲ ಎಂದು ಬಿಟ್ಟಂತೆ. ಆದರೂ ಇವುಗಳನ್ನು ಸ್ತ್ರೀದೃಷ್ಟಿಯ ಪವಿತ್ರ ಪಠ್ಯಗಳೆಂದು ಪರಿಗಣಿಸಬೇಕು. ಯಾಕೆಂದರೆ ಒಬ್ಬ ಮಹಿಳೆಯಾಗಿ ಬದುಕುವುದೆಂದರೆ ಏನೆಲ್ಲ ಅನುಭವಕ್ಕೆ ತೆರೆದುಕೊಳ್ಳಬೇಕಾಗುವುದೆಂಬ ಅರಿವು ಇಲ್ಲಿದೆ. ಹಾಗಾಗಿ ನಮ್ಮನ್ನು ಹೃದಯದ ಬಳಿಗೆ ಕರೆದೊಯ್ಯುವ, ಒಂದು ಜೀವದ ಜೊತೆ ಗಂಭೀರವಾಗಿ ಅನುಕಂಪದಿಂದ ವರ್ತಿಸುವಂತೆ ಮಾಡಬಲ್ಲ ಸಾಹಿತ್ಯಕ್ಕೆ ಪಾವಿತ್ರ್ಯವಿದ್ದೇ ಇದೆ.
ಇವತ್ತಿನ ಮಹಿಳೆಯರು ಅಷ್ಟೇನೂ ಸಾಂಪ್ರದಾಯಿಕವಲ್ಲದ ನೆಲೆಗಳಿಂದ ಪರಿಶೀಲಿಸುವ ವಿವಿಧ ಮಾನವ ಅನುಭವಗಳನ್ನು ಈ ಲೇಖಕಿ ಪರಿಭಾವಿಸುವ ರೀತಿ ನಿಜಕ್ಕೂ ಪ್ರಶಂಸಾರ್ಹ. ಇಲ್ಲಿನ ಕತೆಗಳಲ್ಲಿ ಸದಾ ಕೌಟುಂಬಿಕ ನೆಲೆಯಲ್ಲೇ ಇದ್ದುಕೊಂಡು ಅರ್ಥಪೂರ್ಣವಾಗುವ ಅದ್ವಿತೀಯ ಮಹಿಳೆಯರಿದ್ದಾರೆ. ಅಸ್ಮಿತೆಯನ್ನು, ಸೋಲುಗೆಲುವುಗಳನ್ನು ನಿರ್ಧರಿಸುವ ಆರ್ಥಿಕ ಸ್ವಾತಂತ್ರ್ಯವಿದ್ದೂ ಒಬ್ಬೊಂಟಿಯಾಗುವ ಹೆಣ್ಣುಗಳೂ ಇದ್ದಾರೆ. ಲೇಖಕಿ ಇಂಥ ಪಾತ್ರಗಳನ್ನು ನಿರ್ವಹಿಸುವಾಗ, ಆತ್ಮೀಯರನ್ನು ಮಾನಸಿಕವಾಗಿ ಕಳೆದುಕೊಳ್ಳುವ, ಕಾಲವು ಕೂಡ ಮಾಯಿಸಲಾಗದ ನೋವುಗಳನ್ನು ನಿರೂಪಿಸುವಾಗ ತೋರುವ ಸಂಯಮವಿದೆಯಲ್ಲ, ಅದು ಚಿಂತನೆಯನ್ನು ಉದ್ದೀಪಿಸುವ ಮೂಲಕ ಅನುಭವವನ್ನು ಗಾಢಗೊಳಿಸುತ್ತದೆ.
ಕಥಾಸಾಹಿತ್ಯದ ಕೇಂದ್ರದಲ್ಲಿರುವವನು ಮನುಷ್ಯ. ಕತೆ ಬರೆಯುವ ಪ್ರಕ್ರಿಯೆಯಲ್ಲಿ ಕತೆಗಾರ ತನ್ನ ಕಲ್ಪನೆಯ ಫಲವಾದ ವಾಸ್ತವವನ್ನು ಪುನರ್ರೂಪಿಸುತ್ತಿರುತ್ತಾನೆ. ಆದ್ದರಿಂದ ವಸ್ತುನಿಷ್ಠತೆ ಮತ್ತು ವ್ಯಕ್ತಿನಿಷ್ಠತೆಗಳ ನಡುವೆ ಒಂದು ಬಗೆಯ ಸಂವಾದ ನಡೆಯುತ್ತದೆ. ಈ ದೃಷ್ಟಿಯಿಂದ ಇಲ್ಲಿನ ಕತೆಗಳು ಆ ಸಂವಾದದಲ್ಲಿ ಓದುಗನೂ ಭಾಗವಹಿಸಬೇಕೆಂದು ಆಗ್ರಹಿಸುವಂತಿವೆ.
ಈ ಸಂಕಲನದ ಎಲ್ಲ ಕತೆಗಳನ್ನೂ ಒಟ್ಟಿಗೆ ಓದಿದಾಗ ನಮ್ಮನ್ನು ವಿಷಾದ ಭಾವವೊಂದು ಆವರಿಸಿ ಕೊಂಡಂತಾಗುತ್ತದೆ. ಅದು ಘನಘೋರ ವಾಸ್ತವದಿಂದಲೋ ಅಸಹಾಯಕತೆಯಿಂದಲೋ ಹುಟ್ಟಿದ ವಿಷಾದವಲ್ಲ. ಕನಸು ವಾಸ್ತವಗಳನ್ನು, ಪ್ರಯತ್ನ ವೈಫಲ್ಯಗಳನ್ನು ಪರಿಶೋಧಿಸಿದ ಫಲವಾಗಿ ಹುಟ್ಟಿದ ವಿಷಾದ. ಅದು ಶಾಸ್ತ್ರೀಯ ಸಂಗೀತದಲ್ಲಿ ಕೆಲವು ರಾಗಗಳು ಉದ್ದೀಪಿಸುವ ವಿಷಾದದಷ್ಟೇ ಮಧುರವೂ ಹೌದು, ಆಕರ್ಷಕವೂ ಹೌದು.




ದಿವಾಕರ್ ಸರ್ ಚೆನ್ನಾಗಿ ಬರೆದಿದ್ದೀರಿ. ಉಷಾ ಪಿ ರೈ ,ಅವರಿಗೆ ಅಭಿನಂದನೆ .
ಸುಮಿತ್ರಾ ಎಲ್ ಸಿ.
ಉಷಾ ಪಿ.ರೈ ಅವರ ವ್ಯಕ್ತಿತ್ವ ತುಂಬಾ ಆಕರ್ಷಕ. ಗಟ್ಟಿತನದ ಬರಹಗಳಿಂದ ಉತ್ತಮ ಲೇಖಕಿಯಾಗಿರುವ ಅವರು ಒಮ್ಮೆ ಅಪಘಾತಕ್ಕೀಡಾಗಿ , ಓಡಾಡದಂಥ ಪರಿಸ್ಥಿತಿಗೆ ಸಿಕ್ಕಿದಾಗ, ನಿರಾಶರಾಗದೆ , ಎದೆಗುಂದದೆ ಅದನ್ನೇ ಬೇರೊಂದು ದಿಕ್ಕಿನ ಸಾಧನೆಯ ಕ್ಷಣಗಳನ್ನಾಗಿ ಮಾರ್ಪಡಿಸಿಕೊಂಡದ್ದಂತೂ ಅದ್ಭುತ. ಇದರ ಫಲವೇ ಅವರ ಮನೆಯ ಗೋಡೆಗಳ ತುಂಬಾ ಅತ್ಯದ್ಭುತವಾದ ಚಿತ್ರಕಲಾಕೃತಿಗಳು ಅರಳಿನಗುತಿವೆ. ಎಂಥದ್ದೇ ಪರಿಸ್ಥಿತಿ ಎದುರಾಗಲಿ ಅದನ್ನು ಧನಾತ್ಮಕವನ್ನಾಗಿ ರೂಪಿಸಿಕೊಳ್ಳುವುದು ನಮ್ಮ ಕೈಲಿದೆ ಎನ್ನುವುದನ್ನು ಈ ಮೂಲಕ ನಮಗೆ ತೋರಿಸಿಕೊಟ್ಟ ಈ ಸಾಧಕಿಗೆ ಇನ್ನೂ ಯಶಸ್ಸನ್ನು ಕೋರುತ್ತೇನೆ.
Congratulations another good book
ಅಭಿನಂದನೆಗಳು ಉಷಾ ರೈ ಮೇಡಂ. ಶೀರ್ಷಿಕೆ ಬಹಳ ಇಷ್ಟವಾಯ್ತು. ಕಥಾ ಸಂಕಲನದ ಬಗ್ಗೆ ಕುತೂಹಲ ಸೃಷ್ಟಿಸಿರುವ ದಿವಾಕರ್ ಸರ್ ಅವರ ಮುನ್ನುಡಿ ಆಕರ್ಷಕವಾಗಿದೆ.