ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿವೇಕ ರೈ ಆಯ್ಕೆ: ಪ್ರೊ.ಕೆ. ಮರುಳಸಿದ್ಧಪ್ಪ

ಪ್ರೊ.ಕೆ.ಮರುಳಸಿದ್ಧಪ್ಪ ರಾಜ್ಯಸಭೆಗೆ ಸೂಕ್ತ ಅಭ್ಯರ್ಥಿ

ಪ್ರೊ.ಕೆ.ಮರುಳಸಿದ್ಧಪ್ಪ ಅವರನ್ನು ನಾನು ಕಳೆದ ನಲುವತ್ತು ವರ್ಷಗಳಿಂದ ಚೆನ್ನಾಗಿ ಬಲ್ಲೆ.ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ,ವಿಮರ್ಶಕರಾಗಿ,ನಾಟಕಕಾರರಾಗಿ,ಪ್ರಗತಿಪರ ಚಿಂತಕರಾಗಿ ,ಕನ್ನಡಪರ ಮತ್ತು ಪ್ರಗತಿಪರ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲುಗೊಳ್ಳುತ್ತಾ ತತ್ವನಿಷ್ಟ ಸಾಹಿತಿಯಾಗಿ ಅವರು ಬೆಳೆದು ಬಂದಿದ್ದಾರೆ.

ಈಗ ಅವರು ಸ್ವತಂತ್ರ ವಾಗಿ ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದಾರೆ.ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅವರನ್ನು ಬೆಂಬಲಿಸಿದರೂ ಅವುಗಳ ದೋಷಗಳನ್ನು ವಿರೋಧಿಸುವ ನೈತಿಕತೆಯನ್ನು ಅವರು ಹೊಂದಿದ್ದಾರೆ.ನಿನ್ನೆ ರಾತ್ರಿ ಟಿವಿ ೯ ನಲ್ಲಿ ಅವರ ಸಂದರ್ಶನವನ್ನು ಗಮನಿಸಿದೆ.ಎಲ್ಲ ರಾಜಕೀಯ ಪಕ್ಷಗಳ ಬಗೆಗೂ ತಮ್ಮ ಅಭಿಪ್ರಾಯಗಳನ್ನು ದಾಕ್ಷಿಣ್ಯವಿಲ್ಲದೆ ಅವರು ಹೇಳಿದ್ದಾರೆ.ರಾಜ್ಯಸಭೆಯಲ್ಲಿ ಕರ್ನಾಟಕದ ಪರ ಹಾಗೂ ಜನಪರ ದನಿಯೆತ್ತ ಬಲ್ಲ ಅವರಿಗೆ ನನ್ನ ನೈತಿಕ ಬೆಂಬಲವನ್ನು ಸೂಚಿಸುತ್ತಿದ್ದೇನೆ.

ಎಲ್ಲ ರಾಜಕೀಯ ಪಕ್ಷಗಳು ಗೆಲ್ಲುವ ಅವಕಾಶ ಇದ್ದಾಗ ಹೊರ ರಾಜ್ಯದವರಿಗೆ,ಹಣದ ರಾಶಿಯವರಿಗೆ ,ತಮ್ಮ ಪಕ್ಷದ ಸೋತ ಅಥವಾ ನಿಷ್ಪ್ರಯೋಜಕ ಅಭ್ಯರ್ಥಿಗಳಿಗೆ ಅವಕಾಶ ಕೊಡುತ್ತಾ ಬಂದಿವೆ.ಸಾಹಿತಿ-ಸ್ವಾಭಿಮಾನಿ ಕನ್ನಡಿಗ-ಚಿಂತಕ ರಿಗೆ ಅವಕಾಶ ಕೊಡುತ್ತಿದ್ದರೆ ,ಶಿವರಾಮ ಕಾರಂತ, ಅನಂತಮೂರ್ತಿ ಮತ್ತು ಅನೇಕ ಅರ್ಹರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗುತ್ತಿದ್ದರು

‍ಲೇಖಕರು G

28 February, 2011

5 Comments

  1. ಉಷಾಕಟ್ಟೆಮನೆ

    ಗುರುಗಳೇ,
    tv9 ಸಂದರ್ಶನ ಸಮಯದಲ್ಲೇ ಹೊಸದಾಗಿ ಆರಂಭವಾಗಿರುವ ಜನಶ್ರೀ ಸುದ್ದಿ ಚಾನಲ್ ಮರುಳಸಿದ್ದಪ್ಪನವರ ಸಂದರ್ಶನ ಪ್ರಸಾರ ಮಾಡಿತ್ತು. ಅದರಲ್ಲಿ ಸಂದರ್ಶಕ ಚೇತನ್, ಮರುಳಸಿದ್ದಪ್ಪನವರನ್ನು”ಗೋಮುಖ ವ್ಯಾಘ್ರ” ಎಂದು ಕರೆದಿದ್ದರು. ಅದು ನೇರ ಪ್ರಸಾರ ಕಾರ್ಯಕ್ರಮ ಆಗಿರಲಿಲ್ಲ ಎಂಬುದು ಗಮನಾರ್ಹ.ಇದಕ್ಕೆ ನೀವೆನಂತೀರಿ ಸರ್?

    • ಡಾ.ಬಿ.ಆರ್.ಸತ್ಯನಾರಾಯಣ

      ಜನಾಶ್ರೀ ಸುದ್ದಿ ಚಾನೆಲ್ ಯಾರದ್ದು ಎನ್ನುವುದು ಈ ಭಾಷೆಯಿಂದಲೇ ಗೊತ್ತಾಗುತ್ತೆ ಅಲ್ಲವಾ? ಸಂದರ್ಶಕ ಚೇತನ ತನ್ನ ಒಡೆಯನನ್ನು ಮೆಚ್ಚಿಸಲು ಈ ಪದ ಬಳಸಿದ್ದಾರೆ. ಅದು ವಾಹಿನಿಯ ಒಡೆಯರಿಗೇ ಹೆಚ್ಚು ಅನ್ವಯವಾಗುತ್ತೆ. ಇದು ಚೇತನ್ ಅವರಿಗೂ ಬಹುಶಃ ಚೆನ್ನಾಗಿಯೇ ಗೊತ್ತಿರುತ್ತೆ.

  2. ಡಾ.ಬಿ.ಆರ್.ಸತ್ಯನಾರಾಯಣ

    ಚಿದಾನಂದಮೂರ್ತಿಗಳಿಗೆ ಗೌರವ ಡಾಕ್ಟರೇಟ್ ತಡೆಹಿಡಿದಿದ್ದಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನಲ್ಲಿ ನಿರ್ಣಯವನ್ನೇ ಕೈಗೊಂಡು ರಾಜ್ಯಪಾಲರ ನಿರ್ಧಾರವನ್ನು ವಿರೋಧಿಸಿ ಬಲಪ್ರದರ್ಶನ ಮಾಡಿ ಯಶಸ್ಸು ಪಡೆದಿದ್ದ ಕನ್ನಡ ಸಾಹಿತ್ಯ ಲೋಕ ಮರುಳಸಿದ್ದಪ್ಪನವರ ವಿಚಾರದಲ್ಲಿ ಅಂತಹ ಒಗ್ಗಟ್ಟನ್ನು ಪ್ರದರ್ಶಿಸುತ್ತಿಲ್ಲ. ಅಂದು, ಅಧಿಕಾರಸ್ಥರ ನಿಲುವಿಗೆ ಪರವಾದ ನಿರ್ಣಯವಾಗಿದ್ದರಿಂದ ಅದಕ್ಕೆ ಅಷ್ಟೊಂದು ಬೆಂಬಲ ಸಿಕ್ಕಿತೆ!? ಇಂದು ಅಧಿಕಾರಸ್ಥರ ನಿಲುವಿನ ವಿರುದ್ಧವಾಗಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿರುವುದರಿಂದ ಒಗ್ಗಟ್ಟು ಮೂಡುತ್ತಿಲ್ಲವೋ? ಗೊತ್ತಿಲ್ಲ. ಸ್ವತಃ ಮರುಳಸಿದ್ದಪ್ಪನವರೇ ಆಗ, ಚಿದಾನಂದಮೂರ್ತಿಗಳನ್ನು ಬೆಂಬಲಿಸಿ ರಾಜ್ಯಪಾಲರ ನಿಲುವನ್ನು ಟೀಕಿಸಿದ್ದರು. ಚಿದಾನಂದಮೂರ್ತಿಗಳ ಮತ್ತು ನನ್ನ ನಡುವೆ ಸೈದ್ಧಾಂತಿಕ ಭಿನ್ನತೆಯಿದ್ದರೂ, ಅವರು ನನ್ನ ಗುರುಗಳಾದ್ದರಿಂದ ಹಾಗೂ ಅವರೊಬ್ಬ ಅಪ್ರತಿಮ ಸಂಶೋಧಕರಾಗಿರುವುದರಿಂದ ನಾಣು ಅವರಿಗೆ ಬೆಂಬಲಿಸಿದ್ದೇನೆ. ರಾಜ್ಯಪಾಲರ ನಿರ್ಧಾರವನ್ನು ವಿರೋಧಿಸುತ್ತೇನೆ ಎಂದೆಲ್ಲಾ ಹೇಳಿದ್ದರು. ಆದರೆ ಇಂದು ಚಿದಾನಂದಮೂರ್ತಿಗಳು ಮೌನವಾಗಿದ್ದಾರೆ.
    ಈಗ ಯಡ್ಯೂರಪ್ಪನವರಿಗೆ ಒಂದು ಉತ್ತಮ ಅವಕಾಶ ದೊರಕಿಬಂದಿದೆ. ತೆರೆಮರೆಯಲ್ಲಾದರೂ ಸರಿ, ಮಠಾಧಿಪತಿಗಳ ಕಡೆಯಿಂದಲಾದರೂ ಸರಿ, ತಮ್ಮ ನಿಷ್ಟಾವಂತರ ಒಂದಷ್ಟು ಮತಗಳನ್ನು ಮರುಳಸಿದ್ದಪ್ಪನವರಿಗೆ ಹೋಗುವಂತೆ ಮಾಡಿ, ಪಕ್ಷದೊಳಗೆ ತಮಗೆ ಆಗದವರ ಈ ನಿರ್ಧಾರವನ್ನು (ಹೇಮಮಾಲಿನಿಯನ್ನು ನಿಲ್ಲಿಸಿದ್ದರ ಹಿಂದೆ ಯಡ್ಯೂರಪ್ಪನವರ ವಿರೋಧಿಗಳ ಕೈವಾಡವಿದೆಯೆಂದು ಪತ್ರಿಕೆಗಳಲ್ಲಿ ಬಂದಿದೆ) ಹೊಡೆದು ಹಾಕಬಹುದು. ಕನ್ನಡಿಗರ, ಸಾಹಿತಿಗಳ ಬೆಂಬಲವನ್ನೂ ಗಳಿಸಿಕೊಳ್ಳಬಹುದು. ಇದೆಲ್ಲಾ ಮರುಳಸಿದ್ದಪ್ಪನವರ ಗೆಲುವಿನ ಮೇಲೆ ನಿಂತಿದೆ. ಮರುಳಸಿದ್ದಪ್ಪನವರಿಗೆ ಗೆಲುವಾಗಲಿ ಎಂಬುದೇ ನನ್ನ ಆಶಯ.

  3. HSV

    ಡಾ ಕೆ ಎಂ ಎಸ್ ಮೊದಲಿನಿಂದಲೂ ವ್ಯಕ್ತಿಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತಾ, ಒಟ್ಟಾರೆ ಸಮಷ್ಟಿಯ ಹಿತವನ್ನು ತೀವ್ರವಾಗಿ ಧ್ಯಾನಿಸುತ್ತಾ ಬಂದವರು. ಅಂಥವರಿಗೆ ನೈತಿಕ ಬೆಂಬಲ ನೀಡುವುದು ನನಗಂತೂ ಅಭಿಮಾನದ ಸಂಗತಿ.

    ಎಚ್ಚೆಸ್ವಿ

  4. ರಾಮಚಂದ್ರ ದೇವ

    ಡಾ. ಮರುಳಸಿದ್ಧಪ್ಪನವರು ಕನ್ನಡವನ್ನು ಕರ್ನಾಟಕವನ್ನು ಚೆನ್ನಾಗಿ ಬಲ್ಲವರು. ಹೇಮಮಾಲಿನಿಗೆ ಕನ್ನಡದ ಬಗ್ಗೆ ಕರ್ನಾಟಕದ ಬಗ್ಗೆ ಏನೇನೂ ಗೊತ್ತಿಲ್ಲ. ಇದೊಂದೇ ಕಾರಣ ಸಾಕು–ಮರುಳಸಿದ್ಧಪ್ಪನವರನ್ನು ಬೆಂಬಲಿಸಲು.
    ಸರಿಯಾಗಿ ಮಾಡಿದರೆ ಬೌದ್ಧಿಕ ಕೆಲಸ ಬೇಡುವ ರಾಜ್ಯಸಭೆಗೆ ಹೇಮಮಾಲಿನಿಯಂಥವರನ್ನು ಸ್ಪರ್ಧೆಗೆ ನಿಲ್ಲಿಸುವುದೇ ತಪ್ಪು.
    ರಾಮಚಂದ್ರ ದೇವ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading