ಎಚ್ಚೆಸ್ವಿ ಅನಾತ್ಮ ಕಥನ: ರಾಬರ್ಟ್ ಅಬರ್ನತಿ ಮತ್ತು ಸೇಫ್ ವೇ ಗ್ರಾಸರಿ…

ಪ್ರಪಂಚ ಚಿಕ್ಕದಾಗುತ್ತಿದೆ ಅನ್ನೋದು ನಿಜ. ನಾನು ಈ ಬೆಳಿಗ್ಗೆ ಏನೋ ಓದುತ್ತಾ ಕೂತಿದ್ದಾಗ ಹೊರಗೆ ಕಾಲಿಂಗ್ ಬೆಲ್ ಸದ್ದಾಯಿತು. ಯಾರಪ್ಪಾ ಅಂತ ಬಾಗಿಲು ತೆರೆದು ನೋಡಿದರೆ ಹೆಸರಿಗೆ ಅನ್ವರ್ಥಕವಾದ ಪೂರ್ಣಿಮಾ ಮುಖ ಕಣ್ಣಿಗೆ ಬಿತ್ತು. ಅದು ಬೆರಗು ಹುಟ್ಟಿಸುವ ಸಂಗತಿಯಲ್ಲ. ಆಕೆಯ ಹಿಂದೆ ಅವಳ ಪತಿ ಬಾಬು ಇದ್ದರು. ಅರೆ ! ಇವರು ಯಾವಾಗ ಬಂದರು ಅಮೆರಿಕಾದಿಂದ? ನಾನು ಮತ್ತು ಲಕ್ಷ್ಮಣ ರಾವ್ ದಂಪತಿ ಸ್ಯಾನ್ ಹೊಸೆಗೆ ಹೋದಾಗ ಅವರ ಮನೆಯಲ್ಲೇ ಉಳಿದುಕೊಂಡಿದ್ದೆವು. ಪೂರ್ಣಿಮಾ ಧೈರ್ಯದ ನಿರ್ಧಾರ ಮಾಡಿ ಮಕ್ಕಳನ್ನು ಇಂಡಿಯಾದಲ್ಲಿ ಬೆಳೆಸಬೇಕೆಂದು ಈಗ ಬೆಂಗಳೂರಿಗೇ ಬಂದಿದ್ದಾಳೆ. ಬಾಬು ಇಂಡಿಯಾದಲ್ಲಿ ಸರಿಯಾದ ಅವಕಾಶಕ್ಕಾಗಿ ಕಾಯುತ್ತಾ ಸದ್ಯ ಸ್ಯಾನ್ ಹೊಸೆಯಲ್ಲೇ ಇದ್ದಾರೆ. ಹೋದವಾರ ಯಾಕೋ ಅವರಿಗೆ ಮಕ್ಕಳನ್ನು ನೋಡಬೇಕು ಅನ್ನಿಸಿತಂತೆ. ವ್ಯಕ್ತಿ ಆವತ್ತೇ ಹದಿನೈದು ದಿನ ರಜಾ ಹಾಕಿ ಇಂಡಿಯಾಕ್ಕೆ ಬಂದಿದ್ದಾರೆ. ಅದು ಪೂರ್ಣಿಮಾಗೂ ಸರ್ಪ್ರೈಸ್. ನಮಗೂ ಆ ಅಚ್ಚರಿಯ ಅನುಭವ ಕೊಡಬೇಕು ಅಂತ ಇದ್ದಕ್ಕಿದ್ದಂತೆ ಆಕೆ ಪತಿಯೊಂದಿಗೆ ಬೆಳಿಗ್ಗೆ ನಮ್ಮಲ್ಲಿಗೆ ಬಂದದ್ದು. ಬಾಬುವನ್ನು ನೋಡಿ ತುಂಬ ಖುಷಿಯಾಯಿತು ನನಗೆ!

ಬಾಬುವಿನ ಸಜ್ಜನಿಕೆ ಆತನ ಮುಗ್ಧತೆಯ ಜತೆ ಕೂಡು ಬಾಳುವಿಕೆಯ ಜೀವಾವಧಿ ಒಪ್ಪಂದ ಮಾಡಿಕೊಂಡಿದೆ. ಹಾಗಾಗಿ ಆತ ಆಗಾಗ ವಿಚಿತ್ರ ಬಗೆಯ ಇಕ್ಕಟ್ಟುಗಳಲ್ಲಿ ಸಿಕ್ಕಿಕೊಳ್ಳುವುದುಂಟು! ಅದಕ್ಕೇ ಬಾಬುವನ್ನು ಮಾತಿಗೆ ಎಳೆಯುತ್ತಾ ನಾನು ಕೇಳಿದ್ದು: ಮಾರಾಯ್ರೇ! ನಿಮ್ಮ ಇತ್ತೀಚಿನ ಅತ್ಯಂತ ಪೇಚಿನ ಪ್ರಸಂಗ ಯಾವುದು? ಬಾಬು ಒಂದು ನಿಮಿಷ ತಲೆಕೆರೆದುಕೊಂಡರು. ಇಬ್ಬರಲ್ಲಿ ಹೆಚ್ಚು ಹರಟೆಮಲ್ಲಿಯಾದ ಪೂರ್ಣಿಮಾ ಏನೋ ಹೇಳಲಿಕ್ಕೆ ಶುರು ಹಚ್ಚಿದಳು ಎನ್ನುವಾಗ ಬಾಬು ಅವಳ ಬೆನ್ನಿಗೆ ಗುದ್ದಿ, ನಾನು…ನಾನು ..ಹೇಳ್ತೇನೆ…ನನಗೆ ಮೊದಲ ಅವಕಾಶ…ಅಂತ ಕಥೆ ಶುರು ಮಾಡಿದರು!

ಎರಡೇ ವಾರಗಳ ಹಿಂದೆ ನಡೆದ ಕಥೆಯಿದು. ಕಥೆ ಅಂತ ಉದ್ದೇಶ ಪೂರ್ವಕ ಹೇಳುತಾ ಇದ್ದೀನಿ. ನೀವು ಕಥೆ ಬರೆಯುತ್ತೀರ…ನಾವು ಕಥೆ ಬದುಕುತ್ತೇವೆ!-ಹೀಗೆ ಬಹಳ ಆಕರ್ಷಕವಾಗಿಯೇ ಬಾಬು ತಮ್ಮ ಕಥನ ಶುರು ಮಾಡಿದರು. ಆವತ್ತು ಬೆಳಿಗ್ಗೆ ಹೊಟ್ಟೆ ಹಪ ಹಪ ಅನ್ನಿಸಹತ್ತಿ ಬಾಬು ತಿನ್ನುವುದಕ್ಕೆ ಏನಾದರೂ ತರೋಣ ಅಂದುಕೊಂಡು ಸೇಫ್  ವೇ ಗ್ರಾಸರಿಗೆ ಹೋಗಿದ್ದಾರೆ. ತಮಗೆ ಪ್ರಿಯವಾದ ಗ್ರೀನ್ ಸಲಾಡ್ ತಗೊಂಡು ಬಾಬು ಮನೆಗೆ ಹಿಂದಿರುಗಲು ಕಾರು ಹತ್ತ ಬೇಕು. ಆಗ ಎದುರಾಗಿದ್ದಾನೆ ಆ ಮನುಷ್ಯ. ವೀಲ್ಚೇರ್ ಮೇಲೆ ಇದ್ದ ಆ ವ್ಯಕ್ತಿ, ಬಾಬುವನ್ನು ನೋಡಿ ‘ಕ್ಯಾನ್ ಯು ಡು ಮೀ ಏ ಫೇವರ್’ ಎಂದಿದ್ದಾನೆ. ಆ ಮನುಷ್ಯ ನನಗೇ ಹೇಳಿದ್ದಾ ಆ ಮಾತು? ಬಾಬು ಹಿಂದೆ ನೋಡಿ ಬೇರೆ ಯಾರೂ ಇಲ್ಲ ಅಂತ ಖಚಿತವಾದ ಮೇಲೆ, ಓಹೋ, ನನಗೇ ಆ ವ್ಯಕ್ತಿ ಈ ಮಾತು ಹೇಳಿದ್ದು ಅಂತ ಖಾತ್ರಿ ಮಾಡಿಕೊಂಡು, “ನನ್ನಿಂದ ಏನಾಗಬೇಕು ನಿಮಗೆ?” ಎಂದು ಕೇಳಿದ್ದಾರೆ. “ಸ್ವಲ್ಪ ಗ್ರಾಸರಿ ಖರೀದಿ ಮಾಡಿದ್ದೆ…ನನ್ನ ಕ್ರೆಡಿಟ್ ಕಾರ್ಡಲ್ಲಿ ಬ್ಯಾಲನ್ಸ್ ಇಲ್ಲ. ನನ್ನ ಮಮ್ಮಿ ಯಾಕೋ ಇನ್ನೂ ಹಣ ತುಂಬಿಲ್ಲ….ನೂರು ಡಾಲರ್ ಅಷ್ಟು ಖರೀದಿ ಮಾಡಿದೀನಿ…ನೀವು ಆ ಹಣ ಕೊಡೋದಾದರೆ, ಹಿಂದಿನಿಂದ ಅದನ್ನ ಹಿಂದಿರುಗಿಸುತ್ತೇನೆ…” ಈ ಮನುಷ್ಯನಿಗೆ ಏನು ಉತ್ತರಿಸಬೇಕು ಅಂತ ಬಾಬು ಯೋಚಿಸುತ್ತಾ ಇರುವಾಗಲೇ ಆ ವ್ಯಕ್ತಿ ವ್ಯಂಗ್ಯವಾಗಿ ನಕ್ಕು, ಈ ಕಾಲದಲ್ಲಿ ಇಂಥ ಸಹಾಯ ಯಾರಿಂದಲಾದರೂ ನಿರೀಕ್ಷಿಸುವುದು ಹುಚ್ಚುತನ ಅಂತ ನನಗೆ ಗೊತ್ತಿದೆ ಎಂದು ವಟಗುಟ್ಟಿ ವೀಲ್ ಚೇರ್ ಮುಂದಕ್ಕೆ ಚಲಾಯಿಸಿದ್ದಾನೆ.

ಇದು ಬಾಬುವಿನ ಒಳಗನ್ನು ಕಲಕಿದ ಮಾತು. ಇವ ಮೋಸಗಾರ ಇರಬಹುದು! ಅಥವಾ ನಿಜವಾಗಲೂ ಪೇಚಿಗೆ ಸಿಕ್ಕಿರುವ ಪ್ರಾಮಾಣಿಕನೂ ಇರಬಹುದು. ಎರಡೂ ಸಾಧ್ಯತೆಗಳಿವೆ. ಇವನು ನಿಜವಾಗಲೂ ಪ್ರಾಮಾಣಿಕನಿದ್ದು ನಾನು ಈತನಿಗೆ ಈಗ ಸಹಾಯ ಮಾಡದೆ ಇದ್ದರೆ ತಪ್ಪಾಗುತ್ತದೆ, ಹೋದರೆ ನೂರು ಡಾಲರ್ ತಾನೇ ಹೋಗೋದು? ಅಷ್ಟು ಕಳೆದುಕೊಳ್ಳುವ ಶಕ್ತಿ ನನಗೆ ಉಂಟು…ಇದೊಂದು ಪಗಡೆ ಆಟ. ಕಾಯಿ ನಡೆಸಿಯೇ ಬಿಡೋಣ ಎಂದುಕೊಂಡು, ಆ ಮನುಷ್ಯನನ್ನ, ನಿಲ್ಲಿ, ಅಂದಿದ್ದಾರೆ. ವ್ಯಕ್ತಿ ಅಚ್ಚರಿಯಿಂದ ವೀಲ್ ಚೇರ್ ನಿಲ್ಲಿಸಿ ಹಿಂತಿರುಗಿ ನೋಡಿದ್ದಾನೆ. ಸುಮಾರು ನಲವತ್ತರ ಪ್ರಾಯ ಇರಬಹುದು ಆತನಿಗೆ. ಹೊರವಾದ ಗಡ್ಡ ಮೀಸೆ. ಮುರುಟಿಕೊಂಡಿರುವ ಕಾಲು. ಅದಕ್ಕೇ ಆತ ವೀಲ್ಚೇರ್ ಆಶ್ರಯಿಸಿರೋದು. ಕೆದರಿದ ಅವನ ದಟ್ಟ ಹುಬ್ಬುಗಳ ಅಡಿ ಅವನ ನೀಲಿ ಕಣ್ಣುಗಳು ಥಳ ಥಳ ಹೊಳೆದಿವೆ ಆಕ್ಷಣ.

ಅವನು ಕೈನೀಡಿ, ರಾಬರ್ಟ್ ಅಬರ್ನತಿ. ಸ್ಯಾನ್ಹೊಸೆಯಲ್ಲೇ ಇದ್ದೇನೆ. ನನ್ನ ಮಮ್ಮಿ ಪೋರ್ಟ್ಲ್ಯಾಂಡಿನಲ್ಲಿ ಇದ್ದಾಳೆ. ನಾನು ಸ್ವಲ್ಪ ಸಂಪಾದಿಸುತ್ತೇನೆ. ನನ್ನ ಮಮ್ಮಿ ಸ್ವಲ್ಪ ಸಹಾಯ ಮಾಡುತ್ತಾಳೆ. ಪ್ರತಿತಿಂಗಳೂ ಆಕೆ ನಿಗಧಿಯಾಗಿ ಸ್ವಲ್ಪ ಹಣ ಕಳಿಸುತ್ತಾಳೆ. ಈ ಸಾರಿ ಯಾಕೋ ಇನ್ನೂ ಅವಳು ಹಣ ತುಂಬಿಲ್ಲ.ಕಲೆಕ್ಷನ್ಗೆ ಕೊಟ್ಟಾಗ ಇದು ತಿಳಿಯಿತು. ಕೊಂಡ ಗ್ರಾಸರಿ ಒಳಗೇ ಇಟ್ಟು ಬಂದಿದ್ದೇನೆ. ನೀವು ಪೇ ಮಾಡೋದಾದರೆ ಹಿಂದಿನಿಂದ ನಾನು ಹಣ ಕೊಡುತ್ತೇನೆ!

ಅಡ್ಡಿಯಿಲ್ಲ ಎನ್ನುತ್ತಾರೆ ಬಾಬು. ಸುಮಾರು ನೂರು ಡಾಲರ್ನಷ್ಟು ಗ್ರಾಸರಿ ಎಂದು ರಾಬರ್ಟ್ ಹುಬ್ಬು ಎಗರಿಸುತ್ತಾನೆ. ಪರವಾಗಿಲ್ಲ. ನೀವು ಗ್ರಾಸರಿ ತಗೊಂಡು ಬನ್ನಿ. ನಾನು ಪೇ ಮಾಡುತ್ತೇನೆ ಎನ್ನುತ್ತಾರೆ ಬಾಬು. ರಾಬರ್ಟ್ ಹೆಗಲು ಕೊಡವಿ, ಅಮೆರಿಕನ್ನರಿಗೇ ವಿಶಿಷ್ಟವಾದ ಶೈಲಿಯಲ್ಲಿ “ಒಕೇ…” ಎಂದು ಉದ್ಗರಿಸಿ, ಗ್ರಾಸರಿ ತರಲು ಮತ್ತೆ ಮಳಿಗೆಯೊಳಕ್ಕೆ ಹೋಗುತ್ತಾನೆ. ಅವನು ಹೆಗಲು ಕುಣಿಸಿದ್ದು ನೋಡಿ ಒಂದು ಕ್ಷಣ ಬಾಬು ತಬ್ಬಿಬ್ಬಾಗುತ್ತಾರೆ. ಎಂಥ ಮೂರ್ಖನಯ್ಯಾ ನೀನು ಎಂದು ನನಗೆ ಅವನ ಹೆಗಲ ಕುಣಿತಾ ಹೇಳುತ್ತಾ ಇದೆಯೇ? ಮಾತು ಕೊಟ್ಟ ಮೇಲೆ ಮುಗಿಯಿತು. ಬಾಬು ಎನ್ನುವ, ಪುಣ್ಯಕೋಟಿಯ ನಾಡಿನ ಈ ಮನುಷ್ಯ, ರಾಬರ್ಟ್ ತನ್ನ ಬ್ಯಾಗುಗಳೊಂದಿಗೆ ಬರುವವರೆಗೆ ಕಾಯ್ದು, ಅವನ ಪರವಾಗಿ ತಾವು ಪೇ ಮಾಡಿ, ನಾನಿನ್ನು ಬರಲಾ ಎಂದು ಕೈ ಕುಲುಕುವಾಗ, ರಾಬರ್ಟ್ ಹೇಳುತ್ತಾನೆ. ನಿಮ್ಮ ಅಡ್ರೆಸ್ಸ್ ಕೊಡಿ. ಹಾಗೇ ದೂರವಾಣಿ ಸಂಖ್ಯೆ. ರಾಬರ್ಟ್ಗೆ ತನ್ನ ಕಾರ್ಡ್ ಕೊಟ್ಟು ಬಾಬು ತಮ್ಮ ಕಾರ್ ಕಡೆ ನಡೆದು ಅದರ ಡೋರ್ ಓಪನ್ ಮಾಡಬೇಕು , ಅಷ್ಟರಲ್ಲಿ ರಾಬರ್ಟ್ ಹಿಂದಿನಿಂದ ಮತ್ತೆ ಕೂಗುತ್ತಾನೆ. ನನಗೆ ನಿಮ್ಮಿಂದ ಇನ್ನೊಂದು ಉಪಕಾರ ಆಗಬಹುದೆ? ಅಂಥ ದೊಡ್ಡದೇನಲ್ಲ. ನನ್ನಮನೆಗೆ ಒಂದು ಡ್ರಾಪ್ ಬೇಕು ಅಷ್ಟೆ…ನಾನು ಟ್ಯಾಕ್ಸಿ ಹಿಡಿದರೆ ಮತ್ತೆ ಮಿನಿಮಮ್ ಇಪ್ಪತ್ತು ಡಾಲರ್ ತೆರಬೇಕಾಗತ್ತೆ ನೋಡಿ…!

ರಾಬರ್ಟ್ ಹುಳ್ಳಗೆ ನಗುತ್ತಾ ಬಾಬುವಿನ ಮುಖವನ್ನೇ ನೋಡುತ್ತಾ ಇದ್ದಾನೆ! ಅವನ ನೀಲಿ ಕಣ್ಣುಗಳನ್ನು ಬಾಬು ನೋಡುತ್ತಾರೆ. ಅವು ನಿಶ್ಕಲ್ಮಶವಾಗಿವೆ ಅನ್ನಿಸುತ್ತೆ. ಸರಿ. ಎಲ್ಲಿ ನಿಮ್ಮ ಮನೆ? ನಾನು ನಿಮಗೆ ಡ್ರಾಪ್ ಕೊಡುತ್ತೇನೆ. ರಾಬರ್ಟ್ ಹೇಳುತ್ತಾನೆ. ತುಂಬ ಹತ್ತಿರ ಸ್ವಾಮಿ. ಬ್ಲೂಬರ್ಡ್ ಸ್ಕೂಲಿನ ಹಿಂದೆ ಅಷ್ಟೆ!. ಬಾಬು ಲೆಕ್ಖ ಹಾಕುತ್ತಾರೆ. ಎರಡು ಕಿಲೋ ಮೀಟರ್ ಅಷ್ಟೆ. ಡ್ರಾಪ್ ಕೊಡಬಹುದು. ಅಂಥ ಎಕ್ಸ್ ಪೆನ್ಸೀವ್ ಉಪಕಾರವೇನಲ್ಲ. ಆದರೆ….

ಈ ಆದರೆಯ ನಂತರ ಕೆಲವು ಭಯಾವಹ ಕಲ್ಪನೆಗಳು ಬಾಬುವಿನ ಮನಸ್ಸಲ್ಲಿ ಸುಳಿಯುತ್ತವೆ. ಈ ಮನುಷ್ಯ ಕ್ರಿಮಿನಲ್ ಮೈಂಡೆಡ್ ಆಗಿದ್ದರೆ. ಇವನ ಹಿಂದೆ ಅಂಥ ಒಂದು ದೊಡ್ಡ ಪಡೆಯೇ ಇದ್ದರೆ! ಎಲ್ಲಾ ಸೇರಿ ಗನ್ ತೋರಿಸಿ ನನ್ನ ಸಮಸ್ತವನ್ನೂ ಸುಲಿಗೆ ಮಾಡಿದರೆ! ಕೆಲವು ಬಾರಿ ಜೀವಕ್ಕೂ ಅಪಾಯ ಉಂಟು. ನೂರು ಡಾಲರ್ಗೆ ಕೊಲೆಯನ್ನೂ ಮಾಡುವವರುಂಟು. ಏನು ಯೋಚಿಸುತ್ತಿದ್ದೀರಿ? ಅನ್ನುತ್ತಾನೆ ರಾಬರ್ಟ್. ನಿಮಗೆ ತೊಂದರೆ ಆಗುವುದಾದರೆ ಬೇಡ…! ಛೇ ಛೇ ತೊಂದರೆ ಏನು ಬಂತು? ನಾನು ನಿಮ್ಮನ್ನು ಮನೆಗೆ ಬಿಡುತ್ತೇನೆ. ತುಂಬ ತುಂಬ ಥ್ಯಾಂಕ್ಸ್ ಸ್ವಾಮಿ….

ಬಾಬು ಅಂದುಕೊಂಡಂತೆ ಯಾವ ಅವಗಢವೂ ಆಗದೆ , ರಾಬರ್ಟ್ ಅನ್ನು ಮನೆಗೆ ತಲಪಿಸಿ ಬಾಬು ತಮ್ಮ ಮನೆಗೆ ಹಿಂದಿರುಗುತ್ತಾರೆ. ಹೆಂಡತಿ ಮಕ್ಕಳು ಮನೆಯಲ್ಲಿ ಇಲ್ಲದಿರುವಾಗ ಯಾಕೆ ನಾನು ಇಂಥ ಉಪದ್ವ್ಯಾಪ ಎಲ್ಲ ಹಚ್ಚಿಕೊಳ್ಳುತ್ತೇನೆ ಎಂದು ಒಂದು ಕ್ಷಣ ಚಿಂತಿಸುತ್ತಾರೆ. ಮರು ಕ್ಷಣ, ಇಲ್ಲ, ನಾನು ಮಾಡಿದ್ದು ಸರಿ…ಪಾಪ…ಅಂಗ ವಿಕಲ ವ್ಯಕ್ತಿ…ನಿಜಕ್ಕೂ ಏನೋ ಪೇಚಿಗೆ ಒಳಗಾಗಿರಬೇಕು…ನನಗೆ ಮೋಸ ಮಾಡುವ ಉದ್ದೇಶ ಖಂಡಿತ ಅವನಿಗಿರಲಿಕ್ಕಲ್ಲ…ಒಂದು ವೇಳೆ ಅವನು ಮೋಸ ಮಾಡಿದರೂ ಕೇವಲ ನೂರು ಡಾಲರ್ ತಾನೆ…ಇದೊಂದು ರೀತಿ ಜೂಜು ಅಂತಲೇ ಇಟ್ಟುಕೊಳ್ಳೋಣ…ಮನುಷ್ಯತ್ವವನ್ನ ಫಣವಾಗಿ ಒಡ್ದಿದ ಜೂಜು…ಕಾಯಿ ನಡೆಸಿಯಾಗಿದೆ..ನೋಡೋಣ…

ಮಾರನೆ ಬೆಳಿಗ್ಗೆ ಬಾಬುವಿನ ಆಫೀಸಿಗೇ ಒಂದು ಕಾಲ್ ಬರುತ್ತೆ. ಸಹಾಯಕಿ, ಕಾಲ್ ಫ್ರಮ್ ಪೋರ್ಟ್ ಲ್ಯಾಂಡ್ ಎಂದು ಗುರುತುಮಾಡಿಟ್ಟ ಚೀಟಿ ಸಿಗುತ್ತದೆ. ಅರೆ! ಪೋರ್ಟ್ ಲ್ಯಾಂಡ್ ಎಂದರೆ ರಾಬರ್ಟ್ ನ ತಾಯಿ ವಾಸಿಸುವ ಊರಲ್ಲವಾ? ಬಾಬು ಮಾತಾಡಿದಾಗ ಆ ಕಡೆಯಿಂದ ಒಂದು ಹೆಣ್ಣು ಧ್ವನಿ ಕೇಳುತ್ತದೆ. ನಾನು ಎಲೀನ್ ಅಂತ. ರಾಬರ್ಟ್ನ ಅಮ್ಮ. ನೆನ್ನೆ ನೀವು ಅವನಿಗೆ ಮಾಡಿದ ಉಪಕಾರ ಯಾವತ್ತೂ ಮರೆಯುವಂತಿಲ್ಲ. ಇವತ್ತೇ ನಿಮಗೆ ಚೆಕ್ ಕಳಿಸಿದ್ದೇನೆ. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ ಮಗು..! ಎನ್ನುತ್ತದೆ ವೃದ್ಧಾಪ್ಯದಿಂದ ನಡುಗುತ್ತಿರುವ ಆ ಸ್ತ್ರೀ ಧ್ವನಿ.

ಬಾಬು ಕಥೆ ಹೇಳುತ್ತಾ ಹೇಳುತ್ತಾ ಒಂದು ತನ್ಮಯ ಸ್ಥಿತಿಯಲ್ಲಿ ಮುಳುಗಿಹೋಗಿದ್ದಾರೆ. ಅವರ ಧ್ವನಿ ಒದ್ದೆಯಾಗಿದೆ- ನೀರಲ್ಲಿ ತೊಳೆಯಲಿಕ್ಕಾಗಿ ನೆನೆಯಿಟ್ಟ ಬಟ್ಟೆಯಂತೆ. “ಚೆಕ್ ಬಂತು ಅಂಕಲ್ ಪೋರ್ಟ್ ಲ್ಯಾಂಡ್ ಇಂದ. ಎಷ್ಟು ವಿಚಿತ್ರ ಅಲ್ಲವ? ಈವತ್ತಿನ ವಾತಾವರಣ ಪ್ರಾಮಾಣಿಕರನ್ನೂ ಸಂದೇಹಿಸುವಂಥ ಮನಃಸ್ಥಿತಿಯನ್ನು ನಮ್ಮಲ್ಲಿ ನಿರ್ಮಿಸಿಬಿಟ್ಟಿದೆಯಲ್ಲ!?”

ಈ ಮಾತು ಹೇಳುವಾಗ ಬಾಬುವಿನ ಧ್ವನಿ ನಿಜಕ್ಕೂ ಆರ್ದ್ರವಾಗಿತ್ತು.

*******

‍ಲೇಖಕರು G

February 28, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. ರಾಮಚಂದ್ರ ನಾಡಿಗ್, ಕದರನಹಳ್ಳಿ

    ತುಂಬಾ ಚೆನ್ನಾಗಿದೆ…
    ಇದನ್ನ ಓದಿ ಕೆಲವೊಂದು ಘಟನೆ ನೆನಪಿಗೆ ಬರ್ತಿದೆ…. ನನಗೆ ಆತ್ಮೀಯರಾದ ಕೆಲವ್ರು ಏನೋ ಕಷ್ಟ ಅಂತಾ ನನ್ನ ಹತ್ರ ದುಡ್ಡು ಇಸ್ಕೊಂಡಿದಾರೆ(ಅವ್ರನ್ನ ನೋಡಿದ್ರೆ ಕಷ್ಟ ಅನ್ಸೋಲ್ಲ)… ಯಾವಾಗ್ಲೂ ನನಗೆ ಸಿಕ್ತಾರೆ, ಆದ್ರೆ ದುಡ್ಡು ವಾಪಸ್ ಕೊಡೋ ವಿಷಯ ಮಾತ್ರ ಎತ್ತೋದಿಲ್ಲ…. ದುಡ್ಡು ಕೊಟ್ಟ ನಾನು ನಿಜಕ್ಕೂ ಕೋಡಂಗಿಯೇ ಸರಿ…. ಹಿಂಗಾಗಿ ಇನ್ಮೇಲೆ ಯಾರಿಗೂ ಏನನ್ನೂ ಕೊಡಬಾರದು ಅಂದ್ಕೋತೀನಿ, ಆದ್ರೂ ಯಾರಾದ್ರೂ ಕಷ್ಟ ಅಂದಾಗ ಮನಸ್ಸು ಕರಗುತ್ತೆ….
    ಆದ್ರೆ ನೋಡಿ… ಪರಿಚಯವೇ ಇಲ್ಲದ ದೇಶದಲ್ಲಿ, ಯಾರೋ ಗುರ್ತು ಪರಿಚಯ ಇಲ್ಲದವ್ರು ಪ್ರಾಮಾಣಿಕವಾಗಿ ದುಡ್ಡು ಹಿಂದಿರುಗಿಸ್ತಾರೆ ಅಂದ್ರೆ ನಿಜಕ್ಕೂ ಮೆಚ್ಚುವ ವಿಷಯವೇ ಸರಿ…. ಲೇಖನ ತುಂಬಾ ಇಷ್ಟ ಆಯ್ತು…..

    ಪ್ರತಿಕ್ರಿಯೆ
  2. Rajashekhar Malur

    Sir, nimma modala ankana barahadalli intahude ondu episode baredidri.. jnapaka ideye…? nimma 10,000/- cheque cash ayito bounce ayito… adu suspensenalle ittiddiri…! adara suspense disclose maadidare…. ee barahavannu naanu opputtene…!!

    ಪ್ರತಿಕ್ರಿಯೆ
  3. sunitha betkerur

    H.S.V.Sir
    Niivu KumaravyasaBharatha oduva mattu odisuva karyakrama hakikondiddiri embudu gottayithu hage Lakshmishana jaimini Bharatha.PampaBharathavannu odisuva karyakrama hakikolli
    nanu nanna asakthigagi evannella matththe oduththine nanage sageethada hinnele illavaddarinda
    hadalu aguvudilla.Nnu iga monne bidugade ada Lakshmishana JaiminiBaharath oduththiddene(boluvaru,Sethuram.ganjefa raghupathi Battara combinationnalli thumba chennagi moodi bandide-sunitha

    ಪ್ರತಿಕ್ರಿಯೆ
  4. Skanda Swamy

    ಪ್ರಿಯ HSV ಅಂಕಲ್,
    ತುಂಬಾ ಚೆನ್ನಾಗಿ ಬರೆದಿದ್ದೀರ. ನಡೆದಿದ್ದಿಕ್ಕಿಂತ ಹೆಚ್ಚಾಗಿ ನೀವು ವಿವರವಾಗಿ ಬರೆದ ಆರ್ಟಿಕಲ್ ಓದಲು ತುಂಬಾ ರೋಮಂಚಕವಾಗಿದೆ. ನನ್ನ ಮುಂದೆ ಇದನ್ನು ಓದಿದ್ದೆಲ್ಲವರ ಕಣ್ಣಲ್ಲೂ ನೀರು ನೋಡಿದೆ.
    ಥ್ಯಾಂಕ್ಸ್ ಫಾರ್ ಶೇರಿಂಗ್!

    ಪ್ರತಿಕ್ರಿಯೆ
    • HSV

      ಕಥಾನಾಯಕನೇ ಕಥೆಯನ್ನು ಮೆಚ್ಚುವುದು ಖುಷಿಯ ಸಂಗತಿಯಲ್ಲವೇ?!

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: