ವಿಲಕ್ಷಣ ಹುಡುಕಾಟದ ಪಯಣ…

ರವೀಂದ್ರ ಕೆ ಆರ್

INTO THE WILD

ದುಸ್ಸಾಹಸೀ ಯುವಕನೊಬ್ಬನ ವಿಲಕ್ಷಣ ಹುಡುಕಾಟದ, ಪಯಣದ ಚಿತ್ರ.

ಇಲ್ಲಿ ದಿನವೂ ಬಿಡುವಿನ ಹಬ್ಬ. ಹಾಗಾಗಿ ತಿರುಗಾಟಗಳ ಬಿಟ್ಟರೆ, ಈ ಹಿಂದೆ ನೋಡದೆ ಬಿಟ್ಟಿದ್ದ ಅನೇಕ ಉತ್ತಮ ಸಿನಿಮಾಗಳನ್ನು ನೋಡುವುದೂ ಒಂದು ಕಾಯಕವಾಗಿದೆ.

ನಿನ್ನೆ, 2007 ರಲ್ಲಿ ಬಿಡುಗಡೆಯಾದ, ಬಹುಷಃ ನಿಮ್ಮಲ್ಲಿ ಅನೇಕರು ನೋಡಿರಬಹುದಾದ, INTO THE WILD ಎಂಬ ಇಂಗ್ಲಿಷ್ ಚಲನಚಿತ್ರ ನೋಡಿದೆ.

ಕ್ರಿಷ್ಟೊಫರ್ ಜಾನ್ಸನ್ ಮೆಕ್ಯಾಂಡ್ಲೆಸ್ – ಕ್ರಿಸ್ ( ಅವನೇ ಇಟ್ಟುಕೊಂಡ ಅಡ್ಡ ಹೆಸರು – ಅಲೆಗ್ಸ್ಯಾಂಡರ್ ಸೂಪರ್ ಟ್ರಾಂಪ್ ) ಕ್ಯಾಲಿಫೋರ್ನಿಯಾ ದ ಎಲ್ ಸೆಗುಂಡೊ ಪಟ್ಟಣದಲ್ಲಿ ವಾಲ್ಟ್ ಹಾಗೂ ಬಿಲ್ಲಿ ಮೆಕ್ಯಾಂಡ್ಲೆಸ್ ಎಂಬ ಅನುಕೂಲಸ್ತ ದಂಪತಿಗಳಿಗೆ 1968 ರ ಫೆಬ್ರವರಿ 12 ರಂದು ಜನಿಸುತ್ತಾನೆ. ಅವನ ತಂದೆ ಆ ಹಿಂದೆಯೇ ಒಂದು ಮದುವೆಯಾಗಿದ್ದು, ಮೊದಲನೇ ಹೆಂಡತಿಗೆ 6 ಮಕ್ಕಳಿದ್ದದ್ದನ್ನು ಮರೆಮಾಚಿ, ವಿಲ್ಲಿಯೊಡನೆಯೂ ( ಮದುವೆಯಾಗದೆ) ಸಂಸಾರ ನಡೆಸುತ್ತಾ ಇದ್ದು, ಇವರಿಗೆ ಕ್ರಿಷ್ಟೊಫರ್ ಜಾನ್ಸನ್ ಮೆಕ್ಯಾಂಡ್ಲೆಸ್ – ಕ್ರಿಸ್ – ಹಾಗೂ ಕ್ಯಾರೀನ್ ಮೆಕ್ಯಾಂಡ್ಲೆಸ್ – ಕ್ಯಾರೀನ್ – ಎಂಬ ಇಬ್ಬರು ಮಕ್ಕಳಾಗಿರುತ್ತಾರೆ.

ವಾಲ್ಟ್ ಹಾಗೂ ವಿಲ್ಲಿ ಸಾಮರಸ್ಯ ವಿಲ್ಲದೇ ಆಗಾಗ ಕಚ್ಚಾಡುವ (Dischordant couple) ದಂಪತಿಗಳಾಗಿರುತ್ತಾರೆ. ವಾಲ್ಟ್ ನ ಮೊದಲ ಮದುವೆಯ, ಹೆಂಡತಿ – ಮಕ್ಕಳ ಗುಟ್ಟು ರಟ್ಟಾದಮೇಲೆ ಇದು ಇನ್ನೂ ಹದಗೆಟ್ಟಿರುತ್ತೆ. ಅವನು ಕುಡಿತಕ್ಕೆ ಚಟಕ್ಕೆ ಸಹಾ ಬಿದ್ದಿರುತ್ತಾನೆ. ಮಕ್ಕಳೂ ಆಗಾಗ ನಿಂದನೆಗೆ ಒಳಗಾಗುತ್ತಿರುತ್ತಾರೆ. ಇದು ಇಬ್ಬರಲ್ಲೂ ಒಂದು identity crisis ಹಾಗೂ ಅಭದ್ರತೆಯ ಮನಸ್ಥಿತಿ ನಿರ್ಮಿಸಿರುತ್ತೆ. ಆದರೂ ಬುದ್ಧಿವಂತರಾದ ಅವರು ಓದುವುದರಲ್ಲಿ ಸಫಲರಾಗೇ ಇರುತ್ತಾರೆ.

ಕ್ರಿಸ್ ಮಾತ್ರಾ, ತನ್ನ ಕಾಲೇಜು ಓದಿನ ಜೊತೆಗೆ, ಅಮೆರಿಕಾದ ಲೇಖಕ, ಕವಿ, ತತ್ವಜ್ಞಾನಿ, ಹೆನ್ರಿ ಡೇವಿಡ್ ತೊರೌ ( Henry David Thoreau ) ನ ನೈಸರ್ಗಿಕ ಪರಿಸರದಲ್ಲಿ ಸರಳವಾಗಿ ಬದುಕುವ ಚಿಂತನೆಗಳ ಬಗೆಗಿನ ಬರಹಗಳಿಂದ ಅತೀ ಪ್ರಭಾವಿತನಾಗಿ, ಪದವಿ ಮುಗಿಯುವಹೊತ್ತಿಗೇ, ಪ್ರಾಪಂಚಿಕ ಬದುಕಿನೆಡೆಗೆ ಒಂದು ವಿರಕ್ತಿ ಮೂಡಿಸಿಕೊಂಡಿರುತ್ತಾನೆ. ಒಂದು ದಿನ, ಒಂದಷ್ಟು ಬಟ್ಟೆ ಬರೆ ಜೋಡಿಸಿಕೊಂಡು, ಇದನ್ನು ಹೊರತುಪಡಿಸಿ, ಇನ್ನೆಲ್ಲವನ್ನೂ ತ್ಯಜಿಸಿ, ಮನೆಬಿಟ್ಟು, ಅಲಾಸ್ಕಾ ದ ನಿರ್ಜನ ಕಾಡಿನ ಗಮ್ಯದತ್ತ ಧಾವಂತದ ಪಯಣ ಆರಂಭಿಸುತ್ತಾನೆ.

ನಟನೆಗಾಗಿ ಎರಡು ಬಾರಿ ಆಸ್ಕರ್ ಪ್ರಶಸ್ತಿ ಪಡೆದ ನಟ ಹಾಗೂ ನಿರ್ದೇಶಕ ಶಾನ್ ಪೆನ್ ನಿರ್ದೇಶಿಸಿ 2007ರಲ್ಲಿ ಬಿಡುಗಡೆಯಾದ INTO THE WILD ಎಂಬ ದೃಶ್ಯಕಾವ್ಯದಂತಹಾ ಚಲನ ಚಿತ್ರದ ಮುಂದಿನ ಭಾಗವೇ ಈ ದುಸ್ಸಾಹಸೀ ಯುವಕ ಕ್ರಿಸ್ ನ, ವಿಲಕ್ಷಣ ಹುಡುಕಾಟದ ಪಯಣ.

ಚಿತ್ರದ ಆರಂಭದಲ್ಲಿ ಕಾಣಿಸುವ, ಕವಿ ಲಾರ್ಡ್ ಬೈರನ್ (Lord Byron) ನ There is pleasure in the pathless woods ಎಂಬ ಕವನದ ಈ ಸಾಲುಗಳು ಈ ಹುಡುಗನ ಪಯಣಕ್ಕೆ ಮುನ್ನುಡಿ ಬರೆದಂತಿವೆ :
There is pleasure in the pathless woods,
There is rapture on the lovely shore,
There is society, where none intrudes,
By the deep sea and music in it’s roar,
I love not man the less, but Nature more…..

ಹೀಗೆ ಸಾಗುವ ಕ್ರಿಸ್ ಗೆ ಪಯಣದುದ್ದಕ್ಕೂ ಎದುರಾಗುವ ಅನೇಕ ಜನರ ಒಡನಾಟ ಹಾಗೂ ಸನ್ನಿವೇಶಗಳು, ಬದುಕಿನ ವಿವಿಧ ಮುಖ – ಮಜಲುಗಳ ದರ್ಶನವನ್ನೇ ತೆರೆದಿಡುತ್ತವೆ. ಅವನ ಬದುಕಿನ ಕಲ್ಪನೆ – ಗ್ರಹಿಕೆಗಳನ್ನೆಲ್ಲಾ ಬದಲಿಸುತ್ತವೆ. ಅವನಿಗೆ ಅನಿಸಿದ್ದನ್ನೆಲ್ಲಾ ಅವನ ಡೈರಿ ಯಲ್ಲಿ ದಾರ್ಶನಿಕನಂತೆ ಸಂಕ್ಷಿಪ್ತವಾಗಿ ಬರೆಯುತ್ತಾ ಹೋಗುತ್ತಾನೆ.

ಪಯಣದ ಕೊನೆಯ ಹಂತದಲ್ಲಿ ಕ್ರಿಸ್ ಗೆ ಈ ವಿರಕ್ತಿ ಬಗ್ಗೆಯೂ ಒಂದು ವಿಲಕ್ಷಣ ವಿರಕ್ತಿ ಮೂಡಿ, ಮತ್ತೆ ಹಿಂದಿರುಗಿ ಹೋಗಿ ಸಮಾಜಕ್ಕೆ ಏನಾದರೂ ಉಪಯೋಗವಾಗುವ ಹಾಗೆ ಬಾಳಬೇಕು ಎಂದೂ ಅನಿಸತೊಡಗುತ್ತದೆ. ತನ್ನ ತಂದೆ ತಾಯಿಗಳ ಬಗ್ಗೆ ಮನದಲ್ಲೇ ಅಸಹನೆ ಉಳಿಸಿಕೊಂಡಿದ್ದ ಕ್ರಿಸ್ ಗೆ, ಕೊನೆಯಲ್ಲಿ ಅವನಿಗೆ ಎದುರಾಗುವ ಒಬ್ಬ ವಯೋವೃದ್ಧ ರೋಣ್ ಫ್ರಾಂಜ್ ( Ron Franz ) ನ ” When you forgive, you love And when you love, God’s light shines through you” ಎನ್ನುವ ಮಾತುಗಳು ತೀವ್ರವಾಗಿ ಚಿಂತನೆಗೆ ಹಚ್ಚುತ್ತವೆ. ಅವನು ಅವನ ಡೈರಿ ಯಲ್ಲಿ ” Happiness is only real when shared ” ಎಂದು ಬರೆಯುತ್ತಾನೆ.

ಇವನ ತಂದೆ ತಾಯಿ ತಂಗಿ ಇವನಿಗಾಗಿ ಹುಡುಕುತ್ತಲೇ ಇರುತ್ತಾರಾದರೂ, ನಿರಂತರ ಪಯಣದಲ್ಲಿರುವ ಇವನು ಸಿಕ್ಕುವುದೇ ಇಲ್ಲ.

ಹೀಗೆ ಒಬ್ಬ ಹುಚ್ಚು ಹುಡುಗನ ಆಧ್ಯಾತ್ಮಿಕ ಪಯಣದಂತೆ ಕಾಣುವ ಈ ಚಲನ ಚಿತ್ರವನ್ನು, ಜಾನ್ ಕ್ರಾಕೌರ್ ( Jon Krakauer ) ಎಂಬ ಅಮೇರಿಕಾದ ಪರ್ವತಾರೋಹಿ – ಕಾದಂಬರಿಕಾರ, ಕ್ರಿಸ್ ನ ನಿಜ ಜೀವನ ಆಧರಿಸಿ,Into the Wild ಎಂಬ ಕಾದಂಬರಿಯನ್ನು ಬರೆದು 1996 ರಲ್ಲಿ ಪ್ರಕಟಿಸಿದ್ದರು. ಈ ಕಾದಂಬರಿಯನ್ನು ಆಧರಿಸಿ ಕಾವ್ಯದಂತಹಾ ಚಿತ್ರಕತೆ ಬರೆದು, ನಿರ್ದೇಶಕ ಶಾನ್ ಪೆನ್ ಬಹಳ ಪರಿಣಾಮಕಾರಿಯಾಗಿ ತೆರೆಯ ಮೇಲೆ ಮೂಡಿಸಿದ್ದಾರೆ.

ಉದ್ದೇಶ ಪೂರ್ವಕವಾಗಿ ಈ ಕ್ರಿಸ್ ನ ಪಯಣದ ವಿವರಗಳನ್ನೂ, ತಲುಪುವ ಗಮ್ಯವನ್ನು ನಾನು ಬರೆಯುವುದಿಲ್ಲ. ಅದನ್ನು ನಿಮ್ಮ ಅವಲೋಕನಕ್ಕೆ ಬಿಟ್ಟಿದ್ದೇನೆ. ನೋಡಿಲ್ಲದಿದ್ದರೆ ಬಿಡುವಾದಾಗ ನೋಡಿ. Netflix ನಲ್ಲಿ ಲಭ್ಯವಿದೆ.

ಈ ಚಿತ್ರ ಖಂಡಿತಾ ಕೆಲ ಕಾಲವಾದರೂ ಮರೆಯದ ಹಾಡಿನಂತೆ ನಿಮ್ಮನ್ನು ಕಾಡದಿರದು.

‍ಲೇಖಕರು Admin

June 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: