ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿರೂಪಗೊಂಡಿರುವ ವೈದ್ಯಕೀಯ ಪ್ರವೇಶ ಪರೀಕ್ಷೆಗಳು – ಡಾ ಶ್ರೀನಿವಾಸ ಕಕ್ಕಿಲಾಯ

ಡಾ ಶ್ರೀನಿವಾಸ ಕಕ್ಕಿಲಾಯ

ಪ್ರಾಮಾಣಿಕ ವಿದ್ಯಾರ್ಥಿಗಳ ಹೋರಾಟದಿಂದ ಜಾರಿಗೆ ಬಂದ ಪ್ರವೇಶ ಪರೀಕ್ಷೆ ಖಾಸಗಿ ಸಂಸ್ಥೆಗಳ ಸೊತ್ತಾಗಿದೆ
ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಬಯಸುವ ವಿದ್ಯಾರ್ಥಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವುದಕ್ಕಾಗಿ ರಾಷ್ಟ್ರಾದಾದ್ಯಂತ ಏಕರೂಪದ,ಕೇಂದ್ರೀಯ ನಿಯಂತ್ರಣದ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ನಡೆಸಬೇಕೆನ್ನುವ ಭಾರತೀಯ ವೈದ್ಯಕೀಯ ಪರಿಷತ್ತಿನ ಯೋಜನೆಗೆ ಕೊಡಲಿ ಬಿದ್ದಿದೆ. ಆರಂಭದಲ್ಲಿ ಅದಕ್ಕೆ ಬೆಂಬಲ ನೀಡಿದ್ದ ಸರ್ವೋಚ್ಛ ನ್ಯಾಯಾಲಯವು ಈಗ ಮನಸ್ಸು ಬದಲಿಸಿದೆ. ಇದರೊಂದಿಗೆ ಪ್ರವೇಶ ಪರೀಕ್ಷೆಗಳಿಗಾಗಿಯೂ, ಅವುಗಳಲ್ಲಿ ಪಾರದರ್ಶಕತೆಗಾಗಿಯೂ ದಶಕಗಳ ಹಿಂದೆ ವಿದ್ಯಾರ್ಥಿಗಳು ನಡೆಸಿದ ಹೋರಾಟಗಳ ಆಶಯಗಳೆಲ್ಲ ಮಣ್ಣು ಮುಕ್ಕಿವೆ.
ಮೂವತ್ತು ವರ್ಷಗಳ ಹಿಂದಿನ ಮಾತು. ನಾನು ಫ್ರೌಢ ಶಿಕ್ಷಣ ಮುಗಿಸಿ ಪದವಿಪೂರ್ವ ಶಿಕ್ಷಣ ನಡೆಸುತ್ತಿದ್ದ ಕಾಲವದು. ಆಗ ವೃತ್ತಿ ಶಿಕ್ಷಣಕ್ಕೆ ಪ್ರವೇಶ ಪರೀಕ್ಷೆಗಳಿರಲಿಲ್ಲ. ಈಗಿರುವಷ್ಟು ವೃತ್ತಿಶಿಕ್ಷಣ ಸಂಸ್ಥೆಗಳೂ ಇರಲಿಲ್ಲ. ರಾಜ್ಯದಲ್ಲಿ ಇದ್ದ ನಾಲ್ಕು ಸರಕಾರಿ ಹಾಗೂ ಆರೇಳು ಖಾಸಗಿ ವೈದ್ಯಕೀಯ ಕಾಲೇಜುಗಳು ಆಯಾ ಊರಿನ ವಿಶ್ವವಿದ್ಯಾಲಯಗಳಡಿಯಲ್ಲಿದ್ದು, ವೈದ್ಯಕೀಯ ಶಿಕ್ಷಣ ಇಲಾಖೆಯ ನಿಯಂತ್ರಣಕ್ಕೊಳಪಟ್ಟಿದ್ದವು. ಎಲ್ಲ ಅಧಿಕಾರವೂ ಈ ಇಲಾಖೆಯ ನಿರ್ದೇಶಕರಲ್ಲೇ ಇದ್ದು, ಪದವಿಪೂರ್ವ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದಲ್ಲೇ ಈ ಕಾಲೇಜುಗಳಿಗೆ ಪ್ರವೇಶ ನೀಡಲಾಗುತ್ತಿತ್ತು. ಸಹಜವಾಗಿಯೇ ಈ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆ ಬಲವಾದ ಸಂಶಯಗಳು ಎಲ್ಲರಲ್ಲೂ ಇದ್ದವು. ಜೊತೆಗೆ ಪದವಿ ಪೂರ್ವ ಪರೀಕ್ಷೆಗಳ ಅಂಕಗಳೇ ನಿರ್ಣಾಯಕವಾಗಿದ್ದರಿಂದ ಆಗಿನ ಕೆಲ ವರ್ಷಗಳಲ್ಲಿ ಆ ಪರೀಕ್ಷೆಗಳಲ್ಲೂ ಮೋಸಗಳು ಹೆಚ್ಚತೊಡಗಿದ್ದವು. ಸಾಮೂಹಿಕ ನಕಲು, ಮೌಲ್ಯಮಾಪನದಲ್ಲಿ ವಶೀಲಿ, ಅಂಕಪಟ್ಟಿಯಲ್ಲಿ ತಿದ್ದುಪಡಿ, ಕೊನೆಗೆ ವೈದ್ಯಕೀಯ ಶಿಕ್ಷಣ ಇಲಾಖೆಯೊಳಗೂ ಪಿತೂರಿ – ಇವೆಲ್ಲವುಗಳಿಂದಾಗಿ ಪ್ರತಿಭಾವಂತರಾದ, ಪ್ರಾಮಾಣಿಕರಾದ ವಿದ್ಯಾರ್ಥಿಗಳಿಗೆ ದಿಕ್ಕಿಲ್ಲದಂತಾಗಿತ್ತು. ಕೆರಳಿದ ವಿದ್ಯಾರ್ಥಿಗಳು ರಾಜ್ಯಾದಾದ್ಯಂತ ಬೀದಿಗಿಳಿದು ಹೋರಾಡಿದ ಫಲವಾಗಿ 1984ರಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಆರಂಭಿಸಲಾಯಿತು.
ಆಗ ಸ್ನಾತಕೋತ್ತರ ಪ್ರವೇಶವು ಕೂಡಾ ಅಂತಿಮ ಎಂಬಿಬಿಎಸ್ ನಲ್ಲಿ ಗಳಿಸಿದ ಅಂಕಗಳ ಆಧಾರದಲ್ಲೇ ನಡೆಯುತ್ತಿತ್ತು. ಖಾಸಗಿ ಕಾಲೇಜುಗಳಲ್ಲಿ ಎಂಬಿಬಿಎಸ್ ಕಲಿತ ವಿದ್ಯಾರ್ಥಿಗಳು ಸುಲಭದಲ್ಲಿ ಹೆಚ್ಚು ಅಂಕಗಳನ್ನು ಗಳಿಸುತ್ತಿದ್ದಲ್ಲಿ, ಹೆಚ್ಚು ಶಿಸ್ತಿನ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಕಡಿಮೆ ಅಂಕಗಳನ್ನು ಗಳಿಸಿ ಸ್ನಾತಕೋತ್ತರ ಪ್ರವೇಶದಿಂದ ವಂಚಿತರಾಗುತ್ತಿದ್ದುದು ಸಾಮಾನ್ಯವಾಗಿತ್ತು. ಆ ವಿದ್ಯಾರ್ಥಿಗಳ ನಿರಂತರ ಹೋರಾಟದಿಂದ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯೂ ಆರಂಭವಾಯಿತು. ಮುಂದೆ ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆಗಳೂ ಆರಂಭಗೊಂಡವು.
ಕಿಟಿಕಿಯಲ್ಲಿ ಹೊರಕಳಿಸಿದ ಪಿಶಾಚಿಯು ಗವಾಕ್ಷಿಯಲ್ಲಿ ನುಸುಳುವುದಕ್ಕೆ ಹೆಚ್ಚು ಸಮಯ ತಗಲಲಿಲ್ಲ. ಹಣದ ಬಲದಿಂದಲೋ,ವಶೀಲಿಯಿಂದಲೋ ಅಂಕಪಟ್ಟಿಗಳನ್ನು ಬದಲಿಸುತ್ತಿದ್ದವರು ಪ್ರವೇಶ ಪರೀಕ್ಷೆಯನ್ನು ಬೇಧಿಸುವ ದಾರಿಗಳನ್ನೂ ಕಂಡುಕೊಂಡರು. ಮೌಲ್ಯಮಾಪನವನ್ನು ಗಣಕೀಕರಿಸುವವರು, ಮೇಲಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರುಗಳವರೆಗೆ ಹಣದ ಕೈಗಳು ಚಾಚಿಕೊಂಡು ಉನ್ನತ ಶ್ರೇಣಿಗಳೆಲ್ಲ ಬಿಕರಿಗೆ ಬಿದ್ದವು. ಪ್ರಶ್ನೆಪತ್ರಿಕೆಗಳು ಮಾತ್ರವಲ್ಲ, ಅತ್ಯಂತ ಗೌಪ್ಯವಾದ ಉತ್ತರಪಟ್ಟಿಗಳೂ ಸೋರತೊಡಗಿದವು. ಹೀಗೆ ಅಡ್ಡದಾರಿಯಿಂದ ಬೇಧಿಸಿದವರೇ ಸೀಟುಗಳನ್ನೆಲ್ಲ ಬಾಚಿಕೊಳ್ಳತೊಡಗಿದಾಗ ಪ್ರತಿಭಾವಂತ ಪ್ರಾಮಾಣಿಕರು ಮತ್ತೆ ಬೀದಿಗಿಳಿದರು. ಪ್ರವೇಶ ಪರೀಕ್ಷೆಗಳನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸುವುದಕ್ಕಾಗಿ ಸರಿಯುತ್ತರಗಳ ಪಟ್ಟಿಯನ್ನು ಬಹಿರಂಗಗೊಳಿಸಬೇಕು,ಉತ್ತರ ಪತ್ರಿಕೆಗಳನ್ನು ಪರೀಕ್ಷಿಸಗೊಡಬೇಕು, ಎಲ್ಲಾ ಶ್ರೇಣಿಗಳವರ ಅಂಕಗಳನ್ನು ಹೊರಗೆಡಹಬೇಕು ಮುಂತಾದ ಬೇಡಿಕೆಗಳನ್ನಿಟ್ಟು ಅಂದಿನ ವಿದ್ಯಾರ್ಥಿಗಳು ಹೋರಾಡಿದ್ದರಿಂದಲೇ ಪ್ರವೇಶ ಪರೀಕ್ಷೆಗಳು ಇಂದಿನ ಈ ರೂಪವನ್ನು ಪಡೆದುಕೊಳ್ಳಲು ಸಾಧ್ಯವಾಯಿತೆನ್ನುವುದನ್ನು ಮರೆಯಬಾರದು.

ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರತಿಭೆಗೆ ಬಾಗಿಲು ಮುಚ್ಚಿ ಹಣದ ಚೀಲಗಳಿಗೆ ದಾರಿ ತೆರೆದಿಡುವುದು ಮೊದಲಿನಿಂದಲೂ ಇತ್ತು. ಖಾಸಗಿ ಕಾಲೇಜುಗಳು ಒಂದಿಲ್ಲೊಂದು ಕಾರಣ ಹೇಳಿ ಪ್ರವೇಶ ಪರೀಕ್ಷೆಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನಿರಾಕರಿಸುವ ಕ್ರಮವು ಅಂದಿನಿಂದ ಇಂದಿನವರೆಗೆ ನಡೆದೇ ಇದೆ. ಖಾಸಗಿ ಕಾಲೇಜುಗಳಲ್ಲಿ ಸರಕಾರಿ ಸೀಟುಗಳ ಸಂಖ್ಯೆಯ ಬಗ್ಗೆ ಹಾಗೂ ಆ ಸೀಟುಗಳಿಗೆ ವಿಧಿಸುವ ಶುಲ್ಕದ ಬಗ್ಗೆ ಜಗ್ಗಾಟವೂ ಪ್ರತಿ ವರ್ಷದ ಪರಂಪರೆಯಾಗಿಬಿಟ್ಟಿದೆ. ಎಂಭತ್ತು-ತೊಂಭತ್ತರ ದಶಕಗಳಲ್ಲಿ ವಿದ್ಯಾರ್ಥಿಗಳು ನಡೆಸಿದ ಹೋರಾಟಗಳಿಂದಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆದವರಿಗೆ ಸರಕಾರಿ ಕಾಲೇಜುಗಳಲ್ಲಿರುವಂತೆ ಏಕರೂಪದ ಶುಲ್ಕ ನೀಡುವ ವ್ಯವಸ್ಥೆಯು ಜಾರಿಯಾಗಿತ್ತು. ಕೆಲವೇ ವರ್ಷಗಳಲ್ಲಿ ಇದು ಬದಲಾಗಿ,ಖಾಸಗಿ ಕಾಲೇಜುಗಳ ಶುಲ್ಕವು ಏರತೊಡಗಿತು. ಈಗ ಖಾಸಗಿ ಕಾಲೇಜುಗಳಲ್ಲಿ ಸರಕಾರಿ ಸೀಟುಗಳ ಪ್ರಮಾಣವು ಕಿರಿದಾಗುತ್ತಿದೆ,ಶುಲ್ಕವು ಇನ್ನಷ್ಟು ಏರುತ್ತಿದೆ. ಸರಕಾರಿ ಲೆಕ್ಕದ ಸೀಟುಗಳನ್ನು ಕೊನೆ ಘಳಿಗೆಯವರೆಗೆ ಹಿಡಿದಿಟ್ಟು ನಂತರ ಹಣವಿದ್ದವರಿಗೆ ವರ್ಗಾಯಿಸುವ ಮೋಸಗಳೂ ನಡೆಯುತ್ತಲಿವೆ. ಸ್ನಾತಕೋತ್ತರ ವ್ಯಾಸಂಗದಲ್ಲಿ ಕೋಟಿಗಟ್ಟಲೆ ಮೌಲ್ಯದ ಸೀಟುಗಳನ್ನು ತಾವೇ ಉಳಿಸಿಕೊಳ್ಳುವ ಖಾಸಗಿ ಕಾಲೇಜುಗಳು ಹೆಚ್ಚು ಬೇಡಿಕೆಯಿಲ್ಲದ ವಿಭಾಗಗಳ ಸೀಟುಗಳನ್ನು ಸರಕಾರಕ್ಕೆ ಬಿಟ್ಟುಕೊಟ್ಟು ಲೆಕ್ಕ ತುಂಬಿಸುವ ನಾಟಕವು ಕೂಡ ಅಂದಿನಿಂದಲೇ ನಡೆಯುತ್ತಿದೆ. ಯಾವುದೇ ಪಕ್ಷವು ಅಧಿಕಾರದಲ್ಲಿದ್ದರೂ ಸ್ವತಃ ಕಾಲೇಜುಗಳನ್ನು ನಡೆಸುತ್ತಿರುವವರೇ ಮಂತ್ರಿಗಳಾಗಿ ಕಣ್ಣು ಮುಚ್ಚಿಕೊಳ್ಳುವುದು ನಿಯಮವೇ ಆಗಿಬಿಟ್ಟಿದೆ.
ತೊಂಭತ್ತರ ದಶಕದಿಂದ ಖಾಸಗಿ ಕಾಲೇಜುಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವುದರೊಂದಿಗೆ ಅವುಗಳೊಳಗೆ ಸ್ಪರ್ಧೆಯೂ ಹೆಚ್ಚಿತು. ಕಾಲೇಜು ಭರ್ತಿ ಮಾಡಿಕೊಳ್ಳುವುದಕ್ಕೆ ಎಂಥವರನ್ನಾದರೂ ಸೇರಿಸಿಕೊಳ್ಳುವ ಪ್ರವೃತ್ತಿ ಸಾಮಾನ್ಯವಾಯಿತು. ವೈದ್ಯಕೀಯ ಪ್ರವೇಶಕ್ಕೆ ವಿದ್ಯಾರ್ಥಿಯ ಆಸಕ್ತಿ-ಪ್ರತಿಭೆಗಳಿಗಿಂತ ಹೆತ್ತವರ ಶ್ರೀಮಂತಿಕೆಯೊಂದೇ ಅರ್ಹತೆಯಾಯಿತು. ಹಣ ಕೊಟ್ಟರೆ ಎಂಥವರಿಗೂ ಪ್ರವೇಶವೊದಗಿಸುವ ದಲ್ಲಾಳಿ ದಂಧೆ ಆರಂಭವಾಯಿತು, ಇದರ ವಿರುದ್ಧವಾಗಿ ಮಾಧ್ಯಮಗಳಲ್ಲಿ ಗದ್ದಲವಾಗಿ, ಜನಾಭಿಪ್ರಾಯವು ಬಲಗೊಂಡಾಗ ಸರಕಾರಗಳೂ, ನ್ಯಾಯಾಲಯಗಳೂ ಎಚ್ಚೆತ್ತುಕೊಂಡು ವೈದ್ಯಕೀಯ ಪ್ರವೇಶಕ್ಕೆ ಪ್ರತಿಭೆಯೊಂದೇ ಮಾನದಂಡವಾಗಿರಬೇಕೆನ್ನುವ ನಿಯಮಗಳು ಬಂದವು.
ಆದರೆ ಹಣದ ಸದ್ದಿನಲ್ಲಿ ಇಂತಹಾ ನಿಯಮಗಳು ನಿಲ್ಲುತ್ತವೆಯೇ? ಖಾಸಗಿ ಕಾಲೇಜುಗಳು ಪ್ರವೇಶ ಪರೀಕ್ಷೆಗಳನ್ನೇ ನಿಯಂತ್ರಿಸಹೊರಟವು. ಸ್ವತಂತ್ರ ಸಂಸ್ಥೆಗಳು ನಡೆಸುವ ಪಾರದರ್ಶಕ ಪರೀಕ್ಷೆಗಳಲ್ಲಿ ಹಸ್ತಕ್ಷೇಪಕ್ಕೆ ಅವಕಾಶಗಳಿಲ್ಲದಿರುವುದರಿಂದ ಖಾಸಗಿ ಕಾಲೇಜುಗಳು ಒಗ್ಗೂಡಿ ತಮ್ಮದೇ ಆದ ಪ್ರವೇಶ ಪರೀಕ್ಷೆಗಳನ್ನು ಆರಂಭಿಸಿಬಿಟ್ಟವು. ಮೊದಲು ಅಂತಹಾ ಒಂದು ಪರೀಕ್ಷೆಯಷ್ಟೇ ಇದ್ದರೆ ಈಗ ಪ್ರತೀ ಕಾಲೇಜಿಗೂ ತನ್ನದೇ ಆದ ಪರೀಕ್ಷೆಯೆಂಬ ಸ್ಥಿತಿಯುಂಟಾಗಿದೆ.
ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದಕ್ಕೆ ಸ್ವತಂತ್ರವಾದ ಪ್ರವೇಶ ಪರೀಕ್ಷೆಗಳೊಂದೇ ಮಾನದಂಡವಾಗಿರಬೇಕೆಂಬ ಭಾರತೀಯ ವೈದ್ಯಕೀಯ ಪರಿಷತ್ತಿನ ಉಪಕ್ರಮಕ್ಕೆ ಈಗ ಸರ್ವೋಚ್ಛ ನ್ಯಾಯಾಲಯವೇ ಕೊಡಲಿಯೇಟು ನೀಡಿರುವುದರಿಂದ ಖಾಸಗಿ ಕಾಲೇಜುಗಳ ಹಾದಿಯು ನಿರಾಳವಾಗಿದೆ. ವಿವಿಧ ಮೈತ್ರಿ ಕೂಟಗಳು, ಜಾತಿ-ಧರ್ಮ-ಭಾಷೆಗಳ ಕೂಟಗಳು, ಪರಿಗಣಿತ ವಿಶ್ವವಿದ್ಯಾಲಯಗಳು ಇವೇ ಮುಂತಾದ ಹೆಸರುಗಳಲ್ಲಿ ಹಲವಾರು ಪ್ರವೇಶ ಪರೀಕ್ಷೆಗಳು ಈಗಾಗಲೇ ನಡೆಯುತ್ತಿದ್ದು, ಮುಂದೆ ಪ್ರತೀ ಕಾಲೇಜು ತನ್ನದೇ ಆದ ಪರೀಕ್ಷೆಗಳನ್ನು ನಡೆಸಬಹುದು. ಖಾಸಗಿ ಕಾಲೇಜುಗಳಿಗೆ ಈ ಪ್ರವೇಶ ಪರೀಕ್ಷೆಗಳಲ್ಲೂ ಸಾಕಷ್ಟು ಸಂಪಾದನೆಯಾಗುತ್ತದೆ. ಒಬ್ಬನಿಗೆ 1000 ರೂಪಾಯಿಯಂತೆ 5000 ವಿದ್ಯಾರ್ಥಿಗಳು ಪರೀಕ್ಷೆ ಬರೆದರೂ 50 ಲಕ್ಷ ರೂಪಾಯಿ ಗಿಟ್ಟುತ್ತದೆ;ಇನ್ನು ಹೆಚ್ಚಿನ ದರದಲ್ಲಿ ಸಾವಿರಗಟ್ಟಲೆ ವಿದ್ಯಾರ್ಥಿಗಳಿದ್ದರೆ ಸಂಪಾದನೆಯೆಷ್ಟೆಂದು ಲೆಕ್ಕ ಹಾಕಬಹುದು. ಈ ಪರೀಕ್ಷೆಗಳು ಸಂಪೂರ್ಣವಾಗಿ ಆಯಾ ಕಾಲೇಜುಗಳ ನಿಯಂತ್ರಣದಲ್ಲೇ ಇರುವುದರಿಂದ ಅವುಗಳ ಮೌಲ್ಯಮಾಪನದಲ್ಲಿ ಮೋಸವಾಗದೆನ್ನುವ ಖಾತರಿಯಿಲ್ಲ,ಮೊದಲೇ ಹಣ ಕೊಟ್ಟವರಿಗೆ ಉನ್ನತ ಶ್ರೇಣಿ ದೊರೆಯುವ ಸಾಧ್ಯತೆಗಳೂ ಇಲ್ಲದಿಲ್ಲ. ಎಂಬಿಬಿಎಸ್ ಪದವಿಗೆ 50-70 ಲಕ್ಷದಿಂದ ಹಿಡಿದು ನಂತರ ಸ್ನಾತಕೋತ್ತರ ಹಾಗೂ ಅತಿ ವಿಶೇಷ ವ್ಯಾಸಂಗಕ್ಕೆ 1-5 ಕೋಟಿ ದರವಿದೆ (ವಾರ್ಷಿಕ ಶುಲ್ಕ ಪ್ರತ್ಯೇಕ) ಎಂದು ಬಲ್ಲವರು ಹೇಳುತ್ತಾರೆ. ಇಂತಹ ಪ್ರವೇಶಾತಿಗಳನ್ನಾಗಲೀ, ಆ ಸಂಸ್ಥೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನಾಗಲೀ, ಅಂತಿಮ ಪರೀಕ್ಷೆಗಳ ಸಾಚಾತನವನ್ನಾಗಲೀ ನಿಯಂತ್ರಿಸುವ ಯಾವ ಯೋಚನೆಯೂ ಸರಕಾರಗಳ ಬಳಿ ಇದ್ದಂತಿಲ್ಲ. ಪೋಷಕರಿಗೂ ತಮ್ಮ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆಯುವುದಕ್ಕಿಂತಲೂ ಬೇಗನೇ ಪಡೆಯುವುದೇ ಮುಖ್ಯವಾಗಿರುವಂತೆ ತೋರುತ್ತದೆ.
ಒಟ್ಟಿನಲ್ಲಿ ಅಂದಿನ ವಿದ್ಯಾರ್ಥಿಗಳ ಹೋರಾಟಗಳಿಂದ ಜಾರಿಗೆ ಬಂದ ಪ್ರವೇಶ ಪರೀಕ್ಷೆಗಳನ್ನೂ, ಏಕರೂಪದ ಶುಲ್ಕ ವ್ಯವಸ್ಥೆಗಳನ್ನೂ ಕಳೆದುಕೊಳ್ಳುವ ಸ್ಥಿತಿ ಬಂದುಬಿಟ್ಟಿದೆ. ಅಂದಿನ ಹೋರಾಟಗಳಲ್ಲಿ ಭಾಗಿಗಳಾಗಿದ್ದವರ ಮಕ್ಕಳು ಈಗ ವೃತ್ತಿಪರ ಶಿಕ್ಷಣದ ಹೊಸ್ತಿಲಲ್ಲಿದ್ದು,ಹೆತ್ತವರಲ್ಲೂ, ವಿದ್ಯಾರ್ಥಿಗಳಲ್ಲೂ ಅಂದಿನ ಕೆಚ್ಚು ಮಾಯವಾಗಿದೆ, ಸಿಕ್ಕಿದ್ದು ಸಾಕೆಂದು ಕೈಮುಗಿದು ನಿಲ್ಲುವ ದೈನ್ಯತೆಗೆ ಇಂದಿನ ಪೀಳಿಗೆಯು ಶರಣಾದಂತಿದೆ. ವೃತ್ತಿಶಿಕ್ಷಣವನ್ನು ನಿಯಂತ್ರಿಸುವ ಪಗಡೆಯಾಟದಲ್ಲಿ ವೃತ್ತಿ ಘನತೆಯೇ ಮಣ್ಣುಪಾಲಾಗಿದೆ.
 
 

‍ಲೇಖಕರು avadhi

29 August, 2013

2 Comments

  1. ಪದ್ಮನಾಭ

    ಈಗ ಖಾಸಗಿ ಕಾಲೇಜುಗಳಲ್ಲಿ ದುಡ್ಡಿದ್ದ ವಿದ್ಯಾರ್ಥಿಗಳು ಮತ್ತು ಸರಕಾರಿ ಸಂಸ್ಥೆಗಳಲ್ಲಿ ದುಡ್ಡು ಕೊಟ್ಟು ಬಂದ ಅಧ್ಯಾಪಕರು (ಕೆಲ ಹಳೇ ತಲೆಗಳನ್ನು ಬಿಟ್ರೆ ).ಟೋಟಲ್ ಮಿಸ್ ಮ್ಯಾಚ್ .
    ಕ್ರಿಮಿನಲ್ ಗಳು ವಿಧಾನ ಸಭೆ ,ಲೋಕ ಸಭೆ ಸದಸ್ಯ ರಾಗುವುದನ್ನು ಅನರ್ಹ ಗೊಳಿಸಿದ ತೀರ್ಪನ್ನು ತರಾತುರಿಯಲ್ಲಿ ಸರಿಮಾಡಿಕೊಂಡ ಸರಕಾರ ಈ ವಿಷಯದಲ್ಲಿ ಮರು ಮನವಿ ಸಲ್ಲಿಸಲು ಮೀನ ಮೇಷ ನೋಡುತ್ತಿದೆ . ಪ್ರತಿಭಾವಂತ ಬಡವರಿಗೆ ದೇವರೇ ಗತಿ

  2. Kiran

    Very balance writing. Equally appropriate. Nothing appears to “save the doctor” in today’s scenario. Hon Supreme Court CJ has given the verdict on the last day of his office, as his last verdict, just hours before his retirement, in favour of the Pvt Medical Colleges. Most of these Pvt Medical colleges are owned or controlled by politicians. Caste-based reservation policy was already eating away the number of available chances. (It is not uncommon to see a “reservation candidate” moving around the medical college campus in his new imported SUV, but he gets full fee concession). Of course, the politicians can always fly abroad to get their ailments treated by the same Indian doctors who had to get drained abroad due to policies of same politicians. Rest of the lesser mortals like us can pay for expensive medical treatments from our deepest bellies to the doctors who bought seats for highest bidding. The only constant factor is the utter despair that bothers every concerned individual, with equally debilitating helplessness.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading