ವಿಮರ್ಶೆಯಲ್ಲದ ”ರಸಗ್ರಾಹೀ”ತಿಳಿವು
ಡಿ ಎಸ್ ರಾಮಸ್ವಾಮಿ
ಸೃಜನಶೀಲ ಪುಸ್ತಕಗಳು ಮರು ಮುದ್ರಣವಾಗುವುದು ಸಹಜ ಮತ್ತು ಸಾಮಾನ್ಯ. ಆದರೆ ಸೃಜನೇತರ ವಿಭಾಗವೆಂದೇ ಗುರುತಿಸಲ್ಪಟ್ಟಿರುವ ಸಾಹಿತ್ಯ ವಿಮರ್ಶೆಯ ಪುಸ್ತಕವೊಂದು ಮರು ಮುದ್ರಣವಾಗುತ್ತಿದೆಯೆಂದರೆ ಅದು ಆ ಪುಸ್ತಕದ ಮೂಲಕ ಆ ಲೇಖಕರು ಕೊಡಮಾಡಿದ್ದ ಆಲೋಚನಾ ಕ್ರಮ ಈವತ್ತಿಗೂ ಪ್ರಸ್ತುತವಾಗಿದೆಯೆಂದೇ ಅರ್ಥ. ಅಂಥ ಗೌರವ ಎಸ್ ಆರ್ ವಿಜಯಶಂಕರ ಅವರ ಮನೋಗತ ಮತ್ತು ಒಳದನಿ ವಿಮರ್ಶಾ ಸಂಕಲನಗಳಿಗೆ ದಕ್ಕಿದೆ. ಹೊಸ ಪುಸ್ತಕಗಳ ತಮ್ಮ ಓದಿನ ಗ್ರಹಿಕೆಯನ್ನು ಅಭಿಜಾತ ಪರಂಪರೆಯ ದೀರ್ಘ ವಿಸ್ತಾರದ ಮೂಲಕವೇ ಅಳೆಯುವ ವಿಜಯಶಂಕರ್ ಯಾವತ್ತಿಗೂ ಅನ್ನಿಸಿದ್ದನ್ನು ಹೇಳಲು ಹಿಂಜರಿದವರಲ್ಲ. ಅಭಿಜಾತ ಕೃತಿಗಳಿಂದ ಪಕ್ವಗೊಂಡ ಮನಸ್ಸು ಅವರದು. ಹಳಬರ ಹೊಸ ಕೃತಿಗಳನ್ನೂ, ಹೊಸಬರ ತೊದಲುಗಳನ್ನೂ ಒಂದೇ ಮುತುವರ್ಜಿಯಿಂದ ಓದಿ ಸ್ಪಂದಿಸುವ ವಿಜಯಶಂಕರ್ ಅವರ ಕಾಳಜಿ ಎಲ್ಲ ಸಾಹಿತ್ಯಕ ಕೃತಿಗಳಲ್ಲೂ ಇರಬಹುದಾದ ಅಭಿಜಾತ ಪರಂಪರೆಯ ಸೂಕ್ಷ್ಮವನ್ನು ಗ್ರಹಿಸುವುದು ಮತ್ತು ಸಾಹಿತ್ಯದಲ್ಲಿ ಸಾತತ್ಯವನ್ನು ಎತ್ತಿಹಿಡಿಯುವುದೇ ಆಗಿದೆ. ನಿಂತ ನೀರಂತಾಗಿ ಪಾಚಿಗಟ್ಟಿದ್ದ ಮತ್ತು ಕೇವಲ ‘ಅಗೆತ’ವೇ ಮುಖ್ಯವಾದಂತಿದ್ದ ಸಾಹಿತ್ಯ ವಿಮರ್ಶೆಗೆ ಧೋರಣೆಯಿರದ ಖಚಿತತೆಯನ್ನು, ಬರಹವೊಂದನ್ನು ಹೀಗೂ ಓದಬಹುದೆಂಬ ಆರೋಗ್ಯಕಾರೀ ಗಮನವನ್ನೂ ಅವರ ಲೇಖನಗಳಲ್ಲಿ ಕಾಣಬಹುದು.
‘ತಿರುಮಲೇಶರ ಕಾವ್ಯ’ ಶೀರ್ಶಿಕೆಯ ಲೇಖನವೊಂದೇ ಮನೋಗತ ಪುಸ್ತಕದಲ್ಲಿ ಅಚ್ಚಾಗಿರುವ ದೀರ್ಘ ಲೇಖನ. ಉಳಿದೆಲ್ಲ ಲೇಖನಗಳು ಆಕಾರದಲ್ಲಿ ಕಿರಿದಾಗಿದ್ದರೂ ಅವುಗಳ ಮೂಲಕ ಲೇಖಕರು ನಿರ್ವಚಿಸಿರುವ ಓದಿನ ಕ್ರಮ ಮತ್ತು ಅವರ ನಿರ್ವಚನೆಗೆ ಸಾಧುವಾದ ಪುರಾವೆಗಳನ್ನು ಒದಗಿಸಿರುವ ಕ್ರಮ ಹೊಸ ತಲೆಮಾರಿನ ವಿಮರ್ಶಕರು ಖಂಡಿತವಾಗಿ ಗಮನಿಸಲೇಬೇಕಾದವು. ತಿರುಮಲೇಶ್ ಇಷ್ಟು ದಿನಗಳಿಂದ ಬರೆಯುತ್ತಿದ್ದರೂ ಪ್ರಾಯಶಃ ವಿಜಯಶಂಕರರಷ್ಟು ದೀರ್ಘವಾಗಿ ಮತ್ತು ಸಂಯಮದಿಂದ ತಿರುಮಲೇಶ್ ಕಾವ್ಯವನ್ನು ಅರ್ಥೈಸಿಕೊಟ್ಟವರಿಲ್ಲ. ಈ ಲೇಖನ ಅನಂತಮೂರ್ತಿಯವರು ನಡೆಸುತ್ತಿದ್ದ ಪತ್ರಿಕೆಯೊಂದಕ್ಕೆ ಅವರೇ ಕೇಳಿ ಬರೆಸಿದ್ದ ಲೇಖನವೆಂದು ಅನಂತಮೂರ್ತಿಯವರೇ ಹೇಳಿದ್ದ ನೆನಪು. ಸಾಹಿತ್ಯದಲ್ಲಿ ಒಳದಾರಿಗಳು, ಕನ್ನಡದ ಸಾಹಿತ್ಯದಲ್ಲಿ ಹೊಸ ಧ್ವನಿಗಳು, ಕನ್ನಡದಲ್ಲಿ ದಲಿತ ಸಾಹಿತ್ಯ ಈ ಮೂರೂ ವಿಮರ್ಶೆಯ ಮಾನದಂಡದಲ್ಲಿದ್ದರೂ ಸಬಲವಾದ ಮತ್ತು ಸಫಲವಾದ ಬಿಡಿ ಲೇಖನಗಳು ಅಲ್ಲಲ್ಲ ಪ್ರಬಂಧಗಳೆಂದೇ ಕರೆಯಬೇಕು. ಏಕೆಂದರೆ ಸುಮಾರು ಇಪ್ಪತ್ತೇಳು ವರ್ಷಗಳ ಹಿಂದೆ ಇದ್ದ ಅವೇ ಸವಾಲುಗಳು ಇಂದೂ ಜೀವಂತವಾಗಿ ನಮ್ಮನ್ನು ಕಾಡುತ್ತಿರುವುದು ಮತ್ತು ಈವತ್ತಿಗೂ ವಿಜಯಶಂಕರರ ನಿಲುವುಗಳೇ ಸರಿ ಎನ್ನಿಸುವುದು ಈ ಪುಸ್ತಕದ ವಿಶೇಷ. ಇನ್ನು ಅನಂತಮೂರ್ತಿಯವರ ಮೌನಿಯನ್ನು ಬಗೆದ ಬಗೆಯಲ್ಲೇ ಭೈರಪ್ಪನವರ ಪರ್ವವನ್ನೂ ಲೇಖಕರು ಜರಡಿಹಿಡಿದಿದ್ದಾರೆ. ಒಬ್ಬ ಸ್ವೋಪಜ್ಞ ಚಿಂತಕನಿಗೆ ಕಣ್ಣಮುಂದಿರುವ ವಿಷಯಕ್ಕಿಂತಲೂ ಅದರ ಹಿಂದಿನ ವಿಚಾರಗಳೇ ಕಣ್ಣಿಗೆ ರಾಚುತ್ತವೆ ಎನ್ನುವ ಸತ್ಯ ಅವರ ಈ ಎರಡೂ ಲೇಖನಗಳಲ್ಲಿ ಕಾಣಬಹುದು. ಸಿದ್ಧಲಿಂಗಯ್ಯನವರಿಗಿಂತ ದೇವನೂರರನ್ನೇ ಮೆಚ್ಚುವ ವಿಜಯಶಂಕರ್ ದೇವನೂರರ ಕತೆಗಳಲ್ಲಿ ದಲಿತ ಪ್ರಜ್ಞೆ ಹೆಸರಿನ ಲೇಖನದಲ್ಲಿ ವಿಸ್ತೃತವಾಗಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ ಕೂಡ. ರಾಮಮನೋಹರ ಲೋಹಿಯಾ ವಿಜಯಶಂಕರರ ವಿಚಾರಧಾರೆಗೆ ಕಾರಣರಾದವರು. ಆ ಕಾರಣಕ್ಕೇ ಅವರದ್ದೊಂದು ಲೇಖನದ ಅನುವಾದ ಕೂಡ ಇಲ್ಲಿದೆ.
ಹೀಗೆ ವಿಜಯಶಂಕರ ವಿಮರ್ಶೆಯಂಥ ಕಠಿಣ ಕೆಲಸದಲ್ಲೂ ಸೃಜನಶೀಲತೆಯನ್ನು ಮೆರೆದವರು. ಕೃತಿಯ ಸಂದರ್ಭ ಮತ್ತು ಆಶಯಗಳಿಗಷ್ಟೇ ಅವರ ಗಮನ ನಿಲ್ಲದೇ ಆ ಕೃತಿಯ ಓದಿನಿಂದಾಗಿ ಅವರೊಳಗೆ ಮೂಡಿದ ಬೆರಗು ಮತ್ತು ತಿಳುವಳಿಕೆಯನ್ನೂ ಸಂಕೋಚವಿಲ್ಲದೇ ಹಂಚಿಕೊಳ್ಳುವಂತೆಯೇ ಅಭಿಜಾತ ಕೃತಿಗಳ ಓದಿನ ಮೂಲಕ ಸದ್ಯದ ಕೃತಿಯನ್ನು ಬೆಣ್ಣೆಯಿಂದ ಕೂದಲು ತೆಗೆದಷ್ಟೇ ಸೂಕ್ಷ್ಮದಲ್ಲಿ ಹಿಡಿದೆತ್ತಬಲ್ಲರು. ಇದಕ್ಕೆ ಉದಾಹರಣೆಯಾಗಿ ಪರ್ವವನ್ನೂ, ಮೌನಿಯನ್ನೂ ಹೆಸರಿಸಬಹುದು.
ಕಾಲಗರ್ಭದಲ್ಲಿ ಹುದುಗಿಹೋಗಬಹುದಾಗಿದ್ದ ಸರ್ವಕಾಲೀಕ ಗುಣವುಳ್ಳ ಪುಸ್ತಕವೊಂದನ್ನು ಮರು ಪ್ರಕಾಶಿಸುವ ಮೂಲಕ ಪ್ರಕಾಶಕರು ಎಂಫಿಲ್, ಪಿಎಚ್ಡಿ ಇತ್ಯಾದಿ ಓದಿಗೆ ತಯಾರಾಗುವವರಿಗೆ ಸಿದ್ಧ ಮಾದರಿಯೊಂದನ್ನು ತೆರೆದು ತೋರಿರುವಂತೆಯೇ ವಿಮರ್ಶಕನಿಗಿರಲೇಬೇಕಾದ ಓದಿನ ವ್ಯಾಪ್ತಿಯ ಪರಿಚಯವನ್ನೂ ಮಾಡಿಕೊಟ್ಟಿದ್ದಾರಾದರೂ ಅನುಸೂಚಿ ಇಲ್ಲದ, ಪರಿವಿಡಿ ಇಲ್ಲದ ಪುಸ್ತಕದ ಅಂದ ಕೆಡುತ್ತದೆಂದು ಏಕೆ ಅರ್ಥ ಮಾಡಿಕೊಳ್ಳಲಿಲ್ಲವೋ ಗೊತ್ತಾಗುತ್ತಿಲ್ಲ
ಇನ್ನು ‘ಒಳದನಿ’ ಎಸ್ ಆರ್ ವಿಜಯಶಂಕರ ಅವರು 2004ರಲ್ಲಿ ಪ್ರಕಟಿಸಿದ್ದ ಅದೇ ಹೆಸರಿನ ವಿಮರ್ಶಾ ಸಂಕಲನದ ಮರು ಮುದ್ರಣ. ಕಾವ್ಯ, ಕೃತಿ, ವಿಮರ್ಶೆ ಮತ್ತು ಸಂಸ್ಕೃತಿ ಎಂಬ ನಾಲ್ಕು ವಿಭಾಗಗಳಲ್ಲಿ ಇಲ್ಲಿರುವ ಮೂವತ್ತೇಳು ಲೇಖನಗಳಲ್ಲಿ ಲೇಖಕರ ಖಚಿತ ಅಭಿಪ್ರಾಯಗಳು ಮತ್ತು ಅವರು ಆ ಮೂಲಕ ಮಾಡಿರುವ ಅಭಿಜಾತ ಕೃತಿಗಳ ಪುನರ್ ಮೌಲ್ಯ ಮಾಪನವಾಗಿಯೂ ಕಾಣುತ್ತದೆ. ಸಾಹಿತ್ಯ ಕೃತಿಯೊಂದರ ಓದಿನಿಂದ ಪಡೆದುಕೊಂಡ ಅನುಭವವನ್ನು ಸಂಸ್ಕೃತಿಯ ಕಾಣ್ಕೆಯ ಮೂಲಕ ತೂಗಿನೋಡುವ ಪ್ರಯತ್ನ ನಿಜಕ್ಕೂ ಕನ್ನಡ ವಿಮರ್ಶಾಲೋಕದ ಅಪರೂಪದ ದಾರಿಯಾಗಿದೆ. ವಿಮರ್ಶೆ ಎನ್ನುವುದು ಬರಿಯ ಪೋಸ್ಟ್ಮಾರ್ಟಂ ಅಲ್ಲ ಅನ್ನುವುದನ್ನು ಈ ಲೇಖನಗಳು ಒತ್ತಿ ಹೇಳುತ್ತವೆ,
ಒಂದು ಸಾಹಿತ್ಯ ಕೃತಿ ಅಥವ ಒಂದು ಸಾಂಸ್ಕೃತಿಕ ಸಂದರ್ಭ ಕುರಿತು ಬರೆಯುವಾಗ ಆ ಕೃತಿ ಅಥವ ಆ ಸಂದರ್ಭವನ್ನೇ ಕೇಂದ್ರವಾಗಿಟ್ಟುಕೊಂಡಿದ್ದರೂ ವಿಜಯಶಂಕರರ ಬರಹ ವಿಸ್ತಾರವಾದ ಮತ್ತು ಪುನರೋದಿನ ಫೋಕಸ್ ಪಡೆಯುವ ಕಾರಣ ಆ ಕೃತಿ ಅಥವ ಸಂದರ್ಭಕ್ಕೆ ಹೆಚ್ಚಿನ ಕ್ಯಾನ್ವಾಸ್ ತಾನೇ ತಾನಾಗಿ ಸಿಕ್ಕು ಬರವಣಿಗೆಯ ‘ಮಿತಿ’ ವಿಸ್ತಾರವಾಗಿಬಿಡುತ್ತದೆ. ಮಾದರಿಗಳನ್ನು ಮುರಿಯುವ ಮತ್ತು ಹೇಳಬೇಕೆನ್ನಿಸದ್ದನ್ನು ಹೇಳಿಯೇ ಹೇಳುವ ಅವರ ಬಗೆಯಲ್ಲಿ ವಿಮರ್ಶಕ ಪ್ರಜ್ಞೆಗಿಂತಲೂ ಸಂಸ್ಕೃತಿ ಚಿಂತನೆಯೇ ಪ್ರಧಾನವಾಗಿಬಿಡುವುದನ್ನು ಗಮನಿಸಬಹುದು. ಅಡಿಗ ಮತ್ತು ಬೇಂದ್ರೆ ಕಾವ್ಯ ಕುರಿತಂತೆ ಪುಸ್ತಕದ ಮೊದಲ ಭಾಗದಲ್ಲಿ ಎರೆಡೆರಡು ಲೇಖನಗಳು ಹಾಗೂ ಎರಡನೆಯ ಭಾಗವಾದ ಕೃತಿಯಲ್ಲಿ ಅನಂತಮೂರ್ತಿ, ತೇಜಸ್ವಿ, ಕಾರಂತ, ವೈದೇಹಿ ಮತ್ತು ದೇವನೂರರ ಬರಹಗಳ ಕುರಿತ ಲೇಖನಗಳಂತೂ ಕನ್ನಡ ಎಂಎ ವಿದ್ಯಾರ್ಥಿಗಳಿಗೆ ಹೇಗೆ ಓದಿ ಟಿಪ್ಪಣಿ ಮಾಡಿಕೊಳ್ಳಬಹುದೆಂಬ ಪ್ರಾತ್ಯಕ್ಷಿಕೆಯಾಗಿದೆ. ಪಠ್ಯದ ಮೇಲಿನ ಹಿಡಿತವನ್ನು ವಿದ್ಯಾರ್ಥಿಗಳು ಗಮನಿಸಲೇಬೇಕು. ಜಯಂತ ಕಾಯ್ಕಿಣಿ ಕತೆಗಳು ಮತ್ತು ಸತ್ಯನಾರಾಯಣರ ಪ್ರಬಂಧಗಳ ಬಗ್ಗೆ ವಿಜಯಶಂಕರರ ಅಭಿಪ್ರಾಯಗಳನ್ನು ಒಪ್ಪಬಹುದಾದರೂ ಈ ಇಬ್ಬರೂ ಲೇಖಕರು ಈ ವಿಮರ್ಶೆ ಬಂದ ನಂತರ ಬರೆದ ಕತೆ/ಪ್ರಬಂಧಗಳನ್ನು ಗಮನಿಸಿ ಕನಿಷ್ಠ ಈ ಬರಹವನ್ನಾದರೂ ಪುನರ್ ರೂಪಿಸಬಹುದಿತ್ತು.
ಇನ್ನು ಪುಸ್ತಕದ ಮೂರನೆಯ ಭಾಗವಾದ ವಿಮರ್ಶೆಯಲ್ಲಿ ತೊಂಭತ್ತರ ದಶಕದ ಕನ್ನಡ ವಿಮರ್ಶಾಲೋಕದ ಪರಿಚಯದ ಜೊತೆಜೊತೆಗೆ ಆ ಕಾಲದ ವಿಮರ್ಶಕರ ಬರಹಗಳ ಮೇಲಣ ವ್ಯಾಪಕ ಚರ್ಚೆಯಾಗಿಯೇ ಸ್ವೀಕರಿಸಬೇಕು. ಇನ್ನು ನಾಲ್ಕನೇ ಭಾಗವಾದ ಸಂಸ್ಕೃತಿಯಲ್ಲಿ ಪ್ರಕಟವಾಗಿರುವ ಹತ್ತು ಲೇಖನಗಳ ವ್ಯಾಪ್ತಿ ಸಂಸ್ಕೃತಿ ಚಿಂತನೆಗೆ ಸಂಬಂಧಪಟ್ಟವು. ಅತ್ಯಂತ ಶಿಸ್ತು ಮತ್ತು ಕ್ಯಾನ್ವಾಸ್ ಮೀರದ ಹರಹು ಇಲ್ಲಿನ ಬರಹಗಳಲ್ಲಿವೆ. 1980ರ ನಂತರದ ಲೇಖಕರ ಕೃತಿಗಳ ಬಗ್ಗೆ ಚರ್ಚೆಯಿಲ್ಲ ಎಂದು ಹಿನ್ನುಡಿಯಲ್ಲಿ ಗಿರೀಶ್ ವಾಘ್ ಹೇಳಿರುವ ಮಾತು ಕೂಡ ಒಪ್ಪಿತವೇ! ಒಬ್ಬ ಬರಹಗಾರನ ಸಾಮಾಜಿಕ ರಾಜಕೀಯ ವಿಶ್ಲೇಷಣೆಗಳು ಬದುಕಿನ ವಾಸ್ತವದೊಂದಿಗೆ ಸಮಂಜಸವಾಗಿ ಹೊಂದುತ್ತವೆಯೇ ಎಂದೂ ಪರೀಕ್ಷಿಸಿರುವ ವಿಜಯಶಂಕರರ ಶ್ರಮ ಎದ್ದು ಕಾಣುತ್ತದೆ. ಅಲ್ಲದೇ ಕೃತಿಯೊಂದನ್ನು ವಿಮರ್ಶಿಸುವಾಗ ಈಗಾಗಲೇ ಮೊಹರಾಗಿರುವ ಮೌಲ್ಯಮಾಪನದ ಅಂಕಗಳನ್ನು ಬೇಕೆಂತಲೇ ಸೂಕ್ಷ್ಮವಾಗಿ ಅಳಿಸುವ ಪ್ರಯತ್ನವನ್ನು ಅವರು ಮಾಡುತ್ತಲೇ ಇರುತ್ತಾರೆ.
ಹಾಗಾಗಿ ಒಳದನಿ ಮತ್ತು ಮನೋಗತದಂಥ ವಿಮರ್ಶಾ ಲೇಖನಗಳ ಮರು ಮುದ್ರಣ ಕನ್ನಡ ಸಾಹಿತ್ಯಾಭ್ಯಾಸಿಗಳಿಗೆ ಕನ್ನಡದ ಮೌಲಿಕ ಪ್ರಕಟನೆಗಳ ಮಾಹಿತಿ ಮತ್ತು ಪುನರ್ ಮೌಲ್ಯ ಮಾಪನವಾಗಿಯೂ ದೊರಕಿದಂತಾಗಿದೆ. ಅಭಿಜಾತ ಪ್ರತಿಭೆಗಳ ಒಟ್ಟಂದ ಮತ್ತು ಓದುಗನಿಗಿರಲೇಬೇಕಾದ ಚಿಕಿತ್ಸಕ ಮನೋಭಾವನೆಯ ಕುರುಹಾಗಿಯೂ ಕಾಣುತ್ತದೆ.







ಸರ್… ವಿಮರ್ಶಾಕೃತಿಯ ಬಗೆಗಿನ ತಮ್ಮ ಅನಿಸಿಕೆ(ವಿಮರ್ಶೆ)ಯನ್ನು ಓದುತ್ತಿದ್ದಂತೆ ಆ ಪುಸ್ತಕವನ್ನು ಕೊಂಡುಕೊಳ್ಳುವ ಮನಸ್ಸಾಗಿದೆ. ವಸ್ತುನಿಷ್ಠ ವಿಮರ್ಶೆ ನಮ್ಮಂತಹ ಎಳೆ ನಿಂಬೆಕಾಯಿಗಳನ್ನು ಪಕ್ವಗೊಳಿಸುತ್ತದೆ. ‘ವಿಮರ್ಶೆಯ ದಾರಿ’ ಎಂಬ ಸುಮತೀಂದ್ರ ನಾಡಿಗರ ಪುಸ್ತಕದಲ್ಲಿ ಅನಂತಮೂರ್ತಿಯವರ ‘ಮೌನಿ’ ಕಥೆಯು ಬರ್ನಾರ್ಡ್ ಮಾಲಮುಡ್ ನ ‘ಮೌರ್ನರ್’ ಕಥೆಯ ಕೃತಿಚೌರ್ಯವೆಂದಿದ್ದು, ಪರಿಷ್ಕೃತ ಮುದ್ರಣದ ಮುನ್ನುಡಿಯಲ್ಲಿ ಅದು ಕೃತಿಚೌರ್ಯವಲ್ಲ ಬದಲಾಗಿ ಒಂದು ‘ಅಂತರ್ಪಠ್ಯ ಸಂಬಂಧ’ವೆಂದಿದೆ. ನನಗೆ ಅಲ್ಲಿ ಸ್ವಲ್ಪ ಗೊಂದಲವಾಗಿದ್ದು ಸಹಜ. ಈ ಪುಸ್ತಕ ಕೊಂಡು ಓದಿ ಗೊಂದಲ ನಿವಾರಿಸಿಕೊಳ್ಳುವೆ… 🙂