ಪತ್ರಕರ್ತೆ ವಿದ್ಯಾರಶ್ಮಿ ಪೆಲತ್ತಡ್ಕ ಸೂಕ್ಷ್ಮ ಮನಸ್ಸಿನ ಹುಡುಗಿ.
ಈಗ ತಮ್ಮ ಚೊಚ್ಚಲ ಕವನ ಸಂಕಲನದೊಂದಿಗೆ ನಮ್ಮ ಮುಂದೆ ನಿಂತಿದ್ದಾರೆ.
ಈ ಕೃತಿಗೆ ಜೋಗಿ ಬರೆದ ಮುನ್ನುಡಿ ಇಲ್ಲಿದೆ

ಜೋಗಿ
ವಿದ್ಯಾರಶ್ಮಿ ನಮ್ಮೂರ ಹುಡುಗಿ. ನನ್ನೊಂದಿಗೆ ಆರೇಳು ವರುಷ, ಪುರವಣಿ ವಿಭಾಗದಲ್ಲಿ ಕೆಲಸ ಮಾಡಿದಾಕೆ. ಆಗೆಲ್ಲ ವಿದ್ಯಾ ತಾನು ಕವಿತೆ ಬರೆಯಬಲ್ಲೆ ಎಂದು ತೋರ್ಪಡಿಸಿಕೊಂಡಿರಲಿಲ್ಲ. ಮಹಿಳಾ ಪುರವಣಿಗೆ ಆಕೆ ಬರೆಯುವ ಬರಹಗಳು ಗಾಢವಾಗಿರುತ್ತಿದ್ದವು. ಸೊಗಸಾದ ಕನ್ನಡದಲ್ಲಿ ಬರೆಯುವುದನ್ನು ಕೂಡ ವಿದ್ಯಾ ಕರಗತ ಮಾಡಿಕೊಂಡಿದ್ದರು. ಅಪರೂಪದ ಪ್ರಸಂಗಗಳು ಹುಡುಕಿ, ಅಚ್ಚುಕಟ್ಟಾಗಿ ಬರೆಯುತ್ತಿದ್ದ ವಿದ್ಯಾರಶ್ಮಿ, ನಂತರದ ದಿನಗಳಲ್ಲಿ ಕೆಲವು ಸಣ್ಣಕತೆಗಳನ್ನು ಬರೆದು ನಮ್ಮನ್ನೆಲ್ಲ ಬೆಚ್ಚಿ ಬೀಳಿಸಿದ್ದು ನನಗಿನ್ನೂ ನೆನಪಿದೆ.
ಇದೀಗ ಕವಿತೆಗಳನ್ನು ಬರೆದು ಕೈಲಿಟ್ಟು ವಿದ್ಯಾ ನನ್ನನ್ನು ಮತ್ತೊಮ್ಮೆ ಬೆರಗಾಗಿಸಿದ್ದಾರೆ. ಯಾವತ್ತೂ ನನಗೆ ಕಾವ್ಯವನ್ನು ನೆಚ್ಚುವವರ ಬಗ್ಗೆ ಭಯ ಮತ್ತು ಪ್ರೀತಿ. ನಾವೆಲ್ಲರೂ ನಮ್ಮ ಪರಿಸರದ ಛಪ್ಪನ್ನೈವತ್ತಾರು ಸಂವಹನಗಳು ಸೋತಾಗ ಕಾವ್ಯದ ಮೊರೆ ಹೋಗುತ್ತೇವೆ. ನಮ್ಮ ಮಾತು ನಾವು ಹೇಳಬೇಕಾದ್ದನ್ನು ಹೇಳದೇ ಹೋದಾಗ, ನಮ್ಮ ಜಗಳವನ್ನು ದಾಟಿಸುವುದಕ್ಕೆ ರೋಷತಪ್ತ ನುಡಿಗಳು ಸೋತಾಗ, ಸಂಕಟವನ್ನು ಹೇಳಿಕೊಳ್ಳಲಿಕ್ಕೆ ಆರ್ದ್ರವಾದ ಅಕ್ಷರಗಳು ಬಳಲಿದಾಗ, ಎಲ್ಲ ಮಾತನ್ನೂ ಮೀರಿದ ಕವಿತೆಯ ಚರಣಕ್ಕೆ ಅಡ್ಡಬೀಳುತ್ತೇವೆ. ಕವಿತೆಯೆಂದರೆ ಅದೇ ಕಾರಣಕ್ಕೆ ಅರಳಿಸುವ ಪಲ್ಲವಿ, ಎಲ್ಲವನ್ನೂ ಸಮರ್ಪಿಸಬಹುದಾದ ಚರಣ.
ವಿದ್ಯಾರಶ್ಮಿ ಈ ಕವಿತೆಗಳನ್ನು ಬರೆದ ಕ್ಷಣಗಳನ್ನು ನಾನು ಕಣ್ಮುಂದೆ ತಂದುಕೊಳ್ಳಬಲ್ಲೆ. ಆಕೆಯ ದಾಂಪತ್ಯ, ತಾಯ್ತನ, ವೃತ್ತಿ, ಓಡಾಟ, ನಿಟ್ಟುಸಿರು, ನಿರಾಯಾಸ, ನೆಮ್ಮದಿ, ಬೇಗುದಿ- ಎಲ್ಲವೂ ಈ ಕವಿತೆಯ ಸಾಲುಗಳಲ್ಲಿ ಮಡುಗಟ್ಟಿದಂತೆ ನಿಶ್ಚಲವಾಗಿದೆ. ಅದು ಓದುಗನ ಸಹಾನುಭೂತಿಯೊಂದಿಗೆ ಚಲಿಸುವಂತೆ ಭಾಸವಾಗುತ್ತದೆ. ಮುಂಜಾವದ ಸಣ್ಣ ಗಾಳಿಗೆ ಕೊಂಚವೇ ನಲುಗುವ ಪಾರಿಜಾತದ ಹೂವು ಗಿಡದಲ್ಲೇ ಉಳಿಯುತ್ತೇನೋ ತೊಟ್ಟು ಕಳಚಿಕೊಳ್ಳುತ್ತೇನೋ ಎಂಬ ಸಂದಿಗ್ಧದಲ್ಲಿ ಕಂಪಿಸುವಂತೆ ವಿದ್ಯಾ ಕವಿತೆಯ ಸಾಲುಗಳಿವೆ.
-2-
ಕವಿತೆ ತನ್ನ ಹುಟ್ಟೂರನ್ನು ಬಿಟ್ಟು ಬಹಳ ದೂರ ನಡೆದುಬಂದಿದೆ. ತನ್ನ ಮೂಲವನ್ನೂ ಅದು ಮರೆತುಬಿಟ್ಟಿದೆ. ಪಂಪ ಬರೆದು ಒಂದು ಸಾಲನ್ನು ಇವತ್ತು ನಾವು ಸಮಕಾಲೀನ ಎಂದು ನಂಬಿಸಿಕೊಳ್ಳಲು ಯತ್ನಿಸುತ್ತಾ, ಹಾಗಂತ ಪದೇ ಪದೇ ಹೇಳುವ ಮೇಷ್ಟರುಗಳನ್ನು ನಂಬುತ್ತಾ ಸಮಕಾಲೀನ ಕವಿತೆಯನ್ನು ಉಡಾಫೆಯೆಂಬ ಕಸಬರಿಗೆಯಲ್ಲಿ ಗುಡಿಸಿ ಎಸೆಯುತ್ತಿದ್ದೇವೆ.
ಹಾಗೆಯೇ ಸಮಾಜದಲ್ಲಿ ನಶಿಸುತ್ತಿರುವ ಜಾತೀಯತೆ ಕವಿತೆಗಳಲ್ಲಿ ಮರುಹುಟ್ಟು ಪಡೆದಂತೆ ಭಾಸವಾಗುತ್ತಿದೆ. ಹೊರ ಜಗತ್ತಿನ ಸಮಾನತೆ ಕಾವ್ಯಲೋಕದಲ್ಲಿ ಕಾಣಿಸುತ್ತಿಲ್ಲ. ಮತ್ತೆ ಮತ್ತೆ ಕವಿಗಳೂ ಹಳೆಯದನ್ನೇ ನೆಚ್ಚಿಕೊಂಡಿರುವ ವಿಮರ್ಶಕರೂ ಹಳೆಯ ರೂಪಕಗಳಿಗೆ ತಲೆಚಚ್ಚಿಕೊಳ್ಳುತ್ತಾ, ರೂಪಕವನ್ನೂ ಒಡೆಯಲಾರದೇ, ಕವಿತೆಯನ್ನೂ ಪಡೆಯಲಾರದೇ ಹೆಣಗುತ್ತಿರುವುದನ್ನು ಕಾವ್ಯ ವಿಮರ್ಶೆಯಲ್ಲಿ ನೋಡಬಹುದು.
ನಾನಿದನ್ನು ಆಕ್ಷೇಪವೆಂಬಂತೆ ಹೇಳುತ್ತಿಲ್ಲ. ಕಾವ್ಯದ ಕಷ್ಟ ಎಂಥದ್ದು ಎಂದು ಸೂಚಿಸುತ್ತಿದ್ದೇನೆ ಅಷ್ಟೇ. ವಿಮರ್ಶೆಯಿಲ್ಲದೇ ಹೋದರೆ ಕತೆ ಜೀವಿಸಬಹುದು, ಕಾದಂಬರಿ ಬಾಳಬಹುದು, ನಾಟಕ ಮೈತಳೆಯಬಹುದು, ಕಾವ್ಯ ಮಾತ್ರ ತನ್ನನ್ನು ತಾನು ಸಂಭಾಳಿಸಿಕೊಳ್ಳಲಾರದು. ಅದರಲ್ಲೂ ನವ್ಯ ಕಾವ್ಯಲೋಕವನ್ನು ತನ್ನ ಬೊಗಸೆಯಲ್ಲಿಟ್ಟು ಕಾವ್ಯರಸಿಕರಿಗೆ ಅರ್ಪಿಸಿದ್ದೇ ಸಹೃದಯ ವಿಮರ್ಶೆ. ಇವತ್ತು ಆ ವಿಮರ್ಶೆ ‘ತುಂಬ ಸೊಗಸಾಗಿ ಬರೆಯುತ್ತಾರೆ’ ಎಂಬ ಮೂರು ಪದಗಳಿಗೆ ಬಂದು ನಿಂತಿದೆ.
ಇಂಥ ಸಂಧಿಕಾಲದಲ್ಲಿ ಕವಿತೆ ಬರೆಯುವವರು ವಿನಾಕಾರಣ ಅವಗಣನೆಗೆ ಒಳಗಾಗುತ್ತಾರೆ. ಒಂದು ಕವನ ಸಂಕಲನದ ಸಾರ್ಥಕತೆ ಪ್ರಶಸ್ತಿ ಗಳಿಸುವುದಕ್ಕಷ್ಟೇ ಸೀಮಿತವಾಗುತ್ತದೆ. ಇದನ್ನು ಖಂಡಿಸುವವರು ಕಳೆದ ಹತ್ತು ವರುಷಗಳಲ್ಲಿ ತಾವು ಓದಿದ, ಥಟ್ಟನೆ ನೆನಪಾಗುವ ಹತ್ತು ಕವಿತೆಗಳನ್ನು ಪಟ್ಟಿ ಮಾಡಲು ಯತ್ನಿಸಬಹುದು. ಎಷ್ಟೇ ಗಾಢವಾಗಿ ಓದಿದರೂ ಕೂಡ ನವೋದಯದ ಪದ್ಯಗಳು, ನವ್ಯದ ಕೆಲವು ರಚನೆಗಳು, ಹಾಡಾಗಿ ಪಡಿಮೂಡಿದ ಕವಿತೆಗಳು ಮಾತ್ರವೇ ನೆನಪಿಗೆ ಬರುತ್ತವೆ. ಕವಿತೆಗಳ ಸೋಲು ಎಂದು ಇದನ್ನು ಕರೆಯಬೇಕಾಗಿಲ್ಲ. ಕವಿತೆ ಬಾಳುವುದು ಬಳಕೆಯಿಂದ ಎಂದು ನಂಬುವವರಿಗೆ, ಅದರ ಸಾರ್ವತ್ರಿಕತೆಯ ಕುರಿತೂ ನಂಬಿಕೆ ಇರಬೇಕಾಗುತ್ತದೆ.
-3-
ತನ್ನ ಖಾಸಗಿ ಸಂಗತಿಗಳನ್ನು ಆತ್ಮದ ತಳಮಳಗಳನ್ನು ಒಳಗುದಿಗಳನ್ನು ವಿದ್ಯಾರಶ್ಮಿ ಇಲ್ಲಿ ಕವಿತೆಗಳಾಗಿಸಿದ್ದಾರೆ. ಇವು ಅತ್ಯಂತ ಏಕಾಂತದಲ್ಲಿ ಆಕೆ ನುಡಿದ ಪಿಸುಮಾತುಗಳಂತೆ ಭಾಸವಾಗುತ್ತವೆ. ಕೊಂಚ ಜೋರಾಗಿ ಉಸುರಲೂ ಅಂಜುವ ತನ್ನ ಕಾಲದ ಅಡಿಯಾಳಿನಂತೆ ಬಹುತೇಕ ಕವಿತೆಗಳು ತಮ್ಮ ಚಿಪ್ಪೊಳಗೆ ಅವಿತು ಕುಳಿತಿವೆ. ಹುದುಗಿಡಲಾರದ ಹೇಳಲಾರದ ಗೌರೀದುಃಖದಂತೆ ಕವಿತೆ ಕೂಡ ಇಲ್ಲಿ ತನ್ನ ಮಿತಿಗೆ ಶರಣಾದಂತೆ ಕಾಣುತ್ತದೆ.
ಕೈ ಚೆಲ್ಲಿದ ಸಾಲುಗಳೇ, ನಿಮಗೆ ನಮಸ್ಕಾರ ಎನ್ನುವ ಸಾಲು ಮೊದಲ ಕವಿತೆಯಲ್ಲೇ ಬರುತ್ತದೆ. ಬದುಕು ಹೆಕ್ಕಲು ಬಿಡದ ಅನುಭವಗಳ ಕುರಿತು ಕೊಂಚ ವಿಷಾದದಿಂದಲೇ ಬರೆದ ಕವಿತೆಯಿದು. ನಿರಾಳವಾಗಿರುವ ದಿನಗಳಲ್ಲಿ ಕಾವ್ಯದ ಜರೂರು ಇರುವುದಿಲ್ಲ, ಕವಿತೆಯ ಸಾಂಗತ್ಯ ಬೇಕು ಅನ್ನುವ ಹೊತ್ತಲ್ಲಿ ಬಿಡುವು ಸಿಗುವುದಿಲ್ಲ ಎಂಬುದು ಬಹುತೇಕ ಕವಿಗಳ ಕಷ್ಟ ಕೂಡ. ತನ್ನ ದಿನಚರಿಯ ಲಾಳಿಯನ್ನು ಮೀರಲಾರದ ಅಸಹಾಯಕತೆ ಮತ್ತು ಮೀರದೇ ಹೋದರೆ ಯಂತ್ರವಾಗುವ ಭಯದಲ್ಲಿ ಹುಟ್ಟಿಕೊಂಡ ಬಹುತೇಕ ಪದ್ಯಗಳ ಧ್ವನಿಯನ್ನು ಕೇಳಿದಾಗ, ಕಾವ್ಯವು ವಿದ್ಯಾಗೆ ಆಗೀಗ ಸಖನಂತೆ ನೆರವಿಗೆ ಬಂದಿರುವುದು ಗೊತ್ತಾಗುತ್ತದೆ.
ಇದು ತಾನಿರುವ ಪರಿಸರದೊಳಗಿದ್ದುಕೊಂಡು, ಅಲ್ಲಿಂದಲೇ ಹೆಕ್ಕಿಕೊಂಡ ಪದಪದರಗಳ ಮೂಲಕ ಕವಿತೆ ಕಟ್ಟುತ್ತಾ ಹೋಗಿದ್ದಾರೆ ವಿದ್ಯಾರಶ್ಮಿ. ಈ ಕವಿತೆಗಳ ಅತಿದೊಡ್ಡ ಶಕ್ತಿಯೆಂದರೆ ಇಲ್ಲಿ ಎಲ್ಲೂ ನಾಸ್ಟಾಲ್ಜಿಯಾ ಇಲ್ಲ. ಯಾವತ್ತೂ ಅವರು ತಮ್ಮೂರಾದ ಪೆಲತ್ತಡ್ಕಕ್ಕೆ ಹೋಗಿ, ಅಲ್ಲಿನ ತಿಟ್ಟೊಂದರ ಮೇಲೆ ನಿಂತು ತನ್ನ ವರ್ತಮಾನವನ್ನು ನೋಡುವುದಿಲ್ಲ. ತನ್ನ ಕಛೇರಿ, ಮನೆ, ಮೀಟಿಂಗು, ವಾಟ್ಸಪ್ಪುಗಳ ಪ್ರಪಂಚದಲ್ಲೇ ವಿಹರಿಸುವ ವಿದ್ಯಾರಶ್ಮಿಯ ಕವಿತೆಗಳು ಆಗೊಮ್ಮೆ ಈಗೊಮ್ಮೆ ತಾನು ಓದಿದ ಅತ್ಯುತ್ತಮ ಕವಿತೆಗಳಿಗೆ ಡಿಕ್ಕಿ ಹೊಡೆಯಲು ಯತ್ನಿಸುತ್ತವೆ. ಕೆ ವಿ ತಿರುಮಲೇಶರ ‘ಮುಖಾಮುಖಿ’ ಪದ್ಯವನ್ನೇ ಹೋಲುವ ‘ದೃಷ್ಟಿಯುದ್ದ’, ವೈದೇಹಿಯವರ ನೋಡಬಾರದು ಚೀಲದೊಳಗನು ಪದ್ಯದ ಶೀರ್ಷಿಕೆಯನ್ನು ಹೋಲುವ ನೋಡಬಾರದು ವಾಟ್ಸಾಪಿನೊಳಗನು.. ಮುಂತಾದ ಪದ್ಯಗಳು ವಿದ್ಯಾರಶ್ಮಿಯ ಓದಿನ ವಿಸ್ತಾರವನ್ನೂ ಹೇಳುತ್ತವೆ.
ಬರೆಯಬೇಕೆಂದುಕೊಂಡ ಸಾಲನ್ನು ತನ್ನೊಳಗೆ ಬಚ್ಚಿಟ್ಟುಕೊಂಡು, ಅದರ ತೀವ್ರತೆಯನ್ನು ಕೊಂಚ ಕುಗ್ಗಿಸಿ, ಅಷ್ಟೊಂದು ಕಟುವಾಗಿ ಹೇಳಲೋ ಬೇಡವೋ ಎಂದು ಅಂಜುತ್ತಂಜುತ್ತಾ, ಹೇಳದೇ ಉಳಿಯಲಾರೆ ಎಂಬ ನಿಶ್ಚಯದಲ್ಲಿ ವಿದ್ಯಾರಶ್ಮಿ ಕವಿತೆಗಳನ್ನು ಕಟ್ಟುತ್ತಾ ಹೋಗಿದ್ದಾರೆ. ಅವಡುಗಚ್ಚಿ, ಚಿಮ್ಮಿದ ನೆತ್ತರು ಕವಿತೆಗಳ ಮೇಲೆ ಬಿದ್ದಿಲ್ಲ. ಒಡೆದ ತುಟಿಯನ್ನು ಎಚ್ಚರದ ಓದುಗ ಕಲ್ಪಿಸಿಕೊಳ್ಳಬಹುದು. ಇನ್ನು ಹೇಳದೇ ಇರಲಾರೆ ಎಂಬ ತೀವ್ರತೆಯಲ್ಲಿ ವಿದ್ಯಾರಶ್ಮಿ ಇಷ್ಟೇ ಇಷ್ಟು ವ್ಯಗ್ರರಾಗಬಲ್ಲರು. ಇಷ್ಟೇ ಇಷ್ಟು ಕಟುವಾಗಬಲ್ಲರು:
ಸಮಯವಿದೆಯಂತೆ
ಗೋಪೀಲೋಲನಿಗೆ
ಗೌರೀದುಃಖ ಆಲಿಸಲೂ,
ಶಿವನೇ, ಎಚ್ಚರೆಚ್ಚರ…
ಮೊದಲ ಕವಿತೆಗಳ ಸಂಕಲನದ ಕುಂದುಗಳನ್ನು ವಿದ್ಯಾರಶ್ಮಿ ನೀಗಿಕೊಳ್ಳುತ್ತಾರೆಂಬ ನಂಬಿಕೆ ನನಗಿದೆ. ಹಾಗೆಯೇ, ತಮ್ಮ ಕಾವ್ಯಸಂಕೋಚವನ್ನು ಕೂಡ ಅವರು ಕಳೆದುಕೊಳ್ಳಬೇಕಿದೆ. ತಥಾಸ್ತು.




ಬರಹಗಳಷ್ಟೇ ಅಚ್ಚುಕಟ್ಟು ವ್ಯಕ್ತಿತ್ವ, ಬದುಕು ಎರಡೂ. ಕವಿತೆಗಳಷ್ಟೇ ನವಿರು ಹುಡುಗಿ ವಿದ್ಯಾ, ನೀನಂದ್ರೆ ನಂಗಿಷ್ಟ.
ಜೋಗಿ ಸರ್, ಇಂಥ ಮುನ್ನುಡಿ ಅವಳ ಮೊದಲ ಸಂಕಲನವನ್ನು ಸುಸಂಪನ್ನಗೊಳಿಸಿತು.
ಮುಖಪುಟ ಚನ್ನಾಗಿದೆ.
Khali Haneyannu kandareke anjuve ele gande …wah..sashakta saalu….abhinandane vidya rashmiyavrige
ವಿದ್ಯಾರಶ್ಮಿಯ ಕವನ ಸಂಕಲನ ಹೊರಬರುತ್ತಿರುವ ವಿಷಯ ಕೇಳಿ ತುಂಬ ಖುಷಿ ಅನಿಸಿತು. ಆಕೆ ನನ್ನ ಸಹಪಾಠಿ ಅನ್ನೋದೂ ಇದಕ್ಕೆ ಒಂದು ಕಾರಣ. ಕಾಲೇಜು ದಿನಗಳಲ್ಲೆಲ್ಲ ಶಿವರಾಮ ಕಾರಂತರ ಕಾದಂಬರಿಗಳ ಬಗ್ಗೆ ನಾವು ಒಟ್ಟೊಟ್ಟಿಗೆ ಪ್ರಬಂಧ ಬರೆದು ಬಹುಮಾನ ಬಾಚಿಕೊಂಡು ಹೋದದ್ದುಂಟು. ನಿಜ್ಜಾ, ಅವಳು ಕವಿತೆ ಬರೆಯುತ್ತಾಳೆಂದು ನನಗೆ ಗೊತ್ತಿಲ್ಲ. ಹಾಗಾಗಿ ಈಗ ಸಂಕಲನವನ್ನು ಓದುವ ಕಾತರ ಕೂಡಾ. “ನಮ್ಮೂರಿನ ಹುಡುಗ” ಜೋಗಿಯವರು ಬರೆದ ಮುನ್ನುಡಿ ಅದ್ಭುತವಾಗಿದೆ. Congrats Vidya.
ನನ್ನ ಕೆಲವು ಕವನಗಳನ್ನೂ ಪ್ರಕಟಿಸಿ ಇದೀಗ ಮುನ್ನುಡಿ ಪ್ರಕಟಿಸಿರುವ ಅವಧಿಯ ಪ್ರೋತ್ಸಾಹಕ್ಕೆ ನಾನು ಸದಾ ಋಣಿ. ಪದ್ಮನಾಭ, ಶಮಾ, ಸಂಗಮಿತ್ರ, ಅನಾಮಿಕ -ನಿಮಗೂ ತುಂಬಾ ಥ್ಯಾಂಕ್ಸ್.
-ವಿದ್ಯಾರಶ್ಮಿ ಪೆಲತ್ತಡ್ಕ
ವಿದ್ಯಾರಶ್ಮಿಯ ಸೊಗಸಾದ ಬರಹಗಳು ನಂಗಿಷ್ಟ. ಪತ್ರಿಕೆಗೆ/ವಿಶೇಷಾಂಕಗಳಿಗೆ ಬಂದಿರುವ ಯಾವುದೇ ಲೇಖನಗಳನ್ನು ತಿದ್ದಿ ತೀಡಿ, ಅದನ್ನು ಓದಿಸಿಕೊಂಡು ಹೋಗುವಂತೆ ಮಾಡಬಲ್ಲ, ಅದಕ್ಕೊಂದು ಚೆಂದದ ಬ್ಲರ್ಬ್ ಕೊಟ್ಟು ಸಪ್ಪೆಯಾಗಿರುವ ಲೇಖನವನ್ನೂ ಎದ್ದು ನಿಲ್ಲಿಸಬಲ್ಲ ಸಮರ್ಥೆ ಅವರು. ಮತ್ತೆ ತನ್ನ ಈ ಸಾಹಿತ್ಯದ ಕೆಲಸದ ಮೇಲಿನ ಪ್ರೀತಿಯಿದೆಯಲ್ಲ, ಅದಕ್ಕೆರಡು ಮಾತೇ ಇಲ್ಲ. ವಿಜಯ ಕರ್ನಾಟಕದಲ್ಲಿ ಅವರ ಕೆಲಸವನ್ನು ನೋಡುತ್ತಲೇ ಇದ್ದವ ನಾನು. ಜೋಗಿ ಅವರು ಬರೆದಿರುವುದರಲ್ಲಿ ಯಾವುದು ಕೂಡ ಅತಿಶಯೋಕ್ತಿ ಇಲ್ಲ.