ವಿಜಯಶ್ರೀ ಎಂ ಹಾಲಾಡಿ
ಮದುವೆ ಆರತಕ್ಷತೆ ಮನೆಯೊಕ್ಕಲು
-ಗಳ ಹುಸಿ ಸಡಗರದಲ್ಲಿ
ಮಲ್ಲಿಗೆ ಘಮ, ರೇಷ್ಮೆ ಸೀರೆಯ
ಘಾಟು, ಸೆಕೆಯ ಝಳದ ಮಧ್ಯೆ
ಕಾಲ್ಗೆಜ್ಜೆ ನುಡಿಸುತ್ತ ಓಡಾಡುವಾಗ
ಫಕ್ಕನೆ ಮುಖ ಕಾಣಿಸುತ್ತಾನೆ
ಎರಡೋ ನಾಲ್ಕೋ ವರ್ಷಕ್ಕೊಮ್ಮೆ
ಕಂಡೂ ಕಾಣದಂತೆ ದಾಟಿ ಹೋದರೂ
ಹೊರಡುವ ಮೊದಲು ಮಾತಾಡಿಸಿಯೇ
ತೀರುತ್ತಾನೆ
ಎಲ್ಲಿರುವುದು? ಮಕ್ಕಳು? ಮನೆಯವರು?
‘ಆಯ್ತು ಬರುತ್ತೇನೆ’ ಎಂದಾಯಿತು
ನಾನೂ ಅವನ ಮಡದಿ
ಮಕ್ಕಳನ್ನು ವಿಚಾರಿಸಿಯಾಯಿತು
ನನ್ನದೇ ವಯಸ್ಸು
ದೂರದ ಸಂಬಂಧಿಕ
….ಅವನೇನೂ ಮಾಜಿ ಪ್ರೇಮಿಯಲ್ಲ
ನಾನವನ ಪ್ರೇಯಸಿಯೂ ಅಲ್ಲ
ಕಣ್ಣುಗಳಿಗೂ ತುಳುಕಿಸಲಾಗದ
ಎಳೆಹರೆಯದ ಭಾವಗಳೇನಾದರೂ
ಇದ್ದವೇ? ಸ್ಪಷ್ಟತೆಯಿಲ್ಲ
ಕಾಲೇಜಿಗೆ ತೆರಳುವಾಗ
ಆಗಾಗ ಒಂದೇ ಬಸ್ಸಿನ
ಪಯಣಿಗರು…ಹೌದು
ಬಾಲ್ಯದಲ್ಲೊಮ್ಮೆ ನಮ್ಮಿಬ್ಬರ
ಅಮ್ಮಂದಿರೊಂದಿಗೆ ಯಾವುದೋ
ಊರಿಗೆ ನಡೆದುಹೋದ
ಸಣ್ಣ ನೆನಪು!
ಅಸಲಿಗೆ ಈಗವನು ಎಲ್ಲಿರುತ್ತಾನೋ
ಏನು ಕೆಲಸ ಮಾಡುತ್ತಾನೋ
ನನಗೂ ಮಾಹಿತಿಯಿಲ್ಲ
ತಿಳಿದುಕೊಳ್ಳುವ ಆಸಕ್ತಿಯೂ ಇಲ್ಲ
ಆದರೂ ಮೊನ್ನೆ ಅವನ ಹೆಂಡತಿ
-ಯನ್ನು ಕಂಡು ಮುಖ ಅರಳಿದ್ದು
ಅವರ ದಾಂಪತ್ಯ ಸುಂದರವೆಂದು
ಅರೆಕ್ಷಣ ಅನಿಸಿದ್ದು ಸುಳ್ಳಲ್ಲ!
ಮನೆಗೆ ಬಂದ ಮೇಲೂ
ಅವರಿಬ್ಬರ ಚಿತ್ರ ಸುಳಿದಾಡಿದ್ದು
ಅಸಹಜವೂ ಅಲ್ಲ
ಗೊತ್ತಿಲ್ಲ.
ಇನ್ನೊಮ್ಮೆ ಎಂದೋ ಸಿಗಬಹುದು
ಎಂದಿನಂತೆ
ಎರಡು ಮಾತಾಡಿ ನಕ್ಕು
ವಿದಾಯ ಹೇಳಬಹುದು!
0 Comments