ವಿಜಯಕುಮಾರ ನೇರ್ವೆಕರ
ನಾ ಕೊಟ್ಟ ಸೀರೆ,
ಅವಳ ಕೋಮಲ ಕೈ ಗಳನ್ನು
ಪಾತ್ರೆಯ ಬಿಸಿಯಿಂದ ರಕ್ಷಿಸಿದೆ.
ಒದ್ದೆ ಕಾಲುಗಳನ್ನು ಒಣಗಿಸಿ
ಜಾರದಂತೆ ನಡೆಸಿದೆ.
ಅವಳ ಅಂದ ಕಳೆಗುಂದದಂತೆ
ಕನ್ನಡಿಯ ಕಲೆ ಒರೆಸಿದೆ.
ಕತ್ತಲೆಯಲ್ಲಿ ಬತ್ತಿಯಾಗಿ ಉರಿದು
ಬೆಳಕಿನ ಸಡಗರ ನೀಡಿದೆ.
ಕಿಟಕಿಯ ಪರದೆಯಾಗಿ
ಬೇಡದ ನೋಟಗಳ ತಡೆದಿದೆ.
ದಿಂಬಿನ ಹೊದಿಕೆಯಾಗಿ
ಕಂಬನಿಗಳ ಕುಡಿದು ಸಂತೈಸಿದೆ.
ನಾ ಕೊಟ್ಟ ಸೀರೆ, ಇಂದು
ಹಲವು ಚೂರಾಗಿದೆಯಾದರೂ
ಹೊಸ ಬದುಕು ಕಟ್ಟಿಕೊಂಡ
ಅವಳ ಚೂರೂ ಬಿಟ್ಟುಕೊಟ್ಟಿಲ್ಲ.
0 ಪ್ರತಿಕ್ರಿಯೆಗಳು