ವಚನ ಗೌರಿಶಂಕರ ಶಿಖರವನ್ನೇರುವ ಸಾಹಸ ಮತ್ತು ಸಂತೋಷಗಳು
ಜಿ ಎನ್ ನಾಗರಾಜ್
1979ರ ಡಿಸೆಂಬರ್ ತಿಂಗಳಲ್ಲಿ ಒಂದು ದಿನ.ನನಗೆ ಧಾರವಾಡ ಜಿಲ್ಲೆಗೆ ಆಗತಾನೆ ವರ್ಗಾವಣೆಯಾಗಿತ್ತು. ಒಂದು ಸರ್ಕಾರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಾಗಿತ್ತು. ತಾಲ್ಲೂಕಿನ ಮುಖ್ಯ ಅಧಿಕಾರಿಗಳೊಡನೆ ಸಮಾರಂಭದ ಜಾಗಕ್ಕೆ ಹೋಗಿ ವೇದಿಕೆಯ ಮೇಲೇರಿದೆ. ಅಲ್ಲಿಯ ಕುರ್ಚಿಗಳಲ್ಲಿ ಒಂದು ಭಿನ್ನವಾದ ಎತ್ತರದ ಕುರ್ಚಿ ಇತ್ತು. ನಾನೇ ಅಲ್ಲಿದ್ದವರಲ್ಲಿ ಉನ್ನತ ಅಧಿಕಾರಿ. ಹೀಗಾಗಿ ಏನಿದು ಎಂದು ಪ್ರಶ್ನಾರ್ಥಕವಾಗಿ ಇತರ ಅಧಿಕಾರಿಗಳತ್ತ ನೋಡಿದಾಗ ನನ್ನ ಅಜ್ಞಾನಕ್ಕೆ ಮರುಗಿ ವಿವರಣೆ ನೀಡಲು ಮುಂದಾದರು. ಅಷ್ಟರಲ್ಲಿ ಗಡಿಬಿಡಿ ಶುರುವಾಯಿತು. ಖಾವಿ ವಸ್ತ್ರಧಾರಿಯೊಬ್ಬ ಸರಸರನೆ ಬಂದು ಆ ಕುರ್ಚಿಯ ಮೇಲೆ ಒಂದು ಜಿಂಕೆ ಚರ್ಮವನ್ನು ಹರಡಿದ. ಎಲ್ಲರೂ ಇದ್ದಕ್ಕಿದ್ದಂತೆ ಎದ್ದು ನಿಂತರು. ನಾನು ಏನು ಮಾಡಬೆಕೆಂದು ತೋರದೇ ಏಳುವ ಪ್ರಯತ್ನ ಮಾಡುವ ಹೊತ್ತಿಗೆ ಮತ್ತೊಬ್ಬ ಖಾವಿಧಾರಿ ಗಂಭೀರವಾಗಿ ನಡೆತಂದು ಆ ಎತ್ತರದ ಕುರ್ಚಿಯ ಮೇಲೆ ಕುಳಿತ. ಇವೆಲ್ಲವನ್ನೂ ಆಶ್ಚರ್ಯದಿಂದ ನೋಡುತ್ತಿರುವಾಗಲೇ ಇನ್ನೂ ಆಶ್ಚರ್ಯದ ಚರ್ಯೆಗಳು. ಎಲ್ಲರೂ ಆ ಖಾವಿಧಾರಿಯ ಕಾಲಿಗೆ ಬೀಳಲಾರಂಭಿಸಿದರು. ಆ ಖಾವಿಧಾರಿ ಕಾಲಿಗೆ ಬಿದ್ದ ಅಧಿಕಾರಿಗಳ ಕುತ್ತಿಗೆಗೆ ಹಾರ ಹಾಕಿದ. ನನಗೆ ಇದ್ಯಾವುದು ಅರ್ಥವಾಗದೇ ಕಕಮಕ ಆಯಿತು.ನಂತರ ಅವರ ಆಶೀರ್ವಚನ ಬೇರೆ.
ಅಲ್ಲಿಯವರೆಗೆ ನನಗೆ ಎಂದೂ, ಬಾಲ್ಯದಲ್ಲಿಯೂ, ಯಾವ ಸ್ವಾಮಿಯ ಕಾಲಿಗೆ ಬೀಳುವ ಅವಶ್ಯಕತೆ ಬಂದಿರಲಿಲ್ಲ. ಅಂದೂ ಕೂಡ ಬೀಳಲಿಲ್ಲ. ಅಲ್ಲಿದ್ದವರಿಗೆಲ್ಲಾ ,ಆ ಸ್ವಾಮಿಗೂ ಆಶ್ಚರ್ಯ. ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಅನವಶ್ಯವಾಗಿ ಅದಕ್ಕೆ ಸಂಬಂಧವೇ ಇಲ್ಲದಿದ್ದವರೊಬ್ಬರಿಗೆ ಎಲ್ಲರಿಗಿಂತ ಹೆಚ್ಚಿನ ಗೌರವ. ಅದಕ್ಕಾಗಿ ಗಂಟೆಗಟ್ಟಳೇ ಸಮಯ ವ್ಯರ್ಥ. ಅಧಿಕಾರಿಗಳು ವೇದಿಕೆಯ ಮೇಲೆಯೇ ಕಾಲಿಗೆ ಬೀಳುವುದು ಇವೆಲ್ಲ ನನಗೆ ಹೊಸತು. ಮುಂದಿನ ದಿನಗಳಲ್ಲಿ ಇಂತಹ ಇನ್ನೂ ಎಷ್ಟೋ ಆಶ್ಚರ್ಯಗಳು ಎದುರಾಯಿತು.
ವಚನಗಳ ಬಗ್ಗೆ ಬರೆವ ಈ ಲೇಖನದಲ್ಲಿ ಇದೇನು ಶಿವ ಪೂಜೆಯಲ್ಲಿ ಕರಡಿ ಬಿಟ್ಟಂತೆ ಎಂದುಕೊಳ್ಳಬೇಡಿ.ವಚನಗಳು ಹುಟ್ಟಿದ, ಅವುಗಳನ್ನು ತಮ್ಮ ಧಾರ್ಮಿಕ ಗ್ರಂಥವೆಂದು ಪರಿಗಣಿಸುವ ಸಮಾಜವನ್ನು ತಿಳಿದುಕೊಳ್ಳದೇ ವಚನಗಳನ್ನು ಅರ್ಥ ಮಾಡಿಕೊಳ್ಳವುದೆಂಬುದು ದಕ್ಷಿಣ ಕರ್ನಾಟಕದ ನಾಲ್ಕಾರು ಜಿಲ್ಲೆಗಳಲ್ಲಿ ಬೆಳೆದು, ಕೆಲಸ ಮಾಡಿ ಇಲ್ಲಿಯ ಸಮಾಜದ ವೈವಿಧ್ಯತೆ, ಸಾಮ್ಯತೆಗಳ ಸಾಕಷ್ಟು ಅರಿವಿದ್ದ ನನಗೆ ಧಾರವಾಡ, ರಾಯಚೂರು ಜಿಲ್ಲೆಗಳಲ್ಲಿ ಕೆಲಸ ಮಾಡಬೇಕಾಗಿ ಬಂದಾಗ ಅಲ್ಲಿಯ ಹಳ್ಳಿ ಪಟ್ಟಣಗಳ ಬದುಕಿನ ಸ್ವರೂಪ ದೊಡ್ಡ ಆಶ್ಚರ್ಯವನ್ನೇ ಉಂಟು ಮಾಡಿತು.
ಉತ್ತರ ಕರ್ನಾಟಕದಲ್ಲಿ ಸಮಾಜದ ಸಂಘಟನೆಯನ್ನೇ ರೂಪಿಸಿದ ಮಠಗಳು

ಅಲ್ಲಿಯ ಊಟ,ಉಡುಪು, ಮಣ್ಣು, ಬೆಳೆ, ಜನರ ವರ್ತನೆ ಎಲ್ಲವೂ ಹೊಸತು. ಅವರ ಹಬ್ಬ ಹುಣ್ಣಿಮೆಗಳು- ಎಳ್ಳಮಾಸೆ, ಮಣ್ಣೆತ್ತಿನ ಅಮಾಸೆ, ಕಾರ ಹುಣ್ಣಿಮೆಗಳು ಇವುಗಳ ಜೊತೆಗೆ ಅಲ್ಲಿಯ ಲಿಂಗಾಯತ ಮಠಗಳು, ಸ್ವಾಮಿಗಳು, ಪ್ರತಿ ಊರಿನಲ್ಲಿ ಯೂ ಒಂದೋ ಎರಡೋ ಮಠಗಳು ದೊಡ್ಡ ಊರಾದರೆ ನಾಲ್ಕೈದು ಮಠಗಳು. ಮತ್ತು ಅಲ್ಲಿ ಬಹಳಷ್ಟು ದೊಡ್ಡ ಊರುಗಳೇ. ಈ ಭಾಗದ ಹಳ್ಳಿಗಳ ನಾಲ್ಕು ಐದು ಪಟ್ಟು ದೊಡ್ಡ್ಟ ಊರುಗಳು. ತಾಲೂಕು ಕೇಂದ್ರ ಮತ್ತಿತರ ವ್ಯಾಪಾರದ ಕೇಂದ್ರಗಳಲ್ಲಿ ಹತ್ತು ಹದಿನೈದು ಮಠಗಳು. ಈ ಮಠಗಳಿಗೆ ಒಂದು ನಿಶ್ಚಿತ ಲಿಂಗಾಯತ ಭಕ್ತ ಸಮುದಾಯ. ಮಠಗಳು, ಸ್ವಾಮಿಗಳು ಲಿಂಗಾಯತರದ್ದಾದರೂ ಬ್ರಾಹ್ಮಣರನ್ನು ಹೊರತುಪಡಿಸಿ ಬೇರೆ ಜಾತಿಗಳ ಜನರೂ ಅವರ ಮಾತನ್ನು ಮೀರದ ಭಕ್ತಿಭಾವ. ಅಲ್ಲಿನ ಪ್ರತಿಯೊಂದು ಧಾರ್ಮಿಕ , ಕೌಟುಂಬಿಕ, ಸಾಮಾಜಿಕ, ಶಾಲಾ- ಕಾಲೇಜುಗಳ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಒಬ್ಬರು ಕೆಲವೊಮ್ಮೆ ಹೆಚ್ಚು ಜನರ ಉಪಸ್ಥಿತಿ, ಆಶೀರ್ವಚನಗಳು. ಸಾಮಾನ್ಯವಾಗಿ ಭಾಷಣವೆಂದರೆ ಒಂದೆರಡಾದರೂ ವಚನಗಳನ್ನು ಉದಾಹರಿಸುವುದು- ಸ್ವಾಮಿಗಳು ಮಾತ್ರವಲ್ಲ ಬೇರೆ ಭಾಷಣಕಾರರೆಂಬುವರು ಕೂಡ. ಈ ರೀತಿ ಮಠಗಳು ಅಲ್ಲಿಯ ಜನರ ದಿನದಿನದ ಜೀವನದಲ್ಲಿ ಹಾಸು ಹೊಕ್ಕಾಗಿವೆ. ಇನ್ನು ಎಲ್ಲಾ ಮಠಗಳಲ್ಲಿ ಅಲ್ಲವಾದರೂ ಆಗಿಂದಾಗ್ಗೆ ಪ್ರವಚನಗಳು,ಬಸವ ಪುರಾಣಗಳು, ಅಕ್ಕನ ಬಳಗಗಳು. ದಕ್ಷಿಣ ಕರ್ನಾಟಕದ ಹಳ್ಳಿಗಳಲ್ಲಿನ ಯಾವಾಗಲೋ ಒಮ್ಮೆ ದೇವಸ್ಥಾನಕ್ಕೆ ಭೇಟಿ ನೀಡುವ, ಅಲ್ಲಿಯ ಪೂಜಾರಿಗಳಿಗೂ ಜನರಿಗೂ ಪೂಜೆಯ ನಂತರ ಸರಿ ಸುಮಾರು ಭೇಟಿಯೇ ಇಲ್ಲದ ಸಡಿಲ ಸಂಬಂಧಕ್ಕೂ ಗಣನೀಯ ವ್ಯತ್ಯಾಸ . ಅಲ್ಲಿಯ ಸಮಾಜದ ರಚನೆ ಮಠಗಳ ಸುತ್ತ ಇದೆಯೇನೋ ಎಂಬಂತಹ ವಾತಾವರಣ. ಈ ಮಠಗಳಲ್ಲಿ ಬಸವಾದಿ ಶರಣರನ್ನು ಪೂಜಿಸುವ ವಿರಕ್ತ ಪೀಠಗಳು- ಅವರನ್ನ ಕಡೆಗಣಿಸುವ, ರೇವಣ ಸಿದ್ಧ, ಮರುಳು ಸಿದ್ಧ ಮೊದಲಾದ ಪಂಚಾಚಾರ್ಯರನ್ನು, ಪಂಚ ಪೀಠಗಳನ್ನು ಮಾತ್ರ ಗುರುತಿಸುವ ಗುರು ಪೀಠಗಳು ಎಂಬ ಬೇಧ. ಈ ಅಸಂಖ್ಯ ಗುರು ಪೀಠಗಳ ಹೆಸರನ್ನು ಹೊತ್ತ- ಹಿರೇ ಮಠ, ಪಂಚಾಕ್ಷರಿಮಠ, ಸುಳ್ಳದ ಮಠ, ನಾಗಲೋಟಿ ಮಠ, ಇತ್ಯಾದಿ ಜಂಗಮ ಜಾತಿಯ ( ಬಸವಾದಿ ಶರಣರು ಜಂಗಮರಲ್ಲ, ಶರಣರನ್ನು ಗುರುತಿಸಲಿಚ್ಚಿಸದ ಗುರು ಪೀಠಗಳಿಗೆ ಸೇರಿದವರು ) ಜನರು.
ಇನ್ನು ಜಾತಿಗಳಲ್ಲಿಯೂ ಈ ಭಾಗದಲ್ಲಿ ಕೇಳಿರದ ಬಣಜಿಗ,ಪಂಚಮಸಾಲಿ,ಹಡಪದ, ಇತ್ಯಾದಿ ಹೆಸರುಗಳು. ದಕ್ಷಿಣ ಕರ್ನಾಟಕದ ಭಾಗದಲ್ಲಿ ಕನ್ನಡ ಮನೆ ಮಾತಾದ ಪಾರಂಪರಿಕ ಕ್ಷೌರಿಕರು, ವ್ಯಾಪಾರಿಗಳು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಸಾಮಾನ್ಯವಾಗಿ ಇವರು ತೆಲುಗು ಮಾತನಾಡುವವರು. ಆದರೆ ಅಲ್ಲಿ ಎಲ್ಲ ಪಾರಂಪರಿಕ ವೃತ್ತಿ ಜಾತಿಗಳವರೂ ಕನ್ನಡದವರು. ಹೀಗಾಗಿ ಲಿಂಗಾಯತ ಎಂಬುವರಲ್ಲಿ ಹಿಂದೂ ಧರ್ಮದ ಅನೇಕ ಜಾತಿಗಳು.
ಈ ಎಲ್ಲ ಅಂಶಗಳು ನನಗೆ ಹುಟ್ಟಿಸಿದ ಅಚ್ಚರಿ, ಅಲ್ಲಿಯ ಸಮಾಜದಲ್ಲಿ ಪ್ರಧಾನ ಪಾತ್ರವಹಿಸುತ್ತಿರುವ ಲಿಂಗಾಯತ ಧರ್ಮದ ಬಗ್ಗೆ ಕುತೂಹಲ ಹುಟ್ಟುವಂತೆ ಮಾಡಿದವು. ಅಲ್ಲಿಂದಲೇ ಲಿಂಗಾಯತ ಧರ್ಮದ ಹಾಗೂ ವಚನಗಳ ಅಧ್ಯಯನ ಆರಂಭವಾಯಿತು.( ಈ ಮಧ್ಯೆ ಭಾಷಣಗಳಲ್ಲಿ ವಚನಗಳ, ವಚನಕಾರರ ಉದಾಹರಣೆ ನೀಡುತ್ತಾ ನನ್ನ ವೃತ್ತಿಯಾದ ಕೃಷಿ ತಂತ್ರ ಜ್ಞಾನವನ್ನು ರೈತರಿಗೆ ಮನದಟ್ಟು ಮಾಡಲು ಹಲವು ಕೃಷಿವಚನಗಳನ್ನೂ ರಚಿಸಿ ಹೇಳಲು ಆರಂಭಿಸಿದೆ. ಕೆಲವನ್ನು ಅಲ್ಲಿಯ ಪತ್ರಿಕೆಗಳು ಪ್ರಕಟಿಸಿದವು. ).
ವಚನ ಶಿಖರಗಳ ಏರಾಟ ಆರಂಭವಾಯಿತು
ಹೀಗೆ ನನ್ನ ಅಧ್ಯಯನ ಲಿಂಗಾಯತ ಸಮಾಜ, ಹಾಗೂ ಅವರ ತತ್ವಗಳು ಎರಡನ್ನೂ ಒಳಗೊಳ್ಳತ್ತಾ ಸಾಗಿತು. ಮೊದಮೊದಲು ನನಗೆ ಸಿಕ್ಕ ಲೇಖನ ಹಾಗೂ ಪುಸ್ತಕಗಳು, ಸಾಹಿತಿಗಳು ಬರೆದ ಪ್ರಬಂಧಗಳು. ನಂತರ ಕನರ್ಾಟಕ ವಿಶ್ವ ವಿದ್ಯಾಲಯ ಪ್ರಕಟಿಸಿದ ವಚನಗಳ ಸಂಕಲನಗಳು, ಶೂನ್ಯ ಸಂಪಾದನೆಗಳು. ಕರ್ನಾಟಕ ಸರ್ಕಾರ ಸಮಗ್ರ ವಚನ ಸಂಪುಟಗಳನ್ನು ಪ್ರಕಟಿಸುವ ಮುನ್ನ ವಚನಗಳನ್ನೂ ಸಾಕಷ್ಟು ಸಮಗ್ರವಾಗಿ ಪ್ರಕಟಿಸಿ ಜನತೆಗೆ ಒದಗಿಸಿದ ಕೀರ್ತಿ ಈ ವಿವಿಗೆ ಸಲ್ಲುತ್ತದೆ. ಹಾಗೆಯೇ ಶೂನ್ಯ ಸಂಪಾದನೆ, ಹರಿಹರನ ರಗಳೆಗಳು, ಇತರ ಕಾವ್ಯಗಳು ಕೆಲವು ಪುರಾಣಗಳನ್ನೂ ಅದು ಪ್ರಕಟಿಸಿದೆ. ಇವೆಲ್ಲವುಗಳ ಜೊತೆಗೆ ಪಂಚಾಚಾರ್ಯ ಪೀಠಗಳು ಮಾನ್ಯ ಮಾಡುವ ವಿರಕ್ತ ಪೀಠಗಳು ಲೆಕ್ಕಿಸದ ಸಿದ್ಧಾಂತ ಶಿಖಾಮಣಿಯೆಂಬ ಸಂಸ್ಕೃತ ಶಾಸ್ತ್ರ ಗ್ರಂಥವೂ ಇದೆ. ಇವುಗಳನ್ನೂ ಒಟ್ಟಯಿಸಿಕೊಂಡು ಅಧ್ಯಯನದ ಪ್ರಯತ್ನ ಮಾಡಿದೆ. ಆಗಲೇ ನನಗೆ ಅರಿವಾಗಿದ್ದು ದೂರದ ಬೆಟ್ಟ ನುಣ್ಣಗೆ ಎಂಬ ಮಾತಿನ ನೈಜ ಅರ್ಥ. ಒಬ್ಬೊಬ್ಬ ವಚನಕಾರನೂ/ ಳೂ ಒಂದೊಂದು ಶಿಖರ ಸಮ. ಬಹಳ ಜನಕ್ಕೆ ಗೊತ್ತಿಲ್ಲದ ಮೂರೇ ವಚನಗಳನ್ನು ಬರೆದ ಕದಿರ ರೆಮ್ಮವ್ವೆ ಅಥವ ಒಕ್ಕಲಿಗ ಮುದ್ದಣ್ಣನೂ ಕೂಡ. ಹೀಗೆ ನನ್ನ ವಚನ ಶಿಖರಗಳ ಏರಾಟ ಆರಂಭವಾಯಿತು.
ವಚನಗಳ ಭಾಷೆ ಹಿಂದಿನ ಕಾಲದ ಸಾಹಿತ್ಯಕ್ಕೆ- ಪಂಪ,ರನ್ನರ ಕಾವ್ಯಗಳಿಗೆ ನಂತರದ ಕಾವ್ಯಗಳಿಗೆ ಹೋಲಿಸಿದರೆ ಸರಳ. ಅವುಗಳ ಕಾವ್ಯ ಸೌಂದರ್ಯದಿಂದ ಅನೇಕ ವಚನಗಳು ಆಕರ್ಷಕ. ಜನ ಜೀವನದಿಂದ ನೀಡುವ ಉಪಮೆ ಉದಾಹರಣೆಗಳಿಂದ ಅರ್ಥ ಮಾಡಿಕೊಳ್ಳುವುದು ಸುಲಭವೆಂಬಂತೆ ಮೇಲ್ನೋಟಕ್ಕೆ ಕಾಣಿಸುತ್ತವೆ. ಆದರೆ ಅವುಗಳ ವಸ್ತು ಕಾವ್ಯಗಳಂತೆ ಕಥೆಯಲ್ಲ.ವಚನಗಳ ಶೇ. 90 ಭಾಗ ಹೊಸತೊಂದು ಧಾರ್ಮಿಕ ಪಂಥದ ತತ್ವಗಳ ಮಂಡನೆ, ವಿವರಣೆ. ಅವುಗಳನ್ನು ಅನುಸರಿಸಬೇಕೆಂಬ ಒತ್ತಾಯ. ಅವುಗಳಲ್ಲಿ ಇತರೆಲ್ಲಾ ಧಾರ್ಮಿಕ ಪಂಥಗಳಲ್ಲಿನಂತೆ ಪರಮತ ಖಂಡನೆಯಿದ್ದರೂ ಅವುಗಳನ್ನೂ ಬಿಡಿ ಬಿಡಿ ಯಾಗಿ ಮಾಡಲಾಗಿದೆ.
ಆದರೆ ಬೇರೆಲ್ಲಿಯೂ ಕಾಣದ ವಚನಗಳ ಧರ್ಮಕ್ಕೆ ವಿಶೇಷವಾದ ವಿಷಯವೆಂದರೆ ತಮ್ಮ ವಿಚಾರಗಳನ್ನು ಹೊಸದಾಗಿ ಅಪ್ಪಿಕೊಂಡವರಿಗೆ ಪದೇ ಪದೇ ಅವರ ವಿಚಾರಗಳನ್ನು ಅರ್ಥ ಮಾಡಿಕೊಳ್ಳಬೇಕೆಂಬ, ಪಾಲಿಸಬೇಕೆಂಬ ಅನುರೋಧ ಅನುಸರಿಸದವರ ಟೀಕೆ ಅದನ್ನು ದುರುಪಯೋಗಿಸಿಕೊಳ್ಳುವವರ ಖಂಡನೆ. ಹೀಗಾಗಿ ಬೇರೆ ಧಾರ್ಮಿಕ ಗ್ರಂಥಗಳಲ್ಲಿ ಪರಮತದ ಖಂಡನೆಯೇ ಅವರ ಮತದ ಮಂಡನೆಯ ಪಾತ್ರವನ್ನು ವಹಿಸಿದರೆ ಇದರಲ್ಲಿ ಸ್ವಮತೀಯರ ಟೀಕೆಯೇ ಹೆಚ್ಚು.
ಮತ್ತೆ ಇತರ ಕೆಲ ದರ್ಶನಗಳಲ್ಲಿಯಂತೆ, ಗೀತೆಯಲ್ಲಿನಂತೆ, ವಚನಗಳಿಗೆ ಸರಿ ಸುಮಾರು ಸಮಕಾಲೀನವಾದ ತ್ರಿಮತಸ್ಥ ಆಚಾರ್ಯರುಗಳ ಗ್ರಂಥಗಳಂತೆ ವಿಚಾರಗಳನ್ನು ತಾರ್ಕಿಕವಾಗಿ ಮಂಡಿಸಿದ ಸೂತ್ರಗಳು ಅವುಗಳಿಗೆ ಬರೆದ ಭಾಷ್ಯಗಳೂ ಅಲ್ಲ. ಧಾರ್ಮಿಕ ತತ್ವಗಳನ್ನು ರೂಪಿಸುವಲ್ಲಿ ನಡೆದ ಸಂವಾದಗಳು-ವಿವಾದಗಳು. ಆದ್ದರಿಂದಾಗಿ ಪರಸ್ಪರ ವಿರುದ್ಧ ವಿಚಾರಗಳನ್ನೂ ಮಂಡಿಸುತ್ತವೆ ಅದರಿಂದಾಗಿ ಆ ಕಾಲ ಘಟ್ಟದ ಧಾರ್ಮಿಕ ಪರಿಭಾಷೆಯ ಅದರಲ್ಲಡಗಿದ ಸಿದ್ಧಾಂತಗಳ ಅರಿವಿಲ್ಲದೇ ಅವುಗಳಲ್ಲಿ ಒಂದು ಸಣ್ಣ ಭಾಗವನ್ನು ಮಾತ್ರ ಅರ್ಥ ಮಾಡಿಕೊಳ್ಳಲೂ ಅಸಾಧ್ಯವೆಂಬುದು ನನಗೆ ಅರಿವಾಯಿತು. ಅದರಲ್ಲಿಯೂ ಸಾಮಾನ್ಯವಾಗಿ ಬೇರೇ ಮತ, ಪಂಥಗಳಲ್ಲಿ ಕಾಣದ ಬೆಡಗಿನ ವಚನಗಳು ಎಂಬ ವಿಶಿಷ್ಠ ರೂಪದ ವಚನಗಳ ಅರ್ಥೈಕೆಯಂತೂ ಕಬ್ಬಿಣದ ಕಡಲೆ.
ಎಂದೂ ಕೂಡದ ಸಮನಾಂತರ ಹಳಿಗಳಂತೆ ಅಧ್ಯಯನಗಳು

ಕರ್ನಾಟಕದಲ್ಲಿ ವಚನಗಳ ತಿರುಳನ್ನು ಅರ್ಥೈಸುವುದಕ್ಕೆ ನಾನಾ ರೂಪದ ಪ್ರಯತ್ನಗಳು ನಡೆದಿವೆ, ಕನ್ನಡ ನವೋದಯದ ಕಾಲದಿಂದ ಆರಂಭವಾದ ಹೊಸ ಯುಗದಲ್ಲಿ ಕನ್ನಡದ ಸಾಹಿತಿಗಳು ವಚನಗಳ ಸಾಹಿತ್ಯಿಕ ಸೌಂದರ್ಯಕ್ಕೆ, ಭಾಷೆಯ ಬಳಕೆಗೆ, ಸಾಮಾಜಿಕ ಮೌಲ್ಯಗಳಿಗೆ ಮಾರು ಹೋಗಿದ್ದಾರೆ. ಅಸಂಖ್ಯ ಪ್ರಬಂಧಗಳನ್ನು ಬರೆದಿದ್ದಾರೆ. ಮತ್ತೊಂದು ಕಡೆ ಮಠಗಳ ಜಚನಿಯವರಂತಹ ಕೆಲ ಸ್ವಾಮಿಜಿಗಳು, ಅವುಗಳ ಜೊತೆ ಗುರುತಿಸಿಕೊಂಡ ವಿದ್ವಾಂಸರು ವಚನಗಳ ಧಾರ್ಮಿಕ ಸಿದ್ಧಾಂತಗಳ ಬಗ್ಗೆ -ಷಟ್ಸ್ಥಲ,ಅಷ್ಠಾವರಣ, ಲಿಂಗಾಂಗ ಸಾಮರಸ್ಯ ಇಂತಹವುಗಳ ಬಗ್ಗೆ ಮಠಗಳಲ್ಲಿ ಉಪನ್ಯಾಸ ನಿಡುತ್ತಾ, ಮಠದ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಾ ಹೋದರು.ಇವರು ವಚನಗಳ ಸಾಮಾಜಿಕ, ಸಾಹಿತ್ಯಿಕ ಮೌಲ್ಯಗಳ ಬಗ್ಗೆ ಬಹಳ ತಲೆ ಕೆಡಿಸಿಕೊಳ್ಳಲಿಲ್ಲ. ಹಾಗೆಯೇ ಸಾಹಿತಿಗಳು ಹೆಚ್ಚಾಗಿ ವಚನಗಳ ಬಹುಭಾಗವನ್ನು ಆವರಿಸಿದ ಧಾರ್ಮಿಕ, ತಾತ್ವಿಕ ಅಂಶಗಳ ಬಗ್ಗೆ ಗಮನ ನೀಡಲಿಲ್ಲ.ವಚನಗಳಲ್ಲಿ ಎದ್ದು ಕಾಣುವ ಜಾತಿವಿರೋಧ ಹಾಗೂ ಮಹಿಳಾ ಸಮಾನತೆಯ ಮೌಲ್ಯಗಳು ಹಾಗೂ ವಚನಗಳಲ್ಲಿ ಬಹಳ ಒತ್ತು ನೀಡಿ ಮಂಡಿತವಾದ ತತ್ವಗಳು ಇವೆರಡರ ನಡುವೆ ಏನಾದರೂ ಅಂತರಿಕ ಸಂಬಂಧವಿರಬಹುದೆಂಬ ಯೋಚನೆಯೂ ಹೊಳೆಯದಂತೆ, ಎಂದೂ ಕೂಡದ ಸಮಾನಾಂತರ ಹಳಿಗಳಂತೆ ಅಧ್ಯಯನ ಸಾಗಿತು. ಹೀಗೆ ಪ್ರತ್ಯೇಕಗೊಂಡ ಇವೆರಡೂ ಅಧ್ಯಯನ ವಲಯಗಳನ್ನು ಆವರಿಸಿದ ಆರ್. ಸಿ. ಹಿರೇಮಠರು, ಎಲ್. ಬಸವರಾಜುರವರು ನೀಡಿದ ಕಾಣಿಕೆ ಅನುಪಮವಾದದ್ದು. ಆದರೆ ಇಂತಹ ಪ್ರಯತ್ನಗಳು ಬಹಳ ಅಪರೂಪವಾದದ್ದರಿಂದ ಎರಡೂ ವಲಯಗಳ ಶೋಧಗಳ ಸಮಗ್ರೀಕರಣಗೊಂಡ ದೃಷ್ಠಿಯ ಉನ್ನತ ಹಂತದ ಅರಿವು ಲಭ್ಯವಾಗಲೇ ಇಲ್ಲ.
(ಇನ್ನೂ ಇದೆ…)





ನಾಗರಾಜ್ ಸರ್, ಒಳ್ಳೆಯ ಆರಂಭ. ಮುಂದಿನ ಭಾಗಗಳನ್ನು ಕಾಯುವಂತೆ ಮಾಡಿದೆ.
com. eega maadiruva aarambha nillisabedi… 5 varshada hinde haverige hoguvaaga bareva maatu aadiddu nanage nenapide… vachana saahitya kuritu e hottu bareyabekide…
dhanyavaadagalu.
neela
Sir.. Mundeyu Vachana sahitya bagge bariyiri
vachanagala kuritu hosa asakti huttisuvantide .
ಮಾನ್ಯರೇ ,
ನಿತ್ಯ ಜೀವನದ ಮಾತುಕತೆಗಳಲ್ಲಿ ವಚನಗಳನ್ನು ಆಡುವ ಮತ್ತು ಕೇಳುವ ಜನ ಸಮುದಾಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ವಿಶ್ಲೇಷಣೆ ಮಾಡಲು ತೊಡಗಿರುವ ನಿಮ್ಮ ಬರಹ ಓದುಗರಲ್ಲಿ ವಚನಗಳ ಬಗ್ಗೆ ಹೊಸ ಬಗೆಯ ಚಿಂತನೆಗಳನ್ನು ಮೂಡಿಸುವಂತಿದೆ .
ಸಿ ಪಿ ನಾಗರಾಜ ಬೆಂಗಳೂರು
vachana ondu adbhutha odu. adara bagge nimma vishleshane odalu asaktiyinda kayutidene. kshamisi, ondu sanna tiddupadi shivapujeyalli karadi bittante alla- shivapujeyalli karadige bittante embudu sariyada balake. adu tappagi janara bayalli hagagide. bahala mukyavadudanne bittiddeve ennuva arthadalli balasuttare. dayavittu tappu tiliyabedi.