ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲ್ಯಾಬಿನಿಂದ ತಪ್ಪಿಸಿಕೊಂಡು ಬಂದ ಕಪ್ಪೆ..

ಸ್ವಗತ ಲಹರಿ

ಲಕ್ಷ್ಮಣ್ ವಿ ಎ 

ಪ್ರಾಣಿಶಾಸ್ತ್ರದ ಲ್ಯಾಬಿನಿಂದ
ಹೇಗೋ ತಪ್ಪಿಸಿಕೊಂಡು ಬಂದ ಕಪ್ಪೆ ಯೊಂದು
ತಥಾಗತನ ಹೆಗಲೇರಿ ಸ್ವಗತದಲ್ಲಿದೆ

ಏನು ಏನಿದೆಲ್ಲಾ ಯಾರು ನಾನು
ಹೋಗಬೇಕಾಗಿರುವುದಾದರೂ ಎಲ್ಲಿಗೆ ಎಂಬ
ಪ್ರಶ್ನೆ ನಿನ್ನನ್ನೂ ಕಾಡಿದೆ
ಹಗಲು ರಾತ್ರಿ

fb_img_1431025050641ಬಯಲಿನಲ್ಲಿ, ನೀರಿನಲ್ಲಿ
ಕಲ್ಲು ಪೊಟರೆಗಳಲ್ಲಿ ಗುಹಾವಾಸಿಯಾಗಿದ್ದ
ನನ್ನ ಹೆಜ್ಜೆಗುರುತು ಹಿಡಿದು ಬಂದು
ಮೊದಲು ಬಲೆ ಬೀಸಿ ಹಿಡಿಯುತ್ತಾರೆ
ಆಮೇಲೆ ನನಗೊಂದು
ಜಾತಿ,ಉಪಜಾತಿಯ ವರ್ಗೀಕರಣ ಮಾಡಿ
ಪ್ರಯೋಗಾಲಯದ ಜಾಡಿಯೊಳಗೆ
ಲೇಬಲ್ಲು ಅಂಟಿಸಿ
ಹಸಿವಾಗದಂತೆ ಅರವಳಿಕೆ ಕೊಡುತ್ತಾರೆ
ನೀರಿನಲ್ಲೆಲ್ಲೂ ಕಾಣದ ಈ ಜಾತಿ
ನೆಲದ ಮೇಲೇಕೆಂದು ಗೊಂದಲವಾಗಿ
ಹತಾಶನಾಗುತ್ತೇನೆ.

ನಂತರ ಎದೆಯ ಬಗೆದು
ಮನುಷ್ಯನ ಎದೆಬಡಿತದೊಂದಿಗೆ
ತಾಳೆ ನೋಡುತ್ತಾರೆ
ಮೆದುಳು ,ಕಣ್ಣು ಕಿತ್ತು
ಶೀಘ್ರ ಸ್ಖಲನ,ನಿಮಿರು ದೌರ್ಬಲ್ಯ
ಬಂಜೆತನ,ಹೃದಯ ಬೇನೆಗಳ
ಕಾರ್ಯ ಕಾರಣಸಂಬಂಧಗಳ
ಸಮೀಕರಿಸಿ ರೋಗ ನಿದಾನ ಮಾಡುತ್ತಾರೆ

ನನಗೆ ಗೊತ್ತು
ಬುದ್ಧನಾಗುವ ಮೊದಲು
ನೀನೂ ಸಿದ್ಧಾರ್ಥ ನಾಗಿದ್ದೆ.
ನೀನೂ ನಿನ್ನ ಆತ್ಮದ ಕುಲುಮೆಯ
ಪ್ರಯೋಗಾಲಯದಲ್ಲಿ ಬೆಂದು ಬಸವಳಿದು ಪಾಸಾಗಿ
ಬಂದಿರುವವನೆ
,ಲೌಕಿಕ,ಅಲೌಕಿಕ,
ಆರ್ಥಿಕ ಪರಮಾರ್ಥಿಕ
ದೇಶ ಕಾಲದ ಸೀಮೆ ಮೀರಿದ ನೀನೂ
ನನ್ನಂತೆಯೇ ಉಭಯವಾಸಿ.

ತಥಾಗತನಾಗುವುದೆಂದರೆ ಸುಮ್ಮನೆ ಮಾತಾ?

ಈಗ ಕವಿತೆಯೊಂದರ
ಸಾಲುಗಳಿಂದ ಕಳಚಿಬಿದ್ದ ಅನಾಥ ಅಕ್ಷರದಂತೆ
ನಿನ್ನ ಹೆಗಲೇರಿ ಕುಳಿತಿರುವೆ
ಯಾಕೆ ಯಾರೂ ಇಲ್ಲಿ
ಆತ್ಮಸಾಕ್ಷಿಯ ದನಿಯಿಂದ
ಪಿಸುನುಡಿಯುತಿಲ್ಲ?
ಎಲ್ಲೆಲ್ಲೂ ಬರೀ ಮಾತು
ಮಾತೆಂದರೆ ಮಾತೂ ಅಲ್ಲ
ಬರೀ ಸದ್ದು, ಘೋಷಣೆ,ಬಹುಪರಾಕ್ ಬಹುಪರಾಕ್
ಧ್ವನಿಗೆ ಬರೀ ಪ್ರತಿಧ್ವನಿ

ಮೋಕ್ಷವ ಹುಡುಕುತ
ಪ್ರೀತಿಯ ಬಲೆಯಲಿ ಬಂಧಿಯಾದ ನಿನ್ನಂತೆಯೆ
ಬದುಕುವ

ಆಸೆ ಹುಟ್ಟಿದೆ ಮರಣೋತ್ತರವಾಗಿ.

‍ಲೇಖಕರು Admin

28 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading