
ಅಗ್ರಹಾರ ಕೃಷ್ಣಮೂರ್ತಿ
ಕುಂವೀ ಲೋಕಪ್ರಿಯ ಲೇಖಕ. ಕನ್ನಡದಲ್ಲಿ ಬರೆಯುತ್ತಿರುವ ವಿಶಿಷ್ಟ ಭಾರತೀಯ ಲೇಖಕ. ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಂದು ಗಟ್ಟಿಸ್ಥಾನ ನಿರ್ಮಿಸಿಕೊಂಡಿರುವ ಲೇಖಕ. ಹೆಚ್ಚೆಚ್ಚು ಬರೆಯುವ, ಸಮೃದ್ಧವಾಗಿ ಬರೆಯುವ ನಿರಂತರ ಲೇಖಕ. ಯಾವುದನ್ನು ಇಂಗ್ಲೀಷಲ್ಲಿ prolific writer ಎಂದು ಕರೆಯುತ್ತಾರೊ ಅಂಥ ಲೇಖಕ. ಅವರ ತಲೆಮಾರಿನ ಲೇಖಕರಲ್ಲಿ ಅವರಷ್ಟು ಬರೆದವರು ಇಲ್ಲವೇ ಇಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಹೀಗೆ ಸಮೃದ್ಧವಾಗಿ, ಬಿಡುವಿಲ್ಲದೆ ಬರೆಯುತ್ತಲೇ ಇರುವ ಮೂಲಕ ಒಬ್ಬ ಲೇಖಕ ಕೌಶಲ್ಯ ಮತ್ತು ಪರಿಪೂರ್ಣತೆಯನ್ನು ಸಾಧಿಸುವ ಕಡೆಗೆ ಸದಾ ಮಗ್ನನಾಗಿರುತ್ತಾನೆ.
ಕಥಾ ವಸ್ತುವಿನ ಆಯ್ಕೆ, ಮತ್ತು ವೈವಿಧ್ಯತೆಯನ್ನು ಕಂಡರಿಸುವ ದಿಕ್ಕಿನಲ್ಲಿ ನಿರಂತರ ಹುಡುಕಾಟ ಮತ್ತು ಸಂಶೋಧನೆಯಲ್ಲಿ ತೊಡಗುತ್ತಾನೆ. ತ್ಯಾಜ್ಯ, ಗೌಣ ಅಥವಾ ನಿರ್ಲಕ್ಷಿಸಲ್ಪಟ್ಟ ವಸ್ತು ಸಂಗತಿಗಳನ್ನು, ಮತ್ತು ನಗಣ್ಯ ಜೀವಿಗಳಿಗೆ, ಪ್ರಾಣಿಗಳಿಗೆ ಪ್ರಾಮುಖ್ಯತೆಯನ್ನು, ಔನತ್ಯವನ್ನು ಕಲ್ಪಿಸುವ ಮೂಲಕ, ಭೂಮಸದೃಶ, ಮಹೋನ್ನತವೆನ್ನಿಸುವ ದೊಡ್ಡಸ್ತಿಕೆಯ ವಸ್ತುಸಂಗತಿಗಳನ್ನು, ಘನಮಹಿಮರನ್ನು ಸಾಮಾನ್ಯಗೊಳಿಸುವ, ಅಲ್ಪವನ್ನಾಗಿಸುವ ತಮ್ಮ ಸೃಜನಶೀಲ ಕಾಯಕದಲ್ಲಿ ಹೊಸ ಹೊಸ ರೂಪಕಗಳನ್ನು ಸೃಷ್ಠಿಸುತ್ತಾನೆ.
ರೂಢಿಗತ ಸಾಹಿತ್ಯಿಕ ನಿಯಮಗಳನ್ನು ಪಲ್ಲಟಗೊಳಿಸುತ್ತಾನೆ. ಅಲಿಗಿರಿ, surrealism ಎಂದು ಕರೆಯಲಾಗುವ ಅತಿವಾಸ್ತವದ ಎಲ್ಲೆಗಳನ್ನು ದಾಟುತ್ತಾನೆ. ಸವಿಯಾದ ಸುಂದರ ಹಣ್ಣನ್ನು ‘ಯಾಪಿಲ್ಲು’ ಮಾಡಿಬಿಡುತ್ತಾನೆ. ಕನ್ನಡದ ಅತ್ಯುತ್ತಮ ವಿಮರ್ಶಕರಾದ ಪ್ರೊ ಓ. ಎಲ್. ನಾಗಭೂಷಣಸ್ವಾಮಿಯವರು ಕುಂವೀಯವರ ಕಥನ ಕಲೆ ಬಗ್ಗೆ ‘ಚಿಕ್ಕ ಮಕ್ಕಳು ದೊಡ್ಡವರ ಅಂಗಿ, ಕನ್ನಡಕ, ಪಾದರಕ್ಷೆಗಳನ್ನು ಹಾಕಿಕೊಂಡು ಮನೆ ತುಂಬ ಓಡಾಡುತ್ತಿರುವಂತಿರುತ್ತದೆ’ ಎಂದು ಒಂದು ಭಾಷಣದಲ್ಲಿ ಹೇಳಿದ್ದರು. ವೈಯಕ್ತಿಕವಾಗಿ ನನಗೆ ಇದು ಇಷ್ಟವಾದ ರೂಪಕ. ಕುಂವೀಯವರ ಸಾಹಿತ್ಯವನ್ನು ಓದಿಬಲ್ಲವರಿಗೆ ಇದೊಂದು ಅಪ್ಯಾಯಮಾನ ಪ್ರತಿಮೆಯಾಗಿ ಕಾಣಿಸೀತು.
ನಿರಂತರ ಲೇಖಕನ ಮತ್ತೊಂದು ವೈಶಿಷ್ಟ್ಯವೆಂದರೆ ಅವನು ತನ್ನ ಭಾಷೆಯ ಜೊತೆಗೆ ಕ್ರೀಡೆಯಲ್ಲಿ ತೊಡಗುತ್ತಾನೆ. ಅಷ್ಟೇ ಅಲ್ಲ, ತನ್ನ ಆಟದೊಳಕ್ಕೆ ತನ್ನ ಓದುಗರನ್ನು ಆಹ್ವಾನಿಸುತ್ತಾನೆ. ಇದನ್ನು ನೀವು ಭಾಷೆಯನ್ನು ಮುರಿದು ಕಟ್ಟುವುದು ಅನ್ನಿರಿ, ಅಥವಾ ಕಟ್ಟಿ ಮುರಿಯುವುದು ಅನ್ನಿರಿ. ಇಂಥ ಭಾಷಾ ಕ್ರೀಡೆ ಅಥವಾ ಚೆಲ್ಲಾಟದಲ್ಲಿ ಆಸಕ್ತಿ ತೋರುವವರು ಅಂಥ ಲೇಖಕನ ಮೆಚ್ಚಿನ ಓದುಗರಾಗುತ್ತಾರೆ. ಅವರ ಸಹೃದಯತೆಯ ಪರಿಯೆ ಬೇರೆಯಾಗಿರುತ್ತದೆ. ಕುಂವೀ ನಿರಂತರವಾಗಿ ಇಂಥ ಭಾಷಾ ಪ್ರಯೋಗ ಮಾಡುತ್ತಲೇ ತಮ್ಮದೇ ಆದ ವ್ಯಾಕರಣವನ್ನು ಸೃಷ್ಠಿಸಿಕೊಂಡಿದ್ದಾರೆ.

ನಮ್ಮಲ್ಲಿ ‘ಎಲ್ಲಾ ಜಾಣ ತುಸು ಕೋಣ’ ಅನ್ನುವ ಮಾತೊಂದಿದೆ. ಎಲ್ಲಾ ಭಾಷೆಗಳಲ್ಲು ಇರುವಂತೆಯೇ ಕನ್ನಡದಲ್ಲು ಇಂಥ ಜಾಣ ಲೇಖಕರು ಬಹಳ ಮಂದಿ ಇದ್ದಾರೆ. ಅವರು ಬಹಳ ಚೆನ್ನಾಗಿ ಬರೆಯುತ್ತಾರೆ. ಕಲಾ ಸೌಂದರ್ಯ ಮೀಮಾಂಸೆಯ ಎಲ್ಲಾ ನಿಯಮಾವಳಿಗಳ ತಲೆಯ ಮೇಲೆ ಹೊಡೆಯುವಂಥ ಜಾಣ ಕೃತಿಗಳನ್ನು ರಚಿಸಿಬಿಡುತ್ತಾರೆ. ತಮ್ಮ ಕೃತಿಗಳಲ್ಲಿ ಕುಂವೀ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನಾಗಲಿ, risk ಆಗಲಿ ಜಾಣ ಲೇಖಕರು ತೆಗೆದುಕೊಳ್ಳುವುದಿಲ್ಲ. ಜಾಣ ಲೇಖಕರು ತಮ್ಮ ಕಲಾಕೃತಿಗಳ ಹೊರಗೆ, ತಲೆ ಮೇಲೆ ಆಕಾಶ ಬೀಳಲಿ, ಕೆಂಡದ ಮಳೆ ಸುರಿಯಲಿ, ಪಕ್ಕದವನು ಅನ್ಯಾಯ ಅಥವಾ ಅಪಾಯದ ಸುಳಿಯಲ್ಲಿರಲಿ ತಿರುಗಿ ನೋಡುವುದಿಲ್ಲ. ಲೇಖಕನ ಜವಾಬ್ದಾರಿಯನ್ನು ಜಾಣ ಮರೆವಿನೊಳಕ್ಕದ್ದಿ ಮುಳುಗಿಸಿಬಿಟ್ಟು ತಮ್ಮ ಸುತ್ತಮುತ್ತ ಏನೂ ನಡೆದೇ ಇಲ್ಲವೆಂಬ೦ತಿರುತ್ತಾರೆ. ಆದರೆ ಕುಂವೀ ಅದಕ್ಕೆ ಅಪವಾದ. ಕಾಲಕಾಲಕ್ಕೆ ತಮ್ಮ ಸುತ್ತಲ ವಿದ್ಯಮಾನಗಳಿಗೆ ಪ್ರಗತಿಪರರಾಗಿ, ಆರೋಗ್ಯಪೂರ್ಣವಾಗಿ ಮತ್ತು ಕ್ರಿಯಾಶೀಲತೆಯಲ್ಲಿ ಪ್ರತಿಕ್ರಿಯಿಸುತ್ತಿರುತ್ತಾರೆ. ಅಂಥವರು ಮಾತ್ರ ‘ನಾನು ವೀರಶೈವನಲ್ಲ, ನಾನು ಲಿಂಗಾಯತ’ ಎಂದು ಸಾರ್ವಜನಿಕವಾಗಿ ಹೇಳಬಲ್ಲರು.
ಇವರ ಹೊಸ ಕಾದಂಬರಿ ‘ಸುಪಾರಿ’. ಭಾರತೀಯ ಭಾಷಿಕ ಸಂಸ್ಕೃತಿಯೊ೦ದರ, ಸಜ್ಜನ, ಸಂಪ್ರದಾಯವೊ೦ದರ ಸರಳ, ಸುಂದರ, ಸಾಮಾನ್ಯ ಶಬ್ದವೊಂದಕ್ಕೆ ಒಂದು ಘೋರ ‘ಖತರ್ನಾಕ್’ ಪರಿವೇಷವನ್ನು ತೊಡಿಸಿ ಜಗತ್ತಿಗೆ ದೇಣಿಗೆ ನೀಡಿದ ಶಬ್ದವೇ ಸುಪಾರಿ. ಈಗ್ಗೆ ವರ್ಷದ ಹಿಂದೆ ನಮ್ಮ ದೇಶವನ್ನೂ ಒಳಗೊಂಡ೦ತೆ ಜಗತ್ತಿನ ಕೆಲವು ರಾಷ್ಟçಗಳ ಪತ್ರಕರ್ತರ, ಮಾನವ ಹಕ್ಕುಗಳ ಹೋರಾಟಗಾರರ, ರಾಜಕಾರಣಿಗಳ ಮತ್ತು ಕೆಲವು ವ್ಯಕ್ತಿಗಳ ಫೋನ್ಗಳ ಕದ್ದಾಲಿಕೆ ಮಾಡಲು ‘ಪೆಗಾಸಿಸ್ (pegasus) ಎಂಬ ಅತ್ಯಾಧುನಿಕ ತಾಂತ್ರಿಕ ಸಲಕರಣೆಯೊಂದನ್ನು ಒಂದು ನಿರ್ದಿಷ್ಟ ದೇಶದಿಂದ ಆಮದು ಮಾಡಿಕೊಂಡಿವೆ ಎಂಬ ಸುದ್ದಿಯೊಂದನ್ನು ಅಮೇರಿಕೆಯ ಪ್ರತಿಷ್ಠಿತ ಪತ್ರಿಕೆಯೊಂದು ವರದಿ ಮಾಡಿತು. ಅದೊಂದು ದೊಡ್ಡ ವಿವಾದವಾಯಿತು. ಆ ವಿವಾದ ಕುರಿತು ಇಲ್ಲಿ ಹೇಳುವುದು ನನ್ನ ಉದ್ದೇಶವಲ್ಲ. ಆ ಸಂದರ್ಭದಲ್ಲಿ ನಮ್ಮ ದೇಶದ ರಕ್ಷಣಾ ಸಚಿವರು ವರದಿ ಮಾಡಿದ ಪತ್ರಿಕೆಯನ್ನು ‘ಸುಪಾರಿ ಮಾಧ್ಯಮ’ ಎಂದು ಕರೆದರು. ಸುಪಾರಿಯೆಂಬುದು ರಾಜಕೀಯವನ್ನೂ ಒಳಗೊಂಡ೦ತೆ ಮಾನವ ಚಟವಟಿಕೆಗಳ ಎಲ್ಲ ವಲಯದಲ್ಲಿ ಚಲಾವಣೆಯಲ್ಲಿರುವ ಒಂದು ಭಯಾನಕ ಶಬ್ದ ಎಂಬುದಕ್ಕೆ ಮೇಲಿನ ಮಾತನ್ನು ಹೇಳಬೇಕಾಯಿತು. ಈಗ ಸುಪಾರಿಯೆಂಬುದು ಒಂದು ಸಂಜ್ಞೆಯಾಗಿದೆ, ಒಂದು ಸಂಕೇತವಾಗಿದೆ, ಒಂದು ರಾಜಕಾರಣವಾಗಿದೆ, ಅದಕ್ಕೆ ಅದರದ್ದೇ ಆದ ಒಂದು ಪ್ರತ್ಯೇಕ ಜಗತ್ತು ನಿರ್ಮಾಣವಾಗಿದೆ.
ಸುಪಾರಿ ತನ್ನ ಸ್ವರೂಪದಲ್ಲಿ ಕ್ರೌರ್ಯ, ಹಿಂಸೆ, ಕೊಲೆ, ರಕ್ತಪಾತ, ಹಣ ವ್ಯವಹಾರ ಮುಂತಾದ eviಟನ ಎಲ್ಲಾ ನಿಷೇಧಾರ್ಥಗಳ ಮೊತ್ತವಾಗಿದೆ. ಇದು ಒಂದು ಸಾಹಿತ್ಯದ ವಸ್ತುವಾದಾಗ ಅನಿವಾರ್ಯವಾಗಿ ಪತ್ತೆದಾರಿ ಪ್ರಕಾರಕ್ಕೆ ಸೇರುವ ಲಕ್ಷಣಗಳನ್ನು ಕಾಣುತ್ತೇವೆ. ಕುಂವೀಯವರ ‘ಸುಪಾರಿ’ ಅಂಥ ಒಂದು ಪತ್ತೆದಾರಿ ಕಾದಂಬರಿಯೇ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. ಅದಕ್ಕೆ ಉತ್ತರವನ್ನು ಓದುಗರು ಕಂಡುಕೊಳ್ಳುತ್ತಾರೆ. ಈ ಕನ್ನಡ ಕಾದಂಬರಿಯಲ್ಲಿ ಬರುವ ನಿರೂಪಕ ಕನ್ನಡ ಬಲ್ಲ ಒಬ್ಬ ಇಂಗ್ಲಿಷ್ ಕಾದಂಬರಿಕಾರ! crime thrillerಗಳನ್ನು ಬರೆಯುವ ಪ್ರಖ್ಯಾತ ಲೇಖಕ. ಅವನ crime thrillerಗಳು ಈಗಾಗಲೆ ಯುರೋಪಿಯನ್ ಭಾಷೆಗಳಲ್ಲಿ ಅನುವಾದಗೊಂಡು ಬೆಸ್ಟ್ ಸೆಲ್ಲರ್ಗಳಾಗಿವೆ, ಚಲನಚಿತ್ರಗಳಾಗಿವೆ. ಅವನು ಈಗ ಬರೆಯಲಿರುವ ಹೊಸ crime thriller ಗೆ ಜಗತ್ ಪ್ರಸಿದ್ಧ ಪ್ರಕಾಶನ ಸಂಸ್ಥೆ ಡಾಲರ್ಗಳ ಲೆಕ್ಕದಲ್ಲಿ ಲಕ್ಷಾಂತರ ಮುಂಗಡವನ್ನು ಕಾದಂಬರಿಕಾರನ ಬ್ಯಾಂಕ್ ಖಾತೆಗೆ ಈಗಾಗಲೆ ವರ್ಗಾಯಿಸಿದೆ.
ಈ ಕಾದಂಬರಿಕಾರ ತನ್ನ ಹೊಸ ಕಾದಂಬರಿಗೆ ಬೇಕಾದ ಕಥಾಹಂದರದ ಅಧ್ಯಯನ ಮತ್ತು ಶೋಧನೆಯಲ್ಲಿ ತೊಡಗಿದ್ದಾನೆ. ವಸ್ತುವಿನ ಹರಹು, ನಾಯಕ, ಖಳನಾಯಕ, ನಾಯಕಿ, ಪೋಷಕ ಪಾತ್ರಗಳ ಹುಡುಕಾಟದಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದಾನೆ. ಈ ಶೋಧನೆ, ಸ್ಥಳ ಪರಿವೀಕ್ಷಣೆಗಳಿತ್ಯಾದಿ ತನ್ನ ಹೊಸ crime thriller ಗೆ ಬೇಕಾದ ಆಹಾರ್ಯ, ಪಾತ್ರಗಳ ಸ್ವಭಾವ, ಚಲನವಲನಗಳನ್ನು ಅವು ಘಟಿಸುತ್ತಿದ್ದಂತೆಯೇ ಮರೆತು ಹೋಗದಂತೆ ಲ್ಯಾಪ್ಟಾಪ್ನಲ್ಲಿ ಟಿಪ್ಪಣಿ ಮಾಡಿಟ್ಟುಕೊಳ್ಳುವ ನುರಿತ ಲೇಖಕ ಈತ. ‘ಸುಪಾರಿ’ ಕಾದಂಬರಿಯ ಕಥಾ ವಸ್ತುವನ್ನು ವಿವರವಾಗಿ ಇಲ್ಲಿ ಹೇಳುವ ಅಗತ್ಯವಿಲ್ಲ. ಮೇಲೆ ತಿಳಿಸಿದಂತೆ ಹಿನ್ನಲೆಯ ಜೊತೆಗೆ ಇನ್ನೊಂದು ಅಂಶವನ್ನು ಸೂಚಿಸುತ್ತೇನೆ. ಕಾದಂಬರಿಯಲ್ಲಿ ಬರುವ ಕಾದಂಬರಿಕಾರ ತನಗೆ ಜನ್ಮ ಕೊಟ್ಟ ತಂದೆಯ ಹಂತಕನ ಹುಡುಕಾಟ (ಪತ್ತೆದಾರಿ) ನೆಡೆಸಿದ್ದಾನೆ. ಅವನನ್ನು ಭೆಟ್ಟಿಯಾಗಿ ನೇರವಾಗಿ ಅವನ ಬಾಯಿಯಿಂದಲೇ ನಡೆದ ಘಟನೆಗಳ ವಿವರಗಳನ್ನು ಕೇಳಿ ಅದನ್ನು ತನ್ನ ಹೊಸ crime thrillerನ ಮುಖ್ಯವಸ್ತುವನ್ನಾಗಿಸಬೇಕೆಂಬುದೇ ಅವನ ಇರಾದೆ. ಅವನ ಈ ಇರಾದೆಯೇ ಓದುಗರನ್ನು ಕೊನೆವರೆಗೂ ಹಿಡಿದಿಡುವ ತಂತ್ರ. ಅದಿರಲಿ..
Subvert, subversive ಮಾದರಿ ಬರಹಗಳಿಗೆ ಕನ್ನಡದಲ್ಲಿ ಏನೆಂದು ಕರೆಯಲಾಗಿದೆಯೋ ತಿಳಿಯದು. ವಿದ್ವಂಸಕ, ಬಂಡಾಯ, ಬುಡಮೇಲು ಮುಂತಾದ ಅರ್ಥ ಹೇಳಬಹುದು. ಆದರೆ ಒಂದು ವ್ಯವಸ್ಥೆಯನ್ನು ಬುಡಮೇಲು ಮಾಡುವ, ಪಲ್ಲಟಗೊಳಿಸುವಂಥ ಬರೆವಣಿಗೆ ಮಾದರಿಗಳಿಗೆ ನಮ್ಮಲ್ಲಿ ಒಂದು ಪಾರಿಭಾಷಿಕದ ಕೊರತೆಯಿದೆಯೆನ್ನಿಸುತ್ತದೆ. ಅದು ಕ್ರಾಂತಿ ಅಲ್ಲ, ಬಂಡಾಯವಲ್ಲ, ವ್ಯವಸ್ಥೆಗೆ ವಿರುದ್ದವಾಗಿ ಬಂಡೇಳುವ activism ಅಲ್ಲ. fantasy ಅಥವಾ magic realism ಮಾದರಿಗಳಲ್ಲ. subversive ಮಾದರಿಯಲ್ಲಿ ಒಂದು ಬಗೆಯ ವ್ಯಂಗ್ಯವಲ್ಲದ ವಿನೋದ ಗುಣವಿದ್ದು ಓದುಗರನ್ನು ಹಿಡಿದಿಟ್ಟುಕೊಳ್ಳುವ, ಅರೆ! ಹೌದಲ್ಲವೆ ಅನ್ನಿಸುವಂಥ ಒಂದು ವಿನೂತನ ಸತ್ಯದೆಡೆಗೆ subversive ಬರಹ ಅಥವಾ ಸಾಹಿತ್ಯ ಕೊಂಡೊಯ್ಯುತ್ತದೆ. ಕನ್ನಡದಲ್ಲಿ ಇಂಥ ಮಾದರಿಯನ್ನು ಪಾ. ವೆಂ. ಆಚಾರ್ಯರ ಹರಟೆಗಳಲ್ಲಿ, ಸಿದ್ಧಲಿಂಗಯ್ಯನವರ ಗದ್ಯಬರಹಗಳಲ್ಲಿ ಕ್ವಚಿತ್ತಾಗಿ ಕಾಣಬಹುದು, ಆದರೆ ಅಂಥ ಮಾದರಿಯ ಸಾಹಿತ್ಯ ರಚನೆಯಲ್ಲಿ ಎದ್ದು ಕಾಣುವಂತೆ ಪ್ರಯೋಗಶೀಲರಾಗಿರುವವರು ಕುಂವೀ ಒಬ್ಬರೆ ಇರಬೇಕು ಅನ್ನಿಸುತ್ತದೆ. ಅದರಲ್ಲು ಪ್ರಸ್ತುತ ಅವರ ಹೊಸ ಕಾದಂಬರಿ ‘ಸುಪಾರಿ’ಯನ್ನು ಓದಿದ ಮೇಲೆ ಅದು ಮತ್ತಷ್ಟು ನಿಚ್ಚಳವೆನ್ನಿಸುತ್ತದೆ.
ಇನ್ನೊಂದು ಹೇಳಲೇ ಬೇಕಾದ ಸಂಗತಿ ಅಂದರೆ ‘ಸುಪಾರಿ’ ಸೀರಿಯಸ್ಸಾದ ರಾಜಕೀಯ ಕಾದಂಬರಿ ಎಂಬುದು ನನ್ನ ಖಚಿತ ಅಭಿಪ್ರಾಯ. ಅದನ್ನು ನೇರಾನೇರ ಹೇಳುವಂತಹ ರಾಜಕೀಯ, ಸಾಂಸ್ಕೃತಿಕ ಪರಿಸ್ಥಿತಿ ಈಗ ಇಲ್ಲ. ಹಾಗಾಗಿ ಲೇಖನ Subvert ಗೆ ಮೊರೆ ಹೋಗಿದೆ. ಎಲ್ಲಾ critical ಕಾಲದಲ್ಲಿ ಲೇಖಕರು ರೂಪಕಗಳಲ್ಲಿ ಅಡಗಿಕೊಳ್ಳುವುದು ಅನಿವಾರ್ಯವಾಗಿದೆ.
ನಿಜ ಜೀವನದಲ್ಲಿ ಸುಪಾರಿ ಸಾಮಾನ್ಯ ಜನರ ಮನೆ ಬಾಗಿಲಿಗೇ ಬಂದು ಕುಳಿತಿದೆ. ಅದಕ್ಕೆ ಗುರುತಿನವರು, ಹತ್ತಿರದವರು ಬಲಿಯಾಗಿದ್ದಾರೆ, ಆಗುತ್ತಿದ್ದಾರೆ. ಅದನ್ನು ಎದುರಿಸುವ ಶಕ್ತಿಯೆ ಇಲ್ಲವಾಗಿದೆ. ಇಂಥ ಗಳಿಗೆಯಲ್ಲಿ ಕುಂವೀ ಓದುಗರಿಗಾಗಿ ಒಂದು ಲೋಕವನ್ನು ಸೃಷ್ಠಿಸಿದ್ದಾರೆ. ಆ ಲೋಕದೊಳಗಿನ ಸುಪಾರಿಯ ವಿರಾಟ್ ದರ್ಶನವನ್ನು ಮಾಡಿಸುತ್ತಿದ್ದಾರೆ. ಅದೊಂದು ಜಾಗತಿಕ ಸಮಾಜ, ಅದರೊಳಗಿನ ನಾನಾ ಬಗೆಯ ಸುಪಾರಿ ಲಕ್ಷಣಗಳನ್ನು ಅವರು ಅನಾವರಣ ಮಾಡುತ್ತಾರೆ. ಅರೆ! ಹೀಗಲ್ಲದೆ ಮತ್ತೇನು! ಹೌದು ಇದು ನಿಜವಲ್ಲವೇನು! ಎನ್ನುವಂಥ ಪ್ರಶ್ನೆಗಳನ್ನು ಓದುಗನ ಮನಸ್ಸಿನಲ್ಲಿ ಮೂಡಿಸಿ ಅವರನ್ನು ಕುಂವೀ ತಮ್ಮ ಜೊತೆ ಕರೆದೊಯ್ಯುತ್ತಾರೆ. ಕಾವ್ಯ ಸತ್ಯದ ಬಾಗಿಲುಗಳನ್ನು ತೆರೆದು ತೋರಿಸುತ್ತ subversive ಮಾದರಿಯನ್ನು ಸೃಷ್ಠಿ ಮಾಡುತ್ತಾರೆ. ಪ್ರಾತಿನಿಧಿಕವಾಗಿ ಒಂದೆರಡು ಅಂಶಗಳನ್ನಷ್ಟೆ ಗಮನಿಸಬಹುದು. ಇಲ್ಲಿಯ ಒಂದು ಮುಖ್ಯ ಪಾತ್ರವನ್ನು ಮತ್ತೊಂದು ಪಾತ್ರ (ಈತ ಇಂಗ್ಲೀಷ್ ಲೇಖಕನ ಮನಸ್ಸಿನಲ್ಲಿ ಪೋಷಕ ಪಾತ್ರವಾಗಬಹುದಾದವನು) ಹೀಗೆ ವಿವರಿಸುತ್ತಾನೆ,
‘..ಅವರು ಅಷ್ಟಾದಶ ಪುರಾಣಗಳನ್ನು ಅರಗಿಸಿಕೊಂಡಿರುವ ಅದ್ವಿತೀಯ ವಿದ್ವಾಂಸರು, ಆದರೆ ಅವರು ದಿನನಿತ್ಯ ಪಾರಾಯಣ ಮಾಡುವುದು ಗರುಡ ಪುರಾಣವನ್ನೆ. ಯಾಕೆ ಅಂತ ಕೇಳಿ, ಅದು ಇಹಲೋಕಕ್ಕು ಪರಲೋಕಕ್ಕು ನಡುವೆ ಇರುವ ಏಕೈಕ ರಹದಾರಿ. ಅದೆ ಅಲ್ಲವೆ ಮೃತರ ಆತ್ಮಗಳನ್ನು ಸ್ವಸ್ಥಾನಕ್ಕೆ ಸೇರಿಸುವುದು! ಅದನ್ನು ಕಂಠಸ್ಥ ಮಾಡುವುದರಿಂದಲ್ಲವೆ ಮೃತರ ಆತ್ಮಗಳು ಅವರು ಹೇಳಿದಂತೆ ಕೇಳುವುದು! ಅಂಥ ಪುರಾಣಗಳಿಂದಲ್ಲವೆ ಈ ಭಾರತ ದೇಶದ ಕೀರ್ತಿ ಈ ಭೂಖಂಡದಲ್ಲಿ ಅಚಂದ್ರಾರ್ಕವಾಗಿ ಉಳಿದಿರುವುದು!

… .. ಈ ಪವಿತ್ರ ಪುರಾಣದ ಒಂದು ಪ್ರತೀನ ನನಗೆ ಕೊಡುವೆವೆಂದು ಹೇಳಿದ್ದಾರೆ, ಅದರ ಪಾರಾಯಣದ ಕಲೆಯನ್ನು ನಮಗು ಹೇಳಿ ಕೊಟ್ಟಿದ್ದಾರೆ. ಆದರೆ ನನ್ನ ನಾಲಗೆ ಸ್ವಲ್ಪ ದಪ್ಪ, ಹೊರಳುವುದಿಲ್ಲ ಸ್ವಾಮಿ, ಆದರು ಪ್ರಯತ್ನ ಮುಂದುವರೆಸಿರುವೆ’ ಎಂದು ಹೇಳಿದ.
ಕುಂವೀಯವರ ಈ ಇಂಗ್ಲೀಷ್ crime thriller ಬರೆಯುವ ಲೇಖಕ ತನ್ನ ಕೃತಿಗಳಲ್ಲಿ ಹಿಂಸೆಯನ್ನು ಆರಾಧಿಸುತ್ತಾನೆಂದೂ, ಅವನಿಗೆ ಹಿಂಸಾ ಪ್ರಚೋದಕನೆಂಬ ಖ್ಯಾತಿಯೂ ಇದೆ. ಇವನಿಗೆ ಸೃಜನಶೀಲ ಮನಸ್ಸೊಂದರ ತಾಕಲಾಟ ಉದ್ವಿಗ್ನತೆಗಳೆಲ್ಲ ಇವೆ. ಇಲ್ಲಿನ ಪ್ರಖ್ಯಾತ ಸುಪಾರಿ ಹಂತಕನ ಹೆಸರು ದಯಾನಿಧಿ! ಅವನ ಸಜ್ಜನಿಕೆಗೆ ಸಮಾನರು ಜಗತ್ತಿನಲ್ಲಿ ಯಾರೂ ಇಲ್ಲ. ದಯಾನಿಧಿಯನ್ನು ರಾಜಕಾರಣ ಆಹ್ವಾನಿಸುತ್ತದೆ, ಅಂಥ ವ್ಯಕ್ತಿ ನಮ್ಮ ಗೃಹ ಮಂತ್ರಿಯಾಗಬೇಕೆ೦ಬ, ಗರುಡಪುರಾಣ ನಮ್ಮ ಸಂವಿಧಾನವಾಗಬೇಕೆoಬ ಆಶಯಗಳು, ನಿವೃತ್ತ ಸುಪಾರಿ ಹಂತಕರ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸುವ ಆಲೋಚನೆಗಳು ಇಲ್ಲಿವೆ.
‘ಸುಪಾರಿ’ಯಲ್ಲಿ ನಿರೂಪಿಸಲ್ಪಟ್ಟ ಪೋಲಿಸ್ ವ್ಯವಸ್ಥೆ, ತನ್ನ ಹತ್ಯೆಗೆ ತಾನೆ ಸುಪಾರಿ ಕೊಟ್ಟುಕೊಳ್ಳುವುದು, ಸುಪಾರಿ ಮತ್ತು encounter ವಿಷಯಗಳಲ್ಲಿ ಪಿಹೆಚ್ಡಿ ಪಡೆದ ಉನ್ನತ ಪೋಲಿಸ್ ಅಧಿಕಾರಿಗಳು, ದಯಾನಿಧಿಯ ಅಂತ್ಯ ಮುಂತಾದ ಅನೇಕ ಸುಪಾರಿ ಜಗತ್ತಿನ ಚಿತ್ರಣಗಳ ಮೂಲಕ ಓದುಗರ ಕುತೂಹಲವನ್ನು ಕೊನೆಯ ಪುಟಗಳವರೆಗೆ ಹಿಡಿದಿಟ್ಟುಕೊಳ್ಳುವ ಕಾದಂಬರಿ ಇದು. ಪುಳಕಗೊಳ್ಳುವ, ಎದೆ ಝೆಲ್ಲೆನ್ನುವ ನಿರೂಪಣೆಗಳ ಮೂಲಕ ಸುಪಾರಿ ಹಲವು ಪದರುಗಳನ್ನು, ನಿಗೂಢತೆಯನ್ನು ಹೇಳುವ ಈ ಕೃತಿ ಹಲವು ಸಾಮಾಜಿಕ ವಾಸ್ತವಗಳನ್ನು ಸತ್ಯಗಳನ್ನು ತೆರೆದಿಡುತ್ತದೆಂಬುದನ್ನು ನಾವು ಮರೆಯಬಾರದು. ಅದಕ್ಕೆ ಕುಂವೀ ಈ ಕಾದಂಬರಿಯಲ್ಲಿ subversive mode ಅನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಈ ಮಾದರಿಗೆ ಕನ್ನಡದಲ್ಲಿ ಬುಡಮೇಲು ಶೈಲಿ ಅಥವಾ ಪಲ್ಲಟ ಶೈಲಿ ಎನ್ನಬಹುದೆ!
ಈ ಕೃತಿಯನ್ನು ಓದುಗರು ಮೆಚ್ಚುತ್ತಾರೆಂಬ ನಂಬಿಕೆ ನನ್ನದು.






Subversive mode ಎಂಬ ಇದುವರೆಗೆ ಕೇಳಿ ನೋಡಿರದ ಶಬ್ದವನ್ನು ನಾನು ಪರಿಚಯಿಸಿ ಕೊಂಡೆ.
ಭಾರತೀಯ ಸಾಹಿತ್ಯ ಲೋಕದ ವಿಶಿಷ್ಟ ಶೈಲಿಯ ಬರಹಗಾರ ಎಂದು ಆಗಲೇ ಗುರುತಿಸಿಕೊಂಡಿರುವ ಕುಂವೀ ಅವರನ್ನು ಮತ್ತು “ಸುಪಾರಿ” ಯನ್ನು ಅದ್ಭುತವಾಗಿ ಪರಿಚಯಿಸಿದ, ವಿಮರ್ಶಿಸಿದ ಲೇಖನ ಇದು.
ಬಹುಶಃ ಬಂಡಾಯ ಚಳುವಳಿಯ ಆರಂಭದ ದಿನಗಳಲ್ಲಿ ಬರಹ ಆರಂಭಿಸಿದ
ಕುಂವೀ ನಿಜವಾಗಿಯೂ “ನಿರಂತರಬರಹ ಗಾರರು” ಎಂಬುದಕ್ಕೆ ಈ ಕ್ಷಣದ ತನಕ ಅವರು ಬರಹದಲ್ಲಿ ಮುಳುಗಿರುವದೆ ಸಾಕ್ಷಿ. ಮತ್ತು ಸಾಮಾಜಿಕ ನ್ಯಾಯದ ಪರ ನಿಂತು ರಿಸ್ಕ್ ತೆಗೆದು ಕೊಂಡಿರುವ ಅವರ ಪರಿ ಮದರಿಯಾದದ್ದು.
ಡಿ ಎಂ ನದಾಫ್ ಅಫಜಲಪುರ