-ಡಾ ಪದ್ಮಿನಿ ನಾಗರಾಜು
ಅಲೆ ಬರುವವರೆಗೂ
ಒಗಟು ಬಿಡಿಸಬಹುದು
ಅವರಿಬ್ಬರನ್ನಲ್ಲ
ನದಿ ನೀರು ಸಮುದ್ರ
ಸೇರುವ ಭರದಲ್ಲಿ
ತನ್ನತನವ ಮರೆತಂತೆ
ಒಂದಾಗುವ
ಕಳೆದುಹೋಗುವ
ಲೆಕ್ಕಾಚಾರಗಳೆಲ್ಲ
ತಲೆಕೆಳಗಾಗಿವೆ
ಅವರಿಬ್ಬರಂತೆ
ಮಳೆ ನಿಂತರೂ
ಮರದಿಂದ ತೊಟ್ಟಿಕ್ಕುವ
ಹನಿಯಂತೆ
ಅವನ ನೆನಪ
ದೂರಮಾಡಿದರೂ
ತೊಟ್ಟಿಕ್ಕುತ್ತಿದೆ
ಅವಳಲ್ಲಿ
ಕಡಲಿನ ದಂಡೆಯಲ್ಲಿ
ಮರಳ ಗುಡ್ಡೆ ಕಟ್ಟುವ
ಮಕ್ಕಳನ್ನು
ಆಸೆ ಕಣ್ಣಿಂದ
ನೋಡಿದ್ದು
ದೂರದೂರಲ್ಲಿರುವ
ತಮ್ಮ ಮಕ್ಕಳ
ನೆನಪಲ್ಲಿ
ಅವರಿಬ್ಬರು
ನೆರೆತ ಕೂದಲ ಗಡ್ಡ
ಅವನ ಚೆಲುವ
ಹೆಚ್ಚಿಸಿದ್ದನ್ನ
ತನ್ನ ಕಣ್ಣಗಂಗೆಯ
ಹಿಡಿದಿಟ್ಟು
ದಿಟ್ಟಿಸಿದಳು
ಅವನನ್ನೆ
ಅವಳ ಕಣ್ಣ ವಿಷಾದವ
ದಿಟ್ಟಿಸಿ ನೋಡಲು
ಅದೇಂತದ್ದೊ ಭಯ
ಚಿಟ್ಟೆಯಂತೆ ಕಂಡರೂ
ಮೂಲ ಕಂಬಳಿಹುಳು
ನಡೆಯೂ ನುಡಿಯು
ಅವಳದ್ದು
ಆ ಮರಳ ತೀರದಲಿ
ಪಾದದ ಗುರುತ
ಉಳಿಸಿ
ಮರೆಯಾಗುವ
ಕಲೆಯ
ಅರಿತಿಹರು
ಅವರಿಬ್ಬರು
ಅ ಗುರುತು
ಸಮುದ್ರದಿಂದ
ಮರಳ ಕಡೆ ಸಾಗಿದ್ದೋ
ಅಥವಾ
ಮರಳರಾಶಿಯಿಂದ
ಸಮುದ್ರದೆಡೆಗೋ
ಒಟ್ಟಿನಲ್ಲಿ
ಜೋಡಿ ಹೆಜ್ಜೆಯ
ಗುರುತುಗಳಿವೆ
ಅಲೆ ಬರುವವರೆಗೂ






0 Comments