ವಿದ್ವಾನ ಬಿ ಜಗದೀಶ್ ಶರ್ಮಾ
ಭಾರತೀಯ ಚಿತ್ರರಂಗದ ಪ್ರತಿಭಾಶಾಲಿ ನಿರ್ದೇಶಕರಲ್ಲಿ ಶ್ರೀ ಬಿ.ಎಸ್.ಲಿಂಗದೇವರು ಮುಂಚೂಣಿಯವರು. ಅವರ ಮೌನಿ, ಕಾಡಬೆಳದಿಂಗಳು, ನಾನು ಅವನಲ್ಲ ಅವಳು ಮೂರೂ ನನ್ನ ಇಷ್ಟದ ಸಿನಿಮಾಗಳು. ವಸ್ತುವಿನ ಆಯ್ಕೆ, ಅದರ ನಿರೂಪಣೆ ಎರಡರಲ್ಲೂ ಅವರು ವಿಶಿಷ್ಟ.
ಲಿಂಗದೇವರು ದಿಗ್ದರ್ಶಿಸಿದ ಹೊಸ ಸಿನಿಮಾ ‘ವಿರಾಟಪುರ ವಿರಾಗಿ’. 19ನೆಯ ಶತಮಾನದ ಉತ್ತರಾರ್ಧ ಮತ್ತು 20ನೆಯ ಶತಮಾನದ ಪೂರ್ವಾರ್ಧದಲ್ಲಿ ಸಮಾಜಕ್ಕೆ ಮಾರ್ಗದರ್ಶನ ಮಾಡಿದ್ದ ಸಂತ ಪರಮಪೂಜ್ಯ ಹಾನಗಲ್ ಕುಮಾರಸ್ವಾಮಿಯವರ ಬದುಕಿನ ಚಿತ್ರಣವಿದು. ಈ ಶಿವಯೋಗಿ ತಮ್ಮ ಜೀವಿತಾವಧಿಯಲ್ಲಿ ಅನೇಕ ಅದ್ಭುತಗಳನ್ನು ಸಾಧಿಸಿದವರು. ಅಖಿಲ ಭಾರತ ವೀರಶೈವ ಮಹಾಸಭಾದ ಸ್ಥಾಪನೆಯೊಂದಿಗೆ ಸಮಾಜಕ್ಕೂ, ಶಿವಯೋಗ ಮಂದಿರದ ಸ್ಥಾಪನೆಯೊಂದಿಗೆ ಸಂತಸಮೂಹಕ್ಕೂ ಕೊಡುಗೆ ನೀಡಿದವರು. ಕನ್ನಡ ಮತ್ತು ಸಂಸ್ಕೃತ ಪಾಠಶಾಲೆಗಳ ಸ್ಥಾಪನೆ, ಸ್ತ್ರೀಶಿಕ್ಷಣದ ಜಾಗ್ರತಿ, ಗೋಶಾಲೆ, ಅನಾಥ ರಕ್ಷಣೆ ಹೀಗೆ ಅವರದ್ದು ಅಸಂಖ್ಯ ಕಾರ್ಯಕ್ಷೇತ್ರ. ಸ್ವಾತಂತ್ರ್ಯ ಸಮರದ ಆ ಕಾಲದಲ್ಲಿ ಖಾದಿಗೆ ಒತ್ತುಕೊಟ್ಟು ವಿದೇಶೀ ಆಡಳಿತದ ನಿರಾಕರಣೆಯನ್ನೂ ಮಾಡಿದವರು.
ಪರಮ ವಿರಕ್ತರಾದ ಅವರ ಬದುಕನ್ನು ಸಿನಿಮಾವಾಗಿಸುವುದು ಹರಸಾಹಸ. ಆದರೆ ಇದನ್ನು ಮಾಡಿ ಲಿಂಗದೇವರು ಗೆದ್ದಿದ್ದಾರೆ.

ಸಿನಿಮಾ ಭಾವಗಳ ತಾಕಲಾಟಗಳನ್ನು ಕಾಣಿಸುತ್ತಲೇ ಅದರಿಂದ ಹೊರಬರುವ ಹಾದಿ ತೋರಿಸುತ್ತದೆ. ವೀರಶೈವ ಸಿದ್ಧಾಂತವನ್ನು ಸರಳವಾಗಿ ವಿವರಿಸುತ್ತದೆ. ಸೈದ್ಧಾಂತಿಕ ತುಮುಲಗಳೂ ಚೆನ್ನಾಗಿ ವ್ಯಕ್ತವಾಗಿವೆ. ಶತಮಾನದ ಹಿಂದಿನ ವಾತಾವರಣದ ಪುನಃಸೃಷ್ಟಿ ಸಿನಿಮಾದ ಶಕ್ತಿ. ಸಂಗೀತ ನಿರ್ದೇಶನ ಈ ಸಿನಿಮಾಕ್ಕೆ ಒಪ್ಪುವಂತಿದೆ. ಚಂದದ ಹಾಡುಗಳಿವೆ. ಹಿನ್ನೆಲೆಯನ್ನು ಒದಗಿಸಿದ ವಾದ್ಯ ಮತ್ತು ಗಾಯನ ಸಿನಿಮಾವನ್ನು ಎತ್ತರಿಸಿದೆ. ಸುಚೇಂದ್ರ ಪ್ರಸಾದ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಬಾಲನಟನಾಗಿ ಮೊದಲ ಬಾರಿ ಬಣ್ಣ ಹಚ್ಚಿದ ಸಮರ್ಥನ ಮುಖ ಮರೆಯಲಾಗದಂತೆ ಅಚ್ಚೊತ್ತುತ್ತದೆ. ಆ ಕಾಲದ ಅನೇಕ ಸ್ವಾಮಿಗಳ ಪಾತ್ರವನ್ನು ಈ ಕಾಲದ ಸ್ವಾಮಿಗಳೇ ಮಾಡಿರುವುದು ವಿಭಿನ್ನವಾಗಿದೆ.
ಚಿತ್ರಕಥೆ ಮತ್ತು ನಿರ್ದೇಶನ ಸಿನಿಮಾದ ನಿಜವಾದ ಯಶಸ್ಸಿನ ಕಾರಣ.
ಕಾಂತಾರದ ಯಶಸ್ಸಿನಿಂದ ಬೀಗುತ್ತಿರುವ ಕನ್ನಡ ಚಿತ್ರರಂಗಕ್ಕೆ ಸಂಸ್ಕಾರ, ಸಂಸ್ಕೃತಿ, ಸದ್ಭಾವ, ಸಜ್ಜನಿಕೆಗಳನ್ನು ತೆರೆದಿಡುವ ಇನ್ನೊಂದು ಬಹುಮುಖ್ಯ ಸಿನಿಮಾವಾಗಿ ಮೂಡಿಬಂದಿರುವ ‘ವಿರಾಟಪುರ ವಿರಾಗಿ’ ಮುಂದಿನ ವಾರ 13ನೇ ದಿನಾಂಕದಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ.
Lingadevaru Shivananjappa ಸರ್, ನಿಮಗೆ ಯಶಸ್ಸು ಸಿಗಲಿ.







0 Comments