ಲಾರಿ ಏರಿ..

ಕಾಸರಗೋಡು ಚಿನ್ನಾ

ಲಾರಿ ನಾಟಕ, ವಠಾರ ನಾಟಕ, ಸಂಗೀತ ರಥ, ಯಕ್ಷತೇರು ಮುಂತಾದ ಅದ್ವಿತೀಯ ರಂಗಕೈಂಕರ್ಯದ ಸಾಧಕರು. ನಟ, ನಿರ್ದೇಶಕ, ಸಂಘಟಕ, ನಾಟಕಕಾರರಾಗಿ ರಂಗಭೂಮಿಯಲ್ಲಿ ಐದು ದಶಕದ ಸೇವೆ. ಚಲನಚಿತ್ರ, ಧಾರಾವಾಹಿ ಕ್ಷೇತ್ರಗಳಲ್ಲಿ ನಟರಾಗಿ, ನಿರ್ದೇಶಕರಾಗಿ ಹೆಸರು ಗಳಿಸಿದವರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷರು.

ಅಪೂರ್ವ ಕಲಾವಿದರು ಎಂಬ ನಮ್ಮ ರಂಗತಂಡ ಪ್ರೊ.ವೇಣುಗೋಪಾಲ ಕಾಸರಗೋಡು, ಜಿ.ಕೆ.ಶೆಟ್ಟಿ ಮೊದಲಾದವರಿಂದ ಕೂಡಿಕೊಂಡು 1980ರಿಂದ ಕಾರ್ಯಪ್ರವೃತ್ತವಾಯಿತು. ಹೊಸಹೊಸ ಪ್ರಯೋಗಗಳನ್ನು ಮಾಡುವುದರಲ್ಲಿ ಆಸಕ್ತಿ ಹೊಂದಿದ್ದ ನಾವು ಲಾರಿ ನಾಟಕ, ವಠಾರ ನಾಟಕ, ಸಂಗೀತ ರಥ, ಯಕ್ಷತೇರು ಮೊದಲಾದ ಪ್ರಯೋಗಗಳನ್ನು ರಾಜ್ಯವ್ಯಾಪಿ ಪ್ರದರ್ಶನ ನೀಡಿ ಯಶಸ್ಸು ಕಂಡಿದ್ದೆವು. ಕಾಸರಗೋಡಿನ ಮಣ್ಣಿನಲ್ಲಿ ಇಂತಹ ಹುಚ್ಚು ಕನಸುಗಳು ಸಾಕ್ಷಾತ್ಕಾರಗೊಂಡದ್ದು ನನ್ನ ಪಾಲಿಗೆ ಇಂದಿಗೂ ಅಚ್ಚರಿಯೆ. ಒಂದೊಂದು ಪ್ರಯೋಗವೂ ನೂರರಷ್ಟು ಪ್ರಯೋಗ ಕಂಡದ್ದು ಮತ್ತಷ್ಟು ಸಂಭ್ರಮದ ವಿಚಾರ.

ಲಾರಿಯ ಮೇಲೆ ನಾಟಕ ಆಡಬೇಕೆಂಬ ನನ್ನ ಮಹದಾಸೆಗೆ ಪೂರಕವಾಗಿ ವೇಣುಗೋಪಾಲ ಕಾಸರಗೋಡು ಅವರು ನಾಟಕ ಬರೆದುಕೊಟ್ಟರು. ಗೆಳೆಯ ಟಿ.ವಿ.ಗಂಗಾಧರನ್ ಒಂದು ಲಾರಿಯನ್ನೂ ಒದಗಿಸಿದರು. ನಾಟಕದ ಹೆಸರು ‘ನಾಯಿಬಾಲ.’ ಲಾರಿಯ ಮೇಲೆಯೇ ತಾಲೀಮನ್ನೂ ಮಾಡಿಸಿದೆ.

ಅಂದು, ಲಾರಿ ನಾಟಕ ಆಡುವುದಕ್ಕೆಂದು ನಮ್ಮ ತಂಡ ಲಾರಿಯೊಂದಿಗೆ ಮಡಿಕೇರಿ ತಲುಪಿತ್ತು. ಲಾರಿಯ ಹಿಂಗಟ್ಟನ್ನು ಬಿಚ್ಚಿ ಅಗಲಗೊಳಿಸಿ, ಅದರಲ್ಲೇ ವೇದಿಕೆ ನಿರ್ಮಿಸಿ ನಾಟಕ ಶುರು ಮಾಡಬೇಕಿದ್ದರೆ ಲಾರಿಯ ಸುತ್ತ ಅಪಾರ ಜನ ನೆರೆದಿದ್ದರು. ಇದು ಬೀದಿ ನಾಟಕದ ಇನ್ನೊಂದು ರೂಪ. ಅಲ್ಲಾದರೆ ಜನರೂ ನಟರೂ ಒಂದೇಸಮಾನ, ಇಲ್ಲಿ ನಟರು ಎತ್ತರದಲ್ಲಿರುತ್ತಾರೆ. ಪ್ರೇಕ್ಷಕರು ತುಸು ತಲೆಯೆತ್ತಿ ನಾಟಕ ನೋಡಬೇಕು. ಆದರೆ ಇಂಟಿಮಸಿಗೆ ಯಾವ ಕೊರತೆಯೂ ಇಲ್ಲ.

‘ನಾಯಿಬಾಲ’ ಭ್ರಷ್ಟಾಚಾರವನ್ನು ಬಿಂಬಿಸುವ ನಾಟಕ. ಸ್ವಾತಂತ್ರ್ಯ ಹೋರಾಟಗಾರನೊಬ್ಬ ಕಚೇರಿಗಳಿಗೆ ಅಲೆದಾಡಿ, ತನ್ನ ಪಿಂಚಣಿ ಪಡೆದುಕೊಳ್ಳಲು ಒದ್ದಾಡುತ್ತಿದ್ದ. ಅಲ್ಲಿನ ತಹಶೀಲ್ದಾರರಿಗೆ ಲಂಚ ಕೊಡಬೇಕಾದ ಪರಿಸ್ಥಿತಿ ಬಂತು. ಬೇರೆ ದಾರಿಯಿಲ್ಲದೆ ತನ್ನ ಬಳಿಯಿದ್ದ ಹಣವನ್ನು ಲಂಚರೂಪದಲ್ಲಿ ಕೊಡಲೆಂದು ಆತ ಮುಂಬರಬೇಕಿದ್ದರೆ, ಪ್ರೇಕ್ಷಕರ ಮಧ್ಯದಿಂದ ಒಬ್ಬಾತ ಜೋರಾಗಿ ‘ದುಡ್ಡು ಕೊಡಬೇಡಿ’ರೆಂದು ಅಲರಿದ.

ಒಂದು ಕ್ಷಣ ನಟರು, ಪ್ರೇಕ್ಷಕರು ತಬ್ಬಿಬ್ಬಾದರು. ಮತ್ತೆ ಯಥಾಸ್ಥಿತಿಗೆ ಬಂದು, ಸ್ವಾತಂತ್ರ್ಯ ಹೋರಾಟಗಾರ ಅತ್ತ ಇತ್ತ ನೋಡಿ ಹಣಕೊಡಲು ಮುಂದಾದರು. ಪ್ರೇಕ್ಷಕರ ಮಧ್ಯದಿಂದ ಆತ ಮತ್ತೆಯೂ ಅಬ್ಬರಿಸುತ್ತ ನೇರವಾಗಿ ಲಾರಿಯ ಮೆಟ್ಟಲುಗಳನ್ನೇರಿ ವೇದಿಕೆಗೆ ಬಂದು ತಾಶೀಲ್ದಾರನನ್ನು ಎಳೆದಾಡಲು ಮುಂದಾದ. ‘ನಿಮ್ಮಥವರಿಂದಲೇ ದೇಶ ಹಾಳಾದದ್ದು’ ಎಂದ. ಪ್ರೇಕ್ಷಕರ ನಡುವೆ ಗುಜುಗುಜು. ಹಲವರು ಆತ ನಾಟಕದ ಪಾತ್ರಧಾರಿಯೇ ಆಗಿರಬೇಕೆಂದು ಭಾವಿಸಿದ್ದರು. ವಾಸ್ತವವಾಗಿ ಆತ ಪ್ರೇಕ್ಷಕನಾಗಿದ್ದ. ಕೊನೆಗೂ ಆತನನ್ನು ಸಮಾಧಾನ ಪಡಿಸಿ ವೇದಿಕೆಯಿಂದ ಇಳಿಸಿ ನಾಟಕ ಮುಂದುವರಿಸಿದೆವು.

ಆ ಬಗೆಯ ನಾಟಕ ನೋಡಿ ಗೊತ್ತಿರದ ಪ್ರೇಕ್ಷಕನೊಬ್ಬ ನಾಟಕದೊಳಗೆ ಮುಳುಗಿ ಹೋದದ್ದೊಂದು ಅಪರೂಪದ ವಿದ್ಯಮಾನ!
ಅದೇ ಲಾರಿ ನಾಟಕದ ಮಂಗಳೂರಿನ ಪ್ರದರ್ಶನ ಮಂಗಳಾ ಸ್ಟೇಡಿಯಮ್‍ನಲ್ಲಿ ನಡೆಯುತ್ತಿತ್ತು. ಸೂತ್ರಧಾರ ನಾಟಕ ಪೂರ್ವದಲ್ಲಿ ನಾಂದಿಯ ಮಾತುಗಳನ್ನಾಡುತ್ತಿದ್ದ. ಮಾತು ಮಿತಿಮೀರುತ್ತಿದೆ ಎಂದು ಭಾವಿಸಿದ ಪ್ರೇಕ್ಷಕರಲ್ಲಿ ಒಬ್ಬಾತ ಸೂತ್ರಧಾರನಿಗೆ, ಮಾತು ನಿಲ್ಲಿಸಿ ನಾಟಕ ಪ್ರಾರಂಭಿಸುವಂತೆ ತಾಕೀತು ಮಾಡಿದ. ಇತರ ಪ್ರೇಕ್ಷಕರು ಆತನಿಗೆ ಸುಮ್ಮನಿರುವಂತೆ ಹೇಳಿದರು. ‘ಈತನ ಭಾಷಣ ಕೇಳ್ಳಿಕ್ಕೆ ಬಂದದ್ದಾ, ನಾಟಕ ನೋಡ್ಲಿಕ್ಕೆ ಬಂದದ್ದಾ’ ಎಂಬುದು ಆತನ ಪ್ರಶ್ನೆ. ಇದೀಗ ಪ್ರೇಕ್ಷಕರೂ ಆತನನ್ನು ಪ್ರಶ್ನಿಸಿದ್ದು ಕಂಡು ಆತನ ಸಿಟ್ಟು ಮತ್ತೂ ಹೆಚ್ಚಾಯಿತು. ಆತ ಪ್ರೇಕ್ಷಕರ ಮೇಲೆಯೇ ಮುಗಿಬಿದ್ದ. ಪ್ರೇಕ್ಷಕರೇ ಆತನನ್ನು ಹಿಡಿದು ಗೂಸಾ ಕೊಟ್ಟರು. ವಾಸ್ತವವಾಗಿ ಪ್ರೇಕ್ಷಕರ ಮಧ್ಯದಲ್ಲಿ ನಿಂತು ‘ಮಾತು ಸಾಕು ಮಾಡಿ, ನಾಟಕ ಪ್ರಾರಂಭಿಸಿ’ ಎಂದು ಬೊಬ್ಬಿರಿದಾತ ತಂಡದ ನಟನೇ ಆಗಿದ್ದ!

ಮುಂದೆ ಯಾವತ್ತೂ ನಡೆದ ಪ್ರದರ್ಶನಗಳಲ್ಲಿ ಆತ ‘ಪ್ರೇಕ್ಷಕ’ ಪಾತ್ರ ವಹಿಸುವುದಕ್ಕೆ ಒಪ್ಪಲಿಲ್ಲ!ಇಲ್ಲಿ ಎರಡು ಬಗೆಯ ಚಿತ್ರಣಗಳಿವೆ. ಮೊದಲನೆಯದರಲ್ಲಿ ಪ್ರೇಕ್ಷಕನೊಬ್ಬ ನಾಟಕದ ದೃಶ್ಯವನ್ನು ವಾಸ್ತವವೆಂದು ಬಗೆದದ್ದು. ಎರಡನೆಯದರಲ್ಲಿ ಪ್ರೇಕ್ಷಕ ಸಮುದಾಯವೇ ನಟನನ್ನು ಅರಿಯದಾದದ್ದು! ಎರಡರಲ್ಲೂ ನಟರ ರಂಗತನ್ಮಯತೆಗೆ ಪ್ರೇಕ್ಷಕರು ಸೋತುಹೋದರೆಂಬುದು ಮುಖ್ಯ. ವಾಸ್ತವದಲ್ಲಿ ಅದು ರಂಗಭೂಮಿಯ ಗೆಲುವೂ ಹೌದು.

‍ಲೇಖಕರು Avadhi

December 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: