ಜೀರೋ ಬ್ಯಾಲೆನ್ಸ್.. ಫುಲ್ ‌ಕಾನ್ಫಿಡೆನ್ಸ್..

ದಾಕ್ಷಾಯಿಣಿ ಭಟ್

ದಾಕ್ಷಾಯಿಣಿ ಭಟ್, ನೀನಾಸಂನಲ್ಲಿ ಪದವಿ ಪಡೆದು, ಹಲವು ವರ್ಷಗಳಿಂದ ರಂಗಭೂಮಿಯನ್ನು ಉಸಿರಾಗಿಸಿಕೊಂಡು, ದೃಶ್ಯ ತಂಡ ಕಟ್ಟಿಕೊಂಡು, ನಿರಂತರ ಹೊಸಪ್ರಯೋಗಕ್ಕೆ ಹಾತೊರೆಯುತ್ತಾ, ರಂಗಭೂಮಿಗೆ ಒಡ್ಡಿಕೊಂಡಿದ್ದಾರೆ. ಇವರಿಗೆ ನಿರ್ದೇಶನಕ್ಕೆ ೨೦೧೩-೨೦೧೪ನೇ ಸಾಲಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಉಸ್ತಾದ್ ಬಿಸ್ಮಿಲ್ಲ್ಹಾಖಾನ್ ಯುವಪುರಸ್ಕಾರ್ ಪ್ರಶಸ್ತಿ ಸಂದಿದೆ.

ಕನ್ನಡ ರಂಗಭೂಮಿಯಲ್ಲಿ ಜೀರೋ ಬ್ಯಾಲೆನ್ಸ್ ಫುಲ್‌ಕಾನ್ಫಿಡೆನ್ಸ್‌ ನಿಂದ ಆರಂಭವಾದ ದೃಶ್ಯ(ರಿ) ಇಂದು ವೃತ್ತಿ, ಪ್ರವೃತ್ತಿ, ವಿದ್ಯಾರ್ಥಿಗಳನ್ನೊಳಗೊಂಡು ೧೫ರ ಹರೆಯದಲ್ಲಿರುವ ಹೊತ್ತಲ್ಲಿ ಭಾಸ ಮಹಾಕವಿಯ ಉಕ್ತಿಯಂತೆ,
“ಕಡೆಕಡೆಯೆ ಮರಗೊಂಡ, ಬೆಂಕಿ ತಾನುದಿಸುವುದು
ಅಗೆಯಗೆಯೆ ನೆಲನನದು ನೀರೊಗೆದುಚಿಮ್ಮುವುದು
ಉತ್ಸಾಹವಂತಂಗ ಸಾಧ್ಯವೆಂಬುದದಿಲ್ಲ
ಸರಿದಾರಿಯಲಿ ಮಾಳ್ಪ ಯತ್ನ ಫಲಿಸುವುವೆಲ್ಲ”
-ಎಂಬ ಛಲವಿಡಿದು ಹೊರಟಾಗ ಎದುರಾದ ಸಮಸ್ಯೆಗಳು ಸಾವಿರಾರು. ಅನುಭವಗಳು ಸಹಸ್ರಾರು.

ನಾಟಕವೆಂಬುದು(ಕಲಾವಿದರ) ಕನವರಿಕೆಯ ಕೂಸು, ಗುಂಪು ಚಟುವಟಿಕೆಯಲ್ಲಿ ಕಟ್ಟಿದ ಮನಸುಗಳ ಬಣ್ಣದ ಚಿತ್ತಾರ, ಇದು ರಂಗದ ಮೇಲೆ ಯಶಸ್ವಿಯಾಗಿ ನಡೆಯಲು ರಂಗಮಂದಿರ, ಪ್ರೇಕ್ಷಕರು ಕೂಡಾ ಮುಖ್ಯ. ಒಂದು ಯಶಸ್ವಿ ಪ್ರದರ್ಶನ ನಮ್ಮನ್ನು ಇನ್ನಷ್ಟು ಕಾರ್ಯೋನ್ಮುಖರನ್ನಾಗಿ ಮಾಡಲು ನೆರವಾಗುವುದು. ಹೀಗೆ ಸಿದ್ಧಗೊಂಡ ಒಂದು ನಾಟಕ ಪ್ರಯೋಗ ಪ್ರದರ್ಶನವಾಗಲು ಆಹ್ವಾನ ಸಿಕ್ಕಾಗ ಯಶಸ್ವೀ ಪ್ರದರ್ಶನವಾಗಲು ಮನಸ್ಸು ತುಡಿಯುತ್ತಿರುತ್ತದೆ.

ನಿಂಬೆಕಾಯಿಪುರದಲ್ಲಿ ಒಮ್ಮೆ ‘ವಿನಾಶಕಾಲೇ’ ಯಶಸ್ವೀ ಪ್ರಯೋಗವಾಗಿತ್ತು. ಅಂದು ನಾಟಕ ಪ್ರದರ್ಶನವಾದ ನಂತರ ರಿಟೈರ್ಡ್ ತಹಶಿಲ್ದಾರ್ ಒಬ್ಬರು‌ ತಂಡದ ಪ್ರದರ್ಶನ ಮೆಚ್ಚಿ, ಮನಸ್ಸಿನಿಂದ ಶುಭ ಹಾರೈಸಿ ೫೦೦೦ ರೂ.ಗಳನ್ನು ಗೌರವಧನ ನೀಡಿದ್ದು ಮರೆಯದ ಕ್ಷಣ. ಸಕಲೇಶಪುರದಲ್ಲಿ ‘ಅಗ್ನಿವರ್ಣ’ ನಾಟಕ ಪ್ರದರ್ಶನಕ್ಕೆಂದು ಹೋದಾಗ ಎತ್ತರಕ್ಕೆ ಸ್ಟೇಜ್ ಹಾಕಿದ್ದರು. ಅದು ಕಿರು-ಅಟ್ಟವನ್ನೇರಿದಂತೆ ಇತ್ತು ಪ್ರತೀ ಪಾತ್ರದ ಪ್ರವೇಶ ನಿರ್ಗಮನಕ್ಕೆ ಒಂದೇ ಕಡೆ ಚಿಕ್ಕ ಏಣಿಯನ್ನು ಹಾಕಿದ್ದರು. ಕೆಲವು ಸಲ ಕಷ್ಟಸಾದ್ಯವಾದ್ದರಿಂದ ಸ್ಟೇಜಿನ ಮೇಲೇ ಬದಿಯಲ್ಲಿ ಕೂತು ನಟರು ದೃಶ್ಯಕ್ಕೆ ಪ್ರವೇಶ ಪಡೆಯುತ್ತಿದ್ದರು. ಈ ಪರದಾಟದಲ್ಲೂ ಕಲಾವಿದರ ಪ್ರದರ್ಶನ ಜನ ಮೆಚ್ಚುಗೆಗೆ ಪಾತ್ರವಾಗಿತ್ತು.

ಅರಸೀಕೆರೆಯಲ್ಲಿ ಒಮ್ಮೆ ತಯಾರಿ ಹಂತದ ಬಯಲು ರಂಗಮಂದಿರದಲ್ಲಿ ನಾಟಕ ಪ್ರದರ್ಶನವಾಗಿತ್ತು. ನೋ ಎಂಟ್ರೀ ನೋ ಎಕ್ಸಿಟ್, ಎರಡೂ ಕಡೆ ಗ್ರೀನ್‌ರೂಂ ಎಂಬ ಕಿರುಕೋಣೆ. ಪುಣ್ಯಕ್ಕೆ ಅವುಗಳಿಗಿನ್ನೂ ಕಿಟಕಿಗಳಿಟ್ಟಿರಲಿಲ್ಲ. ಒಂದಷ್ಟು ಹೊತ್ತು ಯೋಚಿಸಿ ಶಾಮಿಯಾನ ಹಾಕುವವರ ಹತ್ತಿರ ಇರುವ ಡಯಾಸ್, ಪರದೆಗಳನ್ನು ತರಿಸಿ ಹಿಂದೆ ಗೋಡೆಗೆ ಜಗಮಗ ಪರದೆಗಳನ್ನು ಉಲ್ಟಾ ಕಟ್ಟಿಸಿದ್ದಾಯಿತು.

ಡಯಾಸ್ ಗಳನ್ನು ರಂಗಮಂಚದ ಮುಂದಕ್ಕೆ ಜೋಡಿಸಿ ಮಂಟಪದ ಒಳಗೆ ಸೈಡ್ವಿಂಗ್ ‌ಕಟ್ಟಲು ಜಾಗವಿಲ್ಲವಾದ್ದರಿಂದ ಹೊರಭಾಗ ಆಚೀಚೆ ಕಟ್ಟಿ, ಹ್ಯಾಲೋಜಿನ್ ಲೈಟನ್ನೇ ಕಂಬಗಳನ್ನು ನೆಡಿಸಿ ಅದಕ್ಕೆ ತಗಡು ಬಳಸಿ ಸ್ಪಾಟ್ ಲೈಟ್ ಮಾಡಿಕೊಂಡದ್ದಾಯಿತು. ಆದರೆ ಮುಂದಿನ ಮುಖ್ಯಘಟ್ಟ ನಟರ ಒಳ-ಹೊರ ಪ್ರವೇಶ. ನಾಟಕ ಅಕಿರಕುರೋಸವನರಶೋಮನ್ ಸಿನಿಮ ಆಧಾರಿತಯು. ಮೋಹನ್‌ಚಂದ್ರ ಅವರ ‘ಬಸ್ತಿ’. ನಟರ ಹೆಚ್ಚು ರಂಗ ಚಲನೆ ಇತ್ತಾದ್ದರಿಂದ ರಂಗ ಮಂಚದ ಪಕ್ಕದ ಕಿಟಕಿಗೆ ಹತ್ತಿರ ಕಲ್ಲನ್ನಿಟ್ಟು ಹತ್ತಿ ಹಾರಿ ಸುತ್ತು ಹಾಕಿಕೊಂಡು ಇನ್ನೊಂದು ಬದಿಯ ಕಿಟಕಿಯಲ್ಲಿ ಹಾಗೇ ಹತ್ತಿ ಹಾರಿ ಎಂಟ್ರೀ ಕೊಡುತ್ತಿದ್ದರು.

ನಟಿಯೊಬ್ಬಳು ಉದ್ದ ಲಂಗ ತೊಟ್ಟದ್ದರಿಂದ ಪದೇ ಪದೇ ಹತ್ತಿ ಹಾರಲು ತೊಡಕಾಗಿ, ಅಭಿನಯಿಸುವುದಕ್ಕಿಂತ ಹತ್ತಿ ಇಳಿಯುವುದರಲ್ಲೇ ಹೆಚ್ಚಾಗಿ ಆಯಾಸಗೊಳ್ಳುತ್ತಿದ್ದಳು. ಇದರಿಂದಾಗಿ ನಟರ ಉತ್ಸಾಹ ವಂತೂ ಕಡಿಮೆಯಾಗಲಿಲ್ಲ. ಮುಂದಿನ ವರ್ಷಅದೇರೀತಿಯರಂಗಮಂದಿರದಲ್ಲಿ ಮತ್ತೊಂದು ನಾಟಕ ಮಾಡಿದೆವು. ಈ ಸಲ ಹಾರುವ ಸಾಹಸ ಮಾಡದೆರಂಗದ ಮುಂಚಾಚನ್ನುಇನ್ನಷ್ಟು ಮುಂದೆ ಅಕ್ಕ-ಪಕ್ಕ ವಿಸ್ತರಿಸಿಕೊಂಡು ಪ್ರದರ್ಶನ ಮಾಡಿದೆವು. 

ಕೋಳಗುಂದ ಎಂಬ ಊರು ನಮ್ಮ ನೆನಪನ್ನು ಸದಾಆವರಿಸುವ ಸ್ಥಳ. ಅಲ್ಲಿ ಸರಳ ವ್ಯಕ್ತಿತ್ವದಒಬ್ಬ ಸ್ವಾಮಿಜಿಯವರಿಂದ ಕಲೆ ಸಂಸ್ಕೃತಿ ಉಳಿಯುವಂತಾಗಿದೆ.  ಆ ಊರಿನ ಜಾತ್ರೆಯಲ್ಲಿ ಎರಡು ವರ್ಷಗಳ ಹಿಂದೆ ‘ವಿನಾಶಕಾಲೇ’ ಎಂಬ ನಾಟಕ ನೇಯೋಟ್ ಸಂಸ್ಥೆಯ ಆಯೋಜನೆಯಲ್ಲಿ ಪ್ರದರ್ಶನವಾಯಿತು. ಅದುವರೆಗೂ ಆಧುನಿಕ ರಂಗಭೂಮಿಯ ನಾಟಕವನ್ನು ನೋಡದ ಅಲ್ಲಿಯ ಹೆಚ್ಚಿನ ಜನ, ಬ್ರೂಣ ಹತ್ಯೆಯ ಬಗ್ಗೆ ಇದ್ದ ನಾಟಕ, ಹೇಗೆ ಸ್ವೀಕರಿಸುತ್ತಾರೋ ಎಂಬ ಆತಂಕ. ಬಿಸಿಲಲ್ಲೆ ಹಾಕಿದ ರಂಗಮಂಚ ಹತ್ತಿ ತಾಲೀಮು ನಡೆಸಿದ್ದಾಯಿತು. ನಮಗೆ ಬೇಕಾದ ಹಾಗೆ ಸಣ್ಣ ಪುಟ್ಟ ತಯಾರಿನಡೆಸಿ ರಾತ್ರಿ ಪ್ರದರ್ಶನಕ್ಕೆ ಸಿದ್ದವಾಗುವ ಹೊತ್ತಿಗೆ ನಿಧಾನವಾಗಿಜನ ಸೇರುತ್ತಿದ್ದರು, ನಾಟಕ ಮುಗಿವ ಹೊತ್ತಲ್ಲಿ ಒಂದೆರಡು ಹೆಣ್ಣು ಜೀವಗಳು ಬಿಕ್ಕಳಿಸಿದ, ಉಸಿರು ಹೊರ ಹಾಕಿದ ಸದ್ದು ಬಂತು, ಒಬ್ಬ ೪೫ ರ ಆಸುಪಾಸಿನ ವ್ಯಕ್ತಿ ಎದ್ದು ನಿಂತು ಹೆಣ್ಣಿಗೆ ನೀಡಬೇಕಾದ ಸ್ವಾತಂತ್ರ್ಯ, ಹಕ್ಕಿನ ಬಗ್ಗೆ ಅವರದೇ ಆದ ರೀತಿಯಲ್ಲಿ ವಿಮರ್ಶಿಸಿದರು. ಇಡೀ ಊರೇ ಅಲ್ಲಿ ನೆರೆದಿತ್ತು. ಎಲ್ಲರೂ ಬಯಲಿನಲ್ಲಿ ಕೂತು ಗಂಭೀರವಾಗಿ ನಾಟಕ ನೋಡಿದ್ದರು.

ನಾಟಕ ಮುಗಿದರೂ ಎದ್ದು ಹೋಗಲಿಲ್ಲ. ಎಲ್ಲರ ಮಾತನ್ನು ಆಲಿಸಿ, ನಾವು ಕೆಳಗಿಳಿದು ಪೂರ್ಣ ಬೆಳಕು ಆರಿದ ನಂತರವೇ ಹೊರಟದ್ದು. ಸ್ವಾಮೀಜಿಯವರಂತೂ ನಾವೂ ಪ್ಯಾಕ್ ಮಾಡಿ ಊಟ ಮಾಡಿ ಹೊರಡುವ ತನಕ ಜತೆಯೇ ಇದ್ದು ಕಳಿಸಿಕೊಟ್ಟರು. ಇದು ಯಾಕೆ ಬಹಳ ಮುಖ್ಯವಾಗುತ್ತದೆಂದರೆ ಕೆಲವರು ಕರೆಸಿದರೆ ಪ್ರದರ್ಶನ ಶುರುವಾಗುವ ತನಕ ನಮ್ಮ ಕಡೆ ತಿರುಗಿಯೂ ನೋಡುವುದಿಲ್ಲ. ನಾಟಕವೆಂದರೆ ಸಂಜೆಯ ಹೊತ್ತಿಗೆಆಗುವುದಲ್ಲ. ಆಮೇಲೆ ಊಟ ಕೊಟ್ಟರಾಯಿತು ಎಂದು ಮದ್ಯಾಹ್ನದ ಊಟವೂ ಕೆಲವು ಕಡೆ ಸಿಗದೆ ಪರದಾಡಿದ್ದೇವೆ. ಕೆಲವರು ನಾವು ಹೋದ ನಂತರ ಅಡಿಗೆ ಮಾಡಿ ಸಂಜೆಗೆ ಊಟ ಕೊಟ್ಟದ್ದಿದ್ದೆ. ಕೆಲವರು ಊಟ ಕೊಟ್ಟು ಸಂಭಾವನೆ ಕೊಡದೆ ಕಳಿಸಿದ್ದಿದೆ. ಈ ಎಲ್ಲಾ ವಿಶಿಷ್ಟ ಕಾರಣಗಳಿಂದ ಅಂದಿನ ಆ ಪ್ರದರ್ಶನ ನೆನಪಿನಲ್ಲಿ ಉಳಿದಿದೆ.

ಅರಸೀಕೆರೆ ಹತ್ತಿರದ ನಾಗತಿಹಳ್ಳಿ ಗುಹೆಯಂತಿದ್ದ ರಸ್ತೆಗಳನ್ನು ನುಸುಳಿ ಊರು ಸೇರಿದ ನಮ್ಮ ಬಸ್ಸನ್ನು ಕಂಡ ಜಾತ್ರೆಯ ಜನ ಓ.. ಎಂದು ಅರಚುತ್ತಾ ನಾಟಕದವರು ಬಂದರು ಎಂದು ಅದ್ದೂರಿ ಸ್ವಾಗತವೇನೋ ನೀಡಿದರು. ನಂತರ ಊಟ ಮುಗಿಸಿ ರಂಗ ಸ್ಥಳದ ತಯಾರಿಗಾಗಿ ಸ್ಟೇಜ್‌ ಎಲ್ಲಿ? ಎಂದು ಕೇಳಿದಾಗ “ಸಂಜೆತಾನೆ ನಾಟಕ ಆಮೇಲೆ ಸ್ಟೇಜ್ ಹಾಕಿ ಕೊಡ್ತೀವಿ ಬಿಡಿ ಎಂದರು” ಅವರಿಗೆ ನಾವು ಮಾಡುವ ನಾಟಕದ ಅರಿವಿರಲಿಲ್ಲ. ನಾವು ಸಹ ಊರೂರು ಸುತ್ತಿ ರಸ್ತೆ ಬದಿಯಲ್ಲಿ ನಾಟಕ ಮಾಡುವವರು ಎಂದೇ ತಿಳಿದಿದ್ದರು. ಸ್ಟೇಜ್ ‌ಇಲ್ಲ, ಲೈಟಿಂಗ್ ‌ಇಲ್ಲ, ನಮ್ಮದು “ಅಭಿಯಾನ” ಎಂಬ ಗಂಭೀರ ನಾಟಕ, ಜನರಿಗೆ ಅರ್ಥವಾಗುತ್ತೋ ಇಲ್ಲವೋ? ಅಂದುಕೊಂಡೆವು.

ಹೆಣ್ಣು ಮಕ್ಕಳು ರೆಡಿಯಾಗಲು ಒಂದು ಮನೆಗೆ ಹೋದಾಗ ‘ಎಂತ ನಾಟ್ಕ ಮಾಡಿರಿ? ಪರ‍್ದೆ ಇಲ್ಲ? ಬಣ್ಣ ಬಣ್ಣದ ಬಟ್ಟೆಇಲ್ಲ? ಊರಿಗ್ ಮುಂಚೆ ಬಂದಿರ? ಒಂದ್ ಪದ ಒಗಿರಿ ನೋಡುವ?’ ಅಂತ ಪ್ರಶ್ನೆಗಳನ್ನು ಹಾಕಿದರು. ೭ ಗಂಟೆಯ ಹೊತ್ತಿಗೆ ಅಂತೂ ನಮಗೆ ಬೇಕಾದಂತೆ ರಂಗ ಸ್ಥಳವನ್ನು ಅಣಿಗೊಳಿಸಿಕೊಂಡು ರಂಗ ಗೀತೆಯನ್ನು ಮುಗಿಸಿದೆವು. ೭:೩೦ಕ್ಕೆ ಸ್ಟೇಜ್‌ ಕಾರ್ಯಕ್ರಮ ಆರಂಭವಾದದ್ದು ೧೦:೩೦ರ ತನಕ ನಡೆಯಿತು. ಕಡೆಗೆ ನಮ್ಮ ಒತ್ತಾಯದ ಮೇಲೆ ರಾತ್ರಿ ೧೧ಕ್ಕೆ ವೇದಿಕೆ ಬಿಟ್ಟು ಕೊಟ್ಟರು ಒಬ್ಬ ಪ್ರಮುಖ ಪಾತ್ರದಾರಿಗೆ ಬೆಳೆಗ್ಗೆ ಎಮ್.ಬಿ.ಬಿ.ಎಸ್ ಪರೀಕ್ಷೆ. ಈ ಒತ್ತಡದಲ್ಲಿಯೇ ಆಕೆ ಅಂಬೆ ಪಾತ್ರವನ್ನು ತುಂಬಾ ಚನ್ನಾಗಿ ಮಾಡಿದಳು. ನೋಡಲು ಜನ ಬರುತ್ತಾರೋ ಇಲ್ಲವೋ ಎಂದುಕೊಂಡ ನಮಗೆ ಸಾವಿರಾರು ಜನರಂಗದ ಮುಂದಲ್ಲದೆ ಮನೆಯ ಕಟ್ಟೆ, ಮರ, ಮನೆ, ಎತ್ತಿನ ಗಾಡಿ ಟ್ಯಾಕ್ಟರ್‌ ಗಳನ್ನು ಹತ್ತಿ ಕುಳಿತು ನಾಟಕ ನೋಡಿ ಹಲವರು ಬಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.

ನಮ್ಮ ಒಟ್ಟು ರಂಗ ವಿನ್ಯಾಸವೇ ಬದಲಾಗಿತ್ತು. ಜನ್ರಲ್ ಲೈಟಲ್ಲೇ ನಟರು ಮೈಕನ್ನು ಕೈಯಲ್ಲಿ ಹಿಡಿದು ಅಭಿನಯಿಸಿದರು! ಇದು ದೃಶ್ಯ ತಂಡದ ನಟರಿಗೆ ವಿಶಿಷ್ಟ ಅನುಭವ. ರಂಗ ತಂಡ ಕಟ್ಟಿಕೊಂಡು ಬೇರೆ ಬೇರೆ ಊರುಗಳಿಗೆ ಹೋದಾಗ ಎದುರಾಗುವ ಒಂದೊಂದು ಘಟನೆಗಳೂ ನಮ್ಮ ಪಾಲಿಗೆ ಅನುಭವದ ಬುತ್ತಿ.

‍ಲೇಖಕರು Avadhi

December 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: