ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಕ್ಷ್ಮಣ ವಿ ಎ ಕಂಡಂತೆ ‘ಕೆರೆ-ದಡ’

ಈ ಕೃತಿಯನ್ನು ಕೊಳ್ಳಲು –https://bit.ly/3q0Yu6h ಈ ಲಿಂಕ್ ಕ್ಲಿಕ್ ಮಾಡಿ

ಪುಸ್ತಕ : ‘ಕೆರೆ-ದಡ’
ಲೇಖಕರು : ವಿದ್ಯಾರಶ್ಮಿ ಪೆಲತ್ತಡ್ಕ 
ಪ್ರಕಾಶನ : ಬಹುರೂಪಿ
ಬೆಲೆ :100 ರೂ

ಸಂಪರ್ಕಿಸಿ: 70191 82729

ಲಕ್ಷ್ಮಣ ವಿ ಎ

ಅಮ್ಮಂದಿರ ದಿನದಂದು ಸಿಕ್ಕ ಅಮ್ಮನಂತಹ ಕವಿತೆಗಳು  

ವರಕವಿ ದ.ರಾ. ಬೇಂದ್ರೆಯವರಿಗೊಮ್ಮೆ ಒಬ್ಬ ವಿದ್ಯಾರ್ಥಿನಿ ʻಒಬ್ಬ ಕವಿ ಎನಿಸಲು ಎಷ್ಟು ಕವಿತೆ ಬರೆಯಬೇಕುʼ ಎಂದು ಕೇಳಿದಾಗ, ಅವರು ಅಷ್ಟೇ ಮಾರ್ಮಿಕವಾಗಿ ʻಒಬ್ಬ ತಾಯಿ ಎನಿಸಿಕೊಳ್ಳಲು ಒಂದು ಮಗು ಹಡೆದರೂ ಸಾಕುʼ ಎಂದು ಹೇಳುತ್ತಾರೆ.

ಒಬ್ಬ ಕವಿ ತನ್ನ ಜೀವಮಾನದಲ್ಲಿ ಒಂದೇ ಒಂದು ಕವಿತೆ ಬರೆಯುತ್ತಾನೆಂಬ ಮಾತು ಜನ ಜನಿತವಾಗಿದೆ. ಮತ್ತು ಅದೇ ಕವಿತೆಯನ್ನು ಕವಿ ಮತ್ತೆಮತ್ತೆ ಅವವೇ ಪದಗಳೊಂದಿಗೆ ಆಟವಾಡುತ್ತ ಕವಿತೆ ರಚಿಸುತ್ತಾನೆಂದು ಹೇಳುತ್ತಾರೆ. ಹೀಗೆ ತಕ್ಷಣಕ್ಕೆ ಆಯಾ ಕವಿತೆ ನೆನಪಿಸಬಹುದಾದರೆ ಅಡಿಗರ ʻನೆಹರು ನಿವೃತ್ತ ರಾಗುವುದಿಲ್ಲʼ, ಕೆ.ವಿ.ತಿರುಮಲೇಶರ ʻಮುಖಾಮುಖಿʼ, ಪ್ರತಿಭಾ ನಂದಕುಮಾರರ ʻನಾವು ಹುಡುಗಿಯರೇ ಹೀಗೆ…ʼ ಇಂತಹ ಘನ ಪರಂಪರೆಯ ಸಾಲಿನಲ್ಲಿ ನಿಲ್ಲಬಹುದಾದಂತಹ ವಿದ್ಯಾರಶ್ಮಿಯವರ ‘ಪ್ರವೇಶ’ ಎಂಬ ಕವಿತೆ ನಿಲ್ಲುತ್ತದೆ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ.

ಕತೆ, ಕಾದಂಬರಿ, ನಾಟಕ ಹಾಗು ಸಾಹಿತ್ಯದ ಇನ್ನಿತರ ಪ್ರಕಾರಗಳನ್ನು ಸುಲಭವಾಗಿ ವಿಮರ್ಶೆಗೆ ಒಡ್ಡಿ ಅದನ್ನು ದಕ್ಕಿಸಿಕೊಳ್ಳಬಹುದು. ಆದರೆ ಕವಿತೆ ಹಾಗಲ್ಲ. ಅದು ಮಾಯಾವಿ. ನಾವು ಅದನ್ನು ಬಗೆದಷ್ಟು –  ʻನಾನು ಹೀಗಲ್ಲ, ಹಾಗೆʼ ಎಂದು ಮತ್ತೆಲ್ಲೋ ಮುಖ ತಪ್ಪಿಸಿಕೊಂಡು ಓಡಾಡುತ್ತಿರುತ್ತದೆ. ಇದೇ ಕಾವ್ಯವನ್ನು ಬಗೆಯುವ ಶಕ್ತಿ ಹಾಗು ಮಿತಿ ಕೂಡ.

ಹೀಗಾಗಿ ಇಲ್ಲಿಯ ಕವಿತೆಗಳನ್ನು ನಾನು ಇಷ್ಟೇ ಅರ್ಥೈಸಿಕೊಳ್ಳಲು ಸಾಧ್ಯವಾಗಿದೆಯೆಂಬ  ವಿನಯ ಮತ್ತು ಅತಿಸಂಕೋಚದಲ್ಲೇ ಈ ಕವಿತೆಗಳ ಬಗ್ಗೆ ಬರೆಯುವ ಅಧಿಕಪ್ರಸಂಗತನಕ್ಕೆ ಇಳಿದಿದ್ದೇನೆ, ಕ್ಷಮೆ ಇರಲಿ.

“ಗುಡಿಯ ಕದ ದಢಾರನೆ ತೆರೆಯಿತೆಂದು 
ಬರಲಾರೆವು ನಾವು,
ದಡಬಡನೆ ಮೆಟ್ಟಿಲು ಹತ್ತಿ.
ಹುಟ್ಟಿನ ಜತೆಗೇ ಸಿಕ್ಕವನು ನೀನು” 

ಎಂದು ಗುಡಿಯೊಳಗೆ ದೇವರನ್ನು ಕಟ್ಟಿಹಾಕಿ  ಕೇವಲ ಪುರುಷರ ಪ್ರವೇಶಕ್ಕೆ ಸೀಮಿತಗೊಳಿಸಿದ ಪುರುಷ ಪ್ರಪಂಚಕ್ಕೆ ಸವಾಲು ಹಾಕುವ ಕವಿತೆಯ ಸಾಲುಗಳ ಮೂಲಕ ಪರಿಚಯವಾದವರು ಕವಯತ್ರಿ ವಿದ್ಯಾರಶ್ಮಿ ಪೆಲತ್ತಡ್ಕ. ಇತ್ತೀಚಿಗೆ ಬಿಡುಗಡೆಯಾದ ಇವರ ಕೆರೆ – ದಡ ಸಂಕಲನ ಓದುತ್ತ ಹೋದಂತೆ ಇವರ ಭಿನ್ನ ಭಿನ್ನ ಕವಿತೆಗಳ ಹೂದೋಟದಲ್ಲಿ ವಿಹರಿಸುತ್ತಿದ್ದೇನೆ. ಪತ್ರಿಕೆಯ ಪುರವಣಿಗಳ ಗಡಿಬಿಡಿಯ ಹಾಟ್‌ಸೀಟಿನಲ್ಲಿ ಕುಳಿತು ಸದಾ ಧಾವಂತದಲ್ಲಿರುವ ಇವರ ಕವಿತೆಗಳಿಗೆ ತಮ್ಮ ವೃತ್ತಿಗೆ ವ್ಯತಿರಿಕ್ತವಾಗಿ ಎಲ್ಲೂ ಅವಸರದ ಧಾಟಿಯಿಲ್ಲದೆ ಒಂದು ಸಂಯಮದ ನದಿಯ ನಡೆಯಂತಹ ಸಹಜ ಲಾಸ್ಯ, ಲಯದಿಂದ ಇವರ ಕವಿತೆಗಳು  ಗಮನಸೆಳೆಯುತ್ತವೆ. ಈ ಕವಿತೆಗಳಲ್ಲಿ ಕಠೋರ ಜಗತ್ತಿನೆಡೆಗೊಂದು ತೆಳು ವಿಷಾದದ ಕಾರುಣ್ಯದ ನೋಟವಿದೆ. ‘ಇವನಾರವ ಇವನಾರವ’ ಎನ್ನದೆ ಇವ ‘ನಮ್ಮವ’ ಇವ ‘ನಮ್ಮವ’ವೆಂಬ ತಾಯ್ತನದ ಒಳಗೊಳ್ಳುವಿಕೆಯ, ಒಡಲುಗೊಳ್ಳುವಿಕೆಯ ತಹ-ತಹಿಕೆ ಇದೆ.

‘ಪ್ರವೇಶ’ವೆಂಬ ಕವಿತೆಯ ಸಾಲುಗಳನ್ನೆ ಮತ್ತೆ ಉಲ್ಲೇಖಿಸುವುದಾದರೆ – 
ಸ್ತ್ರೀಯರ ದರ್ಶನಕ್ಕೆ ತಡೆಯೊಡ್ಡುವ ಅಯ್ಯಪ್ಪ ಸ್ವಾಮಿ ಭಕ್ತಗಣವೇ 

“ನಿಮ್ಮ ಗುಡಿಯ ಹಂಗು ಎಂದಿಗೂ ನಮಗಿಲ್ಲ,
ನಾವು ಎಂದೋ ಒಳಗಿದ್ದೇವೆ 
ಹೊರಗಿರುವವರು ನೀವು 
ದಯಮಾಡಿ ಒಳಬನ್ನಿ …”

ಎಂಬ ಕೊನೆಯ ಸಾಲುಗಳು ವಿನಯ ಮತ್ತು ವಿವೇಕದಿಂದ ಪುರುಷ ಪುಂಗವರನ್ನು ಕಂಗೆಡಿಸಿಬಿಡುವಷ್ಟು ಶಕ್ತಿಶಾಲಿಯಾಗಿವೆ.

“ಬಾಗಿಲು ಇರಬೇಕು 
ಹೊರಗಿನ ಗಾಳಿ ಒಳಬರಲು 
ಒಳಗಿನ ಗಾಳಿ ಹೊರ ಹೋಗಲು”

ಇವರ ಬಹುತೇಕ ಕವಿತೆಗಳಲ್ಲಿ ದೇವರಿಗೆ ಮಾತ್ರವಲ್ಲ ಹುಲು ಮನುಷ್ಯರಿಗೂ ಸದಾ ತೆರೆದೇ ಇರುವ ಹಾರ್ದಿಕ ಸ್ವಾಗತದ ಒಂದು ಬಾಗಿಲು ಇದೆ. ಇದು ಮನದ ಬಾಗಿಲು, ಹೃದಯದ ಬಾಗಿಲು. ಈ ಬಾಗಿಲು, ಮುಚ್ಚಿದ ಲೋಕಕ್ಕೆ, ಬಚ್ಚಿಡುವ ಲೋಕಕ್ಕೆ ಮತ್ತು ಪರಂಪರೆ ಸಂಸ್ಕೃತಿಗಳ ನೆಪದಲ್ಲಿ ಮನೆಯೊಳಗೆ ಬಂಧಿಯಾಗಿಸಿ ಉಸಿರುಗಟ್ಟಿಸುವಿಕೆಗೆ ಸವಾಲೆಸೆದು ಸ್ವತಂತ್ರವಾಗಿ ವಿಹರಿಸಲು ಇಚ್ಛಿಸುವ ಹಕ್ಕಿಯ ಆತ್ಮದಂತಿದೆ.

ಇವರು ಬಾಗಿಲಿನಿಂದ ಒಳಕರೆದು ಸುಮ್ಮನೆ ಕೂರಿಸುವುದಿಲ್ಲ. ತಾವೂ ಆಟವಾಡುತ್ತ ನಿಮ್ಮನ್ನೂ ಆಟದ ರಂಜನೆಗೊಡ್ಡಿ 
‘ಕೆರೆ – ದಡ ‘ದ ಆಟವಾಡಿಸಿ ಓದುಗರನ್ನು ಬಾಲ್ಯಕ್ಕೆ ಕರೆದೊಯ್ಯುತ್ತಾರೆ.

“ನೀರಿಲ್ಲದ ಕೆರೆ, ಏರಿಯಿಲ್ಲದ ದಡ 
ಇದಲ್ಲವಾದರೆ ಅದು, ಅದಿಲ್ಲವಾದರೆ ಇದು 
ಅಲ್ಲಿ ಏರಿ ನಿಲ್ಲಬೇಕು, ಇಲ್ಲಿ ಇಳಿಯಬೇಕು 
ಕೆರೆಯಲಿ ನೀರು ತುಂಬುವುದೇ ಇಲ್ಲ ಏರಿ ಕಟ್ಟಲಾಗುವುದಿಲ್ಲ” 
ಎಂದು ಆಟ ಆಡುತ್ತ ಆಡುತ್ತ ಕೊನೆಯ ಸಾಲಿನಲ್ಲಿ ಲೌಕಿಕದ ಆಟದಿಂದ ಪ್ರಜ್ಞಾಪೂರ್ವಕವಾಗಿಯೇ 
ಓದುಗನನ್ನು ಮೇಲೆಕ್ಕೆತ್ತಿ ಅಲೌಕಿಕತೆಯ ದಡವನ್ನು ಕೆರೆಯ ಏರಿಯ ಮೇಲೆ ನಿಂತು ಕಾಣಿಸುತ್ತಾರೆ.

“ಇದ್ದದ್ದು ಒಂದೇ ಸಂಕ
ಆ ಬದಿಗೂ ಈ ಬದಿಗೂ 
ಹರಿವ ಭಾವಕ್ಕದೆ ದಾರಿ 
ಜೋರು ಮಳೆಗೆ ಮುರಿದು ಬಿದ್ದಿದ್ದೆ ಸೇತು”

ಇವರ ಕವಿತೆಗಳ ಮೂಲಸ್ತೋತ್ರವಾದ ಒಳಗೊಳ್ಳುವಿಕೆ ಇಲ್ಲಿಯೂ ಮುಂದುವರೆದು ಅನುಮಾನ, ಭಿನ್ನಾಭಿಪ್ರಾಯ ಎಂಬ ಮನದ ಕಸಕಡ್ಡಿ, ನೀರಿನಲೆಗೆ ಕೊಚ್ಚಿ ಹೋಗಿ ಬಲಹೀನ ಸೇತು ಮುರಿದು, ಗಟ್ಟಿಮುಟ್ಟಾದ ಮರ ಮುಟ್ಟುತಂದು ಯಾವ ಬಲಹೀನ ಮಾತಿಗೂ ಅಲುಗದ ಸೇತುವನ್ನು ಭದ್ರವಾಗಿ ಕಟ್ಟಿ, ಆ ಸಂಕವು ತಮ್ಮ ಕಾಲಕ್ಕಷ್ಟೇ ಅಲ್ಲದೆ ಕಾಲಕಾಲಕ್ಕೂ ಸ್ಥಿರವಾಗಿ ನಿಲ್ಲಲಿ ಎಂಬ ಸದಾಶಯದೊಂದಿಗೆ ಸಾಲು ಮುಗಿಸಿದಾಗ ಬಗ್ಗಡವಿಲ್ಲದ ತಿಳಿನೀರು ಕಾಲ ಕೆಳಗೆ ಹಾಯ್ದು ಹೋಗುತ್ತಿರುತ್ತದೆ.

ಕಟ್ಟುವುದಕ್ಕಿಂತ ಮುರಿಯುವುದರಲ್ಲಿ ಹೆಚ್ಚು ಆಸ್ಥೆವಹಿಸುವ ವರ್ತಮಾನದ ದರ್ದುಗಳಿಗೆ ಈ ಕವಿತೆಯೊಂದು ಸೌಹಾರ್ದದ ಸೇತುವೆ ಕಟ್ಟುವಿಕೆಗೆ ಮಾದರಿಯೆನಿಸುತ್ತದೆ.

ಮುಟ್ಟಿ – ಕಟ್ಟಿ – ಮತ್ತೆ ಕೆಡುಹುವ ಕಠಿಣ ಸವಾಲಿನ ಬದುಕಿನಲ್ಲಿ ನಮ್ಮ ನಮ್ಮ ಮುಖಕೆ ಮೆತ್ತುವ ಕಲೆಗಳೆಷ್ಟೋ? ಗೀರು ಗಾಯಗಳೆಷ್ಟೋ? ಆದರೂ ಅವರು ಇಲ್ಲಿ ನಿರಾಶಾವಾದಿಯಲ್ಲ. ಕಲೆ ಇರಲಿ ಎನ್ನುತ್ತಾರೆ.

“ಬಾರಿ ಬಾರಿ ತಿಕ್ಕಿದರೂ 
ಹೋಗುವುದಿಲ್ಲ ಕೆಲವೊಮ್ಮೆ 
ಜಗಮೊಂಡ ಕಲೆ 
ನಿಂತೇ ಬಿಡುತ್ತದೆ ಜಾಗೃತೆ ತಪ್ಪಿದರೆ 
ಇದ್ದುಕೊಳ್ಳಲಿ ಬಿಡಿ, ಕಲೆ ಒಳ್ಳೆಯದೆ”

ಎನ್ನುತ್ತಾ ಕೊನೆಗೆ

“ಉಳಿತಯುತ್ತ ಹೋಗಲಿ ಬಗೆ ಬಗೆಯ ಕಲೆ 
ದೃಷ್ಟಿಗಾದರೂ ಬೊಟ್ಟಿನಂಥ ಒಂದು ಪುಟ್ಟ ಕಲೆ
ಇಲ್ಲದಿರೆ ಉಳಿಯುವುದು ಖಾಲಿ ಹಾಳೆ 
ಕಲೆ ಇರಲೇಬೇಕು”.

ಯಾರೋ Left ಎಂದು ಗುಂಪು ತೊರೆದಾಗ ತಮ್ಮ ಬದುಕಿನಿಂದ ಹೇಳದೆ ಕೇಳದೆ ಥಟ್ಟಂತ ಎದ್ದು ಹೋದಾಗ ಮೂಡಿಬರುವ ಒಳಸೆಲೆಯ ಸಾಲುಗಳು ಹೀಗಿವೆ… 

“ಆಗಮನಕೂ ಬಾಗಿಲಿದೆ 
ಮುನಿಸಿಕೊಂಡು ಹೋದವರಿಗೆ 
ಕಾಲ ಎಳೆದೊಯ್ದವರಿಗೆ ಇಲ್ಲಿ ದ್ವಾರವಿಲ್ಲ
ಒಬ್ಬೊಬ್ಬರಿಗೂ ಒಂದೊಂದು ಸಮಯ 
ತೆರೆವ ಕದಕೆ ಕಾಯಬೇಕು…

ಮನೆ ಬಿಟ್ಟು, ಮನಸು ಬಿಟ್ಟು ಹೊರಗೆ ಹೋದವರ ನೋವಿಗೊಂದು ಶಕ್ತ ಪ್ರತಿಮೆಯಾಗಿ ನಿಲ್ಲುವ ಕವಿತೆ – ‘ಗ್ರೂಪ್ ಫೋಟೋ’ ಸಾಲುಗಳು ಹೀಗಿವೆ‌.

“ಇನ್ಯಾವಾಗ ಇವರೆಲ್ಲ ಸಿಗುವುದೋ ಏನೋ 
ತೆಗೆದಾಗ ಚೆಂದಕೆ ತೆಗೆದುಬಿಡಬೇಕು,
ಮತ್ತೆ ಸಿಕ್ಕಾಗ ಇದೇ ಚಿತ್ರ ಸಿಗುವುದು ಸುಲಭವಲ್ಲ…
ಜೊತೆ ಜೊತೆಯಲಿ ಇರುವುದೆಂದರೆ ಹಾಗೇ,
ಸುಲಭವಲ್ಲ”

ಎಂದು ಈ ಮೂರು ದಿನದ ಸಂತೆಯ ಕ್ಷಣಿಕತೆಯನ್ನು ಆರ್ದ್ರವಾಗಿ ತೆರೆದಿಡುತ್ತಾರೆ.

ಅಷ್ಟೇ ಅಲ್ಲದೆ ಒಂಟಿಯಾಗಿ ಸೆಲ್ಫಿ ತೆಗೆದುಕೊಂಡು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕುವ ಒಬ್ಬ ಹುಡುಗಿಯ ನೋಡಿ – ಪಾಪ! ಆ ಹುಡುಗಿಗೆ ಯಾರು ಫೋಟೊ ತೆಗೆದುಕೊಡುವವರಿಲ್ಲವೇ? ಎಂದು ಒಳಗೊಳಗೇ ಮರಗುತ್ತ  ಆ ಒಂಟಿ ಜೀವಿಯ ಬಗ್ಗೆ ಕನಿಕರ ತೋರುತ್ತ… 

“ನೋವು ನೋಯಲು ಒಬ್ಬರು ಸಾಕು 
ಸಂಭ್ರಮಕ್ಕೆಲ್ಲ ಒಬ್ಬಳಿದ್ದರೆ ಚಂದವೇನೇ?
ಯಾಕೋ ಈಗೀಗ ಸೆಲ್ಫಿ ಅಂದರೆ ಸಂಕಟ” ಎಂದು ಈ  ಆಧುನಿಕ ಜಗತ್ತು ಸೃಷ್ಟಿಸಿದ ನಿರ್ವಾತ, ಹಾಗು ಒಂಟಿತನವನ್ನು ದಾಖಲಿಸುತ್ತಾರೆ.

ಲೋಕ ಕಟ್ಟುವುದಕ್ಕೆ ಮಾತ್ರ  ಕವಿತೆಯಲ್ಲ. ನಮ್ಮೊಳಗಿನ ಮನದ ಸಿಕ್ಕುಗಳನ್ನೂ ಬಿಡಿಸಿಕೊಂಡು ಬದುಕನ್ನು ಚಂದಗಾಣಿಸಿಕೊಳ್ಳುವುದರಲ್ಲಿ ಇವರಿಗೆ ಆಸಕ್ತಿ.

ಇವರು ತಮ್ಮ ಬೈತಲೆ ತೆಗೆಯುವಾಗ, ಅಕ್ಕಿ ತೊಳೆಯುವಾಗ, ಇಯರ್‌ಫೋನಿನ ಗಂಟು ಹಾಕಿಕೊಂಡ ವೈರುಗಳನ್ನು ಬಿಡಿಸುವಾಗ, ಸ್ವಗತಗಳಂತಹ ಸಾಲುಗಳಲ್ಲಿ ಜೀವಪರತೆ ಗೋಚರಿಸುತ್ತ ತಮ್ಮ ಚಂದನೆಯ ಬದುಕು ಕಟ್ಟಿಕೊಳ್ಳುವ ಅದಮ್ಯ ಹಟದಿಂದಲೇ ಮೂಡಿಬಂದ ಸಾಲುಗಳಂತೆ ಕಾಣಿಸುತ್ತವೆ.

“ಆ ತುದಿಯ ಎಳೆದು ಬಿಡಿಸ ಹೋದರೆ 
ಈ ತುದಿ ಒಳಗೆ ನುಸುಳಿ ಸಿಕ್ಕು – ಸಿಕ್ಕು 
ತುಂಡಾಗುವ ಭಯ…

ಆಗಾಗ ಕೈ ಗೆತ್ತಿ ಬಿಡಿಸಿ ಕಿವಿಗಂಟಿಸಬೇಕು 
ಒಲವನು ಎದೆಯಲಿ 
ಕಾಪಿಡುವಂತೆ 
ಮರೆತರೆ ಗಂಟಾಗುವುದು ಬಲು ಬೇಗ”

ಇದಿಷ್ಟು ಅಲ್ಲ, ಇದು ಇಷ್ಟೇ ಅಲ್ಲ ಅವರ ಹೊರಲೋಕ.

ಇವರ ಅರೆತೆರೆದ ಮನೆಯ ಬಾಗಿಲಿನೊಳಗೊಂದು ಪುಟ್ಟ, ಆಪ್ತವಾದ ಒಳಲೋಕವಿದೆ. ಈ ಒಳಲೋಕದಲ್ಲಿ ಗೊಂಬೆಯಂತಹ ಮಗಳ ಮಮತೆಯಲ್ಲಿ ಮೀಯ್ಯುತ್ತಾರೆ. ಅಮ್ಮ ಅಜ್ಜಿಯ ನೆನಪಿನಲ್ಲಿ ಕನವರಿಸುತ್ತಾರೆ.

“ನೆಲದಲ್ಲಿ ಸಿಕ್ಕ ನಗೆ” ಎಂಬ ಕವಿತೆಯಲ್ಲಿ ತಮ್ಮ ಕವಿತೆಯಂತಹ ಮಗಳನ್ನು ಹೂವಿಗೆ ಹೋಲಿಸುತ್ತ 
ತಮ್ಮ ಅಜ್ಜಿ, ಅಮ್ಮ ಮಗಳು ಎಂಬ ಮೂರು ತಲೆಮಾರುಗಳ ಸಂಬಂಧಗಳನ್ನು ಒಂದೇ ದಾರದಲ್ಲಿ ಪೋಣಿಸುತ್ತ – 
ತಲೆ ತಲೆಮಾರಿನ ಕಿವಿಮಾತನ್ನು ಮಗಳಿಗೂ ದಾಟಿಸುತ್ತಾರೆ.

“ನಾಳೆ ಎಲ್ಲ ಬಿಟ್ಟು ಹೊರಡುವಾಗ 
ಗಂಧ ಉಳಿಯಬೇಕು ಕೂಸೇ ಚಂದವಲ್ಲ”
“ನೀನು ಏಳುವುದಕ್ಕೇ ಕಾಯುವುದು.
ಕಾಯುವುದೇನು? ನೀನು ನನ್ನೊಳಗೆ ಎದ್ದೆ 
ಇದ್ದಿ ಸದಾ”

“ಅವರು ನಿನ್ನ ನೋಡಲಿ,
ಹಾಡಲಿ, ಎತ್ತಿ ಮುದ್ದಾಡಲಿ 
ಇನ್ನೀಗ ನೀನು ಜಗದ ಕೂಸು” ಎಂದು ಪುಟ್ಟ ಮಗುವನ್ನೂ ಮತ್ತು ಈ ಸಂಕಲನದ ಮೂವತ್ತಾರು ಪುಟ್ಟ ಪುಟ್ಟ ಕವಿತೆಗಳನ್ನೂ ಲೋಕದ ತೋಳುಗಳಿಗೆ ವರ್ಗಾಯಿಸಿ ಹಗುರಾಗುತ್ತಾರೆ.

ಬಾಳ ಬೆಳಕಿನಂತಹ ಮಗಳ ಎಲ್ಲೆಲ್ಲೂ ಇದ್ದಾಳೆ ಇಲ್ಲಿ – ಸದಾ ಅವರೊಳಗಿನ ಕವಿತೆಯಂತೆ ಸದಾ ಎಚ್ಚರವಾಗಿ. 
ಹಾವು ಏಣಿಯಾಟವಾಡುವಾಗ ಸೋಲುವ ಅವ್ವನ ಕಂಡು ಮಗಳು ಮರಗುತ್ತಾಳೆ. ಅವ್ವ ತಾನು ಸೋಲಲೆಂದೇ ಆಟವಾಡುವಾಗ ಏಣಿಗಳು ಅವಳನ್ನೇ ಕನಿಕರದಿಂದ ನೋಡುತ್ತವೆ.

“ರೀಯರ್‌ವ್ಯೂ ಮಿರರ್”  ಕವಿತೆಯಲ್ಲಿ 
ಪ್ರತಿ ಮನುಷ್ಯನಿಗೂ ತನ್ನ ಬೆನ್ನು ಹಿಂದೆ ಕಾಣುವ ಬೆನ್ನುಕನ್ನಡಿ ಇರಬೇಕೆಂದು ಬಯಸುತ್ತಾರೆ.

‘ಜಂಟಿ’ ಕವಿತೆಯಲ್ಲಿ ಬಣ್ಣ ಬಣ್ಣಗಳ ಸವೆದು ಹಳೆಯ ಸಾಬೂನಿನೊಂದಿಗೆ ಅದರ ಜೊತೆ ಅಂಟಲಾರದ ಧಿಮಾಕಿನ ಹೊಸ  ಸಾಬೂನನ್ನು ತಿವಿಯುತ್ತ 

“ಅಷ್ಟು ಸುಲಭವಲ್ಲ ಸ್ವಾಮಿ 
ಸವೆ ಸವೆದು ಮುಗಿಯಬೇಕು 
ನಿನ್ನದೂ ಇಲ್ಲ ನನ್ನದೂ ಇಲ್ಲ 
ನಮ್ಮಿಬ್ಬರದೇ ಎನ್ನುವಂತೆ ಜಂಟಿಯಾಗಿ” 

ಎನ್ನುತ್ತ ಮಗಳಿಗೆ ಬದುಕನ್ನು ಎದಿರಸಲು ಸಜ್ಜುಗೊಳಿಸುತ್ತಾರೆ.

ಇವರ ಮಿತವಾದ ಮೆಲು ಮಾತುಗಳಂತೆ ಇವರ ಕವಿತೆಗಳೂ ಹದವಾದ ಭಾಷೆಯೊಂದಿಗೆ ಒಡಮೂಡುತ್ತ 
ತಮ್ಮ ಸರಳತೆ ಮತ್ತು ಅವರ ಮೌನದಷ್ಟೇ ಗಹನವಾಗಿ ಓದುಗರನ್ನು ತಟ್ಟುತ್ತವೆ, ಮುಟ್ಟುತ್ತವೆ.

ನನಗೆ ಹೇಳಲಿಕ್ಕಿರುವುದು ಇಷ್ಟೇ. ಉಳಿದಿದ್ದು ಬಗೆಯುವುದನ್ನು ಓದುಗರಿಗೆ ಬಿಟ್ಟು ತಾವು ಮೌನ‌ವಾಗುತ್ತಾರೆ.

ಅವರ ಕೊನೆಯ ಮಾತು ಕವಿತೆಯಲ್ಲಿ – 

ಕೊನೆಯ ಕುಡತೆಯ ಹಾಲನ್ನು ಬಹಳ ಎಚ್ಚರದಿಂದ ಬಳಸಬೇಕೆಂದು ಹೇಳುತ್ತಾ, ಮಾತುಗಳನ್ನೂ ಅಷ್ಟೇ ಎಚ್ಚರದಲ್ಲೇ ಆಡಬೇಕು.

“ಕೊನೆಯ ಮಾತಾದರೂ ಅಷ್ಟೇ.
ಅಳೆದೂ ಸುರಿದೂ ಆಡಬೇಕು 
ಬೆನ್ನುಹಾಕಿದವರು ತಿರುಗಿ ಬರಬೇಕು
ಸಾವಿರ ಮಾತಿಗೆ ಮುನ್ನುಡಿಯಂತಿರಬೇಕು”.

ಈ ಒಟ್ಟಾರೆ ಕವಿತೆಗಳಲ್ಲಿ ಎಲ್ಲಿಯೂ ಹುಸಿ ಭಾವುಕತೆಯಾಗಲಿ, ರೂಪಕ, ಪ್ರತಿಮೆಗಳ ಒಣ ಆಡಂಬರವಾಗಲಿ ಇಲ್ಲದೆ ಸರಳವಾಗಿ ಮತ್ತು ಅಷ್ಟೇ ಆಳವಾಗಿ ಧ್ಯಾನಿಸುವಂತಹ  ಕವಿ ತನ್ನ  ಸ್ವಗತದಲ್ಲಿ ಹೇಳಿಕೊಳ್ಳುವ ವೈಯುಕ್ತಿಕ ತೆಯೊಂದು ಸಾರ್ವತ್ರಿಕವಾಗಿ, ಏಕಾಂತವೊಂದು ಲೋಕಾಂತವಾಗುತ್ತ, ಬೆರಗುಗೊಳಿಸುತ್ತ  ಮತ್ತೆ ಮತ್ತೆ ಓದುವಂತಹ ಗುಣ ಪಡೆದುದರಿಂದ ಇದೊಂದು ಸಮೃದ್ಧ ಸಾವಯವ ಸಂಕಲನವೆಂದು ಧೈರ್ಯವಾಗಿ ಹೇಳಬಹುದು.

‍ಲೇಖಕರು avadhi

22 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading