
ಲಂಡನ್ ನಿಂದ ಅರ್ಪಿತಾ ರಾವ್
ಎರಡು ವರ್ಷಗಳ ಹಿಂದೆ ಭಾರತಕ್ಕೆ ಹೋಗಿದ್ದಾಗ ನಿಮ್ಮ ‘ಯಾವ ನಾಳೆಯೂ ನಮ್ಮದಲ್ಲ’ ಪುಸ್ತಕವನ್ನು ಕೊಂಡು ತಂದಿದ್ದೆ.
ಲಂಡನ್ ಗೆ ಬಂದ ನಂತರ ಓದಲು ಸಮಯ ಕೂಡಿ ಬಂದಿರಲಿಲ್ಲ. ಊರಿನಿಂದ ಅಮ್ಮ ನನ್ನ ಬಾಳಂತನಕ್ಕೆ ಬಂದಾಗ ನಿಮ್ಮ ಆತ್ಮ ಚರಿತ್ರೆಯನ್ನು ಓದಿ ಬಹಳ ಮನಮುಟ್ಟುವಂತಿದೆ ಎಂದಿದ್ದರು. ಅವರಿಗೆ ನಿಮ್ಮ ಫೋಟೋಗಳನ್ನು ಫೇಸ್ಬುಕ್ ನಲ್ಲಿ ತೋರಿಸಿದ್ದೆ. ಈಗ ನನ್ನ ಮಗ ಒಂದು ವರ್ಷದವನಾದ್ದರಿಂದ ಸ್ವಲ್ಪ ಬಿಡುವಿನ ಸಮಯ ಸಿಗುತ್ತಿದೆ. ಹಾಗೆ ಬಿಡುವಿನ ಸಮಯದಲ್ಲಿ ಓದಲು ಮೊದಲು ಎತ್ತಿಕೊಂಡಿದ್ದೆ ನಿಮ್ಮ ಪುಸ್ತಕ.
ಮೊದಲ ಸ್ವಲ್ಪ ಪುಟಗಳು ಅಷ್ಟು ಇಂಟೆರೆಸ್ಟಿಂಗ್ ಎನಿಸಲಿಲ್ಲವಾದರೂ ಓದಿಸಿಕೊಂಡು ಹೋಗುವಷ್ಟಿತ್ತು. ನಂತರದ ನಿಮ್ಮ ವೃತ್ತಿ ಮತ್ತು ಬದುಕಿನ ಮದುವೆಯ ನಂತರದ ದಿನಗಳನ್ನು ಬಹಳ ಸ್ವಾರಸ್ಯಕರವಾಗಿ ವರ್ಣಿಸಿದ್ದೀರಿ. ಅದರಲ್ಲೂ ಬೆಂಗಳೂರಿನ ಬಗ್ಗೆ ಅದು ಹಿಂದೆ ಹೇಗಿತ್ತು ಎಂಬ ಬಗ್ಗೆ ಬರೆದುದನ್ನು ಓದಿದಾಗ ಇನ್ನಷ್ಟು ಅದರ ಬಗ್ಗೆ ಬರೆಯಬಹುದಿತ್ತು ,ಇನ್ನಷ್ಟು ಓದಬೇಕು ಎಂದೆನಿಸುತ್ತದೆ.
ಆಗಿನ ಕಾಲದಲ್ಲೇ ನೀವು ವೃತ್ತಿ ಮತ್ತು ಮನೆ ನಡೆಸಿಕೊಂಡು, ಕಾರ್ ಡ್ರೈವಿಂಗ್ ಕೂಡ ಕಲಿತಿರುವುದು ಸೋಜಿಗ ಎನಿಸಿತು. ಜೀವನದ ಕೆಲವು ಘಟ್ಟಗಳನ್ನು ಕುತೂಹಲಕಾರಿಯಾಗಿ ಬರೆದಿರುವುದು ಓದುಗನಲ್ಲಿ ಇನ್ನಷ್ಟು ಆಸಕ್ತಿ ಮೂಡಿಸುತ್ತದೆ. ಬ್ಯಾಂಕ್ ಕೆಲಸದಲ್ಲಿ ಅನುಭವಿಸಬೇಕಾಗಿ ಬರುವ ಕೆಲವು ಪೇಚಾಟಗಳು ಮತ್ತು ಒಳ ರಾಜಕೀಯಗಳ ಬಗ್ಗೆ ಆಶ್ಚರ್ಯ ಹುಟ್ಟಿಸುವಂತಿದೆ.
ನೀವು ಅಪಘಾತದಿಂದ ಚೇತರಿಸಿಕೊಂಡ ರೀತಿ ಮತ್ತು ಹೊತ್ತ ಜವಾಬ್ದಾರಿ ನಿಜಕ್ಕೂ ಮೆಚ್ಚತಕ್ಕದ್ದು. ನೀವು ಜೀವನವನ್ನು ನೋಡುವ ಪರಿ ಕೂಡ ನಮ್ಮಂತವರಿಗೆ ಮಾದರಿ. ನಿಮ್ಮ ಜೀವನದಲ್ಲಾದ ಕೆಲವು ವಿಷಾದಕರ ಘಟನೆಗಳನ್ನು ಓದಿ ಖೇದವೆನಿಸುತ್ತದೆ.ಕೆಲವು ಘಟನೆಗಳನ್ನು ಓದಿದಾಗ ಕಣ್ಣೀರು ಬಂದಿತ್ತು. ಹೌದು ಕೆಲವೊಮ್ಮೆ ಅವಕಾಶಗಳು ಇದ್ದರೂ ಕೂಡ ಇಂದಿನ ಒತ್ತಡದ ಬದುಕಿನಲ್ಲಿ ನಮ್ಮ ಜೀವನವನ್ನು ನಾವೇ ಹಾಳು ಮಾಡಿಕೊಂಡುಬಿಡುತ್ತೇವೆ ಬದುಕಲು ಮರೆತುಬಿಡುತ್ತೇವೆ ಎಂಬುದಂತೂ ಸತ್ಯ.
ನಿಮ್ಮ ಪುಸ್ತಕವನ್ನು ಓದಿಕೊಂಡು ಹೋದಂತೆಲ್ಲಾ ಜೀವನದಲ್ಲಿ ಎಷ್ಟೆಲ್ಲಾ ಏಳು ಬೀಳುಗಳು ಬರಬಹುದು ಆದರೂ ಅದರಿಂದ ಹೊರಬಂದು ಏನಾದರೂ ಸಾಧಿಸಬೇಕು ಎಂಬ ಛಲವಿದ್ದರೆ ಏನಾದರೂ ಸಾಧಿಸಬಹುದು ಮತ್ತು ಹಾಗೆ ಎನೂ ಮಾಡದೆ ಕೂಡ ಬದುಕಿದ್ದೇವೆ ಎಂದು ಕುಳಿತಲ್ಲೇ ಸಮಯ ಕಳೆದುಬಿಡಬಹುದು ಆಯ್ಕೆ ನಮ್ಮ ಕೈಯಲ್ಲೇ ಇದೆ ಎಂಬ ಸತ್ಯ ಅರ್ಥವಾಗುತ್ತದೆ.
ನೀವು ಬರೆದ ಕೊನೆಯ ಎರಡು ಪುಟಗಳು ಮನಸ್ಸಿಗೆ ಬಹಳ ತಟ್ಟುವಂತಿದೆ. ನಾನು ಅದನ್ನು ಮತ್ತೆ ಮತ್ತೆ ಓದಿಕೊಂಡೆ. ಎಷ್ಟು ಅರ್ಥಪೂರ್ಣವಾಗಿ ಬದುಕು ಏನು ಎಂಬುದನ್ನು ವಿವರಿಸಿದ್ದೀರಿ. ಈ ವಯಸ್ಸಿನಲ್ಲಿಯೂ ನೀವು ಬದುಕಿನ ಬಗ್ಗೆ ತೋರುವ ಆಸಕ್ತಿ, ಕಲೆ ಮತ್ತು ಸಾಹಿತ್ಯದ ಬಗ್ಗೆ ನಿಮಗಿರುವ ಆಸಕ್ತಿ ನಿಮ್ಮ ಸಾಧನೆಗೆ ಹಾಟ್ಸ್ ಆಫ್ ಹೇಳಲೇ ಬೇಕು.
ನಿಮ್ಮ ಆರೋಗ್ಯ ಸುಧಾರಿಸಿ ನಿಮ್ಮ ಲವಲವಿಕೆ ಇನ್ನಷ್ಟು ಹೆಚ್ಚಲಿ ಎಂಬುದೇ ನನ್ನ ಆಶಯ. ನಿಮ್ಮಂತವರ ಅವಶ್ಯಕತೆ
ಈ ಸಮಾಜಕ್ಕೆ ಬಹಳಷ್ಟಿದೆ. ನಿಮ್ಮ ಉಳಿದ ಪುಸ್ತಕಗಳನ್ನು ಈ ಭಾರಿಯ ಭಾರತದ ಭೇಟಿಯಲ್ಲಿ ತಂದು ಓದುವೆ. ನೀವು ಇನ್ನಷ್ಟು ಪುಸ್ತಕಗಳನ್ನು ಬರೆಯಿರಿ ನಿಮ್ಮ ಬರವಣಿಗೆ ಬಹಳ ಖುಷಿಯಾಗುತ್ತದೆ.




ಬರಹ ಓದಿ ಈ ಪುಸ್ತಕ ಓದುವ ಹಂಬಲ ಮೇಡಮ್. Thanks.
ಥ್ಯಾಂಕ್ಯೂ ಆರ್ಪಿತಾ, ಥ್ಯಾಂಕ್ಯೂ ಅವಧಿ
Arpi, ninnashte muddu baraha kane