ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಲಂಕೆಯಲ್ಲೀಗ ಇರುವುದೆಲ್ಲಾ ಅವಶೇಷಗಳೇ..’ – ಸಣ್ಣ ಕಥೆ

ಅವಶೇಷಗಳು!

-ಡಾ.ಎಸ್.ಬಿ.ಜೋಗುರ


‘ಆ ದಿನಕ್ಕೆ ಒಂಚೂರೂ ಕರುಣೆ ಇರಲಿಲ್ಲ. ಕೈಯಲ್ಲಿರೋ ಬನ್ ತುಂಡು ಬಾಯಿಗಿಡುವ ಮೊದಲೇ ಆ ಬಾಲಕನ ಎದೆಗಿಳಿದ ಮೂರು ಗುಂಡುಗಳು, ತೂತು ಕೊರೆದು ಪಾರಾಗಲು ಜಾಗ ಕಂಡಿದ್ದವು. ಆ ಪುಟ್ಟ ಪೋರ ಅಂಗಾತ ದೊಪ್ಪನೇ ಮಣ್ಣ ಹುಡಿಯಲ್ಲಿ ಬಿದ್ದ. ಗಟ್ಟಿಯಾಗಿ ಹಿಡಿದ ಮುಷ್ಟಿಯೊಳಗಿನ ಬನ್ ಪುಡಿಪುಡಿಯಾಗಿತ್ತು. ಸ್ತಬ್ಧವಾದ ಅವನ ಆ ಕಣ್ಣುಗಳಲ್ಲಿ ಉಸಿರು ನಿಂತ ಮೇಲೂ ಹಸಿವು ನರ್ತಿಸುತ್ತಿತ್ತು.’ ಹಾಗೆಂದು ಪತ್ರಿಕೆಯಲ್ಲಿ ಬಾಕ್ಸ್ ಐಟೆಂ ಆಗಿ ಬಂದ ವರದಿಯನ್ನು ಓದಿದ್ದೇ ತಡ ಗುರುಪ್ರಕಾಶ ಗಲಿಬಿಲಿಗೊಂಡಿದ್ದ. ಏನೋ ಒಂದು ಬಗೆಯ ಅವ್ಯಕ್ತ ನೋವು, ತಹತಹಿಕೆಯನ್ನು ಅನುಭವಿಸಿದ್ದ… ತೊಳಲಾಡಿದ್ದ. ಆ ಘಟನೆಯನ್ನು ಓದಿ, ಆ ಬಾಲಕ ಶವವಾಗಿದ್ದ ಚಿತ್ರವನ್ನು ನೋಡಿ, ಆತ ಗಾಢವಾಗಿ ನಲುಗಿಹೋಗಿದ್ದ. ಆ ಗಳಿಗೆಯಿಂದ ಶ್ರೀಲಂಕಾದ ಆ ಬಂಡುಕೋರರ ನೆಲೆಯನ್ನೊಮ್ಮೆ ನೋಡಿಬರಬೇಕೆಂದು ಅವನ ಮನಸು ಒಂದೇ ಸವನೆ ತುಡಿಯುತ್ತಿತ್ತು… ಹಾತೊರೆಯುತ್ತಿತ್ತು.
ಕಾಲೇಜಿನ ವೆಕೇಶನ್ ವೇಳೆಯಲ್ಲಿ ಹದಿನೈದು ದಿನಗಳ ನಿರಂತರ ಕಟಿಬಿಟಿಯ ಪರಿಣಾಮ ಎನ್ನುವ ಹಾಗೆ, ಪ್ಯಾಕೇಜ್ ಟೂರಲ್ಲಿ ತನ್ನ ಕಾಲೇಜಿನ ಇತಿಹಾಸದ ಅಧ್ಯಾಪಕ ರಾಮನಾರಾಯಣ ಜೊತೆಗೂಡಿ ಶ್ರೀಲಂಕಾ ಪ್ರವಾಸಕ್ಕೆ ಆತ ತೆರಳಿರುವದಿತ್ತು. ಲೋಕಲ್ ಟೂರಿಸ್ಟ್ ಬಸ್ಸಿನಲ್ಲಿರುವ ಮೂವತ್ತು ಜನರ ಪೈಕಿ ಕರ್ನಾಟಕದವರೇ ಹತ್ತು ಜನ. ಅಲ್ಲಿಗೆ ಹೋಗುವದು ಬೇಡ ಎಂದು ಅವರೆಲ್ಲರೂ ಹೇಳಿದ ಮೇಲೂ ಅವನು ಕೇಳಿರಲಿಲ್ಲ. ಅವನು ಕೇಳುವವನೂ ಅಲ್ಲ. ‘ಅಲ್ರಯ್ಯಾ ನಾವು ಇಲ್ಲಿಯವರೆಗೂ ಬಂದಿದ್ದೀವಿ, ಮತ್ತೆ ಮತ್ತೆ ಬರೋಕೆ ಸಾಧ್ಯವಿಲ್ಲ. ನಾನು ಮಾತ್ರ ಆ ಜಾಗೆಯನ್ನು ನೋಡಿಯೇ ಹೋಗೋದು’ ಎಂದು ಹಟ ಹಿಡಿದಿದ್ದ. ಆ ಬಂಡುಕೋರರ ಜಾಗ ಮೊದಲೇ ಗಂಡಾಂತರಗಳ ಗೂಡು. ಅದರ ಉಸಾಬರಿ ಬೇಡ ಎಂದು ಪ್ರವಾಸಿಗರೆಲ್ಲರೂ ಹೇಳಿದ ಮೇಲೂ ಅವನು ಮನಸು ಬದಲಾಯಿಸಿರಲಿಲ್ಲ. ಆ ಗೈಡ್ ಇಡೀ ಶ್ರೀಲಾಂಕದ ಮೂಲೆ ಮೂಲೆಗೂ ಅವರನ್ನು ಸುತ್ತಿಸಿದ್ದ. ಕೊನೆಗೆ ಉಳಿದದ್ದು ಶ್ರೀಲಂಕಾದ ಉತ್ತರ ಭಾಗ ಮಾತ್ರ.
ಆತ ‘ನೀವು ಹುಂ ಅಂದರೆ ಅಲ್ಲಿಗೂ ಕರೆದೊಯ್ಯಲು ನಾನು ರೆಡಿ’ ಅಂದಿದ್ದ. ಆದರೆ ಗುರುಪ್ರಕಾಶನನ್ನು ಬಿಟ್ಟರೆ ಅವರಾರೂ ತಯಾರಿರಲಿಲ್ಲ. ಕಾರಣ ಆ ಬಸ್ಸಲ್ಲಿರುವ ಯಾರಿಗೂ ಅಲ್ಲಿಗೆ ತೆರಳುವ, ಅಲ್ಲಿಳಿದು ಸುತ್ತುವ ಧೈರ್ಯವಿರಲಿಲ್ಲ. ಸಾವಿರಾರು ಜನರ ರಕ್ತ ಕುಡಿದು ಕೆಂಪಾದ ಆ ನೆಲದಲ್ಲಿ ಕಾಲೂರುವುದು ಅವರಿಗೆ ಇಷ್ಟವಿರಲಿಲ್ಲ. ಈಗಲೂ ಆ ನೆಲದಲ್ಲಿ ಆಗಾಗ ಗುಂಡಿನ ಸದ್ದು ಕೇಳುತ್ತದೆ. ಶೆಲ್ ಗಳು ಹಠಾತ್ತನೇ ಸಿಡಿಯುತ್ತವೆ. ಮನುಷ್ಯನ ಹಸಿ ರಕ್ತದ ವಾಸನೆ ಮೂಗಿಗೆ ಅಡರುತ್ತದೆ. ಒಂದಲ್ಲ… ಎರಡಲ್ಲ ಕಾಲುಶತಮಾನದ ಅವಧಿಯಲ್ಲಿಯೇ ಲಕ್ಷಾನುಗಟ್ಟಲೆ ಜೀವಗಳು ಬಲಿಯಾದ ಜಾಗವದು. ಇದಾವುದರ ಪರಿವೆಯೇ ಇಲ್ಲದ ಮಾನವಶಾಸ್ತ್ರದ ಈ ಅಧ್ಯಾಪಕನಿಗೆ ಶ್ರೀಲಂಕಾದ ಆ ಉತ್ತರಭಾಗವನ್ನು ನೋಡುವ ತವಕ. ಕೇವಲ ನಾಕೈದು ವರ್ಷಗಳ ಹಿಂದೆ ಬಂಡುಕೋರರಿಂದ ಆಳಲ್ಪಡುತ್ತಿದ್ದ ಅಲ್ಲಿಯ ಜಾಗ, ಅವರ ವಾಸದ ಮನೆಗಳು, ಅವರ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳುವ ಅಪಾರ ಕುತೂಹಲ ಅವನಿಗಿತ್ತು. ಆತ ಶ್ರೀಲಂಕಾ ಪ್ರವಾಸಕ್ಕೆ ಬಂದದ್ದೇ ಆ ಕಾರಣಕ್ಕಾಗಿ.
ಯುದ್ಧ, ಬಂಡಾಯದಿಂದ ಸಾವುಗಳು ಸಂಭವಿಸಿದ ನೆಲೆಗಳನ್ನು ಭೇಟಿ ಮಾಡುವುದು, ಯುದ್ಧವನ್ನು ಕಣ್ಣಾರೆ ಕಂಡು.. ಸಾವಿನ ತುತ್ತ ತುದಿಯ ವರೆಗೆ ಹೋಗಿ, ಬದುಕಿ ಉಳಿದವರ ಬಾಯಿಂದ ಕತೆ ಕೇಳುತ್ತಾ ನೋಟ್ಸ್ ಮಾಡಿಕೊಳ್ಳುವ ವಿಚಿತ್ರ ಖಯಾಲಿ ಅವನದು. ‘ಕೇವಲ ಶಾಂತಿಗಾಗಿ’ ಎನ್ನುವ ಗ್ರಂಥವನ್ನು ಬರೆಯಹೊರಟ ಗುರುಪ್ರಕಾಶ, ಕಳೆದ ವರ್ಷವಷ್ಟೇ ಇಸ್ರೇಲ್ ವರೆಗೂ ಹೋಗಿ ಬಂದಿರುವದಿದೆ. ಯುದ್ಧಗಳು ಮನುಕುಲಕ್ಕೆ ಮಾರಕ ಎಂದು ತರಗತಿಯಲ್ಲಿ, ಭಾಷಣದಲ್ಲಿ ಅದೆಷ್ಟು ಬಾರಿ ಅವನು ಹೇಳಿರುವನೋ ಲೆಕ್ಕವಿಲ್ಲ. ಆತ ಶ್ರೀಲಂಕಾ ಪ್ರವಾಸಕ್ಕೆ ತೆರಳುವದೆಂದಾಗಲೇ ಉತ್ತರ ಶ್ರೀಲಂಕಾದ ಜನಜೀವನವನ್ನು ಕಣ್ಣಾರೆ ನೋಡಿ, ಆಕಸ್ಮಿಕವಾಗಿ ಬದುಕಿ ಉಳಿದಿರುವ ಯಾರಾದರೂ ಒಬ್ಬರು..ಇಬ್ಬರ ಜೊತೆಗೆ ಮಾತನಾಡುವ ಅವಕಾಶ ಸಿಕ್ಕರೆ ಸಾಕು, ತನ್ನ ಪಯಣ ಸಾರ್ಥಕ ಎಂದು ಭಾವಿಸಿದ್ದ.
ಅಷ್ಟಕ್ಕೂ ಆ ನೆಲದಲ್ಲಿ ಬದುಕಿ ಉಳಿದವರ ಗೋಳು ಸತ್ತವರಿಗಿಂತಲೂ ನಿಕೃಷ್ಟವಾಗಿತ್ತು. ಅವರು ಉಸಿರಾಡುತ್ತಿದ್ದುದೇನೋ ನಿಜ ಆದರೆ ಅವರೆಲ್ಲರೂ ಬಹುತೇಕವಾಗಿ ಮಾತು ಸತ್ತವರಾಗಿದ್ದರು. ಅವರ ಜೊತೆಗೆ ಎಂಥಾ ಮಾತು..? ಎಂದು ಆ ಗೈಡ್ ಹೇಳಿದ ಮೇಲೂ ಈತ ಕೇಳಿರಲಿಲ್ಲ. ಅವರು ಮಾತಾಡದಿದ್ದರೂ ಅಲ್ಲಿಯ ಅವಶೇಷಗಳೂಂದಿಗಾದರೂ ಸರಿ, ನಾನು ಮಾತಾಡಿಯೇ ತೀರುತ್ತೇನೆ ಎನ್ನುವ ನಿರ್ಧಾರದೆದುರು ಆ ಗೈಡಗೆ ಮತ್ತೆ ಅವನಿಗೆ ತಿಳಿಹೇಳಬೇಕೆಂದು ಅನಿಸಿರಲಿಲ್ಲ. ಆ ಬಂಡುಕೋರರ ನೆಲವೀಗ ಮಿಲಿಟರಿ ವಶದಲ್ಲಿದೆ. ಪ್ರಶಾಂತವಾಗಿರುವ ಸಮಯದಲ್ಲಿ ದೂರದಲ್ಲಿ ಮಲಗಿ ನೆಲಕ್ಕೆ ಕಿವಿಗೊಟ್ಟರೆ ಸಾಕು ಆ ನೆಲದಲ್ಲಿ ಮಿಲಟಿರಿ ಅಧಿಕಾರಿಗಳ ಬೂಟುಗಾಲುಗಳ ಸದ್ದು ಟಕ್..ಟಕ್..ಟಕ್ ಎಂದು ಕೇಳುತ್ತದೆ. ನಾಕೈದು ವರ್ಷಗಳ ಹಿಂದೆ ಆ ನೆಲವನ್ನು ಆಳುತ್ತಿದ್ದ ಪುಢಾರಿಗಳ, ಹೋರಾಟಗಾರರ ಮನೆಗಳೆಲ್ಲಾ ಈಗ ಮಿಲಿಟರಿ ಶೆಲ್ಗಳಿಗೆ ಪುಡಿಪುಡಿಯಾಗಿವೆ. ಆ ಜಾಗವೀಗ ಅಕ್ಷರಷ: ಸ್ಮಶಾನದಂತೆ ಹಾಳುಸುರಿಯುತ್ತಿದೆ. ‘ಅಲ್ಲಿ ನೋಡಿ ನೆನಪಿಡುವಂಥದ್ದು ಏನೂ ಉಳಿದಿಲ್ಲ, ಹಾಗೆಂದು ಅದು ಮರೆಯುವಂಥದ್ದೂ ಅಲ್ಲ.’ ಎಂದು ಗೈಡ್ ಮೊಹಂತಿ ಹೇಳುತ್ತಿರುವಂತೆ ಗುರುಪ್ರಕಾಶ ಆ ಜಾಗಕ್ಕೆ ತೆರಳಲು ಇನ್ನಷ್ಟು ಉತ್ಸ್ಸುಕನಾದ.

***

ಅದು ಸಾಯಂಕಾಲದ ಸಮಯ. ಅದೊಂದು ನಿರಾಶ್ರಿತರ ಕೊಳಕು ಜಾಗ. ಆ ಹಾಳು ಸುರಿಯುವ ಭಗ್ನಾವಶೇಷಗಳ ಜಾಗದ ಸಮೀಪ ಬಂದಂತೆಲ್ಲಾ ವಿಚಿತ್ರ ಬಗೆಯ ವಾಸನೆ. ಗೈಡ್ ಮೂಗು ಮುಚ್ಚಿಕೊಂಡೇ ಕತೆ ಹೇಳತೊಡಗಿದ. ಅವನ ಧ್ವನಿಯಲ್ಲಿ ಈಗ ಒಂದು ಬಗೆಯ ವಿಷಾದವಿತ್ತು. ‘ಮನೆ, ಶಾಲೆ ಮಾತ್ರವಲ್ಲ, ಮಕ್ಕಳು.. ಮುದುಕರು.. ಮಹಿಳೆಯರು ಯಾರೂ ಆ ಶೆಲ್ ಧಾಳಿಯ ಎದುರು ತಾಳಲಿಲ್ಲ. ಅನೇಕ ಮಕ್ಕಳು ಅಂಗವಿಕಲರಾದರು. ಮಹಿಳೆಯರು ವಿಧವೆಯರಾದರು. ಮುದುಕರು ಬೀದಿಪಾಲಾದರು. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುವಂತಾಯಿತು.
ಅಲ್ಲಿ ಕಾಣುತ್ತಲ್ಲಾ ಆ ಮನೆ, ಅದರ ಯಜಮಾನ ತನ್ನ ಎರಡು ಮಕ್ಕಳನ್ನು ಕರೆದುಕೊಂಡು ಹೌಹಾರಿ ಒಮ್ದೇ ಸವನೇ ಓಡುತ್ತಿದ್ದ. ಹಾಗೆ ಓಡುವಾಗ, ಅವನ ಹಿರಿಯ ಮಗ ಶೆಲ್ ದಾಳಿಗೆ ನೆಲಕ್ಕುರುಳಿದ. ಆ ಶವವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಅವನ ಅಂತ್ಯಸಂಸ್ಕಾರವನ್ನೂ ಮಾಡಲಾಗದೇ ರೋಧಿಸಿ, ಬದುಕುಳಿದ ಇನ್ನೊಬ್ಬ ಮಗನ ಕೈಯನ್ನು ಗಟ್ಟಿಯಾಗಿ ಹಿಡಿದು ಆತ ಹೌಹಾರಿ ಓಡಿ ಬಚಾವಾದ. ಈಗವನು ಜಾಪ್ನಾದಲ್ಲಿದ್ದಾನೆ. ಲೋಕದ ಗ್ರಹಿಕೆಯೇ ಇಲ್ಲದ ಮಕ್ಕಳನ್ನೂ ಬಿಡದಂತೆ, ನೆನೆಸಿಕೊಂಡರೆ…’ ಎನ್ನುತ್ತಲೇ ಮೊಹಂತಿ ನಿಟ್ಟುಸಿರಿನೊಂದಿಗೆ ಕಣ್ಣೊರೆಸಿಕೊಂಡ. ಗುರುಪ್ರಕಾಶ ಆ ನೆಲವನ್ನು ಕಣ್ಣಗಲಿಸಿ ತದೇಕಚಿತ್ತದಿಂದ ದಿಟ್ಟಿಸುತ್ತಿದ್ದ. ಅನೇಕ ಮನೆಗಳು ಪುಡಿ ಪುಡಿಯಾಗಿದ್ದವು. ಸಾವಿರಾರು ವರ್ಷಗಳ ಹಿಂದಿನ ನಾಗರಿಕತೆಯೊಂದು ನೆಲಕಚ್ಚಿ ರೋಧಿಸುವಂತೆ ತೋರುತ್ತಿತ್ತು. ತುಂಡಾದ ಗೋಡೆಯನ್ನೇ ಆಸರೆಯಾಗಿಸಿಕೊಂಡು ನಿಂತ ಕಿಡಕಿ ಅದ್ಯಾವದೊ ತುಕ್ಕು ಹಿಡಿದ ರಂಗಪರಿಕರದ ತುಂಡಿನಂತೆ ಕಾಣುತ್ತಿತ್ತು. ಅದರ ಸರಳುಗಳ ಮೇಲೆ ಏನೋ ಅಂಟು ಅಂಟಾದ ದ್ರವ ಇಳಿದಂತಿತ್ತು. ಅದನ್ನು ಮುಟ್ಟಿ ಹೀಗೇ ಸುಮ್ಮನೇ ವಾಸನೆ ಮೂಸಿದ ಗುರುಪ್ರಕಾಶನ ತಲೆ ದಿಮ್..! ಅಂದಂತ ಅನುಭವವಾಯಿತು. ನೆಲಕ್ಕುರುಳಿಸಿದ ಮನೆಯ ಗೊಡೆಯ ತುಂಡುಗಳ ಮೆಲೆಯೇ ಕಾಲಿಡುತ್ತಾ ಮುನ್ನಡೆದರು. ಮೊಹಂತಿ ಅಲ್ಲಿ ಬಿದ್ದ ಪಾತ್ರೆ, ಪಗಡೆ, ಕನ್ನಡಿಯ ಚೂರುಗಳನ್ನು ಎತ್ತೆತ್ತಿ ಕೈಯಲ್ಲಿ ಹಿಡಿದು ಆ ನೆಲದ ಕತೆ ಹೇಳುತ್ತಿದ್ದ.

‘ ಸರ್ ಅಲ್ಲಿ ಕಾಣುತ್ತಲ್ಲಾ ಆ ಮನೆ ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ. ಅದರ ಮೇಲೂ ಯುದ್ಧದ ಸಂದರ್ಭದಲ್ಲಿ ಶೆಲ್ ಧಾಳಿಯಾಗಿದೆ. ಹೊರಗಿನಿಂದ ನೋಡಿದರೆ ಒಳಗೆ ಯಾರೂ ಇರಲಿಕ್ಕಿಲ್ಲ ಅನಿಸುತ್ತದೆ. ಬನ್ನಿ ನನ್ನ ಜೋಡಿ’ ಎಂದು ಆ ಮನೆಗೆ ಕರೆದೊಯ್ದ. ಬಾಗಿಲು ಇಲ್ಲದ ಮನೆಯದು. ಗೋಡೆಗಳಿಗೆಲ್ಲಾ ಅದೆಂಥದೋ ಅಸಹ್ಯ ಕಲೆಗಳು ಸಿಡಿದಿವೆ. ಇಡೀ ಮನೆಯೇ ಒಂಥರಾ ವಿಕಾರವಾಗಿತ್ತು. ರಿಪೇರಿಯಾಗದಂತಿರುವ ಭೀಕರ ಬಿರುಕುಗಳು. ಮೆಲ್ಲಗೆ ಇಬ್ಬರೂ ಒಳಗಿನ ಕೋಣೆಗೆ ಪ್ರವೇಶ ಮಾಡಿದರು. ಎದುರಲ್ಲಿ ಗೋಡೆ ಗಡಿಯಾರವೊಂದು ಶೆಲ್ ಸಿಡಿದಾಗಿನಿಂದಲೂ ಉಸಿರಿಲ್ಲದೇ ನಿಂತುಹೋಗಿತ್ತು. ಅದರ ಕೆಳಗಡೆ ಪಾರಿವಾಳಗಳ ಧೂಳು ಮೆತ್ತಿದ ಚಿತ್ರಪಟವಿತ್ತು. ಇನ್ನೊಂದು ಬದಿಯಲ್ಲಿ ಇಡೀ ಕುಟುಂಬದ ಫೋಟೊ. ಸುತ್ತಲೂ ಕಣ್ಣು ಹೊರಳಿಸುವಾಗಲೇ ಅಲ್ಲಿಯ ಭಾಷೆಯಲ್ಲಿ ಮೊಹಂತಿ ಆ ಮನೆಯಲ್ಲಿರೋ ಮಹಿಳೆಯನ್ನು ಕೂಗಿದ.
ಅವಳು ಅಡುಗೆಮನೆಯಿಂದ ಮೆಲ್ಲಗೆ ನಿತ್ರಾಣಳಾದವಳಂತೆ ಬಂದವಳು, ಮೊಹಂತಿಯನ್ನು ಕಂಡದ್ದೇ ದು:ಖದಿಂದ ಗೋಡೆ ಮೇಲಿನ ತನ್ನ ಗಂಡ, ಮಕ್ಕಳಿರೋ ಫೋಟೋ ತೆಗೆದುಕೊಂಡು ಅವರಿಗೆ ತೋರಿಸಿ ಅಳಲಿಕ್ಕೆ ಶುರು ಮಾಡಿದಳು. ಮೊಹಂತಿ ಸಮಾಧಾನ ಮಾಡಿಕೊಳ್ಳುವಂತೆ ಹೇಳಿದ. ಊಟಕ್ಕೆ ಕುಳಿತ ವೇಳೆಯಲ್ಲಿಯೇ ಅವರ ಮನೆಯ ಮೇಲೆ ಮಿಲಿಟರಿ ಧಾಳಿ ನಡೆದು ಎಲ್ಲರೂ ಕುಳಿತಲ್ಲಿಯೇ ಖಾಲಿಯಾದ ಕತೆಯನ್ನು ಕಣ್ಣೀರು ಸುರಿಸುತ್ತಾ ಆ ಮಹಿಳೆ ಹೇಳುವದನ್ನು ಕೇಳಿ ಗುರುಪ್ರಕಾಶನ ಕಣ್ಣಾಲಿ ತುಂಬಿ ಬಂದವು. ಆ ಯುದ್ಧದಲ್ಲಿ ನಿರಾಶ್ರಿತರಾದ ಕೆಲವರು ತಗಡಿನ ಶೆಡ್ ಗಳಲ್ಲಿ ಬದುಕುತ್ತಿದ್ದರು. ಅಲ್ಲಿ ಮುಕ್ಕಾದ ಒಂದಿಬ್ಬರು ಮಕ್ಕಳು ಗುರುಪ್ರಕಾಶಗೆ ಮಾತಿಗೆ ಸಿಕ್ಕರು. ಕೈ ತುಂಡಾದ ಪೋರ, ಕಾಲು ಕಾಳೆದುಕೊಂಡ ಅವನ ತಂಗಿ. ಅವರ ಪಕ್ಕದ ಮನೆಯಲ್ಲಿ ತಪ್ಪಿಸಿಕೊಂಡು ಓಡುವಾಗ ಸಾವೀಗೀಡಾದ ಮಗನ ತಾಯಿ, ಗಂಡನನ್ನು ಕಳೆದುಕೊಂಡ ಹೆಂಡತಿ ಹೀಗೆ ಆ ಇಡೀ ನೆಲ ಮತ್ತೆ ಮತ್ತೆ ಭಗ್ನಗೊಂಡ ವಿಗ್ರಹದಂತೆ ತೋರುತ್ತಿತ್ತು.
ಎಲ್ಲೆಂದರಲ್ಲಿ ಮುರಕಲು ಗೋಡೆ, ಉರುಳಿಬಿದ್ದ ಮರ, ಬಾಗಿಲಿಲ್ಲದ, ಸೂರಿಲ್ಲದ ಮನೆ, ಚೂರು ಚೂರಾದ ಕನ್ನಡಿ, ಫೊಟೊಗಳು. ಇವೆಲ್ಲವುಗಳ ನಡುವೆ ಬಂಡುಕೋರ ನಾಯಕನ ಮನೆ ಮತ್ತು ಬಂಕರ್ ಮಾತ್ರ ಮುಕ್ಕಾಗಿರಲಿಲ್ಲ. ಮೊಹಂತಿ ತೀರಾ ಕುತೂಹಲದಿಂದ ಆ ನಾಯಕನ ಮನೆಯನ್ನು ಗುರುಪ್ರಕಾಶಗೆ ತೋರಿಸಿದ. ಆತ ತೋರಿಸುವ ಮಟ್ಟದಲ್ಲಿ ಗುರುಪ್ರಕಾಶಗೆ ಅದರಲ್ಲಿ ಆಸಕ್ತಿ ಇರಲಿಲ್ಲ. ಕೊನೆಗೂ ಅವನ ಮನದ ಮೊನೆಯಲ್ಲಿ ಉಳಿದದ್ದು ಆ ಅವಶೇಷಗಳು ಮಾತ್ರ. ‘ ಮೊಹಂತಿ ನೀನು ಈಗ ಭೇಟಿ ಮಾಡಿಸಿದೆಯಲ್ಲ.., ಆ ಮಹಿಳೆಯ ಉಪಜೀವನ ಹೇಗೆ..?’ ಎಂದು ಕೇಳಿದ್ದೇ ತಡ ಆಕೆ ತನ್ನ ದಿನದ ತುತ್ತಿನ ಚೀಲಕ್ಕಾಗಿ ರಸ್ತೆಯ ಮೇಲೆ ಆಹಾರ ಧಾನ್ಯ ತುಂಬಿಕೊಂಡು ಹಾದು ಹೋಗುವ ಗಾಡಿಗಳಿಂದ ಸೋರಿದ ಕಾಳು ಕಡಿಗಳನ್ನು ಹೆಕ್ಕಿ ಹೊಟ್ಟೆ ಹೊರೆಯುವ ಬಗ್ಗೆ ಹೇಳಿದಾಗ ಗುರುಪ್ರಕಾಶ ದಂಗಾಗಿ ಹೋದ. ಅಲ್ಲಿಂದ ಮರಳಿ ಬರುವಾಗ ಅವಳಿಗೆ ಸ್ವಲ್ಪ ಹಣವನ್ನು ಕೊಡಹೋದರೆ ಅವಳು ಅದನ್ನು ತೀರಾ ಯಥಾರ್ಥವಾಗಿ ನಿರಾಕರಿಸಿದಳು. ಆ ನೆಲದಲ್ಲಿ ಅಳಿದುಳಿದವರೆಲ್ಲಾ ಬಹುತೇಕವಾಗಿ ತೀರಾ ಕಠೋರವಾಗಿದ್ದರು, ಕಲ್ಲಾಗಿದ್ದರು.
‘ಮೊಹಂತಿ ನನಗನಿಸುತ್ತದೆ, ಮನುಷ್ಯನ ನಾಗರಿಕತೆ ಮತ್ತು ಸಂಸ್ಕೃತಿಗೆ ಈ ಯುದ್ಧಗಳು ಕಳಂಕವೇ ಸರಿ’ ಎಂದ. ಗುರುಪ್ರಕಾಶನ ಮಾತು ಮೊಹಂತಿ ಮೆದುಳಲ್ಲಿ ಇಳಿಯಲೇ ಇಲ್ಲ. ಆತ ಸುಮ್ಮನೇ ‘ಎಸ್..ಎಸ್..’ ಅಂದಿದ್ದ. ಹಾಗೆ ಪುಡಿ ಪುಡಿಯಾಗಿ ಬಿದ್ದ ಮನೆಗಳ ಅವಶೇಷಗಳ ನಡುವೆ ನಿಂತು ಆತ ಕ್ಷಣ ಹೊತ್ತು ಸುತ್ತಮುತ್ತ ಕಣ್ಣಾಡಿಸಿ ಹೀಗೇ ಆಲೋಚಿಸಿದ. ತಾನು ನಿಂತದ್ದು ಒಂದು ಮನೆಯ ಅವಶೇಷಗಳ ನಡುವೆ. ಆ ಮನೆಯಲ್ಲಿಯ ವಾತ್ಸಲ್ಯ, ಪ್ರೀತಿ, ನಗು ಎಲ್ಲವೂ ಒಂದು ಬಾರಿ ಮೆಲ್ಲಗೆ ಅವನ ಎದೆಯನ್ನು ತಾಕಿದ ಅನುಭವವಾಗಿ ಆತ ನಿಂತಲ್ಲಿಯೇ ಕಂಪಿಸಿದ. ‘ಈ ಯುದ್ಧ ಯಾವ ಪುರುಷಾರ್ಥಕ್ಕಾಗಿ..?’ ಎನ್ನುವ ಪ್ರಶ್ನೆಯನ್ನಿಟ್ಟ. ಮೊಹಂತಿಯಿಂದ ಅದಕ್ಕೆ ಉತ್ತರ ಸಿಗಲಿಲ್ಲ. ಅವನು ನಿರೀಕ್ಷಿಸಿಯೂ ಇರಲಿಲ್ಲ. ‘ಮಾನವೀಯತೆಯ ಮುಂದೆ ಜಗತ್ತಿನ ಎಲ್ಲ ವ್ಯಾಪಾರಗಳೂ ಶರಣಾಗಬೇಕು. ಮಾನವೀಯತೆಯನ್ನು ಹೊರಗಿಟ್ಟೇ ವ್ಯಾಪಾರ ಮಾಡುವವರಿಗೆ ಆ ಮೌಲ್ಯದ ಅರಿವಾಗುವದಾದರೂ ಹೇಗೆ..?’ ಆಗಲೂ ಅಷ್ಟೇ.. ಮೊಹಂತಿ ಮೌನವಾಗಿಯೇ ಇದ್ದ. ಸೂರ್ಯ ಮುಖ ಕೆಳಗೆ ಮಾಡಿ ಜಾರುತ್ತಿದ್ದ. ಅಲ್ಲಿರುವ ಭಗ್ನಾವಶೇಷಗಳ ಮೇಲೆ ಇನ್ನಷ್ಟು ಹೊತ್ತು ಬೆಳಕು ಹರಿಸಲು ಅವನಿಗೂ ಮನಸಾಗಲಿಲ್ಲ. ಪರಸ್ಪರರ ಮುಖ ಕಾಣದಿರುವ ನಡುವೆ ಇನ್ನು ಅಲ್ಲಿ ಉಳಿಯುವದು ಕ್ಷೇಮವಲ್ಲ ಎಂದು ಮೊಹಂತಿ ಅವಸರ ಮಾಡತೊಡಗಿದ. ‘ಸರ್ ಇನ್ನು ಹೋಗೋಣ’ ಅಂದ. ‘ ಏ, ಸ್ವಲ್ಪ ಇರು. ಇದೊಂದು ಸಿಗರೇಟ್..’ ಎಂದು ಕಿಸೆಯಿಂದ ಲೈಟರ್ ತೆಗೆದ. ಅದಾಗಲೇ ಕತ್ತಲಾವರಿಸಿತ್ತು. ನಿರಾಶ್ರಿತರ ಮನೆಯಲ್ಲಿಯ ದೀಪಗಳು ಇಬ್ಬನಿ ಮೆತ್ತಿದ ಪುಟ್ಟ ಪುಟ್ಟ ಕೆಂಡದುಂಡೆಗಳಂತೆ ಕಾಣುತ್ತಿದ್ದವು. ಮೊಹಂತಿ ಕತ್ತಲಲ್ಲಿ ‘ಸರ್ ಹೀಗೆ ಬನ್ನಿ ..ಈ ಬದಿ..’ ಎನ್ನುತ್ತಿದ್ದ. ಗುರುಪ್ರಕಾಶ ಅವನನ್ನೇ ಹಿಂಬಾಲಿಸುತ್ತಿದ್ದ. ಇಬ್ಬರೂ ಕತ್ತಲಲ್ಲಿ ನಿಧಾನವಾಗಿ ಕಳೆದುಹೋದರು. ಸಿಗರೇಟಿನ ಹೊಗೆ ಮಾತ್ರ ಮಂಜಿನಂತೆ ಗುರುತು ಬಿಡುತ್ತಿತ್ತು.

***

ಆ ದಿನ ತರಗತಿಯಲ್ಲಿ ಅವನು ಶ್ರೀಲಂಕಾ ಪ್ರವಾಸಕ್ಕೆ ತೆರಳುವ ಬಗ್ಗೆ ವಿದ್ಯಾರ್ಥಿಗಳ ಎದುರಲ್ಲಿ ತೀರಾ ಎಮೋಶನಲ್ ಆಗಿ ಹೇಳಿದ್ದ. ಮಾನವಶಾಸ್ತ್ರದ ಅಧ್ಯಾಪಕನಾಗಿದ್ದ ಗುರುಪ್ರಕಾಶ, ವಿಶ್ವದ ಸಂಸ್ಕೃತಿ, ನಾಗರಿಕತೆ ಮತ್ತು ಸಮುದಾಯ ಜೀವನದ ಅಧ್ಯಯನದಲ್ಲಿ ಅಪಾರ ಆಸಕ್ತಿಯುಳ್ಳವನು. ಆಂಗ್ಲಭಾಷೆ ಮತ್ತು ತತ್ವಶಾಸ್ತ್ರವನ್ನೂ ಸಾಕಷ್ಟು ಓದಿಕೊಂಡಿದ್ದ ಅವನು ತರಗತಿಯಲ್ಲಿ ತನ್ನ ವಿದ್ಯಾರ್ಥಿಗಳಿಗೆ ಮತ್ತೆ ಮತ್ತೆ ಟಾಲಸ್ಟಾಯ್ ನ ‘ವಾರ್ ಆಂಡ್ ಪೀಸ್’ ಎನ್ನುವ ಕೃತಿಯನ್ನು ಓದಲೇಬೇಕೆಂಬ ಒತ್ತಾಸೆಯನ್ನು ಹೇರುತ್ತಿದ್ದ. ಆ ಅಧ್ಯಾಪಕ ಯುದ್ಧದಂತಹ ವಿಷಯದ ಬಗ್ಗೆ ಹೊಂದಿರುವ ನಿಷೇಧಾತ್ಮಕ ನಿಲುವುಗಳ ಬಗ್ಗೆ ಅವನ ವಿದ್ಯಾರ್ಥಿಗಳಿಗೂ ಒಂದು ಬಗೆಯ ಜಿಜ್ಞಾಸೆಯಿತ್ತು. ಯುದ್ಧದಲ್ಲಿ ಮಡಿದವರು ಯಾವುದೇ ರಾಷ್ಟ್ರದವರಾಗಿರಲಿ, ಅವರೂ ಮನುಷ್ಯರೆನ್ನುವದು ಮಾತ್ರ ಕಟುಸತ್ಯ. ಎಂದು ಭಾವೇವೇಶದಿಂದ ನುಡಿವಾಗ ಆತನ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದ ಆಕೃತಿಗಳಾಗುತ್ತಿದ್ದರು. ಹೌದು. ಯುದ್ಧದ ವಿಷಯ ಬಂದರೆ ಆತ ಹಾಗೆಯೇ.. ಕಳಕಳಿಸುತ್ತಿದ್ದ… ಕಳೆದುಹೋಗುತ್ತಿದ್ದ.. ಕಂಪಿಸುತ್ತಿದ್ದ. ಈ ಯುದ್ಧ ಮನುಷ್ಯನಲ್ಲಿಯ ಪಾಶವೀಗುಣಕ್ಕೆ ಸಾಕ್ಷಿ ಎನ್ನುತ್ತಿದ್ದ.
ಯುದ್ಧ ತನ್ನ ಹಿಂದೆ ಅಪಾರ ಪ್ರಮಾಣದ ಸಾವುನೋವುಗಳ ಜೊತೆಯಲ್ಲಿ ಅಂಗವಿಕಲತೆ, ವೈಧವ್ಯ, ಅನಾಥ ಪ್ರಜ್ಞೆ, ನಿರ್ಗತಿಕ ಸ್ಥಿತಿಯನ್ನು ಬಿಟ್ಟು ಹೋಗುತ್ತದೆ. ಇಂಥಾ ಯುದ್ಧ ಶ್ರೀಲಂಕಾದ ಉತ್ತರಭಾಗದಲ್ಲಿ ಹುಟ್ಟುಹಾಕಿರುವ ತಲ್ಲಣಗಳನ್ನು ಪ್ರವಾಸದಿಂದ ಹಿಂತಿರುಗಿ ಬಂದ ಮೇಲೆ ತಮ್ಮೊಂದಿಗೆ ಚರ್ಚಿಸುತ್ತೇನೆ. ಇದು ನನ್ನ ಅಧ್ಯಯನ ಪ್ರವಾಸ. ಮುಖ್ಯವಾಗಿ ನಾನೊಬ್ಬ ಸಮಾಜವಿಜ್ಞಾನಿ. ಬರೀ ನೋಡುವದಕ್ಕೂ.. ಅವಲೋಕಿಸುವದಕ್ಕೂ ವ್ಯತ್ಯಾಸಗಳಿವೆ. ಈ ಶ್ರೀಲಂಕಾದ ನನ್ನ ಪ್ರವಾಸ ಹೀಗೇ ಒಂದು ನೋಟವಲ್ಲ. ಅದೊಂದು ಸೂಕ್ಷ್ಮವಾದ ಒಳನೋಟ. ಎಂದಾಗ ಎಲ್ಲ ವಿದ್ಯಾರ್ಥಿಗಳು ಒಕ್ಕೊರಲಿನಿಂದ ‘ಸರ್ ನಿಮ್ಮ ಪ್ರಯಾಣ ಸುಖಕರವಾಗಲಿ’ ಎಂದಿದ್ದರು.
 

‍ಲೇಖಕರು G

3 August, 2013

1 Comment

  1. G Venkatesha

    ಮನುಷ್ಯನ ನಾಗರಿಕತೆ ಮತ್ತು ಸಂಸ್ಕೃತಿಗೆ ಈ ಯುದ್ಧಗಳು ಕಳಂಕವೇ ಸರಿ. Idonde vaakya saaku. Olle kathe. Dhanyavaadagalu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading