ದೀಪದ ಮಲ್ಲಿ
ಅದೊಂದು ಸಿನಿಮಾನೇ ಅಲ್ಲ! ಈ ಮಾತನ್ನು ನಾನು ಮೂದಲಿಕೆಗೆ ಹೇಳುತ್ತಿಲ್ಲ. ಸಿನಿಮಾವೆಂದು ಕೂರಿಸಿಕೊಂಡು ಬದುಕಿನ ವಾಸ್ತವತೆಯನ್ನ ಕಣ್ಣೆದುರಿಗೆ ನಡೆದುಹೋಗುತ್ತಿರುವ ಘಟನೆಗಳೇನೋ ಅನ್ನುವಂತೆ, ಅಲ್ಲಿನ ಪಾತ್ರಗಳಿಗೆ ನಾನು ಹೇಗೆ ಸಹಾಯ ಮಾಡಬಹುದು ಎಂದು ಯೋಚಿಸುವಂತೆ, ಒಂದು ಹಂತಕ್ಕೆ ‘ಇನ್ನು ನೋಡಲಾಗದು ಈ ವಿದ್ರಾವಕತೆಯನ್ನ’ ಅನ್ನಿಸುತ್ತಾ ಇದ್ದಾಗ್ಯೂ, ‘ನೋಡದೇ ಎದ್ದು ಹೋಗಲಾಗುವುದೂ ಇಲ್ಲ’ ಎಂಬಂತೆ ಒಂದರ ಹಿಂದೊಂದು ದೃಶ್ಯಕಾವ್ಯಗಳನ್ನು ಪೋಣಿಸುತ್ತಲೇ ಹೋಗಿದ್ದಾನೆ ನಿರ್ದೇಶಕ. ಕಲಾವಿದರ ಬಗೆಗಂತೂ ಮರುಮಾತಿಲ್ಲ, ಯಾರೊಬ್ಬರೂ ಕ್ಯಾಮರಾಗೆ ಕ್ಯಾರೇ ಅಂದಿಲ್ಲ.

ಹೌದು, ನಾನು ಈವರೆಗೆ ಹೇಳಿಕೊಂಡಿದ್ದೆಲ್ಲವೂ ಕಾಂಬೋಡಿಯಾದ ನಿರ್ದೇಶಕ ರಿತಿ ಪನ್ 1994ರಲ್ಲಿ ತೆರೆಗೆ ತಂದ ‘ರೈಸ್ ಪೀಪಲ್’ ಚಿತ್ರದ ಬಗ್ಗೆ. ‘ಅಕ್ಕಿ ಎಲ್ಲಿದ ಬರುತ್ತದೆ ಎಂಬ ಮಕ್ಕಳ ಪ್ರಶ್ನೆಗಳಿಗೆ US ನ ಟ್ರಕ್ಕುಗಳಿಂದ’ ಎಂದು ಉತ್ತರಿಸಬೇಕಿದ್ದ ಕಾಲವದು. ಇಡೀ ಕಾಂಬೋಡಿಯಾದ ಮೇಲೆ ಕಮ್ಯುನಿಸ್ಟ್ ಕೇಮರ್ ರೋಗ್ ನಡೆಸಿದ ನರಮೇಧದ ಕರಿನೆರಳು ಹಳ್ಳಿ ಹಳ್ಳಿಗಳನ್ನೂ ಆವರಿಸಿತ್ತು. ಪರಿಣಾಮ ಅಲ್ಲಿನ ಭೂಮಿ ಒಂದಿಡೀ ತಲೆಮಾರು ಭತ್ತದ ಬೆಳೆಯನ್ನೇ ಕಂಡಿರಲಿಲ್ಲ.
ಈ ಕಾಲಘಟ್ಟದಲ್ಲಿ ಕುಗ್ರಾಮವೊಂದರ ಕುಟುಂಬವೊಂದು ಭತ್ತವನ್ನು ಬೆಳೆದುಣ್ಣುವ ಸಲುವಾಗಿ ಒಂದು ಬೆಳೆ ಅವಧಿಯಲ್ಲಿ ಬದುಕಿನೊಟ್ಟಿಗೆ ಸೆಣೆಸುವ ನಡೆಯೇ ‘ರೈಸ್ ಪೀಪಲ್’. ಶಾನೂನ್ ಅಹ್ಮದ್ ಅವರ ಕಾದಂಬರಿಯನ್ನು ಆಧರಿಸಿದ ಚಿತ್ರದಲ್ಲಿ, ಕಾಂಬೋಡಿಯಾದ ಸ್ಥಳೀಯ ಆಚರಣೆಗಳು, ಮೂಢನಂಬಿಕೆಗಳು, ಅನಕ್ಷರತೆ ಮತ್ತು ಅಧುನಿಕತೆಯ ಸೊಡರಿಲ್ಲದ ಬದುಕುಗಳು ಅನಾವರಣಗೊಳ್ಳುತ್ತದೆ.
ಏಳು ಹೆಣ್ಣುಮಕ್ಕಳನ್ನು ಹೆತ್ತ ತಂದೆ ಪಾವ್, ತನ್ನ ನೆಲದಲ್ಲಿ ಭತ್ತದ ಕನಸು ಕಾಣುತ್ತಾನೆ. ಅವನ ಹೆಂಡತಿ ಓಂ, ಗಂಡನ ಕನಸುಗಳನ್ನು ತನ್ನದಾಗಿಸಿಕೊಂಡು ಕಾಣುವವಳು. ಬುದ್ಧನಲ್ಲಿ ಒಳ್ಳೆಯ ಫಸಲು ಕರುಣಿಸುವಂತೆ ಮೊರೆಯಿಟ್ಟು ಉಳುಮೆಗೆ ನಿಲ್ಲುತ್ತದೆ ಕುಟುಂಬ. ಪ್ರಾರಂಭದಲ್ಲೇ ಗಂಡುಉರಗವನ್ನು ಹೊಡೆದು ಸಾಯಿಸಿದ ಪಾಪ ಪಾವ್ ನ ಹೆಗಲೇರುತ್ತದೆ. ಅದರಿಂದಾಗಿ ಮುಂದೆ ಘಟಿಸಬಹುದಾದ ಅನಾಹುತಗಳ ಬಗ್ಗೆ ಓಂ ಮನದಲ್ಲೇ ಬೆದರುತ್ತಾಳೆ. ಉತ್ತಿ, ನೀರು ಕಟ್ಟಿ, ಗೊಬ್ಬರ ಹರವಿ, ಬೀಜಬಿತ್ತುವ ವೇಳೆಗೆ ಓಂ ನಿರೀಕ್ಷಿಸಿದ ಅನಾಹುತದಲ್ಲಿ ಮೊದಲನೆಯದು ಘಟಿಸುತ್ತದೆ. ಭತ್ತದಗದ್ದೆಯಲ್ಲಿ ಪಾವ್ ನ ಕಾಲಿಗೆ ವಿಷದ ಮುಳ್ಳು ತಾಕಿ ಮೀನಖಂಡಗಳು ಬಾತುಕೊಳ್ಳುತ್ತವೆ. ಮನೆಯಲ್ಲಿದ್ದ ಏಕೈಕ ಗಂಡಾಳು ಪಾವ್ ಮುಂದಡಿ ಇಡಲಾಗದೆ ಮೂಲೆ ಸೇರುತ್ತಾನೆ. ಅವನ ಭತ್ತದ ಕನಸು ಇನ್ನೇನು ಕಮರಿಹೋಯಿತೆಂದು ಕೈಚೆಲ್ಲಿ ಕುಳಿತ, ವೇಳೆಗೆ, ಓಂ ಅವನನ್ನು ಸಂತೈಸಿ ತಾನು ನಿಲ್ಲುತ್ತಾಳೆ ಕೆಲಸಕ್ಕೆ. ಗಂಡಸಿಗೆ ಸರಿಸಮನಾಗಿ ದುಡಿಯುತ್ತಾಳೆ. ಇದ್ದೂ ಇಲ್ಲದಂತಾದ ಪಾವ್ ಅವಳ ಭಂಗ ಕಂಡು ಖಿನ್ನನಾಗುತ್ತಾನೆ, ಅವನನ್ನು ಬದುಕಿಸಿಕೊಳ್ಳಲು ಪಟ್ಟಣದ ಆಸ್ಪತ್ರೆಗೆ ಸೇರಿಸುವ ಯೋಚನೆ ಬಂದರೂ, ತನ್ನ ಆರೈಕೆಯಿಲ್ಲದೆ ಗಂಡ ಪಟ್ಟಣದಲ್ಲಿ ಒಂಟಿಯಾಗಿ ಸಾಯುತ್ತಾನೆ, ಇತ್ತ ತಾನೇ ಅವನ ಆರೈಕೆಗೆ ನಿಂತರೆ ಬೆಳೆ ನಾಶವಾಗುತ್ತದೆ ಎಂದು ಓಂ ಗೊಂದಲದ ಗೂಡಾಗಿ ಕೈಚೆಲ್ಲುತ್ತಾಳೆ.
ಪಾವ್ ಸೋಂಕಿನಿಂದ ಸಾಯುತ್ತಾನೆ. ಸಾಯುವ ಮುನ್ನ ತನ್ನ ಏಳು ಹೆಣ್ಣುಮಕ್ಕಳನ್ನು ಕರೆದು, ಕಟ್ಟಿಗೆಯ ಕಂತೆಯನ್ನು ಯಾರೂ ಸುಲಭವಾಗಿ ಮುರಿಯಲಾಗದ ಕಥೆಯನ್ನು ವಿವರಿಸಿ, ಸದಾ ಕಾಲ ಒಂದಾಗಿಯೂ, ಒಗ್ಗಟ್ಟಾಗಿಯೂ ಇದ್ದು, ಮನೆಯನ್ನು ರಕ್ಷಿಸಬೇಕೆಂದು ಹೇಳುತ್ತಾನೆ.
ಇನ್ನು ಓಂಳದ್ದು ಏಕಾಂಗಿ ಹೋರಾಟ. ತನ್ನ ಮೊದಲ ಮಗಳು 14 ವರ್ಷದ ಸಖಾಳಿಂದ ಕೊನೆಯ ಎರಡು ವರ್ಷದ ಕೂಸು ಸೋಫಾಪ್ ಳನ್ನು ಸಲಹುವುದು ಅವಳಿಗೆ ಸವಾಲಾಗುತ್ತದೆ. ಎಲ್ಲಕ್ಕಿಂತ ಅವಳ ಪ್ರಧಾನ ಸವಾಲು ಅಡಗಿರುವುದು ನೆಲದೊಟ್ಟಿಗೆ. ಭತ್ತದ ಬೆಳೆಗೆ ನೆಲ ಒಗ್ಗಿ ದಶಕಗಳು ಕಳೆದಿವೆ. ಅನಿವಾಸೀಯರು ತಾಯ್ನಾಡಿಗೆ ಹೊಂದಿಕೊಳ್ಳುವ ಸವಾಲದು. ಒಗ್ಗಿದರೆ ಸುಗ್ಗಿ, ಇಲ್ಲದಿರೆ ಸಾವು!
ಓಂ ರಾತ್ರಿ ಹಗಲೆನ್ನದೆ ಬೆಳೆ ಕಾಯುತ್ತಾಳೆ. ಹಿರಿಯ ಹೆಣ್ಣುಮಕ್ಕಳನ್ನೂ ಜೊತೆಗೂಡಿಸಿಕೊಳ್ಳುತ್ತಾಳೆ. ಕಮಾಂಡರ್ ನಂತೆ ಕೆಲಸಗಳನ್ನು ಆದೇಶಿಸುತ್ತಾಳೆ. ಭತ್ತದ ಬೆಳೆ ಸಮೃದ್ಧಿಯಾಗುವ ಲಕ್ಷಣಗಳು ಗೋಚರಿಸುವ ವೇಳೆಗೆ ಬುಡದಲ್ಲಿ ಏಡಿಕಾಯಿಗಳು ತನ್ನ ಸಾಮ್ರಾಜ್ಯ ಸ್ಥಾಪಿಸಿಬಿಟ್ಟಿರುತ್ತದೆ. ಇಡೀ ಬದುಕೇ ಈ ಭತ್ತದ ಮೇಲೆ ಅವಲಂಭಿತವಾಗಿರುವಾಗ ಬೆಳೆಯನ್ನ ಇನ್ನಿಲ್ಲದಂತೆ ಮಾಡಿಬಿಡುವ ಈ ಏಡಿಕಾಯಿಗಳನ್ನು ತುರ್ತಾಗಿ ನಾಶಮಾಡುವದು ಓಂಗೆ ಪ್ರಯಾಸದಾಯಕವಾಗುತ್ತದೆ. ಓಂ ಮತ್ತವಳ ಮಕ್ಕಳು ಸತತ ಏಳು ದಿನಗಳಕಾಲ ಸಾವಿರ ಸಾವಿರಗಟ್ಟಲೆ ಏಡಿಕಾಯಿಗಳನ್ನು ಹಿಡಿದೂ, ಬೇಯಿಸೀ ಹೈರಾಣಾಗುತ್ತಾರೆ.
ಓಂಗೆ ನಿಧಾನವಾಗಿ ಪಾವ್ ನ ಇಲ್ಲದಿರುವಿಕೆ ಕಾಡುತ್ತದೆ. ತನ್ನ ಏಕಾಂಗಿ ಹೋರಾಟದ ಫಲ ದಕ್ಕುವ ಬಗ್ಗೆ ಅನುಮಾನಗಳು ಮೂಡುತ್ತವೆ. ಏಳು ಮಕ್ಕಳ ತಾಯಿಯಾಗಿ, ಮನೆ, ಹೊಲಗದ್ದೆಗೆಂದು ಬೆವರು ಬಸಿಯುತ್ತಲೇ ತನ್ನ ಯೌವ್ವನ ತಾನು ಅನುಭವಿಸದಲೇ ಕಳೆದುಹೋದುದರ ಬಗ್ಗೆ ಪರಿತಾಪವಾಗುತ್ತದೆ. ಪಾವ್ ನನ್ನು ನೆನೆ ನೆನೆದು ವಿರಹದಲಿ ಬೇಯುತ್ತಾಳೆ. ಬಿಡಿಸಿಕೊಳ್ಳಲಾಗದ ಹೊಣೆಗಾರಿಕೆಗೆ ಕ್ರೋಧಗೊಳ್ಳುತ್ತಾಳೆ. ಕುಡಿದ ಮತ್ತಿನಲ್ಲಿ ಅವಳ ಅಸಮಾಧಾನಗಳನ್ನು ಹೊರಗೆಡವುತ್ತಾಳೆ.

ಒತ್ತಡಗಳನ್ನು ಸವಾಲುಗಳನ್ನು ಎದುರಿಸಲಾಗದೆ ಕಂಗೆಡುತ್ತಾಳೆ. ಅವಳಗೆ ಮತಿಭ್ರಮಣೆಯನ್ನು ನಿಯಂತ್ರಿಸಲು ಊರಿನ ಮುಖಂಡರ ತೀರ್ಮಾನದಂತೆ ಅವಳಿಗೆ ಬೇಲಿ ಬೀಳುತ್ತದೆ. ಗಂಡನಿಗೆ ಇತ್ತ ಭಾಷೆ, ಭತ್ತದ ಬೆಳೆ, ಮಕ್ಕಳ ಹೊಣೆ ಅವಳ ಸ್ಮೃತಿಯಲ್ಲಿ ಜಾಗೃತವಾಗಿದ್ದರೂ ಅದನ್ನು ಸಾಧಿಸಲು ಅವಳಲ್ಲಿ ಶಕ್ತಿಯೇ ಉಳಿದಿರುವುದಿಲ್ಲ.
ಹಿರಿಯ ಮಗಳು ಸಖಾ ಹೆಗಲಿಗೆ ಇಡೀ ಜವಾಬ್ದಾರಿ ಬೀಳುತ್ತದೆ. ಓಂ ಳನ್ನು ಹೆಚ್ಚಿನ ಚಿಕಿತ್ಸೆಗೆ ಪಟ್ಟಣಕ್ಕೆ ಕರೆದೊಯ್ಯುತ್ತಾರೆ. ಇತ್ತ ಏಕಾಏಕಿ ಬಂದೆರಗಿದ ಈ ಸವಾಲನ್ನು ಎದೆಗುಂದದೆ ಸ್ವೀಕರಿಸಿ ಸಹೋದರಿಯರು ಭತ್ತದ ಬೆಳೆಯ ಕಾವಲಿಗೆ ನಿಲ್ಲುತ್ತಾರೆ. ಇನ್ನೇನು ಭತ್ತ ಕಟಾವಿಗೆ ಬಂತೆಂದು ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿ ಸಾವಿರಾರು ಗುಬ್ಬಚ್ಚಿಗಳು ಭತ್ತವನ್ನು ಮೆಲ್ಲಲು ಆಕ್ರಮಣ ಮಾಡಿಬಿಡುತ್ತದೆ. ಎರಡು ವರ್ಷದ ಕೂಸೂ ಮೊದಲ್ಗೊಂಡು ಮಕ್ಕಳೆಲ್ಲಾ ಬೆರ್ಚಪ್ಪನನ್ನು ನೆಟ್ಟು, ಖಾಲೀ ಟಿನ್, ಡಬ್ಬಗಳನ್ನು ಬಡಿಯುತ್ತಾ ಕರ್ಕಶ ಶಬ್ದ ಮೊಳಗಿಸುತ್ತಾ ಗುಬ್ಬಚ್ಚಿಯನ್ನು ಬೆದರಿಸುವ ಕಾಯಕದಲ್ಲಿ ತೊಡಗುತ್ತಾರೆ. ಅವರ ಆ ಹೋರಾಟ ನೋಡುಗನ ಸಾಕ್ಷಿಪ್ರಜ್ಞೆಯನ್ನು ಎಚ್ಚರಿಸುತ್ತದೆ.
ಅಂತೂ ಇಂತೂ ಭತ್ತವನ್ನು ಕಟಾವು ಮಾಡಿ ಮನೆತುಂಬಿಸಿಕೊಳ್ಳುತ್ತಾರೆ ಮಕ್ಕಳು. ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಮರಳುವ ಅಮ್ಮ ಓಂ, ಮೊದಲಿಗೆ ಕೇಳುವುದು ಭತ್ತ ಎಲ್ಲೆಂದು. ಭತ್ತವನ್ನು ಕಂಡು ಅವಳಿಗೆ ಆನಂದವಾಗುತ್ತದೆ ಎಂದು ಎಣಿಸಿದರೆ ಅದು ನೋಡುಗನ ತಪ್ಪು ಊಹೆ. ಮನೆ ನಿರ್ವಹಣೆಗೆ ಮತ್ತು ಆಸ್ಪತ್ರೆ ಖರ್ಚಿಗೆಂದು ಮಗಳು ಸ್ವಯಂ ತೀರ್ಮಾನ ಕೈಗೊಂಡು ಕೆಲವು ಮೂಟೆ ಭತ್ತವನ್ನು ಮಾರಿದ್ದಕ್ಕೆ ಓಂ ಮಗಳನ್ನು ನಿಂದಿಸುತ್ತಾಳೆ, ವ್ಯಘ್ರಳಾಗುತ್ತಾಳೆ. ಊರಿನ ಮಂದಿ ಅವಳಿನ್ನೂ ಗುಣಮುಖಳಾಗಿಲ್ಲವೆಂದು ಮೊದಲಿನ ಹಾಗೇ ಬಂಧಿಸಿ ಹೊರಡುತ್ತಾರೆ.
ಓಂ ಮಗಳು ಸಖಾಳಲ್ಲಿ ಜಮೀನಿಗೆ ಕರೆದೊಯ್ಯುವಂತೆ ಗೋಗರೆಯುತ್ತಾಳೆ. ಸಖಾ ಕತ್ತಲಾಗಿರುವುದರಿಂದ ಬೆಳಿಗ್ಗೆ ಕರೆದೊಯ್ಯುವುದಾಗಿ ಸಮಾಧಾನಿಸುತ್ತಾಳೆ. ಬೆಳ್ಳಂಬೆಳಿಗ್ಗೆ ಸಖಾ ಎದ್ದು ಅಮ್ಮನನ್ನೂ ಎಬ್ಬಿಸಿಕೊಂಡು ಜಮೀನಿಗೆ ಕರೆತರುತ್ತಾಳೆ. ಓಂ ಗದ್ದೆಯಲ್ಲಿ ನಿಂತು ಸುತ್ತಲೂ ಒಮ್ಮೆ ಕಣ್ಣಾಡಿಸಿ, ಭತ್ತದ ಕೂಳೆ ಕೂಳೆಯನ್ನೂ ಸವರುತಾಳೆ. ತನ್ನ ಗೈರಿನಲ್ಲಿ ಮಕ್ಕಳು ಕೈಗೊಂಡ ಗುಬ್ಬಚ್ಚಿ ಅಟ್ಟುವ ಕಾರ್ಯವನ್ನು ಆಗ ಕೈಗೊಳ್ಳುತ್ತಾಳೆ. ವಿಕಾರವಾಗಿ ಕೂಗುತ್ತಾ ದುಷ್ಟಶಕ್ತಿಗಳನ್ನು ಅಟ್ಟುವವಳಂತೆ ಗದ್ದೆಬಯಲಿನಲ್ಲಿ ಓಡುತ್ತಾಳೆ.
ಒಂದು ಬೆಳೆ ಅವಧಿಯಲ್ಲಿ, ಕೆಲವಾರು ಮೂಟೆ ಭತ್ತಕ್ಕಾಗಿ, ಒಂದಿಡೀ ಕುಟುಂಬ ಮುರುಟಿಹೋಗಿದ್ದು ಕಂಡು ನೋಡುಗನ ಕಣ್ಣಿಗೆ ಕತ್ತಲೆ ಆವರಿಸುತ್ತದೆ. ಸವಾಲುಗಳನ್ನೇ ಉಟ್ಟುಂಡು, ಪ್ರಕೃತಿಯೊಂದಿಗೆ ಕವಡೆಯಾಟಕ್ಕೆ ಬಿದ್ದ ರೈತನ ಪ್ರತಿಸವಾಲಿಗೆ ಬೆಚ್ಚಿ ಜಗತ್ತಿಗೇ ಮತಿಭ್ರಮಣೆಯಾಗಿರುವಂತೆ ಭಾಸವಾಗುತ್ತದೆ.





ನಿಮ್ಮ ಸಿನಿಮಾ ವಿಮರ್ಶೆ ಮನ ಮುಟ್ಟಿದೆ.ಸಿನಿಮಾ ನೋಡಬೇಕೆನಿಸಿದೆ.
ದೀಪದ ಮಲ್ಲಿ ರೈಸ್ ಪೀಪಲ್ ಎಂಬ ಈ ಚಲನಚಿತ್ರದ ಕಥೆಯನ್ನು ಕಟ್ಟಿಕೊಟ್ಟ ರೀತಿ ತುಂಬ ಚೆನ್ನಾಗಿದೆ. ಅದರ ಸಂಕ್ಷಿಪ್ತ ನಿರೂಪಣೆಯೇ ಓದುಗನ ಅಂತ:ಪ್ರಜ್ಞೆಯನ್ನು ಹೀಗೆ ತಾಗುತ್ತದೆಂದಾದರೆ ನೋಡುಗನಾಗಿ ಆ ಚಿತ್ರವನ್ನು ಅನುಭವಿಸುವದು ಹೇಗಿದ್ದೀತು ಎಂದು ಯೋಚಿಸುವಂತಾಗುತ್ತದೆ. ವೆಲ್ ಡನ್ ಮಲ್ಲಿ..!
ಇದು ನಿಮ್ಮದೇ ಕೂಸು ಅನ್ನುವಷ್ಟು ಆತ್ಮೀಯವಾಗಿ ನಿರೂಪಿಸಿದ್ದೀರಿ. ತುಂಬಾ ಚೆನ್ನಾಗಿದೆ.
ಒಂದು ಬೆಳೆ ಅವಧಿಯಲ್ಲಿ, ಕೆಲವಾರು ಮೂಟೆ ಭತ್ತಕ್ಕಾಗಿ, ಒಂದಿಡೀ ಕುಟುಂಬ ಮುರುಟಿಹೋಗಿದ್ದು ಕಂಡು ನೋಡುಗನ ಕಣ್ಣಿಗೆ ಕತ್ತಲೆ ಆವರಿಸುತ್ತದೆ. ಸವಾಲುಗಳನ್ನೇ ಉಟ್ಟುಂಡು, ಪ್ರಕೃತಿಯೊಂದಿಗೆ ಕವಡೆಯಾಟಕ್ಕೆ ಬಿದ್ದ ರೈತನ ಪ್ರತಿಸವಾಲಿಗೆ ಬೆಚ್ಚಿ ಜಗತ್ತಿಗೇ ಮತಿಭ್ರಮಣೆಯಾಗಿರುವಂತೆ ಭಾಸವಾಗುತ್ತದೆ.
ಇದು ಕೇವಲ ಪ್ರಕೃತಿಯೊಂದಿಗಿನ ಕವಡೆಯಾಟವಷ್ಟೆ ಅಂತ ನಿಮಗೆ ಅನಿಸುತ್ತದೆಯೆ? ನಿಮ್ಮ review ನಲ್ಲಿ ಅದರಾಚೆಗೂ ಇರುವ ಕಾಣದ ಕೈಗಳ ಸುಳಿವುಗಳು ಕಾಣುತ್ತವಲ್ಲ.. ಮತ್ತೊಮ್ಮೆ ಚಿತ್ರವನ್ನು ನೋಡುತ್ತೇನೆ.
Very inspiring..
Tx.