ಅಕ್ಕಿಮಂಗಲ ಮಂಜುನಾಥ್
ಪ್ರಿಯ ಮಿತ್ರರೇ,
ಈಗ ಸಂಭವಿಸುತ್ತಿರುವ ರೈತರ ಆತ್ಮ ಹತ್ಯೆಗಳ ಸರಣಿಯನ್ನು , ಅಧಿಕಾರ ಉಳ್ಳವರು ನಡೆಸುತ್ತಿರುವ ಕೊಲೆ ಎಂದರೆ ಹೆಚ್ಚು ಅರ್ಥಪೂರ್ಣವಾಗಬಹುದು.
ಮೊನ್ನೆ ಒಂದು ಪತ್ರಿಕೆಯಲ್ಲಿ, ವಿಚಾರವಾದಿಯೊಬ್ಬ-
“ರೈತರು ಏಕೆ ಹಿಂದುಳಿದಿದ್ದಾರೆಂದರೆ , ಏಕೆ ಮೂಲೆಗುಂಪಾಗುತ್ತಿದ್ದಾರೆಂದರೆ, ಅವರು -ಕುಡಿತ, ಜೂಜು , ಮಾದಕ ವಸ್ತುಗಳ ಚಟಗಳಿಗೆ ದಾಸರಾಗಿರುವುದೇ ಮೂಲ ಕಾರಣ” ಎಂದಿರುವರು.
ಹಾಗೆಯೇ ಒಂದು ಸಾರಿ ರೈತರೇಕೆ ಆತ್ಮ ಹತ್ಯೆಗೆ ಶರಣಾಗುತ್ತಾರೆಂದು ಸರ್ಕಾರದ ಪರವಾಗಿ ಸಮೀಕ್ಷೆ ನಡೆಸಿದ ಸಮೀಕ್ಷಕರು “ಮುಕ್ಕಾಲು ಪಾಲು ರೈತರು ತಮ್ಮ ಸಾಂಸಾರಿಕ ಮತ್ತು ವೈಯಕ್ತಿಕ ಕಾರಣಗಳಿಂದ ಸಾವಿಗೆ ಶರಣಾಗುತ್ತಾರೆ”ಎಂದು ಹೇಳಿದ್ದರು.
ಮತ್ತೂ ಕೆಲವು ವಿಚಾರವಂತರು ಅವರ ಮೌಡ್ಯತೆ ಮತ್ತು ತಾಳ್ಮೆ ಇಲ್ಲದ ಮನಸ್ಥಿತಿಯೇ ಆತ್ಮ ಹತ್ಯೆಗೆ ಪ್ರಮುಖ ಕಾರಣವೆಂದರು.
ಅವರು ಏನೇ ಅನ್ನಲಿ ಯಾವ ರೀತಿಯ ಸಾವೇ ಆಗಲಿ ಸಾವು ಸಾವೇ ಎಂಬುದು ಭೀಕರ ಸತ್ಯ.
ಲೇಖಕರ ಮಾತಿನಂತೆ ರೈತರು ಹಿಂದುಳಿಯಲು ಕಾರಣ ಮದ್ಯ, ಜೂಜುಗಳೇ ಕಾರಣವಾಗುವುದಾದರೆ, ಗಲ್ಲಿಗೊಂದು ಬೀದಿಗೊಂದರಂತೆ ಸಾರಾಯಿ ಅಂಗಡಿಗಳ ತೆರೆಯುತ್ತಾ , ಹತ್ತಾರು ತರದ ಲಾಟರಿಗಳ ಹುಟ್ಟು ಹಾಕುತ್ತಾ, ಪ್ರೋತ್ಸಾಹ ನೀಡುತ್ತಿರುವುದು ಯಾರು ? ಸರ್ಕಾರ ಮತ್ತು ಕಂಪನಿಗಳೇ ಅಲ್ಲವೇ ? ಮುಖ್ಯವಾಗಿ ಇಂತಹ ವ್ಯಸನಗಳಿಗೆ ಅಧಿಕವಾಗಿ ದಾಸರಾಗುವುದು ಆರ್ಥಿಕವಾಗಿ ಸುಸ್ಥಿತಿಯಲ್ಲಿರುವಂತಹರೇ ವಿನಹ ಸಾಮಾನ್ಯ ಬಡ ರೈತರಂತೂ ಅಲ್ಲವೇ ಅಲ್ಲ. ಸಮೀಕ್ಷಕರು ಹೇಳಿದಂತೆ ಮುಕ್ಕಾಲು ಪಾಲು ವೈಯಕ್ತಿಕವಾದ ಸಮಸ್ಯೆಗಳಿಗೇ ಎಂದು ಭಾವಿಸಿದರೂ ಆ ಸಮಸ್ಯೆಗಳು ಉದ್ಭವವಾಗುವುದು ಅವನ ಆರ್ಥಿಕ ಮುಗ್ಗಟ್ಟಿನಿಂದಲೇ ಎಂಬುದು ಅವರಿಗೆ ಅರ್ಥವೇ ಆಗದಿದ್ದದ್ದು ಒಂದು ದುರಂತ. ಅವರಿಗೆ ಆರ್ಥಿಕ ಮುಗ್ಗಟ್ಟು ಉಂಟಾಗುವುದೂ ಸಹ ಅಧಿಕಾರಸ್ಥರ ತಪ್ಪು ನಿರ್ದಾರಗಳಿಂದಲೇ ಅಲ್ಲವೇ ?
ಯಾರೇನೇ ಬಡಬಡಿಸಿದರೂ ಇಂದು ರೈತ ಸಾವಿಗೆ ಶರಣಾಗುತ್ತಿರುವುದು – ದೂರದೃಷ್ಟಿಯಿಲ್ಲದ, ಕರುಣೆ ಇಲ್ಲದ ಮತ್ತು ಸ್ವಾರ್ಥದ ಅಧಿಕಾರಿವರ್ಗದ ದೋರಣೆಯೇ ವಿನಹ ಮತ್ತಾವುದೂ ಅಲ್ಲ. ಪ್ರಕೃತಿಯ ಸಹಜ ನಿಯಮವೆಂಬಂತೆ -ದೊಡ್ಡ ಮೀನು ಚಿಕ್ಕ ಮೀನನ್ನು ತಿಂದು ಬದುಕುವಷ್ಟು ಸಹಜವಾಗಿ , ಬಲಿತವರು ನಿಸ್ಸಹಾಯಕರನ್ನು ಮೆಟ್ಟಿ ಮೇಲೇರುತ್ತಿರುವುದೂ ಒಂದು ದೊಡ್ಡ ಕಾರಣ.
ನಮ್ಮ ವಿಚಾರವಂತರಲ್ಲಿ ಒಂದು ಬಣವಿದೆ.
ಮೊನ್ನೆ ಮೊನ್ನೆ , ಕನ್ನಡ ಸಾಹಿತ್ಯದ ಶ್ರೇಷ್ಠಾತಿ ಶ್ರೇಷ್ಟ ಸಾಹಿತಿಗಳಾದ ಬೈರಪ್ಪ, ದೇಜಗೌ ಮತ್ತು ಕುಂ.ವೀ. ಬಡವರ ಬಗ್ಗೆ ಅವರು ಮನುಷ್ಯರೇ ಅಲ್ಲ.ಹೊಟ್ಟೆ ಹಸಿವೆಂಬುದೇ ಅವರಿಗಿಲ್ಲ ಎಂಬ ದೋರಣೆಯಿಂದಲೇ (ಒಂದು ರೂ ಅಕ್ಕಿಯ ವಿಚಾರಕ್ಕೆ) ಮಾತಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ವಾರಾನ್ನ ತಿಂದು ದೊಡ್ಡವರಾದ ಬೈರಪ್ಪನವರಿಗೆ , ಒಂದು ಹೊತ್ತಿನ ಕೂಳಿಗೂ ಪರದಾಡಿ ಮೇಲೆದ್ದ ದೇಜಗೌ ಗೆ , ಅಷ್ಟೇ ಕಷ್ಟ ಪಟ್ಟ ಕುಂ.ವೀ ಗೆ ಏಕೆ ತಮ್ಮ ಬಾಲ್ಯದ ಬದಕು ಮರೆತು ಹೋಯಿತು ? ತಾವಿಂದು ಬಲಿತ ಹಾಗೆಯೇ ಇಡೀ ಪ್ರಪಂಚವೇ ಬಲಿತುಬಿಟ್ಟಿದೆ ಎಂಬ ಭಾವನೆಯೇ ? ಅಧಿಕಾರ ಬಂದೊಡನೆ ಕೆಳಗಿರುವವರೆಲ್ಲಾ ತುಚ್ಛರು ಎಂಬ ಧೂರ್ತತನವೇ ? ಬರೀ ಪ್ರಚಾರಕ್ಕಾಗಿಯೇ ವಿವಾದಗಳ ಸೃಷ್ಟಿಸಿ ಜನರ ನಾಲಗೆಯ ಮೇಲೆ ನಲಿದಾಡುವ ಇರಾದೆ ಇರಬಹುದೇ? ಅಂದ ಮೇಲೆ ಇಂದಿನ ಸಮಾಜದ ಸ್ವಾಸ್ತ್ಯವನ್ನು ಕೆಡಿಸುವುದರಲ್ಲಿ ಇಂಥ ಮಹನೀಯರ ಪಾತ್ರವೂ ಅಮೋಘವಾಗಿಯೇ ಇದೆಯೆಂದು ಅರ್ಥ.

ರೈತ ಯಾಕೆ ಸೋತು ಹೋಗಿದ್ದಾನೆಂದು ಅನೇಕರಿಗೆ ಅರ್ಥವಾಗದೇ ಹೋಗಿರುವುದೊಂದು ವಿಪರ್ಯಾಸ. ಅದಕ್ಕೆ ಪರಿಹಾರ ಕಂಡುಹಿಡಿಯಲು ಯಾರಿಂದಲೂ ಆಗುತ್ತಿಲ್ಲ .
ಈ ದಿನ ರೈತ ಯಾವ ರೀತಿಯಲ್ಲೂ ಸ್ವತಂತ್ರನಾಗಿಲ್ಲ. ಬಿತ್ತನೆ ಬೀಜಕ್ಕೆ ಕಂಪನಿಗಳ ಕಡೆ ಕೈಯೊಡ್ಡಬೇಕು.ಉತ್ತು ಬಿತ್ತಲು ಯಂತ್ರಗಳಿಗಾಗಿ ಕಂಪನಿಗಳ ಕಡೆ ಕೈಯೊಡ್ಡಬೇಕು. ಕೀಟ ನಾಶಕ ಔಷದಿಗಳಿಗೆ ಕಂಪನಿಗಳ ಕಡೆ ಕೈಯೊಡ್ಡಬೇಕು. ಬೆಳೆದು ರಾಶಿಯಾದ ಮೇಲೆ ವ್ಯಾಪಾರಿಗಳೆಂಬ ಮದ್ಯವರ್ತಿಗಳಿಗೆ ಎಲ್ಲವನ್ನೂ ಸುರಿದು ಅವರು ಕೊಟ್ಟ ಬೆಲೆಯನ್ನಷ್ಟೇ ಪಡೆದು ವಾಪಸ್ಸಾಗಬೇಕು.
ಇಲ್ಲಿ ನೋಡಿ , ಬಿತ್ತನೆ ಬೀಜಕ್ಕೆ , ಯಂತ್ರಗಳಿಗೆ , ಔಷಧಿಗಳಿಗೆಂದು ಅವರು ವಿಧಿಸಿದ ಒಂದಕ್ಕೆ ನಾಲ್ಕರಷ್ಟು ದುಡ್ಡು ಕೊಟ್ಟು ತಂದು ಬಳಸಿ , ಹಗಲಿರುಳೂ ದುಡಿದು , ಮಾಲನ್ನು ಮಾರುಕಟ್ಟೆಗೆ ಕೊಂಡೈದು ಅವರು ನಿರ್ದರಿಸಿದ ಬೆಲೆಗೆ ಕೈಯೊಡ್ಡಬೇಕು ಮತ್ತು ಅಲ್ಲಿಯೂ ಕಮೀಷನ್ ಎಂಬ ತೆರೆಗೆಯನ್ನು ಕಟ್ಟಿ , ಮನೆಗೆ ಬಂದು ಲೆಕ್ಕ ಹಾಕಿ ಸಾಲ ಸೋಲ ಅಂಥ ಕಟ್ಟಿ , ಕೊನೆಗೆ ಬರಿಗೈಯಾಗಿ ಮತ್ತೆ ಸಾಲ ನೀಡುವವರನ್ನೇ ಅಂಗಲಾಚಬೇಕು. ಅವ ಎಷ್ಟೇ ಕಷ್ಟ ಪಟ್ಟರೂ ತನ್ನ ಹೆಂಡತಿ ಮಕ್ಕಳನ್ನು ನೆಮ್ಮದಿಯಾಗಿ ಸಾಕಲಾರ . ಅಷ್ಟಕ್ಕೇ ಅವನು ಆತ್ಮ ಹತ್ಯೆ ಮಾಡಿಕೊಳ್ಳುತ್ತಾನೆಂಬುದೂ ಸುಳ್ಳು.
ಏಕೆಂದರೆ ಮುಂದೆ ಒಂದಲ್ಲಾ ಒಂದು ಕಾಲಕ್ಕೆ ತನಗೂ ಒಳ್ಳೇ ಟೈಂ ಬರಬಹುದೆಂದೇ ಕಾಯುತ್ತಾನೆ. ಆದರೆ ಅವನಿಗೆ ಒಳ್ಳೇ ಕಾಲ ಬರುವುದೇ ಇಲ್ಲ. ಮತ್ತೆ ಬಿದ್ದಿರುವ ಆಳ ಪ್ರಪಾತದಿಂದ ಮೇಲೇಳಲಿಕ್ಕೆ ಸಾದ್ಯವೇ ಇಲ್ಲ ಎಂಬ ಸ್ಥಿತಿ ತಲುಪಿದಾಗ ಮಾತ್ರ ಕೈ ಚೆಲ್ಲಿ ಅಂತಹ ಅನಾಹುತಕ್ಕೆ ಒಳಗಾಗಿ ಬಿಡುತ್ತಾನೆ.
ಸಬ್ಸಿಡಿ ನೆಪದಲ್ಲಿ ಅನೇಕ ರೀತಿಯ ಸಾಲಗಳನ್ನು ಕೊಡುತ್ತಿರುವೆವೆಂದು ಹೇಳತ್ತಿರುತ್ತಾರೆ ಆದರೆ ಅವೆಲ್ಲವೂ ಉಳ್ಳವರ ಪಾಲಾಗಿ ಬಡರೈತ ಮತ್ತದೇ ಖಾಸಗಿ ಲೇವಾದೇವಿಯವನ ಬಲಿಗೇ ಬೀಳುತ್ತಿರುತ್ತಾನೆ. ಕಂದಾಯ, ಬೀಜ, ಗೊಬ್ಬರ, ಯಂತ್ರ, ತಂತ್ರಜ್ಞಾನ ಎಂದು ಬೆಳೆಗಳಿಗೆ ಬಳಸುವ ಎಲ್ಲಾ ನಾಲ್ಕಾಣೆ ವಸ್ತುಗಳಿಗೆ ಒಂದು ರೂಪಾಯಿ ಕಟ್ಟಬೇಕು .
ಹಗಲಿರುಳೂ ಹೆಂಡತಿ ಮಕ್ಕಳ ಸಹಿತ ದುಡಿದು ಪ್ರಕೃತಿ ವಿಕೋಪಗಳನ್ನು ಹೆದರಿಸಿ ರಾಶಿ ರಾಶಿ ಪದಾರ್ಥಗಳ ಬೆಳೆದು ಮಾರುಕಟ್ಟೆಗೆ ತಂದರೆ ಅಲ್ಲಿ ಸಹಿಸಲಾಗದಷ್ಟು ತೊಂದರೆ. ಹಾಗಾದರೆ ಈಗ ರೈತ ಸ್ವಾಭಿಮಾನಿಯಾಗಿ ಬದುಕಲಿಕ್ಕೆ ಸಾಧ್ಯವಿದೆಯೇ ?
ಅನೇಕರು ಹೇಳುತ್ತಿರುತ್ತಾರೆ , ರೈತ ತನ್ನ ತನವನ್ನು ಕಳೆದುಕೊಂಡು ಅಧಿಕಾರಿ ವರ್ಗದ ಹಂಗಿನರಮನೆಯಲ್ಲಿ ಬದುಕುತ್ತಿದ್ದಾನೆಂದು.
ಯಾಕೆ ಅವರ ಹಂಗಿನೊಳಗೆ ಸಿಲುಕಿದ್ದಾನೆಂದು ಮಾತ್ರ ಯಾರೂ ಹೇಳರು. ದುಡಿಯದೇ ಬದಕುವ ವರ್ಗಗಳಿಗೆ ಊಟ ಹಾಕಿ ಅವರ ಹಿಡಿತದಲ್ಲಿ ನಲುಗಿಯೇ ಅಲ್ಲವೇ ಇಂದು ರೈತನಾದವನು ತನ್ನ ಸ್ವಭಿಮಾನ ಕಳೆದು ಕೊಂಡು ಇಷ್ಟು ಅಧೋಗತಿಗಿಳಿದಿರುವುದು ? ಈಗ ಹೇಳಿ , ಹಂಗಿನೊಳಗೆ ಬದುಕುತ್ತಿರುವವರು ರೈತರೋ ಅಥವ ಅವರು ಬೆಳೆವ ಅನ್ನ ಉಂಡು ಬಲಿತಿರುವ ಅಧಿಕಾರಿ ವರ್ಗವೊ?
ಹೌದು ರೈತ ಇಂದು ಸೋತಿದ್ದಾನೆ. ವ್ಯಾಪಾರಿಯಿಂದ ಹಿಡಿದು ಮೇಲಿನ ಅಧಿಕಾರಿಯವರೆಗೆ ಇವನ ಜುಟ್ಟು ಹಿಡಿದು ಅಲುಗಾಡಿಸುತ್ತಿದ್ದಾರೆ. ವಿಚಾರವಂಥರಂತೂ ಅಕ್ರಮಗಳ ಬಗ್ಗೆ ಹೇಳುವುದು ಬಿಟ್ಟು , ಅದನ್ನು ಮಟ್ಟ ಹಾಕುವ ಬಗ್ಗೆ ಚಿಂತಿಸುವುದನ್ನು ಬಿಟ್ಟು ಏನೇನೋ ಇಲ್ಲಸಲ್ಲದರ ಬಗ್ಗೆಯಲ್ಲಾ ಹೇಳತೊಡಗಿದ್ದಾರೆ. ಅಡಿಯಿಂದ ಮುಡಿಯವರೆಗೆ ಎಲ್ಲರೂ , ವಿಶ್ವದ ತಾಯಿ ಬೇರಿನಂತಿರುವ ದುಡಿಯುವವನ ಕರುಳಿಗೇ ಕೈ ಹಾಕಿದಂತಿದೆ.ಇಂತ ದುಷ್ಟ ಕಣ್ಣುಗಳು ಅಸಹಾಯಕನ ಕರುಳಿಗೆ ಬಿದ್ದರೆ, ದೃಷ್ಟಿ ತಾಗಿ, ಅಲ್ಪ ಶಕ್ತಿಯೂ ನಶಿಸಿ ಬಿಟ್ಟರೆ , ಆ ಮೇಲೆ ದುಡಿಯಲಿಕ್ಕೆ ಯಾರ ರಟ್ಟೆಗಳನ್ನು ಹುಡುಕಿಕೊಂಡು ಹೋಗುತ್ತಾರೋ ?
ಇಂದು ಸಾಮಾಜಿಕ ಕನಸಿರುವ ನಾಯಕರ ಕೊರತೆಯಿಂದ, ಭ್ರಷ್ಟನಿಗ್ರರ ಕೊರತೆಯಿಂದ, ಮುಂದಾಲೋಚನೆ ಇರುವವರು ಮುಂದಾಳತ್ವ ವಹಿಸದೇ ಹಿಂದುಳಿದಿರುವ ಕಾರಣದಿಂದ, ಯೋಗ್ಯರಾದವರು ಅಧಿಕಾರದಿಂದ ದೂರ ಉಳಿದಿರುವ ಪರಿಣಾಮದಿಂದ ಏನೆಲ್ಲಾ ಅನಾಹುತಗಳಾಗುತ್ತಿವೆ !
ಇವತ್ತು ರೈತನಿಗೆ ಸರಿಯಾದ ನೀರು ಕೊಟ್ಟರೆ , ನೀರು ಬಳಸಲು ವಿದ್ಯುತ್ ಕೊಟ್ಟರೆ , ನ್ಯಾಯವಾದ ಬೆಲೆಗೆ ಬೀಜ ಗೊಬ್ಬರ ಕೊಟ್ಟರೆ , ಬೆಳೆದದ್ದಕ್ಕೆ ನ್ಯಾಯಯುತ ಬೆಲೆ ಕೊಟ್ಟರೆ ಅವ ಎಷ್ಟು ಬೇಕಾದರೂ ಬೆಳೆದು ಹಾಕ ಬಲ್ಲನು. ಆದರೆ
ಇತ್ತೀಚೆಗಿನ ಬೆಳವಣಿಗೆಗಳನ್ನು ಗಮನಿಸಿದರೆ ಪ್ರಪಂಚಕ್ಕೆ ರೈತನ ಅಗತ್ಯವಿಲ್ಲವೇನೋ ಎಂಬಂತೆ ನಮ್ಮ ರಾಜಕಾರಣಿಗಳು ವರ್ತಿಸತೊಡಗಿದ್ದಾರೆ.
ಲಕ್ಷಗಟ್ಟಲೆ ರೈತರು ಆತ್ಮಹತ್ಯೆಗಳ ಮಾಡಿಕೊಂಡರೂ ಇನ್ನೂ ಅಧಿಕಾರದ ಕಣ್ಣಿಗೆ ಮಂಕು ಕವಿದಂತೆಯೇ ಇದೆಯೆಂದಮೇಲೆ ನಿಜಕ್ಕೂ ರೈತರು ತಾವಾಗಿಯೇ ಸಾಯುತ್ತಿದ್ದಾರೋ ಅಥವ ಅಧಿಕಾರದ ವಿಷ ವರ್ತುಲದೊಳಗೆ ಸಿಲುಕಿ ಕೊಲೆಯಾಗುತ್ತಿದ್ದಾರೋ ಪ್ರತಿಯೊಬ್ಬರೂ ಯೋಚಿಸಬೇಕಾಗಿದೆ.






the reality everyone need to accept before we loose the people who give us food. thanks for the article sir.