ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ರೇವತಿ ಅಮ್ಮನ 'ಬದುಕು ಬಯಲು' ಒಂದು ಆಪ್ತ ಮಾತುಕತೆ…'

ನಾಗರಾಜ್  ಹೆತ್ತೂರ್

“ನಮಗೆ ಈ ಬದುಕು ಸಾಕಾಗಿದೆ. ನಾವೂ ಕೂಡ ದೊಡ್ಡ ದೊಡ್ಡ ದೊಡ್ಡ ಆಫಿಸರ್ ಗಳಾಗಬೇಕಿದೆ. ಐಎಎಸ್ , ಐಪಿಸ್ ಗಳಾಗಬೇಕಿದೆ. ಸರಕಾರಿ ಕೆಲಸ ಬೇಕಿದೆ. ನಾವೂ ನಿಮ್ಮಂತೆ ಮನುಷ್ಯರು ನಮ್ಮನ್ನೂ ಮನುಷ್ಯರಂತೆ ನೋಡಿ” ಹೀಗೆಂದು ಕೆಲ ಕ್ಷಣ ಮೌನವಾದರು.
ಆ ತಾಯಿಯ ಕಣ್ಣಲ್ಲಿ ನೀರು ತುಂಬಿತ್ತು, ಬದುಕನ್ನು ಬಯಲುಗೊಳಿಸುತ್ತಲೇ ತಮ್ಮವರ ಬದುಕನ್ನು ಮೇಲೆತ್ತಬೇಕೆಂದು ಊರೂರು ತಿರುಗುತ್ತ ರಂಗದ ಮೇಲೆ ತನ್ನ ಪಾತ್ರವನ್ನು ತಾನೇ ಮಾಡುತ್ತಾ ತಮ್ಮವರ (ಮಂಗಳಮುಖಿಯರ) ಜೀವನವನ್ನು ಜಗತ್ತಿಗೆ ಅನಾವರಣಗೊಳಿಸುತ್ತಿರುವ ಆಕೆ ರೇವತಿ. ನನ್ನೆದುರು ಒಬ್ಬಳು ಮಂಗಳ ಮುಖಿಯಂತೆ ಕಾಣಲಿಲ್ಲ. ಬದಲಾಗಿ ತಾಯಿಯ ಪ್ರೀತಿ, ನೋವು, ನಲಿವು, ವಾತ್ಸಲ್ಯ ಎಲ್ಲವೂ ಆಕೆಯ ಮುಖದಲಿತ್ತು.
ಇಡೀ ಭಾರತೀಯ ರಂಗಭೂಮಿ ಇತಿಹಾಸದಲ್ಲೇ ಎ ರೇವತಿ ಅವರದ್ದು ದಾಖಲೆ. ಕೃತಿ ಬರೆದವರೇ ಪಾತ್ರವಾಗಿ ರಂಗಭೂಮಿ ಮೇಲೆ ಬಂದಿದ್ದಾರೆ. ಆ ಪಾತ್ರದ ಹೆಗ್ಗಳಿಕೆ ರೇವತಿ ಅವರದ್ದು. ಹೆಗ್ಗೂಡಿನ ಜನಮನದಾಟ ಅಭಿನಯಿಸುತ್ತಿರುವ ಗಣೇಶ್ ಹೆಗ್ಗೂಡು ನಿರ್ದೇಶನದ ಬದುಕು ಬಯಲು ಎ ರೇವತಿ ಅವರ ಆತ್ನಕತೆ. ಇದೀಗ ಎ ರೇವತಿ ಅವರೇ ಅವರ ಪಾತ್ರವನ್ನು ಮಾಡುತ್ತಿದ್ದು ತಿರುಗಾಟದಲಿದ್ದಾರೆ. ದಲಿತ ಸಾಹಿತ್ಯ ಪರಿಷತ್, ನಾಗಭೂಮಿ ಅಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿದ್ದ ನಾಟಕೋತ್ಸವದಲ್ಲಿ ಭಾಗವಹಿಸಲು ಬಂದಿದ್ದರು.
ಈ ನಡುವೆ ಬಿಡುವು ಮಾಡಿಕೊಂಡು ಮಾತನಾಡಲು ಕುಳಿತ ರೇವತಿ ಅಮ್ಮ ತಮ್ಮ ಬದುಕನ್ನು ಬಿಚ್ಚಿಡುತ್ತ ಹೋದರು.
` ಜೀವನವೇ ಒಂದು ಹೋರಾಟ. ಎಷ್ಟೆ ಕಷ್ಟ ಬಂದರೂ ಬದುಕಿನ ಪಯಣ ಮುಂದುವರಿಯಯಲೇ ಬೇಕು ಎನ್ನುವ ರೇವತಿ, ತಮಿಳು ನಾಡಿನ ಸೇಲಂ ಜಿಲ್ಲೆಯ ನಮಕ್ಕಲ್ ತಾಲೂಕಿನ ಪುಟ್ಟ ಹಳ್ಳಿಯಲ್ಲಿ ದೊರೈಸ್ವಾಮಿಯಾಗಿ ಹುಟ್ಟಿದವರು. ಗಂಡಾಗಿ ಹುಟ್ಟಿ ಹೆಣ್ಣಾಗಿ ಪರಿವರ್ತನೆಗೊಂಡು ಹಿಜ್ರಾಗಳ ಯತನಾಮಯ ಬದುಕನ್ನು ಇಂಚಿಂಚನ್ನು ಅನುಭವಿಸಿದವರು. ತನ್ನ ಸಮುದಾಯದ ಎಲ್ಲಾ ನೋವುಗಳಿಗೆ ಸ್ಪಂಧಿಸಲು ಹಿಜ್ರಾ ಸಾಮಾಜಿಕ ಕಾರ್ಯಕರ್ತೆಯಾಗಿ ಆ ಸಮುದಾಯದ ಬಿಡುಗಡೆಗಾಗಿ ಇಂದಿಗೂ ತೊಡಗಿಸಿಕೊಂಡಿದ್ದಾರೆ. ತನ್ನನ್ನು ತಾನು ಹೆಣ್ಣೆಂದು ಸಮರ್ಥಿಸಿಕೊಂಡಿದ್ದಾರೆ. ಮನುಷ್ಯತ್ವದ ಹುಡುಕಾಟವನ್ನೇ ಮುಖ್ಯ ಧ್ಯೇಯವಾಗಿಸಿಕೊಂಡಿರುವ ಎ. ರೇವತಿ 22 ನೇ ವಯಸ್ಸಿಗೆ ಕರ್ನಾಟಕಕಕ್ಕೆ ಬಂದವರು.

ರೇವತಿ ಗೆ ಈಗ 47 ವರ್ಷ. ಕನ್ನಡವನ್ನು ಸಪಷ್ಟವಾಗಿ ಮಾತನಾಡುತ್ತಾರೆ, ಬರೆಯಲು ಬಾರದು ಓದುವುದನ್ನು ಕಲಿಯುತ್ತಿದ್ದಾರೆ. ಅವರ ಬದುಕು ಬಯಲು ಆತ್ಮಕತೆಯನ್ನು ಅಂತರಾಷ್ಟ್ಟ್ರ ಮಟ್ಟದ ಪುಸ್ತಕ ಪ್ರಕಾಶನ ಪೆಂಗ್ವಿನ್ ಹೊರತಂದಿದ್ದು. ಕನ್ನಡದಲ್ಲಿ ಲಂಕೇಶ್ ಪ್ರಕಾಶನ ಪ್ರಕಟಿಸಿದ್ದು ಖ್ಯಾತ ಹೋರಾಟಗಾರ್ತಿ ದು ಸರಸ್ವತಿ ಅನುವಾದ ಮಾಡಿದ್ದಾರೆ. ಪೆಂಗ್ವಿನಲ್ಲಿ ನನ್ನ ಪುಸ್ತಕ ಬಂದರೆ ಸಾಕು ಎಂಬ ಸಂದರ್ಭದಲ್ಲಿ ರೇವತಿ ಅವರ ಒಂದು ಲೇಖನವನ್ನು ನೋಡಿದ ಪ್ರಕಾಶಕರು ಇವರ ಆತ್ಮಕತೆ ಹೊರತರಲು ಮುಂದಾದರು. ಇವರ ಮೊದಲ ಕೃತಿ ಉನಗರ್ು ಉರವಪುಂ “ಭಾವನೆ ಮತ್ತು ನಮ್ಮ ದೇಹ” ಇದರ ಬಗ್ಗೆ ತೆಹಲ್ಕಾದಲ್ಲಿ ಬರೆದಿದ್ದನ್ನು ನೋಡಿದ ಪೆಂಗ್ವಿನ್ ನವರು ಭೇಟಿಯಾಗಿ ಮಾತನಾಡಿಸಿದರು. ಆ ಸಂದರ್ಭದಲ್ಲಿ ಆತ್ಮಕತೆ ಬರೆಯುತ್ತಿದ್ದರಿಂದ ಮುಂದೆ ಪೆಂಗ್ವಿನ್ ಪ್ರಕಾಶನ ಆತ್ಮಕತೆಯನ್ನು ಬಿಡುಗಡೆ ಮಾಡಿತು. ಇದೀಗ ದೇಶದ 325 ವಿ.ವಿ ಗಳಲಲಿ ಬದುಕು ಬಯಲು ಪಟ್ಯ ಸೇರಿದಂತೆ ಬೇರೆ ಬೇರೆ ಪ್ರಕಾರಗಳಲ್ಲಿ ಸೇರ್ಪಡೆಗೊಂಡಿದೆ. ಈ ಬಗ್ಗೆ ಸಂಶೋಧನೆಗಳಾಗುತ್ತಿವೆ. ಈ ಪುಸ್ತಕದ ನಂತರ ಸಮಾಜದಲ್ಲಿ ಹಿಜ್ರಾ ಸಮುದಾಯ ಎಂದರೆ ಭೆಕ್ಷೆ ಬೇಡುವರು ಎಂದಿದ್ದ ಜಾಗದದಲ್ಲಿ ಅವರ ಬದುಕಿನ ನಿಜವಾದ ಅನಾವರಣವಾಯಿತು. ಬಹಳಷ್ಟು ಜನರಿಗೆ ನಮ್ಮ ಬದುಕು ಏನೆಂದು ಅರ್ಥವಾಯಿತು ಎನ್ನುತ್ತಾರೆ. ರೇವತಿ.
`21 ನೇ ವಯಸ್ಸಿಗೆ ಮನೆ ಬಿಟ್ಟೆ. ದೆಹಲಿಗೆ ಹೋದೆ. ನಂತರ ಹೊಟ್ಟೆಪಾಡಿಗೆ ಬಾಂಬೆಯಲಿ ಇದ್ದೆ. ಜೀವನಕ್ಕೆ ಸೆಕ್ಸ್ ವರ್ಕ ಮಾಡುತ್ತಿದ್ದೆ. ಕಾರಣ ನಮ್ಮನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ. ನಮಗೂ ಆಸೆ, ಆಕಾಂಕ್ಷೆ ಇರುತ್ತದೆ. ನಾವೂ ಮದುವೆ ಮಾಡಿಕೊಳ್ಳಬೇಕು, ಎಲ್ಲರಂತೆ ಬದುಕಬೇಕು, ತಂದೆ-ಯಾಯಿ ಅಕ್ಕ, ತಮ್ಮಂದಿರ ಪ್ರೀತಿ ಬೇಕು ಆದರೆ ಇದು ಯಾರಿಗೂ ಗೊತ್ತಾಗುವುದೇ ಇಲ್ಲ. ಯಾವ ಕಾಲದಲ್ಲಿ ತಂದೆ-ತಾಯಿಯಿಂದ ತಿರಸ್ಕಾರಕ್ಕೆ ಒಳಗಾದವೋ ಅದೇ ತಂದೆಯನ್ನು ಈಗ ಆ ತಂದೆಯೊಂದಿಗೆ ಬದುಕುತ್ತಿದ್ದೇನೆ. ನನ್ನ ಪುಸ್ತಕ ಬಂದ ನಂತರ ನಾವೆಲ್ಲ ಒಂದಷ್ಟು ಜನ ಸೇರಿಕೊಂಡು ಬೆಂಗಳೂರಿನಲ್ಲಿ ನಮ್ಮವರ ಪರ ಹೋರಾಟ ಆರಂಭಿಸಿದೆವು. ಕೆಲಸ ಮಾಡಿದೆವು. ಸಂಗಮ ಸಂಸ್ಥೆ ಮೂಲಕ ಅದನ್ನು ಮಾಡುತ್ತಿದ್ದೆ. ಅದು ಬೆಳೆಯುತ್ತಾ ಹೋಯಿತು. ನನಗೆ ನನ್ನ ಜನಗಳು ದೂರವಾಗುತ್ತಾ ಹೋದರು. ಕುರ್ಚಿ ಅಧಿಕಾರ ಸಿಕ್ಕರೆ ಕೆಲವರು ಅವರ ಸಮುದಾಯವನ್ನೂ ಮರೆಯುತ್ತಾರೆ ಇದನ್ನು ನಾನೂ ಕೂಡ ಅನುಭವಿಸಿದೆ. ಇಲ್ಲಿ ಕೆಲಸ ಬೇಸರ ಎನಿಸಿತು. ಅಲ್ಲಿದ್ದಷ್ಟು ದಿನ ಪಂಚಾಯಿತಿ ಮಾಡುವುದೆ ಆಯಿತು. ಇತರರಿಗೆ ಸ್ಥಾನ ಬಿಟ್ಟುಕೊಟ್ಟು. ನನ್ನ ಊರು ಸೇರಿಕೊಂಡೆ. ಬಿಟ್ಟು ಆದ ನಂರ ಒಂದಷ್ಟು ದಿನ ದುಗುಡು, ಸಂಕಟ, ಏಕತಾನತೆ ಅನುಭವಿಸಿದೆ. ನಂತರ ಹೆಣ್ಣಾಗಿ ಹುಟ್ಟಿ ಗಂಡಾಗಿ ಜೀವನ ಮಾಡುವರ ಬಗ್ಗೆ ಸಂಶೋಧನೆ ನಡೆಸಿದ್ದೇನೆ ಇದೀಗ ಅದನ್ನು ಬರೆಯಬೇಕಿದೆ. ಅಪ್ಪನಿಗೆ ಸಿಗು ಮೂರುವರೆ ಸಾವಿರ ರೂ. ನಲ್ಲಿ ಜೀವನ. ಜೊತೆಗೆ ವಿವಿ ಗಳಲ್ಲಿ ಸೆಮಿನಾರ್ ಗಳಿಗೆ ಕರೆಯುತ್ತಾರೆ ಹೋಗಿ ಪಾಠ ಮಾಡುತ್ತೇನೆ ಕೊಟ್ಟ ಸಂಭಾವನೆಯಿಂದ ಜೀವನ ನಡೆಸುತ್ತೇನೆ. ಇದರಲ್ಲಿ ನನಗೆ ತೃಪ್ತಿ ಇದೆ.
ಈ ನಡುವೆ ಹೆಗ್ಗೂಡಿನ ಗಣೇಶ್ ಹೆಗ್ಗೂಡು ಒಂದು ದಿನ ಕರೆ ಮಾಡಿ ನಿಮ್ಮ ಕೃತಿಯನ್ನು ರಂಗರೂಪಕ್ಕೆ ಇಳಿಸುತ್ತೇವೆ ಎಂದರು. ಒಪ್ಪಿಗೆ ಕೊಟ್ಟೆ. ಅದಾದ ನಂತರ ಏನು ಮಾಡಿದ್ದಾರೆಂದು ಗೊತ್ತಿರಲಿಲ್ಲ. ಆದರೆ 50 ನೇ ಪ್ರದರ್ಶನಕ್ಕೆ ನನ್ನನ್ನು ಆಹ್ವಾನಿಸಿದರು. ಅದನ್ನು ನೋಡಿ ನನಗೆ ನಂಬಲಾಗಲಿಲ್ಲ. ನಮ್ಮನ್ನು ಜನರಿಗೆ ತಲುಪಿಸುವ ಮಾಧ್ಯಮ ರಂಗಭೂಮಿ ಎನಿಸಿತು. ಆ ಕೂಡಲೇ ಗಣೇಶ್ ಅವರಿಗೆ ಕೇಳಿಕೊಂಡೆ ನನ್ನ ಪಾತ್ರವನ್ನು ನಾನೇ ಮಾಡುತ್ತೇನೆ ಅವಕಾಶ ಮಾಡಿಕೊಡಿ ಎಂದೆ. ಇದೀಗ ಹಳ್ಳಿ, ನಗರ, ಜಿಲೆ, ತಾಲೂಕು ಎಲ್ಲೆಡೆ ಸುತ್ತುತ್ತಿದ್ದೇನೆ.ಜನರಿಗೆ ಹತ್ತಿರವಾಗುತ್ತಿದ್ದೇವೆ. ನಮ್ಮ ಬದುಕು ಜನರಿಗೆ ಗೊತ್ತಾಗುತ್ತಿದೆ. ನನಗೆ ತೃಪ್ತಿ ಸಿಗುತ್ತದೆ. ಆನರೊಂದಿಗೆ ಮಾತನಾಡುವಾಗ ನನ್ನ ಹಳೆಯ ಜೀವನ ನೆನಪಾಗುತ್ತದೆ. ಜನ ಕೂಡ ನಮಗೆ ಇಷ್ಟು ವಿಷಯಗಳ ಬಗ್ಗೆ ಗೊತ್ತರಲಿಲ್ಲ. ನಮ್ಮವರೆಲ್ಲರೂ ನನ್ನಂತೆ ಬದುಕಬೇಕು ಎನ್ನುವುದು ನನ್ನ ಆಸೆ. ಇದೀಗ 83 ನೇ ಪ್ರದರ್ಶನ 100 ಪ್ರದರ್ಶನದವರೆಗೂ ಇರುತ್ತೇನೆ … ಮತ್ತೆ ನನ್ನೂರಿಗೆ ಹೋಗುತ್ತೇನೆ.
ನಿಜ ಹೇಳಬೇಕೆಂದರೆ ನಮಗೆ ಇಂದಿಗೂ ಮನೆ ಕೊಡುವುದಿಲ್ಲ. ಆಟೋ ಗೆ ಹತ್ತಿದರೆ ಡಬ್ಬಲ್ ಮೀಟರ್ ಕೇಳುತ್ತಾರೆ. ಪೊಲೀಸರು, ರೌಡಿಗಳಿಗೆ ಮಾಮೂಲಿ ಕೇಳುತ್ತಾರೆ… ನಮ್ಮ ಬದುಕು ಯಾರಿಗೂ ಬೇಡ.. ಇದರಿಂದ ನಮ್ಮವರನ್ನು ಹೊರತರಬೇಕಿದೆ. ನಾವೂ ಕೂಡ ಎಲ್ಲರಂತೆ ನೌಕರಿಗೆ ಸೇರಬೇಕಿದೆ. ಇಡೀ ಇತಿಹಾಸದಲ್ಲಿ ಒಬ್ಬರೇ ಒಬ್ಬರು ಸರಕಾರಿ ನೌಕರಿಗೆ ಹೋದ ಉದಾಹಣೆ ಇಲ್ಲ. ನಮಗೆ ಮೀಸಲಾತಿ ಸಿಕ್ಕಿದರೂ ಅರದಿಂದ ಪ್ರಯೋಜನ ಆಗುತ್ತಿಲ್ಲ. ಯಾಕೆಂದರೆ ನಮ್ಮವರು ಅಷ್ಟು ಓದಿಯೇ ಇಲ್ಲ. ಇವೆಲ್ಲ ಅನುಭವಗಳ ನಂತರ ನನಗೆ ಅನಿಸಿದ್ದು ನಾವು ಕೂಡ ಶಿಕ್ಷಣ ಪಡೆಯಬೇಕಿದೆ. ಶಿಕ್ಷಣದಿಂದ ಮಾತ್ರವೇ ನಮ್ಮ ಏಳಿಗೆ ಸಾಧ್ಯ. ನಮ್ಮವರು ಐಎಎಸ್, ಐಪಿಎಸ್, ಎಂಜಿನಿಯರ್, ಡಾಕ್ಟರ್ ಸರಕಾರಿ ಅಧಿಕಾರಿಗಳಾಗುವುದನ್ನು ನೋಡಲು ಇಷ್ಟಪಡುತ್ತೇನೆ. ಇಡೀ ದೇಶದಲ್ಲಿ 60 ಲಕ್ಷ ಜನರಿದ್ದೇವೆ ಇಷ್ಟು ಜನರಲ್ಲಿ ಒಬ್ಬರಿಗೆ ಸರಕಾರಿ ಕೆಲಸ ಇಲ್ಲ ಎಂದರೆ ನಮ್ಮ ಸ್ಥಿತಿ ಹೇಗಿರಬಹುದು ಊಹಿಸಿ.
ಇದೀಗ ಕೆಲವರು ಶಿಕ್ಷಕ ಟ್ರೈನಿಂಗ್ ಮುಗಿಸಿದ್ದಾರೆ. ಅವರಿಗೆ ಕೆಲಸ ಸಿಗುತ್ತದೆಯೇ ಎಂಬ ನಂಬಿಕೆ ಇಲ್ಲ. ಸಿಕ್ಕರೂ ಕೆಲಸದಲ್ಲಿ ಆ ಅವಮಾನದಿಂದ ಬದುಕಲು ಸಾಧ್ಯವೇ ಎಂಬ ಬಗ್ಗೆ ಅನುಮಾನವಿದೆ.
ಕೊನೆಯದಾಗಿ ನನ್ನ ಮಾತು ` ನಮ್ಮಂತಹವರನ್ನು ಮೊದಲು ನಮ್ಮ ತಂದೆ-ತಾಯಂದಿರು ಒಪ್ಪಿಕೊಳ್ಳಬೇಕು, ಅವರು ಒಪ್ಪಿಕೊಂಡರೆ. ಸುತ್ತ ಮುತ್ತಲಿನ ಜನ ಒಪ್ಪಿಕೊಳ್ಳುತ್ತಾರೆ, ಮುಂದೆ ತಾಲೂಕು, ಜಿಲ್ಲೆ, ರಾಜ್ಯ, ದೇಶ ಒಪ್ಪಿಕೊಳ್ಳುತ್ತದೆ. ನನಗೆ ಲೈಂಗಿಕ ವೃತ್ತಿಗೆ ಹೋಗಲು ಇಷ್ಟ ಇಲ್ಲ. ಹಾಗೆಯೇ ಮುಖದ ತುಂಬಾ ಬಣ್ಣ ಬಳಿದುಕೊಂಡು ತಿರುಗುವುದರಿಂದ ಜೀವನ ನಡೆಯುವುದಿಲ್ಲ. ಒಳಗಿನ ನೋವು ಯಾರಿಗೂ ಗೊತ್ತಿಲ್ಲ… ನನ್ನ ಸಮಾಜವನ್ನು ಜಾಗೃತಿ ಮಾಡಬೇಕಿದೆ. ಒಟ್ಟೊಟ್ಟಿಗೆ ದಲಿತ ಚಳುವಳಿ, ಆದಿವಾಸಿ, ಮಹಿಳಾ ಚಳುವಳಿ, ಬಾಬಾ ಬುಡನ್ ಗಿರಿ ಹೋರಾಟ ಹೀಗೆ ಎಲ್ಲಾ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೇನೆ ಜೊತೆಗೆ ಇಂದಿಗೂ ಹೋರಾಟ ನಡೆಸುತ್ತಿದ್ದೇನೆ. ಈ ನಿಟ್ಟಿನಲ್ಲಿ ನಾನು ಸಾಧಿಸಬೇಕಾದ್ದು ಮಾಡಬೇಕಾದ್ದು ಇನ್ನೂ ಇದೆ. ಇದೀಗ ನಮ್ಮನ್ನು ಮೂರನೆ ಲಿಂಗ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಅದರ ಬಗ್ಗೆಯೂ ನಮ್ಮ ಆಕ್ಷೇಪ ಇದೆ. ಈ ಬಗ್ಗೆಯೂ ಚರ್ಚೆ ಆಗಲಿ. ಕೊನೆಯದಾಗಿ ನಮ್ಮ ಹೋರಾಟಗಳಿಗೆ ನಮ್ಮೊಂದಿಗೆ ಕೈ ಜೋಡಿಸಿ ಕನಿಷ್ಟ ಕೈ ಜೋಡಿಸದಿದ್ದರೂ ನಮ್ಮ ಹೋರಾಟಕ್ಕೆ ಹಿನ್ನೆಡೆ ಆಗುವಂತಹ ಕೆಲಸ ಮಾಡಬೇಡಿ. ಇನ್ನು ಪೊಲೀಸರು (ಎಲ್ಲಾ ಪೊಲೀಸರಲ್ಲ) ನಮ್ಮನ್ನು ನಡೆಸಿಕೊಳ್ಳುವ ಪರಿ ಬದಲಾಗಿಲ್ಲ. ನನ್ನ ಗುಪ್ತಾಂಗಕ್ಕೆ ಲಾಟಿ ಇಟ್ಟು ಪರೀಕ್ಷಿಸಿದ ನೋವು ಇನ್ನೂ ಮಾಸಿಲ್ಲ ಮಾಸುವುದೂ ಇಲ್ಲ…. ನಮ್ಮನ್ನು ನಮ್ಮಂತೆ ಬದುಕಲಿ ಬಿಡಿ. ನಾವೂ ಕೂಡ ಮನಷುರು ಎಂಬುದನ್ನು ಮರೆಯಬೇಡಿ. ನಾವು ಹೀಗೆ ಹುಟ್ಟುತ್ತೇವೆ ಎಂದು ಕೇಳಿಕೊಂಡು ಹುಟ್ಟಿದ್ದಲ್ಲ. ಹುಟ್ಟಿದ್ದೇವೆ. ನಮ್ಮ ಒಳಗಿನ ಪ್ರೀತಿ ನಿಮಗೆ ನಿಮಗೆ ಕಾಣಲಿ.. ಪ್ರೀತಿ ಕೊಡಿ ಮತ್ತು ತೆಗೆದುಕೊಳ್ಳಿ… ಇಷ್ಟನ್ನು ಮಾತ್ರ ಹೇಳುತ್ತೇನೆ
 

‍ಲೇಖಕರು G

30 June, 2014

1 Comment

  1. yash

    mana kalakuva baduku… nirupane kuda aptavagide.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading