ರೇಖಾ ರಂಗನಾಥ
ತೆರೆಯದ ಕಿಟಕಿಯಲೂ
ಬೆಳಕಿನ ತುಣುಕು ನುಸುಳಿ
ಪಾರಿಜಾತ ಘಮ್ಮೆಂದ ಗಳಿಗೆಯೊಂದಿತ್ತು
ಇದೆ ಕಿಟಕಿಯಲಿ
ಸದಾ ಗಿಜುಗುಡುವ ರಸ್ತೆ
ಮೊಳ ಮಾರು ತೂಗಳೆಯದಷ್ಟು
ಸರಾಗ ನಡದೆ ಇತ್ತಲ್ಲ ಎಲ್ಲದೂ..
ಓ..!
ಆ ಮನೆಯ ಕವಾಟಗಳೆದರು
ಎದೆ ತುಂಬುವ ಬಣ್ಣಗಳು
ಆಟಿಕೆ ಮಾಡಿ ಮಾರಿಕೊಂಡರೇ?!
ಅದೇ ಕಿಟಕಿಯಲಿ
ಜಿರುಂಡೆ ಸದ್ದೋಂದೆ
ಉದ್ದಗಲಕ್ಕೂ ಬೆತ್ತಲಾದ ರಸ್ತೆಗಳು
ಬಾಗದ ಕಡುರಾತ್ರಿ
ಮತ್ತೆ ಮತ್ತೆ ತನ್ನೆಡೆ ಎಳೆವ
ಥೇಟ್ ಆಕಾಶಕಾಯಗಳಾಚೆಗಿನ
ಬ್ಲ್ಯಾಕ್ ಹೋಲಿನಂತೆ
ತೆರೆದ ಮನೆ ಬಾಗಿಲಿನ
ಕಟ್ಟೆ ಮೇಲೊಂದು ಮಾತು
ಹಾಲು, ಸಕ್ಕರೆ ಕಡ ತರುವಷ್ಟು ಕಿಟಕಿ
ಹೂವಾಗಲು ತುಸು ಬೆಳಕು..
ಸುತ್ತ ಕಟ್ಟಿಕೊಂಡ ಆಳೆತ್ತರದ ಹುತ್ತಗಳು ಉರಳಬೇಕಿದೆ..
0 ಪ್ರತಿಕ್ರಿಯೆಗಳು