ಹೆಚ್ ಗೋಪಾಲಕೃಷ್ಣ
ರೂಪೀ ಸೇವ್ಡ್ ಈಸರೂಪೀ ಎರ್ನ್ ಡ್ ಅಂತ ಕೇಳಿದ್ದೀರಾ..?
ನನಗೂ ಈ ವಾಕ್ಯ ಮೊದಮೊದಲು ಅಂದರೆ ನಾನು ಕೆಲಸಕ್ಕೆ ಸೇರಿ ಪುಲ ಪು ಲ ಅಂತ ತಿಂಗಳಿಗೆ ಇನ್ನೂರು ಚಿಲ್ರೆ ಸಂಪಾದನೆ ಮಾಡ್ತಾ ಇದ್ದೆನಲ್ಲಾ ಐವತ್ತು ವರ್ಷದ ಹಿಂದೆ ಆಗಲೂ ಗೊತ್ತಿರಲಿಲ್ಲ. ಮದುವೆ ಆಯ್ತಾ ಮಕ್ಕಳೂ ಆಯ್ತಾ ಆಗಲೂ ಸಹ ಗೊತ್ತಿರಲಿಲ್ಲ. ತೇ ಪೆದಾರಿ ಯಿಂದ ರಿಟೈರ್ ಆಗೋ ವಯಸ್ಸು ಹತ್ತಿರ ಬಂತಲ್ಲಾ ಆಗ ರಿಟೈರ್ ಆದಮೇಲೆ ಹೇಗೆ ಇರೋ ಮೂರು ಕಾಸಿ ನಲ್ಲಿ ಜೀವನ ಮಾಡಬೇಕು ಅಂತ ನಮ್ಮ ಮೇನೇಜು ಮೆಂಟು ಕ್ಲಾಸ್ ಮಾಡ್ತು, ರಿಟೈರ್ ಆಗ್ತಾ ಇರೋ ಮುದುಕರಿಗೆ. ನನಗೂ ಹೋಗು ಕ್ಲಾಸಿಗೆ ಅಂತ ನಮ್ಮ ಬಾಸು ಹೇಳಿದ. ಇವನು ಯಾವನು ಎಳಸು ನಮಗೆ ಜೀವನ ಮಾಡೋದು ಹೇಳಿ ಕೊಡೋನು ಅಂತ ಸುಮಾರು ಜನ ಕ್ಲಾಸಿಗೆ ಚಕ್ಕರ್ ಹಾಕಿದ್ರೆ ನಾನುತುಂಬಾ ಒಬಿಡಿ ಯೆಂಟ್ ಆಗಿ ಹೋಗಿದ್ದೆ, ಒಂದು ದಿವಸ ರೂಟೀನ್ ಕೆಲಸ ತಪ್ಪುತ್ತೆ ಅಂತ.
ಒಂದೊಂದು ಸಲ ರೂಟೀನ್ ಕೆಲಸ ತಪ್ಪಿಸಲು ನಾನು ಎಂತೆಂಥ ಕೋರ್ಸ್ ಗಳಿಗೆ ಹೋಗಿದ್ದೀನಿ ಅಂದರೆ… ಅದರ ಕೆಲವು ಸ್ಯಾಂಪಲ್ ನೋಡಿ…ಚಾಕು ಫೋರ್ಕ್ ನಿಂದಾ ದೋಸೆ ತಿನ್ನು ವುದು ಹೇಗೆ, ಶರ್ಟ್ ಅನ್ನು ಪ್ಯಾಂಟ್ ಒಳಗೆ ಹೇಗೆ ಸಿಕ್ಕಿಸುವುದು, ತಲೆ ಕೂದಲನ್ನು ಒಪ್ಪ ಮಾಡುವುದು ಹೇಗೆ, ಶೂ ಪಾಲಿಶ್ ಹೇಗೆ ಮಾಡಬೇಕು, ಬರ್ಮುಡಾ ತೊಡುವುದು ಹೇಗೆ.. ಬಿಡಿ ಇದು ಬೇಡ ಈಗ..
ಇರೋ ಪುಡಿ ಕಾಸಿನಲ್ಲೀ ಜೀವನ ಹೇಗೆ ಮಾಡಬೇಕು ಅಂತ ಅಲ್ಲಿ ಕ್ಲಾಸ್ ತಗೊಂಡ ಮುವತ್ತು ಮೂವತ್ತೈದು ವಯಸ್ಸಿನ ಬ್ಯಾಂಕ್ ಆಫೀಸರ್ ಲೇಡಿ ಅದೇನು ಹೇಳಿದರೋ ಬಿಟ್ಟರೋ ಅದು ಈಗ ನೆನಪಲ್ಲಿ ಇಲ್ಲ. ನೆನಪಲ್ಲಿ ಇರೋದು ಅವರ ಗುಂಡು ಗುಂಡು ಮುಖ ಮತ್ತು ಗುಂಡು ಗುಂಡಾಗಿದ್ದ ಅವರ ಆಕಾರ. ಮರೆತೆ, ಇನ್ನೂ ಒಂದು ನೆನಪಲ್ಲಿ ಉಳಿಯೋ ಹಾಗೆ ಒಂದು ಚೂರು ಮೆದುಳಿಗೆ ಆಂಟಿ ಕೊಂಡಿತ್ತು. ಅದೇನಪ್ಪಾ ಅಂದರೆ ಅದೇ ಈ ವಾಕ್ಯ…ರೂಪೀ ಸೇವ್ಡ್ ಈಸ ರೂಪೀ ಎರ್ನ್ ಡ್…

ರಿಟೈರ್ ಆದೆನಾ. ಅಂಗಡಿ ಪಂಗಡಿ ತರಕಾರಿ ರೇಶನ್ನು… ಇವೆಲ್ಲಾ ತರೋದು ನನ್ನದೇ ಜವಾಬ್ದಾರಿ ಆಯ್ತಾ. ಆಗಲೇ ಈ ರೂಪಿ ಸೆವ್ಡ್ ತಲೇಲಿ ಡ್ಯಾನ್ಸ್ ಶುರು ಮಾಡಿದ್ದು. ಅದರ ಎಫೆಕ್ಟ್ ಹೇಗಿತ್ತು ಅಂತ ನಿಮಗೆ ವಿವರಿಸಲೆ ಬೇಕು. ಯಾಕಂದ್ರೆ ನೀವೂ ರಿಟೈರ್, ನಿಮಗೂ ಕಡಿಮೆ ಕಾಸೆ ಕೈಯಲ್ಲಿರೋದೂ ಮತ್ತು ನಿಮಗೂ ನನ್ನ ಹಾಗೆ ಯೂನಿವರ್ಸಲ್ ಪ್ರಾಬ್ಲಮ್ಮು ಅದೇ ಇಡೀ ಪ್ರಪಂಚಕ್ಕೂ ,ದೇಶ ಕ್ಕೂ ಬಡಿದಿರೋ ಆರ್ಥಿಕ ಕುಸಿತ ಎಂಬೋ ಶನಿ ನಮಗೂ ಹೊಕ್ಕಿದೆ ತಾನೇ…. ನಿಮ್ಮ ಕೈಲೂ ಕಾಸು ಕಡಿಮೆ ತಾನೇ, ಮನೆಗೆ ಸಾಮಾನು ಸರಂಜಾಮು ತರೋದು ನಿಮ್ಮದೇ ಜವಾಬ್ದಾರಿ ತಾನೇ, ನೀವೂ ದಿವಸಕ್ಕೆ ಹತ್ಸಲ ಅಂಗಡಿಗೆ ಹೋಗ್ತಿರಿ ತಾನೇ.. ಸುಖವಾಗಿ ಸಾಲ ಪಾಲ ಇಲ್ಲದೇ ಬದುಕೋದಕ್ಕೆ ಇದು ನಿಮಗೊಂದು ಫ್ರೀ ಟಿಪ್ಸು ಅಂತ ಅಂದುಕೊಳ್ಳಿ,…
ಈಗೆಲ್ಲಾ ಸೂಪರ್ ಬಜಾರುಗಳೆ ತಾನೇ. ನಿಮ್ಮ ಕಾಲದ ಹಾಗೆ ಶೆಟ್ಟರ ಅಂಗಡಿ ಆಚೆ ನಿಂತು ಶೆಟ್ಟರೇ ಎರಡು ಕೇಜಿ ತೊಗರಿಬೇಳೆ, ಒಂದು ಕೇಜಿ ಮೆಣಸಿನಕಾಯಿ ಗುಂಟೂರು, ಒಂದು ಪಾಕೆಟ್ ಉಪ್ಪು,ಕೊಬ್ಬರಿ ಅರ್ಧ ಕೇಜಿ…. ಅಂತ ಕೇಳೋ ಹಾಗಿಲ್ಲ. ಸೀದಾ ಸೂಪರ್ ಅಂಗಡಿಗೆ ನುಗ್ತಿರಿ, ಅಲ್ಲೇ ಬಾಗಿಲಲ್ಲಿ ಇಟ್ಟಿರೋ ಪ್ಲಾಸ್ಟಿಕ್ ಬ್ಯಾಸ್ಕೆಟ್ ತಗೊಂಡು ಒಂದೊಂದೇ ಸಾಮಾನು ತೆಗೆದು ಅದರ ಬೆಲೆ ನೋಡಿ ಅಯ್ಯೋ ಎಷ್ಟು ಜಾಸ್ತಿ ಆಗಿದೆಯಪ್ಪಾ ಅಂತ ಅಲ ವತ್ತು ಕೊಳ್ತಾ ಬುಟ್ಟಿಗೆ ತುಂಬು ವಿರಿ ತಾನೇ… ಬುಟ್ಟಿ ತುಂಬಿಸಿಕೊಂಡು ಕೌಂಟ ರಿಗೆ ಬಂದು ಮಗನೋ ಸೊಸೆಯೋ ಕೊಟ್ಟಿರೋ ಕ್ರೆಡಿಟ್ ಕಾರ್ಡ್ ಉಜ್ಜಿ ಬ್ಯಾಗ್ ಹೊತ್ತು ಆಚೆ ಬರ್ತೀರಿ ತಾನೇ…
ಇಲ್ಲೇ ನನಗೂ ನಿಮಗೂ ವ್ಯತ್ಯಾಸ ಇರೋದು. ಈಗ ನನ್ನ ವ್ಯಾಪಾರ ಹೇಳ್ತೀನಿ ಬನ್ನಿ… ನಾನೂ ಬುಟ್ಟಿ ತಗೊಂಡು ದಿನಸಿ ರಾಕ್ ಮುಂದೆ ನಿಲ್ತಿನಾ… ಒಂದೊಂದೇ ಪಾಕೆಟ್ ತೆಗೆದು ರೇಟು ನೋಡ್ತೀನಿ. ಮೆದುಳು ಇನ್ನೊಂದು ಎರಡು ಮೂರು ಅಂಗಡಿಗೆ ಓಡುತ್ತೆ ಮತ್ತು ಹಿಂದಿನ ದಿವಸ ವೋ ಅದರ ಹಿಂದಿನ ದಿವಸ ವೋ ನೋಡಿದ್ದ ಸಾಮಾನುಗಳ ಅದರ ಬೆಲೆ ಯನ್ನೂ ನೆನಸುತ್ತೆ. ಅಲ್ಲಿ ಎರಡು ರೂಪಾಯಿ ಕಡಿಮೆ ಕೇಜಿಗೆ ಇಲ್ಲಿ ಈ ಸಾಮಾ ನು ಬೇಡ ಅಂತ ಮನಸು ಡಿಸೈಡ್ ಮಾಡುತ್ತೆ. ಹೀಗೆ ಪ್ರತಿ ಪದಾರ್ಥದ ವಿಶ್ಲೇಷಣೆ ನಡೆದು ಪಟ್ಟಿ ಯಲ್ಲಿನ ಹತ್ತು ಪದಾರ್ಥಕ್ಕೆ ಬದಲು ಒಂದೋ ಎರಡೋ ಮಾತ್ರ ಸೆಲೆಕ್ಟ್ ಆಗಿರುತ್ತೆ. ಇಲ್ಲಿ ವ್ಯಾಪಾರದ ನಂತರ ಮುಂದಿನ ಸೂಪರ್ ಮಾರ್ಕೆಟ್ಟು. ಅಲ್ಲೂ ಇದೇ ಸರ್ಕಸ್ಸು…
ಹೀಗೆ ಹತ್ತು ಅಂಗಡಿ ಹುಡುಕಿದರೆ ಹತ್ತು ರೂಪಾಯಿ ಮಿಗಬಹುದಾ…. ಅಂದರೆ ಹತ್ತು ರೂಪಾಯಿ ಎರ್ನ್ ಡ್.. ರಿಟೈರ್ ಆದಮೇಲೆ ಹತ್ತು ರೂಪಾಯಿ ಸಂಪಾದನೆ ಹೀಗೆ. ಇಷ್ಟು ಅಂಗಡಿ ಸುತ್ತೊಕ್ಕೆ ನಿಮ್ಮ ಜತೆ ಬಂದಿರೋ ನಿಮ್ಮಾಕೆ ಸುಮ್ಮನಿರತಾರ ಅಂತ ನೀವು ಪ್ರಶ್ನೆ ಕೇಳೋಕ್ಕೆ ರೆಡಿ ಆಗ್ತಾ ಇದೀರಿ ಅಂತ ಗೊತ್ತು. ನಾನು ಹೀಗೆ ಮಾರ್ಕೆಟ್ ಸರ್ವೇ ಅಂತ ಹೋದರೆ ಜತೆಯಲ್ಲಿ ಯಾರನ್ನೂ ಕರೆದುಕೊಂಡು ಹೋಗುಲ್ಲ. ಯಾರಿಗೂ ನನ್ನ ಹಾಗೆ ಸರ್ವೇ ಮಾಡುಕ್ಕೆ ಆಸಕ್ತಿ ಇಲ್ಲ ಅನ್ನೋದು ಒಂದು ಕಾರಣ ಆದರೆ ಅದಕ್ಕಿಂತ ಮುಖ್ಯ ನಾನು ಸೀ ಬೈ ಟೂ ಅಥವಾ ಕ್ರಾಕು ಅಂತ ಯಾರೂ ತಿಳ ಕೊ ಬಾರದು ಅಲ್ವಾ… ಈ ಮುನ್ನೆಚ್ಚರಿಕೆ ನನ್ನದು.
ಇದೊಂದು ರೀತಿ ಆಯ್ತಾ? ಇನ್ನೂ ಹಲವು ಸ್ಕೀಮ್ ಇದೆ. ಹಬ್ಬದ ಸಾಲಿನಲ್ಲಿ ಡಿಸ್ಕೌಂಟ್ ಸೇಲು, ಒಂದಕ್ಕೆ ಎರಡು ಮೂರು ಫ್ರೀ ಅಂತ ಜಾಹೀರಾತು ಬರುತ್ತೆ ನೋಡಿ ಆಗ ಅಂಗಡಿಗೆ ನುಗ್ಗಬೇಕು. ಬೇಕಿರಲಿ ಬೇಡದೆ ಇರಲಿ ಫ್ರೀ ಸಿಗೋ ಸಾಮಾನು ತಂದು ಮನೇಲಿ ತುಂಬ ಬೇಕು. ಹೇಗೂ ತಂದಾಗಿದೆ, ಅಷ್ಟೊಂದು ದುಡ್ಡು ತೆತ್ತು ತಂದೀರೋದು ಮನೆಯವರು ಎಸೆಯಲ್ಲ, ಹೇಗೋ ಖರ್ಚು ಮಾಡ್ತಾರೆ ಅನ್ನೋ ಭರವಸೆ ಮತ್ತು ಗಾಢವಾದ ನಂಬಿಕೆ ನಿಮಗಿರಲಿ..
ಯಾವತ್ತಾದರೂ ನೀವು ನಮ್ಮ ಮನೆಗೆ ಬಂದರೆ ನಮ್ಮ ಬಾತ್ ರೂಮಿನಲ್ಲಿ ನಿಮಗೆ ಅರವತ್ತು ಬಚ್ಚಲು ತೊಳೆಯೋ ಲಿಕ್ವಿಡ್ ಬಾಟಲು ಕಾಣಿಸಿದರೆ ಅದು ಹೀಗೆ ಒಟ್ಟಿಗೆ ತಂದೀ ರೋದು….
ಹಾಗೇ ನೀವು ನಮ್ಮ ಕಿಚನ್ ಗೆ ಬಂದರೆ ಅಲ್ಲಿ ಹತ್ತು ಕೇಜಿಯ ನಾಲಕ್ಕು ಮೆಣಸಿನಪುಡಿ ಪಾಕೆಟ್ ಕಾಣುತ್ತಾ.. ಅದೂ ಸಹ ಹೀಗೆ ಒಟ್ಟಿಗೆ ತಂದೀ ರೋದು..
ಇನ್ನ ನಮ್ಮ ಬೆಡ್ ರೂಮಿಗೆ ಬಂದರೆ ನಿಮಗೆ ಪೇರಿಸಿಟ್ಟಿ ರೋ ದಿಂಬಿನ ರಾಶಿ ಕಂಡೆ ಕಾಣಿಸುತ್ತೆ. ಅಕಸ್ಮಾತ್ ಅದನ್ನ ಎನಿಸಿದರೆ ಕೌಂಟ್ ಮಾಡಿದರೆ ಮೂವತ್ತೆಂಟು ಇರುತ್ತೆ.ನಲವತ್ತೆರಡು ಇರಬೇಕಿತ್ತು, ನನ್ನಾಕೆ ನಾಲ್ಕನ್ನು ಯಾರಿಗೋ ದಾನ ಮಾಡಿದ್ದಾಳೆ. ಇದು ಯಾಕೆ ಇಷ್ಟೊಂದು ಅದೇನು ಹಾಸಿಗೆ ದಿಂಬಿನ ಅಂಗಡಿ ಇಟ್ಟಿದ್ದಿರಾ ಅಂತ ನೀವು ಕೇಳ್ತೀರಾ ಅಂತ ಗೊತ್ತು. ಅದು ಹಾಗಲ್ಲ ರಾಯರೇ, ಒಟ್ಟಿಗೆ ಕೊಂಡರೆ ಚೀಪ್ ಆಗಿ ಸಿಗುತ್ತೆ ಅಂತ ಹೀಗೆ ಒಟ್ಟಿಗೆ ತಂದೀ ರೋದು….. ಇದು ನೇರ ಮುಖಾಮುಖಿ ವ್ಯಾಪಾರದ ವಹಿವಾಟು..
ಇನ್ನೊಂದು ವ್ಯಾಪಾರದ ಗುಟ್ಟು ಅಂದರೆ ಆನ್ ಲೈನ್ ವ್ಯವಹಾರ. ಇದರಲ್ಲಿ ಆಗಾಗ ನಿಮಗೆ ಕಡಿಮೆ ದರದಲ್ಲಿ ಪದಾರ್ಥ ಸಿಗುತ್ತೆ. ಒಟ್ಟಿಗೆ ಕೊಂಡರೆ ಇನ್ನೂ ಚೀಪು. ಈ ಲೆಕ್ಕದಲ್ಲಿ ಯೇ ನಾನು ಬನೀನು ನಿಕ್ಕರು ಶರಟು ಪ್ಯಾಂಟು ಕೊಳ್ಳೋದು. ನನ್ನ ವಾರ್ಡ್ ರೋಬ್ ತೆಗೆದರೆ ನಿಮ್ಮ ಮೇಲೆ ಧಡಕ್ ಅಂತ ಮುಗಿಲ ರಾಶಿ ಬಿದ್ದ ಹಾಗೆ ಆಗುತ್ತೆ. ಅದು ಮುಗಿಲ ರಾಶಿ ಅಲ್ಲ. ಹನ್ನೆರೆಡು ಡಜನ್ ಬನೀನ್ ಬೇರೆ ಬೇರೆ ಬಣ್ಣದವು ಒಂದು ಗಂಟ ಲ್ಲಿ ಕಟ್ಟಿ ಮೇಲಿನ ಕಂಪಾರ್ಟ್ ಮೇಂಟ್ ಅಲ್ಲಿ ತುರುಕಿದ್ದಿನಿ, ಅದೇ ನಿಮ್ಮ ಮೇಲೆ ಬಿದ್ದದ್ದು. ಅದರ ಕೆಳಗೆ ಒಂಬತ್ತು ಡಜನ್ ನಿಕ್ಕರು ಇನ್ನೊಂದು ಗಂಟಿ ನಲ್ಲಿದೆ. ಅದೂ ಹೀಗೆ ಒಟ್ಟಿಗೆ ಆನ್ ಲೈನ್ ನಲ್ಲಿ ತಂದೀ ರೋದು, ಚೀ ಪಾಗಿ ಸಿಕ್ಕಿದ್ದು..

ಪಕ್ಕದಲ್ಲಿ ನೇತು ಹಾಕಿದ್ದಿನಲ್ಲಾ ಶರ್ಟು, ಅವು ಹದಿನಾಲ್ಕು ಡಜನ್ ಇದೆ..
ಪ್ಯಾಂಟು ಐವತ್ತಾರು ಇರಬೇಕು.. ಇನ್ನೂ ಹೆಚ್ಚಿತ್ತು, ಮೊನ್ನೆ ನಾನು ಹೊರಗೆ ಹೋಗಿದ್ದಾಗ ನನ್ನಾಕೆ ಅದ್ಯಾರೋ ಅನಾಥ ಆಶ್ರಮದವರಿಗೆ ಎರಡು ಡಜನ್ ನ ಪ್ಯಾಕೆಟ್ ದಾನ ಮಾಡಿ ಬಿಟ್ಟಿದ್ದಾಳೆ. ಮನೆಗೆ ಬರ್ತಾ ಎದುರು ಸಿಕ್ಕಿದ ಆಶ್ರಮದ ಹುಡುಗಿ ರಸ್ತೇಲಿ ಕಾಲಿಗೆ ಸಾಷ್ಟಾಂಗ ಎರಗಿ ನಿಮ್ಮ ದು ದೊಡ್ಡ ಮನಸು, ಸರ ಅಂದಳು. ಯಾಕೆ ಹೀಗೆ ಹೇಳ್ತಾಳೆ ಅಂತ ಗಾಬರಿ ಗಾಬರಿಯಿಂದ ಅವಳನ್ನ ನೋಡಿದ್ದೆ. ಅಜ್ಜಿ ಈ ಗಂಟು ಕೊಟ್ಟು ನೀವು ನಮಗೆ ಅಂತ ತಂದು ಇಟ್ಟಿದೀ ರ ಅಂತ ಪ್ಯಾಂಟಿನ ಪ್ಯಾಕೆಟ್ ತೋರಿಸಿದ್ದಳು. ಹಾಗೇ ಅದನ್ನ ವಾಪಸ್ ತರಬೇಕು ಅನಿಸಿತ್ತು. ಆದರೆ ಮರ್ಯಾದೆ ಪ್ರಶ್ನೆ, ತೆಪ್ಪಗೆ ಬಂದಿದ್ದೆ. ನನ್ನಾಕೆ ತಿಕ್ಕಲು ತಿರುಗಿದಾಗಲೆಲ್ಲಾ ಹೀಗೆ ಮಾಡ್ತಾಳೆ.
ಈಗ ಮತ್ತೆ ವಿಷಯಕ್ಕೆ..
ಒಂದು ಬನಿನು ಆರು ತಿಂಗಳು ಬಾಳಿಕೆ ಬಂದರೆ ನೀವು ಶೇಖರಿಸಿ ಇಟ್ಟಿರೋ ಬನೀನ್ ಎಷ್ಟು ವರ್ಷ ಉಪಯೋಗ ಮಾಡ್ತೀಯ ಅಂತ ನೀವು ಕೇಳಬಹುದು.
ಹಾಗೇ ಅಷ್ಟೊಂದು ನಿಕ್ಕರ್ ಗಂಟು ಕಟ್ಟಿ ಇಟ್ಟಿದ್ದಿ
ಎಷ್ಟು ಜನ್ಮಕ್ಕೆ ಇದು ಅಂತ ಕೇಳ್ತೀರಾ ಅಂತಲೂ ಗೊತ್ತು.
ಅಷ್ಟೊಂದು ಶರ್ಟು ಯಾಕೆ ಸಾರ್ ಅಂತ ಕೇಳ ಬೇಕಿರೋ ಪ್ರಶ್ನೆ ನಿಮ್ಮ ತಲೇಲಿ ಉಳಕೊಂಡಿದೆ ಅಲ್ವಾ…. ಅದೇ ಉಸಿರಲ್ಲಿ ಪ್ಯಾಂಟು ಬಗ್ಗೆ ಸಹ ನಿಮ್ಮ ಕ್ವೇರಿ ಇದೆ…
ನನ್ನ ಉತ್ತರ ಗೊತ್ತಾ….?
ಮದುವೆ ಮುಂಜಿ ಗೃಹಪ್ರವೇಶ ನಾಮಕರಣ ವೈಕುಂಠ ಅಂತ ಯಾವುದೇ ಸಮಾರಂಭಕ್ಕೆ ಹೋದರೂ ಇದನ್ನೇ ನೀಟಾಗಿ ಪ್ಯಾಕ್ ಮಾಡಿ ಗಿಫ್ಟ್ ಕೊಡ್ತೀನಿ. ಬೇರೆ ಗಿಫ್ಟ್ ಖರ್ಚು ಮಿಗುತ್ತೆ.
ನಿಮಗೆ ಎರಡು ನೋಟು ಖರ್ಚಾಗಿ ಹೊಟ್ಟೆ ಉರಿಸೋ ಕಡೆ ಬರೆ ಅರ್ಧ ನೋಟು ಖರ್ಚಾಗಿರುತ್ತೆ ಹಾಗೂ ಅಷ್ಟರ ಮಟ್ಟಿಗೆ ಹೊಟ್ಟೆ ಉರಿ ಕಡಿಮೆ ಆಗುತ್ತೆ…..! ಇದು ನಾನು ಕಲ್ತಿರೋ ಬದುಕೋ ಟೆಕ್ನಿಕ್.
ಸಮಾರಂಭದಲ್ಲಿ ಶರ್ಟು ನೀಕ್ಕರು ಬನೀನ್ ಗಿಫ್ಟ್ ಕೊಡೋದು ಹೇಗೆ, ಮರ್ಯಾದೆಗೆ ಕಡಿಮೆ ಅನಿಸುತ್ತೆ ನಿಮಗೆ ಅಂತ ನನಗೊಂದು ಅನುಮಾನ. ಇದು ಭಾರೀ ಸಿಂಪಲ್ಲು. ನೀಟಾಗಿ ಡಬ್ಬದಲ್ಲಿ ಇಡಿ, ಅದರ ಮೇಲೆ ಬಣ್ಣದ ಕಾಗದ ಹೊದಿಸಿ. ಗಿಫ್ಟ್ ಕಾರ್ಡ್ ಮೇಲೆ ಹೆಸರು ಕುಲ ಗೋತ್ರ ಫೋನ್ ನಂಬರು ಇತ್ಯಾದಿ ಏನೂ ಗೀಚಬೇಡಿ….
ಪ್ಯಾಕೆಟ್ ಹಾಗೇ ಉಡುಗೊರೆ ನೀಡಿ, ಅಷ್ಟೇ. ಎಷ್ಟೋ ಜನ ಉಡುಗೊರೆ ನೀಡಿ, ನಿಮ್ಮದೇ ಅದು ಅಂತ ಗೊತ್ತಾಗುವ ಸಂಭವ ಕೋಟಿ ಗೊಂದು ಅಷ್ಟೇ….!
ಈ ಐಡಿಯಾ ಎಲ್ಲಿ ಕಲಿತ್ರಿ ಅಜ್ಜಾ ಅಂತ ಮೊನ್ನೆ ಒಂದು ಟಿವಿ ಹುಡುಗಿ ಕೇಳ್ತು. ಎಲ್ಲಿ ಕಲಿತೆ ಅಂತ ನೆನೆಸಿಕೊಂಡು ಹೇಳಿದೆ. ಐವತ್ತು ವರ್ಷದ ಹಿಂದೆ ಗೋಕರ್ಣಕ್ಕೆ ಹೋಗಿದ್ದೆ. ಅಲ್ಲಿಗೆ ಹೋಗ್ತೀನಿ ಅಂತ ಗೆಳೆಯರಿಗೆ ಡಂಗೂರ ಹೊಡೆದಿದ್ದೆ. ಗೆಳೆಯರು ಅಲ್ಲಿಂದ ಜನಿವಾರ ತಂದುಕೊಡಿ ಪ್ಲೀಸ್ ಅಂತ ಕೇಳಿದ್ದರು. ತಲಾ ಐನೂರು ಐನೂರು ಜನಿವಾರ ತಂದು ಆರು ಜನಕ್ಕೆ ಕೊಟ್ಟಿದ್ದೆ.
ಇದು ಇಲ್ಲೂ ಸಿಗುತ್ತೆ. ಅಲ್ಲಿಂದ ತರೋಕ್ಕೆ ಯಾಕೆ ಹೇಳಿದ್ರಿ… ಅಂತ ಕೇಳಿದ್ದೆ. ಅಲ್ಲಿ ನೀನು ಇಪ್ಪತ್ತಕ್ಕ ಕೊ ಡೋ ಕಾಸು ಇಲ್ಲಿ ಒಂದಕ್ಕೆ ಕೊಡಬೇಕು… ಅಂತ ಥ್ಯಾಂಕ್ಸ್ ಅಂದಿದ್ದರು. ಅವರಿಗೆ ಎಷ್ಟೋ ಕಾಸು ಉಳಿಸಿದ್ದಿನಿ ಅಂತ ಗೊತ್ತು ಆದರೆ ಎಷ್ಟು ಅಂತ ಗೊತ್ತಿಲ್ಲ ಅವತ್ತಿಂದ ಲೆಕ್ಕ ಹಾಕ್ತಾನೆ ಇದ್ದೀನಿ. ಅದರ ಜತೆಗೆ ಕಲಿತ ಪಾಠ ಅಂದರೆ ಒಟ್ಟಿಗೆ ನೂರು ಇನ್ನೂರು ಕೊಂಡರೆ ಕಡಿಮೆ ಕಾಸು ಬೀಳುತ್ತೆ ಅಂತ….!
ಬಹುಶಃ ರೂಪೀ ಸೇವಡ್ ಇಸ್ ರೂಪೀ ಅರ್ನಡ್ ಅನ್ನೋದು ಅವತ್ತಿಂದಲೆ ಮನಸಿನ ಅದೇಶ್ಟನೆಯದೋ ಪದರದಲ್ಲಿ ಹುದುಗಿ ಹೋಗಿದ್ದು ಬ್ಯಾಂಕ್ ನ ಲೇಡಿ ಆಫೀಸರ್ ಅದಕ್ಕೆ ಲಿವರ್ ಅಂದರೆ ಸನ್ನೆ ಹಾಕಿ ಮೀಟಿ ರ ಬೇಕು.. ಅಂತ ಕಾಣ್ಸುತ್ತೆ.






0 Comments