ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೂಪಕ್ಕನ ಕವಿತೆ ಬುಗುರಿ ಹುಳಕ್ಕೆ ರೆಕ್ಕೆ ಬಂದ ಹಾಗೆ..

ರೂಪ ಹಾಸನರವರ ತನ್ನಷ್ಟಕ್ಕೆ

ನಿಟ್ಟುಸಿರುಗಳು ಕಲಾಕೃತಿಗಳಾಗುತ್ತಿವೆ…

ಸ್ಮಿತಾ ಅಮೃತರಾಜ್, ಸಂಪಾಜೆ

ನಮ್ಮ ನಡುವಿನ ಪ್ರಮುಖ ಬರಹಗಾರ್ತಿ, ಕವಯತ್ರಿ ರೂಪ ಹಾಸನರವರ ‘ತನ್ನಷ್ಟಕ್ಕೆ’ ಓದಿ ಮುಗಿಸಿದಾಕ್ಷಣ, ಹುಟ್ಟಿಕೊಂಡ ಭಾವಗಳನ್ನ, ನೋವು,  ನಲಿವು, ಆತಂಕ.. ಹೀಗೆ ಎದೆಗೆ ತಾಕಿದ ಸಂಗತಿಗಳನ್ನ ತನ್ನಷ್ಟಕ್ಕೇ ಹಾಳೆಯೊಳಗೆ ಇಳಿಬಿಡದಿದ್ದರೆ ನನಗೆ ದಕ್ಕಿದ ಕ್ಷಣಗಳು ಸಾರ್ಥಕವಾಗಲಾರದು ಅಂತನ್ನಿಸುತ್ತಿದೆ.

roopa-hasana62ಎಚ್ಚರ ಮತ್ತು ಧ್ಯಾನಸ್ಥ ಸ್ಥಿಯಲ್ಲಿ ರೂಪುಗೊಂಡ ಇಲ್ಲಿನ ಕವಿತೆಗಳು ಮನದೊಳಗೆ ಮಥಿಸಿ ತೇಲಿಬಂದ ನವನೀತದಂತೆ..ಅನುಭವದ ಜಾಡಿಯೊಳಗೆ ಜರಡಿ ಸೋಸಿ ಉಳಿದ ಗಟ್ಟಿ ಕಾಳಿನಂತೆ.. ಮಾಗಿ ಪರಿಪಕ್ವಗೊಂಡ ಫಲದಂತೆ ಗೋಚರಿಸುತ್ತದೆ. ದಿನನಿತ್ಯದ ಕಾಡುವ ಸಂಗತಿಗಳು, ಹೆಣ್ಣೊಬ್ಬಳು ಅನುಭವಿಸುವ ಸಂಕಟಗಳು, ಇದ್ದೂ ಇಲ್ಲದಂತಾಗಿ ಬಿಡುವ ಸಂಧರ್ಭಗಳು, ಆಕಾರವಿದ್ದೂ ನಿರಾಕಾರವಾಗಿಬಿಡುವ ಕ್ಷಣಗಳು.. ಹೀಗೆ ಬದುಕಿನ ಎಲ್ಲಾ ಸೂಕ್ಷ್ಮ ಸಂಗತಿಗಳ ಒಳಹೊಕ್ಕು ತನ್ನಷ್ಟಕ್ಕೆ ಬಿತ್ತರಪಡಿಸಿದೆ. ಇದು ತನ್ನಷ್ಟಕ್ಕೇ ಅವರು ಗುನುಗಿಕೊಂಡ ಪದಗಳಾದರೂ, ಆ ಅಷ್ಟರೊಳಗೆ ಎಷ್ಟೆಲ್ಲವನ್ನೂ ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಓದುತ್ತಾ ಹೋದಂತೆ ಆ ಸಾಲುಗಳ ನಡುವಲ್ಲಿ, ಪದಗಳ ಎಡೆಯಲ್ಲಿ ನಮ್ಮ ರೂಪವೋ, ನಮ್ಮ ನೆರಳೋ ಅಥವಾ ಇನ್ಯಾವುದೋ ನಮ್ಮ ಬದುಕಿನ ಪಡಿಯಚ್ಚು ಪಡಿಮೂಡಿ ಬರುವುದು ಸುಳ್ಳಲ್ಲ. ಬಹುಷ: ಎಲ್ಲ ಓದುಗರ ಅಂತರಾಳದ ಗ್ರಹಿಕೆ ಇದೇ ಆಗಿರಬಹುದು. ತನ್ನ ಭಾವಗಳು ಎಲ್ಲರದ್ದೂ ಆಗಿ ಬಿಡುವ ಅಥವಾ ಎಲ್ಲರೊಳಗೆ ತಾನೂ ಒಂದಾಗಿ ಬಿಡುವ ಭಾವಾಭಿವ್ಯಕ್ತಿಯ ಕುಶಲ ಕಲೆಗಾರಿಕೆ ಕವಯತ್ರಿಗೆ ಸಹಜವಾಗಿ ಸಿದ್ಧಿಸಿದೆ. ಅದಕ್ಕಾಗಿಯೇ ತನ್ನಷ್ಟಕ್ಕೆ ಹೆಚ್ಚು ಆಪ್ತವೆನ್ನಿಸುತ್ತದೆ. ಬದುಕಿನ ಎಲ್ಲಾ ಸೂಕ್ಷ್ಮ ಸಂಗತಿಗಳನ್ನು ಕವಿತೆಯ ಪರಿಧಿಗೆ ದಾಟಿಸಿ ನಿರಾಳರಾಗುವ ಪರಿ ಇಲ್ಲಿ ತುಂಬಾ ವಿಶಿಷ್ಟವಾಗಿದೆ.

ಕೈಯಿಂದ ಕೈಗೆ ದಾಟಿದ
ದುಬಾರಿ ನಿಟ್ಟುಸಿರುಗಳು
ಕಲಾಕೃತಿಗಳಾಗುತ್ತಿವೆ..

ಎಂದು ಬರೆಯುತ್ತಾ ಗೋಡೆಯಂತ ಗೋಡೆಗೇ ಆತುಕೊಂಡ ನಿಟ್ಟುಸಿರುಗಳು ಭಾರವಾದಾಗ ಕಲ್ಲಿನಂತ ಗೋಡೆಯೇ ಉಮ್ಮಳಿಸಿ ಅಳುತ್ತದೆ ಎಂದಾದರೆ, ಮೆದು ಹೃದಯ ಆಳದಲ್ಲಿ ಅದೆಷ್ಟು ಗಟ್ಟಿಯಾಗಿರಬೇಡವೆಂಬ ಯೋಚನೆಗೆ ನಿಲುಕುವಾಗ, ಅರಿವಿಲ್ಲದೆಯೇ ನಮ್ಮ ಎದೆಯಾಳದಿಂದ ನಿಟ್ಟುಸಿರೊಂದು ಹೊರಹೊಮ್ಮಿಬಿಡುತ್ತದೆ. ಇನ್ನೂ ಮುಂದಕ್ಕೆ ಹೋಗಿ, ಬಿಕ್ಕುವ ನಿಟ್ಟುಸಿರು ಹರಾಜಿಗಿಟ್ಟಾಗ ಮಾತ್ರ ಕಲಾಕೃತಿಯಾಗುವುದು ಎಂತಹ ಚೋದ್ಯ? ಎನ್ನುವ ಸಾಲಿನಲ್ಲಿ ತಿವಿಯುವ ವ್ಯಂಗದ ಮೊನಚು ಮತ್ತು ಇದುವೆ ಬದುಕಿನ ಪರಮ ಸತ್ಯವೆಂಬ ವಿಷಾದದ ಸುಯಿಲು ನಮ್ಮನ್ನು ತಾಕದೇ ಇರಲು ಸಾಧ್ಯವೇ?.

tannashtakke coverನನ್ನೊಳಗಿನ ನಾನು ಕವಿತೆಯಲ್ಲಿ, ಅವ್ವಾ.. ನನ್ನೊಳಗಿನ ನಾನು ಜೀವಿಸಿಯೇ ಇಲ್ಲ ಎನ್ನುವ ಆರ್ತ ಮೊರೆ, ಕಲ್ಲು ಹೃದಯವನ್ನೂ ಕರಗಿಸಿಬಿಡುವ ಕ್ಷಣಗಳಿವು. ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಂಡ ಬದುಕು, ಹೇಗೆ ಅಸಾಹಯಕವಾಗುತ್ತಾ ತನ್ನತನವನ್ನು ಕಳೆದುಕೊಂಡು ಹೆಸರಿಗಷ್ಟೇ ಜೀವಿಸುವ ಕ್ಷಣಗಳು ತುಂಬಾ ಘೋರವಾದದ್ದು. ಬದುಕಿನ ವೈರುಧ್ಯಗಳ ನಡುವೆ ಸಿಕ್ಕು ವರ್ತಮಾನದ ಸನ್ನಿವೇಷದಲ್ಲಿ ಮನುಷ್ಯ ಬದುಕಿಯೂ ಸತ್ತಂತಿರುವ ವ್ಯವಸ್ಥೆಗೆ ಇದು ಹಿಡಿದ ಕೈಗನ್ನಡಿಯಂತಿದೆ.

ಯಾವುದೋ ಒಂದು ಸಂಧರ್ಭಗಳಲ್ಲಿ ನಾವೂ ಮರಕ್ಕಾತು ಜಡವಾಗಿ ಕೂತವರೆ.ಅಥವಾ ಏನು ಅರಿಯದೆ ಏರುತ್ತಾ ಹೋಗುವ ಕಂದಮ್ಮಗಳೇ.ಇವೆಲ್ಲದರ ನಡುವೆಯೂ ಆಕಸ್ಮಿಕವಾಗಿ ಹೆಳವಾಗುವ ಪ್ರಸಂಗಕ್ಕೆ ಬಲಿಯಾಗಿ ಬಿಡುವುದು ವಿಪರ್ಯಾಸವೇ ಸರಿ. ಇಂತಹ ಹೆಳವಿಗೆ ಯಾರನ್ನು ಹೊಣೆಯಾಗಿಸುವುದು?ಇವೆಲ್ಲಾ ಬಹುಷ; ಅನುಭವಿಸಲೇಬೇಕಾದ ಅನಿವಾರ್ಯ ಹೆಳವು ಎಂಬಂತ ಸಮಾಧಾನವನ್ನ ನನಗೋ ಇಂತಹ ಹೆಳವು ಕವಿತೆಯಲ್ಲಿ ಕವಯತ್ರಿ ಸೂಚ್ಯವಾಗಿ ಹೇಳಿ ಮುಗಿಸುತ್ತಾರೆ.

ಇನ್ನೂ ಮುಂದಕ್ಕೆ ಹೋಗಿ ಕವಯತ್ರಿ, ಮೊಗೆದು ತುಂಬಿದರೂ ಬರಿದಾಗುವ ಬೊಗಸೆಯ ಚಿತ್ರಣದ ಮೂಲಕ ನಮ್ಮ ಪ್ರಸ್ತುತ ಬದುಕಿನ ಸ್ಥಿತಿಯನ್ನ ಬಿಚ್ಚಿಡುತ್ತಾರೆ. ಕಡಲೊಳಗಿದ್ದಾಗಲಷ್ಟೇ ನಮ್ಮ ಬೊಗಸೆಯ ತುಂಬಾ ನೀರು. ಮೇಲೆತ್ತಿದರೆ ನಿರ್ಧಾಕ್ಷಿಣ್ಯವಾಗಿ ಬೆರಳ ಸಂಧಿಯಿಂದ ಸೋರಿ ಹೋಗಿಬಿಡುವ ಪರಿಸ್ಥಿತಿ. ವಿಷಾದ, ಅಸಹಾಯಕತೆಗಳು ಕಲಸಿ ಹಾದು ಹೋದಂತೆ ಭಾಸವಾಗುತ್ತದೆ. ಮೊಗೆದಷ್ಟೂ ಅರ್ಥಗಳನ್ನು ಕೊಡುವ, ಜೊತೆಗೆ ತುಂಬಿಕೊಂಡಷ್ಟೂ ಅನಾಥವಾಗುವ ಬೊಗಸೆಯ ಅಳಲು ಸುಲಭಕ್ಕೆ ಯಾರಿಗೂ ಅರ್ಥಕ್ಕೆ ದಕ್ಕುವುದಿಲ್ಲ. ಬೋರ್ಗರೆವ ಅಗಾಧ ನೀರು ಎಷ್ಟಾದರೂ ನಿರ್ಲಿಪ್ತ. ಹೀಗಿರುವಾಗ ಬರಿದು ಬೊಗಸೆಯ ಕ್ಷೀಣ ದನಿಯ ಅಳಲು ಅದಕ್ಕೆ ಕೇಳಿಸಲು ಸಾಧ್ಯವೇ?. ಬದುಕಿನ ಅಗಾಧ ಕಡಲೊಳಗೆ ನಾವೂ ಅದೆಷ್ಟೋ ಭಾರಿ ಯಾಚನೆಗೈಯುವ ಅನಾಥ ಖಾಲಿ ಬೊಗಸೆಗಳೇ ಆಗಿಲ್ಲವೇ?.  ಒರೆಸಿ ಹೋಗುತ್ತವೆ ಈ ಕವಿತೆ ಅದೆಷ್ಟೋ ಅರ್ಥಗಳನ್ನು ಅಲೆಗಳಂತೆ ನಮ್ಮನ್ನು ತಾಕಿ ಒದ್ದೆಯಾಗಿಸಿ ಒರೆಸಿ ಹೋಗಿ ಬಿಡುತ್ತವೆ.

ಕೊನೆಗೊಮ್ಮೆ ನೋವೂ ಕೂಡ ಹೇಗೆ ಬದುಕಿನ ಒಂದು ಭಾಗವಾಗಿ, ಜೀವನಾಡಿಯಾಗಿ ನಮ್ಮನ್ನು ಪೊರೆಯುತ್ತಾ ಸಲಹುತ್ತಾ ನಮ್ಮನ್ನು ಬದುಕಿಸಬಲ್ಲದು ಎನ್ನುತ್ತಾ, ಅವಾಹಿಸಿಕೊಂಡರೆ ಕಡು ನೋವು ಕೂಡ ಆಪ್ತ ಸಖನಾಗಲು ಸಾಧ್ಯ. ಅನುಭವ ಹೇಗೆ ನಮ್ಮನ್ನು ಪರಿಪಕ್ವಗೊಳಿಸಿ ಇದ್ದದನ್ನು ಇದ್ದ ಹಾಗೆಯೇ ಸ್ವೀಕರಿಸುತ್ತಾ, ಅದರೊಂದಿಗೆ ಮೈತ್ರಿಯನ್ನು ಸಾಧಿಸುವಂತಹ ಹಂತಕ್ಕೆ ತಲುಪಿಬಿಡುವುದು ಸೋಜಿಗವೇ ಸರಿ ಎನ್ನುವುದನ್ನ ಕೊನೆಗೀಗ ನೋವೆಂದರೆ ಎನ್ನುವ ಕವಿತೆ ತಣ್ಣಗಿನ ಸಮಾಧಾನಿಯಂತೆ ಕಟ್ಟಿಕೊಡುತ್ತದೆ.

ನಿರುಕುಗಾಲಿನಲಿ ನಿಂತ ಹೊಸಿಲು
ಹುಡುಕುತ್ತದೆ ತನ್ನ ನಿಲ್ಮನೆ.. ಎನ್ನುವಂತ ತೆರೆದ ಬಾಗಿಲು -ಬೀದಿಗಳ ನಡುವೆಯ ಕವಿತೆ ಸಾಲು ನಮ್ಮನ್ನು ಬಿಡದೇ ಕಾಡುತ್ತಾ ಒಂದು ಅಸ್ಥಿತ್ವದ ಪ್ರಶ್ನೆಯಾಗಿ ನಿಲ್ಲುತ್ತದೆ. ತೆರೆದ ಬಾಗಿಲು-ಬೀದಿಗಳ ವ್ಯಾಪಾರಕ್ಕೆ ಮೂಕ ಸಾಕ್ಷಿಯಾಗಿಯಾಗುತ್ತಾ ಹೊರಗೂ ನಿಲುಕದೆ, ಒಳಗೂ ಸಲ್ಲದೆ ಅತಂತ್ರವಾಗುವ ಅಬ್ಬೇಪಾರಿ ಹೊಸಿಲೊಂದು ನನಗೆ ಹೆಣ್ಣಿನ ಮೂಕ ದನಿಯಂತೆ, ಸ್ವಗತದ ಅಳುವಿನಂತೆ ಗೋಚರಿಸುತ್ತದೆ. ಹೆಣ್ಣೊಬ್ಬಳು ಹೀಗೆ ಹೊಸಿಲಾಗಿಯೇ ಉಳಿದು ಬಿಡುವ ಕಠೋರ ಸತ್ಯಕ್ಕೆ ಮನಸು ಬೆಚ್ಚಿ ಬೀಳುತ್ತದೆ.

ಕವಯತ್ರಿಯ ಕವಿತೆ ರೇಷಿಮೆ ದಾರದಂತೆ. ಸುಡು ನೀರ ಕಾವಿನೊಳಗೆ ಬಿದ್ದ ಹುಳು ಹದಗೊಂಡು ರೇಷಿಮೆಯ ನಯ ನೂಲಾಗುವ ತೆರದಿ. ಕವಯತ್ರಿ ಕವಿತೆ ನೇಯುತ್ತಾ ರೇಷಿಮೆಯ ದಾರದ ಎಳೆಯಾಗಿಸುತ್ತಾ.. ಬದುಕು ಹಸನಾಗಬೇಕಾದರೆ ಹೀಗೆ ಮಾಗಿ ಹದಗೊಳ್ಳಬೇಕು ಎಂಬುವುದನ್ನ ಸೂಚ್ಯವಾಗಿ ಹೇಳುತ್ತಿರುವಂತೆ ತೋರುತ್ತದೆ.

ಇನ್ನು ಈ ಧಾವಂತದ ಬದುಕಿನಲ್ಲಿ ನಮ್ಮದೂ ಕೂಡ ಜೋಗಿಣಿ ಹಕ್ಕಿಯ ಅಲೆದಾಟವೇ.ನಮ್ಮದೇ ತಾವು ನಮಗೇ ಅಪರಿಚಿತವಾದರೂ ಹುಡುಕಾಟ ನಿಲ್ಲುವುದಿಲ್ಲ. ನೆಲೆ ದಕ್ಕುವುದಿಲ್ಲ.
ಆಳ ಆಳದಿ ಮೊಗೆದು ತುಣುಕು ಮಿಡುಕಿಗೆ
ಮಿಸುಕಲಾರದ ಕರಳು
ಈ ಸಾಲುಗಳಲ್ಲಿರುವ ವೇದನೆಯ ಆಳ ನಮ್ಮ ಕರುಳಿನಾಳವನ್ನು ಹೊಕ್ಕಿ ವ್ಯಾಪಿಸಿ ಬಿಡುತ್ತದೆ.

ಕವಯತ್ರಿ ರೂಪಕ್ಕನ ಕವಿತೆಗಳೇ ಹಾಗೆ, ಬುಗುರಿ ಹುಳಕ್ಕೆ ರೆಕ್ಕೆ ಬಲಿಯುವ ಹಾಗೆ.ಕಡಲಿನಾಳದ ನದಿಯ ಹುಡುಕುವ ಹಾಗೆ. ಹೀಗೆ ಕೆಲವೊಂದು ಸಂಗತಿಗಳು ಅರಳಿಕೊಳ್ಳುವುದಕ್ಕೆ ಯಾವ ಸಾಕ್ಷಿ ಪುರಾವೆಗಳೂ ಬೇಕಿಲ್ಲ ಅಂತ ಅವರು ದೃಢವಾಗಿ ಹೇಳಬಲ್ಲವರಾಗಿದ್ದಾರೆ. ನಿಲುಕಲಾರದ ಎತ್ತರದಲ್ಲೇ ಇರಲಿ ಸಂತ ಪೀಠ ಅಂತ, ನೆಲದ ನೆಲೆಯಲ್ಲೇ ಬೇರನಿಳಿಸಿ ತುದಿಗೆ ಚಿಗುರಿ ಹರವಿಕೊಳ್ಳುವ ಛಾತಿಯುಳ್ಳವರು. ತನ್ನಷ್ಟಕ್ಕೆ ಇರುವುದರಲ್ಲಿಯೇ ಬದುಕಿನ ಸೊಗಸಿದೆ ಅಂತ ಪರಿಭಾವಿಸುತ್ತಾ, ಅಂಟಿಯೂ ಅಂಟದಂತಿರುವ ಒಳ ಎಚ್ಚರದಲ್ಲೇ ಸಹಜವಾಗಿ ಧ್ಯಾನಿಸುತ್ತಾ ಕವಿತೆ ಹೊಸೆಯ ಬಲ್ಲವರು.

465034d9-6b6b-4e9e-95b7-096c37db9e7bಕವಯತ್ರಿಗೆ, ಹೊರವೇಷದ ಜಗತ್ತಿನ ತಳಕು ಬಳುಕಿನ ರೂಪ ಪ್ರತಿಫಲಿಸುವ ಕಟ್ಟು ಕನ್ನಡಿಯ ಬಗ್ಗೆ ಎಚ್ಚರವಿದೆ. ಅದಕ್ಕೆ ಕನ್ನಡಿ ಬೇಕೆಂಬ ಪದ್ಯದಲ್ಲಿ,ನಾವೇ ಕನ್ನಡಿಯಾಗುವವರೆಗೂ ನಮ್ಮೊಳಗನ್ನು ಪ್ರತಿಬಿಂಬಿಸಲು ಸಾಧ್ಯವಿಲ್ಲವೆಂಬುದನ್ನ ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆ. ನಮ್ಮೊಳಗು ಪ್ರತಿಫಲಿಸದಿದ್ದರೆ ಉಳಿದೆಲ್ಲ ಕನ್ನಡಿ ಮಿಥ್ಯ ಎನ್ನುವ ತಾತ್ವಿಕ ಸತ್ಯದ ಅರಿವು ನಮ್ಮೊಳಗೂ ಒಂದು ಎಚ್ಚರದ ಮನಸ್ಥಿತಿಯನ್ನು ತಂದು ನಿಲ್ಲಿಸುವಲ್ಲಿ ಸಫಲವಾಗುತ್ತದೆ.
ಇನ್ನು ವಾಸ್ತು ಗಿಡವಾಗಿರಬಹುದು, ಬೈರಾಗಿಯ ಜಡೆಯಾಗಿರಬಹುದು, ಈ ಕವಿತೆಗಳು ಅವಕಾಶ ಸಿಕ್ಕರೆ ಹೇಗೆ ನಾವು ರೂಪುಗೊಳ್ಳುತ್ತಾ ಬೆಳೆಯಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಂತಿದೆ. ನಮ್ಮ ಎಚ್ಚರ ಅವರ ಮೈಮರೆವಿನ ಮದ್ಯೆ ಗಮ್ಯದ ನೆಲೆಯನ್ನು ಕಂಡುಕೊಳ್ಳುವಲ್ಲಿ ಸಾಫಲ್ಯತೆಯನ್ನ ಕಾಣುವಂತಿದೆ.
ಹೀಗೆ ಸಹಜವಾಗಿ ಬರೆಯುವ ಕವಯತ್ರಿ,
ಉರಿಯಲೇಬೇಕಿದೆ ನನಗೆ
ಬೆಂಕಿಯಾಗಲ್ಲ ದೀಪವಾಗಿ
ರೆಪ್ಪೆ ಅಲುಗದಂತೆ ಉರಿಯಬೇಕಿದೆ
ದೀಪವೇ ಆಗಿ.. ಅನ್ನುವಂತಹ ಬೆಳಕಾಗುವ ಆಶಯ ಕಟ್ಟಿಕೊಡುವ ಕವಯತ್ರಿಯ ಕವಿತೆಗಳು ನಮ್ಮೊಳಗೂ ಬೆಳಕಿನ ಪ್ರಭೆಯನ್ನು ಮೂಡಿಸುವಲ್ಲಿ ಶಕ್ತವಾಗಿವೆ.
ಸಹಜವಾಗಿ ಬರೆಯಿಸಿಕೊಂಡ ಇಲ್ಲಿನ ಕವಿತೆಗಳು, ಮೇಲ್ನೋಟಕ್ಕೆ ಸರಳವಾಗಿ ಕಂಡುಬಂದರೂ, ಒಂದೇ ಗುಕ್ಕಿಗೆ ಇದನ್ನ ಓದಿ ಅರ್ಥೈಸಿಕೊಳ್ಳಲಾಗುವುದಿಲ್ಲವೆಂಬುದು ಸತ್ಯವೂ ಹೌದು.

ಪುಸ್ತಕ ಸಿಕ್ಕ ಖುಷಿಗೆ ಒಂದೇ ಬಾರಿಗೆ ಓದಿ ಮುಗಿಸಿ,ಈಗ ಮತ್ತೊಂದು ಬಾರಿ ಹೊತ್ತಗೆ ಬಿಡಿಸಿ, ಬೈರಾಗಿಯ ಜಡೆ ಸಿಕ್ಕು ಬಿಡಿಸಿ ಹೆಣೆಯುತ್ತಾ ಕುಳಿತಿರುವೆ. ಈಗಷ್ಟೇ ಒಂದು ಪಾದ..ಎ ರಡು ಪಾದ.. ಇನ್ನೆಷ್ಟೋ..? ಪದಪದಗಳ ನಡುವೆ ಬಿಡಿಸಿದಷ್ಟು ಅರ್ಥಗಳು!. ಮರೆವು ಮತ್ತು ಎಚ್ಚರಗಳ ನಡುವೆ ಕವಿತೆ ಜಾಗೃತವಾಗಿರುವುದು ಅಚ್ಚರಿ ಹುಟ್ಟಿಸುತ್ತದೆ.

ಒಳ್ಳೆಯ ಪುಸ್ತಕಕ್ಕೆ ಅಕ್ಕನಂತ ಗೆಳತಿ ರೂಪಕ್ಕಗೆ ಅಭಿನಂದನೆಗಳು.

 

 

‍ಲೇಖಕರು admin

19 March, 2016

4 Comments

  1. Anonymous

    ಪ್ರೊ.ಬಸವರಾಜ ಪುರಾಣಿಕ

    it”s simply superb. Rupa’s deceptively simple poems, if approached as you have done, reveal the sublime.

  2. Anonymous

    ಕೃತಿಯೊಂದನ್ನು ಓದಿದಾಗ ಆ ಕ್ಷಣದಲ್ಲಿ ದಕ್ಕಿದ ಅನುಭವಗಳನ್ನು ಹೀಗೆ ಅಕ್ಷರಗಳಲ್ಲಿ ದಾಖಲಿಸಿಟ್ಟುಕೊಳ್ಳುವುದು; ಹಾಗೆ ಬರೆದಿದ್ದನ್ನ ಹೀಗೆ ಹಂಚಿಕೊಳ್ಳುವುದು ಇನ್ನೊಬ್ಬರನ್ನು ಓದಲು ಪ್ರೇರೇಪಿಸುವುದು ಸಾರ್ಥಕ ಕೆಲಸ.
    ಅನುಪಮಾ ಪ್ರಸಾದ್.

  3. ಸುನೀತಾ.

    ರೂಪಕ್ಕನ ಕವಿತೆಗಳ ರೂಪಕ್ಕೆ ಮತ್ತಷ್ಟು ಮೆರುಗು ನೀಡಿದ ಸ್ಮಿತಾ, ಇಬ್ಬರಿಗೂ ಅಭಿನಂದನೆಗಳು.

  4. ಆನಂದ್ ಋಗ್ವೇದಿ

    ಛಂದದ ಕಾವ್ಯ ಗ್ರಹಿಕೆ. ಕವಯತ್ರಿಯ ಕಾವ್ಯದಾಳದ ಮುತ್ತು; ಬೇಸರ, ನಿಟ್ಟುಸಿರು, ತಳಮಳವನ್ನು ಮತ್ತೊಂದು ಆರ್ದ್ರ ಹೃದಯ ಕಕ್ಕುಲತೆಯಿಂದ ಹೆಕ್ಕಿ ತೋರಿಸಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading