ಗುಂಡೇನಟ್ಟಿ ಮಧುಕರ
ಮಾವನ ಮನೆಗೆ ಮೊದಲ ಬಾರಿಗೆ ಹೋದಾಗಿನ ಅನುಭವಗಳು ರಂಗುರಂಗಿನವುಗಳಾಗಿರುತ್ತವೆ. ಬೇರೆ ಎಲ್ಲ ವಿಷಯಗಳನ್ನು ಮರೆಯಬಹುದು. ಆದರೆ ಮಾವನ ಮನೆಗೆ ಹೋದ ವಿಷಯ, ಅದರಲ್ಲಿಯೂ ಮೊದಲಬಾರಿಗೆ ಮಾವನ ಮನೆಗೆ ಹೋದ ಪ್ರಸಂಗವನ್ನು ಎಂಥ ಅರಸಿಕನೂ ಮರೆಯಲಾರ. ಎಲ್ಲರ ಮನೆಯಲ್ಲಿ ಅತ್ತೆಯದೆ ದರ್ಬಾರು ಮಾವ ಯಾವುದೋ ಮೂಲೆಯಲ್ಲಿ ಸದ್ದು ಗದ್ದಲವಿಲ್ಲದೆ ಕೂತಿರುವ ಚಿತ್ರಗಳೇ ಹೆಚ್ಚಾಗಿ ಕಾಣಸಿಗುತ್ತವೆ. ಅಲ್ಲದೆ ‘ಅತ್ತೆಗೊಂದು ಕಾಲ ಸೊಸೆಗೊಂದು ಕಾಲ’ ಎನ್ನುತ್ತಾರೆ. ಆದರೆ ಪಾಪ ಮಾವನಿಗೆ ಯಾವ ಕಾಲವೂ ಇಲ್ಲ!! ಹೀಗೆಲ್ಲ ಇದ್ದರೂ ಕೂಡ ರೂಢಿಯಲ್ಲಿ ಮಾತ್ರ ಮಾವನ ಮನೆ ಎಂದಿರುವುದು ವಿಪರ್ಯಾಸ. ಮಾತನಾಡಲಾರದ ಎಂಥಹ ಮಿತಭಾಷೆ ಮನುಷ್ಯನಿದ್ದರೂ ಕೂಡ ಅಂತಹ ಮನುಷ್ಯನನ್ನು ಮಾತಿಗೆಳೆಯಬೇಕಾದಲ್ಲಿ ನೀವು ಮಾಡಬೇಕಾದ ಒಂದೇ ಕೆಲಸವೆಂದರೆ ಮೊದಲ ಬಾರಿಗೆ ಮಾವನ ಮನೆಗೆ ಹೋದ ಪ್ರಸಂಗದ ಬಗ್ಗೆ ಕೇಳಿಬಿಡಿ ಸಾಕು – ಕನಿಷ್ಠ ಒಂದು ತಾಸಿನ ಉಪನ್ಯಾಸ ಕೊಡದಿದ್ದರೆ ನನಗೆ ತಿಳಿಸಿ.
ನಾಡಿನ ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿಯವರ ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು ……….. ಎಂಬ ಹಾಡನ್ನು ಕೇಳದ ಕನ್ನಡಿಗರಾರೂ ಇಲ್ಲವೆಂದೇ ನನ್ನ ಭಾವನೆ. ನಗರ – ಜನರು – ಗ್ರಾಮೀಣ ಜನರು, ಕಲಿತವರು-ಕಲಿಯದವರು, ಮುದುಕರು-ಯುವಕರು ಎಂಬ ಯಾವದೇ ತಾರತಮ್ಯವಿಲ್ಲದೆ ಎಲ್ಲರ ಬಾಯಲ್ಲಿಯೂ ನಲಿದಾಡಿದ ಕವಿತೆ ಇದು. ಇದನ್ನು ಕೇಳಿದ ಹನಿಗವಿ ಡುಂಡಿರಾಜರಿಗೇನನ್ನಿಸಿತೋ ಏನೋ ಈ ಹಾಡನ್ನೇ ವಿಡಂಬನೆ ಮಾಡಿ (ಕೆ.ಎಸ್.ಎನ್.ರ ಕ್ಷಮೆ ಕೋರಿ) ಅಣಕು ಹಾಡೊಂದನ್ನು ಬರೆದರು ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು ಎಂದಿನಂತೆ ಅಂದೂ ಕೂಡ ಕರೆಂಟು ಹೋಗಿತ್ತು………..!!!ಎಂದು. ಈ ಕವಿತೆಯಲ್ಲಿ ರಾತ್ರಿ ಹೊತ್ತು ಮಾವನ ಮನೆಗೆ ಹೋದ ಅಳಿಯ ಮಾವನ ಮನೆ ಬಾಗಿಲು ತಟ್ಟಬೇಕಾದುದು ಕತ್ತಲಲ್ಲಿ ಪಕ್ಕದ ಸಬ್ ಇನಸ್ಪೆಕ್ಟರ್ರ ಮನೆಯ ಬಾಗಿಲು ತಟ್ಟಿದಾಗ ನಡೆದ ಅವಾಂತರ ಈ ಕವಿತೆಯಲ್ಲಿದೆ.
ಮೋಸ ಹೊದ ಭೋಳೇ ಸ್ವಭಾವದ ಮನುಷ್ಯನಿಗೆ ‘ಮಾಮಾ’ ಆದ ಅನ್ನುತ್ತಾರೆ. ಅದೇ, ದರ್ಪ, ಠೀವಿಯಿಂದ ಕೂಡಿದ ದಪ್ಪ ಮೀಸೆಯ ಕಠೋರ ಸ್ವಭಾವದ ಪೋಲಿಸರಿಗೂ ಕೂಡ ‘ಮಾಮಾ’ ಅನ್ನುತ್ತಾರೆ. ಅದರಂತೆ ಜೇಲಿಗೆ ‘ಮಾವನ ಮನೆ’ ಎನ್ನುವವರು ಇದ್ದಾರೆ. ಹೋಟೆಲನಲ್ಲಿ ಏನಾದರು ತಿಂದು ಮನೆಗೆ ಬಂದಾಗ ‘ಯಾಕೋ ಹಸಿವೆ ಇಲ್ಲ’ ಎಂದು ಹೇಳಿ ಪಾರಾಗಲು ಪ್ರಯತ್ನಿಸಿದಾಗ ಮನೆಯವರಿಂದ ಬರುವ ಪ್ರತಿಕ್ರಿಯೆಯಂದರೆ ‘ಮಾವನ ಮನೆಗೆ ಹೋಗಿರಬೇಕು, ಅದಕ್ಕೆ ಹಸಿವೆ ಇಲ್ಲ’ ಎಂದು ಹೋಟೆಲಿಗೆ ಸೂಚ್ಯವಾಗಿ ಕರೆಯುವವರೂ ಇದ್ದಾರೆ. ಹೀಗೆ ಮಾವನಿಗೆ ಹಲವಾರು ಮುಖ ತೊಡಿಸಿದ್ದಾರೆ. ‘ಊರಿಗೆ ಬಂದವಳು ನೀರಿಗೆ ಬಾರದೆ ಇರುತ್ತಾಳೆಯೆ’? ಅದರಂತೆಯೇ ‘ಮದುವೆ ಮಾಡಿಕೊಂಡವನು ಮಾವನ ಮನೆಗೆ ಹೋಗದೇ ಇರುತ್ತಾನೆಯೆ’, ‘ಉಪ್ಪು ತಿಂದವನು ನೀರು ಕುಡಿಯಲೇ ಬೇಕು’ ಎಂದಂತೆ!!
ನಾನೂ ಹದಿನಾರು ವರ್ಷಗಳ ಹಿಂದೆ ಮಾವನ ಮನೆಗೆ ಹೋಗಿದ್ದೆ, ಅಂದರೆ ನನ್ನ ಮದುವೆಯಾಗಿ ಹದಿನಾರು ವರ್ಷಗಳಾದವೆಂದು ಬೇರೆ ಹೇಳಬೇಕಾಗಿಲ್ಲವಲ್ಲ. ಅದಕ್ಕೂ ಮೊದಲೇ ಮಾವನ ಮನೆಗೆ ಹೋಗಬೇಕೆಂದು ಮನಸ್ಸು ಹರಿದಾಡುತ್ತಿದ್ದರೂ ಕೂಡಾ, ಮದುವೆಗೆ ಮೊದಲೆ ಮಾವನ ಮನೆಗೆ ಹೋಗುವದರಿಂದ ‘ನಿನ್ನ ಬೆಲೆಯನ್ನೇ ನೀನು ಕಡಿಮೆ ಮಾಡಿಕೊಳ್ಳುತ್ತೀಯಾ, ಮದುವೆ ಗಂಡು ಎಂದರೆ ಗಂಭೀರವಾಗಿರಬೇಕು, ನಿನ್ನ ಬಿಗುವನ್ನು ನೀನು ಬಿಟ್ಟುಕೊಡಬೇಡ’. (ಮದುವೆಯ ನಂತರ ಎಲ್ಲ ಬಿಟ್ಟುಕೊಡುವುದು ಇದ್ದೇ ಇದೆ) ಎಂದು ಹಿರಿಯರು ಹೇಳಿದ ಮಾತುಗಳು, ಮೀಸೆ ಹೊತ್ತ ಗಂಡಸಿಗೆ ಡಿಮಾಂಡಪೊ ಡಿಮಾಂಡೋ……………. ಎಂಬ ಕಾಶಿನಾಥರ ಹಾಡು ನೆನಪಾಗಿ ಎಲ್ಲಿ ನಮ್ಮ ಡಿಮಾಂಡು ಕಡಿಮೆ ಮಾಡುತ್ತದೆಯೋ ಎಂಬ ಭಯ ನನ್ನನ್ನು ತಡೆದಿದ್ದವು. ಹೆಂಡತಿ ಕಡೆಯವರುಸಂಪ್ರದಾಯಸ್ಥರೆಂದು ಬೇರೆ ಕೇಳಿದ್ದೆ. ಎಲ್ಲಿ ಮಾವ ಕೋಲು, ಅತ್ತೆ ಕಸಬರಿಗೆ ತೆಗೆದುಕೊಂಡು ಬೆನ್ನು ಹತ್ತುತ್ತಾರೆಯೋ ಎಂಬ ಭಯ ಒಂದಡೆಯಾದರೆ, ಓಡಿದರೆ ಬೆನ್ನು ಹತ್ತುವ ಅವರ ಊರಲ್ಲಿಯ ನಾಯಿಗಳ ಹಿಂಡುಗಳು ಕಣ್ಣ ಮುಂದೆ ದಾಟಿ ಹೋದವು. ಅಲ್ಲದೆ ಈಗಿನಂತೆ ಮನಸ್ಸುಗಳನ್ನು ಕೆಡಿಸುವ, ಮದುವೆಗೆ ಮೊದಲೇ ಮಾವನ ಮನೆಗೆ ಹೋಗಬಾರದೆಂಬ ವ್ರತವನ್ನು ಭಂಗಗೊಳಿಸುವ ಮೇನಕೆಯರಂತಹ ಮೊಬೈಲ್ಗಳ ಹಾವಳಿಯೂ ಇರಲಿಲ್ಲ. ಇವೆಲ್ಲವುಗಳಿಂದ ಮದುವೆ ಮೊದಲು ಮಾವನ ಮನೆಗೆ ಹೋಗುವ ಸಾಹಸವನ್ನು ನಾನು ಮಾಡಿರಲಿಲ್ಲ.
ಆದರೆ, ನನ್ನವಳನ್ನು ‘ಚುಕ್ಕಿ’ ಎಂದು ಕರೆದು ಕಾಗದವೊಂದನ್ನು ಬರೆಯುವ ಧೈರ್ಯ ಮಾಡಿದ್ದೆ. ಏಕೆಂದರೆ, ನನ್ನ ಭಾವೀ ಪತ್ನಿಯ ಅಕ್ಕನ ಮಗಳು ಅವಳನ್ನು ‘ಚಿಕ್ಕಮ್ಮ’ ಮೊಟಕುಗೊಳಿಸಿ ‘ಚಿಕ್ಕಿ’ ಎಂದು ಕರೆಯುವುದು ನನ್ನ ಮನಸ್ಸನ್ನು ಸೆಳೆದಿತ್ತು. ಅದನ್ನೇ ನಾನು ಸ್ವಲ್ಪ ಬದಲಾವಣೆ ಮಾಡಿ ‘ನೀನು ನನ್ನ ಚುಕ್ಕಿ ಇದ್ದಂತೆ, ಅಂದರೆ ನೀನೇ ನನ್ನ ಬಾಳಿನ ನಕ್ಷತ್ರ’ ಎಂದಿದ್ದೆ. ಅದಕ್ಕೆ ಅವಳು ಮರು ಉತ್ತರ ಬರೆದು ‘ನನಗೇಕೋ ಭಯವಾಗ್ತಿದೆರಿ ಆಕಾಶದಲ್ಲಿ ಗಮನಿಸಿದಾಗ ಬಹಳೇ ನಕ್ಷತ್ರಗಳು ಕಾಣಿಸುತ್ತಿವೆ!’ ಎಂದು ಬರೆದಿದ್ದಳು. ಹೀಗೆ ನಾವು ಕಾಗದದಲ್ಲಿಯೇ ಮಾತನಾಡಿ ನಕ್ಕು ನಲಿಯುತ್ತಿದ್ದೆವು. 
ನನಗೆ ಮುಖದ ಮೇಲೆ ಮೀಸೆ ಚಿಗುರುತ್ತಿದ್ದಂತೆ ನೂರಾರು ಆಸೆಗಳು ಮೂಡಲಾರಂಭಿಸಿದವು. ಆ ವಯಸ್ಸೇ ಹಾಗೆ ನನ್ನ ಬಾಳಸಂಗಾತಿಯಾಗುವವಳು ಹೀಗಿರಬೇಕು-ಹಾಗಿರಬೇಕು ಎಂಬ ಕಲ್ಪನಾಹಂದರವನ್ನು ಹೆಣೆಯುವ ವಯಸ್ಸು ಅದು. ಪಕ್ಕದ ಮನೆಯ ಹುಡುಗಿಯನ್ನು ನೋಡಿ ಮದುವೆಯಾದರೆ ಇವಳನ್ನೇ ಮದುವೆಯಾಗುವದೆಂದು ಮನಸ್ಸಿನಲ್ಲಿಯೇ ಮಂಡಿಗೆ ತಿಂದಿದ್ದೆ. ನಾನು ಕಾಲೇಜು ಮುಗಿಸಿ ಪದವಿ ಪಡೆದು ಹೊರಬರುವಷ್ಟರಲ್ಲಿ, ಅವಳು ಮದುವೆಯಾಗಿ ಎರಡು ಮಕ್ಕಳ ತಾಯಿಯಾಗಿದ್ದಳು! ಮುಂದೆ ನನ್ನ ಗಳಿಕೆ ಪ್ರಾರಂಭವಾಗಿ ವರಗಳ ಪಟ್ಟಿಯಲ್ಲಿ ಕೂಡ್ರುತ್ತಲೆ ಸಂಬಂಧಿಕರಲ್ಲೊಬ್ಬರು ತಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಲು ಮುಂದೆ ಬಂದರು. ಅಷ್ಟರಲ್ಲಿ ನಾನು ಪರಿಚಯದವರೊಬ್ಬರಲ್ಲಿಯ ಹುಡುಗಿಯನ್ನು ಮೆಚ್ಚಿಕೊಂಡಿರುವ ವಿಷಯವನ್ನು ಸ್ನೇಹಿತರಲ್ಲಿ ಹೇಳಿಕೊಂಡದ್ದೇನೊ ನಿಜ. ಆದರೆ, ನಾನು ಮದುವೆಯಾದದ್ದು ಮಾತ್ರ ಇವರೆಡವುಗಳನ್ನು ಮೀರಿ ಬೇರೆ ಹುಡುಗಿಯನ್ನೇ.
ಈಗ ನನ್ನ ಮದುವೆಯಾಗಿ ಹದಿನಾರು ವರ್ಷಗಳೇ ಕಳೆದಿವೆ. ನೋವು-ನಲಿವುಗಳ ಮಧ್ಯ ಎಲ್ಲ ಗಂಡ ಹೆಂಡಿರಂತೆ ಜಗಳವಾಡುತ್ತ-ಬಡಿದಾಡುತ್ತ ಸಂತೋಷದ ಜೀವನ ಕಳೆದಿದ್ದೇವೆ. ಹದಿನಾರು ವರ್ಷಗಳ ಹಿಂದೆ ಇಂದಿನ ನನ್ನವಳನ್ನು ತೋರಿಸಲು ಬಂದಿದ್ದಾಗ- ನಿನ್ನ ಹೆಸರೇನೆಂದು ಕೇಳಿದಾಗ ‘ಸೀತಾ’ ಎಂದು ಮುಖ ಮೇಲಕೆತ್ತದೆ ತನ್ನ ಹೆಸರನ್ನು ಹೇಳಿದ್ದಳು. ಹಿರಿಯರು ಅವಳ ಸಂಗೀತವನ್ನು ಕೇಳುವ ಇಚ್ಛೆ ವ್ಯಕ್ತ ಪಡಿಸಿದಾಗ ಇವಳು ‘ಮುರಹರನ……. ಲಕ್ಷ್ಮೀಕಾಂತ ನೀನೆ ಗತಿ ಎಂಬ ಹಾಡನ್ನು ಹಾಡಿ ಅದೇನು ಮೋಡಿ ಮಾಡಿದಳೋ ಗೊತ್ತಾಗಲಿಲ್ಲ. ಸಂಬಂಧಿಕರಲ್ಲಿಯ ಹುಡುಗಿ. ಪರಿಚಯದವರಲ್ಲಿಯ ಹುಡುಗಿಯರನ್ನೆಲ್ಲ ಮೀರಿಸಿ ನನ್ನ ತಾಯಿ-ಅಕ್ಕ-ತಮ್ಮ-ತಂಗಿಯರೆಲ್ಲರ ಮನಸ್ಸನ್ನು ಗೆದ್ದುಬಿಟ್ಟಿದ್ದಳು. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಲ್ಲವೆ, ಬಹುಮತವೇ ಗೆದ್ದು ಬಿಟ್ಟಿತ್ತು. ಸೀತಾಳೇ ನನ್ನ ಬಾಳಸಂಗಾತಿಯಾಗಿದ್ದಳು.
ಚಿತ್ರಕೃಪೆ : ಅಭಿಜಿತ್ ಜೆ ಕೆ
ನನ್ನ ಮದುವೆಯಾದ ಹೊಸದರಲ್ಲಿ ನನ್ನ ಭಾವಿಪತ್ನಿಯ ಹೆಸರನ್ನು ಹೇಳೆಂದು ಕೇಳಿದಾಗಲೂ ನಾನು ಅಷ್ಟೊಂದು ನಾಚಿಕೊಳ್ಳುತ್ತಿರಲಿಲ್ಲ. ಆದರೆ ನನ್ನವಳ ಊರಿನ ಹೆಸರನ್ನು ಕೇಳಿದಾಗ ಮಾತ್ರ
ಬಹಳಷ್ಟು ಮುಜುಗರಕ್ಕೊಳಪಡುತ್ತಿದ್ದೆ. ಆದಷ್ಟು ನಾನು ಅವಳ ಊರಿನ ಹೆಸರನ್ನು ಹೇಳುವದರಿಂದ ತಪ್ಪಿಸಿಕೊಳ್ಳುತ್ತಿದ್ದೆ. ಊರಿನ ಹೆಸರನ್ನು ಹೇಳುವದರಿಂದ ನುಣಿಚಿಕೊಂಡಷ್ಟು, ಊರಿನ ಹೆಸರು ಇರಬಹುದಾದರೂ ಏನು ಎಂಬ ಉತ್ಸುಕತೆ ಎದರುಗಿನವರಲ್ಲಿ ಇಮ್ಮಡಿಯಾಗುತ್ತಿತ್ತು, (ಈಗ ನಿಮಗಾಗುತ್ತಿರುವಂತೆ) ಆ ಊರಿನ ಹೆಸರು ಹೇಳುವವರೆಗೂ ಬಿಡುತ್ತಿರಲಿಲ್ಲ. ನಿನ್ನ ಹೆಂಡತಿ ಹೆಸರು ಹೇಳುವದು ಬೇಡ ಅವಳ ಊರಿನ ಹೆಸರನ್ನು ಹೇಳಿಬಿಡಪ್ಪಾ ಸಾಕು ಎಂದು ನನ್ನನ್ನು ಕಾಡಲಾರಂಭಿಸಿಬಿಡುತ್ತಿದ್ದರು. ಕೆಲವರಿಂದ ತಪ್ಪಿಸಿಕೊಂಡರೂ ಸಹ ತಪ್ಪಿಸಿಕೊಳ್ಳಲಾರದಂತಹ ನಕ್ಷತ್ರಕರಿಗೇನು ಕಡಿಮೆ ಇರಲ್ಲಿಲ್ಲ. ಕೊನೆಗೆ ಅವರಿಗೆ ಸೋತು- ‘ಪುಟಗಮರಿ’ ಎಂದು ಊರಿನ ಹೆಸರನ್ನು ಹೇಳಿದಾಗ ಎಂಥ ಚುರುಕು ಕಿವಿಯವರೂ ಕೂಡ ‘ಆ………ಆ……….ಏನು……..ಏನಂದಿ ಎಂತಹ ಮರಿ! ಯಾವುದೋ ಪ್ರಾಣಿ ಹೆಸರು ಇದ್ಹಂಗದ ಇದೂ ಒಂದು ಊರಿನ ಹೆಸರ ನೆಟ್ಟಗ ಇನ್ನೊಮ್ಮೆ ಹೇಳು’ ಎಂದು ಪ್ರಶ್ನೆಯ ಮೇಲೆ ಪ್ರಶ್ನೆ ಪ್ರತಿಧ್ವನಿಸಲಾರಂಭಿಸಿದಾಗ- ಇದು ಕುಷ್ಟಗಿ ತಾಲೂಕಿನ ಒಂದು ಸಣ್ಣ ಹಳ್ಳಿ ಪುಟಗಮರಿ ಅಂತಾ ಕುಷ್ಟಗಿ – ಹೊಸಪೇಟೆ ಹೆದ್ದಾರಿಗಿದೆ…….. ಎಂದು ಹೇಳಿ ಮುಗಿಸಬೇಕಾದರೆ ಸಾಕು ಬೇಕಾಗುತ್ತಿತ್ತು.
ಏಕೊ ಏನೊ ಮೊದಲಿನಿಂದಲೂ ನಾನು ಹತ್ತಿರದೂರಿನ ಹುಡಿಗಿಯನ್ನೇ ನನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಬೇಕೆಂಬುದೊಂದು ನನ್ನ ಕನಸು. ಕೆಎಸ್ಎನ್ ಅವರು ಹೇಳುವಂತೆ ನೆನೆದಾಗ ತವರುಮನೆ ………..ನನ್ನಮನೆ ಎನ್ನುವಂತಿರಬೇಕು. ಓಡೋಡುತ್ತ ಹೋದರೆ ನನ್ನವಳ ತವರುಮನೆ ಬರಬೇಕು. ಯಾವದೆ ಪ್ರಯಾಣವೆಚ್ಚವಿಲ್ಲದೆ, ಪ್ರಯಾಣ, ಪ್ರಯಾಸವಿಲ್ಲದೆ ಮಾವನ ಮನೆಯ ಸುಖವನ್ನು ಅನುಭವಿಸಬಹುದು. ಎಂದು ಏನೇನೊ ಕಲ್ಪನಾ ಹಂದರವನ್ನು ಕಟ್ಟಿಕೊಂಡಿದ್ದ ನನಗೆ ಬಾಳಸಂಗಾತಿಯಾಗಿ ದೊರೆತದ್ದು ಮೂರುನೂರು ಕಿ.ಮಿ. ದೂರದ ಏಳೆಂಟು ತಾಸುಗಳ ಪ್ರವಾಸದ ಕುಷ್ಟಗಿ ತಾಲೂಕಿನ ‘ಪುಟಗಮರಿ’ಯೆಂಬ ದೂರದೂರಿನವಳು.
ಮೊದಲ ಬಾರಿಗೆ ಮಾವನ ಮನೆಗೆ ಹೊರಟಿದ್ದ ನನಗೆ ನೂರಾರು ಕಲ್ಪನೆಗಳ ಕುಡಿಯೊಡೆಯತೊಡಗಿದವು. ಅಲ್ಲಿಗೆ ಹೋದಾಗ ನಾನು ಯಾವ ರೀತಿ ನಡೆದುಕೊಳ್ಳಬೇಕು, ಎಷ್ಟು ಗಂಭೀರವಾಗಿರಬೇಕು, ಮುಖವನ್ನೆಷ್ಟು ಸಡಲಿಸಬೇಕು, ನಗುವದೆಷ್ಟು, ನಗುವಾಗೆಷ್ಟು ಹಲ್ಲುಗಳು ಕಾಣಿಸಬೇಕು, ಉಡುಪು ಯಾವ ರೀತಿ ಇರಬೇಕು ಮುಂತಾಗಿ ಯೋಚಿಸುತ್ತಿದ್ದೆ. ತವರಿಗೆ ಹೋಗುವಾಗ ಮಡದಿ ಹೇಳಿದ ಮಾತುಗಳು ನೆನಪಿಗೆ ಬರತೊಡಗಿದವು- ನೀವು ಬರುವ ಮುಂದೆ ನೀಟಾಗಿ ಇಸ್ತ್ರಿ ಮಾಡಿದ ಶರ್ಟನ್ನೇ ಹಾಕಿಕೊಂಡು ಬರ್ರಿ. ಕೊಳೆಯಾದ, ಬಕ್ಣಕ್ಕೆ ಮಸಿ ಬಡಿದಿರೋ ಶರ್ಟ ಹಕ್ಕೊಂಡು ಬರಬ್ಯಾಡ್ರಿ, ಮುಖ ನುಣಪಾಗಿರಲಿ ಮೊದಲ ಬಾರಿಗೆ ಅಳಿಯನನ್ನು ನೋಡುತ್ತಿರುತ್ತಾರೆ. ಸಾಯಂಕಾಲ ಏಳು ಗಂಟೆಯೊಳಗೆ ಕುಷ್ಟಗಿಗೆ ಇರುವಂತೆ ಬರ್ರಿ, ಪುಟಗಮರಿಗೆ ಏಳು ಗಂಟೆಗೆ ಕೊನೆಯ ಬಸ್ಸಿದೆ. ನಂತರ ನೀವು ಲಾರಿಗೆ ಬರಬೇಕಾಗುತ್ತೆ. ರಾತ್ರಿ ಹೊತ್ತು ಲಾರಿ ಪ್ರವಾಸ ಸರಿಯಲ್ಲ. ಮಡದಿ ಹೇಳಿಕೆಯಂತೆ ಡ್ರೆಸ್ ಮಾಡಿಕೊಂಡು, ತಾಯಿಗೆ ನಮಸ್ಕರಿಸಿ ಮನೆಯಿಂದ ಹೊರಬಿದ್ದೆ.
ನಾನು ಬಸ್ಸ್ಟ್ಯಾಂಡಿಗೆ ಬಂದಿದ್ದೆ. ಜನಜಾತ್ರೆ ಕೂಡಿತ್ತು. ಪೆಪ್ಪರಮೆಂಟ ಮಾರುವವರು, ಪೇಪರ ಮಾರುವವರು, ಭಿಕ್ಷುಕರು, ಪಾಕೆಟ್ ಹೊಡೆಯುವವರು, ಪಾಕೆಟ್ ಹೊಡಿಸಿಕೊಳ್ಳುವವರು! ಎಲ್ಲರೂ ಕೂಡಿದ್ದರು. ಯಾವುದಾದರು ಬಸ್ಸು ಬಂದಾಗ ಮಾವನ ಊರಿನ ಬಸ್ಸೇ ಇರಬಹುದೆಂದು ಕುಳಿತಲ್ಲಿಂದ ಬಸ್ಸಿನೆಡೆಗೆ ಅವಸರದಿಂದ ಹೋಗುತ್ತಿದ್ದೆ. ಅದಿಲ್ಲದಾದಾಗ ಮತ್ತೆ ಮೂಲಸ್ಥಾನಕ್ಕೆ ಮರಳುತ್ತಿದ್ದೆ. ಹೀಗೆ ಓಡಾಡಿ – ಓಡಾಡಿ ಕಾಲುಗಳು ನೋಯಲಾರಂಭಿಸಿದ್ದವು. ಇದೇ ನಡಿಗೆಯನ್ನು ಮಾವನ ಊರಿಗೆ ಹೋಗುವದಕ್ಕೆ ಉಪಯೋಗಿಸಿದ್ದರೆ ಅಂದರೆ ಬಸ್ಸಿಗೆ ದಾರಿ ಕಾಯದೆ ಹಾಗೆ ನಡೆಯುತ್ತ ಹೋಗಿದ್ದರೆ ಇಷ್ಟೊತ್ತಿಗೆ ಮಾವನ ಮನೆ ತಲಪುತ್ತಿದ್ದೆನೇನೋ ಎಂದು ಅನ್ನಿಸದೇಯಿರಲಿಲ್ಲ.
ಮನುಷ್ಯನಿಗೆ ಸಹನೆಯೆಂಬುದು ಇರಬೇಕು ಎಂಬುದನ್ನು ಬಸ್ಸುಗಳು ನಮಗೆ ತಿಳಿಸಿಕೊಡುತ್ತವೆ. ದಾರಿ ಕಾಯ್ದು ಕಾಯ್ದು ಕೊನೆಗೊಂದು ಬಸ್ಸು ಬಂದೇ ಬಿಟ್ಟಿತ್ತು. ನನ್ನನ್ನು ಮಾವನ ಊರಿಗೆ ಕರೆದುಕೊಂಡು ಹೋಗುವ ಬಸ್ಸೇ ಅದಾಗಿತ್ತು. ಸೀಟಿಗಾಗಿ ಪರದಾಟ ಪ್ರಾರಂಭವಾಗಿತ್ತು. ಎಲ್ಲರೂ ಸೀಟಿಗಾಗಿ ತಮ್ಮ ಕರವಸ್ತ್ರ, ಟೊಪ್ಪಿಗೆ, ಟವಲ್, ದಿನಪತ್ರಿಕೆ ಒಗೆದು ಸೀಟು ರಿಜರ್ವ ಮಾಡಲು ಮುಂದಾಗಿದ್ದರು. ನನ್ನ ಹತ್ತಿರ ಹಾಗೆ ಕಿಟಕಿಯಿಂದ ಎಸೆಯುವಂತಹ ವಸ್ತುಗಳಾವವೂ ಇರಲಿಲ್ಲ. ಕೈಯಲ್ಲಿದ್ದ ಬ್ಯಾಗುಗಳು ಕಿಟಕಿಯಿಂದ ದಾಟುವಂತಿರಲಿಲ್ಲ. ಕೊನೆಗೆ ತಲೆ ಉಪಯೋಗಕ್ಕೆ ಬಂದಿತು. ಜೀವನದಲ್ಲಿಯೊಮ್ಮೆಯಾದರೂ ಉಪಯೋಗಕ್ಕೆ ಬಂದಿದ್ದ ನನ್ನ ತಲೆಯ ಬಗ್ಗೆ ಅಭಿಮಾನ ಮೂಡಿತು! ಸಂತೋಷವಾಯಿತು. ನನಗೆ ಒಮ್ಮೆಲೆ ಜ್ಞಾನ ಪ್ರಕಾಶದ ಕಿರಣ ನಾನು ಹಾಕಿಕೊಂಡಿದ್ದ ಸ್ವೆಟರ ಮೇಲೆ ಬಿದ್ದಿತು. ಅವಸರವಸರದಿಂದ ಸ್ವೆಟರನ್ನು ತೆಗೆದು ಕಿಟಕಿಯಿಂದ ಜೋರಾಗಿ ಎಸೆದೆ. ಅದು ನೇರವಾಗಿ ಖಾಲಿ ಸೀಟಿನ ಮೇಲೆ ಆಸೀನವಾದಾಗ ಮನಸ್ಸು ಹಿಪ್ ಹಿಪ್ ಹುರ್ರಾ ಎಂದು ಕುಣಿದಾಡಿತ್ತು. ನಿರಾಳವಾಗಿ ಉಸಿರೊಂದು ತಾನೇ ತಾನಾಗಿ ಹೊರ ಬಂದಿತ್ತು.
ಸಾವಕಾಶವಾಗಿ ಗದ್ದಲ ಕಡಿಮೆಯಾಗುವವರೆಗೆ ಸ್ವಲ್ಪ ತಡೆದು ಬಸ್ಸ್ನ್ನೇರಿ ಒಳಬಂದು ನೋಡಿದರೆ ನನ್ನ ಸ್ವೆಟರೇ ಇಲ್ಲ. ಸ್ವೆಟರ ಇಟ್ಟಿದ್ದ ಸೀಟಾದರೂ ಯಾವುದೆಂಬ ಗೊಂದಲಕ್ಕೀಡಾದೆ. ಕೊನೆಗೂ ಸ್ವೆಟರ ಇಟ್ಟಿದ್ದ ಸೀಟು ಇದೆಯೆಂದು ಖಚಿತಪಡಿಸಿಕೊಂಡು ಪೇಪರ ಓದುತ್ತ ಕುಳಿತ್ತಿದ್ದ ವ್ಯಕ್ತಿಯನ್ನು ನಯವಾಗಿ ರೀ. ಸೀಟಿನ ಮೇಲೆ ಸ್ವೆಟರನ್ನಿಟ್ಟಿದ್ದೆ ಎಂದು ಕೇಳಿದೆ. ನಾನು ಕೇಳಿದ ಐದು ನಿಮಿಷದ ನಂತರ ಸಾವಕಾಶವಾಗಿ ಪತ್ರಿಕೆಯಿಂದ ನೋಟ ಕಿತ್ತು ನನ್ನ ಮುಖ ನೋಡಿ ಸ್ವೆಟರ ಇರುವುದು ಥಂಡಿ ದಿನದಲ್ಲಿ ಹೀಗೆ ಹಾಕಿಕೊಳ್ಳಲು ಸೀಟು ಹಿಡಿಯಲು ಅಲ್ಲ, ಎಂದು ಸಿಟ್ಟಿನಿಂದ ತಾನು ಹಾಕಿಕೊಂಡಿದ್ದ ಸ್ವೆಟರ ಮುಟ್ಟಿ ಮುಟ್ಟಿ ಹೇಳಿ ಪತ್ರಿಕೆ ಓದುವುದರಲ್ಲಿ ಮಗ್ನನಾಗಿಬಿಟ್ಟ. ನಾನು ದಿಟ್ಟಿಸಿ ತದೇಕ ಚಿತ್ತದಿಂದ ಅವನು ಹಾಕಿಕೊಂಡಿದ್ದ ಸ್ವೆಟರ ನೋಡಿ ಗಲಿಬಿಲಿಗೊಂಡೆ. ನನ್ನದೇ ಸ್ವೆಟರಿನ ಬಣ್ಣವಿದೆ, ಮಂಡ ತೋಳಿನದೇ ಇದೆ, ಉದ್ದ-ಅಗಲ ಎಲ್ಲದಕ್ಕೂ ನನ್ನ ಸ್ವೆಟರಿನದೇ ಅಳತೆ, ನನ್ನ ಸ್ವೆಟರ ಇದರ ಮುಂದೆ ತಂದು ಇಟ್ಟರೆ ಅವಳಿ-ಜವಳಿಯಂತೆ ಕಾಣುತ್ತವೆ. ನನ್ನ ಸ್ವೆಟರ ಎದೆಯ ಮೇಲೆ ‘ಖಒಂಖಖಿ ಃಔಙ’ ಎಂದು ಇಂಗ್ಲೀಷಿನಲ್ಲಿ ಬರೆದಿತ್ತು. ಇದರ ಮೇಲೆಯೂ ಬರೆದಿದೆ. ಇದು ನನ್ನದೇ ಸ್ವೆಟರೆಂಬುದು ಖಚಿತವಾಯಿತು. ಸಣ್ಣ ಧ್ವನಿಯಲ್ಲಿ ಅಳಕುತ್ತಾ ಈ ಸ್ವೆಟರ ನನ್ನದೇ ಸಾರ್ ಎಂದು ಹೇಳಿದಾಗ ಅದನ್ನೇ ನಾನು ಹೇಳುತ್ತಿರುವುದು, ಸ್ವೆಟರ ಇರುವುದು ಥಂಡಿಯಲ್ಲಿ ಹೀಗೆ ಹಾಕಿಕೊಳ್ಳಲು, ಬಸ್ಸಿನಲ್ಲಿ ಸೀಟು ಹಿಡಿಯಲು ಅಲ್ಲ ಎಂದು ದೊಡ್ಡ ಧ್ವನಿಯಿಂದ ಚೀರಿ, ಕಣ್ಣು ಕಿಸಿದು ಸ್ವೆಟರ ತೆಗೆದು ನನ್ನ ಮೇಲೆ ಎಸೆದ. ಸುತ್ತಲಿನವರು ನಗಲು ಪ್ರಾರಂಭಿಸಿದರು. ಸೀಟು ಮುಂದೆ ಸಿಗಬಹುದು ಈ ಸಧ್ಯ ಸ್ವೆಟರ ಸಿಕ್ಕಿತಲ್ಲ ಎಂಬ ಸಮಾಧಾನದಲ್ಲಿ ನಿಂತುಕೊಂಡೇ ಪ್ರಯಾಣ ಪ್ರಾರಂಭಿಸಿದೆ.
ಬೆಳಗಾವಿಯಿಂದ ಬಸ್ಸು ಹೊರಟಿತು. ಅದರ ವೇಗ ನಮ್ಮ ದೇಶದ ಜನಸಂಖ್ಯೆಯ ವೇಗದಲ್ಲಿರಬೇಕಾದುದು ಪ್ರಗತಿ ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸಲಾರಂಭಿಸಿತ್ತು. ಅದು ಕಷ್ಟಪಟ್ಟು ವೇಗದಿಂದ ಹೊರಟಿದೆಯೆಂದರೆ ಇಪ್ಪತ್ತು ಕಿ.ಮಿ. ವೇಗದಲ್ಲಿ ಹೊರಟಿರಬೇಕು. ಟ್ರ್ಯಾಕ್ಟರಗಳೂ ಬಸ್ಸನ್ನು ಹಿಂದಕ್ಕೆ ಹಾಕಿ ಮುಂದೆ ಹೊರಟಾಗ ಬಸ್ಸಿನಲ್ಲಿ ಕುಳಿತಿದ್ದ ಜನರಿಗೆ ಬಹಳೇ ಸಂಕಟವಾಗಲಾರಂಭಿಸಿತು. ಇದರಿಂದ ರೊಚ್ಚಿಗೆದ್ದ ಪ್ರಯಾಣಿಕನೊಬ್ಬ ಹಿಂಗ ಹೊಂಟರ ಕುಷ್ಟಗಿಗೆ ಯಾವಾಗ ಮುಟ್ಟೂದರಿ. . . . ಕಂಡೀಷನ್ ನೋಡಿಕೊಂಡು ಬಿಡಬೇಕರ್ರಿ, ದೂರದೂರಿನ ಪ್ರವಾಸ…… ತಡೀರಿ ನಿಮ್ಮ ಮೇಲಾಧಿಕಾರಿಗಳಿಗೆ ಫೋನ್ ಮಾಡ್ತೀನಿ ಎಂದು ಜೋರಿನಿಂದ ಚೀರಿದಾಗ ಉಳಿದವರೆಲ್ಲ ಅವರ ಧ್ವನಿಗೆ ಧ್ವನಿಗೂಡಿಸಿ ಅವನಿಗೆ ಬೆಂಬಲ ನೀಡಿದರು. ಅವರೆಲ್ಲರ ಧ್ವನಿಗೆ ಕಂಡಕ್ಟರ ಅಂಜದೆ ಅಳುಕದೆ ಒಂದೇ ಉತ್ತರ ಹೇಳಿದ. ಬಸ್ಸೆಲ್ಲ ಇಲೆಕ್ಷನ್ ಡ್ಯೂಟಿಗಂತ ಹಾಕ್ಯಾರ ಈಗ ಛುಲೋ ಬಸ್ಸಂದ್ರ ಇದು, ನಮ್ಮ ಸಾಹೇಬರ ಹೇಳಿದಾರ ಈ ಬಸ್ಸ ಎಲ್ಲಿ ನಿಂದರತೈತಿ ಅಲ್ಲಿಂದ ಫೋನ ಮಾಡಿ ತಿಳಿಸಂತ. ಒಟ್ಟ ರಾತ್ರಿ ಟೈಮಕ ಕುಷ್ಟಗಿಗೆ ಹೋಗಾಕಬೇಕರಿ ಅಥವಾ ರಾತ್ರಿ ಆದಲ್ಲಿ ಬಸ್ಸ ನಿಲ್ಲತೈತಿ, ಯಾಕಂದ್ರ ಈ ಬಸ್ಸು ಕುಡ್ಡ ಐತ್ರಿ! ಎಂದು ಮತ್ತಷ್ಟು ಅಂಜಿಕೆ ಹಾಕಿ ಎಲ್ಲರ ಬಾಯಿ ಮುಚ್ಚಿಸಿದ್ದ.
ಈ ವೇಗದಲ್ಲಿ ಬಸ್ಸು ಹೊರಟರೆ ನಾನು ಕುಷ್ಟಗಿ ತಲುಪುವ ಸಮಯವಾದರೂ ಯಾವುದು ? ಅಲ್ಲಿಂದ ಎಂಟು ಕಿ.ಮಿ.ನಷ್ಟು ದೂರ ನಮ್ಮ ಮಾವನ ಮನೆ. ‘ಸಾಯಂಕಾಲ ಆರು ಗಂಟೆ ಒಳಗೆ ನೀವು ಕುಷ್ಟಗಿಯಲ್ಲಿದ್ದರೆ ಮಾತ್ರ ನಮ್ಮೂರಿಗೆ ಬರಲು ಬಸ್ಸು, ಇಲ್ಲದಿದ್ದರೆ ಲಾರಿನೇ ಗತಿ. ಲಾರಿಗೆ ಬರುವ ಪ್ರಯತ್ನ ಮಾಡಬೇಡಿ’ ಎಂದು ಮಡದಿ ನೆನಪಿಸಿದ್ದು ನೆನಪಾದಾಗ ಕಂಡಕ್ಟರಗೆ ನಾನು ಹುಬ್ಬಳ್ಳಿಗೆ ಇಳಿದು ಬೇರೆ ಬಸ್ಸು ಹಿಡಿದುಕೊಂಡು ಹೋಗುತ್ತೇನೆ, ನನ್ನ ತಿಕೀಟು ತೆಗೆದುಕೊಂಡು ಹಣ ಕೊಡಿ ಎಂದು ಕೇಳಿದಾಗ-ಹಂಗ ಕೊಡಾಕ ಬರೂದಿಲ್ರಿ ತಿಕೇಟ್ ಮೇಲೆ ಏನು ಬರದೈತಿ ನೋಡ್ರಿ, ಸುಮ್ನ ಕುಂಡರ್ರಿ, ಕಲೀತಾವರಗತೆ ಕಾಣ್ತಿರಿ ಎಂದು ಬಾಯಿ ಮುಚ್ಚಿಸಿಬಿಟ್ಟಿದ್ದ. ಅಂತೂ ಇಂತೂ ರಾತ್ರಿ ಎಂಟು ಗಂಟೆಗೆ ಕುಷ್ಟಗಿ ತಲುಪಿದ್ದೆ.
ಕುಷ್ಟಗಿ-ಹೊಸಪೇಟೆ ಹೆದ್ದಾರಿಯಲ್ಲಿ ಲಾರಿಗಾಗಿ ಕೈ ಮಾಡುತ್ತ ನಿಂತಿದ್ದೆ. ಯಾರೊಬ್ಬರೂ ನಿಲ್ಲಿಸಲು ಮನಸ್ಸನ್ನೇ ಮಾಡುತ್ತಿರಲಿಲ್ಲ. ರಾತ್ರಿ ಹನ್ನೆರಡು ಆಯಿತು, ಎರಡೂ ಆಯಿತು. ಯಾವ ವಾಹನದವರು ನಿಲ್ಲಿಸಲೊಲ್ಲರು – ಎರಡು ಚಕ್ರದವರು, ನಾಲ್ಕು ಚಕ್ರದವರು, ಆರು ಚಕ್ರದವರು ಯಾರೂ ನಿಲ್ಲಲೊಲ್ಲರು. ಕೊನೆಗೊಬ್ಬ ಲಾರಿಯವ ನಿಲ್ಲಿಸಿದ – ಗಡಿಬಿಡಿಸಿದವನೇ ಮೊದಲು ಲಾರಿಯನ್ನೇರಿದೆ. ಸ್ವಲ್ಪ ನಿಶ್ಚಿಂತೆಯಿಂದ ಕುಳಿತೆ. ಅದೇನು ಕೆಟ್ಟ ವಿಚಾರ ಬಂದಿತೇನೋ ದೂರದೂರಿನಿಂದ ಬಂದದ್ದರಿಂದ ಧೂಳಾಗಿದ್ದ ಶರ್ಟನ್ನು ಬದಲಿಸಿ ಮಡದಿಯ ಅಪೇಕ್ಷೆಯಂತೆಯೆ ಗರಿ ಗರಿಯಾದ ಇಸ್ತ್ರಿ ಶರ್ಟ ಹಾಕಿಕೊಂಡು ಅವಳ ಮುಂದೆ ಕಾಣಿಸಿಕೊಳ್ಳಬೇಕೆಂದು ಶರ್ಟನ್ನು ಕಳಚಿದ್ದೆ. ರಾತ್ರಿ ಹೊತ್ತು ಕತ್ತಲು ಕವಿದಿದೆ. ಮುಂದೆ ಲಾರಿಯ ಲೈಟಿನ ಬೆಳಕಿನಲ್ಲಿ ರಸ್ತೆಯೊಂದನ್ನು ಬಿಟ್ಟು ಬೇರೇನೂ ಕಾಣಿಸಲೊಲ್ಲದು. ರಸ್ತೆ ಪಕ್ಕದಲ್ಲಿರುವ ಮೈಲುಗಲ್ಲುಗಳು, ಊರ ಹೆಸರುಗಳ ಫಲಕ ಯಾವವೂ ಕಾಣಲೊಲ್ಲವು. ಹೆದ್ದಾರಿಯಿಂದ ಸ್ವಲ್ಪ ದೂರ ಒಳಗಿರುವ ಪುಟ್ಟ ಪುಟಗಮರಿ ಎಲ್ಲಿ ದಾಟಿ ಹೋಗುತ್ತದೋ ಎಂಬ ಭಯ. ದೂರದಲ್ಲಿ ನಾಮಫಲಕವೊಂದು ಇರುವಂತೆ ಭಾಸವಾಯಿತು. ಕತ್ತಲಲ್ಲಿ ಅದನ್ನು ಓದುವುದಾದರೂ ಹೇಗೆ ! ಚಾಲಕ ತೆಲುಗು ಭಾಷಿಕನಾದ್ದರಿಂದ ಲಾರಿ ನಿಲ್ಲಿಸುವಂತೆ, ನಾಮಫಲಕ ನೋಡಿ ಬರುವುದಾಗಿ ಕೈಸನ್ನೆ ಮೂಲಕವೇ ತಿಳಿಸಿದೆ. ಕತ್ತಲೆಯಲ್ಲಿ ಬರೆದಿರುವ ಬೋರ್ಡನ್ನು ಓದುವುದಾದರೂ ಹೇಗೆಂದು ಅನುಮಾನಿಸುತ್ತಿರುವಾಗಲೇ ಚಾಲಕ ತನ್ನಲ್ಲಿದ್ದ ದೊಡ್ಡ ಬ್ಯಾಟರಿಯೊಂದನ್ನು ಕೊಟ್ಟಾಗ ಧನ್ಯತೆಯ ಭಾವದಿಂದ ಅವನೆಡೆಗೆ ನೋಡಿದೆ.
ನಾನು ಸುಮ್ಮನೆ ಲಾರಿಯವರೆಂದರೆ ಕೆಟ್ಟವರು,ಮೋಸಗಾರರು, ತುಂಬಾ ಕ್ರೂರರು ಲಾರಿಯ ಪ್ರವಾಸ ಮಾಡಬೇಡಿ ಎಂದು ಮಡದಿ ಸುಮ್ಮನೆ ಅಂಜಿಸಿದ್ದಳು. ಪಾಪ ಲಾರಿಯ ಡ್ರೈವರ್ ಬ್ಯಾಟರಿ ಕೊಟ್ಟು ಕತ್ತಲಲ್ಲಿ ಬೆಳಕು ತೋರುತ್ತಿದ್ದಾನೆ. ಊರ ಹೆಸರನ್ನೋದಲು ಕಣ್ಣು ನೀಡಿದ್ದಾನೆ. ಇಂಥ ಸಜ್ಜನನಿಗೆ ಕ್ರೂರಿ, ಮೋಸಗಾರನ ಪಟ್ಟಗಟ್ಟುವ ಮಡದಿಯನ್ನು ಮನದಲ್ಲಿಯೇ ಹಳಿದೆ. ಶರ್ಟನ್ನು ಕಳೆದಿದ್ದರಿಂದ ತಂಪಾದ ಗಾಳಿ ಮೈಯನ್ನು ಆವರಿಸಿಕೊಳ್ಳುತ್ತಿತ್ತು. ಡ್ರೈವರ್ ಹತ್ತಿರ ಬ್ಯಾಟರಿಯನ್ನಿಸಿದುಕೊಂಡು ಲಾರಿಯಿಂದ ಕೆಳಗಿಳಿದು ಊರಿನ ಹೆಸರು, ಕಿ.ಮಿ. ಗಳನ್ನು ಬರೆದಿದ್ದ ಫಲಕದತ್ತ ಸಾಗಿದೆ. ಬ್ಯಾಟರಿ ಫಲಕದ ಮೇಲೆ ಬಿಟ್ಟು ನೋಡುತ್ತಲಿದ್ದೆ ಪುಟಗಮರಿ-4 ಕಿ.ಮಿ. ಎಂದು ಬರೆದಿತ್ತು. ಅಷ್ಟರಲ್ಲಿ ಡುರ್……..ಡುರ್……. ಎಂಬ ಶಬ್ಧ ಬಂದೆಡೆ ಹೊರಳಿನೋಡಿದೆ ಹೊಗೆಯನ್ನು ಉಗುಳುತ್ತ ಲಾರಿ ಹೋಗುತ್ತಲ್ಲಿತ್ತು. ನಾನು ಗಾಬರಿಯಿಂದ ಹೆ………ಹೆ………ನನ್ನನ್ನು ಬಿಟ್ಟು ಹೋಗುತ್ತಿದ್ದಿಯಾ ನಿಲ್ಲಿಸೊ ಮಹರಾಯಾ … ಎಂದು ಲಾರಿ ಹಿಂದಿನಿಂದ ಓಡಲು ಪ್ರಾರಂಭಿಸಿದೆ. ಲಾರಿಯ ಹಿಂದೆ ಎಷ್ಟು ದೂರ ತಾನೆ ಓಡಲು ಸಾದ್ಯ? ನನ್ನ ಬ್ಯಾಗು, ಬ್ಯಾಗಿನಲ್ಲಿ ಹತ್ತು ಸಾವಿರ ರೂಪಾಯಿ, ಇವೆಲ್ಲ ಹೋದರೆ ಹೋಗಲಿ ನಾನು ಹಾಕಿಕೊಂಡಿದ್ದ ಶರ್ಟನ್ನು ತೆಗೆದುಕೊಂಡ ಲಾರಿ ಹೊಗಿಯನ್ನುಗುಳುತ್ತ ದೂರ ದೂರ ಹೋಗಿ ಮಾಯವಾಯಿತು. ದ್ರೌಪದಿಯು ವಸ್ತ್ರಾಪಹರಣ ಸಂದರ್ಭದಲ್ಲಿ ಎಷ್ಟೊಂದು ಹಿಂಸೆ ಅನುಭವಿಸಿರಬಹುದೆಂಬ ಅನುಭವ ಶಟರ್ಾಪಹರಣನಾದ ನನಗೆ ಆಗಲಾರಂಭಿಸಿತು.
ಅದೇ ಕತ್ತಲೆ ಕವಿದ ರಾತ್ರಿಯಲ್ಲಿ ಎಡವುತ್ತ, ಬೀಳುತ್ತ, ಏಳುತ್ತ ಕಪ್ಪು ಕತ್ತಲೆಯನ್ನು ಸೀಳುತ್ತ ಮುಂದೆ ಸಾಗಿದೆ. ನನಗೆ ಒಂದೇ ಚಿಂತೆ ಕಾಡುತ್ತಲ್ಲಿತ್ತು. ಈ ಬರಿ ಮೈಯಲ್ಲಿ ಊರನ್ನು ಪ್ರವೇಶಿಸುವದಾದರು ಹೇಗೆಂದು. ಪುಟಗಮರಿ ಸಣ್ಣ ಹಳ್ಳಿಯಾದರೂ ಯಾರ ಕಣ್ಣಿಗೂ ಕಾಣದಂತೆ ಮಾವನ ಮನೆ ಸೇರುವದೆಂತು ಎಂದು. ಮರಳಿ ಊರಿಗೆ ಹೋಗಿಬಿಡಲೇ ಎಂಬ ವಿಚಾರವೂ ಮನದಲ್ಲಿ ಮೂಡಿತು. ಆದರೂ ಹೆಂಡತಿ ಮೇಲಿನ ಮೋಹ ಮಾವನ ಮನೆಯತ್ತ ಎಳೆಯಿತು. ಹೆಂಡತಿಯ ಮೋಹಕ್ಕೊಳಗಾಗಿ ಹಾವನ್ನೇ ಹಗ್ಗವೆಂದು ತಿಳಿದು ಮಹಡಿಯನ್ನೇರಿ ಮಹಾನ್ ವ್ಯಕ್ತಿಗಳಾದವರು ತುಳಸಿದಾಸರು. ನಾನೂ ಮಹಾನ್ ವ್ಯಕ್ತಿಗಳಲ್ಲೊಬ್ಬನಾಗಬಾರದೇಕೆ ಎಂದು ಯೋಚಿಸುತ್ತ ಮಾವನ ಮನೆಯತ್ತಲೆ ಸಾಗಿದೆ. ಊರಲ್ಲಾರೂ ಏಳುವ ಮೊದಲೆ ಮನೆ ಸೇರುವದರಿಂದ ಹೋಗಲಿರುವ ಮಾನ ಸ್ವಲ್ಪಮಟ್ಟಿಗಾದರೂ ಉಳಿಯಬಹುದೆಂದು ಬೇಗ ಬೇಗ ಹೆಜ್ಜೆ ಹಾಕಿದೆ. ಮುಂಜಾನೆಯದ್ದು ಮಡದಿ ಮನೆ ಬಾಗಿಲು ತೆಗೆಯುವುದಕ್ಕೂ ನಾನು ಬಾಗಿಲಿಗೆ ಹೋಗವದಕ್ಕೂ ಸರಿ ಹೋಯಿತು. ನನ್ನ ಅವತಾರ ನೋಡಿದ ಮಡದಿ ಜೋರಿನಿಂದ ಚೀರಲೆಂದು ತೆರೆದಿದ್ದ ಬಾಯನ್ನು ತಡೆದು ಮನೆಯೊಳಗೆ ಹೋಗಿ ಕುರ್ಚಿಯ ಮೇಲೆ ಕುಳಿತೆ. ಒಳಗಿನಿಂದ ಬಂದ ಅತ್ತೆ ಅಯ್ಯೋ ಅಳಿಯದೇವರು ಯಾವಾಗ್ಯೆ ಬಂದರು ಒಮ್ಮೆಲೆ ಸ್ನಾನಕ್ಕೆ ತಯಾರಾಗಿ ಕುಳಿತ್ತಿದ್ದಾರೆ! ಮೊದಲು ಚಹಾ ಮಾಡಿಕೊಡು. ಎಂದು ಒಳಗೆ ಹೋದರು. ಮಾವ ಬಂದವರೆ ಅರೆರೇ ಅಳಿಯಂದಿರು ಯಾವಾಗ ಬಂದರು ಪ್ರಯಾಣ ಸುಖಕರವಾಗಿತ್ತೆ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅಲ್ಲಿಯೇ ಕುಸಿದಿದ್ದೆ.






0 Comments