ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಮನ್ ಅಲ್ಲ, ಆನಂದರಾಮನ್ ಸತ್ತ ಸುದ್ದಿ

’ರಾಮನ್ ಸತ್ತ ಸುದ್ದಿ’ ಈ ನಿಸಾರರ ಕವನವನ್ನು ಅನುಸರಿಸಿ-ಅನುಕರಿಸಿ ನಾನು ಬರೆದಿರುವ ಈ ಅಣಕ ಕವನದಲ್ಲಿ ಬರುವ (ಸತ್ತಿರುವ) ಆನಂದರಾಮನ್ ಒಬ್ಬ ಲೇಖಕ. ಎಲ್ಲರಂತೆ ಅವನೂ ಸತ್ತ. ಅವನ ಸುತ್ತಮುತ್ತ ಹರಿದಿರುವ ಸಾಲುಗಳನ್ನು -ಕವನದ ಸಾಲುಗಳನ್ನು- ಓದಿ ಆನಂದಿಸಿರಿ ಅಥವಾ ದುಃಖಿಸಿರಿ.
ನಿಸಾರರ ಕ್ಷಮೆ ಕೋರಿ ನಾನು ಬೆಳಕಿಗೆ ತಂದ ನನ್ನ ಈ ಅಣಕವನ ಅಣಕ ಕವನ ಕಳೆದ ವರ್ಷದ (ಏಪ್ರಿಲ್ ೨೦೦೮) ’ಸುಧಾ’ ಹಾಸ್ಯ ಸಂಚಿಕೆಯಲ್ಲಿ ಪ್ರಕಟವಾಗಿದೆ.
ಆನಂದರಾಮನ್ ಸತ್ತ ಸುದ್ದಿ
————————-
ಆನಂದರಾಮನ್ ಸತ್ತ ದಿನ ಬೆಂಗಳೂರಿನಲ್ಲಿ
ದರಿದ್ರ ಥಂಡಿ; ಚಳಿಗಾಲದಲ್ಲೇ ಸಾಯುವುದೆ
ಈ ಬರಹಗಾರ, ಕೊರೆದದ್ದು ಸಾಲದೆ ಬದುಕಿದ್ದಾಗ
ಕೊರೆವ ಚಳಿಯಲ್ಲೇ ಸತ್ತು ಬೆಳಗಿನ ಹೊತ್ತು
ಹೊರಗೆ ಬರುವಂತಾಯ್ತಲ್ಲಾ ಈ ಚಳಿಗೆ
ಅವನ ಪಾರ್ಥಿವ ಶರೀರದ ಬಳಿಗೆ ಎಂದು
ದುಃಖವಾಯಿತು ಅವನ ಬಂಧು
-ಗಳಿಗೆ, ಪರಿಚಿತರಿಗೆ ಮತ್ತು ಸಹ
-ಬರಹಗಾರರ ಬಳಗಕ್ಕೆ.
ಪತ್ರಿಕೆಗಳಿಗೆ ಪತ್ರ ಬರೆಯುತ್ತ
ವಾಚಕರಿಗೆ ಕೀಚಕಪ್ರಾಯ ಆದಾತ,
ಕವಿಗೋಷ್ಠಿಗಳಲಿ ಭಯಂಕರ
ಕೊರೆದಾತ, ತಾನು ಬಲು ಆದರ್ಶ ವ್ಯಕ್ತಿ
ಎಂದು ಮೆರೆದಾತ, ಸಾಯಲಿ ಬಿಡು ಪೀಡೆ
ತೊಲಗಿತು ಎಂದರು ಬಹುತೇಕ ಎಲ್ಲ ಜನರು.
ಆದರೆ, ಅವನೊಬ್ಬ ಹನುಮ ಮಾತ್ರ,
ಹಳ್ಳಿ ಗಮಾರ, ಒಳ್ಳೆ ಕೆಲಸಗಾರ,
ಹಳ್ಳಿ ಪದದ ಅಶಾಸ್ತ್ರೀಯ ಮಟ್ಟನ್ನು
ಕುರುಕುವ ಹರಕಲು ಬಟ್ಟೆಯ
ಗಾಯನಶೂರ, ದಿವಂಗತ ಆನಂದರಾಮನ
ಅತೀವ ಪ್ರೀತಿಗೆ ಪಾತ್ರ; ಅವನಿಗೆ ಆನಂದರಾಮ
ಕವಿಯೆಂಬುದು ಗೊತ್ತಿಲ್ಲ, ಬರಹ
ಓದಿಲ್ಲ, ಅಸಲು ಓದಲಿಕ್ಕೇ ಬರೋಲ್ಲ,
ಆದರೂ ದುಃಖಿಸಿದ ಮನಸಾರೆ; ಕಾರಣವಿಲ್ಲದಿಲ್ಲ.
ಕೆಟ್ಟು ಪಟ್ಟಣ ಸೇರಿದ್ದಾಗ ಹನುಮ,
ಹಸಿವು, ಅಸ್ವಸ್ಥತೆಯ ಗೂಡಾಗಿದ್ದಾಗ,
ಆಸರೆ ನೀಡಿದ್ದು ಇದೇ ಆನಂದರಾಮ.
ಪ್ರೀತಿಸಿದ್ದು ಸಹ; ಕನ್ನಡ, ಗಡಿ, ನದಿ,
ಪದ್ಯ, ಪ್ರತಿಷ್ಠೆಗಳನ್ನು ಮೀರಿ.
ಖಡ್ಗಕ್ಕಿಂತ ಲೇಖನಿಗೆ ಬಲ ಹೆಚ್ಚಂತೆ, ಗೊತ್ತಿಲ್ಲ.
ಲೇಖನಿಗಿರದ ಬಲ ಪ್ರೀತಿಗೆ; ಎರಡು ಮಾತಿಲ್ಲ.
ಈ ಕಡೆ ಹನುಮ, ಆ ಕಡೆ ಆನಂದರಾಮ;
ಮಧ್ಯೆ ಅಗಾಧ ಬಂಧು-ಬಳಗ,
ಸ್ಹೇಹಿತರು, ಸಹ ಲೇಖಕರು, ’ಅಭಿಮಾನಿಗಳು’.
ಮಧ್ಯದಲ್ಲಿ ಕಳಚಿದ ಕೊಂಡಿ.
ನಿಧನವಾಗಿಹೋದ ಆನಂದರಾಮನ್
ಒಬ್ಬಂಟಿ. ಕಳವಳಗೊಂಡು ಕುಳಿತಿರುವ
ಹನುಮ ಸಹ ಒಬ್ಬಂಟಿ. ಅಗಾಧ
ಜನಸಾಗರ ಕರ್ಮಕ್ಕೆ.

‍ಲೇಖಕರು avadhi

28 February, 2010

3 Comments

  1. d.s.ramaswamy

    ನಿಸಾರರ ಲಯ ಇದ್ದರೂ ಇದೂ ಕೂಡ ಸ್ವತಂತ್ರ ಪದ್ಯ. ಚೆನ್ನಾಗಿದೆ. ಅಂದ ಹಾಗೆ ಇದನ್ನು ಬರೆದವರು ಆನಂದರಾಮ ಶಾಸ್ತ್ರಿ ತಾನೆ?

  2. H. Anandarama Shastry

    ಹೌದು, ನಾನೇ. ಬದುಕಿದ್ದಾಗ ಬರೆದದ್ದು.

  3. hneshakumar@gmail.com

    ಮಾನವತೆಯ ಸೊಗದ ಪುರಿಸುತಿಹುದು ನಿಮ್ಮ ಕವನ!!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading