ಗೊರೂರು ಶಿವೇಶ್
ಚಂಗರವಳ್ಳಿ ಕಾಲುವೆಯು ನಮ್ಮ ಊರನ್ನು ಪೇಟೆ, ಕೋಟೆಗಳಾಗಿ ವಿಭಾಗಿಸಿದೆ. ಒಕ್ಕಲಿಗರು, ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಉಳಿದ ಸಕಲೆಂಟು ಜಾತಿಗಳಲ್ಲಿ ದೇವಾಂಗದವರ ಮನೆಗಳು, ನಂತರದ ಸ್ಥಾನದಲ್ಲಿದ್ದವು. ಆ ಮನೆಗಳ ನಡುವೆ ಇದ್ದ ಎಲ್ಲರೂ ‘ಭಜನೆ ಮನೆ’ ಎಂದು ಕರೆಯಲ್ಪಡುತ್ತಿದ್ದ ‘ಶ್ರೀರಾಮಮಂದಿರ’ ಇತ್ತು. ಪ್ರತಿ ಶ್ರೀರಾಮನವಮಿಯ ದಿನ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದಿತು.
ಆಗತಾನೇ ವೃತ್ತಿಯಿಂದ ನಿವೃತ್ತಿ ಹೊಂದಿದ ಜೊತೆಗೆ ಅಜ್ಜ ಸತ್ತ ಬಳಿಕ ವಂಶಪಾರಂಪರಿಕವಾಗಿ ಬಂದ ಯಜಮಾನಿಕೆ ಪಟ್ಟವನ್ನು ಅಲಂಕರಿಸಿದ ದೊಡ್ಡಪ್ಪ ರುದ್ರಶೆಟ್ಟರು ಅದ್ದೂರಿಯಾಗಿ ಶ್ರೀ ರಾಮನವಮಿಯನ್ನು ಆಚರಿಸಲು ನಿರ್ಧರಿಸಿದರು. ಇದಕ್ಕೆ ದೊಡ್ಡಮ್ಮನ ಒತ್ತಾಸೆಯೂ ಇತ್ತು. ಇದಕ್ಕಾಗಿ ಸಭೆಯೊಂದನ್ನು ಕರೆದರು. ಆದರೆ ಸಭೆಯಲ್ಲಿ ಅವರನ್ನು ಓಲೈಸುವವರಿಗಿಂತ ವಿರೋಧಿಸುವವರ ಸಂಖ್ಯೆಯ ಹೆಚ್ಚಿದ್ದಿತ್ತು.
ಅಣ್ಣನೆಂಬ ಭಯವೂ ಅತ್ತಿಗೆಯೆಂಬ ಮಮಕಾರದಿಂದಾಗಿ ಹೇಳಿದ್ದಕ್ಕೆಲ್ಲ ತಲೆಯಾಡಿಸುತ್ತಿದ್ದ ನನ್ನ ತಂದೆ ಅವರ ಮಾತಿಗೆ ಪ್ರತಿಮಾತಾಡದೇ ಹಿಂಬಾಲಿಸುತ್ತಿದ್ದ ‘ಮಡ್ಡಪ್ಪ’ ಎಂದು ಕರೆಯಲ್ಪಡುತ್ತಿದ್ದ ಹಲಗಶೆಟ್ಟರು, ಇಬ್ಬರೆ ಅವರ ನಿಷ್ಠಾವಂತ ಅನುಯಾಯಿಗಳು. ಉಳಿದಂತೆ ದಿಮ್ಮಿಕೊಪ್ಪಲು ಬಸವಶೆಟ್ಟರು, ಹತ್ತಿರದ ಸಂಬಂಧಿಗಳಾದ ಸಣ್ಣಪ್ಪ, ಟೈಲರ್ ಮರಿಶೆಟ್ಟಿ, ಚಂದ್ರಕಾಂತಯ್ಯ ಇವರು ತಟಸ್ಥ ಗುಂಪಿನಲ್ಲಿದ್ದರು. ಆದರೆ ‘ದೇವತಾಕಾರ್ಯವನ್ನು ವಿರೋಧಿಸುವುದು ಹೇಗೆ’ ? ಎಂದು ಭಿನ್ನಮತಿಯ ಬಣದವರು ಅದ್ದೂರಿಯ ರಾಮನವಮಿಗೆ ತಲೆಯಾಡಿಸುವುದರ ಜೊತೆಗೆ ಒಂಬತ್ತು ದಿನಗಳ ಬೆಳಿಗ್ಗೆ ಸಂಜೆಯ ಸೇವಾರ್ಥವನ್ನು ಒಬ್ಬೊಬ್ಬರು ವಹಿಸಿಕೊಂಡರು. ಇನ್ನು ಮುಂದೆ ಕಾರ್ತಿಕ ಮಾಸದ ಪೂಜೆಯನ್ನು ಇಷ್ಟೇ ಸಡಗರದಿಂದ ಆಚರಿಸಬೇಕೆಂದು ಇದಕ್ಕೆ ತಮ್ಮ ತನು-ಮನ-ಧನ ಧಾರೆಯರೆಯಲು ಸಿದ್ಧವಾಗಿರುವುದಾಗಿ ಘೋಷಿಸಿದರು.
ಪ್ರತಿ ದಿನ ಸೇವಾರ್ಥದಾರರು ಪೈಪೋಟಿಯ ಮೇಲೆ ‘ಚಪ್ಪರ’ಗಳನ್ನು ಮಾಡಿಸಿ ಪೂಜಾ ಸಿದ್ಧತೆ ನಡೆಸಿದರೂ ಬಾರದ ಜನ, ಐದಾರು ಬಾರಿ ಜಾಗಟೆಬಾರಿಸಿದ ನಂತರ ಒಬ್ಬೊಬ್ಬರಾಗಿ ಬಂದು ಸೇರುತ್ತಿದ್ದರು. ಪೆಟ್ಟಿಗೆಯಲ್ಲಿದ್ದ ಹಾರ್ಮೋನಿಯಂ ಅನ್ನು ಗ್ರೂಪ್-ಡಿ ಹುದ್ದೆಯಿಂದ ನಿವೃತ್ತಿ ಹೊಂದಿದ್ದ ತಿಮ್ಮಶೆಟ್ಟರು ಹೊರತೆಗೆದು, ಶೃತಿ ಹಿಡಿದು ಹಾಡಲು ಪ್ರಾರಂಭಿಸುತ್ತಿದ್ದರು. ಸಣ್ಣ ಹುಡುಗರಾದ ನಮಗೆ ತಿದ್ದಿ ಒತ್ತುವ ಕೆಲಸ. ಒಮ್ಮೊಮ್ಮೆ ಜೋರಾಗಿ ಇನ್ನೊಮ್ಮೆ ಮೆತ್ತಗೆ ಒತ್ತಿ ಸ್ವರದ ಏರಿಳಿತಕ್ಕೆ ಕಾರಣವಾಗುತ್ತಿದ್ದ ನಮ್ಮನ್ನು ಬೈಯ್ದು ಅಟ್ಟುತ್ತಿದ್ದರು.
ಊರ ಮೇಲ್ಭಾಗದಲ್ಲಿ ಮನೆಕಟ್ಟಿಕೊಂಡಿದ್ದ ನಾವು ದಿನಂಪ್ರತಿ ಓಡಾಡುತ್ತಾ ಪೂಜಾ ಸಡಗರದಲ್ಲಿ ಭಾಗವಹಿಸುತ್ತಿರುವಂತೆ ಶ್ರೀ ರಾಮನವಮಿಯ ದಿವಸ ಆಗಮಿಸಿತು. ಬೆಳಕು ಹರಿಯುವಷ್ಟರಲ್ಲಿ ತಮ್ಮ ಸ್ನಾನಾದಿಗಳನ್ನು ದೊಡ್ಡಮ್ಮ ಮುಗಿಸಿ, ನಮ್ಮ ಮನೆ ಬಳಿ ಬಂದು ಏಳು ಬಸ್ಸಣ್ಣ ಎಂದು ನಾಲ್ಕೈದು ಬಾರಿ ಹೇಳಿ ಬಲವಂತಮಾಡಿದ ಮೇಲೆ ಅಣ್ಣ ಊರೊಳಕ್ಕೆ ಪಯಣಿಸುತ್ತಿದ್ದರು. ನಾವು ಕೆಲಸ ಬೀಳುತ್ತದೆಂದು ಅಲ್ಲಿ ಇಲ್ಲಿ ಹೊಂಚುಹಾಕಿ ತಿಂಡಿ ತಿಂದು ‘ಭಜನೆ ಮನೆ’ಗೆ ಬರುವಷ್ಟರಲ್ಲಿ ಆಗಲೇ ಹತ್ತುಗಂಟೆ ಜಾರಿರುತ್ತಿತ್ತು.
ಎರಡು ಸೈಕಲನ್ನು ಮೂರು ಅಡಿ ಅಂತರದಲ್ಲಿ ನಿಲ್ಲಿಸಿ ಬಿದಿರಿನಿಂದ, ದಾರದಿಂದ ಬಂದಿಸಿ, ಕ್ಯಾರಿಯರ್, ಸೀಟಿನ ಮೇಲೆ ಸಣ್ಣದೊಂದು ಮಂಟಪ ನಿರ್ಮಿಸಿ, ಸೀತಾ, ಲಕ್ಷ್ಮಣ, ಆಂಜನೇಯ ಸಮೇತ ರಾಮನ ಫೋಟೋವನ್ನು ಮೆರವಣಿಗೆಗೆ ಸಿದ್ಧಪಡಿಸುವ ಕಾರ್ಯ ನಡೆಯುತ್ತಿತ್ತು. ಚಿಕ್ಕಜ್ಜ ಶಂಕರ ಮೇಸ್ಟ್ರು, ಬಣ್ಣದ ಕಾಗದಗಳನ್ನು ವಿವಿಧ ಶೈಲಿಯಲ್ಲಿ ಕತ್ತರಿಸಿ ಸಿಂಗರಿಸುವಲ್ಲಿ ನಿರತರಾಗಿರುತ್ತಿದ್ದರು. ನಾವು ಒಡನೆಯೆ ರಾಮಮಂದಿರದೊಳಗೆ ಹೋಗಿ ಇನ್ನುಳಿದ ವಿವಿಧ ಫೋಟೋಗಳನ್ನು ಕೈಯಲ್ಲಿ ಹಿಡಿದು ಬರುತ್ತಿದ್ದವು. ಆದರೆ ಗರುಡಗಂಭವನ್ನು ಹಿಡಿಯಲು ಯಾರು ಮುಂದೆ ಬರುತ್ತಿರಲಿಲ್ಲ. ಸಾಕಷ್ಟು ತೂಕವಿದ್ದ ಅದನ್ನು ಒಂದೇ ಕೈಯಲ್ಲಿ ಕೊನೆಯವರೆವಿಗೂ ಹಿಡಿಯುವುದು ಕಷ್ಟಕರ ಎಂಬುದು ಒಂದು ಕಾರಣ, ಬಿಸಿಲಿನ ಧಗೆಯ ಜೊತೆಗೆ ದೀಪದ ಬಿಸಿ, ಜೊತೆಗೆ ಬಟ್ಟೆಗೆ ತಾಕಿದರೆ ಎಣ್ಣೆಯ ಜೊತೆಗೆ ಮಸಿಯು ಸೇರಿ ಶಾಶ್ವತವಾಗಿ ಉಳಿಯುತ್ತಿದ್ದ ‘ಕರೆ’ಯ ಹೆದರಿಕೆ ಇನ್ನೊಂದು ಕಾರಣ.
ಹಾರ್ಮೋನಿಯಂನ ಎರಡು ಬದಿಗೆ ಟವಲ್ವೊಂದನ್ನು ಕಟ್ಟಿ ಹೆಗಲಿಗೇರಿಸಿ ‘ದೇವಬಂದ, ನಮ್ಮ ಸ್ವಾಮಿ ಬಂದನೋ, ದೇವರ ದೇವ ಪಿತಾಮಹ ಬಂದಾನೋ’ ಎಂದು ರಾಗವಾಗಿ ಹಾಡುತ್ತಾ ನನ್ನ ಇನ್ನೊಬ್ಬ ದೊಡ್ಡಪ್ಪ ರಾಮಶೆಟ್ಟರು ಮೆರವಣಿಗೆಗೆ ಚಾಲನೆ ನೀಡುತ್ತಿದ್ದರು. ಅವರೊಂದಿಗೆ ದಮ್ಮಡಿಯನ್ನು ಹಿಡಿದ ತಿಮ್ಮಶೆಟ್ಟರು, ಹಿಂಬಾಲಿಸುತ್ತಿದ್ದಂತೆ ದೇವರನ್ನು ಹೊತ್ತಿದ್ದ ಸೈಕಲನ್ನು ಬ್ಯಾಲೆನ್ಸ್ ಮಾಡುತ್ತಾ ಜಯರಾಮ, ರೇವಣ್ಣ, ಮಂಜಣ್ಣ, ಮುಂತಾದ ಯುವಕರು ಹಿಂಬಾಲಿಸಿದರು. ‘ಕಲ್ಲುಸಕ್ಕರೆ ಕೊಳ್ಳಿರೋ ನೀವೆಲ್ಲರೂ, ದಾಸ-ದಾಸನ ಮನೆಯ ದಾಸರ ಪದಗಳನ್ನು ಒಂದಾದರೊಂದರಂತೆ ಹಾಡುತ್ತಾ ಸಾಗಿದರೆ, ಅವರ ಹಿಂದೆ ಫೋಟೋ ಹಿಡಿದ ನಾವು, ನಿಮ್ಮಿಂದೆ ಸೈಕಲ್ಗೆ ಕಟ್ಟಿದ ಮಂಟಪದಲ್ಲಿ ವಿರಾಜಮಾನರಾಗಿದ್ದ ರಾಮ ದೇವರು.
ಮೆರವಣಿಗೆ ಪಶ್ಚಿಮಾಭಿಮುಖವಾಗಿ ಹೊರಟು ಸೇತುವೆ ಮೇಲೆ ಹಾದು, ಆಸ್ಪತ್ರೆ, ಪೋಲಿಸ್ ಸ್ಟೇಷನ್ನ ಮುಂದೆ ಬಂದು ಬಸ್ಸ್ಟಾಂಡ್ನ್ನು ತಲುಪಿದರೂ ನಮ್ಮ ಸಂಖ್ಯೆ ಹದಿನೈದು ಮೀರಿರಲಿಲ್ಲ. ದೇವರ ಪಟ ಹಿಡಿದ ಕಾರಣ ಬರಿಗಾಲಲ್ಲಿ ನಡೆಯಬೇಕಾದ ಅನಿವಾರ್ಯತೆ. ಕೈ ಬದಲಾಯಿಸುವವರು ಇಲ್ಲದೆ ಚುರುಗುಟ್ಟುವ ಬಿಸಿಲುಂಟಾಗಿ ಕಾದು ಕೆಂಡವಾಗಿದ್ದ ನೆಲ ಕಲ್ಲುಗಳ ಮೇಲೆ ಕಾಲಿರಿಸಿದರೆ ‘ಆಹಾ’ ಎನ್ನುವ ಸ್ಥಿತಿ. ದಾಸರ ಪದ ಹಾಡುವುದನ್ನು ನಿಲ್ಲಿಸಿ, ‘ಅಷ್ಟು ಸರಿ ಹೋಗಿ ಕರೆದರೂ ಯಾರು ಬರ್ಲಿಲ್ವಲ್ಲ. ಇದಕ್ಕೆ ಹೇಳೋದು, ಊಟಕ್ಕಾದ್ರೆ. ಊರ್ತುಂಬ ಜನ, ದೇವರ ಕೆಲ್ಸಕ್ಕಾದ್ರೆ ಮೂರು ಮತ್ತೊಂದು’ ಎಂದು ಗೊಣಗುತ್ತ ತಮ್ಮ ಹಾಡುಗಾರಿಕೆಯನ್ನು ಮುಂದುವರಿಸುತ್ತಿದ್ದರು ಹಿರಿಯರು.
ಬಸ್ಸ್ಟಾಂಡ್ಗೆ ಬರುವಷ್ಟರಲ್ಲಿ ಬಾರದ ಬಸ್ಸಿಗಾಗಿ ಮೇಲೆ, ಕೆಳಗೆ ಕತ್ತು ತಿರುಗಿಸಿ ನಿರಾಶರಾಗಿದ್ದ ಮಂದಿ ಮೆರವಣಿಗೆಯ ಹತ್ತಿರ ತಿರುಗುತ್ತಿದ್ದರು. ಭಕ್ತಿ ಭಾವದಿಂದ ನಿಂತಲ್ಲೆ ಕೈ ಮುಗಿಯುವವರು ಕೆಲವರಾದರೆ, ಇನ್ನೂ ಕೆಲವರು ಐದು ಹತ್ತು ಪೈಸೆ ನಾಣ್ಯವನ್ನು ಗೋಲಕಕ್ಕೆ, ಕೆಲವರು. ಗರಡುಗಂಬಕ್ಕೆ ಹಾಕಿ ಕುಂಕುಮ ಪಡೆದು ಹಣೆ, ಇಲ್ಲವೆ ಭೂಮಧ್ಯೆ ಇಟ್ಟುಕೊಳ್ಳುತ್ತಿದ್ದರು. ಅಷ್ಟರಲ್ಲಾಗಲೇ ಹೊಳೆಂದಾಚೆ ರಾಮಚಂದ್ರ, ಕ್ವಾಟ್ರಸ್ ತಿಮ್ಮಶೆಟ್ಟಿ ಮುಂತಾಗಿ ಕೆಲವರು ಜನ ಸೇರಿ ಗುಂಪು ಉಬ್ಬಲು ಪ್ರಾರಂಭವಾಗುತ್ತಿತ್ತು.

ಹೊಸ ಹುರುಪಿನಲ್ಲಿದ್ದ ನಾವು ಹೆಚ್.ಆರ್.ಪಿ. ಕಾಲೋನಿಯನ್ನು ಭೆೇದಿಸಬೇಕೆಂದು ನಿರ್ಧರಿಸಿ, ಪ್ರತ್ಯೇಕ ಕೋಟೆಯಂತಿದ್ದ ವಸಹಾತಿನೊಳಗೆ, ಅಲ್ಲಿದ್ದ ಕಾವಲುಗಾರರಿಗೆ ತಿಳಿಹೇಳಿ ಪ್ರವೇಶಿಸಿದವು. ಆದರೆ ತಮ್ಮ ಸಂಸಾರವೆಲ್ಲ ನಗರದಲ್ಲಿರಿಸಿ ಅಲ್ಲೊಂದು, ಇಲ್ಲೊಂದು ಎಂಬಂತೆ ಎಲ್ಲೋ ಕೆಲವರು ಕುಟುಂಬ ಸಮೇತ ವಾಸವಿದ್ದ ಮಂದಿಯಿಂದ ನೀರಸ ಪ್ರತಿಕ್ರಿಯೆ, ಆದರೆ ಮೆರವಣಿಗೆ ಗ್ರೂಫ್-ಡಿ ನೌಕರರೇ ಹೆಚ್ಚು ವಾಸವಿದ್ದ ‘ಇ’ ಮಾದರಿಯ ಕ್ವಾಟ್ರಸ್ ಬಳಿ ಬಂದಾಗ ಉತ್ಸಾಹದ ರಂಗು ಹೆಚ್ಚುತ್ತಿತ್ತು. ಕಾರಣ ಅವರ ಮನೆಯ ಹಿಂದೆ ತೊಟ್ಟಿಯಲ್ಲಿ ಶೇಖರಿಸುತ್ತಿದ್ದ ನೀರನ್ನು ಕೆಲವರು ದಬ-ದಬ ಹೊಯ್ದುಕೊಂಡು ಪುನೀತರಾಗಲು ಅವಕಾಶ ದೊರತದ್ದು, ಜೊತೆಗೆ ಮನೆ-ಮನೆಗೂ ಪೂಜೆ, ಭಕ್ತಿಯಿಂದ ತೆಂಗಿನಕಾಯಿ, ಬಾಳೆಹಣ್ಣು ನೀಡಲು, ಪೂಜಾಕಾರ್ಯದಲ್ಲಿ ನಿರತರಾಗಿರುತ್ತಿದ್ದ ಯುವಕರು ಮರೆಯದೆ ದೊಡ್ಡ ಹೋಳು ತೆಂಗಿನಕಾಯಿ, ಒಂದು ಬಾಳೆಹಣ್ಣನ್ನು, ಪಾಯಸ ಹಾಗೂ ರಸಾಯನಕ್ಕೆಂದು ಮರೆಯದೆ ತಾವು ತಂದಿದ್ದ ಚೀಲದೊಳಗೆ ತುಂಬುತ್ತಿದ್ದರು.
ಅಲ್ಲಿಂದ ಮೇಲಿನ ಗೇಟನ್ನು ದಾಟಿ ಅರಕಲಗೂಡು ರಸ್ತೆಯಗುಂಟ ಸಾಗಿ ಕೆನರಾ ಬ್ಯಾಂಕಿನ ರಸ್ತೆಗೆ ಬರುವಷ್ಟರಲ್ಲಿ ಸಮಾಜದ ಬಾಂಧವರೆಲ್ಲ ಬಂಧು ಸೇರುತ್ತಿದ್ದರು. ಓಕುಳಿನೀರನ್ನು ತಯಾರಿಸುವುದರ ಜೊತೆಗೆ ಕೋಸಂಬರಿ, ಪಾನಕ ನಿಂಬೆಹಣ್ಣಿನ ಷರಬತ್ತು ಬಂದವರಿಗೆಲ್ಲ ನೀಡಲು ತಯಾರಾಗಿರುತ್ತಿದ್ದರು. ಬಾಯಾರಿಕೆ ಜೊತೆಗೆ ಹಸಿವಿನಿಂದ ಬಳಲಿದ ಜೀವಗಳು ಅವುಗಳ ಮೇಲೆ ದಾಳಿಯಿಡುತ್ತಿದ್ದವು. ದೇವರಪಟ ಹಿಡಿದಿದ್ದ ನಮ್ಮ ಕಾಲುಗಳಿಗೆ ನೀರನ್ನು ಹಾಕುವುದರ ಜೊತೆಗೆ ದೀಪಾರತಿ ಮಾಡಿದ ನಂತರ ಓಕುಳಿಯನ್ನು ನಮ್ಮ ಪಾದಕ್ಕೆ ಸೋಕುವಂತೆ ಹಾಕುತ್ತಿದ್ದರಿಂದ ಪುಳಕಕ್ಕೊಳಗಾಗುತ್ತಿದ್ದೆವು.
ದೇಹಕ್ಕೆ ಕೊಂಚ ಚೈತನ್ಯ ದೊರಕಲು ಭಾವಾವೇಶಕ್ಕೊಳಗಾದವರಂತೆ ಹಾಡುತ್ತಾ ಮುಂದುವರಿಸುತ್ತಾ ಮೆರವಣಿಗೆ ಬ್ರಾಹ್ಮಣರ ಬೀದಿಗೆ ಬರಲು ತಟ್ಟೆಗೆ ಅವರು ಎಲೆ, ಅಡಿಕೆ, ಗಂಧದಕಡ್ಡಿ, ಸಕ್ಕರೆಯನ್ನು ಇಟ್ಟು ಪೂಜೆ ಮಾಡಿಸಿಕೊಳ್ಳುತ್ತಿದ್ದರು. ‘ದೇವಾನುದೇವತೆಗಳಿಗೆ ವಸ್ತ್ರವನ್ನು ನೀಡಿದವರು ನಾವಾಗಿದ್ದು, ಅವರಂತೆ ಜನಿವಾರವನ್ನು ಧರಿಸುವುದರಿಂದ ದೇವಾಂಗೆ ಬ್ರಾಹ್ಮಣರೇ ಸರಿ’ ಎಂದು ಪರಿಭಾವಿಸಿದ್ದ ಕೆಲವರು ಅವರನ್ನು ಮೆಚ್ಚಿಸಲೋ ಎಂಬಂತೆ ಶೃತಿ, ರಾಗ ಮತ್ತು ಸಾಹಿತ್ಯಬದ್ಧರಾಗಿ ಹಾಡಲಾರಂಭಿಸುತ್ತಿದ್ದರು.
ಅಲ್ಲಿಂದ ನೇರವಾಗಿ ಪೇಟೆ ಬೀದಿಗೆ ಬರುವಷ್ಟರಲ್ಲಿ ಬೀದಿಯ ಸಕಲೆಂಟು ಜನಾಂಗದವರು ಅತ್ತ ಶಂಕರಪ್ಪ, ಶಂಕರಮೇಸ್ಟ್ರು, ಇತ್ತ ಸಣ್ಣಪ್ಪ, ಮಡಪ್ಪ, ಅಪ್ಪಾಜಿಯವರ ಮನೆಯ ಸುತ್ತ ನೆರೆದಿರುತ್ತಿದ್ದರು. ಅದೇ ಸಮಯಕ್ಕೆ ನಮ್ಮ ಬೀದಿಗೆ ಬಂದೇ ತೀರಬೇಕೆಂದು ಪುರಿ ಪರಮೇಶನು ಒತ್ತಾಯಿಸಲು ಕಿರಿದಾಗಿದ್ದ ಓಣಿಯಲ್ಲಿ ಎಚ್ಚರಿಕೆಯಿಂದ ಸೈಕಲನ್ನು ಬ್ಯಾಲೆನ್ಸ್ ಮಾಡುತ್ತಾ ಆ ಬೀದಿಯಲ್ಲೂ ಮೆರವಣಿಗೆ ಸಾಗಿ ಕೊನೆಗೆ ರಾಮಮಂದಿರವನ್ನು ತಲಪುತ್ತಿತ್ತು.
ದೇವರ ಪುಟಗಳನ್ನು ಹಿಡದ ನಮ್ಮೆಲ್ಲರ ಪಾದಗಳಿಗೆ ಮತ್ತೊಮ್ಮೆ ನೀರಿನಿಂದ ತೊಳೆದ ನಂತರ ದೇವರಿಗೆ ಮಂಗಳಾರತಿ ಮಾಡಿ ನಮ್ಮೆಲ್ಲರಿಂದ ದೇವರ ಪಟಗಳನ್ನು ದೇವರ ಕಳಸವನ್ನು ಒಳಗೆ ತೆಗೆದುಕೊಂಡು ಹೋಗಿ ಇಡುತ್ತಿರುವಂತೆಯೆ ಸಿದ್ಲಿಂಗಯ್ಯನವರ ಮಗ ರವಿಗೆ ಆಗಲೇ ದೇವರು ಬಂದಿರುತ್ತಿತ್ತು. ಈ ಹಿಂದೆ ಅದರ ಅನುಭವವಿದ್ದ ಅಕ್ಕಪಕ್ಕದವರು ಹಿಡಿದುಕೊಂಡ ನಂತರ ಪೂಜಾರಿಕೆಯಲ್ಲಿ ಪ್ರಾವಿಣ್ಯತೆ ಪಡೆದಿದ್ದ ರಾಮಶೆಟ್ಟರು ಪ್ರಶ್ನೋತ್ತರವನ್ನು ಪ್ರಾರಂಭಿಸುತ್ತಿದ್ದರು. ಇದಕ್ಕೆ ದೊಡಮ್ಮನ ಸಾಥ್ ಇರುತ್ತಿತ್ತು.
ಯಾರಪ್ಪ ನೀನು ?
ಇಶ್ – ಶ್, ಶ್, ಶ್, ಶ್
ಯಾರು ನೀನು ? ಯಾಕಪ್ಪ ಬಂದೆ?
ನಾಲ್ಕೈದು ಬಾರಿ ಕೇಳಿದ ನಂತರ ಶ್, ಶ್, ಶ್, ನಾನು ಸೂಳೆಕೋಟೆ ಆಂಜನೇಯ
ರಾಮ ಎಲ್ಲಿಯೋ ಅಲ್ಲಿ ಆಂಜನೇಯ, ನೀನು ಬಂದ ಕಾರಣವಾದರೂ ಏನು ?
ಅಪಚಾರವಾಗಿದೆ. . . ಅಪಚಾರವಾಗಿದೆ. . ಶ್, ಶ್, ಶ್
ಏನು ಅಪಚಾರವಾಗಿದೆ. . ಕೊಂಚ ಬಿಡಿಸಿಯಾದರೂ ಹೇಳಪ್ಪ ಗಾಬರಿಯಿಂದ ಪ್ರಶ್ನಿಸಿದರು ದೊಡ್ಡಮ್ಮ
ಪ್ರತಿಬಾರಿ ಪೂರ್ವಾಭಿಮುಖವಾಗಿ ಹೋಗುತ್ತಿದ್ದವರು ಈ ಬಾರಿ ಪಶ್ಚಿಮಾಭಿಮುಖವಾಗಿ ಹೋದಿರಿ.
ಇಲ್ಲಾ ಸ್ವಾಮಿ. . ಹಾಗೇನು ಆಗಿಲ್ಲ ಕೊಂಚ ನಿರಾಳತೆಯಿಂದ ಉತ್ತರಿಸುತ್ತಿದ್ದರು ಉತ್ಸವದ ರೂವಾರಿಯಾಗಿದ್ದ ದೊಡ್ಡಮ್ಮ.
ಶ್, ಶ್, ಶ್ . . ದೇವರಿಗೆ ಕೋಪ ಬರಲಾರಂಭಿಸಿತು.
ತಪ್ಪಾಯ್ತು ಸ್ವಾಮಿ . . ಮುಂದಿನ ಸಾರಿ ಎಚ್ಚರವಹಿಸ್ತೀವಿ
ನಿಮ್ಮ ಭಕ್ತಿಯಿಂದ ನನಗೆ ಸಂತೋಷವಾಗಿದೆ. ಇದನ್ನು ಹೀಗೆ ಮುಂದುವರಿಸುಕೊಂಡು ಹೋಗಿ ಎಂದು ಕೈಯನ್ನು ನೀಡಲು ಪಕ್ಕದಲ್ಲಿದ್ದವರು ಕೈಯ ಮೇಲೆ ಕರ್ಪೂರವನ್ನು ಹಚ್ಚಲು, ಇನ್ನೊಬ್ಬರು ಕಾಯಿ ಹೊಡೆದರು. ಕರ್ಪೂರವನ್ನು ನಾಲಗೆಯ ಮೇಲಿಟ್ಟು ಒಳಗೆ ಸೆಳೆಯುತ್ತಿರುವಂತೆ ಕುಸಿಯುತ್ತಿದ್ದ ರವಿಯನ್ನು ಕೈಹಿಡಿದು ಗೋಡೆಯ ಪಕ್ಕಕ್ಕೆ ಕರೆದೊಯ್ದು ಕುಳ್ಳಿರಿಸುತ್ತಿದ್ದರು.
ಈಗ ರಾಮಮಂದಿರದ ತುಂಬಾ ಜನವೋ ಜನ. ಬೆಳಗಿನಿಂದ ಉಪವಾಸವಿದ್ದವರು ಹಸಿದು ಹಣ್ಣಾಗಿದ್ದರೆ, ಬಾಯಾರಿದ ಜನ ಬಳಲಿ ಬೆಂಡಾಗಿದ್ದರು. ಎಲ್ಲರಿಗೂ ಮಹಾಮಂಗಳಾರತಿ ಮುಗಿದು ಊಟಕ್ಕೆ ಕುಳಿತೆವೋ ಎಂಬ ತವಕ ಒಳಗಿನ ಉಬ್ಬಸದ ಸೆಕೆಯಿಂದಾಗಿ ಕೆಲವು ಮಕ್ಕಳ ದನಿ ತಾರಕಕ್ಕೇರಿರುತ್ತಿತ್ತು. ಇವುಗಳ ನಡುವೆ ದೊಡ್ಡಪ್ಪ ಇಷ್ಟು ದಿನಗಳ ಸೇವಾರ್ಥದಾರರಿಗೆ, ಧನಸಹಾಯ ಮಾಡಿದವರಿಗೆ ತಲಾ ಒಂದು ಮೊಳದ ಹಾರವನ್ನು ಹಾಕಿ ಅವರ ನೆರವನ್ನು ಕೊಂಡಾಡಿದರೂ ಆ ಗದ್ದಲದಲ್ಲಿ ಅದು ಯಾರಿಗೂ ಕೇಳುತ್ತಿರಲಿಲ್ಲ.
ಮಹಾಮಂಗಳಾರತಿಯ ಸಮಯ ಸಮೀಪಿಸುತ್ತಿದ್ದಂತೆ ಹೊರೆಗೆ ಢಣ. ಢಣ ಜಾಗಟೆಯ ಸದ್ದು, ಇತ್ತ ಶ್ರೀಮನ್ನಾರಾಯಣ ಗೋವಿಂದ . . . ಗೋವಿಂದ. ಲಕ್ಷ್ಮೀಪತಿಯೇ ಗೋವಿಂದ . . . ಗೋವಿಂದ . . . ಗೋವಿಂದ ಎನ್ನುವವರ ಪಾದಕ್ಕೆ ಗೋವಿಂದ . . . ಗೋವಿಂದ, ‘ಶ್ರೀ ರಾಮಚಂದ್ರ ಮಹಾರಾಜ್ ಕೀ ಜೈ’ ಎಂದು ಕೂಗುತ್ತಿರಲು ಭಕ್ತಿ ಭಾವದ ಪರಾಕಾಷ್ಠೆಯೋ ಎಂಬಂತೆ ಎಲ್ಲರೂ ದ್ಯಾನಮಗ್ನರಾಗಿ ಮಂಗಳಾರತಿಯ ಬೆಳಕಿನಲ್ಲಿ ದೇವರನ್ನೇ ದಿಟ್ಟಿಸುತ್ತಾ ಮನದಲ್ಲಿ ಏನೋನೋ ಸ್ಮರಿಸುತ್ತಾ . . ಬೇಡುತ್ತಾ ಕೆಲವರು ತುಟಿಯಲ್ಲಿ ಮಣಮಣಿಸುತ್ತಾ ಬೇಡುತ್ತಿರಲು ಸುದೀರ್ಘವಾದ ಮಹಾಮಂಗಳಾರತಿ ಮಾಡಿ, ತಟ್ಟೆ ಜನರ ಮುಂದೆ ತರಲು ಯಥಾಶಕ್ತಿ ದಕ್ಷಿಣೆ ನೀಡಿ ಆರತಿಯನ್ನು ಕಣ್ಣಿಗೊತ್ತಿಕೊಳ್ಳುತ್ತಾ ಕೃತಾರ್ಥರಾದರು. ಅವರುಗಳು ತಂದ ಲೋಟಕ್ಕೆ ಪಾನಕವನ್ನು, ಎಲೆಗೆ ಬಾಳೆಹಣ್ಣು, ಹಲಸಿನಹಣ್ಣು ಸೇರಿಸಿ ಹದಗೊಳಿಸಿದ ರಸಾಯನವನ್ನು ಎಲ್ಲರಿಗೂ ನೀಡಿದ ನಂತರ ಊಟಕ್ಕೆ ಅಣಿಯಾಗುತ್ತಿದ್ದರು. ಒಂದೊಂದು ಮನೆಯವರು ಒಂದೊಂದು ಐಟಂನಂತೆ ನೀಡಿದ್ದ ಉಪ್ಪು, ಉಪ್ಪಿನಕಾಯಿ, ಕೋಸಂಬರಿ, ಪಲ್ಯ, ಪಾಯಸ, ಅನ್ನ, ಸಾರು, ಮಜ್ಜಿಗೆಗಳಷ್ಟೇ ಇದ್ದರೂ ಹಸಿದ ಹೊಟ್ಟೆಗಳಿಗೆ ಅದೇ ಅದ್ದೂರಿ ಔತಣ. ಬೇರೆ ಬೇರೆ ಕಾರಣಗಳಿಂದ ಬಾರದೇ ಮನೆಯಲ್ಲಿಯೇ ಉಳಿದವರಿಗೆ ತಂದಿದ್ದ ಕುಕ್ಕೆಯಲ್ಲಿ ಊಟವನ್ನು ಕೊಟ್ಟು ಕಳುಹಿಸುತ್ತಾ ‘ಹೇಗೆ ಊಟ’ ? ಎಂದು ಪ್ರಶ್ನಿಸಿಅವರು
‘ಫಸ್ಟ್ಕ್ಲಾಸಾಗೈತೆ’, ಹೊಗಳಲು ದೊಡ್ಡಮ್ಮ ಹಿರಿ ಹಿರಿ ಹಿಗ್ಗುತ್ತಾ ಇದ್ದರು. ಎಲ್ಲಾ ಮುಗಿದು ಮನೆಗೆ ಹೊರಟಾಗ ‘ಮುಂದಿನ ವರ್ಷ ಇದಕ್ಕಿಂತ ಚೆನ್ನಾಗಿ ಮಾಡ್ಬೇಕು’ ಎನ್ನುವ ಅಣ್ಣನಿಗೆ ‘ದೇವರು ಕಣ್ಬಿಟ್ರೆ ಮಾಡೋಣ ಬಾ’ ಎನ್ನುತ್ತಿದ್ದರು ದೊಡ್ಡಮ್ಮ.
ಆದರೆ ಸ್ಥಳೀಯರು, ಪರಸ್ಥಳದಿಂದ ಬಂದವರು ಎಂಬ ಬೇದದಿಂದಾಗಿ ಮೆರವಣಿಗೆ ಕಳೆಗುಂದುತ್ತಾ ಮುಂದೆ ಬಂದು ನಿಂತೇ ಹೋಯಿತು. ನೆನಪಿನ ಶಕ್ತಿ ಕಳೆದುಕೊಂಡು ಹಾಸಿಗೆ ಹಿಡಿದ ದೊಡ್ಡಮ್ಮ-ದೊಡ್ಡಪ್ಪ ಇಪ್ಪತ್ತೈದು ದಿನದ ಅಂತರದಲ್ಲಿ ತೀರಿಕೊಂಡ ಸಂದರ್ಭದಲ್ಲಿ ಅಂತ್ಯಸಂಸ್ಕಾರಕ್ಕೆಂದು ಹೋದ ಸಂದರ್ಭದಲ್ಲಿ ಈಗಲೋ, ಆಗಲೋ ಕುಸಿಯುವ ಹಂತಕ್ಕೆ ಬಂದಿರುವ ‘ರಾಮಮಂದಿರ’ ನೋಡುತ್ತಾ ಹಳೆಯ ದಿನಗಳು ಮತ್ತೇ ಕಣ್ಣ ಮುಂದೆ ಹಾದು ಹೋದವು.






ವಾವ್, ತುಂಬಾ ಚೆನ್ನಾದ ನೆನಹುಗಳು
ಬಬರಹಗಾರರಿಗೆ ಹಳಯ ಕಾಲದ ನೆನಪಾಗಿ ಬರದಾಗಲೂ ನನ್ಸಂದವನಿಗೂಗೂ ಆರು ದಶಕಗಳ ಹಿಂದಿನ ನೆನಪುಗಳನ್ನು ಹೋಸ ಅನುಭವವಾಗಿಸಲು ಸಹಾಯಕರವಾಗಿದೆ.
V.J.K. Nair ವಿಜೆಕೆ ನಾಯರ್
superb refreshing article………