ರಾಣಿಯ ಮಂಚದ ಕೆಳಗೆ
ಅಂತೂ ಅದೆಲ್ಲದರ ತಾತ್ಪರ್ಯ ಒಂದೇ: ನಾನು ನನಗೆ ತೋಚಿದ ಏನನ್ನೂ ನೋಡಬಾರದು. ಅವಳು ಏನನ್ನು ನೋಡುತ್ತಾಳೊ ಅದನ್ನೇ ಪ್ರಸಾದ ಎಂದು ಸ್ವೀಕರಿಸಿ ಕೃತಾರ್ಥನಾಗಬೇಕು. ಆಗ ಜಗಳವಾಗುವುದಿಲ್ಲ. ಆದರೆ, ಜಗಳದ ವಿಚಾರದಲ್ಲಿ ಒಂದೇ ನಕ್ಷತ್ರದವರಾದ ನಾವಿಬ್ಬರೂ, ಒಬ್ಬರನ್ನೊಬ್ಬರು ಕೆಣಕಿ ಹೊಯ್ದಾಡಿಕೊಳ್ಳಲು ಸಣ್ಣದೆಂದರೆ ಸಣ್ಣ ಅವಕಾಶ ಸಿಕ್ಕರೂ ಅದನ್ನು ಪೂರ್ತಿಯಾಗಿ ಬಳಸಿಕೊಳ್ಳುತ್ತೇವೆ. ಇದರ ತಾತ್ಪರ್ಯ: ನಮ್ಮ ಮನೆಯಲ್ಲಿ ಅಡುಗೆಗೆ ಸ್ಟೌ ಒಂದು ದಿನ ಹೊತ್ತದೇ ಇರಬಹುದು; ಜಗಳ ಮಾತ್ರ ನಿತ್ಯದ ಪರಮಾನ್ನ.
ಗಂಡ ಹೆಂಡತಿ ನಡುವೆ ಏನೇನಕ್ಕೆಲ್ಲ ಜಗಳಗಳಾಗುತ್ತವೆ ಎಂಬುದು ಎಲ್ಲ ಗಂಡ ಹೆಂಡಿರಿಗೂ ಗೊತ್ತಿರೋ ವಿಚಾರವೇ. ಆದರೂ, ನಮ್ಮಿಬ್ಬರ ನಡುವೆ ಏನೇನಕ್ಕೆ ಜಗಳಗಳಾಗುತ್ತವೆ ಎಂಬುದು ತಿಳಿದರೆ ಎಂಥ ಜಗಳಗಂಟ ಸತಿಪತಿಯರೂ “ನಮ್ಮದೇ ಎಷ್ಟೋ ವಾಸಿಯಪ್ಪಾ” ಎಂದು ಸಮಾಧಾನಪಟ್ಟರೆ ಅಚ್ಚರಿಯೇನಿಲ್ಲ.
ನಮ್ಮಿಬ್ಬರ ನಡುವೆ ಯಾವುದೇ ಕ್ಷಣದಲ್ಲೂ ಹೇಗೆ ಬೇಕಾದರೂ ನಯಾಪೈಸೆಯಷ್ಟೂ ಕೂಡ ಕಾರಣವಿಲ್ಲದೆಯೂ ಜಗಳಗಳು ತಲೆದೋರಿಬಿಡುತ್ತವೆ. ಒಂದು ಸ್ಯಾಂಪಲ್ಲು: ನಾನು ಬೆಳಗ್ಗೆ ನೀರು ಹಿಡಿಯಲು ನಲ್ಲಿ ತಿರುಗಿಸಿ, ಬಿಂದಿಗೆಯೊ ಬಕೆಟ್ಟೊ ತುಂಬುವುದಕ್ಕೆ ಕಾದುನಿಂತಿರುತ್ತೇನೆ ಅಂತಿಟ್ಟುಕೊಳ್ಳಿ. ಇವಳು ಅಡುಗೆಮನೆಯಿಂದ ಗಿರಿಧರಾ ಎಂದು ಕೂಗುತ್ತಾಳೆ. ನೀರು ಬೀಳುವ ಸದ್ದಿನಿಂದಾಗಿ ನನಗದು ಕೇಳಿಸೋದೇ ಇಲ್ಲ.
ಹೇಗೋ ನನ್ನ ಅದೃಷ್ಟಕ್ಕೆ ಅವಳು ಕೂಗಿದ್ದು ಕೇಳಿಸಿ ಒಂದ್ನಿಮಿಷ ಲಕ್ಷ್ಮಿ, ಬಂದೆ ಲಕ್ಷ್ಮಿ ಅಂತ ಎಷ್ಟು ಸಾಧ್ಯವೋ ಅಷ್ಟು ಪ್ರೇಮಪೂರ್ವಕವಾಗಿ ಸ್ಪಂದಿಸಬೇಕು. ಆದರೆ ಅಷ್ಟು ಬೆಳಬೆಳಗ್ಗೇ ಎಲ್ಲರನ್ನೂ ಬಿಟ್ಟು ನನಗೇ ಬಂದು ಡಿಕ್ಕಿ ಹೊಡೆಯೋಕ್ಕೆ ಅದೃಷ್ಟ ಅನ್ನೋದೇನು ರೋಡಲ್ಲಿ ಯಾವ ಕ್ಷಣದಲ್ಲಿ ಹೇಗೆ ಬೇಕಾದರೂ ಒಂದು ಇಂಡಿಕೇಟರನ್ನೂ ಹಾಕದೆ ಮುಖ ತಿರುಗಿಸಿಬಿಡೋ ಆಟೋರಿಕ್ಷಾ ಅಲ್ಲವಲ್ಲ. ಏನಾಗುತ್ತೆ? ನನಗೆ ಅವಳು ಕೂಗಿದ್ದು ಕೇಳಿಸೋದೇ ಇಲ್ಲ. ಶುರುವಾಗಿಯೇಬಿಡುತ್ತದೆ ಸುಪ್ರಭಾತ.
ಸುಪ್ರಭಾತಕ್ಕೆ ತಿರುಪತಿ ವೆಂಕಟರಮಣನೇ ನಿದ್ದೆ ಕಳಕೊಂಡು ಎದ್ದುಬಿಡುತ್ತಾನಂತೆ. ಇನ್ನು ನಲ್ಲಿಯ ಮುಂದೆ ನೀರು ಹಿಡೀತಾ ನಿಂತಿರೋ ಮಾಮೂಲಿ ಗಿರಿಧರ, ನನ್ನ ಪಾಡೇನು? ನಿಜವಾಗಿಯೂ ಅದೃಷ್ಟವೇನೆಂದರೆ, ಎಷ್ಟೋ ಸಲ ಅವಳ ಈ ಸಹಸ್ರನಾಮಾರ್ಚನೆ ಕೂಡ ನನ್ನ ಕಿವಿ ಮುಟ್ಟೋದೇ ಇಲ್ಲ.
ಆರಾಮಾಗಿ ನೀರು ಹಿಡೀತಾ, ನಮ್ಮ ಆಫೀಸಿನ ರಿಸೆಪ್ಷನಿಸ್ಟ್ ಸವಿತಾ ಅದ್ಯಾಕೋ ಮನಸ್ಸೊಳಗೆ ಬಂದು, ಆಗ ನನಗೇ ಗೊತ್ತಿಲ್ಲದಂತೆ ತುಟಿಯ ಮೇಲೆ ಸ್ಮೈಲೊಂದು ಮೂಡಿಕೊಂಡು, ಅದನ್ನು ನಮ್ಮ ಮನೆ ಮೇಲೆ ಸೆಕೆಂಡ್ ಫ್ಲೋರಿನಲ್ಲಿರೋ ಭಾಸ್ಕರ್ ಪೂಜಾರಿ ಹಾಲು ತಕ್ಕೊಂಡು ಬರೋವಾಗ ನೋಡಿ, ಏನು ಗಿರಿಧರ್ ಬೆಳಬೆಳಗ್ಗೇ ಸಿಕ್ಕಾಪಟ್ಟೆ ಖುಷಿಯಾಗಿರೋ ಹಾಗಿದೆ ಎಂದು…
ನಾನು ಅದೇ ಸ್ಮೈಲು ಕಂಟಿನ್ಯೂ ಮಾಡಿಕೊಂಡು ಒಳಬರುತ್ತೇನೆ ನೋಡಿ, ಲಕ್ಷ್ಮಿ ರಣಚಂಡಿಯಾಗಿ ನಿಂತಿರುತ್ತಾಳೆ. ಕೈಯಲ್ಲಿ ಸೌಟು ಬೇರೆ. ಸಣ್ಣವನಿರುವಾಗ ನಮ್ಮ ಮನೆಯ ಗೋಡೆಯ ಮೇಲೆ ನೋಡಿದ್ದ ಒಂದೇ ಹಾಳೆಯ ಕ್ಯಾಲೆಂಡರ್ ಮೇಲಿದ್ದ ದೇವಿಯ ಚಿತ್ರವೇ ಇಲ್ಲಿ ಹೀಗೆ ಬಂದು ನಿಂತಂತೆ ಅನ್ನಿಸಿಬಿಡುತ್ತದೆ. ಅದೇ ವೇಳೆ, ಅಪ್ಪನ ಎದುರಿಗೆ ನಿಂತು ಜಗಳವಾಡೋವಾಗ ಅಮ್ಮ ಕೂಡ ಹೀಗೇ ಸೌಟು ಹಿಡಿದು ನಿಲ್ಲುತ್ತಿದ್ದುದು ಕೂಡ ನೆನಪಾಗುತ್ತದೆ.
ಈ ಹೆಂಗಸರು ಎಷ್ಟು ಯುಗಗಳೇ ಕಳೆದರೂ ಬದಲಾಗೋದಿಲ್ಲ; ಬದಲಿಸೋಕ್ಕೆ ಪ್ರಯತ್ನಿಸೋದೂ ವ್ಯರ್ಥ ಅನ್ನಿಸಿ, ಸದ್ಯಕ್ಕೆ ಇವಳನ್ನು ಸಮಾಧಾನಪಡಿಸೋದು ಅಥವಾ ಅದು ಸಾಧ್ಯವಾಗದೇ ಹೋದರೆ ತಪ್ಪಿಸಿಕೊಂಡು ಸ್ನಾನಕ್ಕೆ ಹೊರಡೋದು ಹೇಗೆ ಎಂದು ಯೋಚಿಸತೊಡಗುತ್ತೇನೆ. ಆದರೆ ಸಮಾಧಾನಗೊಳಿಸದೇ ಸ್ನಾನಕ್ಕೆ ಹೋದರೂ ಅಪಾಯವೇ. ಇವಳು ಹೊರಗಿಂದ ಬಾತರೂಮಿನ ಬಾಗಿಲು ಹಾಕಿಬಿಟ್ಟಳೆಂದರೆ ಕಥೆ ಮುಗೀತು. ಆಮೇಲೆ ಆಫೀಸೂ ಇಲ್ಲ; ರಿಸೆಪ್ಷನಿಸ್ಟ್ ಸವಿತಾಳ ಹಾಯ್ ಗಿರೀ ಎಂಬ ಕರ್ಣಮೋಹಕ ಕಲರವವೂ ಇಲ್ಲ.
ಮದುವೆಯ ನಂತರ ಇಂಥ ಅದೆಷ್ಟು ಶುಭ ಮುಂಜಾವುಗಳನ್ನು ಕಂಡಿರುವೆನೊ ಲೆಕ್ಕವಿಲ್ಲ. ಜಗಳ ಹೀಗೆ ನೀರಿನ ರೂಪದಲ್ಲಾದರೂ ಬರಬಹುದು; ಹಾಲಿನ ರೂಪದಲ್ಲಾದರೂ ಬರಬಹುದು; ಕಡೆಗೆ ರಿಸೆಪ್ಷನಿಸ್ಟ್ ಸವಿತಾಳ ನೆನಪಿನಿಂದ ಮುಖದಲ್ಲಿ ಮೂಡುವ ಸ್ಮೈಲಿನ ರೂಪದಲ್ಲೂ ಬಂದು ಅಲ್ಲೋಲಕಲ್ಲೋಲ ಸೃಷ್ಟಿಸಿಬಿಡಬಹುದು. ಎಲ್ಲವೂ ಅಭ್ಯಾಸವಾಗಿ ಹೋಗಿದೆ. ಅದಕ್ಕಿಂತ ಹೆಚ್ಚಾಗಿ ನಮ್ಮಿಬ್ಬರ ಆದರ್ಶ ದಾಂಪತ್ಯ ಇಡೀ ಆ ಏರಿಯಾಕ್ಕೇ ಪರಿಚಿತವಾಗಿಬಿಟ್ಟಿದೆ.
ಒಂದಿನ ಹೀಗಾಯಿತು: ಸಾರು ಮಾಡುತ್ತೇನೆ, ನೀನೊಂದು ಈರುಳ್ಳಿ ಹೆಚ್ಚಿಕೊಡು ಎಂದಳು. ನಾನೂ ಯಾಕೊ ಒಳ್ಳೇ ಮೂಡಲ್ಲೇ ಇದ್ದೆ. ಹಾಳಾಗಿ ಹೋಗಲಿ, ಒಂದು ಈರುಳ್ಳಿ ತಾನೆ? ಕತ್ತರಿಸಿ ಬಿಸಾಕಿದರಾಯಿತು ಎಂದು ತಯಾರಾದೆ. ತೀರಾ ಹೊಟ್ಟೆ ಹಸಿವಾದ ಹೊತ್ತಲ್ಲಿ ಜಗಳ ಮಾಡಿಕೊಂಡರೆ ಆಮೇಲೆ ಅಹಮ್ಮಿನ ಪ್ರಶ್ನೆಯೆಲ್ಲ ಎದುರಾಗಿ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಮಲಗಬೇಕಾಗುತ್ತದೆ ಎಂಬುದು ನನ್ನ ಇಲ್ಲೀವರೆಗಿನ ದಾಂಪತ್ಯದ ಸರ್ವೀಸಿನಲ್ಲಿ ಆಗಿರೋ ಅನುಭವವಾದದ್ದರಿಂದ ಸಿಲ್ಲಿ ಒಂದು ಈರುಳ್ಳಿ ವಿಚಾರಕ್ಕೆ ಬಡೇ ಅಚ್ಚೇ ಲಗ್ತೇ ಹೈ ಸೀರಿಯಲ್ಲಿನ ಹೊತ್ತಲ್ಲಿ ತಾರಕ ಸ್ವರದಲ್ಲಿ ಇಬ್ಬರೂ ಹೊಡೆದಾಡಿಕೊಳ್ಳುವುದನ್ನು ತಪ್ಪಿಸುವುದು ನನ್ನ ಉದ್ದೇಶವಾಗಿತ್ತು.
ಈರುಳ್ಳಿ ಬುಟ್ಟಿಗೆ ಕೈಹಾಕಿದರೆ ಅದೆಲ್ಲಿ ನನಗಾಗಿಯೇ ಕಾದುಕೊಂಡು ಅಡಗಿ ಕುಳಿತಿತ್ತೊ ದರವೇಸಿ ಜಿರಲೆ. ಸರಕ್ಕಂತ ಕೈಮೇಲೆ ಏರಿದ್ದು, ನಾನು ಅದೆಷ್ಟು ಕೈಕೊಡವಿಕೊಂಡರೂ ಪಟ್ಟು ಬಿಡದೆ ತೋಳಿನವರೆಗೂ ಏರಿ ಅಲ್ಲಿಂದ ಶರಟಿನ ಒಳಗೆ ನುಸುಳಿಕೊಂಡು ಎಂಥಾ ಆಟ ಆಡಿಸಿಬಿಟ್ಟಿತು ಗೊತ್ತಾ? ನನ್ನ ಪರದಾಟ ನೋಡಿ ಲಕ್ಷ್ಮಿ ಕಿಸಕ್ಕಂತ ನಕ್ಕುಬಿಟ್ಟಳು. ಮೊದಲೇ ಯಕಃಶ್ಚಿತ್ ಜಿರಲೆಯ ಎದುರು ಆ ಪರಿ ಸೋತ ಹತಾಶೆಯಲ್ಲಿದ್ದ ನಾನೂ ಏನೋ ಗೊಣಗಿಕೊಂಡೆ.
ಕೈಲಾಗದೋನು ಮೈಯೆಲ್ಲಾ ಪರಚಿಕೊಂಡ್ನಂತೆ ಎಂಬ ಕೆಣಕು ಮಾತು ಇರಿಯುವ ಹಾಗೆ ಬಂತು ಅವಳಿಂದ. ಬಾಯ್ಮುಚ್ಚೆ ಭೋಸಡಿ ಎಂದು ನಾನೂ ನನ್ನ ಪೌರುಷ ಮೆರೆದೆ. ಥೂ ನಿನ್ನ ಜನ್ಮಕ್ಕೆ ಅಂತ ಮತ್ತೆ ಅವಳ ಕಡೆಯಿಂದ ಮನೋಭೇದಕ ಬಾಣ. ಜಿರಲೆ ಎಲ್ಲಿ ಹಾಳಾಗಿ ಹೋಯಿತೊ? ಆದರೆ ನಮ್ಮ ಜಗಳ ಮಾತ್ರ ಕ್ಷಣ ಕ್ಷಣಕ್ಕೂ ಉಪ್ಪು ಖಾರ ಎಲ್ಲ ಸೇರಿಸಿಕೊಳ್ಳುತ್ತ ಸಾಂಗವಾಗಿ ಸಾಗಿತು. ಸಾರು ಬೇಯಲು ಅವಕಾಶವೇ ಇರಲಿಲ್ಲ.
ರಾತ್ರಿ ಸುಮಾರು ಹೊತ್ತಾದರೂ ನಮ್ಮ ಕಾದಾಟ ಮುಗಿಯಲೇ ಇಲ್ಲ. ಆಗ ನಮ್ಮ ಮನೆಯ ಮೇಲ್ಗಡೆ ಮನೆಗಳಲ್ಲಿ ಈಗಿರೋರಲ್ಲ, ಬೇರೆಯದೇ ಕುಟುಂಬಗಳು ಇದ್ದವು. ಬಾಗಿಲು ತಟ್ಟಿದ ಸದ್ದಾಯಿತು. ಬಾಯಿಂದ ಬಾಂಬುಗಳನ್ನೇ ಸಿಡಿಸುತ್ತ ಯುದ್ಧದಲ್ಲಿ ತೊಡಗಿದ್ದ ಇಬ್ಬರೂ ಒಮ್ಮೆಲೇ ಸೈಲೆಂಟಾಗಿಬಿಟ್ಟೆವು. ಮುಖ ಮುಖ ನೋಡಿಕೊಂಡೆವು. ನಾನೇ ಹೋಗಿ ಬಾಗಿಲು ತೆಗೆದೆ. ರಾಘವ ಮತ್ತು ಅವನ ಹೆಂಡತಿ ಮಾಳವಿಕಾ ಬಂದಿದ್ದರು.
“ಯಾಕ್ರೀ ಗಿರಿಧರ್ ಇನ್ನೂ ಮುಗಿದಿಲ್ಲ ಜಗಳ?” ಎಂದು ಅವರು ಒಂದು ಥರದ ಕಳವಳದಿಂದ ಕೇಳುತ್ತಿರಬೇಕಾದರೆ ನನಗೆ ತಲೆತಗ್ಗಿಸೋ ಹಾಗಾಯಿತು. ಏನೂ ಹೇಳಲು ತೋಚದೆ ಸುಮ್ಮನೆ ನಿಂತಿದ್ದ ನನ್ನ ಹಿಂದಿನಿಂದ ನುಗ್ಗಿಕೊಂಡು ಬಂದ ಲಕ್ಷ್ಮಿ, “ಒಂದು ಜಿರಳೆ ಮೈಮೇಲೆ ಹತ್ತಿದ್ದೇ ನೆಪ. ನನ್ನನ್ನ ಭೋಸಡಿ ಅನ್ನೋ ತನಕ ಹೋದರು ಗೊತ್ತಾ?” ಎಂದು ಕಂಪ್ಲೇಂಟು ಒಪ್ಪಿಸಿ ಬಿಕ್ಕಳಿಸಿ ಬಿಕ್ಕಳಿಸಿ ಅಳತೊಡಗಿದಳು.
“ಹೀಗೆಲ್ಲ ಹೆಂಡ್ತೀನ ಅಂತಾರೇನ್ರೀ ಗಿರಿಯವರೆ?” ಎಂದು ಮಾಳವಿಕಾ ತೀರಾ ಬೇಸರದ ದನಿಯಲ್ಲಿ ಕೇಳಿದಳು. ನನಗೆ ಸತ್ತೇ ಹೋಗುವ ಹಾಗಾಯಿತು. “ಗಂಡ ಹೆಂಡತಿ ಅಂದ್ಮೇಲೆ ಒಂದು ಮಾತು ಬರುತ್ತೆ, ಒಂದು ಮಾತು ಹೋಗುತ್ತೆ. ಸಂಭಾಳಿಸಿಕೊಂಡು ಹೋಗಬೇಕಲ್ವಾ?” ಎಂದ ರಾಘವ. “ಸಾರಿ. ನಿಮಗೆ ಡಿಸ್ಟರ್ಬ್ ಆಯ್ತು ನಮ್ಮ ಹಾಳಾದ ಜಗಳದಿಂದ” ಎಂದೆ ತೀರಾ ಮುದ್ದೆಯಂತಾಗಿ.
“ಹಾಗೇನೂ ಅಲ್ಲ. ನೀವು ಜಗಳ ಇಲ್ಲದೆ ಖುಷಿ ಖುಷಿಯಾಗಿದ್ರೆ ನಮಗೂ ಸಂತೋಷ” ಎಂದ. ಅಷ್ಟು ಹೇಳಿ ಅವರು ಮೆಟ್ಟಿಲೇರಿ ಹೊರಟುಬಿಟ್ಟರು. ಬಾಗಿಲು ಹಾಕಿದೆ. ಮತ್ತೇನೋ ಗೊಣಗಲು ಹೊರಟವನು ಹೇಗೋ ತಡೆದುಕೊಂಡೆ. ಆ ರಾತ್ರಿಯ ಮಟ್ಟಿಗೆ ಮತ್ತೆ ಮಾತುಗಳು ಸಿಡಿಯದಿದ್ದರೂ, ಧುಮುಗುಡುತ್ತಲೇ ಮಲಗಿದೆವು.
ಅವತ್ತು ರಾತ್ರಿ ರಾಘವ ಮತ್ತು ಮಾಳವಿಕಾ ಹಾಗೆ ಬಂದು ಕನಿಕರದಿಂದಲೇ ಅಷ್ಟೆಲ್ಲ ಅಡ್ವೈಸ್ ಮಾಡಿ ಹೋದ ಮೇಲೂ ನಾವೇನೂ ಬದಲಾಗಿಬಿಡಲಿಲ್ಲ. ಸ್ವಲ್ಪ ದಿನಗಳು ಕಳೆದವು. ಒಂದಿನ ಅವರು ಮನೆ ಖಾಲಿ ಮಾಡಿಕೊಂಡು ಹೋದರು. ಹೇಳದೇ ಏನೂ ಹೋಗಲಿಲ್ಲ. ಚೆನ್ನಾಗಿ ಮಾತನಾಡಿಸಿಕೊಂಡೇ ಹೋದರು. ಆಗ ಲಕ್ಷ್ಮಿ ಗರ್ಭಿಣಿಯಾಗಿದ್ದಳು. ಅವಳನ್ನು ತಬ್ಬಿಕೊಂಡು, ಜಗಳ ಎಲ್ಲ ಆಡದೆ ಖುಷಿಯಾಗಿರಬೇಕಮ್ಮಾ ಎಂದಳು ಮಾಳವಿಕಾ.
ಅವರು ಮನೆ ಖಾಲಿ ಮಾಡಿಕೊಂಡು ಹೋದ ದಿನ ಸಂಜೆ ಬಂದ ಮನೆ ಓನರು ನನ್ನನ್ನು ಕರೆದು, “ಏನ್ರೀ ಗಿರಿಧರ್ ನೀವು ಗಂಡ ಹೆಂಡತಿ ಅಷ್ಟೊಂದು ಜಗಳವಾಡ್ತೀರೇನ್ರೀ?” ಎಂದು ಕೇಳಿಬಿಟ್ಟರು. ಮನೆ ಖಾಲಿ ಮಾಡಿಕೊಂಡು ಹೊರಡುವಾಗ ರಾಘವ ಮತ್ತು ಮಾಳವಿಕಾ ಇದನ್ನೆಲ್ಲ ಅವರಿಗೆ ಹೇಳಿದರೊ ಅಥವಾ ಸುತ್ತಮುತ್ತಲಿನವರು ತಕರಾರು ಎತ್ತಿದ್ದಾರೊ ಎಂದು ಅನುಮಾನವಾಗತೊಡಗಿತು. ಆದರೆ ಅವರೇನೂ ಹೇಳಲಿಲ್ಲ. “ಸುಧಾರಿಸಿಕೊಂಡು ಇರಬೇಕ್ರೀ” ಎಂದರು.
ನನಗೆ ಯಾರು ಯಾರಿಂದಲೋ ಉಪದೇಶ ಪಡೆಯೋ ಹಾಗಾಯಿತಲ್ಲ ಎನ್ನಿಸಿ, ಆಗಲೇ ಮನೆ ಖಾಲಿ ಮಾಡಿಕೊಂಡು ಹೋಗುವಷ್ಟು ಸಿಟ್ಟು ಬಂತು. ಆದರೆ ಇಷ್ಟು ಕಡಿಮೆ ಬಾಡಿಗೆಗೆ ಇಷ್ಟು ಒಳ್ಳೆ ಮನೆಯನ್ನು ಮತ್ತೆಲ್ಲಿ ಹುಡುಕಿಕೊಂಡು ಹೋಗೋದು ಎನ್ನಿಸಿ ಪೆಚ್ಚುಮೋರೆ ಹಾಕಿಕೊಂಡು ನಿಂತೆ.
೨
ನಮಗಿಬ್ಬರಿಗೂ ಮಾತು ಕಲಿಸೋಕ್ಕೆ ಶುರು ಮಾಡಿದ್ದ ನಮ್ಮ ಮೂರೂವರೆ ವರ್ಷದ ಮಗ ಸುಧನ್ವ ಅದೊಂದಿನ “ಅಪ್ಪಾ, ಬೋಚಡಿ ಅಂದ್ರೇನು?” ಅಂತ ಸಿಡಿಲಿನ ಥರದ ಪ್ರಶ್ನೆ ಕೇಳಿಬಿಟ್ಟ. ಅವತ್ತು ಭಾನುವಾರವಾದ್ದರಿಂದ ನಾನು ಮನೆಯಲ್ಲೇ ಇದ್ದೆ. ತೀರಾ ಅಪರೂಪಕ್ಕೆ ತುಂಬಾ ಮೃದು ಹೃದಯಿಯಂತಿದ್ದ ಲಕ್ಷ್ಮಿ, ಪೂರಿ ಮಾಡ್ತೀನಿ ಎಂದು ರೆಡಿಯಾಗಿ ಕಿಚನ್ನಿನಲ್ಲಿದ್ದಳು. ಹೊಸದಾಗಿ ಕೊಡಿಸಿದ್ದ ರಿಮೋಟ್ ಕಾರನ್ನು ನನ್ನ ತೊಡೆಯ ಮೇಲಿಟ್ಟು ಓಡಿಸೋ ಪ್ರಯತ್ನ ಮಾಡ್ತಾ ಇದ್ದ ಸುಧನ್ವ, ಇದ್ದಕ್ಕಿದ್ದ ಹಾಗೇ ಅಂಥದೊಂದು ಪ್ರಶ್ನೆ ಕೇಳಿಬಿಟ್ಟಾಗ ಇಬ್ಬರೂ ಕಂಗಾಲಾಗಿಹೋದೆವು.
ಲಕ್ಷ್ಮಿ ನನ್ನನ್ನು ಇರಿಯುವ ಹಾಗೆ ನೋಡಿದಳು. ನನಗೆ ಅದರ ಅರ್ಥವಾಯಿತು. ಯಾಕೆಂದರೆ ಭೋಸಡಿ ಅಂತ ಅವಳನ್ನು ಮಾತುಮಾತಿಗೆ ಬೈಯುತ್ತಿದ್ದುದು ನಾನೇ. ಮೊದಲ ಬಾರಿಗೆ ಹೆಂಡತಿಯ ಎದುರು ಅವಳ ಮಾತಿಗೆ ಇನ್ನೊಂದು ಮಾತು ಎತ್ತದೇ ಬಾಯ್ಮುಚ್ಚಿಕೊಂಡ ದಿನ ಅದು. ಬೆಳೆಯುತ್ತಿರುವ ಮುಗ್ಧ ಮಗುವಿನ ಅಸ್ತಿತ್ವವನ್ನೇ ಅಲಕ್ಷಿಸಿ ನಾನು ಮಾಡುತ್ತಿರುವ ಪ್ರಮಾದ ಇಷ್ಟು ದೊಡ್ದ ಅನಾಹುತಕ್ಕೆ ಕಾರಣವಾಗುತ್ತಿದೆ ಎಂಬುದು ಹೊಳೆದದ್ದೇ, ಅಧೀರನಾಗಿಬಿಟ್ಟೆ.
ಹಾಗೆ ನೋಡಿದರೆ ಈ ಸುಧನ್ವ ನಮ್ಮಿಬ್ಬರ ಅವಿರತ ಜಗಳದ ನಡುವೆಯೇ ಸಂಸಾರದ ಫಲವಾಗಿ ಬಂದವ. ಜಗಳ ನಮ್ಮ ನಿತ್ಯದ ದಿನಚರಿಯೇ ಆಗಿತ್ತು. ಜಗಳದ ಕಾರಣದಿಂದಾಗಿಯೇ ನಮ್ಮಿಬ್ಬರ ನಡುವೆ ಸುಖದ ಹೊಳೆಯುಕ್ಕಿಸಬೇಕಿದ್ದ ಅದೆಷ್ಟೋ ರಾತ್ರಿಗಳು ವ್ಯರ್ಥವಾಗುತ್ತಿದ್ದವು. ಜಗಳವಿಲ್ಲದಿದ್ದಾಗಲೂ ಅದರ ಶೀತಲ ಸ್ವರೂಪದ ಮುಂದುವರಿಕೆಯ ಭಾಗದಂತೆ ಎಂಥದೋ ಅಸಮಾಧಾನದ ಕೆಂಡ ನಿಗಿನಿಗಿಯೆನ್ನುತ್ತಲೇ ಇರೋದು.
ಅದರ ಜೊತೆಜೊತೆಗೇ ಇಬ್ಬರಿಗೂ ದುಡಿಮೆಯ ಭಾರ ಮತ್ತು ಆ ನಿಮಿತ್ತದ ದಣಿವು. ಅವಳಿಗೆ ಬೆಳಗ್ಗೆ ಬೇಗ ಎದ್ದು ರೆಡಿಯಾಗಿ, ಏನೋ ಒಂದು ತಿಂಡಿ ಮಾಡಿ ಕೆಲಸಕ್ಕೆ ಹೊರಡೋದಿರುತ್ತಿತ್ತು. ನಾನೂ ಬೆಳಗ್ಗೆ ಹೋದರೆ ಮತ್ತೆ ಮನೆ ಅಂತ ಕಾಣುತ್ತಿದ್ದುದು ರಾತ್ರಿ ಎಂಟರ ಮೇಲೆಯೇ. ಬೇಗ ಊಟ ಮುಗಿಸಿ ಬೇಗ ನಿದ್ದೆ ಹೋಗಬೇಕಾದ ಧಾವಂತ ಇರೋದು. ಅಷ್ಟರ ನಡುವೆ ಏನೂ ಜಗಳವಾಗದಿದ್ದರೆ ಅದೇ ಸುದಿನ. ಅಂಥ ಸಮಯ ಅಪರೂಪಕ್ಕೊಮ್ಮೆ ಸಿಗುತ್ತಿದ್ದುದರಿಂದ, ಆಗ ಬಲು ಆಸೆಯಾಗೋದು. ಆಸೆಯಾಗಿ ಮೈಮುಟ್ಟಲು ಹೋದರೂ ಸಿಡುಕೋಳು. ಎಲ್ಲೋ ಒಮ್ಮೊಮ್ಮೆ ಪ್ರತಿರೋಧ ತೋರಿಸದೆ ಒಡ್ಡಿಕೊಂಡರೂ, ಅಲ್ಲಿ ವಿಸ್ತಾರವಾದ ಅನ್ಯೋನ್ಯತೆಗೆ ಆಸ್ಪದವೇ ಇರುತ್ತಿರಲಿಲ್ಲ. ಇಂಥ ವಿಲಕ್ಷಣ ಶೀಲದ ದಾಂಪತ್ಯದಲ್ಲೇ ಸುಧನ್ವ ಹುಟ್ಟಿದ್ದ.
ಲಕ್ಷ್ಮಿಯನ್ನು ನಾನು ಮದುವೆ ಮಾಡಿಕೊಂಡದ್ದು ಮೊದಲ ನೋಟದಲ್ಲೇ ಮೆಚ್ಚಿ. ಅವಳು ನಾನು ನೋಡಿದ್ದ ಹೆಣ್ಣುಗಳ ಪೈಕಿ ಐದೊ ಆರನೆಯವಳೊ ಆಗಿದ್ದಳು. ಕುಮಟಾದ ಹೆಗಡೆಯವಳು. ಅವಳ ಮನೆಮಂದಿಗೆ ನ ಉಚ್ಚಾರಣೆ ಬರ್ತಿರಲಿಲ್ಲ. ಮನೆ ಅನ್ನೋದನ್ನ ಮಣೆ ಅಂತಿದ್ದರು. ಹಾಗೇ ಳ ಕೂಡ ಅವರ ನಾಲಗೆಯಲ್ಲಿ ಲ ಆಗಿ ತುಂಬಾ ಅವಾಂತರವಾಗುತ್ತಿತ್ತು. ಹೇಳ್ತೀನಿ ಅನ್ನೋದನ್ನ ಹೇಲ್ತೀನಿ ಅಂದುಬಿಡೋರು.
ಇವಳನ್ನು ನೋಡಲು ಹೋದ ದಿನವಂತೂ ಎಲ್ಲೆಲ್ಲೋ ಏನೇನೋ ಬಂದು ನಾವು ನಗಲಾರದೆ ಅಳಲಾರದೆ ಬೆವರಿಬಿಟ್ಟಿದ್ದೆವು. ಕಡೆಗೆ ಅವರು ಮಾತಾಡೋದೇ ಹಾಗೆ ಅಂತ ಗೊತ್ತಾಗಿ ನಿರಾಳವಾದೆವು. ಮೊದಮೊದಲು ಮುಜುಗರವಾಗುತ್ತಿದ್ದುದು ಕ್ರಮೇಣ ಅಭ್ಯಾಸವಾಗಿಹೋಯಿತು. ನನಗೆ ಇದೆಲ್ಲವನ್ನೂ ಮೀರಿ, ಕಂಡ ಮೊದಲ ನೋಟದಲ್ಲೇ ಲಕ್ಷ್ಮಿ ಹಿಡಿಸಿಬಿಟ್ಟಿದ್ದಳು. ಅಲ್ಲೀತನಕ ನಾಲ್ಕೈದು ಹೆಣ್ಣುಗಳನ್ನು ನೋಡಿ, ನಾಲ್ಕೈದು ಅವತಾರಗಳನ್ನೇ ನೋಡಿದ ಭೀಕರ ಅನುಭವವಾಗಿತ್ತು ಬೇರೆ. ದಾಂಡೇಲಿ ಕಡೆ ಒಂದು ಊರು ಬರುತ್ತೆ. ಅದರ ಹೆಸರು ನೆನಪಾಗ್ತಾ ಇಲ್ಲ. ಅಲ್ಲೊಬ್ಬಳನ್ನು ನೋಡೋಕ್ಕೆ ಹೋಗಿದ್ದೆವು. ಹೋದದ್ದೇ ಅವಳ ಅಪ್ಪ, ನಿನಗೆ ಎಷ್ಟು ಎಕರೆ ಜಮೀನು ಬೇಕು ಹೇಳು ಅನ್ನೋಕ್ಕೆ ಶುರು ಮಾಡಿದ.
ಅರೆ, ನಾವು ಹುಡುಗೀನ್ನ ನೋಡೋಕ್ಕೆ ಬಂದಿದ್ದೊ ಅಥವಾ ಜಮೀನು ವ್ಯವಹಾರಕ್ಕೆ ಬಂದಿದ್ದೊ ಅಂತ ಗೊಂದಲಕ್ಕೆ ಕೆಡವೋ ಹಾಗೆ ಮಾತು ಮಾತಿಗೆ ಜಮೀನು ಜಮೀನು ಅಂದ. ಹಾಗೆ ಅವನು ಹೇಳುತ್ತಿರೋವಾಗಲೇ ಹುಡುಗಿಯನ್ನು ಕರಕೊಂಡು ಬಂದ್ರು. ಚಹ ಕೊಟ್ಟಳು. ಅವಳು ಯಾವ ದಿಕ್ಕಿಗೆ ನೋಡುತ್ತಿದ್ದಾಳೆ ಅನ್ನೋದೇ ಗೊತ್ತಾಗಲಿಲ್ಲ. ಚಹವನ್ನು ಮಾತ್ರ ಒಬ್ಬರಾದ ಮೇಲೆ ಒಬ್ಬರಿಗೆ ಕರೆಕ್ಟಾಗಿಯೇ ಕೊಟ್ಟಳು. ಅವಳಪ್ಪ ಒಡ್ಡಿದ ಜಮೀನಿನ ಆಮಿಷ, ಹೆಣ್ಣು ಹೆತ್ತವನ ಅನಿವಾರ್ಯ ಸಂಕಟವೊ ಅಥವಾ ಅದು ಅವನೊಳಗಿನದ್ದೇ ದುಷ್ಟತನವೊ ಅರ್ಥವಾಗಲಿಲ್ಲ.
ಹೀಗೆ ಒಂದಲ್ಲ ಒಂದು ಅತಿರೇಕಗಳನ್ನೇ ಕಂಡಿದ್ದ ನನಗೆ, ಇಲ್ಲಿ ಮಾತ್ರ ಬರಬಾರದ ಕಡೆ ಣ ಮತ್ತು ಲ ಬರೋದು ಬಿಟ್ಟರೆ ಮತ್ತೇನೂ ವಿಚಲಿತಗೊಳಿಸುವಂಥದ್ದು ಆಗಲಿಲ್ಲ. ಆದರೆ, ನನ್ನ ಮನಸ್ಸಿಗೆ ತುಂಬಾ ಹಿಡಿಸಿಬಿಟ್ಟ ಲಕ್ಷ್ಮಿಗೂ ಣ ಲ ದೋಷ ಇದೆಯೇನೋ ಎಂಬ ಆತಂಕವೊಂದೇ ಬಲವಾಗಿ ಕಾಡಿತ್ತು. ಅವಳ ಜೊತೆ ಮಾತಿಗೆ ಅವಕಾಶ ಸಿಕ್ಕಾಗ ಅವಳಿಂದ ಆ ಉಚ್ಚಾರಣೆಗಳಿರೋ ಪದಗಳೇ ಬರೋವಂಥ ಪ್ರಶ್ನೆ ಕೇಳಿ ಅದನ್ನು ಬಗೆಹರಿಸಿಕೊಂಡಿದ್ದೆ. ಮುಂದೆ ಬಹಳ ಬೇಗನೆ ಮದುವೆ ನಡೆದುಬಿಟ್ಟಿತ್ತು.
ನಾನು ತುಂಬ ಮೆಚ್ಚಿದ್ದ ಲಕ್ಷ್ಮಿ ನಿಜವಾಗಿಯೂ ಜಗಳಗಂಟಿ ಸ್ವಭಾವದವಳೇ ಆಗಿದ್ದಳಾ ಅಥವಾ ಅವಳನ್ನು ನಾನು ಹಾಗೆ ಬದಲಿಸಿದೆನಾ ಅನ್ನೋದು ಇವತ್ತಿಗೂ ಅರ್ಥವಾಗಿಲ್ಲ. ಅತ್ತೆ ನಾದಿನಿಯರೆಲ್ಲ ಇರೋ ಮನೆಯೊಳಗೆ ಅವಳಿದ್ದಿದ್ದರೆ ಆಗ ಜಗಳಗಳಾಗಲು ಬೇರೆ ಬೇರೆ ಕಾರಣಗಳು ಹುಡುಕಿಕೊಂಡು ಬರುತ್ತಿದ್ದವೇನೊ. ಆದರೆ ಸಂಸಾರ ಶುರು ಮಾಡಿದಾಗಿನಿಂದ ನಾವಿಬ್ಬರೇ ಇದ್ದಿದ್ದು. ಅದ್ಯಾವ ಬಿಂದುವಿನಿಂದ ಇದೆಲ್ಲ ಶುರುವಾಯಿತು ಎಂದು ಕೆದಕಿಕೊಂಡು ಹೋದರೂ ಮೂಲ ಸಿಗುತ್ತಿಲ್ಲ.
ತೀರಾ ನೆನಪಿಸಿಕೊಳ್ಳುತ್ತ ಹೋದರೆ, ಮೊದಲ ರಾತ್ರಿ ಕೂಡ ಅವಳನ್ನು ಸ್ಪರ್ಶದಲ್ಲಿ ತನ್ಮಯಗೊಳಿಸದೆ, ಮಾತಿನಿಂದಲೇ ಮಣಿಸಲು ಬಯಸಿದ್ದೆ ಅನ್ನೋದು ಹೊಳೆಯುತ್ತದೆ. “ನನಗೆ ಎಕರೆಗಟ್ಟಲೆ ಜಮೀನು ಕೊಟ್ಟು ಹೆಣ್ಣು ಕೊಡೋರು ಇದ್ದರು ಗೊತ್ತಾ? ಆದರೆ ನಾನು ನಿನ್ನನ್ನೇ ಮದುವೆಯಾದೆ” ಎಂದಿದ್ದೆ. ಅವಳು ನನಗೆ ಜೀವನವಿಡೀ ವಿಧೇಯಳಾಗಿರಲಿ ಎಂಬುದು ನನ್ನ ಆ ಪ್ರಸ್ತಾಪದ ಉದ್ದೇಶವಿದ್ದ ಹಾಗಿತ್ತು. ಆದರೆ ಲಕ್ಷ್ಮಿ “ಎಕರೆಗಟ್ಟಲೆ ಜಮೀನು ಕೊಡೋಕ್ಕೆ ಬಂದಿದ್ದ ಮಾವನ ಮಗಳನ್ನು ನೆನೆಸಿಕೊಂಡು ನನ್ನ ಮೈ ಮುಟ್ಟೋದು ಬೇಡ” ಎಂದು ಕೊಸರಿಕೊಂಡಿದ್ದಳು.
ಅಲ್ಲಿಂದ ತಿಂಗಳ ಕಾಲ ಅವಳು ನನ್ನನ್ನು ಹತ್ತಿರವೇ ಬಿಟ್ಟುಕೊಳ್ಳಲಿಲ್ಲ. ವ್ರತ ಅಂದಳು. ಏನು ವ್ರತ ಅಂತ ಯಾರನ್ನೂ ಕೇಳೋ ಹಾಗೂ ಇರಲಿಲ್ಲ. ಅವಳು ವ್ರತ ಮಾಡಿದಳೊ ಬಿಟ್ಟಳೊ; ನನಗೆ ಮಾತ್ರ ನಿಜವಾಗಿಯೂ ವ್ರತದ ದಿನಗಳೇ ಆಗಿಬಿಟ್ಟಿದ್ದವು ಅವು. ಆಫೀಸಿನ ರಿಸೆಪ್ಷನಿಸ್ಟ್ ಸವಿತಾಳನ್ನು ನೆನೆಯಲೇಬೇಕು.
ಅವಕಾಶ ಸಿಕ್ಕಾಗೆಲ್ಲ ಮೈಮುಟ್ಟಿ ಮಾತನಾಡಿಸುವ, ಮಧ್ಯಾಹ್ನದ ಊಟಕ್ಕೆ ನಾವಿಬ್ಬರೇ ಇದ್ದರೆ ತೀರಾ ಮೈಗೆ ಮೈ ಒತ್ತುವಂತೆ ಕೂತು, ತಾನು ತರುವ ರುಚಿ ರುಚಿ ಸಾಂಬಾರು ಪಲ್ಯವನ್ನು ಟೇಸ್ಟ್ ಮಾಡಿ ಟೇಸ್ಟ್ ಮಾಡಿ ಎಂದು ಮತ್ತೆ ಮತ್ತೆ ಬಡಿಸುವ, ಹಾಗೆ ಬಡಿಸೋ ಧಾವಂತದಲ್ಲಿ ತುಂಬಿದೆದೆ ನನ್ನೆದುರು ಚೆಲ್ಲಿಕೊಳ್ಳೋ ಹಾಗೆ ತುಳುಕಾಡುವುದರ ಬಗ್ಗೆ ಗಮನವನ್ನೇ ಕೊಡದ ಅಥವಾ ಅದೆಲ್ಲ ಗೊತ್ತಿದ್ದೂ ಬೇಕೆಂತಲೇ ತಿಳಿಯದ ಹಾಗೆ ನಟಿಸುತ್ತಿದ್ದಾಳಾ ಅನ್ನೋ ಅನುಮಾನ ಬರುವಂತೆ ಇರುವ ರಿಸೆಪ್ಷನಿಸ್ಟ್ ಸವಿತಾ ಒಬ್ಬಳಿಲ್ಲದಿದ್ದರೆ ನನ್ನ ಬದುಕು ಅಸಹನೀಯವೆನ್ನಿಸಿಬಿಟ್ಟಿರೋದು.
ಸುಧನ್ವ ಹುಟ್ಟುವುದಕ್ಕೆ ಮುಂಚೆ ಕೆಲ ತಿಂಗಳು ಮತ್ತು ಹುಟ್ಟಿದ ಮೇಲೆ ಮತ್ತೆ ಕೆಲ ತಿಂಗಳು ಲಕ್ಷ್ಮಿ ತನ್ನ ತಾಯಿಯ ಮನೆಯಲ್ಲೇ ಇದ್ದಳು. ನಾನೇ ಆಗಾಗ ಹೆಗೆಡೆಗೆ ಹೋಗಿ ಬರುವುದು ರೂಢಿಯಾಗಿತ್ತು. ಅಲ್ಲಿಂದ ಮಗನೊಟ್ಟಿಗೆ ಮರಳಿದ ಮೇಲೂ ಮನೆಗೆ ನೆಂಟರ ಕಡೆಯ ಒಬ್ಬರಲ್ಲ ಒಬ್ಬರು ಬರುತ್ತಲೇ ಇರೋರು. ಮಗ ಸ್ವಲ್ಪ ಬೆಳೆದ ಹಾಗೆ ಅದೆಲ್ಲ ನಿಧಾನವಾಗಿ ಕಡಿಮೆಯಾಗತೊಡಗಿತು.
ಅಲ್ಲೀತನಕ ನೆಂಟರಿಂದ ಮನೆ ತುಂಬಿರುತ್ತಿದ್ದುದರಿಂದ ಮತ್ತು ಮಗನ ಆರೈಕೆಯಲ್ಲೇ ಬಹುಪಾಲು ತೊಡಗೋ ಹಾಗಾಗಿದ್ದುದರಿಂದ ಜಗಳವಾಡಲು ಪುರುಸೊತ್ತೇ ಆಗುತ್ತಿರಲಿಲ್ಲ. ಆದರೆ ಹುಟ್ಟುಗುಣ ಘಟ್ಟ ಹತ್ತಿದರೂ ತಪ್ಪೋದಿಲ್ಲ ಅಂತಾರಲ್ಲ, ಹಾಗೆ ನಾವು ಮತ್ತೆ ಜಗಳ ಶುರುವಿಟ್ಟುಕೊಂಡಿದ್ದೆವು. ಎಷ್ಟೋ ಸಲ ಮಗನ ಎದುರಲ್ಲೇ. ಮಗನಿಗೆ ಸ್ನಾನ ಮಾಡಿಸಿ ಬಟ್ಟೆ ಹಾಕೋ ಹೊತ್ತಲ್ಲೂ ನಮ್ಮ ಕದನ ಶುರುವಾಗಿಬಿಡುತ್ತಿತ್ತು. ಅವನ ಚಡ್ಡಿ ಒಬ್ಬರ ಕೈಯಲ್ಲಿ ಮತ್ತು ಶರ್ಟು ಒಬ್ಬರ ಕೈಯಲ್ಲಿ ಇರೋದು.
ಅವನು ಬಿಟ್ಟ ಮೈ ಬಿಟ್ಟುಕೊಂಡು, ತೆರೆದ ಬಾಯಿ ತೆರೆದುಕೊಂಡು, ನಾವಿಬ್ಬರೂ ದೊಡ್ಡ ಬಾಯಲ್ಲಿ ಒಬ್ಬರ ಮೇಲೊಬ್ಬರು ಎಗರಾಡಿಕೊಳ್ಳೋದನ್ನು, ಜೋರುಜೋರಾಗಿ ಕೈಯಾಡಿಸಿಕೊಂಡು ಕೆರಳೋದನ್ನು ಸಹನಶೀಲ ಪ್ರೇಕ್ಷಕನಂತೆ ನೋಡುತ್ತ ಹಾಗೇ ನಿಂತೇಬಿಟ್ಟಿರುತ್ತಿದ್ದ.
೩
ಕೆಲಸ ಮುಗಿಸಿಕೊಂಡು, ತರಕಾರಿ ತರೋಕ್ಕೆ ಅಂತ ಹೋದಾಗ ಕಂಡ ಅವಳನ್ನು ಮತ್ತೆ ಮತ್ತೆ ನೋಡಿದೆ. ಆಶ್ಚರ್ಯವೆನ್ನಿಸಿತು. ಅವಳು ಕಾಲೇಜಿನಲ್ಲಿ ನನ್ನ ಕ್ಲಾಸ್ಮೇಟ್ ಆಗಿದ್ದ ರಾಣಿಯಲ್ಲವಾ? ಸಂಶಯವೇ ಇಲ್ಲ. ಆದರೆ ಕೇಳೋದು ಹೇಗೆ? ಅಷ್ಟರಲ್ಲಿ ಅವಳ ದೃಷ್ಟಿಯೂ ನನ್ನ ಮೇಲೆ ಬಿದ್ದಿತ್ತು. ಅವಳ ಮುಖದಲ್ಲಿ ಪರಿಚಯದ ನಗೆಯರಳಿತು. ಆದರೂ ಅಲ್ಲಿ ಮರುಕ್ಷಣವೇ ಸಣ್ಣ ಅನುಮಾನದ ಗೆರೆ ಮೂಡಿಕೊಂಡಿತು.
ಇಬ್ಬರೂ ತರಕಾರಿ ಮಾರುಕಟ್ಟೆಯ ಆ ಸಂದಣಿಯಲ್ಲಿ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತ “ಅರೆ, ಗಿರಿಯಲ್ಲವಾ?”, “ಅರೆ ರಾಣಿಯಲ್ಲವಾ?” ಎಂದು ಒಮ್ಮೆಲೇ ಒಬ್ಬರನ್ನೊಬ್ಬರು ಕೇಳಿಬಿಟ್ಟೆವು. “ಎಲ್ಲಿ ನಾಪತ್ತೆಯಾಗಿಬಿಟ್ಟಿದ್ದೆಯೋ ಮಾರಾಯ?” ಎಂದು ತಕರಾರಿನ ದನಿಯಲ್ಲಿ ಕೇಳುತ್ತಲೇ ರಾಣಿ ನನ್ನನ್ನು ಅಲ್ಲಿಂದ ಹೊರಗೆಳೆದುಕೊಂಡುಬಂದಳು. ಅವಳಲ್ಲಿ ಖುಷಿ ಕುಣಿಯುತ್ತಿತ್ತು. “ನೀನು ಇಲ್ಲಿ ಹೀಗೆ ಸಿಕ್ಕಿದ್ದಿ ಎಂದರೆ ಎಂಥ ಪವಾಡ ನೋಡು. ನಂಬೋಕ್ಕೇ ಆಗ್ತಿಲ್ಲ” ಎಂದಳು. ನನಗೂ ಅಷ್ಟೆ ಎಂಬ ನನ್ನ ಮಾತು ಕೇಳಿಸಲೇ ಇಲ್ಲವೆಂಬಂತೆ, “ಹುಡುಗಿಯರ ಕೈ ಟಚ್ಚಾದರೂ ಪುಕ್ಕಲನ ಥರಾ ಬೆವರುತ್ತಿದ್ದೋನು ಮದುವೆ ಗಿದುವೆ ಆದೆಯೊ ಇಲ್ಲವೊ?” ಎಂದು ಬುಡಕ್ಕೇ ಕೊಟ್ಟಳು.
“ಆ ಹರಕಂತ್ರ ಮಾಧವ ಎಲ್ಲಿ ಹೋಗಿ ಸತ್ತನೊ. ಮದುವೆಯಾದ ಮೇಲೆ ಇದ್ದಿದ್ದೇ, ಅದರೊಳಗೇ ಸ್ವಲ್ಪ ಮಸ್ತಿ ಮಾಡೋಣ ಅಂತ ಸಿನಿಮಾಕ್ಕೆ ಹೋಗೋಣ್ವೇನೊ ಅಂತ ಕರೆದಿದ್ದೆ. ಕಣ್ಣು ಪಿಳಿ ಪಿಳಿ ಬಿಟ್ಟುಕೊಂಡು ನೋಡಿದ್ದ. ಅದರ ಮಾರನೇ ದಿನದಿಂದ ನಾನು ಎದುರಾದರೆ ಸಾಕು ಮುಖ ತಪ್ಪಿಸಿಕೊಂಡು ಹೋಗೋಕ್ಕೆ ಶುರು ಮಾಡಿದ್ದ. ಅವನೂ ಒಬ್ಬ ಪುಕ್ಕಲ” ಎಂದು ದೊಡ್ಡಕ್ಕೆ ನಗಾಡಿದಳು.
“ಮದುವೆಯಾದ ಮೇಲೆ ಎರಡು ವರ್ಷ ಮಾತ್ರ ಊರಲ್ಲಿದ್ವಿ. ಆಮೇಲೆ ಇವರಿಗೆ ಬ್ಯಾಂಕಲ್ಲಿ ಕೆಲಸ ಸಿಕ್ಕಿತು. ಇಲ್ಲಿಗೆ ಬಂದುಬಿಟ್ವಿ. ಇಬ್ಬರು ಗಂಡುಮಕ್ಕಳು. ದೊಡ್ಡವ ಎಸೆಸೆಲ್ಸಿ. ಸಣ್ಣವ ಈ ಸಲ ಹೈಸ್ಕೂಲು ಮೆಟ್ಟಿಲು ಹತ್ತಿದ್ದಾನೆ. ಪುರುಸೊತ್ತೇ ಕೊಡದೆ ಒಂದರ ಬೆನ್ನಿಗೊಂದು ಮಕ್ಕಳನ್ನು ಮಾಡಿಕೊಂಡುಬಿಟ್ವಿ” ಎಂದು ಅವತ್ತಿನದೇ ಚೆಲ್ಲುತನದಲ್ಲಿ ಅರಳಿಕೊಳ್ಳುತ್ತ, ಆ ಸಂಜೆಯ ತೇವದಲ್ಲೂ ನಾನು ಬೆವರಲು ಕಾರಣಳಾದಳು. ಮನೆ ಎಲ್ಲಿ ಕೇಳಿದಳು. ಹೇಳಿದೆ. “ಅಯ್ಯೋ ಅಷ್ಟು ದೂರವಾ? ನಮ್ಮದು ಇಲ್ಲೇ. ಐದೇ ನಿಮಿಷದ ದಾರಿ. ಬಾ ಹೋಗುವಾ” ಎನ್ನುತ್ತಾ, ಸಿಕ್ಕ ಆಟೋವೊಂದರಲ್ಲಿ ನನ್ನನ್ನು ಎಂಥದೋ ಮೂಟೆ ತುರುಕುವವಳ ಥರಾ ತಳ್ಳಿ ಹೊರಡಿಸಿಯೇಬಿಟ್ಟಳು.
ಗಂಡ ತಿಂಗಳ ಹಿಂದೆ ಆಕ್ಸಿಡೆಂಟಲ್ಲಿ ಕಾಲು ಫ್ರಾಕ್ಚರ್ ಆಗಿ ಮಲಗಿಕೊಂಡಿದ್ದಾನೆ ಎಂದಳು. ಇನ್ನೂ ಒಂದಿಷ್ಟು ದಿನ ಎದ್ದು ಓಡಾಡೋ ಹಾಗಿಲ್ಲ ಎಂದಳು. “ತುಂಬಾ ಪೆದ್ದು ಪೆದ್ದು. ಬ್ಯಾಂಕಿನಲ್ಲಿ ದುಡ್ಡು ಎಣಿಸುವಾಗ ಎಷ್ಟು ಒದ್ದಾಡ್ತಾರೋ ಅನ್ನಿಸುತ್ತೆ ಒಂದೊದ್ಸಲ. ಅಷ್ಟು ಪೆದ್ದು, ಅಷ್ಟು ಸಾಧು. ಆದರೆ ತುಂಬಾ ಒಳ್ಳೆಯವರು” ಎಂದಳು.
ಆಟೋ ನಿಂತಿತು. “ಇದೇ ಮನೆ. ಬಾ” ಎನ್ನುತ್ತ ಗೇಟು ತೆರೆದಳು. ನಮ್ಮ ಥರದ ವಠಾರದಲ್ಲಿರೋ ಮನೆಯಲ್ಲ. ಬಾಡಿಗೆ ಏನಿಲ್ಲವೆಂದರೂ ನಾಲ್ಕೈದು ಸಾವಿರ ಇರಬಹುದು ಎಂದು ಲೆಕ್ಕ ಹಾಕುತ್ತಲೇ ಅವಳ ಹಿಂದೆ ನಡೆದೆ.ಮನೆಯೊಳಗೆ ಸೋಫಾದ ಮೇಲೆ ನೋಟ್ ಬುಕ್ಕುಗಳನ್ನು ಹರಡಿಕೊಂಡು ಹೋಂ ವರ್ಕ್ ಮಾಡಿಕೊಳ್ಳುತ್ತಿದ್ದ ಅವಳ ಮಕ್ಕಳು, ನನ್ನನ್ನು ಕಂಡು ನನಗೆ ಕುಳಿತುಕೊಳ್ಳಲು ಸೋಫಾ ಬಿಟ್ಟುಕೊಡಬೇಕೇನೊ ಎಂಬ ಯೋಚನೆಗೆ ಬಿದ್ದವರಂತೆ ಕಂಡರು. “ನೋಡ್ರೊ, ಇವರು ಗಿರಿ ಅಂಕಲ್ ಅಂತಾ. ನನ್ನ ಕಾಲೇಜು ಫ್ರೆಂಡ್” ಎಂದು ಹೇಳಿದವಳೇ, “ಬಾರೊ, ಒಳಗೇ ಹೋಗೋಣ. ಇವರು ಅಲ್ಲೇ ಮಲಗಿರ್ತಾರೆ” ಎಂದು ಕರೆದುಕೊಂಡು ಹೋದಳು.
ಅದು ಅವರ ಬೆಡ್ ರೂಮು. ಅವಳ ಗಂಡ ಮಲಗಿದ್ದ. ಕಾಲಿನಲ್ಲಿ ಪ್ಲಾಸ್ಟರ್ ಇತ್ತು. ಗಂಡನಿಗೆ ನನ್ನನ್ನು ಪರಿಚಯ ಮಾಡಿಕೊಟ್ಟ ರಾಣಿ, ಗಂಡ ಮಲಗಿದ್ದ ಮಂಚದ ಪಕ್ಕವೇ ಚೇರೊಂದನ್ನು ಇಟ್ಟು ಕುಳಿತುಕೊಳ್ಳಲು ಹೇಳಿದಳು. ಕುಳಿತೆ. “ಕಾಲೇಜು ಮುಗಿದ ಮೇಲೆ ಇವನ ಪತ್ತೆಯೇ ಇರಲಿಲ್ಲ. ಇವತ್ತು ಕೊತ್ತಂಬರಿ ಸೊಪ್ಪು ತಕ್ಕೊಳ್ಳುವಾಗ ಕೊತ್ತಂಬರಿ ಸೊಪ್ಪಿನ ಜೊತೆಗೇ ಸಿಕ್ಕಿಬಿಟ್ಟ, ಕಳೆಹುಲ್ಲು ಸಿಗೋ ಥರಾ” ಎಂದು ಮತ್ತೆ ದೊಡ್ಡಕ್ಕೆ ನಕ್ಕಳು.
“ಹಾಗೆಲ್ಲ ಯಾಕೆ ಅಂತೀಯೇ ಮಾರಾಯ್ತಿ?” ಎಂದು ಹೆಂಡತಿಯನ್ನು ಸಣ್ಣಗೆ ಗದರಿದ ಅವನು, “ಇವಳ ಮಾತೇ ಹಾಗೆ. ನೀವು ಬೇಜಾರಾಗಬೇಡಿ” ಎಂದ. ರಾಣಿ ಮತ್ತೆ ನಗುತ್ತ, ಚಹ ಮಾಡುತ್ತೇನೆ ಅಂತ ಹೊರಟಳು. ಅವನು ನನ್ನ ಕೆಲಸ, ಅದೂ ಇದೂ ಅಂತ ವಿಚಾರಿಸತೊಡಗಿದ. ನಾನು ಅಚವೆಯವನು ಎಂದು ಗೊತ್ತಾದ ಕೂಡಲೇ, ತಾನು ಮತ್ತು ತನ್ನ ಫ್ರೆಂಡ್ಸ್ ಎಲ್ಲ ಸೈಕಲ್ಲು ತುಳಕೊಂಡು ಅಲ್ಲಿಗೆ ಯಕ್ಷಗಾನ ನೋಡೋಕ್ಕೆ ಬರುತ್ತಿದ್ದುದನ್ನು ನೆನೆದ.
ರಾಣಿ ಚಹ ತಂದಳು. ಮಂಚದ ಮೇಲೆ ಗಂಡನ ಪಕ್ಕ ಕುಳಿತುಕೊಳ್ಳುತ್ತ, “ಇವರ ಬಗ್ಗೆ ಒಂದು ಇಂಪೊರ್ಟೆಂಟ್ ವಿಷಯ ಹೇಳಲೇ ಇಲ್ಲ ನೋಡು” ಎಂದಳು. “ಇವರು ನನ್ನ ಮೆಚ್ಚಿ ಮದುವೆಯಾದದ್ದಲ್ಲವೋ. ಹಳೇ ಲವ್ ಫೇಲ್ಯೂರ್ ಆದ ಮೇಲೆ ನನ್ನ ಕಟ್ಟಿಕೊಂಡದ್ದು” ಎಂದಳು. “ಅಯ್ಯೋ ಮಾರಾಯ್ತಿ, ಅವರನ್ನು ಸ್ವಲ್ಪ ಬಿಡೆ. ನಮ್ಮ ಕತೆ ಹೇಳಿ ಯಾಕೆ ಅವರ ತಲೆ ತಿಂತಿಯಾ?” ಎಂದು ಅವನು ಮತ್ತೊಮ್ಮೆ ಹೆಂಡತಿಯನ್ನು ಸಣ್ಣಗೆ ಗದರಿದ.
“ನೀವು ಸುಮ್ಮನಿರಿ” ಎಂದು ಅವನ ಬಾಯಿಮುಚ್ಚಿಸಿದ ರಾಣಿ, “ಇವರು ತುಂಬ ಇಷ್ಟಪಟ್ಟಿದ್ದ ಹುಡುಗಿ ಇವರಿಗೆ ಸಿಗಲೇ ಇಲ್ಲ. ಇನ್ನಾರದೋ ಜೊತೆ ಅವಳ ಮದುವೆಯಾಯ್ತಂತೆ. ದೇವದಾಸನಾಗಿದ್ದ ಇವರಿಗೆ ನಾನು ಸಿಕ್ಕಿದೆ ನೋಡು” ಎಂದಳು. “ಆದರೆ ನನ್ನ ರಾಜನ ದೊಡ್ಡ ಗುಣ ಏನು ಗೊತ್ತೇನೊ? ಮದುವೆಗೆ ಮುಂಚೆಯೇ ಅಂದರೆ ನನ್ನನ್ನು ನೋಡೋಕ್ಕೆ ಬಂದ ದಿನವೇ ನನ್ನ ಬಳಿ ಲವ್ ಫೇಲ್ಯೂರ್ ವಿಷಯ ಹೇಳಿದ್ದು” ಎನ್ನುತ್ತ ಗಂಡನ ಮೇಲೆ ಬಾಗಿ ಅವನ ಕೆನ್ನೆಗೆ ಕೆನ್ನೆ ಹಚ್ಚಿ ಒತ್ತಿಕೊಂಡಳು.
“ನಿನಗೆ ನಾನು ಇಷ್ಟವಾದೆನೊ ಇಲ್ಲವೊ ಎಂದು ಇವರು ಅವತ್ತು ನನ್ನ ಬಳಿ ಕೂತು ಅನುಮಾನಿಸಿದಾಗ ನಂಗಂತೂ ನಗು ತಡೆಯೋಕ್ಕೇ ಆಗಿರಲಿಲ್ಲ ಗೊತ್ತಾ?” ಎಂದು ನಗಾಡಿದಳು. “ನೀನೂ ಏನಾದರೂ ಹೇಳೋದಿದ್ದರೆ ಹೇಳು ಅಂದಾಗ ನಾನು ಹರಕಂತ್ರ ಮಾಧವನ ವಿಷಯ ಹೇಳಿದ್ದೆ ಗೊತ್ತಾ?” ಎಂದು ಮತ್ತೆ ನಕ್ಕಳು. ಈಗ ಅವನಿಗೂ ನಗು ತಡೆಯೋಕ್ಕೆ ಆಗಲಿಲ್ಲ.
“ಇರು, ನಿನಗೆ ಇವರ ಹುಡುಗಿಯನ್ನು ತೋರಿಸ್ತೇನೆ” ಎನ್ನುತ್ತ ಮಂಚದ ಅಡಿಯಲ್ಲಿ ಕೈಹಾಕಿ ಒಂದು ಸೂಟ್ಕೇಸ್ ಎಳೆದಳು. “ನಿಮ್ಮ ಲವರ್ ಹೇಗಿದ್ದಳು ನೋಡ್ಬೇಕು ಅಂತ ತುಂಬಾ ಬಲವಂತ ಮಾಡಿದಾಗ ಈ ಫೋಟೋ ಅದೆಲ್ಲೋ ಬಚ್ಚಿಟ್ಟಿದ್ದನ್ನು ತೆಗೆದುಕೊಟ್ಟರಪ್ಪ” ಎನ್ನುತ್ತ ಲ್ಯಾಮಿನೇಟ್ ಮಾಡಿದ್ದ ಫೋಟೋ ಎತ್ತಿಕೊಟ್ಟಳು. ನೋಡಿದೆ. ಸುಂದರವಾಗಿದ್ದ ಹುಡುಗಿ. ಮೂಗಿನ ಮೇಲೆ ಸಣ್ಣ ಗಾಯದ ಮಾರ್ಕೊಂದು ಹಾಗೇ ಉಳಿದುಬಿಟ್ಟಿದ್ದರಿಂದ ಇನ್ನೂ ಮುದ್ದಾಗಿ ಕಾಣಿಸುತ್ತಿದ್ದಳು.
“ಎಷ್ಟೇ ಅಂದರೂ ನನ್ನನ್ನು ಯಾವತ್ತೂ ಕಾಡದ ಸವತಿ. ಇವರ ಮನಸ್ಸಲ್ಲಿರೋ ಅವಳ ನೆನಪು ಹೀಗಾದರೂ ಉಳಿಸಿಕೊಳ್ಳೋಣ ಅಂತ ಈ ಫೋಟೊವನ್ನು ಹೀಗೆ ನಾನೇ ಜೋಪಾನವಾಗಿ ಇಟ್ಟುಕೊಂಡು ಬಂದಿದ್ದೇನೆ” ಎಂದಳು ರಾಣಿ. ನಾನು, ಒಂದು ವೇಳೆ ಈ ಪೋಟೋದಲ್ಲಿ ಈ ಹುಡುಗಿಯ ಜಾಗದಲ್ಲಿ ನನ್ನ ಲಕ್ಷ್ಮಿಯೇನಾದರೂ ಇದ್ದಿದ್ದರೆ ಇಷ್ಟು ಹೊತ್ತಿಗೆ ನನ್ನ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ಯೋಚಿಸುತ್ತ, ಹಾಗೇ ಫೋಟೋವನ್ನು ದಿಟ್ಟಿಸುತ್ತ ಕುಳಿತುಬಿಟ್ಟೆ.
೪
ಮನೆಗೆ ಬಂದಾಗ ಸುಧನ್ವ ಮಲಗಿದ್ದ. ಬಾಗಿಲು ತೆರೆದ ಲಕ್ಷ್ಮಿಗೆ ಗೊತ್ತಾಗದ ಹಾಗೆ ಇಟ್ಟುಕೊಳ್ಳಬೇಕೆಂದರೂ, ಕೈಲಿದ್ದ ಮಲ್ಲಿಗೆ ತನ್ನ ಘಮದ ಮೂಲಕವೇ ಸುಳಿವು ಕೊಟ್ಟುಬಿಟ್ಟಿತ್ತು. ಅಚ್ಚರಿ ಮತ್ತು ಅನುಮಾನದ ಕಣ್ಣಿಂದ ನನ್ನನ್ನೇ ದಿಟ್ಟಿಸತೊಡಗಿದಳು ಲಕ್ಷ್ಮಿ. ನಾನು ಮೋಗಮ್ಮಾಗಿಯೇ ಮುಗುಳ್ನಕ್ಕು ಅದನ್ನು ಅವಳ ಕೈಗಿಟ್ಟೆ. ಇದೆಲ್ಲ ತುಂಬ ನಾಟಕೀಯವಾಗುತ್ತಿದೆ ಎನ್ನಿಸಿದರೂ, ತಪ್ಪೊಪ್ಪಿಗೆಗೆ ಇಂಥ ವಾತಾವರಣದ ಅವಶ್ಯಕತೆ ಇದೆ ಇದೆ ಅಂತಲೇ ಕಂಡಿತು.
ಬಟ್ಟೆ ಬದಲಿಸಿ ಬಂದವನೇ, “ಬಾ ಲಕ್ಷ್ಮೀ ಮಾತಾಡೋದಿದೆ” ಎಂದು ಅವಳ ಕೈಹಿಡಿದು ಕರೆದು ಮಂಚದ ಮೇಲೆ ಕೂರಿಸಿಕೊಂಡೆ. “ಏನೋ ಇದು, ಎಲ್ಲ ಹೊಸ ಹೊಸದಾಗಿದೆ?” ಎಂದಳು. “ಹೊಸ ಹೊಸದಾಗಿ ಇರೋದು ಬೇಡವಾ?” ಎಂದು ಪ್ರಶ್ನೆ ಹಾಕಿದೆ. ಅವಳು ಮಾತಾಡಲಿಲ್ಲ. ಅವಳ ಕೈಯನ್ನು ನನ್ನ ಕೈಯಲ್ಲಿ ತಗೊಂಡು, “ಯಾಕೊ ಗೊತ್ತಿಲ್ಲ ಲಕ್ಷ್ಮೀ, ಇಷ್ಟು ವರ್ಷಗಳ ಮೇಲೆ ಇದನ್ನೆಲ್ಲ ನಿನ್ನ ಹತ್ತಿರ ಹೇಳಿಕೋಬೇಕು ಅನ್ನಿಸ್ತಿದೆ” ಎಂದಾಗ, ಅವಳ ಮುಖದಲ್ಲಿ ಸಣ್ಣಗೆ ಆತಂಕ ಮಡುಗಟ್ಟಿದ ಹಾಗೆ ಕಂಡಿತು. ನಾನು ಶುರು ಮಾಡಿದೆ:
“ಅವತ್ತು ನಿನ್ನ ನೋಡೋಕ್ಕೆ ಬಂದೆನಲ್ಲ ಲಕ್ಷ್ಮೀ, ಆಗ ನಿನ್ನ ಜೊತೆ ಮಾತಾಡೋವಾಗ ನನ್ನ ಗಮನವೆಲ್ಲ ಎಲ್ಲಿ ನೀನು ಣಕಾರ ಲಕಾರ ತಪ್ಪಾಗಿ ಬಳಸ್ತಿಯೋ ಅನ್ನೋದರ ಬಗ್ಗೇನೇ ಇತ್ತು. ಆ ಅನುಮಾನ ಬಗೆಹರಿದ ಮೇಲೆ ಎಲ್ಲ ಬಗೆಹರೀತು ಅಂತಲೇ ಅಂದುಕೊಂಡುಬಿಟ್ಟೆ. ನಿನ್ನನ್ನು ನಾನು ಮೆಚ್ಚಿಕೊಂಡುಬಿಟ್ಟಿದ್ದೆ. ನಾನು ಮೆಚ್ಚಿದ ಮೇಲೆ ಎಲ್ಲ ಮುಗಿದ ಹಾಗೆಯೇ ಅಂತಂದುಕೊಂಡುಬಿಟ್ಟೆ. ನಿನಗೆ ನಾನು ಇಷ್ಟವಾಗಿದ್ದೆನಾ, ನಿನ್ನ ಮನಸ್ಸಲ್ಲಿ ಬೇರೆ ಯಾವುದಾದರೂ ಹುಡುಗ ಇದ್ದನಾ, ನೀನು ಯಾರನ್ನಾದರೂ ಇಷ್ಟಪಟ್ಟಿದ್ದೆಯಾ… ಒಂದನ್ನೂ ನಾನು ಕೇಳಲೇ ಇಲ್ಲ. ನಾನು ಎಂಥ ದೊಡ್ಡ ತಪ್ಪು ಮಾಡಿದೆನಲ್ಲ ಅಂತ ಈಗ, ಇವತ್ತು ನನಗೆ ಹೊಳೀತಾ ಇದೆ ಲಕ್ಷ್ಮೀ.”
ಇಷ್ಟನ್ನೂ ಹೇಳುವಾಗ ನಾನು ಅವಳ ಕಣ್ಣಲ್ಲಿ ಕಣ್ಣಿಟ್ಟಿರಲಿಲ್ಲ. ತಲೆಯತ್ತಿ ನೋಡಿದೆ. ನೋಡಿದರೆ, ಸದ್ದಿಲ್ಲದೆ ಅವಳ ಕಣ್ಣಿಂದ ನೀರ ಧಾರೆ. “ಅರೆ, ಲಕ್ಷ್ಮೀ ಯಾಕೆ ಯಾಕೆ” ಎನ್ನುತ್ತ ಅವಳ ಕೆನ್ನೆಗಳ ಮೇಲಿನ ಕಣ್ಣೀರು ಒರೆಸಿದೆ. ಅವಳ ಕೆನ್ನೆಗಳನ್ನು ಬೊಗಸೆಯಲ್ಲಿ ತೆಗೆದುಕೊಂಡು, ಹಿತವಾಗಿ ಸವರತೊಡಗಿದೆ. ಇಷ್ಟು ವರ್ಷಗಳಿಂದ ಅವಳನ್ನು ಭೋಸಡಿ ಎಂದು ಜರೆಯುತ್ತ ಬಂದದ್ದಕ್ಕೆ ಮೊದಲ ಬಾರಿಗೆ ಪಶ್ಚಾತ್ತಾಪಪಡುತ್ತ ಕೂತಿದ್ದೆ. ಎಕರೆಗಟ್ಟಲೆ ಜಮೀನು ಕೊಟ್ಟು ಹೆಣ್ಣು ಕೊಡುವವರಿದ್ದರು ಎಂದು ಹೇಳಿ, ಮನಸುಗಳು ಕೂಡಬೇಕಿದ್ದ ಮೊದಲ ಕ್ಷಣಗಳಲ್ಲೇ ಅವಳ ಮನಸ್ಸನ್ನು ಆಳವಾಗಿ ಘಾಸಿಗೊಳಿಸಿದ್ದೆ ಎನ್ನಿಸಿತು.
ಹೇಳು, ನೀನು ಯಾರನ್ನಾದರೂ ಪ್ರೀತಿಸಿದ್ದೆಯಾ ಎಂದು ನಾನು ಮತ್ತೆ ಅವಳನ್ನು ಕೇಳಲಿಲ್ಲ. ಇಷ್ಟು ವರ್ಷಗಳ ಬಳಿಕ ಹಾಗೆ ಪೀಡಿಸುವುದು, ಅವತ್ತು ಕೇಳದೇ ಉಳಿದಾಗ ತೋರಿಸಿದ್ದಂಥದೇ ಕ್ರೂರತನವಾಗುತ್ತದೆ ಎಂಬುದು ಅದು ಹೇಗೋ ಆ ಕ್ಷಣಕ್ಕೆ ಹೊಳೆದಿತ್ತು. ಸುಮ್ಮನಾದೆ. ಅವತ್ತು ರಾತ್ರಿ ನಾವಿಬ್ಬರೂ ಮತ್ತೇನೂ ಮಾತಾಡಲಿಲ್ಲ.









ಸರ್, ಕಥೆ ತುಂಬಾ ಚೆನ್ನಾಗಿದೆ.ಪ್ರಾರಂಭದಲ್ಲಿ ಮನೆ ಮನೆ ರಾಮಾಯಣ ಅಲ್ವಾ? ಅನಿಸಿದ್ರೂ ನಿಧಾನವಾಗಿ, ಆಳಕ್ಕೆ ಇಳಿದುಬಿಡುತ್ತೆ.ಎಲ್ಲೋ ಒಂದಷ್ಟು ಕಡೆ ಕಥೆಯೊಳಗಿನ ಪಾತ್ರವಾಗಿಬಿಟ್ಟತೆ ಭಾಸವಾಗುತ್ತದೆ. ಹೆಣ್ಣೆಂಬ ತಾತ್ಸಾರದ ಜೊತೆ ಜೊತೆಗೆ ಭಯ, ಗೌರವಗಳೂ ಇವೆ. ತನ್ನ ಹೆಂಡತಿ ಪತಿವ್ರತೆಯಾಗಿದ್ದರೇ ಸಾಕೆನ್ನುವ ಗಂಡನ ಬದುಗತನ (ಸವಿತಾಳೆಡೆಗ ಆಸೆಗಣ್ಣಿನಿಂದ ನೋಡುವುದು)ಗಂಡಸರ ಸಂಕೀರ್ಣ ಹಾಗೂ ದ್ವಂದ್ವ ಮನಸ್ಥಿತಿಯನ್ನು ತಿಳಿಸುತ್ತದೆ.ಆದ್ರೆ ಇಂತಹ ತಪ್ಪುಗಳಿಗೆ ಏನೇ ಆದ್ರೂ ಹೊಂದಿಕೊಂಡು ಬದುಕುವುದೇ ಪ್ರಾಯಶ್ಚಿತ ಅನಿಸುತ್ತೆ ಅಲ್ವಾ?.