ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜೇಂದ್ರ ಪ್ರಸಾದ್ ಕಾಲಂ : ಮಿಲರೇಪನ ಬಗ್ಗೆ ಇನ್ನೊಂದಿಷ್ಟು

(ಭಾಗ ೨)

(ಭಾಗ ೧ ಇಲ್ಲಿದೆ)

ಷರತ್ತು ಬದ್ದವಾಗಿ ಶಿಷ್ಯನನ್ನು ಸ್ವೀಕರಿಸಿದ ಮೇಲೆ ಅವನ ಯಾವ ವಸ್ತುಗಳನ್ನು ಸಹ ಮನೆಯಲ್ಲಿ ಇರಗೊಡಲು ಬಿಡಲಿಲ್ಲ. ಅವನ ಜೊತೆ ತಂದಿದ್ದ ಎಲ್ಲ ವಸ್ತುಗಳನ್ನು ಹೊರ ಹಾಕಿದ. ಅಂತರ ಹೊರಗೆ ಭಿಕ್ಷೆ ಬೇಡಿ ಒಂದು ತಾಮ್ರದ ಬೋಗುಣಿಯನ್ನು ಬಾರ್ಲಿ ಅಕ್ಕಿಯ ಗಂಟನ್ನು ತಂದ.. ಅವನ್ನು ಕೂಡ ಹೊರ ಹಾಕಿದ ಮಾರ್ಪ. ಆ ಬೋಗುಣಿಯನ್ನು ಗುರು ಕಾಣಿಕೆಯಾಗಿ ಸ್ವೀಕರಿಸಬೇಕೆಂದು ಕೋರಿದಾಗ ತನ್ನ ವಿರುದ್ದ ಕೆಲಾಸ ಮಾಡುವ ಹಾಗೂ ತನಗೆ & ತನ್ನ ಶಿಷ್ಯರಿಗೆ ತೊಂದರೆ ಕೊಡುತ್ತಿದ್ದ ಎಲ್ಲರ ಮೇಲೆ ಮಿಲರೇಪ ತಿಳಿದಿದ್ದ ಮಂತ್ರಪ್ರಯೋಗ ಮಾಡಿಸಿ ನಾಶಮಾಡಿಸಿದ.

ಹೀಗೆ ನಾಶ ಮಾಡಿದ ಎಲ್ಲವನ್ನೂ ಮತ್ತೆ ಯಥಾ ಸ್ಥಿತಿಗೆ ತಂದರೆ ಮಾತ್ರ ದೀಕ್ಷೆ ಕೊಡುತ್ತೇನೆ ಎಂದು ಹೀಯಾಳಿಸಿದ.
ಮಾರನೆಯ ದಿನ ಮಿಲರೇಪನಿಗೆ ಜಾಗ ತೋರಿಸಿ ಒಂದು ವೃತ್ತಾಕಾರದ ಮನೆಯನ್ನು ಕಟ್ಟು ಎಂದು ಅಪ್ಪಣೆ ಕೊಟ್ಟ. ಒಂದಷ್ಟು ಕಟ್ಟಿದ ಮೇಲೆ ಮತ್ತೆ ಬಂದು ನನಗೆ ಈ ವೃತ್ತಾಕಾರದ ಮನೆ ಇಷ್ಟವಿಲ್ಲ. ಸದ್ಯಕ್ಕೆ ಏನು ಕಟ್ಟುವುದು ಬೇಡ ಇ ಮಣ್ಣು ಕಲ್ಲು ಎಲ್ಲ ಎಲ್ಲಿಂದ ತಂದೆಯೋ ಅಲ್ಲಿಗೆ ಮರಳಿಸು ಮರು ಅಪ್ಪಣೆ ಕೊಟ್ಟ. ಮತ್ತೊಂದು ದಿನ ಕರೆದು ಅರ್ಧ ಚಂದ್ರಾಕಾರದ ಮನೆ ಕಟ್ಟಲು ಹೇಳಿದ. ಮತ್ತೆ ಅದನ್ನು ಕೆಡವಿಸಿ ತ್ರಿಕೋನಾಕಾರದ ಮನೆ ಕಟ್ಟಿಸಿ ಮೊದಲಿನೆರಡರ ಶಾಸ್ತಿಯೇ ಇದ್ದಕ್ಕೂ ಕಾಣಿಸಿದ. ಈ ಕೆಲಸಗಳ ನಡುವೆ ಮಿಲರೇಪನಿಗೆ ಬೆನ್ನಿನಲ್ಲಿ ಹುಣ್ಣಾಗಿ ಅದು ತುಂಬಾ ದೊಡ್ಡದಾಗಿ ಬೆಳೆದು ಕೀವು ನೋವು ಕಾಣಿಸಿಕೊಂಡಿತು. ಅಷ್ಟರಲ್ಲಿಯೇ ಗುರು ಮತ್ತೆ ಹತ್ತು ಅಂತಸ್ತಿನ ಆಯತಾಕಾರದ ಮನೆಯನ್ನು ಕಟ್ಟಬೇಕೆಂದು ನಿರ್ದೇಶಿಸಿದ. ಮಿಲರೇಪ ಅಲ್ಲೇ ಆಶ್ರಮಯದ ಬಳಿಯಿಂದ ಬಂಡೆಯೊಂದನ್ನು ಬಳಸಿ ಕಟ್ಟಲು ಆರಂಭಿಸಿದ. ಆದರೆ ಮಾರ್ಪ ಅದನ್ನು ಕೀಳಿಸಿ ಎಲ್ಲಿತ್ತೋ ಅಲ್ಲಿಗೆ ಹಾಕಿಸಿದ. ಮತ್ತೆ ಮರುದಿನ ಅದನ್ನೇ ಬಳಸಿಯೇ ಕಟ್ಟಬೇಕೆಂದು ಆಜ್ಞಾಪಿಸಿದ. ಮೊದಲೇ ಬೆನ್ನು ನೋವಿಂದ ನರಳುತ್ತಿದ್ದ ಮಿಲರೇಪ ಹೈರಾಣಾಗಿ ಹೋದ. ಒಂದು ಹುಣ್ಣು ಮೂರು ಹುಣ್ಣುಗಳಾಗಿ ಜೀವ ತಿನ್ನಲು ಶುರು ಮಾಡಿದೋ. ಆದರೂ ಗುರು ಕರುಣೆ ದೊರೆಯಲಿಲ್ಲ. ಆರೇಳು ಅಂತಸ್ತಿನಷ್ಟು ಕೆಲಸ ಮುಗಿಸಿದ.

ಈ ನಡುವೆ ಮಾರ್ಪನ ಹೆಂಡತಿ ಮಾತ್ರ ಮಿಲರೇಪನಲ್ಲಿ ಕರುಣೆಯುಳ್ಳವಳು ಆಗಿದ್ದಳು. ಮಿಲರೇಪನಿಗೆ ದೀಕ್ಷೆ ಕೊಡಿಸಲು ಶತಪ್ರಯತ್ನಪಟ್ಟಳು. ಇತರರಿಗೆ ದೀಕ್ಷೆಯಾಗುವ ಸಂದರ್ಭದಲ್ಲಿ ಏನಾದರೂ ಕಾಣಿಕೆ ಕೊಟ್ಟು ಗುರುವನ್ನು ಮೆಚ್ಚಿಸುವಂತೆ ಪ್ರೇರಣೆ ನೀಡುತ್ತಿದ್ದಳು. ಆದರೆ ಮಾರ್ಪ ಇದೆಲ್ಲವನ್ನು ಬಲ್ಲವನಾಗಿದ್ದ. ಹಾಗೆ ಮಿಲರೇಪ ಬಂದಾಗಲೆಲ್ಲ ಹೀಯಾಳಿಸಿ ಕಪಾಳಕ್ಕೆ ಬಾರಿಸಿಯೇ ವಾಪಸು ಕಳಿಸುತ್ತಿದ್ದ. ಕೊನೆಗೆ ನೊಂದುಕೊಂಡ ಮಾರ್ಪನ ಹೆಂಡತಿಯೇ ವಜ್ರ ವಾರಾಹಿ (ಟಿಬೆಟ್: ದೋರ್ಜೆ ಪಾಮೊ ) ದೇವತೆಯ ಧ್ಯಾನ ಮತ್ತು ವಶೀಕರಣ ಮಂತ್ರವನ್ನು ಹೇಳಿಕೊಟ್ಟಿದ್ದಳು. ಆದರೆ ಇದರಿಂದ ಮಿಲರೇಪ ಸಮಾಧಾನ ಕೂಡ ಸಿಕ್ಕಿರಲಿಲ್ಲ. ಗುರುವಿನ ಕಾಟ ಮತ್ತು ಬೆನ್ನಿನ ಹುಣ್ಣುಗಳ ನೋವು ಸಹಿಸಲಾಗದೆ ಯಾರಿಗೂ ಹೇಳದೇ ಕೇಳದೆ ಆಶ್ರಮ ಬಿಟ್ಟು ಓಡಿಹೋದ.
ಅಮ್ಮನಿಗೆ ಮಾತು ಕೊಟ್ಟು ಬಂದಿದ್ದು ನೆನಪಾಯಿತು.. ಮತ್ತೆ ಗಟ್ಟಿ ಮನಸಿನಿಂದ ಗುರುವಿನ ಬಳಿ ಹೋಗಿ ಕ್ಷಮೆ ಕೇಳಿದ. ಮಾರ್ಪ ಮೊದಲು ಉಳಿದಿರುವ ಅಂತಸ್ತುಗಳನ್ನು ಕಟ್ಟಿ ಮನೆಯನ್ನು ಪೂರ್ಣಗೊಳಿಸಲು ಅವಕಾಶ ನೀಡಿದ. ಈ ನಡುವೆ ಮಾರ್ಪ ದೀಕ್ಷೆ ಕೊಡುವುದು ಅನುಮಾನವೆಂದು ಅರಿತ ಮಾರ್ಪನ ಹೆಂಡತಿ ಅವನ ಮತ್ತೊಬ್ಬ ಶಿಷ್ಯ ಗೋಗ್ಡನ್ ಲಾಮಾ ಬಳಿ ದೀಕ್ಷೆ ಪಡೆಯಲು ಏರ್ಪಾಟು ಮಾಡಿ ಮಾರ್ಪನ ರೀತಿಯೇ ಪತ್ರವೊಂದನ್ನು ಬರೆದು ಅವನ ಗುರು ನರೋಪನ ವಸ್ತುಗಳನ್ನು ಗುರುತಿಗೆ ಕೊಟ್ಟು ಮಿಲರೇಪನನ್ನು ಕಳುಹಿ ಕೊಟ್ಟಳು.
ಗೋಗ್ಡನ್ ಕೂಡ ಮಿಲರೇಪನ ತಂತ್ರ ವಿದ್ಯೆಗಳ ಮೂಲಕ ಅಳಿಕಲ್ಲಿನ ಮಳೆ, ಚಂಡಮಾರುತಗಳನ್ನು ಕರೆದು ತನ್ನ ವೈರಿಗಳ ನಾಶಮಾಡಿಸಿದ. ಇದರಿಂದ ಮಿಲರೇಪ ತಾನು ಸಂಪಾದಿಸಿ ಕೆಟ್ಟ ವಿದ್ಯೆಯ ಬಗ್ಗೆ ತನ್ನನ್ನೇ ಹಳಿದುಕೊಂಡ. ಪಾತ್ರದ ಪ್ರಕಾರವೇನೋ ಗೋಗ್ಡನ್ ಮಿಲರೇಪನಿಗೆ ದೀಕ್ಷೆ ನೀಡಿದ ಆದ್ರೆ ಅದಕ್ಕೆ ಅವನ ಗುರು ಮಾರ್ಪನ ಆಶೀರ್ವಾದ ಇರಲಿಲ್ಲವಾದ್ದರಿಂದ ಅದು ಪೂರ್ಣಾನುಗ್ರಹವಾಗಲಿಲ್ಲ. ಈ ಸಮಯದಲ್ಲೇ ಮಾರ್ಪ ತನ್ನ ಶಿಷ್ಯ ಗೋಗ್ಡನ್ ನನ್ನು ಸಮಾರಂಭವೊಂದಕ್ಕೆ ತನ್ನ ಮನೆಗೆ ಬರಬೇಕೆಂದು ಜೊತೆಯಲ್ಲಿ ನಿನಗೆ ಸಿಕ್ಕಿರುವ ಹೊಸ ಶಿಷ್ಯನನ್ನು ಕರೆದುಕೊಂಡು ಬರಬೇಕೆಂದು ಪತ್ರ ಕಳುಹಿದ. ಮಾರ್ಪನಿಗೆ ಮಿಲರೇಪ ಅಲ್ಲಿರುವುದು ಹೇಗೆ ತಿಳಿದು ಹೋಗಿತ್ತು. ಆದ್ರೆ ದುರದೃಷ್ಟವಶಾತ್ ಅಲ್ಲಿಗೆ ಬಂದ ಗೋಗ್ಡನ್ ಮಿಲರೇಪ ಪತ್ರವನ್ನು, ನರೋಪನ ವ ಸ್ತುಗಳನ್ನು ತಂದಿದ್ದನ್ನು ವಿವಾರಗಿ ತಿಳಿಸಿಬಿಟ್ಟ. ಇದರಿಂದ ಮಾರ್ಪನಿಗೆ ಕೆಟ್ಟಕೋಪ ಬಂದಿತು. ಮಾರ್ಪನ ಹೆಂಡತಿ ಹೆದರಿ ಹೋದಳು. ಇದರಿಂದ ನೊಂದ ಮಿಲರೇಪ ಆತ್ಮಹತ್ಯೆ ಮಾಡಿಕೊಳಲು ಪ್ರಯತ್ನಿಸಿದಾಗ ಗೋಗ್ಡನ್ ಅವನನ್ನು ತಡೆದು ಬುದ್ದಿವಾದ ಹೇಳಿ ನರೋಪನ ವಸ್ತುಗಳನ್ನು ಹಿಂದಕ್ಕೆ ತರಲು ತನ್ನ ಮನೆಗೆ ಹೊರಟ.

ಕೊನೆಗೂ ಮಾರ್ಪ ಶಾಂತನಾದ ಎಲ್ಲ ಶಿಷ್ಯರು, ಆಹ್ವಾನಿತರನ್ನು ಮನೆಯ ಹಜಾರಕ್ಕೆ ಕರೆದು ಮಿಲರೇಪನನ್ನು ತನ್ನ ಅತಿಥಿಯೆಂದು, ಮಹಾ ಮಾಂತ್ರಿಕನೆಂದು’ ಕರೆದು ಅವನನ್ನು ಪರಿಪೂರ್ಣಗೊಳಿಸಲು ಬೇಕಾದಷ್ಟೂ ಕಷ್ಟಗಳನ್ನು ಮತ್ತು ಪರೀಕ್ಷೆಗಳನ್ನು ಮಾಡಿದ್ದಾಗಿಯೂ ಹೇಳಿ ಮಿಲರೇಪನನ್ನು ತನ್ನ ಮಹಾಶಿಷ್ಯನನ್ನಾಗಿ ಸ್ವೀಕರಿಸಿದನು. ಅವತ್ತಿನ ರಾತ್ರಿ ಮಿಲರೇಪನ ತಲೆಗೂದಲು ತೆಗೆದುಹಾಕಿಸಿ ಸನ್ಯಾಸಿ ಉಡುಗೆ ತೊಡಿಸಿ ಶಂವರ ಮಂಡಲ (ಟಿಬೇಟ್: ದೇಮ್ ಚೋಗ್) ಬರೆದು 62 ಮಂಡಲ ದೇವತೆಗಳನ್ನು ಕರೆದನು. ಅಷ್ಟು ದೇವತೆಗಳು ಬಂದು ಮಿಲರೇಪನನ್ನು ಹರಸಿ ಶ್ರೀ ವಿಕಸಿತ ವಜ್ರ (ಟಿಬೇಟ್: ಪಾಲ್ಝುಡ್ಪ ದೋರ್ಜೆ) ಎಂದು ಹೆಸರಿತ್ತು ಮಹಾದೀಕ್ಷೆಯನ್ನು ಅನುಗ್ರಹಿಸಿದವು. ಇದಕ್ಕೂ ಮೊದಲೇ ಮಾರ್ಪನ ಗುರು ನರೋಪ ಕನಸಿನಲ್ಲಿ ಮಿಲರೇಪನಿಗೆ ದೀಕ್ಷೆ ಕೊಡವ ಸಮಯ ಬಂತೆಂದೂ, ಅವನಿಗೆ ವಜ್ರಧ್ವಜ ಮಿಲ (ಟಿಬೇಟ್: ಮಿಲ ದೋರ್ಜೆಗ್ಯಾಲ್ ತ್ಸೆನ್ ) ಎಂದು ಹೆಸರಿಡಬೇಕೆಂದು ನಿರ್ದೇಶನ ನೀಡಿದ್ದಾಗಿ ಹೇಳಿಕೊಳ್ಳುತ್ತಾನೆ.
ಮುಂದೆ ಮಾರ್ಪ ತನ್ನ ಶಿಷ್ಯನಿಗೆ ಬೌದ್ದ ತಂತ್ರ ಮಾರ್ಗಗಳ ಬಗ್ಗೆ ಸುದೀರ್ಘ ಬೋಧನೆಯನ್ನು ಮಾಡುತ್ತಾನೆ. ಆದರೆ ಅದೆಲ್ಲವೂ ಕೇವಲ ಕೇಳಿ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲವಾದ್ದರಿಂದ ಧ್ಯಾನ ಮತ್ತು ತಪಸ್ಸಿಗೆ ಹೊರಡುತ್ತಾನೆ. ಗುರುವಿನ ಆಜ್ಞೆಯಂತೆ ಒಂದು ಕಲ್ಲಿನ ಗುಹೆಯಲ್ಲಿ ತಲೆ ಮೇಲೆ ದೀಪವೊಂದನ್ನು ಹಚ್ಚಿಟ್ಟುಕೊಂಡು ಅದು ತಾನಾಗಿ ಆರುವವರೆಗೂ ತಪಸ್ಸು ಮಾಡುತ್ತಾನೆ. ಹಾಗೆ ಮಾಡುವಾಗ ಸಮಾಧಿ ಸ್ಟಿತಿಯನ್ನು ತಲುಪಿ ಬಿಡುತ್ತಾನೆ. ಹೀಗೆ ಹನ್ನೊಂದು ತಿಂಗಳಾದರೂ ಹೊರಬಾರದ ಶಿಷ್ಯನನ್ನು ಗುರುವೆ ಬಂದು ಹೊರಗೆ ಬರುವಂತೆ ಕರೆಯುತ್ತಾನೆ. ಮಿಲರೇಪ ಹಾಡುತ್ತಾ ಹೊರಗೆ ಬರುತ್ತಾನೆ. ಈ ಅವಧಿಯಲ್ಲಿ ಅವನಿಗೆ ಬೌದ್ದ ದರ್ಶನದ ಅರಿವು ಉಂಟಾಗಿರುತ್ತದೆ. ಸ್ವಾರ್ಥ ಬಿಟ್ಟು ಸಮಾಜಕ್ಕಾಗಿ ಬದುಕಬೇಕೆಂದು, ಧ್ಯಾನದಲ್ಲಿ ಪ್ರಜ್ಞೆಯ ಸ್ಥಿತಿ ಹೇಗಿರಬೇಕೆಂದು ಅಥವಾ ಅಲ್ಲಿ ಪ್ರಜ್ಞೆ ಕಳೆದುಕೊಂಡರೆ ಅದು ವ್ಯರ್ಥವೆಂದು, ಧ್ಯಾನವೆಂದರೆ ದೇವತೆಗಳು ಪ್ರತ್ಯಕ್ಷವಾಗುದಲ್ಲವೆಂದು ಸತ್ಯದ ಅರಿವೆಂದು ಅರ್ಥವಾಗುತ್ತದೆ.
ಈ ಅವಧಿಯಲ್ಲೇ ಮಿಲರೇಪನ ಕನಸಿನಲ್ಲಿ ಮಂತ್ರದೇವತೆಯೊಬ್ಬಳು ಕಾಣಿಸಿಕೊಂಡು ಯಾರಿಗೂ ಕಾಣದ ಹಾಗೆ ಎಲ್ಲ ಕಡೆ ಸಂಚರಿಸಬಹುದಾದ ‘ದ್ರೋಂಗ್ ಜು’ ಎಂಬ ವಿದ್ಯೆ ಕಲಿಯುವಂತೆ ಪ್ರೇರಣೆಯನ್ನು ನೀಡುತ್ತಾಳೆ. ಅದರ ಕೇಳಲೆಂದು ಮಿಲರೇಪ ಅಪ್ರಜ್ಞಾ ಪೂರ್ವಕವಾಗಿ ಎದುರಿದ್ದ ಗೋಡೆಯನ್ನು ಭೇಧಿಸಿಕೊಂಡು ಮಾರ್ಪನ ಬಳಿ ಬಂದು ಈ ಬಗ್ಗೆ ವಿಚಾರಿಸಲು ಮಾರ್ಪನಿಗೆ ಗುರುವು ಈ ಬಗ್ಗೆ ಹೇಳಿದ್ದು ಅಷ್ಟೇ ನೆನಪಿರುತ್ತದೆ. ಆ ಬಗ್ಗೆ ತಿಳಿದುಬಿಡುವ ನಿರ್ಧಾರ ತೆಗೆದುಕೊಂಡು ಭಾರತಕ್ಕೆ ಮತ್ತೆ ಹೊರಡುತ್ತಾನೆ. ಈ ಹೊತ್ತಿಗೆ ಮಾರ್ಪನ ಮಗ ಸತ್ತು ಹೋಗಿರುತ್ತಾನೆ. ಅತ್ತ ಭಾರತದಲ್ಲಿ ಮಹಾಗುರು ನರೋಪ ನಿರ್ವಾಣ ಹೊಂದಲು ಸಿದ್ದವಾಗಿರುತ್ತಾನೆ.
ಈವಾಗ ಎಲ್ಲರಿಗೂ ಕರ್ ಗ್ಯುಟ್ಪ ಪರಂಪರೆಯ ಮುಂದಿನ ಗುರುವಿನ ನಿರೀಕ್ಷೆಯಲ್ಲಿ ಇದ್ದಾರೆ..
 

‍ಲೇಖಕರು G

21 May, 2014

2 Comments

  1. ಡಾ.ಶಿವಾನಂದ ಕುಬಸದ

    ಇಷ್ಟವಾಯಿತು.

  2. udaykumar habbu

    ಮಿಲರೇಪನ ಕಥೆ ಕೇಳಲು ಚೆನ್ನಾಗಿದೆ. ಕುತೂಹಲಭರಿತವಾಗಿದೆ.ಆದರೆ ಇಂತಹ ಅತೀಂದ್ರಿಯ ಶಕ್ತಿ ಇಂದೇಕೆ ನಮಗೆ ಕಾಣಿಸಿಕೊಳ್ಳುತ್ತಿಲ್ಲ? ತಂತ್ರದಿಂದ ಬಿರುಗಾಳಿ ಎಬ್ಬಿಸಲು ಸಾಧ್ಯವೇ? ತಂತ್ರದಿಂದ ಮಳೆ ಸುರಿಸಲು ಸಾಧ್ಯವಾದರೆ ಬನ್ನಿ ತಾಂತ್ರಿಕರೆ ನಮ್ಮ ದೇಶದ ಬರ ನೀಗಿಸಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading