ಮಿಲರೇಪ ಎನ್ನುವ ಹೆಸರಿನಲ್ಲೇ ಏನೋ ಒಂದು ಖುಷಿ. ಇವ ಥೇಟ್ ನಮ್ಮ ಮಂಟೇಸ್ವಾಮಿ ಮತ್ತು ಮಾದಪ್ಪನ ತರವೇ. ಆದರೆ ಬೌದ್ಧ ಧರ್ಮದ ತಂತ್ರಮಾರ್ಗಕ್ಕೆ ಸೇರಿದವನು. ಒಬ್ಬ ಶ್ರೀಮಂತನ ಮನೆಯಲ್ಲಿ ಹುಟ್ಟಿ, ಎಲ್ಲ ಕಳೆದುಕೊಂಡು ಬಡವನಾಗಿ, ಬೈರಾಗಿಯಾಗಿ, ಮಂತ್ರಗಾರನಾಗಿ ಮುಂದೆ ಟಿಬೇಟಿನ ಮಹಾಯೋಗಿಯಾದ ಕಥೆ ಮೈ ರೋಮಾಂಚನಗೊಳಿಸುತ್ತದೆ. ಅದೊಂದುತರ ಅಜ್ಜಿಯ ಕಥೆಯ ಹಾಗೆ ಹೇಳಲು ಶುರು ಮಾಡಿದ್ರೆ….
ಹೀಗೆ ಟಿಬೆಟಿನ ಗುಂಗ್ತಾಂಗ್ ಪ್ರದೇಶದ ಕ್ಯಾಂಗತ್ಸಾ ದಲ್ಲಿನ ಮಿಲ-ದೊರ್ಜೆ-ಸೆಂಜೆ ಎಂಬ ಶ್ರೀಮಂತ ಮನೆತನದ ಮಿಲಶೆರಬ್ ಗ್ಯಾಲ್ ತ್ಸೆನ್ & ಕಾರ್ಮೋಕ್ಯೆನ್ ದಂಪತಿಗಳ ಮೊದಲ ಮಗನಾಗಿ ಕ್ರಿ.ಶ . ೧೦೫೨ ರಲ್ಲಿ ಮಿಲರೇಪ ಹುಟ್ಟಿದನು. ಈ ವೇಳೆಯಲ್ಲಿ ಮಿಲಶೆರಬ್ ವ್ಯಾಪಾರದ ಸಲುವಾಗಿ ದೂರ ಹೋಗಿದ್ದನು. ಮಗ ಹುಟ್ಟಿದ ಸುದ್ದಿ ಕೇಳಿ “ತೋಪಾಗ ” (delightful to hear = ಕೇಳಲು ಖುಷಿ= ಕರ್ಣಾನಂದ ) ಎಂಬ ಹೆಸರಿಟ್ಟನು. ಕೆಲವು ವರ್ಷಗಳ ನಂತರ ‘ಪೇಟಾ’ ಎಂಬ ಮಗಳು ಕೂಡ ಜನಿಸಿದಳು.
ಮಿಲ-ದೊರ್ಜೆ-ಸೆಂಜೆ ಕುಟುಂಬದ್ದು ಕಲ್ಲುಗಳಿಂದ ಕಟ್ಟಿದ ಮೂರು ಅಂತಸ್ತಿನ ದೊಡ್ಡಮನೆ. ಮಿಲಶೆರಬ್ ತನ್ನ ಕುಟುಂಬವಲ್ಲದೆ ತಂಗಿ, ತಮ್ಮ ಹಾಗು ಇತರ ಬಂಧುಗಳನ್ನು ತನ್ನೊಡನೆ ಇರಿಸಿಕೊಂಡಿದ್ದನು .. ಕಾಲಕ್ರಮೇಣ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದ ಮಿಲಶೆರಬ್ ಸಾಯುವ ಮುನ್ನ ಬಂಧುಗಳನ್ನು , ನೆರೆಯವರನ್ನು ಕರೆಸಿ ಮಗನು ಪ್ರಾಪ್ತ ವಯಸ್ಸಿಗೆ ಬರುವವರೆಗೂ ಇಡೀ ಆಸ್ತಿಯನ್ನು ಅವನ ಚಿಕ್ಕಪ್ಪ & ಅತ್ತೆ ನೋಡಿಕೊಳ್ಳಬೇಕೆಂದು ನಂತರ ಅದನ್ನ ಇವರ ವಶಕ್ಕೆ ಕೊಡಬೇಕೆಂದು ಹೇಳಿದನು. ಆದರೆ ಮಿಲಶೆರಬ್ ಸಾವಿನ ನಂತರ ಮಿಲರೇಪನ ಚಿಕ್ಕಪ್ಪ & ಅತ್ತೆ ಇಬ್ಬರು ಅವರವರಲ್ಲೆ ಆಸ್ತಿ ಹಂಚಿಕೊಂಡು , ಇವರನ್ನು ಬೀದಿಪಾಲು ಮಾಡಿದರು. ತಾಯಿ, ಮಗ, ಮಗಳು ಹೇಗೋ ಅವರಲ್ಲಿಯೇ ಕೆಲಸ ಮಾಡಿಕೊಂಡಿ ಬದುಕಿದ್ದರು.
ಮಿಲರೇಪನಿಗೆ ಹದಿನೈದು ವರ್ಷಗಳು ತುಂಬಿದಾಗ ಕಾರ್ಮೋಕ್ಯೆನ್ ತನ್ನ ಸೋದರನೊಂದಿಗೆ ಸೇರಿಕೊಂಡು ಒಂದು ದಿನ ಎಲ್ಲ ಬಂಧುಗಳನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದರು. ಮಿಲಶೆರಬ್ ಸಾಯುವ ಮುನ್ನ ಹೇಳಿದನ್ನು ನೆನಪಿಸಿ ತಮ್ಮ ಅಸ್ತಿಯನ್ನು ಮರಳಿಸುವಂತೆ ಕೋರಿದರು. ಇದರಿಂದ ಸಿಟ್ಟಾದ ಮಿಲರೇಪನ ಚಿಕ್ಕಪ್ಪ & ಅತ್ತೆ ಇಬ್ಬರು ಯಾವ ಆಸ್ತಿಯು ಇಲ್ಲವೆಂದು ಹೇಳಿ ಅವರನ್ನು ಮನೆಯಿಂದ ಹೊರ ಹಾಕಿದರು. ಕೆಲವು ಒಳ್ಳೆಯ ಜನರ ನೆರವಿನಿಂದ ಮಿಲರೇಪನ ಶಿಕ್ಷಣದ ವ್ಯವಸ್ತೆಯಾಯಿತು. ಮಿಲರೇಪ ಬಹಳ ಚೆನ್ನಾಗಿ ಹಾಡುತ್ತಿದ್ದ. ಈ ಸಮಯದಲ್ಲೇ ಇವನಿಗೆ ಮದುವೆ ಆಯಿತು ಎಂದು ಕೆಲವೇ ಕಡೆ ಉಲ್ಲೇಖವಿದೆ ಆದ್ರೆ ಮಿಲರೇಪ ಕಟ್ಟಾ ಬ್ರಹ್ಮಚಾರಿಯಾಗಿದ್ದ ಹಲವು ಕಡೆ ನಾನು ಓದಿದ್ದೇನೆ.
ಕುಡಿಯುತ್ತಾ , ಹಾಡುತ್ತ ಸೋಮಾರಿಯಾಗಿ ಕಾಲ ಕಳೆಯುತ್ತಿದ್ದ ಮಗನನ್ನು ಕಂಡು ಬೇಸತ್ತ ಕಾರ್ಮೋಕ್ಯೆನ್ ಚೆನ್ನಾಗಿ ಹೊಡೆದು ತಮ್ಮ ದುಃಸ್ಥಿತಿಗೆ ಕಾರಣವಾದವರ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ಬುದ್ದಿ ಮಾತು ಹೇಳಿ, ತನಗೆ ಉಳಿದು ಕೊಂಡಿದ್ದ ಆಸ್ತಿಯ ಸ್ವಲ್ಪ ಭಾಗವನ್ನು ಮಾರಿ ಅಭಿಚಾರ(ಬ್ಲಾಕ್ ಮ್ಯಾಜಿಕ್ – ಕಪ್ಪು ಮಂತ್ರ ವಿದ್ಯೆ/ ಮಾಟ ಮಂತ್ರ ) ಕಲಿಯಲು ಯಾರ್ಲುಂಗ್ ಕ್ಯೋರ್ಪೋಗೆ ಕಳುಹಿಸಿಕೊಟ್ಟಳು. ಮಿಲರೇಪ ಇತರ ಕೆಲವು ಹುಡುಗರೊಂದಿಗೆ ಅ ಭಾಗದಲ್ಲೇ ಪ್ರಸಿದ್ದನಾಗಿದ್ದ ಲಾಮಾ ಯೂಂಗ್ ತುನ್ ಟ್ರೋಗ್ಯಾಲ್ ನ ಬಳಿ ಶಿಷ್ಯನಾಗಿ ಸೇರಿಕೊಂಡನು. ಸುಮಾರು ಒಂದು ವರ್ಷ ಕಾಲ ಕೆಲವು ಸಣ್ಣ ಪುಟ್ಟ ತಂತ್ರಗಳನ್ನು ಕಲಿತ ಇತರರು ಇಷ್ಟು ಸಾಕೆಂದು ಹಿಂತಿರುಗಿದರು. ಆದರೆ ಮಿಲರೇಪ ಗುರುವಿನ ಬಳಿ ಬಂದು ತನ್ನ ವೃತ್ತಾಂತವನ್ನು ಹೇಳಿಕೊಂಡನು. ಇನ್ನೊಬ್ಬ ಶಿಷ್ಯನ ಮುಖಾಂತರ ಇವನು ಹೇಳಿದ್ದೆಲ್ಲವೂ ನಿಜವೆಂದು ತಿಳಿದ ಮೇಲೆ ಗುರುವು ಸೇಡು ತೀರಿಸಿಕೊಳ್ಳಲು ತಂತ್ರವನ್ನು ಹೇಳಿಕೊಡಲು ಸಮ್ಮತಿಸಿದನು.
೧೪ ದಿನಗಳ ಕಾಲ ಕಠಿಣ ಧ್ಯಾನ , ಆಚರಣೆಗಳ ನಂತರ ಅಂದು ರಾತ್ರಿ ಅವನು ಕೂಗಿ ಕರೆದ ಎಲ್ಲ ದೇವತೆಗಳು ಬಂದು ಅವನ ೩೫ ಜನ ವೈರಗಳ ತಲೆ, ಹೃದಯಗಳನ್ನು ಅವನಿಗೊಪ್ಪಿಸಿದರು. ಆದರೆ ಅವನ ಚಿಕ್ಕಪ್ಪ & ಅತ್ತೆಯನ್ನು ಬೇಕಂತಲೇ ಉಳಿಸಿಕೊಂಡಿದ್ದ. (ನಿಜವಾಗಿ ಅಲ್ಲಿ ಆಗಿದ್ದು : ಚಿಕ್ಕಪನ ಮಗನ ಮದುವೆ ನಡೆಯುವ ಸಂದರ್ಭ ಎಲ್ಲರು ಅಲ್ಲಿ ಸೇರಿದ್ದರು. ಇದ್ದಕ್ಕಿದ್ದಂತೆ ಕುದುರೆ ಓಡಾಡಲು ಶುರು ಮಾಡಿದುವು, ಮದುವೆಯ ಚಪ್ಪರದ ಕಂಬಕ್ಕೆ ಕುದುರೆಯೊಂದು ಢಿಕ್ಕಿಯೊಡೆದು ಚಪ್ಪರದಡಿಗೆ ಸಿಲುಕಿ ಇವರೆಲ್ಲ ಸತ್ತರು )

ಮಿಲರೇಪನ ತಾಯಿ ಈ ಸುದ್ದಿಯಿಂದ ಸಂತಸಗೊಂಡಳು. ಇದನ್ನು ತಿಳಿದ ಸತ್ತವರ ಕಡೆಯವರು ತಾಯಿ ಮತ್ತು ಮಗನನ್ನು ಸಾಯಿಸಲು ಹೊಂಚುಹಾಕಿದರು. ಈ ವಿಷಯ ತಿಳಿದ ಕಾರ್ಮೋಕ್ಯೆನ್ ಇನ್ನು ಸ್ವಲ್ಪ ಅಸ್ತಿಯನ್ನು ಮಾರಿ ಮಗನಿಗೆ ಸ್ವಲ್ಪ ಚಿನ್ನವನ್ನು ತಲುಪಿಸಿ , ಊರಿನ ಘಟನಾವಳಿಗಳನ್ನು ತಿಳಿಸಿ ಸದ್ಯಕ್ಕೆ ಇಲ್ಲಿಗೆ ಬಾರದಿರುವಂತೆ ಸುದ್ದಿ ಮುಟ್ಟಿಸಿಸಿದಳು.
ಮಿಲರೇಪ ಮತ್ತೆ ಗುರು ಟ್ರೋಗ್ಯಾಲ್ ನ ಬಳಿ ಬಂದು ಚಂಡ ಮಾರುತವನ್ನು ಎಬ್ಬಿಸುವ ತಂತ್ರವ ಕಲಿತುಕೊಂಡನು. ಊರಿಗೆ ಮರಳಿ ಬೆಟ್ಟದಲಿ ಕುಳಿತು ಊರಿನ ಮೇಲೆ ಚಂಡ ಮಾರುತವನ್ನು ಎಬ್ಬಿಸಿದನು. ಊರು /ಬೆಳೆ ಹಾಳಾದುವು .. ಇದು ಊರಿನ ಜನರಿಗೆ ತಿಳಿದು ಇವನ ಬೆನ್ನತ್ತಿದರು.. ಮತ್ತೆ ತಾಯಿಯನ್ನು ಕಾಣಲಾಗದೆ ಗುರುವಿನ ಬಳಿ ಹಿಂತಿರುಗಿದನು..
ಗುರುವಿನ ಮನೆಗೆ ಹಿಂತಿರುಗಿದ ಮಿಲರೇಪನಲಿ ಪಾಪ ಪ್ರಜ್ಞೆ ಕಾಡಲು ಶುರುವಾಯಿತು. ತನ್ನ ತಪ್ಪಿನ ಅರಿವಾಯಿತು… ಸೇಡು ತೀರಿಸಿಕೊಳ್ಳಲು ತಾನು ಹಿಡಿದ ವಾಮ ಮಾರ್ಗ ಅವ್ನಿಗೆಕೋ ಹಿಡಿಸಲಿಲ್ಲ. ಈ ಸಮಯದಲ್ಲೇ ಟ್ರೋಗ್ಯಾಲ್ ನ ಪ್ರಿಯ ಶಿಷ್ಯನೊಬ್ಬ ಆಕಸ್ಮಿಕ ಅನಾರೋಗ್ಯದಿಂದ ತೀರಿಹೋದ. ಈ ಘಟನೆಯಿಂದ ಖಿನ್ನನಾದ ಟ್ರೋಗ್ಯಾಲ್ ತಾನು ಮತ್ತು ತನ್ನ ಶಿಷ್ಯ ಮಿಲರೇಪ ಇಬ್ಬರೂ ಇನ್ನು ಮೇಲೆ ಒಳ್ಳೆಯ ದಾರಿ ಅನುಸರಿಸಬೇಕೆಂದು ತೀರ್ಮಾನಿಸಿ, ಲ್ಹೋಬ್ರಾಕ್ ನಲ್ಲಿರುವ ಮಾರ್ಪನ ಬಳಿ ಸಾಧನೆ ಮಾಡಲು ಮಿಲರೇಪನಿಗೆ ಸೂಚಿಸಿದನು. ಮಾರ್ಪನ ಬಗ್ಗೆ ತಿಳಿದಿದ್ದ ಮಿಲರೇಪ ಬಹಳ ಸಂತಸದಿಂದ ಮರುಕ್ಷಣವೇ ಅಲ್ಲಿಂದ ಲ್ಹೋಬ್ರಾಕ್ ಕಡೆ ಹೊರಟನು.
******
ಟಿಬೇಟಿನ ಬೌದ್ದರಲ್ಲಿ ಮೂರು ಪಂಗಡಗಳಿವೆ.
೧. ಹಳದಿ ಟೋಪಿ ತೊಡುವ ಪಂಥ -ಮಾಧ್ಯಮಿಕ ಪಂಥ – ದಲೈ ಲಾಮಾ ಈ ಪಂಗಡಕ್ಕೆ ಸೇರಿದವರು
೨. ಕರ್ ಗ್ಯುಟ್ಪ – ಮಹಾಮುದ್ರ ಪಂಥ – ಮಿಲರೇಪ ಈ ಪಂಗಡಕ್ಕೆ ಸೇರಿದವನು
೩. ಕೆಂಪು ಟೋಪಿ ತೊಡುವ ಪಂಥ – ಆದಿಯೋಗ ಪಂಥ – ಇವರನ್ನು ನಿಂಗ್ ಮಾಪರೆನ್ನುತ್ತಾರೆ
ಇವರುಗಳ ನಡುವೆ ಅಂತಹ ಸಾಮರಸ್ಯ ಇಲ್ಲ.. ಹಳದಿ ಮತ್ತು ಕೆಂಪು ಟೋಪಿ ಧರಿಸುವ ಪಂಥದವರ ಮಧ್ಯೆಯಂತೂ ಬಹಳಷ್ಟು ವೈರುಧ್ಯತೆ, ಭಿನ್ನತೆಗಳಿವೆ.
ಮಿಲರೇಪ ಮಹಾಮುದ್ರ ಪಂಥಕ್ಕೆ ಸೇರಿದವನು. ಕರ್ ಗ್ಯುಟ್ಪ ಪಂಥದ ಮೂಲ ಗುರು ವಜ್ರಧರ (ದೋರ್ಜೆ ಚಾಂಗ್ )…. ನಂತರ ತಿಲೋಪ , ನರೋಪ , ಮಾರ್ಪ , ಮಿಲರೇಪ , ಗಾಂಪೋಪ ಪ್ರಮುಖ ಗುರುಗಳು … ಅದರೂ ಮಾರ್ಪನೆ ಇದರ ಪ್ರವರ್ತಕ .
ಮಾರ್ಪ, ಕರ್ ಗ್ಯುಟ್ಪ ಪಂಥದ ನಾಲ್ಕನೇ ಗುರು. ಭಾರತೀಯ ಯೋಗಿ ‘ನರೋಪ’ ಇವನ ಗುರು. ಮಾರ್ಪ ಭಾರತಾದ್ಯಂತ ಸಂಚರಿಸಿ ಬೌದ್ಧ ಧರ್ಮ, ತಂತ್ರ, ಯೋಗಗಳಿಗೆ ಸಂಬಂಧಿಸಿದ ಹಲವಾರು ಸಂಸ್ಕೃತ ಗ್ರಂಥಗಳನ್ನು ಟಿಬೆಟಿಗೆ ಅನುವಾದಿಸಿದ ಹಾಗಾಗಿ ಇವನನ್ನು ಅನುವಾದಕ ಮಾರ್ಪ ( Marpa the Translator) ಎಂತಲೂ ಕರೆಯಲಾಗಿದೆ. ನರೋಪ ಮತ್ತು ಮಾರ್ಪನ ಬಗ್ಗೆ ಬಹಳಷ್ಟು ಹೇಳುವುದಿದೆ ಮತ್ತೊಮ್ಮೆ ಈ ಇಬ್ಬರನ್ನು ಪ್ರತ್ಯೇಕವಾಗಿ ಪರಿಚಯಿಸುತ್ತೇನೆ.
ಅತ್ತ ಮಿಲರೇಪ ಹೊರಟ ಮೇಲೆ
ಇತ್ತ ಮಾರ್ಪ ನಿಗೂ ತನಗೊಬ್ಬ ಮಹಾಶಿಷ್ಯನು ದೊರಕುವ ಕನಸಾಗಿತ್ತು. ಅವನ ಹೆಂಡತಿಗೂ ಇದೆ ತರದ ಹೊಸ ಶಿಷ್ಯನ ಕನಸು ಬಿದ್ದಿತ್ತು . ಮನೆಯ ಬದಿಯ ಹೊಲದಲ್ಲಿ ಕೆಲಸ ಮಾಡುತ್ತ ಶಿಷ್ಯನು ಬರುದನ್ನೇ ಎದುರು ನೋಡುತ್ತ ಇದ್ದನು. ಉದ್ದಕು ಮಾರ್ಪನ ಮನೆಯ ವಿಳಾಸವನ್ನು ವಿಚಾರಿಸಿಕೊಂಡು ಬಂದ ಮಿಲರೇಪ ಅಲ್ಲೊಬ್ಬ ಹೊಲ ಉಳುತ್ತಿದ್ದ ಸ್ಥೂಲಕಾಯದ ವ್ಯಕ್ತಿಯನ್ನು ಕೇಳುತ್ತಾನೆ. ಆಗ ಆ ವ್ಯಕ್ತಿ ಈ ಹೊಲವನ್ನು ನೀನು ಉಟ್ಟು ಮುಗಿಸಿದ್ರೆ ಮಾರ್ಪಾನನ್ನು ತೋರಿಸುತ್ತೇನೆಂದು ಹೇಳುತ್ತಾನೆ. ಗುರುವಿನ ನಿರೀಕ್ಷೆಯಲಿ ಇದ್ದ ಮಿಲರೇಪ ಹೊಲವನ್ನು ಸಂಪೂರ್ಣವಾಗಿ ಉತ್ತು ಮುಗಿಸುತ್ತಾನೆ, ಆ ವೇಳೆಗೆ ಆ ವ್ಯಕ್ತಿಯ ಮಗ ಬಂದು ಕರೆದೊಯ್ದು ಗುರು ಮಾರ್ಪನ ಮುಂದೆ ನಿಲ್ಲಿಸುತ್ತಾನೆ. ಮಿಲರೇಪ ಪರಮಾಶ್ಚರ್ಯದಿಂದ ಅವನ ಕಾಲಿಗೆ ಬಿದ್ದು ಕ್ಷೇಮೆ ಕೇಳುತ್ತಾ ತನ್ನನ್ನೇ ಗುರುವೆ ಅರ್ಪಿಸಿಕೊಳ್ಳುತ್ತಾನೆ. ಆ ಹೊಲ ಉಳುತ್ತಿದ್ದ ವ್ಯಕ್ತಿ ಬೇರೆ ಯಾರು ಆಗಿರದೇ ಅರಸಿ ಬಂದ ‘ಮಾರ್ಪ’ನೇ ಆಗಿರುತ್ತಾನೆ.
ತನ್ನ ಮಹಾಶಿಷ್ಯನಿಗೆ ಉಣ್ಣುವ ಅನ್ನವನ್ನು ಸ್ವತಃ ಸಂಪಾದಿಸಿಕೊಳ್ಳಬೇಕೆಂದು, ತನ್ನೆಲ್ಲಾ ಪರೀಕ್ಷೆಗಳನ್ನು ಪಾಸುಮಾಡಿದರೆ ಉಪದೇಶ ಸಿಗುವುದೆಂದು ಮಹಾಗುರು ಹೇಳುತ್ತಾನೆ … (ಮುಂದುವರಿಯುವುದು )
ಮಿಲರೇಪನಿಗೆ ಇನ್ನಿಲ್ಲದ ಕಷ್ಟಗಳು ಪರೀಕ್ಷೆಗಳು ಮತ್ತು ಮಾರ್ಪನಿಂದ ಶಿಷ್ಯನಿಗೆ ಮಹಾದೀಕ್ಷೆ ~ ಮುಂದಿನ ವಾರ





Interesting!
There is so much similarities between the postures and mudras of yogi’s from the same region !! Listening posture of Drukpa Kunley, about whom I have written in my Bhutan travelogue today is very much similar to Milarepa. We can make out difference only in the way they sit. It reminds Theerthankara’s posture which looks similar at first sight. Very interesting !
ಆಸಕ್ತಿಕರವಾದ ವಿಷಯ -ಮುಂದಿನ ಕಂತಿಗೆ ಕಾಯುತ್ತಿದ್ದೇನೆ.