ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜೇಂದ್ರ ಚೆನ್ನಿ ಹೇಳ್ತಾರೆ..

ಎಡವೂ ಅಲ್ಲ, ಬಲವೂ ಅಲ್ಲ, ಅರ್ಥಾತ್ ಏನೂ ಅಲ್ಲ.

ರಾಜೇಂದ್ರ ಚೆನ್ನಿ

ಯಾವುದೇ ಅಲೆಗೆ ಹೋಗಬೇಡವೆನ್ನುವುದು ಒಂದು ಸಲಹೆಯೇ ಹೊರತು ತಾತ್ವಿಕ ವಾದವಾಗಲಾರದು.

ಇಂಥ ವಾದವು ಹೊಸದಲ್ಲ. ಮನುಷ್ಯ ವಿರೋಧಿಯಾದ ಬಲಪಂಥೀಯ ರಾಜಕೀಯವು ಪ್ರಬಲವಾಗುತ್ತಿದ್ದಾಗಲೆಲ್ಲ ಅದು ಮುನ್ನೆಲೆಗೆ ಬರುತ್ತದೆ. ಅದರ ಮುಖ್ಯಗುರಿಯೆಂದರೆ ವಿಮರ್ಶೆ ಹಾಗೂ ಪ್ರತಿಭಟನೆಗಳನ್ನು ಹತ್ತಿಕ್ಕುವುದು.

ಈ ವಾದವು ಅಪ್ಪಟವಾದ, ಮಧ್ಯಮ ವರ್ಗಕ್ಕೆ ಕೊಡಲಾಗುವ ಅಫೀಮು.

ಮೊದಲೇ ರಾಜಕೀಯ ಚಿಂತನೆ ಅಥವಾ ಕ್ರಿಯೆಯೆಂದರೆ ಅಸಡ್ಡೆ ತೋರಿಸಿ ದೂರವಿರುವ ಈ ವರ್ಗಕ್ಕೆ ಅದರ ನಿಷ್ಕ್ರಿಯತೆಗೆ ಒಂದು ಆಕರ್ಷಕವಾದ ನ್ಯಾಯಸಮರ್ಥನೆಯು ಈ ವಾದದಿಂದ ದೊರೆಯುತ್ತದೆ. ಇಷ್ಟು ಸಾಲದು ಎಂಬಂತೆ ಬುದ್ಧನದೂ ಮಧ್ಯಮ ಮಾರ್ಗವೆಂದು ಅವನನ್ನು ತಮ್ಮ ‘ಬ್ರಾಂಡ್ ಅಂಬಾಸಡರ್’ನನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ!

ಇತ್ತೀಚಿಗೆ ಒಂದು ವಾದವನ್ನು ಇದೇನೋ ನಮ್ಮ ಬಿಕ್ಕಟ್ಟುಗಳಿಗೆ ಹೊಸ ಪರಿಹಾರವೆನ್ನುವ ಹಾಗೆ ಹರಿಬಿಡಲಾಗಿದೆ. ನಿರೀಕ್ಷಿತ ರೀತಿಯಲ್ಲಿಯೇ ಅದಕ್ಕೆ ನಮ್ಮ ಮಾಧ್ಯಮಗಳು ಹಾಗೂ ಒಂದು ಸಾಹಿತ್ಯಿಕ ವಲಯವು ಬಹು ಗಂಭೀರವಾದ ಪ್ರತಿಕ್ರಿಯೆ ನೀಡಿ ಅದನ್ನು ನಮ್ಮ ಚರ್ಚೆಗಳ ಮುನ್ನೆಲೆಗೆ ತರಲು ಪ್ರಯತ್ನಿಸುತ್ತಿವೆ. ಈ ವಾದವೆಂದರೆ ನಮ್ಮ ವೈಚಾರಿಕ ವಲಯವು ಎಡ ಹಾಗೂ ಬಲ ಎನ್ನುವ ಎರಡು ಅತಿಶಯಗಳಲ್ಲಿ ಇಬ್ಭಾಗವಾಗಿ ಹೋಗಿದೆ. ಈ ಎರಡೂ ಪಕ್ಷದವರು ಸೈದ್ಧಾಂತಿಕವಾಗಿ ಎರಡು ವಿರುದ್ಧ ಅಲೆಗಳಿಗೆ ತಲುಪಿದ್ದಾರೆ.

ಇದರಿಂದಾಗಿಯೇ ವಾದ ವಿವಾದಗಳು ಮಾತ್ರವಲ್ಲ, ಪ್ರಕ್ಷುಬ್ಧ ವಾತಾವರಣವು ಸೃಷ್ಟಿಯಾಗಿದೆ. ಒಬ್ಬ ವಿದ್ವಾಂಸರ ಪ್ರಕಾರ ಪ್ರೊ. ಎಂ.ಎಂ. ಕಲಬುರ್ಗಿಯವರ ಕೊಲೆಗೆ ಕೂಡ ಕಾರಣವಾಗಿದ್ದು ಅವರೂ ಒಂದು ಅತಿಯಾದ ನಿಲುವಿಗೆ ತಲುಪಿದ್ದರಿಂದ! ಇದೆಲ್ಲದಕ್ಕೆ ಪರಿಹಾರವೆಂದರೆ “ಮಧ್ಯಮ ಮಾರ್ಗ”. ಅಂದರೆ ಎಡವೂ ಅಲ್ಲದ ಬಲವೂ ಅಲ್ಲದ “ವಿವೇಕ” ದ ಮಾರ್ಗವನ್ನು ಹುಡುಕುವುದು.

ಇಂಥ ವಾದವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತಿದೆಯೆನ್ನುವುದು ಕನ್ನಡ ವೈಚಾರಿಕತೆಯು ತಲುಪಿದ ಅಧೋಗತಿಯ ಲಕ್ಷಣವೆಂದು ಭಾವಿಸುತ್ತೇನೆ. ಏಕೆಂದರೆ ಯಾವುದೇ ಅಲೆಗೆ ಹೋಗಬೇಡವೆನ್ನುವುದು ಒಂದು ಸಲಹೆಯೇ ಹೊರತು ತಾತ್ವಿಕ ವಾದವಾಗಲಾರದು. ಹೀಗಾಗಿ ಅದು ಚರ್ಚೆಗೂ ಯೋಗ್ಯವಲ್ಲ.

ಆದರೆ ನಾನು ಅದನ್ನು ಚರ್ಚಿಸಲು ಕಾರಣವೆಂದರೆ ಇಂದಿನ ಸಂದರ್ಭದಲ್ಲಿ ಇಂಥ ವಾದವು ಯಥಾ ಸ್ಥಿತಿಯನ್ನು ಕಾಪಾಡಲು ಹಾಗೂ ಬಲಪಂಥೀಯ ಹಿಂಸೆಯನ್ನು ಪರೋಕ್ಷವಾಗಿ ಸಮರ್ಥಿಸಲು ಬೆಂಬಲವಾಗಬಹುದು. ಇಂಥ ವಾದವು ಹೊಸದಲ್ಲ. ಮನುಷ್ಯ ವಿರೋಧಿಯಾದ ಬಲಪಂಥೀಯ ರಾಜಕೀಯವು ಪ್ರಬಲವಾಗುತ್ತಿದ್ದಾಗಲೆಲ್ಲ ಅದು ಮುನ್ನೆಲೆಗೆ ಬರುತ್ತದೆ. ಅದರ ಮುಖ್ಯಗುರಿಯೆಂದರೆ ವಿಮರ್ಶೆ ಹಾಗೂ ಪ್ರತಿಭಟನೆಗಳನ್ನು ಹತ್ತಿಕ್ಕುವುದು. ಇದನ್ನು ನೇರವಾಗಿ ದಬ್ಬಾಳಿಕೆ ಹಾಗು ಹಿಂಸೆಯ ಮೂಲಕ ಮಾಡಬಹುದು. ಇತ್ತಿಚೆಗೆ ನಾವು ಕಂಡಿರುವ ಅಸಹಿಷ್ಣುತೆಯು ಇಂಥ ಕ್ರಮವಾಗಿದೆ.

ಈ ಅಸಹಿಷ್ಣುತೆಯು ಮುಗಿಯಿತೆನ್ನುವ ಭ್ರಮೆ ಬೇಡ. ಆರ್.ಎಸ್.ಎಸ್. ಮೂಲದ ಬಲಪಂಥೀಯ ತಾತ್ವಿಕತೆಯ ಆಧಾರವೇ ಅಸಹಿಷ್ಣುತೆ ಹಾಗೂ ದ್ವೇಷ. ಇವುಗಳ ಹೊರತಾಗಿ ಅದಕ್ಕೆ ಬೇರೆಯಾದ ವೈಚಾರಿಕತೆಯೇ ಇಲ್ಲ. ಇನ್ನು ವಿಮರ್ಶೆ ಹಾಗೂ ಪ್ರತಿಭಟನೆಗಳನ್ನು ಹತ್ತಿಕ್ಕಲು ಇರುವ ಪರೋಕ್ಷವಾದ ತಂತ್ರವೆಂದರೆ ಎಡಪಂಥೀಯ ಧೋರಣೆಗಳು ಅತಿಯಾದವುಗಳಾಗಿದ್ದರಿಂದ ಮಧ್ಯಮ ಮಾರ್ಗವು ಬೇಕೆನ್ನುವ ವಾದವನ್ನು ಹರಿಬಿಡುವುದು. ಈ ವಾದವು ಅಪ್ಪಟವಾದ, ಮಧ್ಯಮ ವರ್ಗಕ್ಕೆ ಕೊಡಲಾಗುವ ಅಫೀಮು. ಮೊದಲೇ ರಾಜಕೀಯ ಚಿಂತನೆ ಅಥವಾ ಕ್ರಿಯೆಯೆಂದರೆ ಅಸಡ್ಡೆ ತೋರಿಸಿ ದೂರವಿರುವ ಈ ವರ್ಗಕ್ಕೆ ಅದರ ನಿಷ್ಕ್ರಿಯತೆಗೆ ಒಂದು ಆಕರ್ಷಕವಾದ ನ್ಯಾಯಸಮರ್ಥನೆಯು ಈ ವಾದದಿಂದ ದೊರೆಯುತ್ತದೆ.

ಉದಾಹರಣೆಗೆ ಎಂ.ಎಂ. ಕಲಬುರ್ಗಿಯವರ ಕೊಲೆಯಾಗುತ್ತದೆ. ರಾಜಕೀಯವು ಆ ಕಡೆಗಿರಲಿ, ಯಾವ ನಾಗರೀಕ ಸಮಾಜವೂ ಮನುಷ್ಯ ವ್ಯಕ್ತಿಯ ಕೊಲೆಯನ್ನು ಒಪ್ಪಕೂಡದು. ಈ ಕೊಲೆಯ ಹಿಂದೆ ಬಲಪಂಥೀಯ ಸಂಸ್ಥೆಗಳು ಇರುವುದು ಖಚಿತವಾಗುತ್ತ ಬಂದಂತೆ ಮಧ್ಯಮ ಮಾರ್ಗದ ಹರಿಕಾರರು ಕಲಬುರ್ಗಿಯವರು ಬರೆದದ್ದು ಅತಿಯಾಗಿತ್ತು. ಹೀಗಾಗಿ ಅವರ ಕೊಲೆಯಾಯಿತು.., ಎನ್ನುವ ಧಾಟಿಯಲ್ಲಿ ಮಾತನಾಡುತ್ತಾರೆ. ಇದು ಪರೋಕ್ಷವಾಗಿ ಕೊಲೆಯ ಸಮರ್ಥನೆಯೆನ್ನುವುದು ಅವರಿಗೆ ಹೊಳೆಯುವುದಿಲ್ಲ.

ಹೋಗಲಿ, ನಿಮ್ಮದು ಅತಿಯಾಯಿತು ಎಂದು ಸನಾತನ ಸಂಸ್ಥೆಗೆ ಅವರು ಹೇಳುತ್ತಾರೆಯೆ? ಖಂಡಿತ ಇಲ್ಲ, ಏಕೆಂದರೆ ಆಳದಲ್ಲಿ ಆ ಸಂಸ್ಥೆಯ ತಾತ್ವಿಕತೆಯ ಬಗ್ಗೆ ಇವರಿಗೆ ತಕರಾರಿಲ್ಲ. ಅದು ಹೇಗೆಂದರೆ “ಒಂದು ವೇಳೆ ನಿಮ್ಮ ಸಂಸ್ಥೆಯು ಈ ಕೊಲೆಗೆ ಕಾರಣವಾಗಿದ್ದರೆ ಅದನ್ನು ನಾವು ವಿರೋಧಿಸುತ್ತೇವೆ. ಅದು ಅತಿಯಾಯಿತು. ಆದರೆ ನಿಮ್ಮ ಸಿದ್ಧಾಂತಗಳ ಬಗ್ಗೆ ನಮಗೆ ತಕರಾರಿಲ್ಲ” ಎಂದು ಹೇಳಿದಂತೆ. ವಾಸ್ತವವೆಂದರೆ ಬಲಪಂಥೀಯ ಸಂಸ್ಥೆಗಳಿಗೆ ಒಂದು ಇತಿಹಾಸವಿದೆ. ಅದರ ತಾತ್ವಿಕತೆಯ(!) ಆ ಸಂಸ್ಥೆಗಳೇ ಪ್ರಕಟಿಸಿರುವ ಬರಹಗಳು ದಾಖಲೆಗಳು ಇವೆ. ಉದಾಹರಣೆಗೆ ಗೋಲವಲ್ಕರ್ ಅವರು ಹಿಟ್ಲರ್‍ನ ನಾಜಿ ಪಕ್ಷವೂ ಯಹೂದಿಗಳನ್ನು ಕೊಂದು ಜನಾಂಗೀಯ ಶುದ್ಧೀಕರಣವನ್ನು ಮಾಡಿದ್ದನ್ನು ನೇರವಾಗಿ ಸಮರ್ಥಿಸುತ್ತಾರೆ.

ಹಾಗಿದ್ದರೆ ನಾವು ಏನನ್ನು ವಿರೋದಿಸಬೇಕು? ಅಮೂಲಾಗ್ರವಾಗಿ ಇಂಥ ಚಿಂತನೆಯನ್ನೋ ಅಥವಾ ಅದರಿಂದಾಗಿ ಉಂಟಾಗುವ ಹಿಂಸೆಯ ಪ್ರಕರಣಗಳನ್ನು ಮಾತ್ರವೋ? ಗಾಂಧೀಜಿಯ ಕೊಲೆಗೂ ತನಗೂ ಸಂಬಂಧವಿಲ್ಲವೆನ್ನುವ ಆರ್.ಎಸ್.ಎಸ್. ಕೂಡ ಮಧ್ಯಮ ಮಾರ್ಗವನ್ನೇ ಬಳಸಿಕೊಳ್ಳುತ್ತದೆ. ಗೋಡ್ಸೆ ತಮ್ಮ ಸಂಸ್ಥೆಯನ್ನು ಆಗಲೇ ಬಿಟ್ಟಿದ್ದ. ಅವನು ಹಾಲಿ ಸದಸ್ಯನಾಗಿರಲಿಲ್ಲ. ಅವನದು ಅತಿಯಾಯಿತು. (ಆದರೆ ಗೋಡ್ಸೆಯನ್ನು ಹೀರೋ ಅನ್ನಾಗಿ ನೋಡುವ ತಮ್ಮ ಪರಿವಾರದ ಸಂಸ್ಥೆಗಳನ್ನು ನಿಷೇದಿಸಿ ಎಂದು ಅದು ಹೇಳುವುದಿಲ್ಲ). ಆದರೆ ಅವನ ಕೈಯಲ್ಲಿ ಪಿಸ್ತೂಲನ್ನು ಕೊಡದಿದ್ದರೆ ಏನಂತೆ, ಅವನ ಮಿದುಳಿಗೆ ಕೊಲೆಯ ಉದ್ದೇಶವನ್ನು ತಂದಿದ್ದು ಯಾವ ತಾತ್ವಿಕತೆಯೆನ್ನುವುದು ಸ್ವಷ್ಟವಾಗಿಯೇ ಇದೆ. ಇಂಥ ತಾತ್ವಿಕತೆಯನ್ನು ಒಪ್ಪಿಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯೂ ಗಾಂಧೀಜಿಯ ಕೊಲೆಯಲ್ಲಿ ನೈತಿಕವಾಗಿ ಸಹಭಾಗಿಯೇ ಆಗಿರುತ್ತಾನೆ.

ಅಷ್ಟಕ್ಕೂ ಈ ಮಧ್ಯಮ ವರ್ಗದ ನೀತಿ ಬೋಧನೆಯು ಬರುತ್ತಿರುವುದು ಯಾವ ವೈಚಾರಿಕ ವಲಯದಿಂದ? ಬಹುಕಾಲದವರೆಗೆ ಕನ್ನಡ ಸಾಹಿತ್ಯ ಹಾಗೂ ಸಂಸ್ಕøತಿಗಳ ಮೇಲೆ ತನ್ನ ಯಜಮಾನಿಕೆಯನ್ನು ಸಾಧಿಸಿಕೊಂಡು ಬಂದಿದ್ದ ಬ್ರಾಹ್ಮಣಶಾಹಿಗೆ ಬರಹಗಾರರ ಒಕ್ಕೂಟದ ಕಾಲದಿಂದ ಪ್ರಬಲವಾದ ಪೆಟ್ಟುಗಳು ಬೀಳುತ್ತವೇ ಬಂದಿವೆ. ದಲಿತ, ಬಂಡಾಯ ಚಳುವಳಿಗಳಿಂದ ಹಾಗೂ ಎಡಪಂಥೀಯ ಚಳುವಳಿಗಳಿಂದ ಕನ್ನಡ ಸಾಹಿತ್ಯದ ಕುಲಕರ್ಣಿಗಳು, ಅಮಲ್ದಾರ್‍ರು ತಮ್ಮ ಪಾರಂಪರಿಕ ಅಧಿಕಾರವನ್ನು ಕಳೆದುಕೊಂಡು ಬಿಟ್ಟಿದ್ದಾರೆ. ಹೀಗಾಗಿ ಅವರು ಬಲಪಂಥೀಯ ಒಲವುಗಳ ಪರವಾಗುತ್ತ ಬಂದಿದ್ದಾರೆ. ಆದರೆ ಅವರು ಹೇಳಿ ಕೇಳಿ ಮಧ್ಯಮ ವರ್ಗದವರಾಗಿರುವುದರಿಂದ ನೇರವಾಗಿ ಬಲಪಂಥದ ಸಮರ್ಥನೆಗೆ ಇಳಿಯುವುದಿಲ್ಲ. ಬದಲಾಗಿ ಎಡಪಂಥವೆಂದರೆ ಸೈದ್ಧಾಂತಿಕ ‘ಅಲೆ’ಯೆನ್ನುವ ವಾದವನ್ನು ಮಂಡಿಸುತ್ತಾರೆ. ಎಂದಿಗೂ ಕೂಡ ಜನಪರವಾದ ಚಳುವಳಿಗಳಲ್ಲಿ ಭಾಗವಹಿಸುವುದಿಲ್ಲ.

ಎಡಪಂಥೀಯ ಬರಹಗಾರರನ್ನು ಎದುರು ಹಾಕಿಕೊಳ್ಳುವುದಿಲ್ಲ. ಜಾಣತನದಿಂದ ಮಾಧ್ಯಮಗಳ ಮೂಲಕ, ಪ್ರಕಾಶನ ಸಂಸ್ಥೆಗಳ ಮೂಲಕ ಎರಡನೇ ದರ್ಜೆಯ ಬ್ರಾಹ್ಮಣ ಬರಹಗಾರರನ್ನು ಶ್ರೇಷ್ಠ ಬರಹಗಾರರೆಂದು ಸ್ಥಾಪಿಸುತ್ತಾರೆ. ಈಗಲೂ ಬಹುಪಾಲು ಪ್ರಶಸ್ತಿ, ಪುರಸ್ಕಾರಗಳನ್ನು ನಿರ್ಧರಿಸುವವರು ಈ ಬ್ರಾಹ್ಮಣಶಾಹಿಯ ಸದಸ್ಯರೆ. ಫರಕು ಇಷ್ಟೆ. ಇವರದು ಪೋಸ್ಟ್‍ಮಾಡರ್ನಿಸ್ಟ್ ಅಗ್ರಹಾರಗಳು. ಈಗ ಇವರ ನಿರೀಕ್ಷೆಯೂ ಮಿರಿದಂತೆ ಅಧಿಕಾರದಲ್ಲಿರುವ ರಾಜಕೀಯ ವ್ಯವಸ್ಥೆಯ ವಿರುದ್ಧ ಪ್ರಬಲವಾದ ಪ್ರತಿಭಟನೆಯು ಬರುತ್ತಿರುವುದರಿಂದ ಇವರು ಎಡವೂ ಬೇಡ ಬಲವೂ ಬೇಡ ಎನ್ನುವ ಜಾಣತನದ ವಾದದಿಂದ ದಾರಿ ತಪ್ಪಿಸುವ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

ಇಷ್ಟು ಸಾಲದು ಎಂಬಂತೆ ಬುದ್ಧನದೂ ಮಧ್ಯಮ ಮಾರ್ಗವೆಂದು ಅವನನ್ನು ತಮ್ಮ ಬ್ರಾಂಡ್ ಅಂಬಾಸಡರ್”ನನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ! ದೇವರು ಇಲ್ಲ; ಯಜ್ಞಮಾರ್ಗಗಳಿಂದ ಪ್ರಯೋಜನವೇ ಇಲ್ಲ. ಯಾವ ಬಗೆಯ ಅಸಮಾನತೆ, ಹಿಂಸೆಗಳನ್ನು ಒಪ್ಪಲಾಗದು. ಹೀಗೆ ಹೇಳಿದ ಬುದ್ಧನದು ಮಧ್ಯಮ ಮಾರ್ಗವೆಂದು ಹೇಳಿದರೆ ಗತಕಾಲದ ಬಲಪಂಥೀಯರ ಆತ್ಮಗಳು ವಿಲವಿಲ ಒದ್ದಾಡುತ್ತವೆ ಎನ್ನುವ ಎಚ್ಚರವಾದರೂ ಬೇಡವೆ?

ಪ್ರಿಯ ಓದುಗರೆ, ಮಧ್ಯಮಮಾರ್ಗವನ್ನು ನೀವು ಒಪ್ಪುವುದಾದರೆ ಹೀಗೆ ಮಾಡಿ:

ಎಂ.ಎಂ. ಕಲಬುರ್ಗಿಯವರಂಥ ‘ಅತಿಯಾದ” ವಿಚಾರವಾದಿಯೊಬ್ಬನನ್ನು ಕೈಯಲ್ಲಿ ಹರಿತವಾದ ಚಾಕುವಿನಿಂದ ಒಬ್ಬ ‘ಅತಿಯಾದ’ ಬಲಪಂಥೀಯನು ಕೊಲ್ಲಲು ಬಂದಿದ್ದಾನೆ ಎಂದುಕೊಳ್ಳಿ. ಆಗ ನೀವು ಏನು ಮಾಡಬೇಕು? ಅವನು ವಿಚಾರವಾದಿಯ ಎದೆಯಲ್ಲಿ ಈ ಚಾಕುವನ್ನು ಇರಿಯುತ್ತಿದ್ದಾಗ ನಿಲ್ಲಿಸಬೇಡಿ. ಅದು ಅತಿಯಾಗಿ ಒಳಗೆ ಹೋಗುವಾಗ ಮಾತ್ರ “ಸಾಕು ನಿಲ್ಲಿಸು, ಇದು ಅತಿಯಾಯಿತು” ಎಂದು ಮೃದುವಾಗಿ ಹೇಳಿ. ಅಕಸ್ಮಾತ್ ಅಷ್ಟರಲ್ಲಿ ವಿಚಾರವಾದಿಯ ಪ್ರಾಣ ಹೋದರೆ ಯೋಚಿಸಬೇಡಿ. ಅವನ ಅತಿಯಾದ ವಿಚಾರವಾದದಿಂದಲೇ ಹೀಗಾಯಿತು ಅಲ್ಲವೆ?

‍ಲೇಖಕರು admin

28 January, 2017

7 Comments

  1. ರಘುನಾಥ

    ಮಧ್ಯಮವರ್ಗದ ಜಾಣ ಅವಕಾಶವಾದಿನಿಲುವಿಗೆಇನ್ಶೊಂದುಹೆಸರೇಮಧೈಮದಾರಿ

  2. C P Nagaraja

    ” ಇಂಥ ವಾದವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತಿದೆಯೆನ್ನುವುದು ಕನ್ನಡ ವೈಚಾರಿಕತೆಯು ತಲುಪಿದ ಅಧೋಗತಿಯ ಲಕ್ಷಣವೆಂದು ಭಾವಿಸುತ್ತೇನೆ.
    ಆರ್.ಎಸ್.ಎಸ್. ಮೂಲದ ಬಲಪಂಥೀಯ ತಾತ್ವಿಕತೆಯ ಆಧಾರವೇ ಅಸಹಿಷ್ಣುತೆ ಹಾಗೂ ದ್ವೇಷ. ಇವುಗಳ ಹೊರತಾಗಿ ಅದಕ್ಕೆ ಬೇರೆಯಾದ ವೈಚಾರಿಕತೆಯೇ ಇಲ್ಲ. ಇನ್ನು ವಿಮರ್ಶೆ ಹಾಗೂ ಪ್ರತಿಭಟನೆಗಳನ್ನು ಹತ್ತಿಕ್ಕಲು ಇರುವ ಪರೋಕ್ಷವಾದ ತಂತ್ರವೆಂದರೆ ಎಡಪಂಥೀಯ ಧೋರಣೆಗಳು ಅತಿಯಾದವುಗಳಾಗಿದ್ದರಿಂದ ಮಧ್ಯಮ ಮಾರ್ಗವು ಬೇಕೆನ್ನುವ ವಾದವನ್ನು ಹರಿಬಿಡುವುದು. ಈ ವಾದವು ಅಪ್ಪಟವಾದ, ಮಧ್ಯಮ ವರ್ಗಕ್ಕೆ ಕೊಡಲಾಗುವ ಅಫೀಮು.”–
    ಇಂತಹ ಸ್ಪಷ್ಟವಾದ ಮಾತುಗಳಿಂದ ಮಧ್ಯಮ ಮಾರ್ಗದ ಪ್ರತಿಪಾದನೆಯ ಹುನ್ನಾರವೇನೆಂಬುದನ್ನು ರಾಜೇಂದ್ರಚೆನ್ನಿ ಅವರು ಸರಿಯಾಗಿ ವಿಶ್ಲೇಷಿಸಿದ್ದಾರೆ.

  3. nadashettymodara shetty

    bala panthiiyarantheye edapanthiiyaruu keraladalli avyaahathavaagi nadesuva kaggole kandu rosihogiddene. palaayanavaada endaruu sariye; naanu madhyama maargavondiddare adannu bembalisabayasuttene.

  4. Anand Unnibhavi

    Super

  5. Neeta Rao

    ಕಲಬುರ್ಗಿ ಅವರ ಹಂತಕರು ಯಾರೆಂಬುದನ್ನು ನೀವು ಈಗಾಗಲೇ ತೀರ್ಪು ಕೊಟ್ಟಾಗಿದೆಯೇ ಹಾಗಾದ್ರೆ, ಚೆನ್ನಿ ಅವರೆ? ತಾವೆಲ್ಲ ಸೇರಿ ಕೇಸನ್ನು ಬಗೆ ಹರಿಸಿ ಪಾತಕಿಗಳನ್ನು ಹುಡುಕುವಂತೆ ಸರಕಾರದ ಮೇಲೆ ಒತ್ತಡವನ್ನೇಕೆ ಹೇರುತ್ತಿಲ್ಲ? ನೀವೇ ಕೋರ್ಟು, ನೀವೇ ನ್ಯಾಯಾಧೀಶರು ಎಲ್ಲಾ ಆಗಿಬಿಟ್ಟು ಕಂಡಕಂಡವರ ಮೇಲೆ ಗೂಬೆ ಕೂರಿಸುವುದಕ್ಕಿಂತ ಪ್ರಕರಣದ ಇತ್ಯರ್ಥಕ್ಕಾಗಿ ಹೋರಾಡಿ.
    ಇನ್ನು ಯಾರು ಎಷ್ಟೇ ಪರಾಕು ಹಾಡಿದರೂ, ಮನಸಾರೆ ತೆಗಳಿದರೂ, ಯೋಗ್ಯವಾದ ಪುಸ್ತಕಗಳನ್ನು ಜನ ಕೊಂಡು ಓದುತ್ತಾರೆ. ಇನ್ನುಳಿದವುಗಳು ಸರಕಾರಿ ಕೃಪೆಗಾಗಿ, ಸರಕಾರ ನೀಡಬಹುದಾದ ಪ್ರಶಸ್ತಿಗಳಿಗಾಗಿ ಕಾದು ಕೂತಿರುತ್ತವೆ ಅಷ್ಟೆ. ಅದಕ್ಕೆ ಬೇರೇನೂ ಉಪಾಯವಿಲ್ಲ.

  6. Bolwar Mahamad Kunhi

    ನನಗೆ ನೆನಪಿರುವಂತೆ ನನ್ನ ತಾಯಿ ಬೀಡಿಯ ಎಲೆಗಳನ್ನು ಕತ್ತರಿಸುತ್ತಿದ್ದಾಗ, ಆಕೆಯ ಎಡಗೈಯಲ್ಲಿ ಎಲೆಯೂ, ಬಲಗೈಯಲ್ಲಿ ಕತ್ತರಿಯೂ ಇರುತ್ತಿದ್ದವು. ನನ್ನ ಅಕ್ಕ ಅಮಿತಾಬ್ ಬಚನ್ ನಂತೆ ಡೆಮ್ಮೆ. ಆಕೆಯ ಬಲಗೈಯಲ್ಲಿ ಎಲೆಯೂ ಎಡಗೈಯಲ್ಲಿ ಕತ್ತರಿಯೂ ಇರುತ್ತಿದ್ದವು. ಇಬ್ಬರ ಉದ್ದೇಶವೂ ಒಂದೆ. ಬೀಡಿ ಎಲೆಗಳನ್ನು ಬೀಡಿ ಕಟ್ಟಲು ಅನುಕೂಲವಾಗುವಂತೆ ಸರಿಯಾದ ಆಕಾರದಲ್ಲಿ ಕತ್ತರಿಸುವುದು ಮಾತ್ರ. ಆದರೆ, ಇಂದು ನಾವು ಧ್ವನಿವರ್ಧಕಗಳ ಎದುರು ಘರ್ಜಿಸುವಂತೆ, ಎಡ-ಬಲಗಳ ಬಗ್ಗೆ ಅವರು ತಲೆಕೆಡಿಸಿಕೊಂಡಿರಲಿಕ್ಕಿಲ್ಲ. ಅವರಿಗೆ ಅವೆರಡೂ ಅನ್ನದ ಬಟ್ಟಲುಗಳು ಅಷ್ಟೇ.

    ಆದರೆ, ವೇದಿಕೆಗಳಲ್ಲಿ ‘ಎರಡು ಮಾತು’ ಆಡಲು ಕಲಿತಿರುವ ನಮಗೆ ಎಡಬಲಗಳು ಅನ್ನದ ಬಟ್ಟಲುಗಳಲ್ಲ. ನಾವು ಭೂಮಿಗಿಳಿದಿರುವುದೇ ಇತರರಿಗೆ ಬುದ್ಧಿ ಹೇಳಲು. ಜಗತ್ತಿನ ಎಲ್ಲ ಸಮಸ್ಯೆಗಳನ್ನೂ ಪರಿಹರಿಸುವ ರಾಮಬಾಣಗಳು ನಮ್ಮ ಬತ್ತಳಿಕೆಗಳಲ್ಲಿರುತ್ತವೆ. ಸಮಯ ಸಂದರ್ಭಗಳನ್ನು ನೋಡಿಕೊಂಡು ಯಾವ ದಿಕ್ಕಿಗೂ ಬಾಣ ಹೂಡಬಲ್ಲ ಸವ್ಯಸಾಚಿಗಳು ನಾವು. ಬೇರೊಬ್ಬರು ‘ಏನನ್ನು’ ಹೇಳುತ್ತಿದ್ದಾರೆ ಎಂಬುದಕ್ಕಿಂತ, ‘ಆ ಬೇರೊಬ್ಬರು ಯಾರು’ ಎಂಬುದರ ಆಧಾರದಲ್ಲಿ ‘ಅವರು’ ಹೇಳುವ ಮಾತುಗಳಲ್ಲಿ ‘ನಮ್ಮ’ ಮಾತುಗಳನ್ನು ಓದಿಕೊಳ್ಳುವವರು ನಾವು.

    ಉದಾಹರಣೆಗೆ ಹಿರಿಯ ಲೇಖಕರಾದ ಬೈರಪ್ಪನವರು, ‘ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋದರೆ ಅಪಾಯ ಕಡಿಮೆ’ ಎಂಬುದಾಗಿ ಹೇಳಿಬಿಟ್ಟರೂ, ಅವರ ಸಲಹೆಯಲ್ಲಿ ಎಡ-ಬಲಗಳನ್ನು ಹುಡುಕುವ ನಾವು, ಮಹಮದನೊಬ್ಬ ‘ದೇಶಪ್ರೇಮಕಿಂತ ವಿಶ್ವಪ್ರೇಮ’ ಒಳ್ಳೆಯದು ಎಂಬುದಾಗಿ ಹೇಳಿದರೆ ಅವನ ಹಣೆಯಲ್ಲಿ ‘ಐ.ಎಸ್.ಐ.’ ಮಾರ್ಕ್ ಕಾಣಬಲ್ಲೆವು.

    ಆದ್ದರಿಂದಲೇ ಇರಬೇಕು, ‘ಮೈಕ್’ ಮಾತುಗಾರರಲ್ಲದ ಓದುಗರು ಮತ್ತು ಕೇಳುಗರು, ಈ ಎಡ-ಬಲಗಳ ಬಗ್ಗೆ ತಲೆಕೆಡಿಸಿಕೊಳ್ಳದೆ,
    ತಮಗಿಷ್ಟದ ದಿಕ್ಕುಗಳಿಗೆ ತಲೆಯಿಟ್ಟು ಮಲಗಿ ರಸಾನುಭೂತಿ ಅನುಭವಿಸುತ್ತಿರುವುದು.

    • Neeta Rao

      ಸರಿಯಾದ ತೂಕದ ಮಾತು ಸರ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading