ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜೇಂದ್ರಪ್ರಸಾದ್ ಕಾಲಂ : ರನ್ನನ ’ಗದಾಯುದ್ಧ’ ಪೂರ್ತಿ ಓದಬೇಕಲ್ಲ!

ಭೀಮಸೇನಾ ಪ್ರತಿಜ್ಞಾ ವರ್ಣನಂ

ಬಿ.ಕಾಂ. ತರಗತಿಯಲ್ಲಿ ಟ್ಯಾಕ್ಸು, ಅಕೌಂಟ್ಸು ಅನ್ನೋ ಲೆಕ್ಕಾಚಾರದ ಜೊತೆಗೆ ಆಗಾಗ ಹಳೆಗನ್ನಡ ಪದ್ಯಗಳ ತರಗತಿ ಕೂಡ ನಡೆಯುತ್ತಿತ್ತು.. ಆದರೆ ನನಗೋ ನಮ್ಮ ಮೇಸ್ಟ್ರುಗಳು ಮಾಡೋ ಶೈಲಿ ಇಷ್ಟವಾಗ್ತಿರಲಿಲ್ಲ… ಆದ್ರಲ್ಲೂ ಈ ಹಳೆಗನ್ನಡ ಮಾಡಬೇಕಿದ್ದ ಮೇಷ್ಟ್ರು ಕ್ಲಾಸಿಗೆ ಬರೋದೇ ಅಪರೂಪ.. ಬಂದ್ರೂ ನೇರವಾಗಿ ಕಾವ್ಯಕ್ಕೆ ಹೋಗಿ ಏನೋ ಒಂದಷ್ಟು ಹೇಳಿ ಕೈತೊಳೆದುಕೊಂಡು ಬಿಡುತ್ತಿದ್ದರು..
ನಡುಗನ್ನಡ ಕಾವ್ಯವನ್ನು ಆರಾಮಾಗಿ ಓದಿಕೊಳ್ಳುವ ನನಗೆ ಹಳೆಗನ್ನಡ ತುಂಬಾ ಪೀಡಿಸುತ್ತಿತ್ತು.. ಈಗಲೂ! ತುಂಬಾ ಕ್ಲಿಷ್ಟವಾದ ಪದಪ್ರಯೋಗ, ಛಂಧೋಬದ್ದತೆ.. ಲೈನುಗಟ್ಟಲೆ ಕೂಡಿಸಿಕೊಂಡ ವಾಕ್ಯಗಳು.. ಅದನ್ನು ಬಿಡಿಸುವ ಮತ್ತು ಓದುವ ಪರಿತಾಪ ಹೇಳಲಾಗದು… ಈ ಪೈಕಿ ಪಂಪ ಮತ್ತು ರನ್ನ ಇಬ್ಬರ ಕಾವ್ಯಗಳು ಸ್ವಲ್ಪ ಹೀಗೆಯೇ! ಅದ್ರಲ್ಲೂ ರನ್ನನ ಗದಾಯುದ್ಧ ಅದರ ವೀರರಸ ಅದ್ಬುತವೇನೋ ಹೌದು ಆದ್ರೆ ಓದುವುದು ಹೇಗೆ?! ನನಗೆ ಗೊತ್ತಿದ್ದ ಗಣ- ಪ್ರಸ್ತಾರ ಹಾಕಿ ವಿಂಗಡಿಸಲು ಕೂಡ ಸಾಧ್ಯವಾಗುತ್ತಿರಲಿಲ್ಲ.. ಕುಮಾರವ್ಯಾಸ, ಲಕ್ಷ್ಮೀಶರಷ್ಟು ಸುಲಭಕ್ಕೆ ರನ್ನ ಸಿಕ್ಕುವುದಿಲ್ಲ.. ಪದಗಳನ್ನು ಬಿಡಿದಷ್ಟೂ ಈ ಕಾವ್ಯಗಳ ಅರ್ಥಸಾಧ್ಯತೆ ಹರಡಿಕೊಳ್ಳುತ್ತಲೇ ಹೋಗುತ್ತದೆ. ಅದರ ಹಿಂದೆ ಬಿದ್ದು ಹಿಡಿದಷ್ಟೂ ಬೊಗಸೆ ತುಂಬಿಕೊಳ್ಳುವ ಸುಖ.
2ನೇ ವರ್ಷದ ಬಿ.ಕಾಂ. ತರಗತಿಯಲ್ಲಿ ನನಗೆ ರನ್ನನ ಗದಾಯುದ್ಧದ ಮೊದಲ ಅಧ್ಯಾಯ ‘ಭೀಮಸೇನಾ ಪ್ರತಿಜ್ಞಾ ವರ್ಣನಂ’ ಪಠ್ಯವಾಗಿತ್ತು.. ಕಾವ್ಯದ ಮೊದಲ ಪ್ಯಾರಾ ಹೀಗೆ ಆರಂಭವಾಗುತ್ತದೆ,
ಕುರುಭೂಭೃದ್ಬಲತೂಲಕಾಲಪವನಂ ಕೌರವ್ಯಗಂಧೇಭಕೇ
ಸರಿದುಶ್ಯಾಸನರಕ್ತರಕ್ತವದನಂ ದುರ್ಯೋಧನೋರುಕ್ಷಮಾ
ಧರವಜ್ರಂ ಕುರುರಾಜ ರತ್ನ ಮಕುಟೋತ್ಕೂಟಾಂಘ್ರಿಸಂಘಟ್ಟಸಂ
ಗರನೆಂದೆಂದಭಿವರ್ಣಿಪೆಂ ರಣಯಶಶ್ಯ್ರೀರಾಮನಂ ಭೀಮನಂ ||1||

ಈ ಪದ್ಯಗಳನ್ನು ಉಚ್ಚರಿಸಲು ನಾಲಿಗೆ ಬಹಳಷ್ಟು ಕಸರತ್ತು ಮಾಡಬೇಕಿತ್ತು… ಅದ್ರ ಜೊತೆಗೆ ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿತ್ತು.. ಕಡೆಗೆ ಕಾಲೇಜು ಲೈಬರಿಯಲ್ಲಿ ಹುಡುಕಿ ಹುಡುಕಿ ಹಳೆಗನ್ನಡ ನಿಘಂಟನ್ನು ಮತ್ತು ತೀನಂಶ್ರೀ ಅವರ ‘ಗದಾಯುದ್ಧ ಸಂಗ್ರಹ’ ಪಡೆದುಕೊಂಡೆ. ತೀನಂಶ್ರೀ ಅವ್ರ ಸಂಪಾದನೆ ಎಂದ ಮೇಲೆ ಅದೊಂದು ಅಧಿಕೃತಮುದ್ರೆ ಬಿದ್ದದಂತೆಯೇ. ಸಧ್ಯ ಇದರಲ್ಲಿ ಕಾವ್ಯದ ಪಠ್ಯ ಮುಗಿದ ಮೇಲೆ ಕೊನೆಯಲ್ಲಿ ಪ್ರತಿಪದವನ್ನು ಬಿಡಿಸಿ ಜೊತೆಗೆ ಅರ್ಥವನ್ನು, ಸಾರಾಂಶವನ್ನು ಕೊಟ್ಟಿದ್ದರು… ಓದು ಆರಂಭವಾಯಿತು.. ಮನಸಿನಲ್ಲೆ ಗೊಣಗಿಕೊಂಡು ಓದಿಕೊಳ್ಳುವ ಪರಿ ಈ ಕಾವ್ಯಕ್ಕೆ ಅಗಿಬರುವುದಿಲ್ಲ.. ಸ್ವಲ್ಪ ಎತ್ತರದ ದನಿಯಲ್ಲಿ ವೀರದಿಂದ ಹೀಗೆ ಬಿಡಿಸಿ ಓದಿಕೊಳ್ಳಬೇಕು .
ಕುರುಭೂಭೃತ್ / ಬಲ/ ತೂಲ/ಕಾಲಪವನಂ/ ಕೌರವ್ಯಗಂಧೇಭ /
ಕೇಸರಿ/ ದುಶ್ಯಾಸನರಕ್ತ/ ರಕ್ತವದನಂ/ ದುರ್ಯೋಧನ/ಊರು/ ಕ್ಷಮಾಧರವಜ್ರಂ/
ಕುರುರಾಜ ರತ್ನ / ಮಕುಟ /ಉತ್ಕೂಟ / ಅಂಘ್ರಿಸಂಘಟ್ಟ/
ಸಂಗರಂ/ ಎಂದೆಂದ/ಅಭಿವರ್ಣಿಪೆಂ ರಣಯಶ್/ ಶ್ರೀ /ರಾಮನಂ/ ಭೀಮನಂ
ಕೆಲವೊಂದಷ್ಟು ಪದಗಳು ಅರ್ಥವಾಗುದಿಲ್ಲವಾದರೂ ಬಹುತೇಕ ಕಾವ್ಯದ ಭಾವ ಹೀಗೆ ಬಿಡಿಸಿ, ಜೋರು ಓದುವಾಗ ಅರ್ಥವಾಗದಿರದು.
‘’ ಕುರುರಾಜನ ಹತ್ತಿಯಂತ ಸೈನ್ಯಕ್ಕೆ ಪ್ರಳಯಕಾಲದ ಬಿರುಗಾಳಿಯಂತಿರುವವನು, ಕುರುವಂಶದ ಮದದಾನೆಗಳಿಗೆ ಸಿಂಹದಂತೆ ಇರುವವನು, ದುಶ್ಯಾಸನನ ಕೊಂಡು ಅವನ ರಕ್ತದಿಂದ ಕೆಂಪಾದ ಮುಖವುಳ್ಳವನು, ದುರ್ಯೋಧನ ತೊಡೆಗಳೆಂಬ ಬೆಟ್ಟಗಳಿಗೆ ವಜ್ರಾಯುಧದಂತೆಯೂ, ಕುರುರಾಜನ ರತ್ನಖಚಿತವಾದ ಕಿರೀಟವನ್ನು ತನ್ನ ಕಾಲುಗಳ ಅಡಿಯಲ್ಲಿ ಅಪ್ಪಳಿಸುವನೆಂದು ಪ್ರತಿಜ್ಞೆ ಮಾಡಿದವನೂ… ಹೀಗೆಂದು ವರ್ಣಿತನಾಗಿರುವ ರಣಯಶಸ್ಸಿನ ಅತಿಶಯ ಕೀರ್ತಿಯನ್ನು ಪಡೆದಿರಿರುವ ಭೀಮನು…’’ ಹೀಗೆ ಮುಂದುವರಿಯುತ್ತದೆ
ಭೀಮನನ್ನು , ದ್ರೌಪದಿಯನ್ನು ವರ್ಣಿಸುವ ರೂಪಕಗಳು ಬಹಳ ಅದ್ಬುತವಾಗಿ ಬಂದಿವೆ.. ಉದಾ : ಭೀಮನನ್ನು ಈ ಹಿಂದೆ ಹೇಳಿದ ಪದ್ಯದ ಮೊದಲ ಪ್ಯಾರಾದಲ್ಲಿ ಮತ್ತು ಮುಂದುವರಿದು
ದೆಸೆದೆಸೆಗೋಡಿದನ್ಯಕರಿ ದಿಕ್ಕರಿಯಾದುದರಾತಿಭೂಭುಜ
ಪ್ರಸರಮೆ ದಿಕ್ಪತಿಪ್ರಸರಮಾದುದು ವೈರಿಬಲಂ ಕುಮಾರಿಯರ್
ಬೆಸಗೊಳೆ ದಿಕ್ಕುಮಾರಿಯರೆನಲ್ ದೊರೆಯಾದುದದರ್ಕೆ ಮೆಚ್ಚಿ ಬ
ಣ್ಣಿಸಲಭಿಯೋಗಮಾಯ್ತೆನಗೆ ಸಾಹಸಭೀಮನ ಸಾಹಸಂಗಳಂ ||2||
ಹೀಗೆ ಭೀಮನನ್ನು ವರ್ಣಿಸುತ್ತಾ ಇರುವಾಗಲೇ ನಾಟಕೀಯವಾಗಿ ದ್ರೌಪದಿಯ ಪ್ರವೇಶವಾಗುತ್ತೆ..
ಅವಳೋ ದೃಷ್ಟಾದೃಷ್ಟಪರಂಪರೆ ಎಂಬೊ ವೃದ್ದ ಕಂಚುಕಿ(ಸಖಿ)ಯ ಜೊತೆ ಬರುತ್ತಾಳೆ… ಹೇಗೆ ಬರುತ್ತಾಳೆ ಗೊತ್ತೇನು?,
‘’ದೇವಾಸುರ ಯುದ್ಧಕ್ಕೆ ಕರಗಂಬೊತ್ತಳೆಂಬಂತನವರತಬಾಷ್ಪವಾರಿಧಾರಾಪೂರಪರಿವಾಹಿತಪಲ್ಲವನೇತ್ರೆಯುಮಸಹ್ಯಪರಿಭವಾನಲಂದಂದಹ್ಯಮಾನಗಾತ್ರೆಯುಮಾಗಿ ಯಜ್ಞವೇದೀಸಂಭವೆಯುಂ ಯಾಜ್ಞಸೇನಿಯುಂ ದ್ರುಪದರಾಜೋಪವನ ಜಯವೈಜಯಂತಿಯುಮೆನಿಸಿದ ಪಾಂಚಾಲರಾಜತನೂಜೆ ಪವಮಾನತನೂಜನಲ್ಲಿಗೆವಂದು’’
ಇದನ್ನು ಓದಲು ಮೊದಮೊದಲು ಸ್ವಲ್ಪ ಕಷ್ಟ ಆಗಬುಹುದಾದರೂ ಒಂದೆರಡು ಓದಿನ ನಂತರ ಬಾಯಿಪಾಠ ಆಗಿಬಿಡುತ್ತದೆ. ರನ್ನನು ಇಲ್ಲಿ ತನ್ನ ಚಿಗುರಿನಂತ ಕಣ್ಣಿನಲ್ಲಿ ನಿರಂತರ ಧಾರಾಪ್ರವಾಹವಾಗಿ ಕಟ್ಟೆ ಕೋಡಿಬೀಳುವ ಹಾಗೆ ಕಣ್ಣೀರು ಹರಿಸುತ್ತಾ, ಸಹಿಸಲು ಅಶಕ್ಯವಾದ ಅವಮಾನದ ಬೆಂಕಿಯಿಂದ ಮೈಯೆಲ್ಲಾ ಉರಿಯುತ್ತಾ ಸ್ವಯಂಯಜ್ಞವೇದಿಕೆಯಲ್ಲಿ ಹುಟ್ಟಿದವಳೂ, ಯಾಜ್ಞಸೇನಿಯಾದ ದ್ರುಪದರಾಜನ ಮಗಳು ದ್ರೌಪದಿಯು ದೇವತೆಗಳಿಗು-ಅಸುರರಿಗೂ ಯುದ್ದವಾಗಲೆಂದು ಕರಗವನ್ನು ಹೊತ್ತಳೆಂದು ವರ್ಣಿಸುವುದೇ ಕುರುರಾಜನ ಮೇಲೆ ಅವಳ ಕ್ರೋಧವು ಎಷ್ಟರ ಮಟ್ಟಿಗೆ ಇದ್ದಿತೆಂದು ಮನದಟ್ಟು ಮಾಡುತ್ತದೆ. ರನ್ನ ಈ ರೀತಿ ಪ್ರವೇಶಿಕೆ ಕೊಡುವುದರಿಂದಲೇ ಬಹುಶಃ ಕಾವ್ಯಕುತೂಹಲ ಓದುಗರನ್ನು ಇನ್ನೂ ಬಿಡದಂತೆ ಮುಂದಕ್ಕೆ ಓದಿಸುತ್ತದೆ, ತಿಳಿಯಲು ತವಕಿಸುತ್ತದೆ..
ತನ್ನನು ನೋಡಾ ಬಂದ ಭೀಮನನ್ನು ಕುರಿತು ದ್ರೌಪದಿಯು,
ಖಳದುಶ್ಶಾಸನವಕ್ಷ
ಸ್ಥಳೋಚ್ಚಲತ್ಕೃಷ್ಣರಕ್ತಜಲದಿಂ ಕೋಪಾ
ನಳನಂ ಮೞ್ಗಿಸದಿನ್ನುಂ
ಗಳಗಳಿತಸಕೋಪನಿರ್ಪ ತೆರದಿಂದಿರ್ದಯ್ ||
 
ಅಂದರೆ ದುಷ್ಟನಾದ ದುಶ್ಶಾಸನನ ಎದೆಯಿಂದ ಮೇಲಕ್ಕೆ ಚಿಮ್ಮಿದ ರಕ್ತ ನಿನ್ನ ಕೋಪದ ಬೆಂಕಿಯನ್ನು ಅರಿಸಿಬಿಟ್ಟಿದೇನು? ನೀನಂತೂ ಕೋಪವೆಲ್ಲಾ ಇಳಿದುಹೋದವಂತೆ ಇರುವ. ಎಂದು ಛೇಡಿಸುವಾಗ
 
ಭೀಮ,
ಗಳಿಯಿಸುತಿರೆ ಕಬರಿಭರಂ
ಗಳಿಯಿಸುತಿರೆ ನಯನವಾರಿ ನಿನ್ನಾನನದಿಂ
ನಳಿನಾನನೆ ನೀನಿರೆ ಕುರು
ಕುಳಾಂತಕಂ ಗಳಿತಕೋಪನೇ ಕಲಿಭೀಮo||
ನಿನ್ನ ಕಟ್ಟದ ಮುಡಿ ಬಿಚ್ಚಿರಲು, ನಿಲ್ಲದೆ ಹರಿವ ನಿನ್ನ ಕಣ್ಣೀರು ನೋಡಿಯೂ, ಕಮಲ ಮುಖದವಳೇ ಕುರುಕುಲಾಂತಕನೆನಿಸಿಕೊಂಡ ನಾನು ಕೋಪ ಬಿಡಲು ಹೇಗೆ ಸಾಧ್ಯ ?! ಎನ್ನುತ್ತಾ
 
ನೀನಗ್ನಿಪುತ್ರಿಯಯ್ ಪವ
ಮಾನತನೂಭವನೆ ನಾನಣಂ ಕೂಡೆ ಸುಸಂ
ಧಾನಮರಿನೃಪರೊಳೆಂತನ
ಲಾನಿಲಸಂಯೋಗಮುರಿಪದಿರ್ಕುಮೆ ಪಗೆಯಂ ||
 
ನೀನು ಅಗ್ನಿಯಲ್ಲಿ ಜನಿಸಿದವಳು, ನಾನು ವಾಯುವಿನಲ್ಲಿ ಜನಿಸಿದವನು (ಕುಂತಿಗೆ ವಾಯು ಮಂತ್ರದಿಂದ ಜನಿಸಿದವನು) ಹೀಗಿರುವಾಗ ಬೆಂಕಿ ಮತ್ತು ಗಾಳಿ ಕೂಡಿದಾಗ ಹಗೆಗಳನ್ನು ಸುಡದೇ ಇದ್ದೀತೆ?! ಎಂದು ಸಮಾಧಾನ ಮಾಡುತ್ತಾನೆ ..
ಅನಲ + ಅನಿಲ ಸಂಯೋಗ ಎನ್ನುವ ಅವನ ರಸಾಯನಸೂತ್ರವೆ ನನ್ನನ್ನು ಬೆರಗುಗೊಳಿಸುತ್ತದೆ..
 
ಊರುಗಳನುಡಿವೆನೊದೆವೆಂ
ಕೌರವಪರಿವೃಢನ ಮಕುಟಮಂ ವೇಣೀಸಂ
ಹಾರಂಮಾಡುವೆನದಱಿಂ
ಭಾರಮದಿನಿತಲ್ಲದೆನ್ನ ಪರಿಭವಭಾವಂ ||17||
 
ಕೌರವ ತೊಡೆಗಳನ್ನು ಮುರಿದು… ಬಿಚ್ಚಿರುವ ನಿನ್ನ ಮುಡಿ ಕಟ್ಟುವೆನು.. ಇದು ನನ್ನ ಹೊಣೆ.. ಇದನ್ನು ತೀರಿಸದ ಹೊರತು ಅವಮಾನದ ಭಾವನೆ ನನ್ನ ಬಿಡದು ಎನ್ನುತ್ತಾನೆ. ಇಲ್ಲಿ ಭಟ್ಟ ನಾರಾಯಣನು ಸಂಸ್ಕೃತದ ‘ವೇಣೀಸಂಹಾರ’ ನಾಟಕವು ನೆನಪಗಬಹುದು.. ವೇಣೀಸಂಹಾರ ಎಂಬುವ ರೂಪಕ ಅವನಿಂದಲೆ ಬಹಳ ಹೆಸರು ಪಡೆಯಿತು.
 
ಕುರುಕುಲಶೋಣಿತಪಾದಪದ್ಮತಳಂ ತಳೋ
ದರಿಗೆ ವೃಕೋದರನಾಗಿಪಂ ಕಚಬಂಧಬಂ
ಧುರತೆಯ ನಾತನ ಪೂಣ್ಡ ಪೂಣ್ಕೆ ಶಿಲಾತಳಾ
ಕ್ಷರಮೆನಿಸಿರ್ಪ ಜನೋಕ್ತಿಯಂ ಪೂಸಿಮಾಳ್ಪನೇ ||18||
 
ಕೌರವರ ರಕ್ತವು ಮೆತ್ತಿದ ಕಮಲದಂತಪಾದದ ತಳವುಳ್ಳ ತೆಳುವಾದ ಹೊಟ್ಟೆಯುಳ್ಳ ದ್ರೌಪದಿಗೆ, ತೊಳದ ಹೊಟ್ಟೆಯುಳ್ಳ (ವೃಕೋದರ) ಭೀಮನು ಮುಡಿ ಕಟ್ಟುವ ಈ ಮನೋಹರ ಪ್ರತಿಜ್ಞೆ ಮಾಡುತ್ತಾನೆ. ಕಲ್ಲ ಮೇಲೆ ಕೊರೆದ ಅಕ್ಷರ ಎಂದು ಜನರು ಹೇಳುವ ಈ ಮಾತನ್ನು ಭೀಮ ಹುಸಿಮಾಡುತ್ತಾನೆಯೇ!? ಎನ್ನುವ ಆತ್ಮವಿಶ್ವಾಸ ಭೀಮನದ್ದು.

ಒಡಲೊಡಮೆಯೆಂಬಿವೆರಡುಂ
ಕೆಡಲಿರ್ಪುವು ಕೆಡದ ಕಸವರಂ ಜಸಮದಱಿಂ
ಕೆಡುವೊಡೆಲೊಡಮೆಯನೆಂದುಂ
ಕೆಡದೊಡಮೆಗೆ ಮಾಱುಗುಡುವುದಿಱಿವ ಬೆಡಂಗಾ ||22||
 
ಆಹಾ! ಇಲ್ಲಿ ಮಾತ್ರ ರನ್ನ ವೀರಸಂತನಾಗಿಬಿಡುತ್ತಾನೆ.. ಕೆಡುವ ದೇಹ ಮತ್ತು ಚಿನ್ನ (ಕಸವರ)ವನ್ನು ಕೆಡದ ಒಡಮೆಗೆ ವಿನಿಮಯಮಾಡಿಕೊಳ್ಳಬೇಕು ಅಂದರೆ ಈ ದೇಹವನ್ನು ಯುದ್ದದಲ್ಲಿ ಹೋರಾಡುತ್ತಾ , ಚಿನ್ನ ಮೊದಲಾದ ಸಂಪತ್ತನ್ನು ದಾನ ಮಾಡುತ್ತಾ , ತನ್ಮೂಲಕ ಶಾಶ್ವತವಾದ ಯಶಸನ್ನು ಪಡೆದುಕೊಳ್ಳುವಬೇಕು ಇರಿವ ಬೆಡಂಗಾ ಎಂದು ತನ್ನ ರಾಜನಿಗೆ ಸೂಕ್ತ ಸಮಯದಲ್ಲಿ ದ್ರೌಪದಿ ಬಾಯಲ್ಲಿ ಭೀಮನಿಗೆ ಹೇಳಿದಂತೆ ಹೇಳಿಸುತ್ತಾನೆ ದ್ರೌಪದಿ ಮಾತ್ರ ಮೊದಲಿಗೆ ಅತ್ತುಕರೆದು ಭೀಮನಲ್ಲಿ ಕೋಪವನ್ನು ಮತ್ತಷ್ಟು ಹುಟ್ಟಿಸಿ ಕಡೆಗೆ ವೀರೋಚಿತ ನಡವಳಿಕೆಗಳ ಮನದಟ್ಟು ಮಾಡಿಸಿ,
ದುರ್ಯೋಧನನ ಸಾವಿಗೆ ಭೀಮಪ್ರೇರಣೆಯಾಗುತ್ತಾಳೆ.
ಇದನ್ನೆಲ್ಲ ಕಂಡ ಭೀಮನ ಆಪ್ತಮಿತ್ರನೂ, ಸಚಿವನೂ ಆದ ವಿದೂಷಕನು ಭೀಮನು ಯುದ್ದ ಮಾಡಿದರೆ ಒಳಿತೋ, ಸಂಧಿ ಕಾರ್ಯ ಒಳಿತೋ ಎಂದು ಚಿಂತಿಸುತ್ತಾ ಅಗ್ನಿಯ ಮಗಳಾದ ದ್ರೌಪದಿಯನ್ನು ಕಂಡು
 
‘’ಕುರುಕುಲಮಂ ನುಂಗಿದೆಯಿ
ನ್ನರೆಬರುಮಂ ನುಂಗಲಿರ್ಪೆ ಕುರುಪತಿಯುಮನಿ
ನ್ನೆರಡನೆಯ ಹಿಡಿಂಬಿಯನೆ
ಮ್ಮರಸಂ ರಕ್ಕಸಿಯನೆಲ್ಲಿ ತಂದನೊ ನಿನ್ನಂ ||27||’’
ಕುರುಕುಲವನ್ನೇ ನುಂಗಿಬಿಟ್ಟೆ.. ಇದೀಗ ದುರ್ಯೋಧನನನ್ನೂ ಉಳಿದವರನ್ನೂ
ನುಂಗಲಿದ್ದೀಯೇ.. ಎರಡನೆಯ ‘ಹಿಡಂಬೆ’ಯಂತ ಈ ರಾಕ್ಷಸಿಯನ್ನು ನಮ್ಮ ರಾಜ ಎಲ್ಲಿಂದ ತಂದನೋ ಎನ್ನಲು
ಇದನು ಕೇಳಿ ಕೂಡ ದ್ರೌಪದಿ ‘ಚಾರುಹಾಸಿನಿ’ಯಾಗಿ ನಗುತ್ತಾ ತನ್ನಿಷ್ಟಾರ್ಥ ನೆರವೇರುವುದುದೆಂದು ಸಂತೋಷದಿಂದ ಅಂತಃಪುರಕ್ಕೆ ಹೊರಟುಬಿಡುತ್ತಾಳೆ
ಇಡೀ ಪದ್ಯದಲ್ಲಿ ಮೊದಲು ಭೀಮನ ವರ್ಣನೆ ನಂತರ ದ್ರೌಪದಿ ಆನಂತರ ದ್ರೌಪದಿಯ ಸಂದೇಹ, ತಹತಹಗಳ ಮಾತು ಇದಕ್ಕೆ ತನ್ನೊಳಗೆ ವಿಚಾರಿಸಿಕೊಂಡು ಆನಂತರ ಪಾಂಚಾಲಿಯನ್ನು ಸಂತೈಸುವ ಮತ್ತು ಪ್ರತಿಜ್ಞೆ ತೊಡುವ ಎಲ್ಲ ದೃಶ್ಯಗಳು ಯಾವುದೋ ಮೂರ್ತತ್ವವನ್ನು ನಮ್ಮ ಓದಿನಲ್ಲಿ ಪಡೆದುಕೊಳ್ಳುತ್ತವೆ.. ರನ್ನ ವೀರೋಚಿತ ಈ ಕಂದ- ಗದ್ಯಗಳಿಗೆ ಸೋಲುವುದು ಖಂಡಿತ. ‘ಸಿಂಹಾವಲೋಕನ ಕ್ರಮದ’ ಕಾವ್ಯ ನಿರೂಪಣೆಯನ್ನು ಒಮ್ಮೆ ಗಟ್ಟಿಯಾಗಿ ವೀರದಿಂದಲೇ ನಿಧಾನವಾಗಿ ಓದಿಕೊಳ್ಳಬೇಕು. ನಡುನಡುವೆ ಕರುಣ, ಹಾಸ್ಯ ಇತ್ಯಾದಿ ರಸಗಳು, ವರ್ಣನೆಗಳು ಬರುತ್ತವೆಯಾದರೂ ವೀರಕ್ಕೆ ಇರುವ ಮಹತ್ವ ಓದುವಾಗ ತಿಳಿಯದಿರದು..
ಹೀಗೆ ಓದುತ್ತಾ ಓದುತ್ತಾ ಅಕೌಟ್ಸ್ ನ ಮೂಲ ವಿವರಣೆಗಳಾದ
· Debit all expenses and losses, credit all incomes and gains
· Debit all assets, credit all liabilities
· Debit the receiver, credit the giver
ಎನ್ನೋದನ್ನೇ ಮರೆತು ಬಿಟ್ಟಿದ್ದೆ… ಪರೀಕ್ಷೆಗಳು ಹತ್ತಿರವಾದಾಗ ಲೈಬ್ರೆರಿಯ ಅಸಿಸ್ಟೆಂಟ್ ನಿನಗೆ ಮಾತ್ರ ಈ ಸಲ ಕಾಮರ್ಸ್ ಬಿಟ್ಟು ಬೇರೆ ಬುಕ್ಕು ಕೊಡೊಲ್ಲ ಅಂದುಬಿಟ್ರು(ಪ್ರೀತಿಯಿಂದ ), ಕಾರಣ ಒಂದಿಬ್ಬರು ನಮ್ಮ ಕಾಮರ್ಸ್ ಮೇಷ್ಟ್ರು ನಾನು ಇನ್ನೂ ಅಸೈನ್ ಮೆಂಟು ಕೊಡದಿರುವ ಬಗ್ಗೆ ಲೈಬ್ರರಿಯಲ್ಲಿ ಮಾತನಾಡಿಕೊಂಡಿದ್ದರಂತೆ! ಇವತ್ತಿಗೂ ನಾನು ಸಂಪೂರ್ಣ ‘ಗದಾಯುದ್ಧ’ವನ್ನು ಓದಲಾಗಿಲ್ಲ!!
 

‍ಲೇಖಕರು G

7 May, 2014

10 Comments

  1. Anil talikoti

    Excellent article. Infojoyable!

    • Anonymous

      B com ವಿದ್ಯಾರ್ಥಿ ಯಾದರೂ ನಿಮ್ಮ ಕಾವ್ಯ ಪ್ರೇಮ ನನಗೆ ಇಷ್ಟವಾಯಿತು….ಮುಂದುವರೆಯಿರಿ….ನಿಮಗೆ ಒಳ್ಳೆಯದಾಗಲಿ…

  2. maheshwari.u

    Prof. Subraya Bhat avaru bareda Gadayuddha darpana emba vyakhyana granthavu Rannana kritiratnavannu odikondu aasvadisalu atyuthama kaipidi. commerce tekkondu halagannada kavyada bagge ishtu preetiyannu irisikondiruvudu great.

  3. prathibha nandakumar

    ನಮಗೆ ಎಂ ಎ ಪಾಠ ಮಾಡಿದ್ದು ಶ್ರೀಕೃಷ್ಣ ಭಟ್ ಅರ್ತಿಕಜೆ. ಅವರು ರಾಗವಾಗಿ ಗಮಕಿಯಂತೆ ಮೂರು ಸಲ ಹಾಡುತ್ತಿದ್ದರು. ನಂತರ ಅರ್ಥ ಆಯಿತಾ, ವಿವರಣೆ ಬೇಕಾ ಅಂತ ಕೇಳುತ್ತಿದ್ದರು. ನಮಗೆ ಯಾವುದಾದರೂ ಪದ ಗೊತ್ತಿಲ್ಲದಿದ್ದರೆ ಅದನ್ನು ಅರ್ಥೈಸುತ್ತಿದ್ದರು. ನಂತರ ಪದ್ಯದ ಹೆಚ್ಚುವರಿ ವಿಶೇಷ ವಿವರಣೆ ಕೊಡುತ್ತಿದ್ದರು. ನಂತರ ನಮಗ್ಯರಿಗಾದರೂ ಪ್ರಶ್ನೆ ಇದ್ದರೆ ಅದಕ್ಕೆ ಉತ್ತರಿಸುತ್ತಿದ್ದರು. ಉಳಿದ ಸಮಯವನ್ನು – ನಮಗೆ ಸಾಕು ಅನ್ನಿಸುವವರೆಗೆ – ರನ್ನನ ಬಗ್ಗೆ, ಅವನ ಪ್ರತಿಭೆಯ ಬಗ್ಗೆ, ಹಳಗನ್ನಡ ಕಾವ್ಯದ ವಿಶೇಷತೆಯ ಬಗ್ಗೆ ವಿವರಿಸುತ್ತಿದ್ದರು.
    ಹಾಗೆಯೇ ನಮ್ಮ ಪ್ರೊ ಕುಶಾಲಪ್ಪ ಗೌಡ. ಅವರಿಗಂತೂ ಕೇಶಿರಾಜ, ನಾಗವರ್ಮ ಎಲ್ಲ ಮನೆಮಕ್ಕಳಂತೆ. ಎಷ್ಟೂ ಪ್ರೀತಿಸುತ್ತಿದ್ದರು ಅಂದರೆ ನಮಗೂ ಅವರು ಚಿಕ್ಕಪ್ಪ ದೊಡ್ದಪ್ಪ ಥರ ಆಗಿಹೋದರು.
    ಸತ್ಯ ಹೇಳುತ್ತೇನೆ, ನಾವು ಹಳಗನ್ನಡ ಕಾವ್ಯವನ್ನು ಪ್ರೀತಿಸಿ ಕಲಿತಂತೆ ನೀವ್ಯಾರೂ ಕಲಿತಿರಲಾರಿರಿ… 🙂

  4. Anonymous

    geleyare
    L. Basavaraju avaru rannana sarala gadhayudha emba hesarinalli tumba saralavaagi prati padyakke artha -bhavartha sahita barediddare dayavittu odi prati bekadare nammalli doreyuttave
    samparka vilasa
    Secretary, KS Muddappa Smaraka Trust
    # 119, 3rd Cross, 8th Main, Hampinagara
    Bangalore-560 104
    Phone: 9448102158 email: byregowda.m1@gmail.com

  5. ರಾಜೇಂದ್ರಪ್ರಸಾದ್

    @ಪ್ರತಿಭಾ ನಂದಕುಮಾರ್ :” ನಾವು ಹಳಗನ್ನಡ ಕಾವ್ಯವನ್ನು ಪ್ರೀತಿಸಿ ಕಲಿತಂತೆ ನೀವ್ಯಾರೂ ಕಲಿತಿರಲಾರಿರಿ” ಎಂಬ ನಿಮ್ಮ ಮಾತನ್ನು ಒಪ್ಪುತ್ತೇನೆ.. ಇವತ್ತಿನ ಗುರು & ಶಿಷ್ಯ ಇಬ್ಬರು ನಿಮ್ಮ ಕಾಲದ ಗುರು & ಶಿಷ್ಯರಂತೆ ಇಲ್ಲವೇ ಇಲ್ಲ. ಈ ಬರಹದ ಆರಂಭದಲ್ಲೇ ಹೇಳಿಬಿಟ್ಟೆನಲ್ಲೇ ನಮಗೆ ‘ಮೇಷ್ಟ್ರು ಕ್ಲಾಸಿಗೆ ಬರೋದೇ ಅಪರೂಪ’ ಅಂತ 🙁 ಆದ್ರೆ ಒಂದು ನಾವೀಗ ಪ್ರೀತಿಸಿ ಕಲಿಯುವ ಬದಲು ಪ್ರೀತಿಯಿಂದ ಓದಲು ಶುರು ಮಾಡಿದ್ದೇವೆ.. 😉
    @ಮಹೇಶ್ವರಿ & ಅನಿಲ್ ತಾಳಿಕೋಟಿ : ಥ್ಯಾಂಕ್ಸ್ 🙂

  6. Chidambar Narendra

    very much enjoyed RP. Thanks

  7. Ishwara Bhat

    ರನ್ನನ ಗದಾಯುದ್ಧವನ್ನು ಅತ್ಯಂತ ಸೋದಾಹರಣವಾಗಿ ಶತಾವಧಾನಿಗಳು ವಿವರಿಸಿದ್ದಾರೆ. ಅತ್ಯಂತ ಸುಲಭಗ್ರಾಹ್ಯ.
    ಪಂಪನನ್ನು ಓದಿಕೊಂಡಮೇಲೆ ರನ್ನನನ್ನು ಓದಿದರೆ ಬಹುಸುಲಭ. ಯಾಕೆಂದರೆ ಪಂಪನಿಂದ ಹೆಚ್ಚು ಕೊಂಡುಕೊಂಡಿದ್ದಾನೆ ಆತ. ಹಾಗೇಯೇ ವೇಣೀಸಂಹಾರವನ್ನೂ.

  8. Anonymous

    ಈ ಅಕೌಂಟು ನಿಯಮಗಳು ಎಲ್ಲಿ ಸಿಕ್ಕಿದ್ವು RP 😉

  9. Pradeep bhandary

    ಆಹಾ… ತು೦ಬಾ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading