ರಾಜಶೇಖರ ಹಳೇಮನೆ
ಎರಡು ಮೂರು ದಿನಗಳಿಂದ ಮಾನಪ್ಪನ ಮಕ್ಕಳು ಮಾನಪ್ಪನೊಂದಿಗೆ ಸರಿಯಾಗಿ ಮಾತಾಡದೆ ಮುಖ ತಿರಿವಿಕೊಂಡು ಹೋಗುತ್ತಿದ್ದರು. ಬಸುರಿ ಮಗಳು ಮನೆಗೆ ಬಂದಾಗ ಮಕ್ಕಳು ಮಾತಾಡದೇ ಇರುವುದು ಮಾನಪ್ಪನಿಗೆ ತುಂಬಾ ದುಃಖವನ್ನುಂಟು ಮಾಡಿತ್ತು. ಅವಳದು ಮೊದಲ ಬಾಣಂತನ. ಮಗಳನ್ನು ಚೆನ್ನಾಗಿ ನೋಡಿಕೊಂಡು ಕಳಿಸಬೇಕು. ಅವಳಿಗೂ ಈ ಮನೆಯಲ್ಲಿ ಪಾಲಿದೆ ಎಂದು ಮಕ್ಕಳು ಹೊಲದಿಂದ ಬರುವುದನ್ನುಕಾಯುತ್ತಾ ಕುಳಿತ.
ಮಕ್ಕಳು ಮಾತಾಡದ್ದರಿಂದ ಮಾನಪ್ಪನ ಮನಸ್ಸಿಗೆ ಸಮಧಾನ ಇರಲಿಲ್ಲ. ಮಕ್ಕಳ ಬಗ್ಗೆ ಎಷ್ಟಂತ ಚಿಂತಿ ಮಾಡೋದು ಅಂದರೂ ಮನಸ್ಸು ಅವರ ಕಡೆನೇ ಎಳೆಯುತಿತ್ತು. ‘ಹೆತ್ತ ಕರುಳಿಗೆ ನಾಚಿಕೆಯಿಲ್ಲಂತ, ಅಂಗಾಲಿಗೆ ಹೇಸಿಗೆ ಇಲ್ಲಂತ’ ಎಂಬಂತೆ ಮಕ್ಕಳ ಬಗ್ಗೆ ಸುಮ್ಮನಿರುವುದು ಸಾಧ್ಯವಿಲ್ಲ ಎಂದು, ʼಇವತ್ತು ಹೊಲದಿಂದ ಬರಲಿ ಏನಾಗಿದೆ ನಿಮಗ ʼಅಂತ ಕೇಳಬೇಕು ಅಂದುಕೊಂಡ. ಸೊಸೆಯಂದಿರು, ಹೆಂಡತಿ ಹೊಲಕ್ಕೆ ಹತ್ತಿ ಬಿಡಿಸಲು ಹೋಗಿದ್ದರು. ಮೊಮ್ಮಕ್ಕಳು ಶಾಲೆಗೆ ಹೋಗಿದ್ದರು. ಮಗಳು ಹೊಟ್ಟೆ ಒಜ್ಜೆಯಾಗಿದೆಯೆಂದು ಮಲಗಿದ್ದಳು.
ಮಗಳೊಂದಿಗೆ ಬಹಳ ಹೊತ್ತು ಮಾತಾಡಿದ್ದ. ಆಕೆಗೆ ಆಯಾಸ ಆಗುತ್ತದೆಂದು ಮಲಗಲು ಹೇಳಿದ್ದ. ಹೊತ್ತು ಇಳಿಯುತಿತ್ತು. ಶಾಲೆಗೆ ಹೋದ ಮೊಮ್ಮಕ್ಕಳು ನಾ ಮುಂದು ತಾ ಮುಂದು ಎಂದು ಓಡೋಡಿ ಬಂದವು. ಮೊಮ್ಮಕ್ಕಳನ್ನು ನೋಡಿ ಜೀವ ಮಿಡಿಯಿತು. ದೊಡ್ಡ ಮಗನ ಮಗಳು ರಾಜಮ್ಮ ತಾತನ ತೊಡೆ ಮೇಲೆ ಕುಳಿತಳು. ಸುಭಾಷ ತಾನು ಕೂಡುತ್ತೇನೆಂದು ಇನ್ನೊಂದು ತೊಡೆ ಮೇಲೆ ಕೂತ. ಇಬ್ಬರನ್ನು ಎದೆಗೆ ಅಪ್ಪಿಕೊಂಡು ಮುತ್ತು ಕೊಟ್ಟ.
‘ಇವತ್ತು ಸಾಲ್ಯಾಗ ಟೀಚರು ಏನು ಹೇಳಿದರು? ಏನು ಆಟ ಆಡಿಸಿದರು?’
‘ಅವರೇನು ಆಟ ಆಡಸಲಿಲ್ಲ. ಏನೋ ಮೀಟಿಂಗು ಐತಿ ಆಡಿಕೋ ಹೋಗ್ರಿʼ ಅಂದರು ‘ನಾವೇ ಕಳ್ಳ ಪೊಲೀಸ್ ಆಟ ಆಡಿದೀವಿ.’
‘ನೀವು ಚಲೋ ಓದಿ ಶ್ಯಾಣೇರು ಆಗಬೇಕು. ಸುಭಾಷ ನೀನು ಇನ್ಸಪೆಕ್ಟರ್ ಆಗಬೇಕು. ರಾಜಮ್ಮ ನೀನು ಜಿಲ್ಲಾಧಿಕಾರಿ ಆಗಬೇಕು.’
‘ತಾತ… ತಾತ… ನಾವು ಬೆಂಗಳೂರಿಗೆ ಹೋತೀವಿ. ನಿನ್ನೆ ಅಮ್ಮ ಹೇಳಿದಳು.’
‘ಬೆಂಗಳೂರು ನೋಡಾಕ ಹೋತಿರೇನು.’
‘ಏನೋ ತಾತ ನೀನು ಬರಬೇಕು…’
‘ನಾಬರಾದಿಲ್ಲವ್ವಾ… ನಮ್ಮೂರ ನನಗ ಬೆಂಗಳೂರು’
‘ನಾವಂತೂ ಹೋತೀವಿ’
‘ಆಯಿತು ಹೋಗುವಂತಿರಿ… ಈಗ ಉಣ್ಣು ನಡಿರಿ’

ಮಕ್ಕಳು ಊಟ ಮಾಡಲು ಮನೆಯೊಳಗೆ ಓಡಿದವು. ಮಾನಪ್ಪನಿಗೆ ಮತ್ತೊಂದು ಚಿಂತೆ ತಲೆಯಲ್ಲಿ ತುಂಬಿತು. ಈಗ ಬೆಂಗಳೂರು ಊರಿಗೆ ಬಾಳ ಹತ್ತಿರ ಆಗಿತ್ತು. ನೂರಾರು ಮಂದಿ ಊರಿಂದ ದುಡಿಯಲು ಬೆಂಗಳೂರಿಗೆ ಹೋಗುತ್ತಿದ್ದರು. ತನ್ನ ಮಕ್ಕಳು ಯಾಕೆ ಹೋಗುತ್ತಿರಬಹುದು. ಕೂಲಿ ಮಾಡುವ ಸ್ಥಿತಿಯಂತೂ ನಾನು ಮಕ್ಕಳಿಗೆ ತಂದಿಲ್ಲ. ಹೊಲ ಮನೆ ಇದ್ದೋರು ಯಾರು ಹೋಗುತ್ತಿರಲಿಲ್ಲ. ‘ಅಲ್ಲಿ ಹೋಗಿ ದುಡಿಬೇಕಂತ ಮಾಡ್ಯಾರೇನು… ಛೇ… ಹಾಗಿರಲಿಕ್ಕಿಲ್ಲ. ಮನಿಗೆ ಬಂದು ಮೇಲೆ ಗಟ್ಟಿಸಿ ಕೇಳಬೇಕು. ಇಲ್ಲಂದರ ಇವರು ಯಾವ ದಾರಿ ಹಿಡಿತಾರೋ ಏನೋ ಯಾರಿಗೆ ಗೊತ್ತು’ ಎಂದು ಯೋಚಿಸಿದ. ಹುಡುಗರು ಊಟ ಮಾಡಿ ಹೊರಗ ಬಂದವು. ‘ತಾತ ನಾವು ಗಂಡ ಹೆಂಡತಿ ಆಟ ಆಡ್ತೀವಿ’ ಎಂದು ಆಡಲು ಕುಳಿತವು.
‘ಯಪ್ಪಾ… ಚಹಾ ಕುಡಿತೇನು’ ಬಸುರಿ ಮಗಳು ಕೇಳಿದಳು.
‘ಈಗೇನು ಬ್ಯಾಡವ್ವಾ…ಹೊಟ್ಟ ಹೊಜ್ಜ್ಯಾಗ್ಯಾದಂತಿದ್ದಿ.’
‘ಇಲ್ಲಪ… ಮಕ್ಕಂಡು ಮಕ್ಕಂಡು ಮೈಬ್ಯಾನೆ ಇಡ್ತದ. ಇಷ್ಟು ಓಡಾಡಿದರ ಹಗುರ ಅನಿಸ್ತದ’
‘ಆಯಿತವ್ವ ನಿನಗ ಎಂಗ ಅರಾಮ ಅನಿಸ್ತದ ಅಂಗಿರು. ಮೊಮ್ಮಗ ಯಾವಾಗ ಬರ್ತಾನಂತ ಹೊರಗ’
‘ಇನ್ನೊಂದು ಎಂಟತ್ತು ದಿನದಾಗ ಬರ್ತಾನಪ್ಪ ಬರಲಿ ಬರ್ಲೆವ್ವಾ…’
‘ನಿಂದೀಟು ಸುಸೂತ್ರ ಹೆರಿಗಿ ಆದರ ಸಾಕವ್ವಾ… ನಿನ್ನ ಮಕ್ಕಳೀಟು ನೋಡಿ ಕಣ್ಣು ಮುಚಿಗಂತೀನಿ.’
‘ಅಂತ ಮಾತು ಆಡು ಬ್ಯಾಡಪ. ಇನ್ನೂ ನೂರು ಕಾಲ ನಮ್ಮ ಜೊತಿಗಿರಬೇಕು.’
‘ಇನ್ನೇನವ್ವ ಈ ಮಕ್ಕಳು ಮಾಡೋದ ನೋಡಿದ್ರ, ಯಾಕ ಬೇಕು ಜನ್ಮ ಅನಿಸ್ತದ.’
‘ಇರಲಿ ಬುಡಪ್ಪ ಅವರ ಹೆಂಗ ಬೇಕಾರ ಇರಲಿ. ನೀವು ಮಾಡೋಟು ಮಾಡಿದ್ರಿ. ಇನ್ನು ಅವರ ಕಾಲ.’
‘ಅಂಗಲ್ಲವ್ವಾ… ಇವರೇನೋ ಬೆಂಗಳೂರಿಗೆ ಹೋತೀವಿ ಅಂತಾರಂತ. ಯಾಕ ಹೊಕ್ಕಾರಂತ. ನೋಡಾಕ ಹೊಕ್ಕಾರ. ಇಲ್ಲಾ ಮತ್ತೆದುಕನಾ…’
‘ಏನಪಾ ನನಗೂ ಏನೂ ಗೊತ್ತಿಲ್ಲ. ಈ ಹುಡುಗರು ಅನ್ನೋದಷ್ಟು ನಾನು ಕೇಳಿದ್ದು. ನೀಯೇನು ಚಿಂತಿ ಮಾಡಬ್ಯಾಡ. ಆದಂಗ ಆತದ. ಈಗ ಚಹಾ ಮಾಡಿಕಂಡು ಬರ್ತೀನಿ’ ಎಂದು ಮನೆಯೊಳಗೆ ಹೋದಳು. ಮಾನಪ್ಪ ಈಗೊಂದು ಆರೇಳು ವರ್ಷಗಳಿಂದ ಹೊಲ-ಮನೆ ನೋಡಿಕೊಳ್ಳಲು ಮಕ್ಕಳಿಗೆ ಬಿಟ್ಟಿದ್ದ. ಅವರ ವ್ಯವಹಾರದಲ್ಲಿ ಕೈ ಹಾಕುತ್ತಿರಲಿಲ್ಲ. ಅವರೇ ತರುವುದು ಕೊಡುವುದು ಮಾಡುತ್ತಿದ್ದರು. ಈಗೀಗ ಬಾಳ ಮೆತ್ತಗಾಗಿದ್ದರಿಂದ ಹೊಲಕ್ಕ ಹೋಗುವುದು ಆಗುತ್ತಿರಲಿಲ್ಲ. ಮೊಮ್ಮಕ್ಕಳನ್ನು ನೋಡಿಕೊಂಡು ಮನೆಯಲ್ಲೇ ಇರುತಿದ್ದ.
ಮಾನಪ್ಪನಿಗೆ ಹಿರಿಯರು ಮಾಡಿದ ಆಸ್ತಿಯೇನು ಇರಲಿಲ್ಲ. ತಾನೇ ಸ್ವಂತ ದುಡಿದು ಹತ್ತೆಕರೆ ಹೊಲ ಮಾಡಿದ್ದ. ಆ ಹೊಲಾನು ಬಾಳ ಸಸ್ತದಾಗ ಸಿಕ್ಕಿತ್ತು. ಬರೀ ಹತ್ತು ಸಾವಿರಕ್ಕ ಹತ್ತೆಕೆರೆ ಹೊಲ ತಗಂಡಿದ್ದ. ಊರು ಮಂದಿ ‘ಯಾಕ ಮಾನಪ್ಪ ರೊಕ್ಕ ಹೆಚ್ಚಾಗ್ಯಾವೇನು? ಆ ಸುಡುಗಾಡು ಹೊಲ ತಗಂಡಿದ್ದಿ. ಹೊಲದ ತುಂಬಾ ಪೀಕಿಜಾಲಿ ಗಿಡ, ಗ್ವಾಂದ ಗಿಡ, ಎಕ್ಕೆಗಿಡ ಬೆಳೆದಾವ. ಹೊಲದ ತುಂಬಾ ಬರೀ ಗರಸು ತುಂಬಿಕೊಂಡೈತಿ. ಕುಂಟೆ ಕೂರಿಗಿ ಕಾಣಲಾರದ ಎಷ್ಟು ವರ್ಷ ಆಯಿತೋ? ಆ ಹೊಲದಾಗ ಏನು ಬೆಳದೀತು’ ಎಂದಿದ್ದರು.
ಆದರೂ ಮಾನಪ್ಪ ತನ್ನ ಹೆಸರಿಗೆ ಭೂಮಿ ಇರಲಿ. ಮುಂದ ಹಸನು ಮಾಡಿದ್ರಾಯಿತೆಂದು ಅಲ್ಲಿ ಇಲ್ಲಿ ಸಾಲ ಮಾಡಿ ಹೊಲ ತಗಂಡಿದ್ದ. ಮುಂದ ಮೂರು ನಾಲ್ಕು ವರ್ಷ ಗಂಡ ಹೆಂಡತಿ ಸತತ ಬೆವರು ಹರಿಸಿ ಹೊಲನ್ನೆಲ್ಲ ಒಂದು ಹದಕ್ಕ ತಂದಿದ್ದರು. ಅಷ್ಟೊತ್ತಿಗೆ ಮಕ್ಕಳು ಬೆಳದು ದೊಡ್ಡವರು ಆಗಿದ್ದರು. ಅವರು ಕೈ ಜೋಡಿಸಿದರು. ಯಾರು ಹೊಲ ತಗಳ್ಳಾಕ ಬ್ಯಾಡಂತ ಹೇಳಿದ್ದರೋ ಅವರೇ ನೋಡಿ ಬೆರಗಾದರು. ‘ಭೂಮಿತಾಯಿಗಿ ಬೆವರು ಸುರುಸು ಬೇಕು. ಭೂಮಿಗೆ ಎಷ್ಟು ಬೆವರು ಹರಿತದೋ ಅಷ್ಟು ಭೂಮಿ ಹದ ಆಗ್ತದ’ ಎಂದು ಹೆಮ್ಮೆಯಿಂದ ಹೇಳುತಿದ್ದ.
‘ಯಾಕಪ್ಪ ಅಂಗೆ ಕುಂತಿದ್ದಿ’ ಎಂದು ಮಗಳು ಚಹ ಕೊಟ್ಟಳು.
‘ಏನಿಲ್ಲವ್ವಾ… ಸುಮ್ಮನಾ…’
‘ಯಪ್ಪಾ… ನನಗ ಗಂಡು ಹುಟ್ಟತದೋ ಇಲ್ಲಾ ಹೆಣ್ಣು ಹುಟ್ಟುತ್ತದೋ… ಹೇಳಪಾ’
‘ಅಯ್ಯೋ… ನನಗೇನು ತಿಳಿತಾದವ್ವಾ… ಯಾವುದು ಹುಟ್ಟಿದ್ರಾ ಏನೈತಿ. ಗಂಡು ಆದರೂ ಒಂದ. ಹೆಣ್ಣಾದ್ರೂ ಒಂದ. ಎರಡು ಜೀವಗಳೇ… ಒಟ್ಟ ಹೆರಿಗಿ ಸುಸೂತ್ರ ಆದರ ಸಾಕು.’
‘ಅಂಗಲ್ಲಪಾ ಗಂಡನ ಮನೇರಿಗೆ ಗಂಡೇ ಹಡಿಬೇಕಂತ. ನಮತ್ತೆಂತೂ ಗಂಡು ಮಗೂನೆ ಬೇಕಂತಾಳ. ಅದೇನು ನನಕೈಯ್ಯಾಗೈತೇನಪ. ದೇವರು ಏನು ಕೊಡ್ತಾನ ಅದು ಆತದ ಅಷ್ಟೇ…’ ‘ಆಯಿತವ್ವಾ, ಮಂದಿಗೆ ಗಂಡು ಗಂಡು ಅಂತ ಭ್ರಮೆ. ಗಂಡು ಹೆಣ್ಣು ಇದ್ದರನ ಜೀವನ. ನೀನೇನು ಯಾವುದಕ್ಕೂ ಚಿಂತಿ ಮಾಡಬ್ಯಾಡ. ಗಂಡು ಹುಟ್ಟದ್ರಾ ಮಹಾರಾಜ ಆಗ್ತಾನ. ಹೆಣ್ಣು ಹುಟ್ಟದ್ರಾ ಮಹಾರಾಣಿ ಆಗ್ತಾಳ’ ಎಂದು ಹೊಟ್ಟೆ ಮೇಲೆ ಕೈಆಡಿಸಿದರು. ಆ ಸ್ಪರ್ಶ ಮಗಳಿಗೆ ಅಮೂರ್ತ ಆನಂದ ನೀಡಿತು. ಆಡಲು ಹೋಗಿದ್ದ ಮಕ್ಕಳು ಬಂದವು. ಕೈಯೆಲ್ಲಾ ಮಣ್ಣು ಮಾಡಿಕೊಂಡಿದ್ದವು. ‘ಮೊದಲು ಬಚ್ಚಲಕ ನಡೀರಿ ಕೈಕಾಲು ತೊಳಕೊಂಡು ಬರ್ರೀ… ಮಾಸ್ತಾರ ಏನು ಕೊಟ್ಟಾರ ಓದಿಕಂತ ಕೂಡ್ರೀ…’ ಎಂದನು.
‘ತಾತ… ಸುಭಾಷ್ ನೋಡು ಅವ ಗಂಡಸಂತ ಅವ ಹೇಳಿದಾಂಗ ನಾ ಕೇಳಬೇಕಂತ. ನಾನು ಕೇಳದಿಲ್ಲಾ ತಾತ. ಅವನಿಗಿಂತ ನಾ ದೊಡ್ಡಾಕೀ ನಿನಾ ಹೇಳಿದಾಂಗ ಅವ ಕೇಳಬೇಕು. ದೊಡ್ಡೋರು ಹೇಳಿದ ಮಾತು ಸಣ್ಣೋರು ಕೇಳಬೇಕಿಲ್ಲೋ…’
‘ಅಯ್ಯೋ… ಯಾರ ಮಾತು ಯಾರು ಕೇಳ್ತಾರವ್ವಾ… ಅವನಿನ ಮಾತು ಕೇಳಬೇಕು. ನೀನು ಅವನ ಮಾತು ಕೇಳಬೇಕು. ಗಂಡೇನು ಹೆಚ್ಚಲ್ಲ. ಹೆಣ್ಣೇನು ಕಡಿಮಿಅಲ್ಲ. ನಡೀರಿ ಓದಿಕಂತ ಕೂಡ್ರಿ.’
ಮಕ್ಕಳು ಓದಿಕಂತ ಕುಂತವು. ರಾಜಮ್ಮ ‘ಭಾರತ ಕೃಷಿಕರ ದೇಶ. ಕೃಷಿಯ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಬೆಳೆಗಳಿಗೆ ಹೆಚ್ಚು ಕ್ರಿಮಿನಾಶಕಗಳನ್ನು ಬಳಸಬಾರದು. ರಾಸಾಯನಿಕ ಗೊಬ್ಬರ ಬಳಸಬಾರದು. ಇದರಿಂದ ಭೂಮಿಯ ಫಲವತ್ತತೆ ಹಾಳಾಗುತ್ತದೆ. ಭೂಮಿ ವಿಷವಾಗುತ್ತದೆ’ ಎಂದು ಗಟ್ಟಿಯಾಗಿ ಓದುತ್ತಿದ್ದಳು. ಸುಭಾಷ ‘ಚಿಕ್ಕ ಸಂಸಾರವೇ ಚೊಕ್ಕ ಸಂಸಾರ. ಎರಡಕ್ಕಿಂತ ಹೆಚ್ಚು ಮಕ್ಕಳು ಬೇಡ. ಜನಸಂಖ್ಯಾ ನಿಯಂತ್ರಣದಿಂದ ದೇಶದ ಅಭಿವೃದ್ದಿಯಾಗುತ್ತದೆ’ ಎಂದು ಓದುತ್ತಿದ್ದ.
ಇದೇ ಹೊತ್ತಿಗೆ ಹೊಲಕ್ಕೆ ಹತ್ತಿ ಬಿಡಸಲು ಹೋದವರು ಬಂದರು. ಎಲ್ಲಾರು ಕೈಕಾಲು ಮುಖ ತೊಳಕೊಂಡು ಚಹ ಕುಡಿಯಲು ಕುಳಿತರು. ಮಕ್ಕಳು ಹೊರಗ ಬರಲಿಲ್ಲ. ಮೊಮ್ಮಕ್ಕಳು ಅವರಪ್ಪನವರಿಗೆ ‘ಯಾವಾಗ ಬೆಂಗಳೂರಿಗೆ ಹೋಗಾಮುʼ ಎಂದು ಕೇಳುತ್ತಿದ್ದವು. ಯಾರೂ ಮಾತಾಡುತ್ತಿರಲಿಲ್ಲ. ಯಾರಾದರೂ ಹೊರಗ ಬರಲಿ ಎಂದು ಕಾಯುತ್ತಿದ್ದ ಮಾನಪ್ಪ. ಹೆಂಡತಿ ಸಿದ್ದಮ್ಮ ಬಂದಳು.
‘ಯಾಕ ಮಕ್ಕಳು ಬೆಂಗಳೂರಿಗೆ ಹೋತಾರಂತ?’ ಸಿದ್ದಮ್ಮಳಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ನಾಲಗೆಯಿಂದ ಮಾತು ಹೊರಗ ಬರಲಿಲ್ಲ. ‘ಯಾಕ ಸುಮ್ಮನ ಕುಂತಿ. ಇಲ್ಲೇನು ಕಡಿಮಿ ಆಗೈತಿ?’ ಎಂದು ಅಬ್ಬರಿಸಿದ. ಯಾವಾಗಾದರೂ ವಿಷಯ ಹೇಳಬೇಕೆಂದು ಸಿದ್ದಮ್ಮ ‘ಹೊಲದಾಗ ಹತ್ತಿ ಬೆಳೆ ಬೇಸಿಲ್ಲ. ಈಗ ಮಾಡಿರ ಖರ್ಚಿಗೆ ತಕ್ಕಂತ ಬೆಳೆ ಇಲ್ಲ. ಎರಡು ವರ್ಷದಿಂದ ಹೊಲಕ್ಕ ಖರ್ಚು ಮಾಡಿದ್ದೇ ಹೆಚ್ಚಾಗ್ಯಾದ. ಮೈ ತುಂಬಾ ಸಾಲ ಆಗ್ಯಾದಂತ. ಅದಕ್ಕ ಹೊಲ ಹೊತ್ತ್ಯಾಕಿ ಬೆಂಗಳೂರಿಗೆ ದುಡ್ಯಾಕ ಹೋಗ್ತಾರಂತ’ ಎಂದು ಮುಖ ಮುಚ್ಚಿಕೊಂಡು ಕಣ್ಣೀರು ಸುರಿಸಿದಳು.

‘ದುಡ್ಯಾಕ ಹೋತಾರಂಬೋ’ ಮಾತು ಕೇಳಿದ್ದೇ ಮಾನಪ್ಪನಿಗೆ ದಳ ಕಣ್ಣೀರು ಬಂದವು. ‘ಅಯ್ಯೋ… ಶಿವನೇ! ಎಂತ ಹೊತ್ತು ತಂದೆಪ್ಪ… ಇದನ್ನು ನೋಡಾಕ ನನ್ನ ಜೀವಂತ ಇಟ್ಟಿದ್ದೇನಪೋ… ‘ಎಂದು ಜೋರು ಅಳಲು ಸುರುವು ಮಾಡಿದ. ಎಲ್ಲಾರೂ ಗಾಬರಿಯಾದರು. ಒಳಗಿದ್ದ ಸೊಸೆ ಮಕ್ಕಳು ಹೊರಗ ಬಂದರು. ಮೊಮ್ಮಕ್ಕಳು ‘ತಾತ ಯಾಕ ಅಳ್ತಾನ?ʼ ಎಂದು ಮೂಕವಾಗಿ ನಿಂತವು. ದೊಡ್ಡ ಮಗ ನಾಗಪ್ಪನಿಗೆ ಸಿಟ್ಟು ಬಂತು.
‘ಅಂತದ್ದು ಏನಾಗ್ಯಾದಪ… ಇಷ್ಟೊಂದು ರಂಭಾರಾಡಿ ಮಾಡಿತಿದ್ದಿ. ನಾವೇನು ಯಾವುದಕರ ಖರ್ಚು ಮಾಡಿವೆನು? ಹೊಲಕ್ಕ ಹಾಕೀವಿ. ಹೊಲ ಬೆಳಿಲಿಲ್ಲಂದ್ರ ಏನು ಮಾಡಬೇಕು?’ ಮಾನಪ್ಪ ಮಕ್ಕಳು ಮಾತಾಡದನ್ನೇ ಕಾಯುತಿದ್ದ ‘ಲೇ… ನೀವು ಒಕ್ಕಲುತನ ಸುರುವು ಮಾಡಿದಾಗಿನಿಂದ ದನ ಕರುಗಳಿಗೆ ನಿಮಗ ಊಟಕ್ಕ ಬೇಕಾದ ಬೆಳೆ ಬೆಳೀರಿ. ರೊಕ್ಕದ ಬೆನ್ನು ಹತ್ತಿ ಯಾವ್ಯಾವೋ ಬೆಳೆ ಬೆಳಿ ಬ್ಯಾಡಿರಿ ಎಂದು ಬಡುಕೊಂಡೆ. ನನ ಮಾತು ಕೇಳಲಿಲ್ಲ’ ಎಂದ. ‘ಊರು ಮಂದಿ ಬೆಳಿಯೋ ಬೆಳೆ ನಾವು ಬೆಳಿ ಬೇಕು. ಇಲ್ಲಂದರ ನಮಗ ಬೆಲೆ ಇರೋದಿಲ್ಲ. ಈಗ ಬರೀ ಹೊಟ್ಟೆ ಬಟ್ಟೆಗೆ ಬೆಳದರ ಸಾಲದು. ರೊಕ್ಕನೂ ಬೇಕಾತದʼ ಅಂದ.
‘ಲೇ… ಮಂದಿ ಮಾತು ಕೇಳಿ ಮನೆ ಹಾಳಾಯಿತಂತ. ಈಗೀಗ ಹೊಲಕ್ಕ ಹೆಂಟೆ ಗೊಬ್ಬರ ಹಾಕದು ಬಿಟ್ಟಿರಿ. ದನಗಳಂತೂ ಮಾರಿದಿರಿ. ನೀವು ಹೊಲಗಳು ರೊಕ್ಕ ಬೆಳಿ ಬೇಕಂತ ಬಯಸ್ತೀರಿ. ಹೊಲಗಳು ಹೊಟ್ಟಿಗಿ ತಿಂಬಾಕ ಕಾಳು-ಕಡಿ ಬೆಳಿತಾವು. ರೊಕ್ಕ ಬೆಳೆದಿಲ್ಲ. ಇಷ್ಟೂ ನಿಮಗ ತಿಳೇದಿಲ್ಲಂದರ ಏನು ಹೇಳಬೇಕು. ನಾನು ಮೂವತ್ತ ವರ್ಷ ಒಕ್ಕಲುತನ ಮಾಡೀನಿ. ಎಂದಾರ ಮೈ ತುಂಬಾ ಸಾಲ ಮಾಡಿಕಂಡು ನಿಮ್ಮನ್ನ ಬೀದಿಪಾಲು ಮಾಡಿನೆನು?ʼ ಎಂದು ಕಣ್ಣೀರು ಒರಿಸಿಗೊಂಡ. ‘ತಾತ ನೀನು ಅಳುಬ್ಯಾಡ’ ಎಂದು ಮೊಮ್ಮಕ್ಕಳು ಬಂದು ತಬ್ಬಿಕೊಂಡವು.
ಜೋಳ ಸಮೇತ ಕಾಳು-ಕಡಿ ಬೆಳೆಯುತ್ತಿದ್ದ ಹೊಲಗಳನ್ನು ಹಣದಾಸೆಗಾಗಿ ಹತ್ತಿ ಬೆಳೆಯಲು ಊರ ಮಂದಿ ಪ್ರಾರಂಭಿಸಿದ್ದರು. ಇವರು ಕೂಡ ಮೂರವರ್ಷದಿಂದ ಹತ್ತಿ ಬೆಳೆಯುತ್ತಿದ್ದರು. ಒಂದು ವರ್ಷ ಒಳ್ಳೇ ಲಾಭ ಬಂತು. ಎರಡು ವರ್ಷದಿಂದ ಹಾಕಿದ ಬಂಡವಾಳ ವಾಪಸು ಬಂದಿರಲಿಲ್ಲ. ಇದರಿಂದ ಸಾಲ, ಬಡ್ಡಿ ಏರುತ್ತಾ ಹೋಗಿತ್ತು. ಸಾಲ ನೀಡಿದ ಸದಾಶಿವಪ್ಪ ಗೌಡ ಸಾಲ ತೀರಿಸಿರಿ ಎಂದು ಒತ್ತಾಯ ಮಾಡುತಿದ್ದ. ಏನು ಮಾಡಬೇಕು ತೋಚದೆ ಆತನಿಗೆ ಹೊಲ ಹೊತ್ತಿ ಹಾಕಿ ಬೆಂಗಳೂರಿಗೆ ದುಡಿಯಲು ಹೋಗಲು ನಿರ್ಧರಿಸಿದ್ದರು.
ಮಾನಪ್ಪ ‘ಯವ್ವಾ… ಮಗಳೇ…’ ಎಂದು ಕೂಗಿದ. ಮನ್ಯಾಗ ಮಲಗಿದ್ದ ಬಸುರಿ ಮಗಳು ತಂದೆ ಹತ್ತಿರ ಬಂದಳು. ‘ನೋಡಿ ದೇನವ್ವಾ ನಿಮ್ಮಣ್ಣೋರ ಆಟ. ನೀನು ಮನಿಗೆ ಬಂದರ ಇಂತದ್ದೂ ನಡೀತಲ್ಲವ್ವಾ… ಇದೆಲ್ಲಾ ನೋಡು ಬೇಕಲ್ಲವ್ವಾ… ನೀಯೇನು ಮನಸ್ಸಿಗೆ ಹಚಿಗೋ ಬ್ಯಾಡವ್ವಾ… ನಿಮ್ಮವ್ವಾ ಅದಾಳ ಸುಸೂತ್ರ ಹೆರಿಗೆ ಮಾಡಿಸ್ತಾಳ… ಸುಭಾಸ, ರಾಜಮ್ಮ ಇಲ್ಲಿ ಬರ್ರೋ ನೀವು ಚಲೋ ಓದಿ ಸ್ಯಾಣೇರು ಆಗಬೇಕು …’ ಎಂದು ಅವರನ್ನೂ ತಬ್ಬಿಕೊಂಡನು.
ಅಪ್ಪನ ಮುಖ ನೋಡಿ ಎಲ್ಲಾರಿಗೂ ಕಣ್ಣೀರು ಬಂದವು. ದೊಡ್ಡ ಮಗ ನಾಗಪ್ಪ ಅಪ್ಪನ ಹತ್ತಿರ ಬಂದು ‘ಇಲ್ಲಪ್ಪಾ… ನಾವು ಊರು ಬಿಟ್ಟು ದುಡ್ಯಾಕ ಹೋಗಾದಿಲ್ಲ. ಇದ್ದುದರಲ್ಲೇ ಬಾಳೇವು ಮಾಡಿಕೊಂಡು ತಿಂತೀವಿ. ಹೊಲದಲ್ಲೇ ದುಡುದು ಸಾಲ ತೀರುಸ್ತೀವಿ. ನೀವು ತ್ರಾಸು ಮಾಡಿಕ್ಯಾಬಾಡರಿ’ ಎಂದು ಕಾಲು ಮುಗುದ. ಮಾನಪ್ಪನಿಗೆ ನಿರಾಳ ಅನಿಸಿತು. ಮಗಳ ತೊಡೆ ಮೇಲೆ ಮಲಗಿದರು. ‘ಅಯ್ಯೋ ನಿನಕೂಸು ಮಾತಾಡುತಾದವ್ವೋ… ನೀ ಅಳುಬಾಡ ಅಂತಾದವ್ವಾ…‘ ಎಂದು ಮುಖದ ಮೇಲೆ ನಗು ತಂದುಕೊಂಡರು. ಎಲ್ಲಾರು ಆ ನಗುವಿನಲ್ಲಿ ಒಂದಾದರು.






0 Comments