ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಕೋಚೆ’ ಸಂದರ್ಶನದ ಭಾಗ…

ರಹಮತ್ ತರೀಕೆರೆ

ಪ್ರಶ್ನೆ: ತಾವು ನ್ಯಾಯಾಧೀಶರಾಗಿ ಕರ್ನಾಟಕದ ಅನೇಕ ಕಡೆ ಸೇವೆ ಸಲ್ಲಿಸಿದಿರಿ. ನಿಮ್ಮ ಅನುಭವ ಹೇಗಿತ್ತು?

ಕೋಚೆ: ದಕ್ಷಿಣ ಕನ್ನಡ ಬಹಳ ಮೆಚ್ಚುಗೆ ಆಯ್ತು. ಅಲ್ಲಿನ ಜನ ಸಾಂಸ್ಕೃತಿಕವಾಗಿ ಶೈಕ್ಷಣಿಕವಾಗಿ ಭಾಳ ಎತ್ತರದಲ್ಲಿದಾರೆ. ಅಲ್ಲಿರುವಷ್ಟು ಬರಹಗಾರರು ಕರ್ನಾಟಕದ ಯಾವ ಭಾಗದಲ್ಲೂ ಇಲ್ಲ. ಮತ್ತೆ ಕ್ವಾಲಿಟಿ ರೈಟಿಂಗ್ಸ್ ಇದೆ. ಸುಸಂಸ್ಕೃತ ಜನ. ಈಚೆಗೆ ಕೇಸರಿಮಯ ಆಗಿ ದ್ವೇಷಕ್ಕೆ ಕಾರಣವಾಗಿದೆ. ಪ್ರಗತಿ ದೃಷ್ಟಿಯಿಂದ ಆರ್ಥಿಕವಾಗಿ ಭಾಳ ಮೇಲೆ ಬಂದಿದಾರೆ. ಲೆಫ್ಟ್ ಟು ದೆಮ್‌ಸೆಲ್ವ್ಸ್ ದೆ ಆರ್ ವೆರಿಗುಡ್. ಒಬಿಡಿಯನ್ಸ್ನಲ್ಲಿ ಕಷ್ಟಪಡೋದರಲ್ಲಿ ಬಿಜಾಪುರ-ಬೆಳಗಾವಿ ಜನ ಬಿಟ್ರೆ ಬೇರೆಯಿಲ್ಲ. ಅಲ್ಲಿದ್ದಾಗ ಭಾಳ ಖೂನಿ ಕೇಸುಗಳನ್ನ ವಿಚಾರಣೆ ಮಾಡಬೇಕಾಯಿತು. ಇದನ್ನ ಕೇಳಿದ ಕುವೆಂಪು `‘ಅಷ್ಟೊಂದು ಕೇಸು ಇರ‍್ತವಾ? ಅಲ್ಲಿನ ಜನ ಅಂಥ ಕೆಟ್ಟವರೇ’’ ಅಂತ ಮುಗ್ಧವಾಗಿ ಆಶ್ಚರ್ಯಪಟ್ಟರು. “ಕೆಟ್ಟ ಜನ ಅಲ್ಲ. ಭಾಳ ಒಳ್ಳೇರು” ಅಂದೆ. `‘ಮತ್ತೆ ಹೀಗೆ ಹಿಂಸೆ ಯಾಕ್ಮಾಡ್ತಾರೆ?’’ ಅಂದರು. “ಅವರಿಗೆ ಅನ್ಯಾಯವನ್ನ ತಡೀಲಿಕ್ಕೆ ಆಗೋದಿಲ್ಲ. ಯಾವುದೋ ಒಂದು ತಪ್ಪು ಅಂತ ಕಂಡು ಬಂದರೆ ನೇರವಾಗಿ ಪ್ರತಿಭಟಿಸ್ತಾರೆ. ಆಕ್ರೋಶದಿಂದ ಪ್ರತಿಕ್ರಿಯಿಸ್ತಾರೆ” ಅಂತ ವಿವರಿಸಿದೆ.

ನಮ್ಮ ಬಸವರಾಜ ಕಟ್ಟಿಮನಿ ಒಂದು ಕತೆ ಹೇಳಿದ್ದರು. ಕಿತ್ತೂರಿನ ಚಾದಂಗಡಿಯಲ್ಲಿ ಇಬ್ಬರು ಗೆಳೆಯರು ಚಾ ಕುಡಿದಿದಾರೆ. ಒಬ್ಬರ ಹೆಗಲ ಮೇಲೆ ಒಬ್ಬರು ಕೈಹಾಕ್ಕೊಂಡು ಬಸ್‌ಸ್ಟ್ಯಾಂಡ್ ಕಡಿಗೆ ಬರ‍್ತಾ ಇದಾರೆ. ರಸ್ತೆಗೆ ಬರೋದ್ರಲ್ಲಿ ಏನಾಯ್ತೋ ಏನೊ. ಒಬ್ಬರಿಗೊಬ್ಬರು ಬಾಯಿ ಹತ್ತಿತು. ಅವನ ಕೈಯಾಗೆ ಜಂಬಿಯಾ ಇತ್ತು. ತಗಂಡು ತಿವಿದೇ ಬಿಟ್ಟ. ಅವರು ನಂಬಿದರೆ ಪ್ರಾಣ ಕೊಡೋಕೂ ತಯಾರು, ತಗಳೋಕೂ ತಯಾರು. ಕಪಟಿಗಳಲ್ಲ. ಮುಗ್ಧಜನ.

ಪ್ರಶ್ನೆ: ನ್ಯಾಯಾಧೀಶರಾಗಿ ಕಾನೂನಿನ ಚೌಕಟ್ಟಿನಲ್ಲೇ ಶಿಕ್ಷೆ-ನ್ಯಾಯ ಕೊಡಬೇಕಾದಾಗ, ಬಿಕ್ಕಟ್ಟಿನ ಪ್ರಸಂಗಗಳು ಎದುರಾಗ್ತ ಇದ್ದವಾ?

ಕೋಚೆ: ನ್ಯಾಯಾಧೀಶ ಆಗಿದ್ದಾಗ್ಯೂ ಕೂಡ ಕಾನೂನನ್ನು ಲೋಕಹಿತಕ್ಕಾಗಿ ಯಾವ ರೀತಿಯಾಗಿ ಬಳಸಬೇಕು ಅನ್ನೋದು ನನ್ನ ತೀರ್ಮಾನಗಳಲ್ಲಿ ಕಾಣ್ತದೆ. ಒಂದ್ಸಲ, ಸಬ್‌ಪೋಸ್ಟ್ ಮಾಸ್ಟರ್ ಒಬ್ಬಾತ ೨೦ ಸಾವಿರ ರೂಪಾಯಿ ನ್ಯಾಶನಲ್ ಸೇವಿಂಗ್ ಸರ್ಟಿಫಿಕೇಟಿನ ಹಣವನ್ನ ಸ್ವಂತಕ್ಕೆ ಬಳಸ್ಕೊಂಡಿದ್ದ. ಏಳು ವರ್ಷದವರೆಗೆ ಶಿಕ್ಷೆ ಕೊಡಬಹುದಾಗಿತ್ತು. ಒಂದು ತಿಂಗಳು ಕೊಟ್ಟೆ. ಯಾಕಂತ್ಹೇಳಿದ್ರೆ ಆತ ಅಪರಾಧ ಮಾಡೋಕೆ ಕಾರಣವಾದ ಸರ್ಕಮ್‌ಸ್ಟಾನ್ಸಸನ್ನ ಗಣನೆ ಮಾಡಿದೆ. ಅನಿವಾರ್ಯತೆ ಇಲ್ಲದೆ ಹೋಗಿದ್ದರೆ ಆತ ಮಾಡ್ತಿದ್ದನೊ ಇಲ್ಲವೊ? ಆತನ ತಂಗಿಗೆ ಹೆರಿಗೆ ಆಗಿರಬೇಕಾಗಿರ್ತದೆ.

ಮೊದಲನೇ ಹೆರಿಗೆ ತವರಿನಲ್ಲಿ ಆಗಬೇಕು. ‘ಜಾಗ ಇಲ್ವಲ್ಲಪ್ಪ ಮನೆಯಲ್ಲಿ ಏನ್ಮಾಡ್ತೀಯೊ ಮಾಡಪ್ಪ ನೀನು’ ಅಂತ ತಂದೆ ತಾಯಿ ಹೇಳಿದರು. ಜಾಗ ಇತ್ತು. ಅದಕ್ಕೊಂದು ಎಕ್ಸಟೆನ್ಷನ್ ಬೇಕಿತ್ತು. ಅದಕ್ಕಾಗಿ ೧೦-೧೫ ಸಾವಿರ ರೂಪಾಯಿ ಬೇಕಾಗಿತ್ತು. ಅದಕ್ಕೆ ತಗೊಂಡು ಬಂದ ಮಾಡ್ದ. ಸಿಕ್ಕಿಬಿದ್ದ. ಒಪ್ಕೊಂಡ. ನಾನು ಆತನಿಗೆ ‘ಪ್ರಾಮಾಣಿಕ ವಿಶ್ವಾಸದ್ರೋಹಿ’ ಅಂತ ಕರೆದೆ. ಕಾನೂನು ಪ್ರಕಾರ ತಪ್ಪು ಮಾಡಿದಾನೆ. ಶಿಕ್ಷೆ ವಿಧಿಸದೆ ಹೋದರೆ ಕರ್ತವ್ಯ ಚ್ಯುತಿ ಆಗ್ತದೆ. ಆದ್ದರಿಂದ ತಪ್ಪಿತಸ್ಥನಾದವನಿಗೆ ಶಿಕ್ಷೆ ಸಾಂಕೇತಿಕವಾಗಿ ಕೊಡ್ತೀನಿ. ಶಿಕ್ಷೆಯಾದ ಕೂಡಲೆ ಆತನಿಗೆ ನೌಕರಿಯಿಂದ ವಜಾ ಮಾಡ್ತಾರೆ.

ನೌಕರಿ ಹೋದ್ರೆ ನಾನು ಕೊಟ್ಟ ಏಳು ವರ್ಷ ಶಿಕ್ಷೆಗಿಂತ ಘೋರವಾದ ಶಿಕ್ಷೆಯನ್ನ ಇಡೀ ಜೀವಮಾನ ಅನುಭವಿಸಬೇಕಾಗ್ತದೆ. ಆದ ಕಾರಣದಿಂದ ನೌಕರಿಯಿಂದ ವಜಾ ಮಾಡಿದರೂ ಪುನರ್‌ನೇಮಕ ಮಾಡಬೇಕೆಂದು ಶಿಫಾರಸ್ಸು ಮಾಡಿದೆ. ಇದನ್ನು ಕಾನೂನಿನ ವಿರುದ್ಧ ಮಾಡಿಲ್ಲ. ಇದಕ್ಕೆ ಜಸ್ಟೀಸ್ ಟೆಂಪರಡ್ ವಿತ್ ಮರ್ಸಿ ಅಂತಾರೆ.

ಪ್ರಶ್ನೆ: ನಿಮ್ಮ ಚಿಂತನೆಯಲ್ಲಿ ಪ್ರಭುತ್ವದ ಕಾನೂನನ್ನು ಭಂಗಮಾಡುವ ಅಂಶಗಳಿವೆ. ನ್ಯಾಯಾಧೀಶರಾಗಿ ರೂಲ್ ಆಫ್ ಲಾ ಬಗ್ಗೆ ಹೇಳಬೇಕಾದವರು. ಇದು ವೈರುಧ್ಯವಲ್ಲವೇ?

ಕೋಚೆ: ನಾವು ಈ ತೀವ್ರಗಾಮಿತನವನ್ನು ದೀನಾವಸ್ಥೆಯಲ್ಲಿ ಇರಗೊಡದೆ ಅದಕ್ಕೊಂದು ಧೈರ್ಯಕೊಟ್ಟು ಕಾರ್ಯಗತಗೊಳಿಸಬೇಕು. ಗಾಂಧಿಜಿಯ ಸಿವಿಲ್ ಡಿಸ್‌ಒಬಿಡಿಯನ್ಸಿ, ಕಾನೂನು ಭಂಗ ಚಳುವಳಿ ಅಂತ್ಹೇಳಿದ್ರೆ, ಸಿವಿಲೈಜಡ್ ಸಿವಿಲ್ ಡಿಸ್‌ಒಬಿಡಿಯನ್ಸಿ. ಈಗ ಮಾಡೋ ಹಾಗೆ ರಸ್ತಾಯಗ ಉರುಳೋದು, ರೈಲು ನಿಲ್ಲಿಸೋದು, ರಸ್ತೆ ತಡಿಯೋದು ಇದಲ್ಲ. ಗಾಂಧಿಯವರ ಉಪ್ಪಿನ ಸತ್ಯಾಗ್ರಹವೂ ಕಾನೂನುಭಂಗವೇ. ಬಟ್ ಇಟ್ ಈಜ್ ನಾಟ್ ಮೀಕ್ ಸಬ್ ಮಿಶನ್ ಟು ಅಥಾರಿಟಿ. ವಿ ಡಿಫೈ ಯು ಅಂತ ಅವರು ಮಾಡಿ ತೋರಿಸಿದರು.

ಪ್ರಶ್ನೆ: ನಿಮ್ಮ ನಿಷ್ಠುರಪ್ರಜ್ಞೆ ನೈತಿಕತೆಗಳಿಂದ ಸಾರ್ವಜನಿಕ ಸಂಬಂಧಗಳಲ್ಲಿ ಸಮಸ್ಯೆ ಆಗಿದ್ದುಂಟಾ?

ಕೋಚೆ: ನಾನು ಯಾವ ರೀತಿಯಾಗಿ ಜೀವಿಸಿದೆ ಅನ್ನೋದರಲ್ಲಿ ಐ ಹ್ಯಾವ್ ನೋ ರಿಗ್ರೆಟ್ಸ್. ನನ್ನ ಗುಣಗಳಿಂದ ಲಾಭ ನಷ್ಟ ಆಗ್ತದೆ ಅನ್ನೋದನ್ನು ಎಂದೂ ಮನಸ್ನಲ್ಲಿ ಇಟ್ಕೊಳ್ಕಿಲ್ಲ. ಅದು ಆಡಬೇಕಾದಂಥ ಮಾತು, ಬರೀಬೇಕಾದಂಥ ಮಾತು ಅಂತಾದ್ರೆ, ಮುಂದೆ ಬರಬಹುದಾದ ಯಾವುದನ್ನೇ ಆಗಲಿ ಎದುರಿಸಲಿಕ್ಕೆ ಸಿದ್ಧವಾಗಿ ಆಡತಿದ್ದೆ, ಬರೀತಿದ್ದೆ. ಅದರಿಂದ ಕೆಲಮಟ್ಟಿಗೆ ತೊಂದರೆಗಳಾಗಿವೆ. ಆದರೆ ಅದರಿಂದ ಕುಗ್ಗಿಲ್ಲ. ಬಡ್ತಿ ಪಡೆಯೋ ಸಂದರ್ಭ ಬಂದಾಗ ನನ್ನ ವಿರೋಧಿಗಳು ‘ರೈತ’ ಪತ್ರಿಕೆಯಲ್ಲಿ ಬರೆದ ಲೇಖನಗಳ ಕಟಿಂಗ್ಸನ್ನ ಸರ್ಕಾರಕ್ಕೆ ಕಳಿಸಿ ಕೊಟ್ಟಿದ್ರು. ಹೈಕೋರ್ಟ್ ಜಡ್ಜ್ ತುಕೋಳ್ ಮಾಸ್ತರರೇ ಇದನ್ನ ಹೇಳಿದರು: ‘ಚನ್ನಬಸಪ್ಪನವರೇ, ನಿಮಗೆ ಎಷ್ಟು ಜನ ಆಪ್ತರಿದಾರೋ ಅದಕ್ಕಿಂತಲೂ ಅಧಿಕವಾಗಿ ಆಗದವರೂ ಇದಾರೆ. ನೀವು ಸರ್ಕಾರವನ್ನು ಕಟುವಿಮರ್ಶೆ ಮಾಡಿದ ಲೇಖನಗಳನ್ನು ನಮಗೆ ಕಳಿಸಿದ್ರು. ಅವನ್ನು ನಾವು ಗಮನಕ್ಕೆ ತಗೊಳ್ಳಿಲ್ಲ. ನಿಮ್ಮ ಕರ್ತವ್ಯ ನೀವು ಸರಿಯಾಗಿ ನಿಭಾಯಿಸ್ತೀರೋ ಇಲ್ಲವೋ ಅನ್ನೋದನ್ನ ಮಾತ್ರ ನಾವು ನೋಡಿದ್ವಿ” ಅಂದರು.

ಇದು ೨೦೦೭ರಲ್ಲಿ ಮಾಡಲಾದ, ಕನ್ನಡ ಲೇಖಕರೂ ಅನುವಾದಕರೂ ಚರಿತ್ರೆಕಾರರೂ ನ್ಯಾಯಾಧೀಶರೂ ಆಗಿದ್ದ ಕೋಚೆಯವರ ಸಂದರ್ಶನದ ಭಾಗ. ಕೋಣನ ಚನ್ನಬಸಪ್ಪ ಅವರ (೧೯೨೨-೨೦೧೯) ಜನ್ಮಶತಮಾನವಿದು. ಕೋಚೆಯವರು ಕ್ವಿಟ್ ಇಂಡಿಯಾ ಹಾಗೂ ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಭಾಗವಹಿಸಿದವರು. ಬಾಳಿನ ಕೊನೆಯ ವರ್ಷಗಳಲ್ಲಿ ಕೋಮುವಾದ ಹಾಗೂ ಭ್ರಷ್ಟಾಚಾರ ವಿರೋಧಿ ಚಳುವಳಿಗಳಲ್ಲಿ ತೊಡಗಿಸಿಕೊಂಡವರು.

ಕುವೆಂಪು ಹಾಗೂ ಅರವಿಂದರ ಅನುಯಾಯಿಯಾಗಿ ಪಾಂಡಿಚೇರಿಯ ಅರವಿಂದಾಶ್ರಮದ ಜತೆ ಗಾಢ ಒಡನಾಟ ಇರಿಸಿಕೊಂಡಿದ್ದವರು; ಟಿಪ್ಪು ಮತ್ತು ಸಾವರ್ಕರ್ ಮೇಲೆ ಸಂಶೋಧನೆ ಮಾಡಿ ಕೃತಿ ಪ್ರಕಟಿಸಿದವರು. ಗಾಂಧಿವಾದ, ಅರವಿಂದ ದರ್ಶನ, ಬಸವತತ್ವ, ಕುವೆಂಪು ಚಿಂತನೆ ಹಾಗೂ ಎಡಪಂಥೀಯತೆ ಕಟೆದ ಆಕೃತಿಯ ಹಾಗೆ ಅವರ ವ್ಯಕ್ತಿತ್ವ ಹಾಗೂ ಚಿಂತನೆಗಳಿದ್ದವು. ಅಕೆಡಮಿಕ್ ಅಲ್ಲದ ವಲಯದಿಂದ ಬಂದವರ ಸಾಹಿತ್ಯದ ಆಯ್ಕೆ ಹಾಗೂ ವಿಚಾರಗಳು ವಿಶಿಷ್ಟವಾಗಿರುತ್ತವೆ.

ನವೋದಯ ಸಂಪ್ರದಾಯಕ್ಕೆ ಸೇರಿದ ಅನೇಕರಲ್ಲಿ ಭಾರತದ ಕೋಮುವಾದ, ಕಾರ್ಪೊರೇಟ್ ಪ್ರಜಾಪ್ರಭುತ್ವಗಳ ಬಗ್ಗೆ ಸರಿಯಾದ ರಾಜಕೀಯ ತಿಳುವಳಿಕೆ ಕಾಣುವುದಿಲ್ಲ. ಕೋಚೆ ಇದಕ್ಕೆ ಒಂದು ಅಪವಾದದಂತಿದ್ದರು. ದೊರೆಸ್ವಾಮಿ ಹಾಗೂ ಕೋಚೆ ಅವರಂತಹ ಕೆಲವು ಗಾಂಧಿವಾದಿಗಳು, ಜೀವಿತದ ಕೊನೆಯ ದಿನಗಳಲ್ಲಿ ತಮ್ಮ ಚಿಂತನೆಯಲ್ಲಿ ವಿಶಿಷ್ಟತವಾದ ಹರಿತತೆ ಮತ್ತು ತೀವ್ರಗಾಮಿತನಕ್ಕೆ ಪಲ್ಲಟಗೊಂಡರು. ಇದಕ್ಕೆ ಕಾರಣ, ಸಮಕಾಲೀನ ರಾಜಕೀಯ ಆರ್ಥಿಕ ವ್ಯವಸ್ಥೆಯು ಪಡೆದುಕೊಂಡಿರುವ ಅಮಾನುಷ ರೂಪಾಂತರ. ಚಿಂತಕರ ಸೈದ್ಧಾಂತಿಕ ಪಲ್ಲಟ ಹಾಗೂ ಚಲನಶೀಲತೆಗೂ ಅವರು ವರ್ತಮಾನ ಸಮಾಜದ ಜತೆ ಇರಿಸಿಕೊಂಡಿರುವ ಜೀವಂತ ಮತ್ತು ಸಕೀಲ ಸಂಬಂಧಕ್ಕೂ ಸಂಬಂಧವಿದೆ. ಈ ಸಂದರ್ಶನದಲ್ಲಿ ಒಂದು ಹಿರಿಯ ಜೀವವು, ಸಮಾಜ ಬದಲಾವಣೆ ಬಗ್ಗೆ ಇರಿಸಿಕೊಂಡಿರುವ ತವಕ ಮತ್ತು ನಂಬಿಕೆಗಳು ವಿಸ್ಮಯಗೊಳಿಸುವಂತಿವೆ.

(`ನ್ಯಾಯನಿಷ್ಠುರಿಗಳ ಜತೆಯಲ್ಲಿ’ : ಸಂದರ್ಶನ ಸಂಪುಟದಿಂದ)

‍ಲೇಖಕರು Admin

28 February, 2022

1 Comment

  1. T S SHRAVANA KUMARI

    ಉ ತ್ತಮ ಸಂದರ್ಶನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading