ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರನ್ನ ಅಂದ್ರೆ ನಂಗಿಷ್ಟ

ಬಿ ಆರ್ ಸತ್ಯನಾರಾಯಣ

೧.
ನಮಗೆ ಸ್ವಾತಂತ್ರ್ಯ ಬಂದಿದ್ದು ೧೯೪೭ರಲ್ಲಿ. ಅಲ್ಲಿಗೆ ಸರಿಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಮದುವೊಳಲು ಎಂಬ ಊರಿನಲ್ಲಿ ರನ್ನನ ಜನನ. ಈಗ ಮುಧೋಳ್ ಎಂಬ ಹೆಸರಿನಿಂದ ಗುರುತಿಸುವ ಅಂದಿನ ಮುದುವೊಳಲು ಘಟಪ್ರಭ ಮತ್ತು ಕೃಷ್ಣಾ ನದಿಗಳು ಹರಿಯುವಲ್ಲಿ ತದ್ದವಾಡಿಗೆ ದಕ್ಷಿಣಕ್ಕೂ, ತೊರೆಗೆರೆಗೆ ಉತ್ತರಕ್ಕೂ ಇದ್ದ ಬೆಳಗುಲಿ-೫೦೦ ಎಂಬ ಸೀಮೆಯಲ್ಲಿ ಜಂಬುಖಂಡಿ ಪ್ರಾಂತ್ಯದಲ್ಲಿತ್ತು. ರನ್ನನ ತಂದೆ ‘ಜಿನೇಂದ್ರಪಾದ ಕಮಲಭ್ರಮರ ಜಿನವಲ್ಲಭ’. ತಾಯಿ ‘ಪತಿವ್ರತಾಗುಣದಿಂದ ಪ್ರಸಿದ್ಧಳಾದ ಅಬ್ಬಲಬ್ಬೆ’. ರೇಚಣ ಮತ್ತು ಮಾರಮಯ್ಯ ಎಂಬ ಇಬ್ಬರು ಅಣ್ಣಂದಿರು ರನ್ನನಿಗಿದ್ದರು. ಜಿನಧರ್ಮಾವಲಂಬಿಯಾಗಿದ್ದ ಈ ಕುಟುಂಬದವರದು ಬಳೆಗಾರ ವೃತ್ತಿ. ಬಳೆಗಳನ್ನು ಕೊಂಡು ತಂದು ಹೊತ್ತು ಮಾರಿ ಬಂದ ಲಾಭದಿಂದ ಜೀವನ ಸಾಗಿಸಬೇಕಾದ ಪರಿಸ್ಥಿತಿ. ಸಹಜವಾಗಿಯೇ ಬಡತನವಿತ್ತು. ವಿದ್ಯೆಯೆಂಬುದು ಕನಸಿನ ಮಾತಾಗಿತ್ತು.
ಬಾಲಕ ರನ್ನನಿಗೆ ವಿದ್ಯೆ ಕಲಿಯಬೇಕೆಂಬ ಅದಮ್ಯ ಬಯಕೆ. ಮನೆಯಲ್ಲಿ ವಾತಾವರಣ ಅದಕ್ಕೆ ಪೂರಕವಾಗಿರಲಿಲ್ಲ. ಆತನೂ ಬಳೆ ವ್ಯಾಪಾರಕ್ಕೆ ಇಳಿಯಲೇಬೇಕಾದ ಪರಿಸ್ಥಿತಿ. ಅಂತಹ ಸಂದರ್ಭದಲ್ಲಿ ರನ್ನ ಹೇಗೋ ಬಂಕಾಪುರದಲ್ಲಿದ್ದ ಗುರುಕುಲದ ಜಾಡು ತಿಳಿದು ಮನೆಗೆ ತಿಳಿಸಿ ವಿದ್ಯಾಭ್ಯಾಸದ ಕನಸು ಹೊತ್ತು ಹೊರಟೇಬಿಟ್ಟ. ಬಂಕಾಪುರ ತಲುಪಿದಷ್ಟು ಸುಲಭವಾಗಿರಲಿಲ್ಲ ವಿದ್ಯೆ ಕಲಿಯುವುದು. ಆದರೆ ರನ್ನನ ವಿದ್ಯೆ ಕಲಿಯಬೇಕೆಂಬ ಹಸಿವು ಅವನನ್ನು ಸುಮ್ಮನೆ ಕೂರಿಸಲಿಲ್ಲ. ಗುರುಕುಲದ ಬಾಗಿಲು ಬಡಿದು ನಿಂತ ರನ್ನನನ್ನು ಅಲ್ಲಿನ ವಿದ್ಯಾರ್ಥಿಸಮೂಹ ತಿರಸ್ಕಾರದಿಂದಲೇ ಕಂಡಿತು. ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿ ಬಾಲಕ ರನ್ನ ಹೆದರಿಕೊಳ್ಳುವಂತಹ ಸನ್ನವೇಶ ಸೃಷ್ಟಿಯಾಯಿತು.
‘ಯಾರು ನೀನು?’
‘ವಿದ್ಯಾರ್ಥಿ’
‘ಹೆಸರೇನು?’
‘ರನ್ನಮಯ್ಯ’
‘ಓಹೋ, ರನ್ನ! ನಿನ್ನ ತಂದೆ ತಾಯಿ ಯಾರು’
‘….’
‘ಏನು ವೃತ್ತಿ’
‘ಬಳೆಗಾರರ ವೃತ್ತಿ’
‘ಬಳೆಗಾರ ವೃತ್ತಿ ಮಾಡಿಕೊಂಡಿರುವುದನ್ನು ಬಿಟ್ಟು ವಿದ್ಯೆ ಕಲಿಯಬೇಕೆಂಬ ಚಪಲವೋ’
‘…;
‘ಪಂಡಿತ ರನ್ನಮಯ್ಯ ಅನ್ನಿಸಿಕೊಳ್ಳುವ ಚಪಲವೋ’
‘…’
‘ಕೊಂಡು ತಂದು ಹೊತ್ತು ಮಾರಿ ಲಾಭಗಳಿಸಲು ವಿದ್ಯೆಯೇನು ಬಳೆಯ ಮಲಾರವೆ?’
‘ವೃತ್ತಿ ಹೊಟ್ಟೆ ಪಾಡಿನದಾಯಿತು. ಕಲಿಯಬೇಕೆಂಬುದು ನನ್ನ ಆತ್ಮದ ಹಸಿವು’
‘ಓಹೋ, ಆತ್ಮ ಪರಮಾತ್ಮ ಎಲ್ಲ ತಿಳಿದಿದ್ದೀಯೋ. ಹೋಗಯ್ಯಾ ಹೋಗು. ಬಳೆ ಮಾರಿಕೊಂಡೇ ಜೀವನ ನಡೆಸು. ನೀನು ವಿದ್ಯೆ ಕಲಿಯಲು ಬಂದರೆ ಹೊಟ್ಟೆಗೆ ತಣ್ಣಿರು ಬಟ್ಟೆಯೇ ಗತಿ. ಹೋಗಯ್ಯಾ’
ಹೀಗೇ ಮೂದಲಿಕೆ ಮುಂದುವರೆಯಿತು.
ರನ್ನ ಹತಾಶನಾದ. ಗುರುಕುಲದಿಂದ ಹೊರಗೆ ಬಂದು ಆಕಾಶದತ್ತ ಮೊಗ ಮಾಡಿ ನಿಂತ. ಯಾರೋ ಕೂಗುತ್ತಿದ್ದಾರೆ ಅನ್ನಿಸಿ ಮೊಗತಿರುಗಿಸಿ ನೋಡಿದ. ವಯಸ್ಸಿನಲ್ಲಿ ತನಗಿಂತ ಸ್ವಲ್ಪ ದೊಡ್ಡವನಾದ ಹಾಗೂ ತೇಜೋವಂತನಾದ ಒಬ್ಬ ಯುವಕ ತನ್ನತ್ತ ಬರುತ್ತಿದ್ದ.
‘ನಿನ್ನ ಹೆಸರು ರನ್ನಮಯ್ಯನೆಂದೆ, ಅಲ್ಲವೆ? ನಗುತ್ತ ಕೇಳಿದ ಆ ಯುವಕ.’
‘ಹೌದು’
‘ವಿದ್ಯೆ ಕಲಿಯಬೇಕೆಂಬುದು ಕೇವಲ ಕ್ಷಣಿಕ ಆಕರ್ಷಣೆಯೋ ಹೇಗೆ?’
‘ಆಗಲೇ ಹೇಳಿದೆನಲ್ಲ. ಅದು ನನ್ನ ಆತ್ಮದ ಹಸಿವು’
‘ಉದ್ದೇಶ’
‘ಜ್ಞಾನಾರ್ಜನೆ, ಕಾವ್ಯಾಭ್ಯಾಸ, ಕಾವ್ಯರಚನೆ…’
‘ಓಹೋ ನಿನ್ನ ದೃಷ್ಟಿ ಹಿಮಾಲಯದತ್ತ!’
‘ಯಾಕಾಗಬಾರದು?’
‘ಹೌದು ಯಾಕಾಗಬಾರದು?! ಆಗಲಿ. ಆದರೆ ನಿನಗಿಲ್ಲಿ ಪ್ರವೇಶವೇ ದೊರಕುತ್ತಿಲ್ಲವಲ್ಲ’
‘ನನಗೆ ಪ್ರತಿಭೆಯಿಲ್ಲವೆಂದಲ್ಲ. ನನ್ನ ಜಾತಿಯ ಕಾರಣದಿಂದ’
‘ಆದ್ದರಿಂದಲೇ ಇದು ನಿನಗೆ ಪ್ರತಿಕೂಲ ವಾತಾವರಣ. ಕಲಿಯಲೇಬೇಕೆಂಬ ಹಸಿವು ನಿನಗಿದ್ದುದೇ ಆದರೆ ಶ್ರವಣಬೆಳಗೊಳಕ್ಕೆ ಹೋಗು. ಅಲ್ಲಿ ಅಜಿತಸೇನಾಚಾರ್ಯರೆಂಬ ಮಹಾಗುರುಗಳಿದ್ದಾರೆ. ಬಹುಶಃ ಅವರು ನಿನ್ನ ಕೈ ಹಿಡಿಯಬಹುದು.’ ಆತ್ಮವಿಶ್ವಾಸದಿಂದ ನುಡಿದ ಯುವಕನನ್ನು ರನ್ನ ಸಂತೋಷ ಆಶ್ಚರ್ಯದಿಂದ ನೋಡಿದ.
‘ಅಲ್ಲಿ ನನಗಾರು ಆಶ್ರಯ ಕೊಡುವವರು’
‘ಸಮರಪರಶುರಾಮನಾದ ಚಾಮುಂಡರಾಯನಿದ್ದಾನೆ. ಕೊನೆಗೆ ಎಲ್ಲರನ್ನೂ ಸಲಹುವ ಆ ಬಾಹುಬಲಿಯಿದ್ದಾನೆ’
‘ಸಂತೋಷ ಪರಮಸಂತೋಷ! ನಿಮ್ಮ ನಾಮಧೇಯ ತಿಳಿಯಬಹುದೆ’
‘ಅದಕ್ಕೇನಂತೆ! ನನ್ನ ಹೆಸರು ಲಲಿತಕೀರ್ತಿ. ನಾನೂ ಅಜಿತಸೇನಾಚಾರ್ಯರ ವಿದ್ಯಾರ್ಥಿ. ನೀವು ಹೋಗಿ ನಾನು ಕಳಿಸಿದೆನೆಂದೇ ಹೇಳಿ. ಆದರೆ ನಾನು ಕಳಿಸಿದವನು ಎಂದ ಮಾತ್ರಕ್ಕೆ ನಿಮ್ಮನ್ನು ಶಿಷ್ಯರನ್ನಾಗಿ ಸ್ವೀಕರಿಸುತ್ತಾರೆ ಎಂಬ ಭರವಸೆ ನನಗಿಲ್ಲ. ನಿಮ್ಮ ಪರೀಕ್ಷೆ ನಡೆಯುತ್ತದೆ. ನಿಮ್ಮ ಇಚ್ಛೆ ಕರವಾಳವೋ ಮರವಾಳವೋ ತೀರ್ಮಾನವಾಗುತ್ತದೆ. ಗುರುಗಳು ತೃಪ್ತರಾದರೆ ನಿಮಗೆ ಪ್ರವೇಶ ಖಂಡಿತ.’
‘ತುಂಬಾ ಸಂತೋಷ. ನಾನಿನ್ನು ಬರಲೆ’
‘ಎಲ್ಲಿಗೆ? ಶ್ರವಣಬೆಳಗೊಳವೇನು ಪಕ್ಕದ ಊರಲ್ಲ. ದೂರದ ಕಾಣದ ದೇಶ. ಹೋಗಿ ತಲಪಲೇ ಮೂರ್ನಾಲ್ಕು ತಿಂಗಳಾದರು ಬೇಕು. ಅದಕ್ಕೆ ಬೇಕಾದ ವ್ಯವಸ್ಥೆ ಆಗಿದೇಯೇನು?’
‘ಇಲ್ಲ. ಹೇಗೋ ಏನೋ ನನಗೆ ಗೊತ್ತಿಲ್ಲ. ನಾನು ಅಲ್ಲಿಗೆ ತಲಪುತ್ತೇನೆ ಎಂದಷ್ಟೇ ಹೇಳಬಲ್ಲೆ’
‘ಒಳ್ಳೆಯದು ಹೋಗಿಬನ್ನಿ. ಅರ್ಹಂತನು ಕಾಪಾಡಲಿ’

(ಹಸ್ತಾಕ್ಷರ)

ಹಗಲು-ರಾತ್ರಿ. ಬಿಸಿಲು-ಮಳೆ, ಚಳಿ-ಗಾಳಿ, ಕಾಡು-ಮೇಡು ಎನ್ನದೆ ರನ್ನ ಶ್ರವಣಬೆಳಗೊಳ ತಲುಪಿದ. ಒಂದು ಶೂಭಮೂಹೂರ್ತದಲ್ಲಿ ಅಜಿತಸೇನಾಚಾರ್ಯರನ್ನು ಕಂಡು ಮನದಾಸೆಯನ್ನು ಬಿಚ್ಚಿಟ್ಟ. ಆತನ ಮಾತಿನಲ್ಲಿದ್ದ ಪ್ರಾಮಾಣಿಕತೆ, ದೃಢತೆ, ಆತ್ಮವಿಶ್ವಾಸ ಅಜಿತಸೇನಾಚಾರ್ಯರ ಗಮನಸೆಳೆದವು. ಒಂದೆರಡು ಪಕ್ಷ ತಮ್ಮಲಲಿರುವಂತೆ ಹೇಳಿ, ಆತನ ಪ್ರತಿಭೆಯನ್ನು ಮನದಟ್ಟು ಮಾಡಿಕೊಂಡ ಗುರುಗಳು ಆತನನ್ನು ಶಿಷ್ಯನನ್ನಾಗಿ ಸ್ವೀಕರಿಸಲು ಒಪ್ಪಿದರು. ಆಶ್ರಯಕ್ಕೆ ಚಾಮುಂಡರಾಯನನ್ನು ಕಾಣುವಂತೆ ಹೇಳಿದರು. ಒಂದು ದಿನ ಮುಂಜಾನೆ ಚಾಮುಂಡರಾಯನನ್ನು ಕಂಡ ರನ್ನ ತನ್ನ ಉದ್ದೇಶವನ್ನು ಗುರುಗಳ ಬಯಕೆಯನ್ನು ಅವನಿಗೆ ತಿಳಿಸಿದ. ಮೊದಲ ನೋಟದಲ್ಲೇ ಸ್ನೇಹ ಸ್ಫುರಿಸುವಂತೆ ಮಾತನಾಡಿದ ಚಾವುಂಡರಾಯ ರನ್ನನ ವಿದ್ಯಾಭ್ಯಾಸಕ್ಕೆ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಟ್ಟ.
ಸತತ ದ್ವಾದಶ ವರ್ಷಗಳ ಕಾಲ ಕನ್ನಡ, ಸಂಸ್ಕೃತ ಭಾಷೆಗಳ ವ್ಯಾಕರಣ, ಛಂದಸ್ಸು, ಜೈನಶಾಸ್ತ್ರ, ಆಗಮ ಮೊದಲಾದವುಗಳ ಅಭ್ಯಾಸವಾಯಿತು. ವಿದ್ಯಾರ್ಥಿ ದೆಸೆಯಿಂದಲೇ ವೃತ್ತ-ಕಂದಪದ್ಯಗಳಲ್ಲಿ ಪರಿಣಿತಿ ಸಾಧಿಸಿ ಬಿಡಿ ಪದ್ಯಗಳನ್ನು ರಚಿಸಿ ಸೈ ಎನಿಸಿಕೊಂಡ ರನ್ನನಿಗೆ ಕಾವ್ಯಸರಸ್ವತಿ ಒಲಿದು ಬಂದಳು. ಗುರುಗಳು ಆ ಮಾರ್ಗದಲ್ಲಿಯೇ ಮುಂದುವರೆಯುವಂತೆ ಆಶೀರ್ವದಿಸಿದರು. ವಾಲ್ಮೀಕಿ, ವ್ಯಾಸ, ಭಾಸ, ಬಾಣ, ಕಾಳಿದಾಸ, ಪಂಪ, ಪೊನ್ನ ಮೊದಲಾದವರ ಕಾವ್ಯಗಳನ್ನು ಅಭ್ಯಾಸ ಮಾಡಿದ ರನ್ನನ ಗುರಿ ಸ್ಪಷ್ಟವಾಗಿತ್ತು. ತಾನೂ ಆ ಮಹಾಕವಿಗಳ ಸಾಲಿನಲ್ಲಿ ನಿಲ್ಲಬೇಕೆಂಬುದು ಅವನ ಕನಸಾಯಿತು. ಅದಕ್ಕಾಗಿ ಬಿಡಿ ಪದ್ಯಗಳ ರಚನೆಗಳನ್ನು ನಿಲ್ಲಿಸಿದ ರನ್ನ ಮಹಾಕಾವ್ಯರಚನೆಗೆ ಒತ್ತು ಕೊಟ್ಟ.
ಮೊದಲು ಅವನ ಮನದಲ್ಲಿ ಸುಳಿದು, ಕಣ್ಣೆದುರಿಗೆ ನಿಂತ ಮಹಾವ್ಯಕ್ತಿಯೆಂದರೆ ಚಾಮುಂಡರಾಯನೆ! ಕಲಿಯೂ ಕವಿಯೂ ಆಗಿದ್ದ ಚಾಮುಂಡರಾಯನ ಚಾಮುಂಡರಾಯ ಪುರಾಣ ಆಗಲೇ ವಿದ್ವತ್ ಲೋಕದಲ್ಲಿ ಹೆಸರು ಪಡೆದಿತ್ತು. ಜೈನಧರ್ಮೀಯರಲ್ಲಿ ಆ ಕೃತಿಗೆ ಹೆಚ್ಚಿನ ಮಹತ್ವವಿತ್ತು. ದೊರೆ ಗಂಗರಾಚಮಲ್ಲನ ಮಂತ್ರಿಯಾಗಿದ್ದುಕೊಂಡು ಹಲವಾರು ಯುದ್ಧಗಳಲ್ಲಿ ಗೆಲುವು ತಂದುಕೊಟ್ಟಿದ್ದ ಕಲಿ ಚಾಮುಂಡರಾಯ ‘ವೀರಮಾರ್ತಾಂಡದೇವ’, ‘ಸಮರಪರುಶರಾಮ’ ಎಂಬ ಹೆಸರುಗಳನ್ನು ಗಳಿಸಿದ್ದನು. ಬಾಹುಬಲಿಯ ಏಕಶಿಲಾವಿಗ್ರಹವನ್ನು ಮಾಡಿಸಿ, ಜೈನಧರ್ಮಕ್ಕೆ ಮಹಾಪೋಷಕನಾಗಿ ‘ಸಮ್ಯಕ್ತ್ವ ರತ್ನಾಕರ’ ಎಂಬ ಬಿರುದನ್ನು ಧರಿಸಿದ್ದ. ಇವುಗಳಲ್ಲದೆ ಸ್ವತಃ ರನ್ನನಿಗೆ ಆಶ್ರಯ ಕೊಟ್ಟಿದ್ದ. ಅಷ್ಟೊತ್ತಿಗಾಗಲೇ ಆಶ್ರಿತ ಅರಿಕೇಸರಿಯನ್ನು ಅರ್ಜುನನೊಂದಿಗೆ ಸಮೀಕರಿಸಿದ ಪಂಪನ ‘ವಿಕ್ರಾಮಾರ್ಜುನ ವಿಜಯ’ ಪ್ರಸಿದ್ಧವಾಗಿತ್ತು. ಇವುಗಳೆಲ್ಲವನ್ನು ಗಮನದಲ್ಲಿಟ್ಟುಕೊಂಡು, ರಾಮಾಯಣ, ಮಹಾಭಾರತಗಳಲ್ಲಿ ಬರುವ ಪರುಶಾಮನೊಂದಿಗೆ ಚಾಮುಂಡರಾಯನನ್ನು ಸಮೀಕರಿಸಿ ‘ಪರಶುರಾಮ ಚರಿತೆ’ ಎಂಬ ಮಹಾಕಾವ್ಯದ ರಚನೆಯಲ್ಲಿ ತೊಡಗಿಸಿಕೊಂಡ.
ಪರಶುರಾಮಚರಿತೆಯ ರಚನೆ ಪೂರ್ಣಗೊಂಡು ವಿದ್ವತ್ ಸಭೆಗಳಲ್ಲಿ ಗೌರವಿಸಲ್ಪಟ್ಟಿತು. ಜಿನಧರ್ಮಸಮಯಪಾಲಕನಾದ ಚಾಮುಂಡರಾಯನ ಕಥೆ ಜೊತೆಗೆ ಜೈಧರ್ಮದ ತತ್ವಸಾರ ಎಲ್ಲವೂ ಮಿಳಿತಗೊಂಡ ರಚನೆಯಾದ್ದರಿಂದ ಜೈನಧರ್ಮೀಯರಲ್ಲಿಯೂ ಕೃತಿ ಮಾನ್ಯತೆಗಳಿಸಿಕೊಂಡಿತು. ರನ್ನನ ಹೆಸರು ಮನೆ ಮಾತಾಯಿತು.
ಹೀಗಿರುವಲ್ಲಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ ನಡೆಸುವ ದಿನಗಳು ಹತ್ತಿರ ಬಂದವು. ದೇಶದ ಮೂಲೆಮೂಲೆಗಳಿಂದ ಜಿನಭಕ್ತರು ಶ್ರವಣಬೆಳಗೊಳಕ್ಕೆ ಬರಲಾರಂಭಿಸಿದರು. ರಾಜರು, ಮಾಂಡಳಿಕರು, ಸಾಮಂತರು, ಜೈನಧರ್ಮದ ಪ್ರಮುಖರು ಶ್ರವಣಬೆಳಗೊಳಕ್ಕೆ ಬರುವವರಿದ್ದರು. ಹಾಗೆ ಬರುವವರ ಪಟ್ಟಿಯಲ್ಲಿ ಅತ್ತಿಮಬ್ಬೆಯ ಹೆಸರೂ ಇತ್ತು. ರನ್ನ ಅತ್ತಿಮಬ್ಬೆಯ ಹೆಸರನ್ನು ಕೇಳಿದ್ದನಾದರೂ ನೋಡಿರಲಿಲ್ಲ. ಚಾಲುಕ್ಯ ತೈಲಪನ ನಾಡಿನಲ್ಲಿ ಜಿನಧರ್ಮಪ್ರದೀಪಿಕೆಯೆಂದು ಹೆಸರಾಗಿದ್ದ ಅತ್ತಿಮಬ್ಬೆಯನ್ನು ಕಾಣುವ ಅವನ ಕಾತರ ಕೊನೆಗೊಳ್ಳುವ ಕಾಲ ಮಹಾಮಸ್ತಕಾಭಿಷೇಕದ ನೆವದಲ್ಲಿ ಕೂಡಿಬಂದಿತ್ತು.
ಸ್ವತಃ ಚಾಮುಂಡರಾಯನೇ ಒಂದು ಸುಮೂಹರ್ತದಲ್ಲಿ ರನ್ನನನ್ನು ಅತ್ತಿಮಬ್ಬೆಯ ಸಾನಿಧ್ಯಕ್ಕೆ ಕರೆದುಕೊಂಡು ಹೋಗಿ ಪರಿಚಯಿಸಿದ. ದೀರ್ಘದಂಡ ನಮಸ್ಕಾರ ಹಾಕಿದ ರನ್ನನನ್ನು ಪ್ರೀತಿಯಿಂದ ಮೈದಡವಿ ಆಶೀರ್ವದಿಸಿದ ಅತ್ತಿಮಬ್ಬೆ ‘ನಿಮ್ಮ ಪರಶಮುರಾಮಚರಿತೆಯನ್ನು ನಾನು ಓದಿದ್ದೇನೆ. ಸ್ವತಃ ಕಥಾನಾಯಕನನ್ನು ಹಾಗೂ ಕವಿವರ್ಯರನ್ನು ಒಟ್ಟಿಗೇ ನೋಡುವ ಭಾಗ್ಯ ನನ್ನದಾಗಿದೆ’ ಎಂದು ಸಂತೋಷಪಟ್ಟಳು. ಮಾತು ಕಳೆದುಕೊಂಡು ನಿಂತಿದ್ದ ರನ್ನನಿಗೆ ಸಂತೋಷ ರೋಮಾಂಚನ ಎಲ್ಲವೂ ಆಯಿತು. ‘ನಿಮ್ಮೆದುರಿಗೆ ಬಂದು ನಿಲ್ಲುವ ಭಾಗ್ಯ ನಮ್ಮದಾಗಿದೆ ತಾಯಿ. ಅದೂ ಈ ಪರಶುರಾಮರ ದೆಸೆಯಿಂದಲೇ’ ಎಂದು ಚಾಮುಂಡರಾಯನ ಕಡೆಗೆ ಕೈತೋರಿಸಿದ.
ವೈಭವದಿಂದ ಮಹಾಮಸ್ತಕಾಭಿಷೇಕ ನಡೆಯಿತು. ಅತ್ತಿಮಬ್ಬೆಯು ಎಲ್ಲಾ ಕೆಲಸಗಳಲ್ಲಿಯೂ ಆಸಕ್ತಿಯಿಂದ ಭಾಗವಹಿಸಿದ್ದಳು. ರನ್ನ ಅವಳ ಉತ್ಸಾಹ, ಅವಳ ಸಾನಿಧ್ಯದಿಂದ ಸಿಗುತ್ತಿದ್ದ ದೈವಿಕ ಆನಂದ, ತನ್ನ ಸುತ್ತ ಇರುವವರ ಮೇಲೆ ಅವಳು ಬೀರುತ್ತಿದ್ದ ಪ್ರಭಾವ ಎಲ್ಲವೂ ಏನೋ ಒಂದು ಅಲೌಕಿಕತೆಯನ್ನು ರನ್ನನ ಎದೆಯಲ್ಲಿ ಉಂಟುಮಾಡುತ್ತಿದ್ದವು. ಅವಳನ್ನೇ ಸ್ತುತಿಸುವ ಕೆಲವು ಪದ್ಯಗಳು ತಲೆಯಲ್ಲಿ ಹೊಳೆದು, ಎದೆಯಲ್ಲಿ ರೂಪುಗೊಂಡು, ಬಾಯಲ್ಲಿ ದ್ವನಿಪಡೆದುಕೊಳ್ಳುತ್ತಿದ್ದವು. ಮತ್ತೊಮ್ಮೆ ಬೇಟಿಯಾಗಿದ್ದಾಗ, ‘ನಿಮ್ಮ ಬರವಣಿಗೆ ಸುಸೂತ್ರವಾಗಿ ನಡೆಯುತ್ತಿದೆಯೆ’ ಎಂದು ಅತ್ತಿಮಬ್ಬೆ ಕೇಳಿದ್ದಳು. ರನ್ನನೂ ಹೌದೆಂದು ಉತ್ತರಿಸಿದ್ದ. ಆಗ ಅತ್ತಿಮಬ್ಬೆಯು ‘ನೋಡಿ ಈ ದಕ್ಷಿಣ ದೇಶದಲ್ಲಿ ಗಂಗರಾಜ, ಚಾಮುಂಡರಾಯ ಮೊದಲಾದವರ ಆಸಕ್ತಿ ಪ್ರೋತ್ಸಾಹ ಇವುಗಳಿಂದಾಗಿ ಜೈನಧರ್ಮ ಸುಸ್ಥಿರವಾಗಿದೆ. ಬೆಳಗೊಳದ ಈ ಉನ್ನತ ಪರ್ವತದ ಮೇಲೆ ಬಾಹುಬಲಿಯೂ ಸ್ಥಿರನಾಗಿದ್ದಾನೆ. ಆದರೆ ನಮ್ಮ ಕಡೆ ಇದುವರೆಗೂ ನಡೆಯುತ್ತಿದ್ದ ರಾಜಕೀಯ ಮೇಲಾಟದಿಂದಾಗಿ ಒಂದು ರೀತಿಯ ಮಂಕು ಕವಿದು ಬಿಟ್ಟಿದೆ. ಯಾವುದೇ ಧಾರ್ಮಿಕ ಚಟುವಟಿಕೆಗಳೂ ಕ್ರಿಯಾಶೀಲವಾಗಿಲ್ಲ. ಆದರೆ ಈಗ ತೈಲಪನ ಆಡಳಿತ ನಿಧಾನವಾಗಿ ತಳೂರುತ್ತಿದೆ. ಎಲ್ಲ ಕ್ಷೇತ್ರಗಳೂ ಕ್ರಿಯಾಶೀಲವಾಗಬೇಕೆಂದು ತೈಲಪರು ಬಯಸುತ್ತಿದ್ದಾರೆ. ಅತ್ತ ವೆಂಗಿಯ ಕಡೆ ನಮ್ಮವರೇ ಆದ ಪಂಪ. ಇತ್ತ ಪೊನ್ನ ಮಹಾಕವಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದಾರೆ. ಜಿನಧರ್ಮವೂ ಕ್ರಿಯಾಶೀಲವಾಗುತ್ತಿದೆ. ನೀವು ಅತ್ತಕಡೆ ಬಂದುಬಿಡಿ. ತೈಲಪರೂ ಕವಿಜನಾಶ್ರಿತರಾಗಿದ್ದಾರೆ. ಚಕ್ರವರ್ತಿಯ ಆಶ್ರಯ ದೊರೆತರೆ ನಿಮ್ಮ ಬರವಣಿಗೆ ಇನ್ನೂ ಹೆಚ್ಚು ಹಚ್ಚು ಕ್ರಿಯಾಶಿಲವಾಗಿ ಮುಂದುವರೆದೀತು’ ಎಂದು ದೀರ್ಘವಾಗಿ ಮಾತನಾಡಿದ್ದರು. ಆದರೆ ರನ್ನನಿಗೆ ಏನು ಮಾತನಾಡಬೇಕೆಂದು ತಿಳಿಯಲಿಲ್ಲ. ಸ್ವತಃ ರನ್ನನಿಗೆ ಚಕ್ರವರ್ತಿಯ ಆಶ್ರಯ ಪಡೆದು ಮಹಾಕವಿಯಾಗುವ ಹಂಬಲವಿತ್ತಾದರೂ ತನಗೆ ಆಶ್ರಯವಿತ್ತಿರುವ ಗೆಳೆಯ ಚಾಮುಂಡರಾಯನನ್ನು ಬಿಟ್ಟು ಹೋಗುವ ವಿಚಾರ ಮನಸ್ಸಿಗೆ ನೋವುಂಟುಮಾಡುತ್ತಿತ್ತು. ರನ್ನನ ಮನಸ್ಸನ್ನು ಅರಿತವಳಂತೆ ಅತ್ತಿಮಬ್ಬೆ ‘ಮಹಾಕವಿಗಳು ಆತಂಕಪಡಬೇಕಾಗಿಲ್ಲ. ನಿಮಗೆ ಇಲ್ಲಿ ಒಗ್ಗಿಹೋಗಿದೆ. ಹೊಸ ಸ್ಥಳ ಹೇಗೋ ಏನೋ ಎನ್ನುವ ಭಯವಿದೆ. ಅಲ್ಲವೆ? ನಿಮಗೆ ಆ ಯಾವ ಯೋಚನೆಯೂ ಬೇಡ. ಸ್ವತಃ ನಾವೇ ಚಾಮುಂಡರಾಯರಲ್ಲಿ ಮಾತನಾಡುತ್ತೇವೆ. ನೀವು ಕವಿಚಕ್ರವರ್ತಿಯಾಗುವ ಅವಕಾಶವನ್ನು ಅವರು ಹಾಳುಗೆಡುವವರಲ್ಲ. ಆ ನಂಬಿಕೆ ನಮಗಿದೆ’ ಎಂದು ಸಮಾಧಾನಪಡಿಸಿದ್ದಳು.
ಮತ್ತೊಂದು ದಿನ ಅತ್ತಿಮಬ್ಬೆಯಿಂದ ರನ್ನನಿಗೆ ಕರೆಬಂದಾಗ ಸಂತೋಷದಿಂದ, ಆತಂಕದಿಂದ ಕೂಡಿದವನಾಗಿಯೇ ಬಂದ. ಅಲ್ಲಿ ಅತ್ತಿಮಬ್ಬೆಯ ಚಾಮುಂಡರಾಯ ಇನ್ನೂ ಕೆಲವರು ಇದ್ದುರಿಂದ ರನ್ನನಿಗೆ ಸಂದರ್ಭದ ಗಂಭೀರತೆಯ ಅರಿವುಂಟಾಯಿತು. ಸ್ವತಃ ರಾಯನೇ ರನ್ನನನ್ನು ಬರಮಾಡಿಕೊಂಡು ‘ತಾಯಿಯವರು ಎಲ್ಲವನ್ನೂ ಹೇಳಿದರು. ನೀನು ನನ್ನ ಮಿತ್ರ. ನಿನ್ನ ಶ್ರೇಯಸ್ಸನ್ನು ಬಯಸುವವನು ನಾನು. ನೀನಿನ್ನು ಯುವಕ. ಬೆಳೆಯಬೇಕಾದವನು. ತಾಯಿಯವರ ಇಚ್ಛೆಯಂತೆ ನೀನು ತೈಲಪನ ಆಶ್ರಯಕ್ಕೆ ಹೋಗುವುದು. ನಣಿ ಕವಿರತ್ನ! ಚಕ್ರವರ್ತಿಯಲ್ಲಿರಬೇಕಾದ ರತ್ನ! ಕವಿಚಕ್ರವರ್ತಿಯಾಗಬೇಕಾದ ರತ್ನ! ಅದು ಈಡೇರಬೇಕಾದರೆ ನೀನು ತೈಲಪರ ಆಶ್ರಯಕ್ಕೆ ಬರಬೇಕಾದ್ದೇ ನ್ಯಾಯ’ ಎಂದು ಸಂಭ್ರಮಪಟ್ಟನು.
ಅತ್ತಿಮಬ್ಬೆಯು ಹೊರಡುವ ದಿನಗಳು ಹತ್ತಿರವಾಗುತ್ತಿದ್ದವು. ರನ್ನನಿಗೆ ತಾನು ಬೆಳಗೊಳವನ್ನು, ಚಾಮುಂಡರಾಯನನ್ನು ಬಿಟ್ಟುಹೋಗಬೇಕಾದ ವ್ಯಥೆ ಕಾಡುತ್ತಿತ್ತು. ಅದನ್ನು ದೂರಮಾಡಲೆಂದೇ ಚಾಮುಂಡರಾಯ ಒಂದು ದಿನ ಸಂಜೆ ಆತನನ್ನು ಚಂದ್ರಗಿರಿಗೆ ಕರೆದುಕೊಂಡು ಹೋಗಿ ದಿನವಿಡೀ ಆತನೊಂದಿಗೆ ಮಾತನಾಡುತ್ತಾ ಕಳೆದ. ಇಬ್ಬರೂ ಸೇರಿ, ಎದುರುಬದರಾಗಿ ಕುಳಿತುಕೊಂಡರು. ತಮ್ಮ ಸ್ನೇಹದ ಗುರುತನ್ನು ಈ ಬೆಟ್ಟದ ಮೇಲೆ ನಿಲ್ಲಿಸಬೇಕೆಂದು ತೀರ್ಮಾನಿಸಿ, ಚಾಮುಂಡರಾಯನ ಹೆಸರನ್ನು ರನ್ನನು, ರನ್ನ ಹೆಸರನ್ನು ಚಾಮುಂಡರಾಯನು ಬಂಡೆಯ ಮೇಲೆ ಉಳಿಯಿಂದ ಕೆತ್ತಿ ಸಂಭ್ರಮಿಸಿದರು. ನಾಳೆಯೇ ಊರಿಗೆ ಹೊರಡುತ್ತಿರುವ ಗೆಳೆಯನಿಗೆ ಚಾಮುಂಡರಾಯ ಬೆಟ್ಟದ ತುದಿಯಲ್ಲಿ ನಿಂತು ಶುಭಕೋರಿದ. ಮರುದಿನ ಶುಭಗಳಿಗೆಯಲ್ಲಿ ಅತ್ತಿಮಬ್ಬೆ ಮತ್ತು ಸಂಗಡಿಗರನ್ನು ರನ್ನನೊಂದಿಗೆ ಬೀಳ್ಕೊಟ್ಟ.
ಸುದೀರ್ಘ ಪಯಣವಾದರೂ ರನ್ನನಿಗೆ ಬೇಸರವಾಗಲಿಲ್ಲ. ಜೊತೆಯಲ್ಲಿ ಅತ್ತಿಮಬ್ಬೆ ಜೈನಧರ್ಮದ ತತ್ವಗಳನ್ನು, ಆಚಾರ್ಯಪುರುಷರ ಬಗೆಗಿನ ಕಥಗೆಳನ್ನು ಹೇಳುತ್ತಾ ನಡೆಯುತ್ತಿದ್ದಳು. ಹೀಗೆ ದಾರಿ ಸಾಗುವಾಗಲೇ ರನ್ನನ ತಲೆಯಲ್ಲಿ ಮಹಾಕಾವ್ಯವೊಂದರ ರೂಪುರೇಷೆಗಳು ಸಿದ್ಧಗೊಳ್ಳುತ್ತಿದ್ದವು. ಗುರು ಅಜಿತಸೇನಾಚಾರ್ಯರು ನೆನಪಿಗೆ ಬರುತ್ತಿದ್ದರು. ಪಂಪನ ಆದಿಪುರಾಣ ಕಣ್ಣಮುಂದೆ ಬರುತ್ತಿತ್ತು. ತಾನೂ ಒಬ್ಬ ತೀರ್ಥಂಕರನ ಚರಿತ್ರೆಯನ್ನು ಆಧರಿಸಿದ ಮಹಾಕಾವ್ಯವೊಂದನ್ನು ರಚಿಸುವ ಬಗ್ಗೆ ಯೋಚಿಸುತ್ತಿದ್ದ. ಸ್ವತಃ ಅತ್ತಿಮಬ್ಬೆಯೇ ಆ ಕಾವ್ಯಕ್ಕೆ ಸ್ಫೂರ್ತಿಯಾಗಿದ್ದಳು.

ಒಂದುದಿನ ಅತ್ತಿಮಬ್ಬೆಯ ನೇತೃತ್ವದಲ್ಲಿ ತೈಲಪ ಚಕ್ರವರ್ತಿಯ ಬೇಟಿಯಾಯಿತು. ತೈಲಪನು ಪರಮಸಂತೋಷದಿಂದಲೇ ರನ್ನನಿಗೆ ಸ್ವಾಗತ ಬಯಸಿದ. ಯಾವ ತೊಂದರೆಯೂ ಇಲ್ಲದೆ ರನ್ನನಿಗೆ ರಾಜಾಶ್ರಯ ದೊರೆಯಿತು. ಚಕ್ರವರ್ತಿಯ ಸೌಜನ್ಯ, ಕವಿಜನಪ್ರೀತಿ, ಅತ್ತಿಮಬ್ಬೆಯ ಬೆಗಗಿನ ಗೌರವ ಇವೆಲ್ಲವೂ ರನ್ನನಲ್ಲಿ ತೈಲಪನ ಬಗ್ಗೆ ಅಭಿಮಾನ ಮೂಡಿಸುವಲ್ಲಿ ಯಶಸ್ವಿಯಾಗಿದ್ದವು. ಕೆಲವೇ ದಿನಗಳಲ್ಲಿ ‘ಅಜಿನಾಥಪುರಾಣ’ ಎಂಬ ಮಹಾಕಾವ್ಯದ ರಚನೆಗೆ ರನ್ನ ಕೈಹಾಕಿದ. ಯಾವುದೇ ಆತಂಕವಿಲ್ಲದ ರಾಜಾಶ್ರಯ, ರಾಜನ ಸ್ನೇಹ-ಪ್ರೀತಿ, ಅತ್ತಿಮಬ್ಬೆಯ ಮಾತೃವಾತ್ಸಲ್ಯ, ಮನೆಯಲ್ಲಿ ತನ್ನಿಚ್ಛೆಯನರಿತು ನಡೆಯುವ ‘ದೇಶಭಕ್ತಿ ಪತಿಭಕ್ತಿಗಳೇ ಆಭರಣಗಳಾಗಿ ಧರ್ಮದಲ್ಲಿ ನಿಷ್ಠೆಯುಳ್ಳವರಾದ ಶಾಂತಿ ಮತ್ತು ಜಕ್ಕಿ ಎಂಬ ಇಬ್ಬರು ಪತ್ನಿಯರು, ರಾಯ ಮತ್ತು ಅತ್ತಿಮಬ್ಬೆ (ಚಾಮುಂಡರಾಯನ ನೆನಪಿಗಾಗಿ ಮಗನಿಗೆ ರಾಯ ಎಂದೂ, ಅತ್ತಿಮಬ್ಬೆಯ ನೆನಪಿಗಾಗಿ ಮಗಳಿಗೆ ಅತ್ತಿಮಬ್ಬೆ ಎಂದೂ ಹೆಸರಿನ್ನಿಟ್ಟಿದ್ದನು) ಎಂಬ ಮುದ್ದಾದ ಮಕ್ಕಳು ಇವರೆಲ್ಲರ ನಡುವೆ ರನ್ನನ ಕಾವ್ಯರಚನೆ ಯಾವುದೇ ಆತಂಕವಿಲ್ಲದೆ ನಡೆದು ದಡ ಮುಟ್ಟಿತು. ಒಂದು ಶುಭದಿನ ರಾಜಸಭೆಯಲ್ಲಿ ಲೋಕಾರ್ಪಣವೂ ಆಯಿತು.
ಕೆಲವೇ ದಿನಗಳಲ್ಲಿ ಅದರ ಪ್ರತಿಗಳನ್ನು ಮಾಡಿಸಿ ಎಲ್ಲಡೆ ಹಂಚಲಾಯಿತು. ಕಾವ್ಯ ಜನಪ್ರಿಯವೂ ಆಯಿತು. ರನ್ನನಂತಹ ಮಹಾಕವಿಯು ನನ್ನ ಆಸ್ಥಾನದಲ್ಲಿರುವುದು ನನಗೆ ಹೆಮ್ಮೆಯೆಂದು ಭಾವಿಸಿದ ತೈಲಪ ರನ್ನನಿಗೆ ‘ಕವಿಚಕ್ರವರ್ತಿ’ ಎಂಬ ಬಿರುದನ್ನು ದಯಪಾಲಿಸಿ ಸನ್ಮಾನಿಸಿದನು. ತನ್ನ ಕಾವ್ಯಕ್ಕೆ ದೊರೆತ ಜನಮನ್ನಣೆ, ಅದರ ರಚನೆಗೆ ದೊರೆತ ತೈಲಪನ ಸಹಕಾರ, ಪ್ರೋತ್ಸಾಹ ನಂತರ ತೈಲಪನ ಔದಾರ್ಯ ಇವೆಲ್ಲವೂ ರನ್ನನ ಮನಸ್ಸಿನಲ್ಲಿ ನೆಲೆಯೂರಿದ್ದವು. ತೈಲಪ ಮಹಾಚಕ್ರವರ್ತಿಯಾಗಿ, ಮಹಾಪುರುಷನಾಗಿ ಕಂಡಿದ್ದ. ಒಂದು ಮಾಹಕೃತಿ ಭುವನದ ಭಾಗ್ಯದಿಂದಾಗಿ ಒಬ್ಬ ಕವಿಯಿಂದ ಜನ್ಮ ತಾಳುತ್ತದೆ. ಅದು ಮಹಾಘಟನೆ. ಅಂತಹ ಮಹಾಘಟನೆ ಸಂಭವಿಸುವುದಕ್ಕೆ ತೈಲಪನಂತಹ ಸಾಹಿತ್ಯಪ್ರಿಯ, ಕವಿಜನಪ್ರಿಯ ಚಕ್ರವರ್ತಿಗಳ ಕೊಡುಗೆ ಅನನ್ಯ. ತೈಲಪನ ಮಗನಾದ ಸತ್ಯಾಶ್ರಯನೂ ಅಷ್ಟೆ, ರನ್ನನಲ್ಲಿ ಗೌರವ ಪ್ರೀತಿಯುಳ್ಳವನಾಗಿದ್ದನು. ತೈಲಪ ತನಗೆ ಮಾಡಿದ ಸಹಾಯಕ್ಕಾಗಿ ರನ್ನ ತೈಲಪನ ಹೆಸರಿನಲ್ಲಿ ‘ಚಕ್ರೇಶ್ವರ ಚರಿತ್ರೆ’ ಪ್ರಶಸ್ತಿಕಾವ್ಯವನ್ನೂ ಬರೆದು ಪ್ರಸ್ತುತ ಪಡಿಸಿದ.
ಹೀಗೆ ತನ್ನ ಸಾಹಿತ್ಯಿಕ ಹಾಗೂ ಸಾಂಸಾರಿಕ ಜೀವನವನ್ನು ಯಶಸ್ವಿಯಾಗಿ ಕಳೆಯುತ್ತಿದ್ದ ರನ್ನನಿಗೆ, ಚಾಲುಕ್ಯ ಚಕ್ರವರ್ತಿಗಳ ಇತಿಹಾಸವೂ ಆಸಕ್ತಿದಾಯಕ ವಿಷಯವಾಗಿ ಕಂಡಿತು. ಬದಾಮಿಯಲ್ಲಿ ಪ್ರಾರಂಭವಾಗಿ, ರಾಷ್ಟ್ರಕೂಟರಿಂದ ಹಿನ್ನಲೆಗೆ ಸರಿದು, ಮತ್ತೆ ಕಲ್ಯಾಣದಲ್ಲಿ ತೈಲಪನ ಮುಖೇನ ಪುನರುತ್ತಾನಗೊಂಡಿತ್ತು ಚಾಲುಕ್ಯ ವಂಶ. ತೈಲಪನ ಮಗ ಸತ್ಯಾಶ್ರಯ ಇರಿವೆಬೆಡಂಗನೆಂದೆ ಖ್ಯಾತಿವೆತ್ತು ತನ್ನ ತಂದೆಯ ನಂತರ ಚಕ್ರವರ್ತಿಯಾಗಿದ್ದ. ತಂದೆಗೆ ತಕ್ಕ ಮಗನಾಗಿದ್ದ, ತಾನೂ ಕವಿಜನಪ್ರಿಯನಾಗಿದ್ದ. ಸಾಹಸಪ್ರಿಯನೂ ಆಗಿದ್ದ. ಹಲವಾರು ಯುದ್ಧಗಳಲ್ಲಿ ಭಾಗವಹಿಸಿ ತನ್ನ ರಾಜ್ಯವನ್ನು ವಿಸ್ತರಿಸಿ ಬಲಪಡಿಸಿದ್ದ. ರನ್ನನಲ್ಲಿ ಮೊದಲಿನಂತೆ ಗೌರವವಾಗಿ ನಡೆದುಕೊಳ್ಳುತ್ತಿದ್ದ. ಆ ಸಂದರ್ಭದಲ್ಲಿ ರನ್ನನಿಗೆ ಸತ್ಯಾಶ್ರಯನನ್ನು ನಾಯಕನನ್ನಾಗಿ ಮಾಡಿಕೊಂಡು ಕಾವ್ಯವೊಂದನ್ನು ಬರೆಯುವ ಆಸೆ ಮೊಳಕೆಯೊಡೆಯಿತು. ಪೂರ್ವದಲ್ಲಿ ಪಂಪನ ವಿಕ್ರಮಾರ್ಜುನ ವಿಜಯ ಮತ್ತು ಪೊನ್ನನ ಭವನೈಕರಾಮಾಭ್ಯುದಯ ಕಾವ್ಯಗಳು ಆ ನಿಟ್ಟಿನಲ್ಲಿ ಯಶಸ್ವಿಯಾಗಿದ್ದವು. ಅದರಂತೆ ರನ್ನನೂ ತನ್ನ ಆಶ್ರಯದಾತನ ಮಗನೂ, ಸ್ವತಃ ಆಶ್ರಯದಾತನೂ ಆದ ಸತ್ಯಾಶ್ರಯನನ್ನು ಮಹಾಭಾರತದ ಸಾಹಸಭೀಮನಿಗೆ ಹೋಲಿಸಿ, ಸಾಹಸಭೀಮವಿಜಯ ಎಂಬ ಮಹಾಕಾವ್ಯದ ರಚನೆಗೆ ಕೈಹಾಕಿದ. ಆದರೆ ಸಂಪ್ರದಾಯವನ್ನು ಮುರಿದು ತನ್ನದೇ ಆದ ಕಾವ್ಯಶೈಲಿಯನ್ನು ರನ್ನ ರೂಢಿಸಿಕೊಂಡಿದ್ದ. ಆಗಲೂ ಪಂಪನ ವಿಕ್ರಮಾರ್ಜುನ ವಿಜಯ ಮಹಾಕಾವ್ಯ ಜನಪ್ರಿಯತೆಯ ತುಟ್ಟತುದಿಯಲ್ಲಿತ್ತು. ಕೇವಲ ನಾಯಕ ಅರ್ಜುನನ ಬದಲು ಭೀಮ ಎಂದಾದರೂ, ಒಟ್ಟು ಕಥೆ ಮಹಾಭಾರತವೇ ಆಗುತ್ತಿತ್ತು. ಪಂಪನ ಭಾರತ ಜನಪ್ರಿಯತೆಯ ತುಟ್ಟತುದಿಯಲ್ಲಿದ್ದಾಗ ತಾನೂ ಅದನ್ನೆ ಮರುಸೃಷ್ಟಿ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ ಎಂಬುದನ್ನು ಮನಗಂಡಿದ್ದ ರನ್ನ ಸಂಕ್ಷಿಪ್ತವೂ ನವ್ಯವೂ ಆದ ಶೈಲಿಯನ್ನು ಮೈಗೂಡಿಸಿಕೊಂಡು ಸಿಂಹಾವಲೋಕನ ಕ್ರಮದಲ್ಲಿ ‘ಸಾಹಸಭೀಮವಿಜಯ’ವನ್ನು ಬರೆದು ಮುಗಿಸಿದ. ಇಡೀ ಸಾರಸ್ವತ ಲೋಕವೇ ಕವಿಚಕ್ರವರ್ತಿಯಾದ ರನ್ನನ ಈ ಕೃತಿಯನ್ನು ಸಂಭ್ರಮದಿಂದ ಸ್ವಾಗತಿಸಿತು. ಆತನ ‘ಸಾಹಸಭೀಮವಿಜಯ’ ಗದಾಯುದ್ಧ’ ಎಂಬ ಹೆಸರಿನಲ್ಲಿ ಚಿರನೂತನವಾಗಿ ಇಂದಿಗೂ ಕಾವ್ಯಾಸಕ್ತರನ್ನು ಆಕರ್ಷಿಸುತ್ತಾ ಕೆರಳಿಸುತ್ತಾ ಉಳಿದುಬಂದಿದೆ. ತನ್ಮೂಲಕ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಚಾಲುಕ್ಯ ಸತ್ಯಾಶ್ರಯನ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದ್ದಾನೆ. ಚಾಲುಕ್ಯಸಿಂಹಾಸನವನ್ನು ಮರುಸ್ಥಾಪಿಸಿ ಚಕ್ರವರ್ತಿಯೂ ಆಗಿದ್ದ ತೈಲಪನ ಮಗನಾಗಿದ್ದರೂ ಹನ್ನೊಂದು ವರ್ಷಗಳ ಕಾಲ ಚಕ್ರವರ್ತಿಯಾಗಿದ್ದರೂ, ಹತ್ತಾರು ಯುದ್ಧಗಳಲ್ಲಿ ಸಾಹಸ ಮೆರೆದಿದ್ದರೂ ಸತ್ಯಾಶ್ರಯ ನಮಗೆ ನೆನಪಾಗುವುದು ರನ್ನನ ಸಾಹಸಭೀಮವಿಜಯದ ಮೂಲಕವೇ!
ಅಂದಿನ ಕಾಲಕ್ಕೆ ಸಾಮಾಜಿಕವಾಗಿ ಕೆಳಸ್ತರದಲ್ಲಿದ್ದ ಬಳೆಗಾರ ವೃತ್ತಿಯ ಕುಟುಂಬದಲ್ಲಿ ಹುಟ್ಟಿ, ತನಗಿದ್ದ ಆರ್ಥಿಕ ಮತ್ತು ಸಾಮಾಜಿಕ ಅಡೆತಡೆಗಳನ್ನು ಯಶಸ್ವಿಯಾಗಿ ದಾಟಿ, ಸ್ವಪ್ರಯತ್ನದಿಂದ ಪ್ರಕಾಶಿತನಾಗಿ, ಕನ್ನಡ ಜನತೆಯ ಪ್ರೀತಿಯ ಮಗನಾಗಿ ಬೆಳೆದ ರನ್ನಮಯ್ಯ, ಮಹಾಕವಿಯಾಗಿ, ಕವಿಚಕ್ರವರ್ತಿಯಾಗಿ, ಕವಿರತ್ನನಾಗಿ, ಕವಿಮುಖಚಂದ್ರನಾಗಿ ನೂರುವರ್ಷಗಳ ತುಂಬು ಜೀವನ ನಡೆಸಿ ಅಸ್ತಂಗತನಾಗಿದ್ದಾನೆ. ಕವಿರಾಜಶೇಖರ, ಕವಿಜನಚೂಡಾರತ್ನ, ಕವಿಚತುರ್ಮುಖ, ಉಭಯಕವಿ ಮೊದಲಾದ ಬಿರುದುಗಳನ್ನು ಧರಿಸಿ, ಕನ್ನಡ ಕಾವ್ಯಲೋಕದಲ್ಲಿ ಅಮರನಾಗಿದ್ದಾನೆ. ಹಲವಾರು ಕವಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾನೆ.
ಈ ಕಾರಣಕ್ಕಾಗಿಯೇ ರನ್ನ ನನಗಿಷ್ಟ. ನಿಮಗೆ?
 

‍ಲೇಖಕರು avadhi

25 July, 2013

3 Comments

  1. ಜಿ.ಎನ್ ನಾಗರಾಜ್

    ‘ ಪುಟ್ಟಂ ಸಟ್ಟುಗಮಂ ಕೊಂಡಟ್ಟಾಯಿಸಿ ಬೋನಮಿಟ್ಟು ಬಂದೆಯಾ ‘ಕಂಡ ಕಥೆಯೇನೋ ಎಂಬಂತೆ ಬರೆದಿದ್ದೀರಿ. ಆದರೆ ಆ ಕಾಲದ ಕಾವ್ಯಗಳ ಬಗ್ಗೆ ಅವಿಮರ್ಶಾತ್ಮಕವಾದ ಆರಾಧನಾಪೂರ್ವಕ ಶೈಲಿಯೊಂದನ್ನು ಕನ್ನಡ ಸಾಹಿತ್ಯ ಬೋಧನೆಯಲ್ಲಿ ಬೆಳೆಸಲಾಗಿದೆ. ರನ್ನ ಚಾವುಂಡರಾಯ, ತೈಲಪ ಎಲ್ಲರೂ ಉದಾತ್ತ ಗುಣದ ಅಪರಂಜಿಗಳೇ ಎಂಬಂತೆ. ಆ ಕಾಲದ ಸಾಹಿತ್ಯವನ್ನು ಆಸ್ಥೆಯಿಂದ ಅಧ್ಯಯನ ಮಾಡಬೇಕು ನಿಜ. ಅದೇ ಸಮಯದಲ್ಲಿ ವಿಮರ್ಶಾತ್ಮಕ ದೃಷ್ಠಿಯಿಂದ, ವಿವಿಧ ಮಗ್ಗಲುಗಳಿಂದ. ಬಡತನದ ಕಷ್ಟಗಳ, ಜಾತಿಯ ಮಿತಿಗಳನ್ನು ಮೀರಿದ್ದು ಒಂದು ಮುಖ್ಯ ಆಯಾಮ. ಉಳಿದನೇಕವು ? ರನ್ನ, ಅತ್ತಿಮಬ್ಬೆ ಸರಿ ,ಆದರೆ ತೈಲಪ ? ಚಾವುಂಡರಾಯ ?

    • ಕಟ್ಟಿಮನಿ

      ಸಾಹಿತ್ಯ ಕೃತಿಗಳನ್ನೂ ಇತಿಹಾಸ ಎಂದು ತಿಳಿದರೆ ಹೀಗೆ ಆಗುತ್ತದೆ. ಸಾಹಿತ್ಯದಲ್ಲಿ ಬರುವ ಚಾವುಂಡರಾಯ, ತೈಲಪ ಎಲ್ಲರೂ ಉದಾತ್ತ ಗುಣದ ಅಪರಂಜಿಗಳೇ. what is the problem with it? ಇತಿಹಾಸ ಬೇರೆ ಸಾಹಿತ್ಯ ಬೇರೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading