ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ರಣ್ ಉತ್ಸವ ಮತ್ತು ನಾವಿಬ್ಬರು’ – ನಾನು ಪಾಕಿಸ್ತಾನದ ಮರಗಳನ್ನು ನೋಡಿದೆ

(ಇಲ್ಲಿಯವರೆಗೆ)

ಮರುದಿನ ಭಾರತ-ಪಾಕಿಸ್ತಾನ ಗಡಿ ಸಂದರ್ಶಿಸುವುದೊಂದೇ ಆ ದಿನದ ಕಾರ್ಯಕ್ರಮ. ಬೆಳಿಗ್ಗೆ ಬೇಗ ಎದ್ದು ಹಿಂದಿನ ಸಂಜೆ ಕಳೆದು ಹೋಗಿದ್ದ ಸೂರ್ಯನಿಗಾಗಿ ಕಾತರದಿಂದ ಕಾಯುತ್ತಿದ್ದೆ. ಜೊತೆಗೆ ತಣ್ಣನೆ ಚಳಿ, ಬೆಚ್ಚನೆ ಚಹಾ. ಚಂದ್ರನಿಗಿನ್ನೂ ಮುಗಿಲು ಬಿಟ್ಟು ಹೋಗುವ ಇರಾದೆ ಇದ್ದಂತಿರಲಿಲ್ಲ. ಸೂರ್ಯ-ಚಂದ್ರರನ್ನು ಒಟ್ಟೊಟ್ಟಿಗೆ ಕಣ್ತುಂಬಿಕೊಂಡು ಲಗು-ಬಗೆಯಿಂದ ಭಾರತ-ಪಾಕಿಸ್ತಾನ ಗಡಿಗೆ ಹೋಗುವ ಬಸ್ ಪ್ರಯಾಣಕ್ಕೆ ಅಣಿಯಾಗಿದ್ದು.

ಬೆಳಗಿನ ಉಪಹಾರ ಮುಗಿಸಿ ಬಸ್ ಏರಿದರೆ ಮತ್ತೆ ಮರಳುವುದು ರಾತ್ರಿ ೭ ರ ಹೊತ್ತಿಗೆ. ಭಾರತ-ಪಾಕಿಸ್ತಾನ ಗಡಿಗೆ ಭೇಟಿ ನೀಡಿ ವಾಪಸ್ ಬರುವಾಗ ‘ಕಾಲಾ ಡುಂಗರ್’ ಅನ್ನೂ ವೀಕ್ಷಿಸಿ ಬರುವುದು ಅಂದಿನ ಕಾರ್ಯಕ್ರಮದ ಒಂದು ಭಾಗ. ರಣ್ ಉತ್ಸವ್ ಇರುವ ಸ್ಥಳದಿಂದ ಭಾರತ-ಪಾಕಿಸ್ತಾನ ಗಡಿ ಸುಮಾರು ೮೦ ಕಿ.ಮೀ. ದೂರ. ಮಾರ್ಗ ಮಧ್ಯದಲ್ಲಿ ಮೂರು ಚೆಕ್-ಪೋಸ್ಟ್ಗಳು. ಕಚ್ ಪ್ರಾಂತ್ಯದಲ್ಲಿ ಖಂಡಿತಾ ಮನಸಿಗಿಳಿಯುವ ಒಂದು ಅಂಶವೆಂದರೆ ಅದರ ವೈಶಾಲ್ಯ ಮತ್ತು ನಮ್ಮ ಗೌಣ್ಯತೆ. ಮಾರ್ಗದುದ್ದಕ್ಕೂ  ಅದೇ ವಿಶಾಲ ಜವುಳು ಭೂಮಿ, ಯಾವುದೇ ಹೆಚ್ಚಿನ ಗಿಡ-ಗಂಟಿಗಳಿಲ್ಲದ, ಮೈಲಿಗಟ್ಟಲೆ ಹರಡಿರುವ ಬಂಜರೆನಿಸುವ ಪ್ರದೇಶ, ಸುಡು-ಬಿಸಿಲು. ನಂದನ್ ಗೆ ಬಸ್ ನಲ್ಲಿ ಸಂಗಾತಿಗಳಾಗಿ ಮೊಬೈಲ್ ಗೇಮ್ ಗಳು, ಮತ್ತೊಂದಿಷ್ಟು ಗೆಳೆಯರು. ನಮ್ಮ ಪಕ್ಕದ ಸೀಟ್ ನಲ್ಲಿ ೮-೧೦ ವರ್ಷದ ಶ್ಲೋಕ್ ಅವನ ಸೋದರತ್ತೆಯೊಡನೆ ಕುಳಿತು ನಂದನ್ ನೊಡನೆ ಆಟದಲ್ಲಿ ಜೊತೆಯಾಗಿದ್ದ. ಅವನ ಪಕ್ಕದಲ್ಲಿದ್ದ ಆ ಹುಡುಗಿ ಶ್ಲೋಕ್ ನ ಸೋದರತ್ತೆ ಅಂತ ನನಗೆ ತಿಳಿಯಲು ಗಂಟೆಗಳೇ ಬೇಕಾಯಿತು. ಹಾಗಿದ್ದಳು ಅವಳಲ್ಲಿನ ‘ಅಮ್ಮ’!

ಗಂಟೆಗಳ ಪ್ರಯಾಣದ ನಂತರ ನಾವು ತಲುಪಿದ್ದು ಭಾರತ-ಪಾಕಿಸ್ತಾನ ಗಡಿ. ಗಡಿ ಭದ್ರತಾ ಸೇನೆಯ ಸೈನಿಕನೊಬ್ಬ, ಆ ಗಡಿಯ ವಿವರಗಳು, ಅವರ ದಿನದ ಚಟುವಟಿಕೆಯ ವಿವರಗಳು, ಗಡಿ ಭದ್ರತಾ ಪಡೆಯ ಮಹತ್ವ ಎಲ್ಲವನ್ನೂ ಸರಳವಾಗಿ ವಿವರಿಸುತ್ತಿದ್ದರು. ಈ ಸಮಯದಲ್ಲಿ ನಂದನ್ ಅತಿಯಾದ ಚಟುವಟಿಕೆಗಳಲ್ಲಿ ತೊಡಗಿದ್ದುದರಿಂದ ನನ್ನ ಕಿವಿಯೊಂದು ಕಡೆ, ಕಣ್ಣು ಇನ್ನೊಂದು ಕಡೆ ಆಗಿತ್ತು. ನಂತರ ಸೈನಿಕರು ಬಳಸುವ ವಿಶೇಷ ಮಾದರಿಯ ಒಂದೆರಡು ಬಂದೂಕುಗಳನ್ನು ನೋಡಿ, ಕೈಯ್ಯಲ್ಲಿ ಹಿಡಿದುಕೊಂಡು, ಅವುಗಳ ವಿವರಗಳನ್ನೂ ತಿಳಿದುಕೊಂಡಾಯ್ತು. ನಂತರ ಆ ಗಡಿ ಪ್ರದೇಶದಲ್ಲೇ ನಮ್ಮ ಊಟ ಮುಗಿಸಿ, ನೋ ಮ್ಯಾನ್ಸ್ ಲ್ಯಾಂಡ್, ಗಡಿಯ ತುದಿಯಲ್ಲಿದ್ದ ಬೇಲಿ, ಗೇಟ್, ದೂರದಲ್ಲಿ ಕಾಣುತ್ತಿದ್ದ ಪಾಕಿಸ್ತಾನದ ಮರಗಳು (ಇದು ನಂದನ್ ಹೇಳಿದ್ದು – ನಾನು ಪಾಕಿಸ್ತಾನದ ಮರಗಳನ್ನು ನೋಡಿದೆ ಅಂತ :-)) ಎಲ್ಲವನ್ನೂ ಇನ್ನೊಮ್ಮೆ ಮನಸಾರೆ ವೀಕ್ಷಿಸಿ ಬಸ್ ಏರಿದರೆ, ಆ ಜೋರು ಬಿಸಿಲಿಗೆ ನನ್ನ ಕಣ್ಣು ಮುಚ್ಚಿದ್ದು ತಿಳಿದಿರಲೇ ಇಲ್ಲ. ಮತ್ತೆ ಎಚ್ಚರಾದದ್ದು ಕಾಲಾ ಡುಂಗರ್ ಬಳಿ  ಬಂದಾಗಲೇ. ಸಮಯವಾಗಲೇ ನಾಲ್ಕರ ಆಸು-ಪಾಸಿನಲ್ಲಿತ್ತು. ಬಿಸಿಲಿನ ತೀವ್ರತೆ ಇನ್ನೂ ಇಳಿದಿರಲಿಲ್ಲ. ನಿದ್ದೆಯ ಮಂಪರಿನಲ್ಲೇ ಏರಿಯೇರಿ ಹೋದಾಗ ಮೊದಲು ಕಂಡದ್ದು ದತ್ತಾತ್ರೇಯ ದೇವಸ್ಥಾನ. ಪರ್ವತ ಶ್ರೇಣಿಯ ಮಧ್ಯೆ ಇದ್ದುದರಿಂದ ಬಿಸಿಲಿದ್ದರೂ ತಣ್ಣನೆ ಗಾಳಿ ಸುಳಿದಾಡುತ್ತಿತ್ತು.

ಗುಡಿಯಲ್ಲಿ ದೇವರಿಗೆ ನಮಸ್ಕರಿಸಿ, ಪ್ರದಕ್ಷಿಣೆ ಹಾಕಿ ಹೊರಗೆ ಬಂದು ಕುಳಿತಾಗ ಕಣ್ಣ ಮುಂದೆಲ್ಲ ಕಂದು-ಕಂದೆನಿಸುವ ಪರ್ವತ ಪಂಕ್ತಿ. ನಿದ್ದೆಯ  ಗುಂಗು ಇನ್ನೂ ಪೂರ್ತಿ ಕಳೆದಿರಲಿಲ್ಲ ನನಗೆ. ಜೊತೆಗೆ ಸೋಕಿ ಹೋಗುವ ತಣ್ಣನೆ ಗಾಳಿ, ಎಷ್ಟೋ ಹೊತ್ತು ನಾನಲ್ಲೇ ಸುಮ್ಮನೇ ಕುಳಿತುಬಿಟ್ಟಿದ್ದೆ. ನಂತರ ಒಂಟೆ ಸವಾರಿಗೆಂದು ನಂದನ್ ಜೊತೆ ಒಂಟೆಯೇರಿ ಹೋದಾಗ ಅದು ನಮ್ಮನ್ನು ಕಾಲಾ ಡುಂಗರ್ ನ ವ್ಯೂ ಪಾಯಿಂಟ್ ಬಳಿ ತಂದಿಳಿಸಿತ್ತು. ಕೆಲವು ಮೆಟ್ಟಲುಗಳನ್ನು ಹತ್ತಿ-ಇಳಿದು ವ್ಯೂ ಪಾಯಿಂಟ್  ಬಳಿ ತಲುಪಿದಾಗ ಕಂಡದ್ದು ವೈಟ್ ರಣ್ ನ ಪಕ್ಷಿ ನೋಟ. ದೃಷ್ಟಿ ಸಾಗಿದಷ್ಟು ದೂರವೂ ಸಾಗರದ  ನೀರಿನ ಒಂದು ಪದರ ಮರಳುಪ್ಪನ್ನು ಆವರಿಸಿಕೊಂಡಂತೆ ಕಾಣುವ ನೋಟ. ಕೆಲ ನಿಮಿಷ ಆ ಪಕ್ಷಿನೋಟವನ್ನು ವೀಕ್ಷಿಸುವಷ್ಟರಲ್ಲೇ ಬಸ್ ಗೆ ಮರಳುವಂತೆ ಸೂಚನೆ ಬಂದಿತು ನಮಗೆ. ವಾಪಸ್ ಹೊರಟಾಗ ಮೆಟ್ಟಿಲುಗಳ ಪಕ್ಕ ಕಂಡದ್ದು ಕೆಲವು  ಫ಼್ಲೆಮಿಂಗೊ ಮತ್ತು ತೋಳಗಳ ಮೂರ್ತಿಗಳು.

ಕೆಲ ನಿಮಿಷಗಳ ಹಿಂದೆ ನಾನು ಕುಳಿತು ಎದ್ದು ಬಂದಿದ್ದ ದತ್ತಾತ್ರೇಯ ದೇವಸ್ಥಾನಕ್ಕೆ ೪೦೦ ವರ್ಷಗಳ ಇತಿಹಾಸವಂತೆ. ದಂತಕಥೆಯೊಂದರ ಪ್ರಕಾರ ಕಾಲೋ ಡುಂಗರ್ ನಲ್ಲಿ  ಹಸಿದು ಬಸವಳಿದಿದ್ದ ತೋಳಗಳಿಗೆ ದತ್ತಾತ್ರೇಯ ದೇವ ತನ್ನ ದೇಹದ ಭಾಗಗಳನ್ನೆ ಆಹಾರವಾಗಿ ನೀಡಿದ್ದನಂತೆ. ಹೀಗೆ ತನ್ನ ಅಂಗಾಂಗಳನ್ನು ಅವುಗಳಿಗೆ ಆಹಾರವಾಗಿ ನೀಡಿದಂತೆ ಅವು ಮತ್ತೆ-ಮತ್ತೆ ಬೆಳೆಯುತ್ತಿದ್ದವಂತೆ. ಇಂದಿಗೂ ಆರತಿಯ ನಂತರ ತೋಳಗಳಿಗೆ ಆಹಾರ ನೀಡುವುದು ಇಲ್ಲಿ ವಾಡಿಕೆಯಂತೆ. ಅದಲ್ಲದೇ ಫ಼್ಲೆಮಿಂಗೊಗಳು ಸಂತಾನೋತ್ಪತ್ತಿಗಾಗಿ ಹತ್ತಿರದ ಫ್ಲೆಮಿಂಗೊ ಸಿಟಿಯಲ್ಲಿ ಬಂದು ನೆಲೆಸುತ್ತವಂತೆ. ಹೀಗಾಗಿ ಮೆಟ್ಟಿಲ ಪಕ್ಕದಲ್ಲಿದ್ದ ಆ ಮೌನ ಮೂರ್ತಿಗಳು ತಮ್ಮ ಮಹತ್ವವನ್ನು ಮಾತಿಲ್ಲದೇ ಸಾರುತ್ತಿದ್ದವು.

ಸೂರ್ಯಾಸ್ತವನ್ನು ಭೂಮಿ-ಬಾನುಗಳೆರಡೂ ನೀಲಿಯಾಗಿರುವ ಅನಂತದ ತುದಿಯಲ್ಲಿ, ಕಾಲಾ ಡುಂಗರ್ನಲ್ಲಿ ವೀಕ್ಷಿಸಬಹುದು ಎಂಬ ನನ್ನ ನಿರೀಕ್ಷೆ  ಸುಳ್ಳಾಗಿತ್ತು. ಬಸ್ ಏರಿ ರಣ್ ತಲುಪುವ ಅನಿವಾರ್ಯವಿತ್ತು. ಆದರೇನಂತೆ ಸಂಜೆ ಸೂರ್ಯ ತನ್ನ ನಿತ್ಯದ ಅದೇ ಚೆಲುವಿನೊಂದಿಗೆ ಬಸ್ ಕಿಟಿಕಿಯಿಂದಲೇ ಬೀಳ್ಕೊಡುವ ಮುತ್ತನಿತ್ತಿದ್ದ. ಮನ, ಗಗನವೆಲ್ಲ ಕೆಂಪು-ಕೆಂಪು! ಮರಳಿ ಟೆಂಟ್ ಸಿಟಿ ತಲುಪಿದಾಗ, ಅಲ್ಲಿನ ಸ್ಥಳೀಯ ಕಲಾವಿದರಿಂದ, ರಂಗ ಸಜ್ಜಿಕೆಯಲ್ಲಿ ಮನರಂಜನಾ ಕಾರ್ಯಕ್ರಮಗಳು ಶುರುವಾಗಿದ್ದವು. ಹಿಂದಿನ ಸಂಜೆಯ ಅದೇ ಜಾನಪದ ಗಾಯಕನ ಮನಸೆಳೆಯುವ, ಆಳ ಧ್ವನಿ! ಕುಳಿತು ಅನಂದಿಸುವಷ್ಟು ಉತ್ಸಾಹ ಉಳಿದಿರಲಿಲ್ಲ, ಅಷ್ಟೊತ್ತಿಗೆ. ಬರೀ ಹಾಡಿಗೆ ಕಿವಿಯಾಗಿ ನಮ್ಮ ಟೆಂಟ್ ನ ಹಾದಿ ಹಿಡಿದೆವು.

ರಾತ್ರಿ ಊಟ ಮುಗಿಸಿ ಮತ್ತೆ ಟೆಂಟ್ ಗೆ ಮರಳುತ್ತಿದ್ದಂತೆ ನಂದನ್ ನಿದ್ದೆಗೆ ಜಾರಿದ. ನಂತರ ಆಲೋಚನೆಗಳು ಶುರುವಾದವು. ಮರುದಿನ ಅಲ್ಲಿಂದ ಹೊರಡಬೇಕು. ಬಿಟ್ಟು ಹೋಗದ ಮನಸು. ಯಾವಾಗಲೂ ಹಾಗೇ! 🙂 ಆದರೂ ಬ್ಯಾಗ್ ಗಳನ್ನೆಲ್ಲ ಮತ್ತೆ ಜೋಡಿಸಿಟ್ಟುಕೊಂಡು, ದುಡ್ಡು, ಟಿಕೆಟ್ಗಳು ಎಲ್ಲವನ್ನೂ ಮತ್ತೊಮ್ಮೆ ಪರಿಶೀಲಿಸಿಕೊಂಡು ಟೆಂಟ್ ನ ಹೊರಗಿರುವ ಆರಾಮ ಕುರ್ಚಿಯಲ್ಲಿ  ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದೆ.  ನಂತರ ಕೆಲ ಹಾಡುಗಳು, ಅವುಗಳ ಹಿಂದಿರುವ ಮೌನ, ರಾತ್ರಿಯ ಆಪ್ತತೆ, ಕಣ್ಣುಗಳು ತಾವೇ ತಾವಾಗಿ ಮುಚ್ಚತೊಡಗಿದವು. ನಿದ್ದೆ ಎಳೆಯಲು ಶುರುವಿಟ್ಟ ಮೇಲೆ ಟೆಂಟ್ ಒಳ ಹೊಕ್ಕು, ಬಾಗಿಲು  ಭದ್ರ  ಪಡಿಸಿ, ಇನ್ನೇನು ನಿದ್ದೆಗೆ ಜಾರಬೇಕು… ‘ಈಗಲೇ ಎದ್ದು ವೈಟ್ ರಣ್ ನ ಬೆಳದಿಂಗಳ ಚೆಲುವಲ್ಲಿ ಇನ್ನೊಮ್ಮೆ  ಸುತ್ತಾಡಿ ಬಂದುಬಿಡಲೇ?’ ಎಂಬ ಆಲೋಚನೆ ಒಂದು ಕ್ಷಣ ತುಂಬಾ ಗಾಢವಾಗಿ ಆವರಿಸಿತು. ಕಂಗಳು ನಕ್ಕು ಮೆಲ್ಲನೆ ಮುಚ್ಚಿಕೊಂಡವು!

(ಮುಂದುವರಿಯುವುದು…)

‍ಲೇಖಕರು avadhi

2 April, 2014

ನಿಮಗೆ ಇವೂ ಇಷ್ಟವಾಗಬಹುದು…

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಸನ್ನಿಧಿಯಲ್ಲಿ

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಮತ್ತೆ ಮತ್ತೆ ಅದೇ ಜಾಗದಲ್ಲಿ ನಿಲ್ಲುತ್ತಿತ್ತು ಖಾಲಿ ಬೈಕ್

2 Comments

  1. Deepa

    Amazing,u are inspiring me to visit kutch once

  2. ಮಂಜುಳಾ ಬಬಲಾದಿ

    Thank you Deepa. Do visit it during Full Moon. I’m sure you’ll like it 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading