ATV ಏರಿದಾಗ…
ಇನ್ನು ಮೊದಲ ದಿನದ itinerary -ಊಟ, ವೈಟ್ ರಣ್ ನಲ್ಲಿ ಸೂರ್ಯಾಸ್ತ ವೀಕ್ಷಣೆ ಮತ್ತು ಬೆಳದಿಂಗಳ ವಿಹಾರ ಅಷ್ಟೇ. ನಾನು ವೈಟ್ ರಣ್ ಗೆ ಬರುವ ಮುಂಚೆಯೇ ಇದರ ಬಗ್ಗೆ ವಿಡಿಯೋಗಳನ್ನೂ ವೀಕ್ಷಿಸಿದ್ದರಿಂದ ಅಲ್ಲಿದ್ದ adventure sports option ಗಳ ಬಗ್ಗೆ ನನಗೆ ತಿಳಿದಿತ್ತು. ಇದರ ಕುರಿತಾಗಿ reception ನಲ್ಲಿ ವಿಚಾರಿಸಿದಾಗ ಹಾಟ್ ಏರ್ ಬಲೂನ್ ಸೇವೆ ಲಭ್ಯವಿರಲಿಲ್ಲ ಆದರೆ ATV (All Terrain Vehicle) Ride ಲಭ್ಯವಿತ್ತು. ಕೆಲವು ATV ಗಳು ಟೆಂಟ್ ಸಿಟಿಯ ಹೊರಗೆ ನಿಂತಿದ್ದನ್ನು ಬೆಳಗ್ಗೆ ಬಸ್ ನಿಂದ ಇಳಿದಾಗಲೇ ನಾನು ಗಮನಿಸಿದ್ದೆ. (Adventure ನ ಆನಂದವೇ ಬೇರೆ!) ATV Rideಗೆ ಪ್ರತ್ಯೇಕವಾಗಿ ಶುಲ್ಕ ನೀಡಬೇಕಿತ್ತು.
ಸರಿ ಟೆಂಟ್ ಸೇರಿ ಒಂದು ಹತ್ತು ನಿಮಿಷಗಳ ಕಾಲ ವಿರಮಿಸಿದ ಮೇಲೆ, ನನ್ನ ಮೆಂಟಲ್ ಮ್ಯಾಪಿಂಗ್ ಶುರುವಾಗಿತ್ತು. ಟೆಂಟ್ ತಲುಪುವ ಮುಂಚೆಯೇ ನಮ್ಮ ಬೆಳಗಿನುಪಹಾರ ಮುಗಿದಿತ್ತು. ಸಮಯವಾಗಲೇ ೧೧:೩೦ ಆಗುತ್ತಲಿತ್ತು. ಮಧ್ಯಾಹ್ನ ೨:೩೦ ವರೆಗೆ ಊಟದ ಲಭ್ಯತೆಯಿತ್ತು. ಸಂಜೆ ಒಂಟೆ ಗಾಡಿಯಲ್ಲಿ ವೈಟ್ ರಣ್ ಗೆ ಹೋಗಲಿಚ್ಚಿಸುವವರು ೪-೪:೧೫ ರ ಸುಮಾರಿಗೆ reception ಬಳಿ ಇರಬೇಕು, ಮೊದಲು ಬಂದವರಿಗೆ ಆದ್ಯತೆ ಎಂಬ ಮಾಹಿತಿಯನ್ನಾಗಲೇ ನಾನು ತಿಳಿದಾಗಿತ್ತು. ಮಧ್ಯಾಹ್ನ ೧:೪೫ – ೨ ರಷ್ಟೊತ್ತಿಗೆ ಊಟಕ್ಕೆ ಹೋಗಿ ೨:೪೫ ರಷ್ಟರಲ್ಲಿ ಊಟ ಮುಗಿಸಿ ನಾನು ಮತ್ತೆ ರಿಸೆಪ್ಶನ್ಗೆ ತೆರಳಿದ್ದೆ. ಸಂಜೆ ಸೂರ್ಯಾಸ್ತಕ್ಕೆ ತೆರಳುವ ಮುನ್ನ ATV ರೈಡ್ ಮಾಡುವ ಯೋಜನೆ ನನ್ನದಾಗಿತ್ತು.
ನಂದನ್ ಗೆ ಅವನ ನೆಚ್ಚಿನ ‘ ಸಬ್ ವೇ ಸರ್ಫರ್’ ಆಡಲು ಹೇಳಿ ATV ರೈಡ್ ವ್ಯವಸ್ಥೆ ಮಾಡುವವರಿಗೇ ನಂದನ್ ನ ಬಗ್ಗೆ ನಿಗಾ ವಹಿಸಲು ಹೇಳಿ, ಅವನಿಗೂ ತಕ್ಕ ಮಟ್ಟಿಗೆ ಸೂಚನೆಗಳನ್ನು ನೀಡಿ ನಾನು atv ರೈಡ್ ನೆಡೆಗೆ ನಡೆದೆ. ಆ ಘಳಿಗೆಗಳಲ್ಲಿ ನನಗನಿಸುತಿದ್ದದ್ದು ಒಂದೇ…- ‘wow!’ ಆ ಸವಾರಿಯಿಂದ ನನಗೆ ಸಿಗಬಹುದಾದ adrenalin rush ಅನ್ನು ನೆನೆಸಿಕೊಂಡು ಒಂದು ತರಹದ ಪುಳಕ. ಆದರೆ atv ರೈಡ್ ವ್ಯವಸ್ಥೆ ಮಾಡುವವರಿಗೆ ನಾನು ATV ಯನ್ನು ಒಬ್ಬಳೇ ಓಡಿಸಬಲ್ಲೆ ಎಂಬ ನಂಬಿಕೆ ಇರಲಿಲ್ಲ. ಅವರು ನನ್ನ ಜೊತೆಗೆ ಒಬ್ಬ ಹುಡುಗನನ್ನೂ ಕಳುಹಿಸಿದರು. ಆದರೆ ನನಗೆ ನಾಲ್ಕುಗಾಲಿಯ ಆ ವಾಹನವನ್ನು ಯಾವುದೇ ತೊಂದರೆಯಿಲ್ಲದೆ ಓಡಿಸಬಲ್ಲೆ ಎಂಬ ಅತಿಯಾದ ನಂಬಿಕೆ. ಬ್ಯಾಲೆನ್ಸ್ ತಪ್ಪುವುದಿಲ್ಲ ಎಂಬ ಭರವಸೆ!
ಹಂ! ಆ ಘಳಿಗೆ ಬಂದೆ ಬಿಟ್ಟಿತು… Jeans, Sleeve-less top, leather jacket, Goggles, shoes, helmet, gloves and a rough & tough vehicle to ride! Wow! Race Saason Ki…;-) ATV ತಗ್ಗು-ದಿಣ್ಣೆಯ ವಿಶಾಲ ಮೈದಾನದಲ್ಲಿ ಓಡಲು ಶುರುವಿಟ್ಟಾಗಲೇ ವಾಸ್ತವದ ಅರಿವಾಗಿದ್ದು. ಅಂದುಕೊಂಡಷ್ಟು ಸುಲಭವಾಗಿರಲಿಲ್ಲ ಅದರ ಸವಾರಿ. ಭಾರವಾದ ವಾಹನ, ಸುಲಭದಲ್ಲಿ ಎಡ-ಬಲಕ್ಕೆ ತಿರುಗಿಸಲಾಗದ ಹ್ಯಾಂಡಲ್, bumpy ರೈಡ್… Thank God! ಜೊತೆಗೆ ಆ ಹುಡುಗನಿದ್ದ… ಮತ್ತೊಮ್ಮೆ ದ್ವಿಚಕ್ರ ವಾಹನವನ್ನು ಓಡಿಸಲು ಕಲಿತಂತಹ ಅನುಭವ! ಒಟ್ಟು ೪೫ ನಿಮಿಷಗಳ ಸವಾರಿಯ ಕಾಲಾವಕಾಶದಲ್ಲಿ ಮೊದಲ ಹದಿನೈದು ನಿಮಿಷಗಳು ಆ ವಾಹನದ ಗ್ರಿಪ್ ಅರಿಯುವುದರಲ್ಲೇ ಕಳೆದು ಹೋದವು. ಕ್ರಮೇಣ ಸ್ವಲ್ಪ ಕಾನ್ಫಿಡೆನ್ಸ್ ಬರಲು ಶುರುವಾಯಿತು. ಗಾಡಿ ಅಂತೂ-ಇಂತೂ ನನ್ನ ಸೂಚನೆಗಳನ್ನು ಪಾಲಿಸತೊಡಗಿತು. ನಾನೊಬ್ಬಳೇ ಗಾಡಿಯನ್ನು steer ಮಾಡಲೂ ಶುರುವಿಟ್ಟೆ. ಅಷ್ಟರಲ್ಲಿ ತಗ್ಗು ದಿಣ್ಣೆಯಿದ್ದ ಭೂಮಿ,ಸಮತಟ್ಟಾದ ವಿಶಾಲವಾದ ಬಯಲಾಗಿ ಬದಲಾಗಿತ್ತು. ನಂತರದ ೧೫-೨೦ ನಿಮಿಷಗಳು jolly, adventurous ರೈಡ್. ವಿಶಾಲವಾದ ಭೂಮಿ, ನೋ ಟ್ರಾಫಿಕ್, powerful vehicle, ಗಡುಸು ಭೂಮಿ, ಗಡುಸು ಗಾಲಿಗಳು, control ಮಾಡಲು ತುಸು ಕಠಿಣವೇ ಅನಿಸೋ handle. ಎಲ್ಲಿ ನೋಡಿದರಲ್ಲಿ ಭೂಮಿ-ಆಕಾಶ… ಮಧ್ಯದಲ್ಲಿ ಸಂಚರಿಸುತ್ತಿದ್ದ ನಾವು ಮತ್ತು ಕೇವಲ ನಾವು!
ಮರಳಿ ಬಂದಾಗ ನಂದನ್ ಇನ್ನೂ ಸಬ್ ವೇ ಸರ್ಫರ್ ನಲ್ಲಿ ವ್ಯಸ್ತನಾಗಿದ್ದ. ಸಮಯ ಆಗಲೇ ೪ ರ ಗಡಿ ದಾಟಿತ್ತು. ಒಂಟೆ ಗಾಡಿಗಳು ಹೊರಡಲು ಅಣಿಯಾಗುತ್ತಿದ್ದವು. ನಂದನ್ ಜೊತೆ ಹೊರಬಂದು ನಾವು ಒಂದು ಅಚ್ಚುಕಟ್ಟಾದ ಒಂಟೆ ಗಾಡಿಯ ಮೇಲೆ ಹತ್ತಿ ಕುಳಿತು ವೈಟ್ ರಣ್ ಕಡೆ ಹೊರಟೆವು. ಗಾಡಿಯೇರಿದ ಮೊದಲ ಕೆಲ ನಿಮಿಷ, ನನ್ನ ಪಾಡಿಗೆ ನಾನು, ಅವನ ಪಾಡಿಗೆ ಅವನು. ATV ಜಗತ್ತಿನಿಂದ, ಒಂಟೆ ಗಾಡಿಯ ವೇಗಕ್ಕೆ ಹೊಂದಿಕೊಳ್ಳಲು ಕೆಲ ನಿಮಿಷಗಳೇ ಬೇಕಾದವು.
(ಮುಂದುವರಿಯುವುದು…)





beautiful experience said beautifully.