ರಂಜನಿ ಪ್ರಭು
**
ಕವಿತೆ ಒಂದು
ಪ್ರೀತಿ ಎನ್ನುವುದು
ಕಣ್ಣರೆಪ್ಪೆಯು ತಡೆದು
ನಿಲ್ಲಿಸಿದ ಕಣ್ಣಹನಿ
ಪ್ರೀತಿ ಎಂದರೆ ಬಿಗಿದ
ತುಟಿಗಳ ಒಳಗೆ ಅಡಗಿಹ ಮೆಲುದನಿ.
ಕವಿತೆ ಎರಡು
ಮಾಗಿಯಲ್ಲಿಯೂ ಮಲಗಿರುವುದಿಲ್ಲ
ಗಿಡಮರ.
ಒಡಲೊಳಗೆಲ್ಲ
ಚಿಗುರು ಹೂವಿನ ಕೃಷಿ..
ಬರುವ ವಸಂತನಿಗಾಗಿ
ಉದುರಿದ ಒಣ ಎಲೆಗಳಿಗೂ ಮಣ್ಣಲ್ಲಿ
ಬೆರೆವ ಸನ್ನಾಹ.
ಕವಿತೆ ಮೂರು
ಕೆಂಡಸಂಪಿಗೆಯ
ಕಡುಕಂಪಿಗೆ ಹಾರಿಹೋಗುವ
ದುಂಬಿಯೇ
ಸುಖಾಸುಮ್ಮನೆ
ಮೂದಲಿಸಬೇಡ
ಮಲ್ಲಿಗೆಯ ನರುಗಂಪನು.
ಕವಿತೆ ನಾಲ್ಕು
ಪ್ರತೀ ವಿದಾಯವೂ
ಸಂಕಟವಲ್ಲ
ಮೋಡದಿಂದ ಬೇರೆಯಾಗದೇ ಜಲ
ಮಳೆಯಾಗಬಹುದೇ?
ಹೂವಿನೆದೆಯಿಂದ ಹೊರ ಬೀಳದ ಸವಿ
ಮಧುವಾಗಬಹುದೇ?
ಕವಿತೆ ಐದು
ಕಳೆದ ವರುಷ ಕಳೆದುಕೊಂಡವರ
ನೆನಪಿನ ನೋವು
ನವವರುಷದ ಪ್ರೀತಿಗೆ
ನೆಪವಾಗಲಿ..
ಬೆಂಗಳೂರಿನ ಅರಳಿಮರವೂ
ಲಂಡನ್ನಿನ ಚೆರ್ರಿಗಿಡವೂ
ಮತ್ತೆ ಚಿಗುರುತ್ತವೆ
ಚೈತ್ರಮಾಸಕ್ಕೆ.
ಕವಿತೆ ಆರು
ಹತ್ತಾರು ಕನ್ನಡಿಗಳಲ್ಲಿ
ಇಣುಕಿ ನೋಡಿದರೂ
ಕಾಣಿಸಿದ್ದು ಅರವತ್ತರ
ಹೆಣ್ಣು
ನಿನ್ನ ಕಣ್ಣಕನ್ನಡಿಯಲ್ಲಿ
ನವವಧುವಾದದ್ದು ಹೇಗೆ?
ಕವಿತೆ ಏಳು
ಋಣಿಯಾಗಿರು
ನಿನ್ನೆದೆಯಲಿ ಪಶ್ಚಾತ್ತಾಪ
ತುಂಬಿದ ತಪ್ಪುಗಳಿಗೆ.
ಋಣಿಯಾಗಿರು
ನಿನ್ನ ದಿಕ್ಕು ತಪ್ಪಿಸಿದ
ಅಡ್ಡ ದಾರಿಗಳಿಗೆ.
ಋಣಿಯಾಗಿರು
ನಿನ್ನ ಕಣ್ಣಂಚನ್ನು
ಒದ್ದೆಮಾಡಿದ
ನಿರಾಕರಣೆಗಳಿಗೆ.
ನಿನ್ನ ನಾಳೆಗಳಿಗೆ
ಅವೇ ಬುನಾದಿ.
ಕವಿತೆ ಎಂಟು
ಎದುರಾದ ಅಡ್ಡಿಆತಂಕವನು
ಕೇಳಿದೆ
ಬಂದಿರುವಿರೇಕೆ—
ನನ್ನ ಹೆದರಿಸಲೋ
ಪಾಠಕಲಿಸಲೋ?
ನಗುತ್ತಾ ಹೇಳಿತು ಅದು
ನನ್ನನ್ನು ಬಿಡು,
ನಿನ್ನ ಕನಸುಗಳನ್ನು
ಹಿಡಿ.
0 Comments