ರಂಗಭೂಮಿ ದಿನದ ನೆನಪಲಿ.. ಅನನ್ಯ ರಾಗದ ಹೊಲಿಗೆ


ಡಾ. ಲೋಕೇಶ್ ಮೊಸಳೆ

**
ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ದಿಕ್ಕಿನ ಪದಗಳಾಗಿವೆ. ಹಾಗೆಯೇ ಯುದ್ಧ ಮತ್ತು ಕಲೆ ಕೂಡ. ಕಲಾಕಾಯಕವನ್ನು ಯಾರು ಮಾಡುತ್ತಿದ್ದರೋ ಅವರು ಶಾಂತಿಯ ಮತ್ತು ಜೀವ ಜಾಲದ ಪ್ರತಿಪಾದಕರಾಗಿರುತ್ತಾರೆ. ಇದು ನಾರ್ವೆ ದೇಶದ ನೋಬಲ್ ಪ್ರಶಸ್ತಿ ವಿಜೇತ ನಾಟಕಕಾರ-ಸಾಹಿತಿ ಜಾನ್ ಫೋಸ್ಸೆ ಅವರ ಮಾತು.

ಮಾರ್ಚ್ ೨೭, ವಿಶ್ವರಂಗಭೂಮಿ ದಿನ. ವಿಶ್ವದ ಎಲ್ಲಾ ಕಲಾವಿದರಿಗೆ ಸಂಭ್ರಮದ ದಿನ ಕೂಡ. ೧೯೬೨ರ ಮಾರ್ಚ್ ೨೭ ರಂದು ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿರುವ ಇಂಟರ್‌ನ್ಯಾಷನಲ್ ಥಿಯೇಟರ್ ಇನ್‌ಸ್ಟಿಟ್ಯೂಟ್ (I T I ) ವಿಶ್ವರಂಗಭೂಮಿ ದಿನವನ್ನು ಪ್ರಪ್ರಥಮವಾಗಿ ಆಚರಿಸಿ ವಿಶ್ವದ ಮೂಲೆಮೂಲೆಗಳಿಗೆ ಹರಡಿ ರಂಗಭೂಮಿಯ ಕಲಾವಿದರು, ನಿರ್ದೇಶಕರು, ನಾಟಕಕಾರರುಗಳನ್ನು ಒಳಗೊಂಡಂತೆ ಆಚರಿಸಲಾಗುತ್ತದೆ.

ಈ ವರ್ಷ ಮಾರ್ಚ್ ೨೭ ರಿಂದ ೨೯ರ ವರೆಗೆ ಚೀನಾ ದೇಶದ ಲಾಂಗ್‌ಫಾನ್'ನಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಹೀಗೆ ಪ್ರತಿವರ್ಷ ವಿಶ್ವದ ಯಾವುದಾದರೊಂದು ದೇಶದಲ್ಲಿ ವಿಶ್ವಸಂಸ್ಥೆ, ITI ಹಾಗೂ ಆದೇಶದ ಸಹಭಾಗಿತ್ವದಲ್ಲಿ ಆಚರಿಸಲಾಗುತ್ತಿದೆ. ನಾಟಕ-ದೃಶ್ಯ ಮುಂತಾದ ಪ್ರದರ್ಶಕ ಕಲೆಗಳನ್ನು ಉತ್ತೇಜಿಸಲು, ಜನಸಾಮಾನ್ಯರಿಗೆ ಕಲೆಯ ಅರಿವು ಮೂಡಿಸಲು ಹಾಗೂ ಕಲೆಗಾರರಿಗೆ ಪ್ರೋತ್ಸಾಹ ನೀಡುವುದು; ಜನರು ಮತ್ತು ಕಲಾವಿದರ ನಡುವೆ ಬಾಂಧವ್ಯ ಮೂಡಿಸುವ ಸಲುವಾಗಿ ವಿಶ್ವಮಟ್ಟದಲ್ಲಿ ವಿಶ್ವವೇ ಒಂದೆನ್ನುವ ಮಾನವಪರ ಆಶಯಗಳೊಂದಿಗೆ ಕೆಲಸ ಮಾಡುತ್ತಿದೆ, ವಿಶ್ವವನ್ನು ಬೆಸೆಯುತ್ತಿದೆ. ‘ಕಲೆ-ಕಲಾವಿದರು ಮತ್ತು ಶಾಂತಿ’ ವಿಶ್ವರಂಗ ಭೂಮಿ ದಿನದ ಘೋಷವಾಕ್ಯ. ಹೀಗಾಗಿ ನಾರ್ವೆ ದೇಶದ ನಾಟಕಕಾರ ಜಾನ್ ಫೋಸ್ಸೆ ಈ ವರ್ಷದ ರಂಗ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ- ಈ ಭೂಮಿಯ ಮೇಲಿನ ಪ್ರತಿಯೊಬ್ಬರೂ ಅನನ್ಯ-ವಿಭಿನ್ನ. ಹಾಗಿದ್ದರೂ ಪರಸ್ಪರ ಪ್ರೀತಿಸಬಲ್ಲವರಾಗಿದ್ದೇವೆ. ಅರಿವು ಮೀರಿದ ವಿಶಿಷ್ಠ ಅನನ್ಯತೆಯು ಮನುಷ್ಯನ ಅಂತರಾಳದಲ್ಲಿ ಅಂತರ್ಗತವಾಗಿರುವುದರಿಂದ ಮನುಷ್ಯ-ಮನುಷ್ಯರನ್ನು ಪ್ರೀತಿಸಲು ಸಾಧ್ಯವಾಗಿದೆ. ಇದನ್ನೇ ನಿಜವಾದ ಚೈತನ್ಯ; ಆತ್ಮ, ಅಥವ ಪ್ರೀತಿ ಎಂದು ಕರೆಯಬಹುದು. ಚೈತನ್ಯ, ಆತ್ಮ, ಪ್ರೀತಿ ಮುಂತಾದ ಶಬ್ಧಗಳಿಂದ ಕರೆಯಲಾಗದಿದ್ದರೆ ಇದನ್ನು ಅನನ್ಯತೆ ಅಥವ ಭಿನ್ನ ಎಂದುಕೊಂಡು ಸುಮ್ಮನಾಗೋಣ.

Jon Fosse (f. 1959). Norsk forfatter, dramatiker og oversetter. Fotografert Februar 2019 Foto: Tom A. Kolstad

ಈ ಜಗತ್ತಿನ ಮನುಷ್ಯರೆಲ್ಲ ಅವರಾಡುವ ಭಾಷೆ. ಚರ್ಮ, ಕೂದಲ ಬಣ್ಣ ಬದಲಾಗಿದ್ದರೂ ಮೂಲಭೂತರಾಗಿ ಎಲ್ಲರೂ ಸಮಾನರೆ'', ಆದರೂ `ಸಮಾನತೆ' ಎನ್ನುವುದು ಇಂದು ವಿರೋಧಾಭಾಸವಾಗಿ ಕಾಣುತ್ತಿದೆ. ಜಗತ್ತಿನಲ್ಲಿ ಜನರೆಲ್ಲರೂ ಒಂದೇ ಆಗಿದ್ದರೂ ಪರಸ್ಪರ ವಿಭಿನ್ನವಾಗಿರುವುದು ತಮಾಷೆಯಾಗಿದೆ. ಹೀಗಾಗಿ ಮನುಷ್ಯ ಸ್ವಾಭಾವಿಕವಾಗಿ ವಿರೋಧಭಾಷಿಯೇ ಆಗಿ ಕಂಡಿದ್ದಾನೆ. ಮನುಷ್ಯ ಮತ್ತವನ ಚಿಂತನೆಯ ನಡುವೆ ನಾವು ಪ್ರಾಪಂಚಿಕವಾದ ಖಾಸಗಿ ನಿಲುವುಗಳ ಸ್ವಾರ್ಥದೊಂದಿಗೆ ಹೋಗುತ್ತಿದ್ದೇವೆ. ಅದರೂ ಕಲೆ ಮಾತ್ರವೇ ಇಂಥಹ ನಿಲುವು ಸ್ವಾರ್ಥ ಮೀರಿದ ಅನನ್ಯತೆಯನ್ನು ಸಾರ್ವತ್ರಿಕ ನೆಲೆಗಳಲ್ಲಿ ಬೆಸೆಯ ಬಲ ಅದ್ಭುತ ಶಕ್ತಿ ಈ ಪ್ರದರ್ಶಕ ಕಲೆಗಳಿಗಿದೆ. ಹೀಗಾಗಿ; ಪ್ರದರ್ಶಕ ಕಲೆಗಳಿಂದ ವಿಭಿನ್ನ ಜೀವ-ಭಾವಗಳ ಅಸ್ಮಿತೆಯನ್ನು ಅರ್ಥ ಮಾಡಿಕೊಳ್ಳುತ್ತ ಭಾಷೆ-ಬಣ್ಣ-ಆಚರಣೆ-ಭೌಗೋಳಿಕ ಭೂ ರೇಖೆಗಳನ್ನು ಮೀರಿ ನಿಲ್ಲಬಹುದಾಗಿದೆ. ಮನುಷ್ಯನ ಅಂತರ್ಗತ ಮೌಲ್ಯಗಳನ್ನು ಪ್ರಸರಣ ಮಾಡಬಲ್ಲದಲ್ಲದೆ ಪ್ರತಿಯೊಂದು ಜನಸಮುದಾಯವೂ ದೇಶದ ಸೌಹಾರ್ದತೆಯ ಹೊಸ ಹೊಲಿಗೆಯನ್ನು ರಚಿಸಬಹುದಾಗಿದೆ. ನಿಜವಾದ ಕಲಾಪ್ರಕಾರಗಳು ನಮ್ಮೊಳಗೆ ಯಾವುದು ನಿಜ. ಯಾವುದು ಮಿಥ್ಯ ಎನ್ನುವುದನ್ನು ಚಿಂತಿಸಲು ಅನುವು ಮಾಡಿಕೊಡುವ ಮಾಧ್ಯಮವಾಗಿದೆ. ಇದೇ ಈ ಪ್ರದರ್ಶಕ ಕಲೆಗಳ ಶಕ್ತಿ ಅನ್ನುವುದು ನಿಜ. ಸತ್ಯ-ಮಿಥ್ಯಗಳನ್ನು ಅರ್ಥೈಸಿಕೊಳ್ಳಲಾರದ ಕುತೂಹಲಗಳು ನಮ್ಮೊಳಗೆ ಮೂಡಿದಾಗ ಅರ್ಥವಾಗಿಸುವ ಜಟಿಲ ಬದ್ಧತೆಯನ್ನೂ ರಂಗಭೂಮಿ ಹೊಂದಿರುತ್ತದೆ! ಮನದಾಳದಲ್ಲಿ ಮೂಡಿಸುವ ನಿಗೂಢತೆಗಳನ್ನು ಕರಗಿಸಿಕೊಳ್ಳಲು-ಅರಗಿಸಿಕೊಳ್ಳಲು ನಮ್ಮದೆ ವಿವೇಚನೆಗಳಾಚೆಗೆ ಚಲಿಸುವಂತೆ ಮಾಡುವ ಶಕ್ತಿಯುತ ಮಾಧ್ಯಮವಾಗಿ ಈ ಕಲೆ ಉಳಿದಿದೆ. ಇಂದು ಕೆಲವು ತಂತ್ರಜ್ಞಾನಗಳಿಂದ ನಡೆದಿರುವ ಅಮಾನವೀಯ ಸಂಶೋಧನೆಗಳನ್ನು ನಿರ್ಧಯದಿಂದ ದೂರ ತಳ್ಳಬೇಕಾದ ಪರಿಸ್ಥಿತಿ ನಮ್ಮೆದುರಿಗಿದೆ. ಮನುಷ್ಯ ವಿರೋಧಿ ಅಭಿವೃದ್ಧಿಗಳು ಮನ ಕಲಕಿದೆ. ಇಂದು ಭಯೋತ್ಪಾದಕತೆ-ಯುದ್ಧ, ಮನುಷ್ಯ-ಮನುಷ್ಯರ ನಡುವೆ ಮೃಗೀಯ ಭಾವ ಹೆಚ್ಚಾಗಿರುವುದರಿಂದ, ನಮ್ಮಲ್ಲಿ ಪರಸ್ಪರ ಅನುಮಾನದಲ್ಲಿ ಕಾಣುವಂತಾಗಿದೆ. ಇದು ವಿಶ್ವದ ದುರಂತ-ಮಾನವ ಕುಲದ ಅಸಹಾಯಕತೆ ಮತ್ತು ದುರಂತ ಸಂಗತಿಗಳಾಗಿವೆ. ಧರ್ಮ-ಭಾಷೆ-ಬಣ್ಣದ ಅನನ್ಯತೆಗಳು ಮನುಷ್ಯಬಾಳನ್ನು ನಾಶಪಡಿಸಬಾರದು. ನಮ್ಮೊಳಗಿನ ವ್ಯವಹಾರಿಕತನ” ಹೃದಯದೊಳಗೆ ಇಳಿದಾಗ ಅನ್ಯತೆ-ವಿವಿಧತೆಯೊಂದಿಗೆ ಸಂಘರ್ಷ'' ಎದುರಾಗುತ್ತದೆ. ಇದು ನಮ್ಮೊಳಗಿನ ಕಲಾಭಾವದೊಂದಿಗೆ ನಡೆಸುವ ಸಂಘರ್ಷ ಕೂಡ ಆಗಿರುತ್ತದೆ'.

ಈ ರಂಗ ಸಂದೇಶದಲ್ಲಿ `ರಂಗಭೂಮಿ' ರಂಗಪಠ್ಯ, ನಾಟಕ, ಸಾಹಿತ್ಯಗಳ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ. ರಂಗಭೂಮಿ ಸೇರಿದಂತೆ ನೃತ್ಯ ಹೀಗೆ ಎಲ್ಲಾ ಪ್ರದರ್ಶಕ ಕಲೆಗಳಿಗೆ ವಿಶಿಷ್ಠವಾದ ಮಾನವ ಅನುಭೂತಿ-ಪ್ರೀತಿಗಳನ್ನು ಹೊದ್ದ ಮಾನವೀಯ ಗುಣ ಹಾಗೂ ಅನುಭವಗಳನ್ನು ಹೀರಿಕೊಳ್ಳುವ-ಹಂಚುವ ಅನನ್ಯತೆಗಳನ್ನು ದಕ್ಕಿಸಿಕೊಳ್ಳುವ'- ಸಾರ್ವತ್ರಿಕ ಜೀವಪರವಾಗಿಸುವ ಒಳ್ಳೆತನವನ್ನೂ ಹೊಂದಿದ್ದಾಗಿದೆ. ಜಗತ್ತಿಗೆ ಅನನ್ಯತೆಯಲ್ಲಿಯೇ ಮನುಷ್ಯ ಸಂಬAಧಗಳನ್ನು ಗಟ್ಟಿಗೊಳಿಸುತ್ತ ಕಲಾತ್ಮಕ ಅಭಿವ್ಯಕ್ತಿಯಲ್ಲಿ ಜೀವಪರ ನಿಲುವುಗಳನ್ನು; ವಿಶ್ವವೇ ಒಂದು ಎನ್ನುವಂಥ ಕ್ರಿಯೆ ನಡೆಸಲು ಸಾಧ್ಯವಾಗುವುದೇ ಇಂಥ ಪ್ರದರ್ಶಕ ಕಲೆಗಳ ಶಕ್ತಿಯಾಗಿದೆ. ಕೊನೆಯ ಒಂದು ಸತ್ಯವಾದ ಮಾತನ್ನು ಬರೆಯಲಿಚ್ಚಿಸುತ್ತೇನೆ. ಯುದ್ಧ ಮತ್ತು ಶಾಂತಿ” ಪರಸ್ಪರ ವಿರುದ್ಧ ದಿಕ್ಕಿನ ಪದಗಳಿವು. ಹಾಗೆಯೇ ಯುದ್ಧ ಮತ್ತು ಕಲೆ ಕೂಡ. ಕಲಾಕಾಯಕವನ್ನು ಯಾರು ಮಾಡುತ್ತಿದ್ದಾರೋ ಅವರು ಶಾಂತಿಯ ಮನುಷ್ಯತ್ವದ ಪ್ರತಿಪಾದಕರಾಗಿದ್ದಾರೆಂಬುದು ಜಗತ್ತಿನ ಬಹುದೊಡ್ಡ ಸಾರ್ವತ್ರಿಕವಾದ ಸತ್ಯವಾಗಿದೆ ಎನ್ನುತ್ತಾರೆ. ನಾರ್ವೆ ದೇಶದ ನೋಬಲ್ ಪ್ರಶಸ್ತಿ ವಿಜೇತ ಸಾಹಿತಿ ಜಾನ್ ಫೋಸ್ಸೆ.

ವಿಶ್ವರಂಗಭೂಮಿ ದಿನಕ್ಕೆ ರಂಗಭೂಮಿ ಕಾಯಕ ಮಾಡಿರುವವರು ಪ್ರತಿವರ್ಷ ಅಂತರಾಷ್ಟ್ರೀಯ ಸಂದೇಶ ನೀಡುವ ಪದ್ಧತಿಯನ್ನು ೧೯೬೨ ರಿಂದ ನಡೆಸುತ್ತ ಬಂದಿದ್ದಾರೆ. ಇಂಥ ಅವಕಾಶ ಭಾರತಕ್ಕೆ ಎರಡು ಸಾರಿ ದೊರಕಿದೆ. ೨೦೦೨ರಲ್ಲಿ ನಮ್ಮ ಕನ್ನಡದ ಸಾಹಿತಿ ನಾಟಕಕಾರ ಗಿರೀಶ್‌ಕಾರ್ನಾಡ್ ಅವರಿಗೆ ಸಿಕ್ಕಿದ್ದು, ಕನ್ನಡ ನೆಲಕ್ಕೆ ಸಿಕ್ಕ ಬಲುದೊಡ್ಡ ಗೌರವ. ಎರಡನೆಯದಾಗಿ ೨೦೧೮ರಲ್ಲಿ ರಾಮಗೋಪಾಲ್ ಬಜಾಜ್ ಅವರುಗಳು ವಿಶ್ವರಂಗ ಸಂದೇಶ ನೀಡಿದ್ದಾರೆ. ಇವರು ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮದ ನಿರ್ದೇಶಕರಾಗಿದ್ದವರು. ಶಿಕ್ಷಣ ತಜ್ಞ, ಹಿಂದಿ ಚಲನಚಿತ್ರ ನಟರಾಗಿ ರಂಗಭೂಮಿಗೆ ನೀಡಿದ ಕೊಡುಗೆಗಾಗಿ ೧೯೯೬ರಲ್ಲಿ ಸಂಗೀತ ನಾಟಕ ಅಕಾಡೆಮಿ, ೨೦೦೩ರಲ್ಲಿ ಪದ್ಮಶ್ರೀ, ೨೦೧೭ರಲ್ಲಿ ಕಾಳಿದಾಸ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಇಂಥ ಅಂತರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪ್ರಪ್ರಥಮವಾಗಿ ಕನ್ನಡ ನೆಲದ ನಾಟಕಕಾರ ಗಿರೀಶ್ ಕಾರ್ನಾಡ್ ಅವರಿಗೆ ದೊರಕಿದ್ದು ನಾಡಿನ ಹೆಮ್ಮೆಯ ಸಂಗತಿ. ಭಾರತ ನೆಲದಲ್ಲಿ ಇಂಥ ಐತಿಹಾಸಿಕ ಕಾರ್ಯಕ್ರಮದ ಅವಕಾಶ ಸಿಗಲಿ ಅದರಲ್ಲೂ ಕನ್ನಡ ನೆಲದಲ್ಲಿ ಮೈಸೂರಿನಲ್ಲೇ ನಡೆಯುವಂತಾಗಲಿ ಅನ್ನುವ ಆಶಯ ನನ್ನದು. ಕನ್ನಡ ಕಟ್ಟಿದ ಕನ್ನಡದ ಮನಸ್ಸುಗಳೆಲ್ಲ ಈಗ ನೆನಪಾಗುತ್ತಿದ್ದಾರೆ. ಪಂಪನಿಂದ ಹಿಡಿದು ಕುವೆಂಪು-ಬೇಂದ್ರೆ, ಕಾರ್ನಾಡ್, ಚಂಪಾ-ಲಂಕೇಶ್ ಇತ್ತೀಚಿಗಿನ ನಾಟಕಕಾರ ಜಯರಾಮ ರಾಯಪುರವರೆಗೆ; ಗುಬ್ಬಿವೀರಣ್ಣನವರಿಂದ ಬಿ.ವಿ. ಕಾರಂತ, ಕೆ.ವಿ.ಸುಬ್ಬಣ್ಣ, ಪ್ರಸನ್ನ, ಜನ್ನಿ, ಹಳೇಮನೆ, ಬಸವಲಿಂಗಯ್ಯ, ಜಯತೀರ್ಥ, ಜೋಷಿ, ಶಶಿಧರ್ ಭಾರಿಘಾಟ್, ರಘುನಂದನ್, ಮಂಡ್ಯ ರಮೇಶ್, ಸುಗುಣ ಪ್ರಸಾದ್ ಕೆ.ಪಿ. ಲಕ್ಷ್ಮಣ್ ವರೆಗೆ ಈ ರಂಗಭೂಮಿಯ ದಿನದಂದು ಎಲ್ಲರೂ ನೆನಪಾಗುತ್ತಿದ್ದಾರೆ.

ನಾರ್ವೆ ದೇಶದ ನಾಟಕಕಾರ ಜಾನ್ ಫಾಸ್ಸೆಯ ರಂಗಭೂಮಿಯ ಸಂದೇಶಗಳ ಆಶಯಗಳನ್ನೇ ಅಣಕಿಸುವಂತೆ ಯುದ್ಧ ಪೀಪಾಸು, ಧರ್ಮ ಪೀಪಾಸು, ಇತಿಹಾಸವನ್ನೇ ತಿರುಚುವ ಮೃಗೀಯ ಮನಸ್ಸಿನ ನಾಟಕಕಾರರು, ಕಲೆಯನ್ನೇ ಕೊಲೆಯಾಗಿಸುವ ದುಷ್ಟರೂ ಕೂಡ ನೆನಪಾಗುತ್ತಿದ್ದಾರೆ.
“ಮನುಷ್ಯ ಪ್ರೀತಿ ಗೆದ್ದೇ ಗೆಲ್ಲುತ್ತದೆ, ಗೆಲ್ಲಲೇಬೇಕು ಒಂದು ದಿನ” ಎನ್ನುವ ಆಶಯದೊಂದಿಗೆ.

‍ಲೇಖಕರು avadhi

March 27, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: