– ಟಿ ಎಸ್ ಗೊರವರ
ಬೇಡ ಬೇಡವೆಂದರೂ ಯುಗಾದಿಯ ಬಗ್ಗೆ ಮಾತಾಡುವಾಗೆಲ್ಲ ಬಾಲ್ಯ ಕಾಲದಲ್ಲಿನ ಯುಗಾದಿಯ ನೆನಪುಗಳೇ ಚೈತ್ರದ ಚೆಲುವಾಗಿ ಪಲ್ಲವಿಸುತ್ತಿವೆ. ಬಿಡದೇ ಕಾಡುವ ಹರೆಯದ ಹುಡುಗಿಯ ಕಾಲ್ಗಳ ಚೈನದ ಕಿಂಕಿಣಿಯ ಲಯವಾಗಿ ಅವು ನನ್ನೊಳಗೆ ಹಸಿರಾಗಿ ಉಳಿದಿವೆ.
ಹಿತ್ತಲಿನಲ್ಲಿ ನಮ್ಮ ಹೆಂಚಿನ ಮನೆಗೆ ಕೊಡೆ ಹಿಡಿದಂತೆ ಅರಳಿರುವ, ಆಕಾಶಕ್ಕೆ ಮುಖ ಮಾಡಿ ನಿಂತಿರುವ ಬೇವಿನ ಗಿಡದಲ್ಲಿ ಅಲ್ಲಲ್ಲಿ ಮೊಸರು ಚಿಮುಕಿಸಿದಂತೆ ಹೂ ಅರಳುವ ದಿನಗಳಲ್ಲೇ ನಮಗೆ ಗೊತ್ತಾಗುತ್ತಿತ್ತು ಯುಗಾದಿ ಬಂದಿತೆಂದು. ಈ ಬೇವಿನಮರದ ಬಗ್ಗೆ ತುಸು ಹೇಳಲೇಬೇಕು. ಇದರೊಂದಿಗೆ ನಮ್ಮದು ಕರುಳಬಳ್ಳಿಯ ಸಂಬಂಧವೆಂದರೂ ನಡೆದೀತು. ಕಡು ಬೇಸಿಗೆಯ ಉರಿಬಿಸಿಲಿನ ಮಧ್ಯಾಹ್ನದ ದಿನಗಳನ್ನೆಲ್ಲ ನಾವು ಕಳೆಯುತ್ತಿದ್ದುದು ಈ ಮರದ ತಂಪು ನೆರಳಿನಲ್ಲೇ. ಅದು ಆಪ್ತವಾಗುತ್ತಿದ್ದುದು ಇದೇ ಕಾರಣಕ್ಕೇ ಇರಬೇಕು. ಅದು ಚೈತ್ರದ ಚಿಗುರೊಡೆದು, ಮೈ ತುಂಬಾ ಹೂ ಅರಳಿಸಿಕೊಂಡು ಎದೆ ಕುಲುಕಿಸುತ್ತಾ ಹೆಜ್ಜೆ ಹಾಕುವ ಹುಡುಗಿಯ ಹಾಗೆ ಚೆಂದವಾಗಿ ಕಂಗೊಳಿಸುತ್ತಿತ್ತು. ಯುಗಾದಿಯೇ ಆ ಬೇವಿನಗಿಡಕ್ಕೆ ಇಷ್ಟೊಂದು ಶೃಂಗಾರ, ಸಡಗರವನ್ನು ತರುತ್ತಿರಬೇಕು. ನಾವು ಮನೆಯವರೆಲ್ಲ ಕೆಂಡ ಉಗುಳುವ ಬಿಸಿಲಿಗೆ ಬೇಸತ್ತು ಈ ಮರದ ಕೆಳಗೊಂದು ಚಾಪೆ ಹಾಸಿ ಅಲ್ಲೇ ಹೊತ್ತು ಕಳೆಯುತ್ತಿದ್ದೇವು. ಅಂಗಾತ ಮಲಗಿ ಬೇವಿನಗಿಡದ ಸೊಗಸು ಕಣ್ತುಂಬಿಕೊಳ್ಳುತ್ತಿರುವಾಗ ಅದೆಲ್ಲಿರುತ್ತಿತ್ತೋ ಏನೋ ಒಂಟಿ ಕೋಗಿಲೆಯೊಂದು ಧ್ವನಿ ಏರಿಸಿ ಕುಹು ಕುಹೂ ಹಾಡುತ್ತಿತ್ತು. ಜಗತ್ತಿನ ಕಣ್ಣಿಗೆ ಗೋಚರಿಸದೆ ಬೇವಿನ ಗಿಡದ ಹುಲುಸಾಗಿ ಬೆಳೆದ ತೊಪ್ಪಲು ಮರೆಯಲ್ಲಿ ಅದು ಧ್ಯಾನಸ್ಥವಾಗಿ ಹಾಡುತ್ತಿದ್ದರೆ ಅದನ್ನು ಕಿವಿತುಂಬಿಕೊಳ್ಳುತ್ತಿದ್ದ ನಮ್ಮ ಎದೆಯೊಳಗೆ ಎಂತದೋ ಹಿತ ಸುರಿದ ಅನುಭವ. ಆ ಹಿತವನ್ನು ಅನುಭವಿಸುತ್ತಲೇ ಹಗೂರಾಗಿ ಆ ಕಪ್ಪು ಕೋಗಿಲೆ ಕುಳಿತದ್ದನ್ನು ಪತ್ತೆ ಹಚ್ಚಿ ಆನಂದತುಂದಿಲಗೊಳ್ಳುತ್ತಿದ್ದೆವು. ಆ ಮ್ಯಾಲೆ ತುಸು ಮಜ್ಜಿಗೆ ಕುಡಿದು ಚಾಪೆಯಲ್ಲಿ ಅಡ್ಡಾದರೆ ನಿದ್ದೆಯ ಜೊಂಪು ತಾನೇ ತಾನು ಆವರಿಸಿಕೊಳ್ಳುತ್ತಿತ್ತು.

ಯುಗಾದಿ ಹೀಗೆ ನಮ್ಮ ಮನೆಯಲ್ಲಿ, ಊರಲ್ಲಿ ಕೋಗಿಲೆಯ ಹಾಡು, ಬೇವಿನ ಮರದ ನೆರಳು, ಚಿಗುರೊಡದು ಅರಳಿ ನಿಂತ ಅದರ ಚೆಲುವಿನೊಂದಿಗೆ ಕಣ್ತೆರೆಯುತ್ತಿತ್ತು. ಪಾಡ್ಯದ ದಿನ ಅವ್ವ ಮನೆ ಸಾರಿಸಿ ಅಂಗಳಕ್ಕೆ ನೀರು ಹೊಡೆದು ಹಬ್ಬದ ಕಳೆ ಮೂಡಿಸುತ್ತಿದ್ದಳು. ನಾವು ಹುಡುಗರೆಲ್ಲ ಎಂದಿಗಿಂತ ಅವತ್ತು ಬೇಗ ಬೇಗನೇ ಜಳಕ ಮಾಡಲು ಅಣಿಯಾಗುತ್ತಿದ್ದೆವು. ಈ ಯುಗಾದಿ ದಿನದ ಜಳಕ ಎಂದಿಗಿಂತ ಭಿನ್ನಾವಾಗಿರುತ್ತಿತ್ತು. ಕಾದ ನೀರಿನಲ್ಲಿ ಬೇವಿನ ಎಲೆಗಳನ್ನು ಹಾಕಿರುತ್ತಿದ್ದರು. ಹೀಗೆ ಜಳಕಕ್ಕೆ ರೆಡಿ ಮಾಡಿದ ನೀರನ್ನು ಸುರಿದುಕೊಳ್ಳುವಾಗ ನಿಜಕ್ಕೂ ಹಿತವೆನಿಸುತ್ತಿತ್ತು. ಆದರೆ, ಆ ಬೇವಿನ ಎಲೆಗಳು ಮೈ ಚರ್ಮಕ್ಕೆ ಅಂಟಿಕೊಂಡು ಕಿರಿ ಕಿರಿ ಅನಿಸುತ್ತಿದ್ದದ್ದೂ ಸುಳ್ಳೇನಲ್ಲ. ಯುಗಾದಿಗೆ ಕೆಲ ಗೆಳೆಯರು ಹೊಸ ಬಟ್ಟೆ ಧರಿಸಿ ನಮ್ಮ ಹೊಟ್ಟೆ ಉರಿಸುತ್ತಿದ್ದರು. ನಮ್ಮ ಮನೆಯಲ್ಲಿ ಈಗಾಗಲೇ ಹಾಕಿಕೊಂಡ ಬಟ್ಟೆ ಹರಿದಾಗಲೇ ಬಟ್ಟೆ ಕೊಡಿಸುತ್ತಿದ್ದರು. ಹಾಗೆ ಕೊಡಿಸಿದ ಬಟ್ಟೆ ಧರಿಸಿದ ದಿನವೇ ನಮ್ಮ ಪಾಲಿನ ಯುಗಾದಿಯಾಗಿರುತ್ತಿತ್ತು.
ಅವತ್ತು ಜಲ್ದಿ ಜಳಕ ಮಾಡುತ್ತಿರುವುದಕ್ಕೂ ಕಾರಣವಿತ್ತು. ಅದೇ ತಾನೆ ಸೂರ್ಯ ಕಣ್ಬಿಡುವ ಗಳಿಗೆಯಲ್ಲಿ ನಾವು ಜಳಕ ಮಾಡಿ ರೆಡಿಯಾಗಿ ರತ್ನಪಕ್ಷಿ ನೋಡಲು ಅಣಿಯಾಗುತ್ತಿದ್ದೆವು. ನಿತ್ಯವೂ ನಮ್ಮ ಹಿತ್ತಲದ ಬೇವಿನ ಗಿಡದಲ್ಲಿ ನೋಡಿಸಿಕೊಳ್ಳುವ ಮಯರ್ಾದೆ ಇಲ್ಲದೆ ಸುಳಿಯುತ್ತಿದ್ದ ರತ್ನಪಕ್ಷಿ ಯುಗಾದಿ ಪಾಡ್ಯದ ದಿನ ಅದನ್ನು ಕಣ್ತುಂಬಿಕೊಳ್ಳಬೇಕೆಂದರೆ ಕಾಣೆಯಾಗಿದೆ. ನಮ್ಮ ಜನತಾ ಪ್ಲಾಟಿನ ಓಣಿಯಲ್ಲಿ ಹೆಚ್ಚು ಬೇವಿನಗಿಡಗಳು ಇದ್ದುದರಿಂದ ಊರ ಜನ ಕೂಡ ಬೆಳಗ್ಗೆ ಈ ಕಡೆ ಹಾದಿ ಬೆಳೆಸಿ ಬೇವಿನ ಗಿಡಗಳಲ್ಲಿನ ರತ್ನಪಕ್ಷಿಗಳನ್ನು ನೋಡುವ ಅವರ ತುಂಬು ಭರವಸೆಯ ಬಲೂನು ರತ್ನಪಕ್ಷಿ ಕಾಣದೆ ಟುಸ್ಸೆನ್ನುತ್ತಿತ್ತು. ಬಹುಶಃ ಊರ ಜನ ಜನತಾ ಪ್ಲಾಟಿನ ಕಡೆ ಹಾದಿ ಸವೆಸಿದ್ದೇ ಈ ರತ್ನಪಕ್ಷಿಗಳು ತಮಗೇನೋ ಕಾದಿದೆ ಎಂದು ಭಾವಿಸಿ ಕಂಬಿ ಕಿತ್ತಿರಬಹುದು. ಹಾಗಾಗಿ ನಾವು ಈ ರತ್ನಪಕ್ಷಿಗಳನ್ನು ಕಣ್ತುಂಬಿಕೊಳ್ಳಲೇಬೇಕೆಂಬ ಹಟ ತೊಟ್ಟು ಕರಿನಾಳ ಅಡವಿ, ಮಸಾರಿ ಹೊಲದ ಕಡೆ ಹೆಜ್ಜೆ ಬೆಳೆಸುತ್ತಿದ್ದೆವು. ಹೀಗೆ ಹಟ ತೊಡಲು ಪಾಡ್ಯದ ದಿನ ರತ್ನಪಕ್ಷಿ ನೋಡಿದರೆ ಶ್ರೀಮಂತಿಕೆ ಬರುತ್ತದೆ ಎನ್ನುವ ಏಕೈಕ ಕಾರಣ ಮತ್ತು ಶ್ರೀಮಂತನಾಗಬೇಕು ಎನ್ನುವ ಬಣ್ಣದ ಕನಸು.
ಹೀಗೆ ರತ್ನಪಕ್ಷಿ ಅರಸುತ್ತಾ ಹಾದಿಗುಂಟ ಕಾಣುತ್ತಿದ್ದ ಗಿಡಗಳ ಮೈಮ್ಯಾಲೆಲ್ಲಾ ಕಣ್ಣಾಡಿಸುತ್ತಿದ್ದೆವು. ಆಗ ರತ್ನಪಕ್ಷಿ ಕಾಣದಿದ್ದರೂ ಚಿಗುರೊಡೆದ ಗಿಡಮರಗಳು, ಅವುಗಳ ಕೊರಳೊಳಗೆ ಕುಳಿತು ಎಂತದೋ ತಿಳಿಯದ, ಆದರೆ ಕಿವಿಗೆ ಇಂಪು ಸುರಿಯುತ್ತಿದ್ದ ಹಾಡು ಹಾಡುತ್ತಿದ್ದ ಪಕ್ಷಿಗಳೆಲ್ಲವನ್ನೂ ಮನಸಾರೆ ನೋಡುತ್ತಾ ಮೈ ಮರೆಯುತ್ತಿದ್ದೆವು. ಆಗ ಎಲ್ಲೋ ಒಂದು ಕಡೆ ಮರದಲ್ಲಿ ರತ್ನಪಕ್ಷಿ ಕಾಣುತ್ತಿತ್ತು. ಹರ್ಷದಿಂದ ಅದಕ್ಕೆ ಕೈ ಮುಗಿದು ನಮ್ಮನ್ನು ಶ್ರೀಮಂತರನ್ನಾಗಿಸು ಎಂದು ಬೇಡಿಕೊಳ್ಳುತ್ತಿದ್ದೆವು.
ಮರಳಿ ಮನೆಗೆ ಬಂದಾಗ ಅವ್ವ ತಯಾರಿಸಿದ ಹೋಳಿಗೆ ಕರೆಯುತ್ತಿದ್ದವು. ಖಾರದೂಟದ ಪ್ರಿಯನಾದ ನಾನು ಸಿಹಿ ತಿನಿಸು ಅಷ್ಟೊಂದು ಇಷ್ಟಪಡದಿದ್ದರೂ ಒಂದು ಹೋಳಿಗೆಯನ್ನಂತೂ ತಿಂದು ಯುಗಾದಿಯ ದೋಸ್ತಿ ಮಾಡುತ್ತಿದ್ದೆ. ಯಾಲಕ್ಕಿ, ಲವಂಗ, ಬೆಲ್ಲ, ಬೇವಿನ ಹೂ ಹಾಕಿ ಮಾಡುತ್ತಿದ್ದ ಬೇವು-ಬೆಲ್ಲದ ಪಾನಕ ಕುಡಿದು ಬೇವು-ಬೆಲ್ಲದ ಬದುಕಿಗೆ ಸವಾಲು ಹಾಕುತ್ತಿದ್ದೆವು.






nanagu adenenapu grvar
nanagu adenenapu grvar
Namma haLLi jeevanavannu yathavathagi terefittide baraha.. chennagide..
superb sir
sir… nimm ugadhi odidide hasarinanteye midisiruva e udadhi baraha thuba channagide so aa ugadhigondu subasaya… sir..