ನಾ ದಿವಾಕರ್
ನವಂಬರ್ 14 ಮಕ್ಕಳ ದಿನಾಚರಣೆ. ಬಾಲ್ಯದಿಂದಲೇ ಕೇಳುತ್ತಲೇ ಇರುವ ಕಥೆ ಒಂದಿದೆ. ಮಕ್ಕಳ ದಿನಾಚರಣೆಯನ್ನು ಈ ದಿನವೇ ಏಕೆ ಆಚರಿಸುತ್ತಾರೆ ಎಂದರೆ ಅಂದು ಈ ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಅವರ ಜನ್ಮ ದಿನ. ಚಾಚಾ ನೆಹರೂ ಅವರಿಗೆ ಮಕ್ಕಳೆಂದರೆ ಪ್ರೀತಿ, ಹಾಗಾಗಿ ಅವರ ಜನ್ಮದಿನವನ್ನು ಮಕ್ಕಳ ದಿನ ಎಂದು ಆಚರಿಸಲಾಗುತ್ತದೆ. ಶಾಲಾ ಕಾಲೇಜು ದಿನಗಳಲ್ಲಿ ಈ ಕಥೆಯನ್ನು ಕೇಳಿದರೆ ರೋಚಕ ಎನಿಸುತ್ತಿತ್ತು. ಏಕೆಂದರೆ ಆ ಕಾಲದಲ್ಲಿನ ಆಲೋಚನಾ ಕ್ರಮವೇ ಬೇರೆ. ಹಿರಿಯರು ಗುರುಗಳು ಹೇಳಿದ್ದನ್ನೇ ಕೇಳುವ, ಇತಿಹಾಸದಲ್ಲಿ ಇದ್ದುದನ್ನೇ ನಂಬುವ ಪ್ರವೃತ್ತಿ. ಧಿಕ್ಕರಿಸುವುದಿರಲಿ, ಪ್ರಶ್ನಿಸುವುದೂ ಅಪರಾಧವೇ ಎನ್ನುವ ಕಾಲ. ಹಾಗಾಗಿ ನೆಹರೂ ಅವರಿಗೆ ಮಕ್ಕಳು ಇಷ್ಟ ಎಂದ ಮಾತ್ರಕ್ಕೆ ಅವರ ಜನ್ಮದಿನವನ್ನು ಮಕ್ಕಳದಿನ ಎಂದೇಕೆ ಆಚರಿಸಬೇಕು ಎಂದು ಪ್ರಶ್ನಿಸುವವರಾರೂ ಇರಲಿಲ್ಲ. ಇಂದಿಗೂ ಇಲ್ಲವೆನ್ನಿ. ಪ್ರಶ್ನಿಸಿದವರು ಏನೆಲ್ಲಾ ಅನುಭವಿಸಬೇಕೋ ಎನ್ನುವ ಆತಂಕ ಇಂದಿನ ಪರಿಸ್ಥಿತಿ.
ಇರಲಿ ಚಾಚಾ ನೆಹರೂ ಅವರ ಜನ್ಮದಿನವನ್ನು ಈ ರೀತಿ ಆಚರಿಸುವುದರಲ್ಲಿ ತಪ್ಪೇನೂ ಇಲ್ಲ. ಇಷ್ಟಕ್ಕೂ ಇತಿಹಾಸ, ಪುರಾಣಗಳ ಅವಶೇಷಗಳನ್ನು ಅಗೆದು, ಪಳೆಯುಳಿಕೆಗಳನ್ನು ಹೊರತೆಗೆದು, ಆಗಿಹೋದ ಮಹನೀಯರಿಗೆ ನವ ನವೀನ ಲೇಪನಗಳನ್ನು ನೀಡಿ, ಅವರೆಲ್ಲರಿಗೂ ನಮ್ಮ ಸಮಾಜದ ವಿಶಿಷ್ಟ ಅಸ್ಮಿತೆಗಳನ್ನು ದಯಪಾಲಿಸಿ, ಅವರ ಜನ್ಮದಿನಗಳನ್ನು ಆಚರಿಸುವ ಪರಂಪರೆ ಬೆಳೆಯುತ್ತಿರುವ ಆಧುನಿಕ ಭಾರತದಲ್ಲಿ ಮಕ್ಕಳ ದಿನಾಚರಣೆಯ ಔಚಿತ್ಯವನ್ನು ಪ್ರಶ್ನಿಸುವುದು ಅಷ್ಟೇನೂ ಸಮಂಜಸವಲ್ಲ. ನಮ್ಮ ದೇಶ ಆಚರಣೆಗಳ ನಾಡಲ್ಲವೇ. ಆದರೂ ಭಾರತ 21ನೆಯ ಶತಮಾನದ ಪ್ರಥಮ ದಶಕದ ಅಂಚಿನಲ್ಲಿರುವ ಈ ಸಂದರ್ಭದಲ್ಲಿ, ಈ ರಾಷ್ಟ್ರದ ಭವಿಷ್ಯದ ಪ್ರಜೆಗಳಾದ ಮಕ್ಕಳ ಶ್ರೇಯಸ್ಸಿಗಾಗಿ ಒಂದು ದಿನವನ್ನು ಮುಡಿಪಾಗಿಸಿ ಆಚರಿಸುವ ಮುನ್ನ, ಈ ಮಕ್ಕಳನ್ನು ಭವಿಷ್ಯದ ಮಾರ್ಗದಲ್ಲಿ ಮುನ್ನಡೆಸಬೇಕಾದ ಹಿರಿಯರು ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು.
ಚಾಚಾ ನೆಹರೂ ಅವರಿಗೆ ಮಕ್ಕಳೆಂದರೆ ಪಂಚಪ್ರಾಣ ದಿಟವೇ, ಆದರೆ ದೇಶದ ಪ್ರಥಮ ಪ್ರಧಾನಿಯಾಗಿ ವಿಧಿಯೊಡನೆ ಸಂಧಾನ ನಡೆಸಿದ ಸಂದರ್ಭದಲ್ಲಿ ನೆಹರೂ ಅವರು ಮಕ್ಕಳಿಗಾಗಿ ರೂಪಿಸಿದ ಕಾರ್ಯಕ್ರಮಗಲಾದರೂ ಏನು ? ಸ್ವತಂತ್ರ ಭಾರತ ಸರ್ಕಾರ ತನ್ನ ಘನವೆತ್ತ ಸಂವಿಧಾನವನ್ನು ಅಂಗೀಕರಿಸಿ ಗಣರಾಜ್ಯವಾಗಿ ಹೊರಹೊಮ್ಮಿದ ನಂತರ 15 ವರ್ಷ ಆಳ್ವಿಕೆ ನಡೆಸಿದ ನೆಹರೂ ಮಕ್ಕಳ ಶ್ರೇಯಸ್ಸಿಗಾಗಿ ಕೈಗೊಂಡ ಕ್ರಮಗಳೇನು ? ಸಂವಿಧಾನದ ಆಶಯಗಳನ್ನಾದರೂ ಈಡೇರಿಸುವ ಪ್ರಯತ್ನಗಳು ನಡೆದಿದ್ದವೇ ? ಈ ಎಲ್ಲಾ ಪ್ರಶ್ನೆಗಳನ್ನು ಎದುರಿಸಿದಾಗ ಕೆಲವೊಮ್ಮೆ ಇಂದಿನ ಹಿರಿ ಪೀಳಿಗೆ ಮೌನಕ್ಕೆ ಶರಣಾಗಬಹುದು !
ವಾಸ್ತವತೆಯ ನೆರಳಲ್ಲಿ
ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿ ಆರು ದಶಕಗಳು ಕಳೆದರೂ ಭಾರತದ ಆಳ್ವಿಕರು ಸಾರ್ವತ್ರಿಕ ಶಿಕ್ಷಣವನ್ನು ಸಂಪೂರ್ಣವಾಗಿ ಅನುಷ್ಟಾನಗೊಳಿಸದಿರುವುದೇ ಅತಿ ದೊಡ್ಡ ವೈಫಲ್ಯ. ಇಂದಿಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣ ದೇಶದ ಮಕ್ಕಳಿಗೆ ಗಗನ ಕುಸುಮವಾಗಿಯೇ ಉಳಿದಿರುವುದರ ಕಾರಣವೇನು ? ಸಂಪನ್ಮೂಲಗಳ ಕೊರತೆಯೇ, ಬಡತನವೇ, ದಾರಿದ್ರ್ಯತೆಯೇ, ಜನತೆಯ ನಿರ್ಲಕ್ಷ್ಯವೇ, ಆಳ್ವಿಕರ ನಿಷ್ಕ್ರಿಯತೆಯೇ ? ಇವೆಲ್ಲವನ್ನೂ ಮೀರಿಸುವ ಕಾರಣವೆಂದರೆ ರಾಜಕೀಯ ಇಚ್ಚಾಶಕ್ತಿಯ ಕೊರತೆ. ಶಿಕ್ಷಣ ಮೂಲಭೂತ ಹಕ್ಕು ಎಂದು ಸಂವಿಧಾನ ಹೇಳುತ್ತದೆ. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಈ ಹಕ್ಕನ್ನು ದಯಪಾಲಿಸಿದ್ದರೂ ಅದು ಜನತೆಗೆ ಲಭ್ಯವಾಗುತ್ತಿಲ್ಲ. ಏಕೆಂದರೆ ಬಂಡವಾಳವೇ ಪ್ರಧಾನ ಸೂತ್ರಧಾರಿಯಾಗಿರುವ ಈ ದೇಶದಲ್ಲಿ ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕು ಆಗಿದ್ದರೂ ಶಿಕ್ಷಣ ನೀಡುವುದು ಆಳ್ವಿಕರ ಆದ್ಯ ಕರ್ತವ್ಯವಾಗಿಲ್ಲ. ಸಂವಿಧಾನಾತ್ಮಕವಾಗಿ ಹೊಣೆಗಾರಿಕೆ ಹೊತ್ತಿರುವ ಕೇಂದ್ರ-ರಾಜ್ಯ ಸರ್ಕಾರಗಳು ನೈತಿಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಅನುಸರಿಸುವ ಮಾರ್ಗಗಳು ಹಲವಾರು. ಸಂಸತ್ತಿನಲ್ಲಿ ಏಕಮಾದ್ವಿತೀಯ ಪಕ್ಷವಾಗಿದ್ದ ನೆಹರೂ ನೇತೃತ್ವದ ಕಾಂಗ್ರೆಸ್ ಸರ್ಕಾರ ಕನಿಷ್ಠ ಪಕ್ಷ ಈ ಮೂಲಭೂತ ಸಾಂವಿಧಾನಿಕ ಹಕ್ಕನ್ನಾದರೂ ಭಾರತದ ಮಕ್ಕಳಿಗೆ ದಯಪಾಲಿಸಬಹುದಿತ್ತು.
ಪ್ರಾಥಮಿಕ ಶಿಕ್ಷಣದಿಂದಲೇ ವಂಚಿತರಾದ ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವಂತೆಲ್ಲಾ ಬಡತನದಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯೂ ಏರುತ್ತಲೇ ಇದೆ. ಶಾಲೆಗಳಲ್ಲಿ ಉಚಿತ ಬಿಸಿ ಊಟ ನೀಡಿದರೂ ವಿದ್ಯೆ ಒಲ್ಲೆ ಎನ್ನುವ ಹಸುಳೆಗಳು ಹೆಚ್ಚಾಗುತ್ತಿರುವುದು ಬಡತನದ ಪರಿಣಾಮವೇ ಹೊರತು ಇಚ್ಚಾಶಕ್ತಿಯ ಕೊರತೆಯಲ್ಲ. ಭಾರತದಲ್ಲಿ ಇಂದು ದಿನಂಪ್ರತಿ ಕನಿಷ್ಠ ಹತ್ತು ಸಾವಿರ ಮಕ್ಕಳು ರೋಗಗಳಿಂದ ಭಾದಿತರಾಗಿ ಸಾವನ್ನಪ್ಪುತ್ತವೆ ಎಂದರೆ ನಂಬುವುದು ಕಷ್ಟ. ಆದರೆ ಇದು ವಾಸ್ತವ. ಸರ್ಕಾರವೇ ಒದಗಿಸಿದ ದಾಖಲೆ. ಯಾವುದೇ ಸುನಾಮಿ, ಚಂಡಮಾರುತವೂ ಮಾಡದಷ್ಟು ಹಾನಿಯನ್ನು ಈ ರೋಗ ರುಜಿನಗಳು ಮಾಡುತ್ತಿವೆ. ಮತ್ತೊಂದೆಡೆ ಕೃಷಿ ಬಿಕ್ಕಟ್ಟು, ಗ್ರಾಮೀಣ ಬಡತನ, ವಲಸೆ ಸಮಸ್ಯೆ, ನೈಸರ್ಗಿಕ ವಿಕೋಪಗಳಿಗೆ ತುತ್ತಾಗಿ ಬಡ ಜನತೆ ಜವರಾಯನ ಪಾದ ಸೇರುತ್ತಿರುವಂತೆಲ್ಲಾ ಅನಾಥ ಶಿಶುಗಳ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಏಕೆ ಹೀಗೆ ?
ಒಂದು ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಶೇ. 46ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ, ಶೇ. 38ರಷ್ಟು ಮಕ್ಕಳು ಕುಂಠಿತ ಬೆಳವಣಿಗೆ ಹೊಂದಿದ್ದಾರೆ. ಶೇ. 20ರಷ್ಟು ಮಕ್ಕಳು ಮೂರು ವರ್ಷ ಪೂರೈಸುವ ಮುನ್ನವೇ ಇಹಲೋಕ ತ್ಯಜಿಸುತ್ತಿದ್ದಾರೆ. ಶೇ. 53ರಷ್ಟು ಮಕ್ಕಳು ಯಾವುದೋ ಒಂದು ರೀತಿಯ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿದ್ದಾರೆ. ಬಡತನದ ಬೇಗೆಯಲ್ಲಿ ಬೆಂದು ಬದುಕುಳಿಯಲು ದಿನವಿಡೀ ಬೆವರು ಸುರಿಸಿ ದುಡಿಯುವ ಮಕ್ಕಳ ಸಂಖ್ಯೆ 2 ಕೋಟಿಗೂ ಹೆಚ್ಚು. ದೇಶದ 581 ಜಿಲ್ಲೆಗಳ ಪೈಕಿ 180 ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲೆಗಳಲ್ಲಿನ ಸೇರ್ಪಡೆ ಕ್ಷೀಣಿಸುತ್ತಿದೆ. ಇನ್ನು ನಮ್ಮ ಶಾಲೆಗಳ ದುಸ್ಥಿತಿ ಹೇಳುವುದೇ ಬೇಡ ಎನಿಸುತ್ತದೆ. ಶೇ. 10ರಷ್ಟು ಶಾಲೆಗಳಲ್ಲಿ ಕಪ್ಪು ಹಲಗೆಯೇ ಇರುವುದಿಲ್ಲ. ಸಾವಿರಾರು ಶಾಲೆಗಳಿಗೆ ಗಗನವೇ ಸೂರು. ಪ್ರಾಥಮಿಕ ತರಗತಿಗಳನ್ನು ಪೂರೈಸಿದ ಶೇ.50ಕ್ಕೂ ಹೆಚ್ಚು ಮಕ್ಕಳು ಪುನಃ ಶಾಲೆಗೆ ಮರಳಿ ಬರುವುದಿಲ್ಲ. ಹಾಗೂ ಹೀಗೂ ಪ್ರೌಢಶಾಲಾ ಮಟ್ಟವನ್ನು ಮುಗಿಸಿದರೂ ಕಾಲೇಜಿಗೆ ಹೋಗುವ ಮಕ್ಕಳ ಪ್ರಮಾಣ ಶೇ. 20ರಷ್ಟೂ ಇಲ್ಲ. ಇದು ಕಟು ವಾಸ್ತವ.
ಭಾರತದ ಆಳ್ವಿಕರು ದೇಶದ ಮಕ್ಕಳಿಗೆ ಉಚಿತ ಸಾರ್ವತ್ರಿಕ ಶಿಕ್ಷಣ ಒದಗಿಸುವ ಹೊಣೆಗಾರಿಕೆಯನ್ನು ಖಾಸಗಿಯವರಿಗೆ ಒಪ್ಪಿಸುತ್ತಿರುವ ಈ ಸಂದರ್ಭದಲ್ಲಿ ಶಿಕ್ಷಣದ ಹಕ್ಕು ಕಾಯ್ದೆಯೂ ಖಾಸಗಿಯವರ ಕುತಂತ್ರಗಳಿಗೆ ಬಲಿಯಾಗುತ್ತಿರುವುದು ಅಪಾಯಕರ ಬೆಳವಣಿಗೆಯಾಗಿದೆ. ಮರಳಿ ಬಾ ಶಾಲೆಗೆ, ಸರ್ವ ಶಿಕ್ಷಣ ಅಭಿಯಾನ ಮುಂತಾದ ಉನ್ನತ ಧ್ಯೇಯಗಳನ್ನೊಳಗೊಂಡ ಕಾರ್ಯಕ್ರಮಗಳು ಅಲ್ಪ ಮಟ್ಟಿನ ಯಶಸ್ಸು ಸಾಧಿಸಿದ್ದರೂ ಈ ಕಾರ್ಯಕ್ರಮಗಳ ಮೂಲಕ ಮಕ್ಕಳನ್ನು ಶಾಲೆಗಳಲ್ಲಿ ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಸಕರ್ಾರಗಳು ವಿಫಲವಾಗಿವೆ. ದೇಶದ ಶೇ. 77ರಷ್ಟು ಶ್ರಮಿಕ ವರ್ಗಗಳು ದಿನಕ್ಕೆ 20 ರೂಗಳಿಗಿಂತಲೂ ಕಡಿಮೆ ಆದಾಯ ಗಳಿಸುತ್ತಿರುವಾಗ ಈ ಜನತೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಾದರೂ ಹೇಗೆ ? ಇವರಿಗೆ ಮಕ್ಕಳು ಆದಾಯ ಗಳಿಸುವ ಸ್ವತ್ತುಗಳಾಗುತ್ತಾರೆ ಆದರೆ ಮಕ್ಕಳ ಶಿಕ್ಷಣ ಹೊರೆಯಾಗುತ್ತದೆ. ಈ ಹೊರೆಯನ್ನು ಕಡಿಮೆ ಮಾಡುವ ಹೊಣೆಗಾರಿಕೆ ಯಾರದು ? ವಿಧಿಯೊಡನೆ ನಡೆಸಿದ ಸಂಧಾನ ಪ್ರಜೆಗಳೊಡನೆ ನಡೆಸಿದ್ದಲ್ಲಿ ಈ ಪರಿಸ್ಥಿತಿ ಬರುತ್ತಿರಲಿಲ್ಲವೇನೋ ?
ಪ್ರಗತಿಯ ನೆರಳಲ್ಲಿ
ಭಾರತದ ಜಿಡಿಪಿಯಲ್ಲಿ ಉಂಟಾಗಿರುವ ಪ್ರಗತಿ ಈ ಎಲ್ಲಾ ವಾಸ್ತವಗಳನ್ನೂ ಮುಚ್ಚಿಹಾಕಿಬಿಡುತ್ತದೆ. ಆದರೆ ಬಡ ಜನತೆಯ, ಅವಕಾಶ ವಂಚಿತ ಮಕ್ಕಳ ಕಣ್ಣೀರನ್ನು ಒರೆಸಲು ಜಿಡಿಪಿ ನೆರವಾಗುವುದಿಲ್ಲ. ಅಮೆರಿಕದ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿ ಪ್ರತಿಷ್ಠಿತ ಶಾಲೆಗಳಿಗೆ ಭೇಟಿ ನೀಡಿದ ಮಾತ್ರಕ್ಕೆ ಭಾರತದಲ್ಲಿ ಮಕ್ಕಳು ಪುಳಕಿತಗೊಳ್ಳುವಂತಿಲ್ಲ. ಏಕೆಂದರೆ ಒಬಾಮ ಅವರ ಕಣ್ಣಿಗೆ ಗೋಚರಿಸದ ಘೋರ ಸತ್ಯಗಳು ಭಾರತದ ಗ್ರಾಮಗಳಲ್ಲಿ, ಪಟ್ಟಣಗಳಲ್ಲಿ, ಸ್ಲಂಗಳಲ್ಲಿ ಅಡಗಿವೆ. ತಾಯಿಯ ಹಾಲನ್ನೂ ಪಡೆಯಲಾಗದ ದುರ್ಭಾಗ್ಯದ ಮಕ್ಕಳು ಅಪೌಷ್ಟಿಕತೆಯಿಂದ ಬಳಲಿ ಕಣ್ತೆರೆಯುವ ಮುನ್ನವೇ ಕಣ್ಮುಚ್ಚುತ್ತವೆ. ದೆಹಲಿ, ಮುಂಬೈನಲ್ಲಿರುವ ಶ್ರೀಮಂತ ಶಾಲಾ ಮಕ್ಕಳು ಒಬಾಮ ಅವರೊಡನೆ ನಕ್ಕುನಲಿಯುತ್ತಿರುವ ಒಂದೆರಡು ಗಂಟೆಗಳಲ್ಲೇ ಭಾರತದಲ್ಲಿ ಸಾವಿರ ಬಡಮಕ್ಕಳು ಸದ್ದಿಲ್ಲದೆ ಸಾವನ್ನಪ್ಪಿರುತ್ತವೆ.
ಚಾಚಾ ನೆಹರೂ ಅವರ ನೆನಪಿನಲ್ಲಿ ಮಕ್ಕಳ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸುವಾಗ ಯಾವ ಮಕ್ಕಳು ಗಮನದಲ್ಲಿರುತ್ತಾರೆ ಎಂಬುದೇ ಮೂರ್ತ ಪ್ರಶ್ನೆ ? ಡೂನ್ ವ್ಯಾಲಿ ಶಾಲೆಯ ಮಕ್ಕಳು ರಂಗುರಂಗಿನ ಪೋಷಾಕಿನಲ್ಲಿ ಚಾಚಾ ನೆಹರೂ ಅವರಿಗೆ ನಮಿಸುತ್ತಿದ್ದರೆ, ಲಕ್ಷಾಂತರ ಮಕ್ಕಳು ಸ್ಲಂಗಳಲ್ಲಿ, ಕಸದ ತೊಟ್ಟಿಗಳಲ್ಲಿ ಆಹಾರವನ್ನು ಹುಡುಕುತ್ತಿರುತ್ತವೆ. ಭವ್ಯ ಪಂಚತಾರಾ ಹೊಟೆಲುಗಳಲ್ಲಿ ಶ್ರೀಮಂತ ಮಕ್ಕಳು ಕೇಕ್ ಕತ್ತರಿಸಿ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿದ್ದರೆ ಲಕ್ಷಾಂತರ ಮಕ್ಕಳು ತಮ್ಮ ಮರುಕ್ಷಣದ ಕೂಲಿಗಾಗಿ ಬೆವರು ಹರಿಸಿ ದುಡಿಯುತ್ತಿರುತ್ತವೆ. ಶಾಲೆಗಳಲ್ಲಿ ಸಮವಸ್ತ್ರ ಧರಿಸಿ ಭವ್ಯ ಭಾರತ ಪರಂಪರೆಯ ವೈಭವದಲ್ಲಿ ಮಕ್ಕಳು ಮೆರೆಯುತ್ತಿದ್ದಂತೆಯೇ ಅಲ್ಲಿ ಹಂಚುವ ಸಿಹಿ ತಿಂಡಿಗಾಗಿ ನೂರಾರು ಮಕ್ಕಳು ಚಿಂದಿ ಬಟ್ಟೆ ತೊಟ್ಟು ಗೇಟಿನ ಆಚೆ ಕಾಯುತ್ತಿರುತ್ತವೆ.
ಆರು ದಶಕಗಳ ಸ್ವತಂತ್ರ ಭಾರತದ ಆಳ್ವಿಕರು ದೇಶದ ಸಮಸ್ತ ಮಕ್ಕಳ ಮುಂದೆ ಇಂದು ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಿದೆ. ತಪ್ಪು ಯಾರದು ಎನ್ನುವುದಕ್ಕಿಂತಲೂ ಕಾಡುವ ಪ್ರಶ್ನೆ ಎಂದರೆ, ನಾವು ನವಂಬರ್ 14ರಂದು ಆಚರಿಸುವುದು ಯಾವ ಮಕ್ಕಳ ದಿನಾಚರಣೆಯನ್ನು ?







Lekhana tumba chennagide
ತುಂಬಾನೇ ಹರಿತ… ಕಣ್ಣಲ್ಲಿ ನೀರೇ ಬಂತು..