ಸಾಮಾನ್ಯವಾಗಿ ಎಲ್ಲಾ ಮಾಧ್ಯಮಗಳಲ್ಲಿ ‘ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ..’ ಎಂದು ಒಂದು ಫೋಟೋದಲ್ಲಿ ಮುಗಿದು ಹೋಗುವ ಸುದ್ದಿಗಳ ಹಿಂದೆ ಇರುವ ಕಥೆ ಎನು. ಅಂತಹ ಒಂದು ಬೇಡಿಕೆಯನ್ನು ಕೆ ಮಹಾಂತೇಶ್ ಇಲ್ಲಿ ಶೋಧಿಸಿದ್ದಾರೆ. ಒಂದು ನಿಟ್ಟುಸಿರು ಹೊರಬಿದ್ದಿದೆ..

ಕೆ.ಮಹಾಂತೇಶ
ಈ ಹೂಸ ಸರ್ಕಾರದವರ್ರು ಬಡವ್ರಿಗೆ ಅಕ್ಕಿಯೇನೂ ಕೊಡಾಕೆ ಚಾಲು ಮಾಡ್ಯರ್ರೀ.. ಅದು ನಮ್ಮಂತಾ ದುಡಿದು ತಿನ್ನೋ ಮಂದಿಗೆ ಖರೆ ಅಂದ್ರೂ ಅದು ಚಲೋನೇ ಬಿಡ್ರೀ ಆದ್ರಾ…ನಮ್ಗೆ ಬಿಪಿಎಲ್ ಕಾರ್ಡ ಅನ್ನೋದೇ ಸಿಕ್ಕಿಲ್ಲ ನೋಡ್ರೀ, ನಮ್ಮಂತ ಬಡವ್ರರ್ನ ಸ್ವಲ್ಪ ಈ ಸರ್ಕಾರದವ್ರ ಹೊಟ್ಟೆಗ್ಹಾಕಳಂಗ ನೀವೇ ಏನಾದ್ರು ಮಾಡ್ರಪ್ಪೋ..ಅಂತಾ ರಾಯಚೂರಿನಿಂದ ಬೆಂಗಳೂರಿಗೆ ಬಂದಿದ್ದ ಹತ್ತಾರು ಕೂಲಿ ಮಾಡೋ ಹೆಣ್ಮಕ್ಕಳು ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ಸುರಿಯೋ ಮಳೆ ಲೆಕ್ಕಿಸದೇ ತಮ್ಮ ಕಷ್ಟನಾ ಹೇಳ್ತಾನೇ ಇದ್ರು..
ಅವ್ರಿಗೆ ಹೋರಾಟ ಮಾಡೋಣ ಅಂತಾ ಸಮಧಾನದ ನಾಕ್ ಮಾತ ಹೇಳಿ ಮುಗಸದ್ರೋಳಗೆ ಹಿರಿಯೂರಿನ ಹಮಾಲಿ ತಾಯಂದಿರು ಬಂದು ಸುತ್ತುವರೆದ್ರು. ಇಪ್ಪತ್ತು ವರ್ಷದಿಂದ ಗಾಣದ ಎತ್ತಿನ ತರ ದುಡಿತಾನೆ ಇದ್ದೇವೆ ಆದ್ರೂ ನಮ್ಗೊಂದು ತಲೆ ಮೇಲೆ ಸೂರು ಅನ್ನೋದೇ ಇಲ್ಲ.. ಎಷ್ಟಸಲಂತಾ ಬೆಂಗ್ಳೂರಿಗೆ ಬಂದೋಗದೇ ಆಗಿದೆ. ಆದ್ರೆ ಮನೇ ಅನ್ನೋದು ಸಿಕ್ಕಿಲ್ಲ ಅಂತಾ ಗೋಳು ತೋಡಿಕೊಂಡ್ರು..
ಹೌದು ‘ಯಾವ ರಾಜ ಬಂದ್ರು ರಾಗಿ ಬೀಸೋದು ತಪ್ಪಲಿಲ್ಲ’ ಅನೋದು ದುಡಿಯೋ ವರ್ಗದ ಮಂದಿ ಆಡೋ ಸಾಮನ್ಯ ಮಾತು. ಈಗ್ಲೂ ಅಷ್ಟೇ. ಯಡಿಯೂರಪ್ಪ ಹೋದಾ..ಸದಾನಂದಗೌಡ ಬಂದ, ಸದಾನಂದಗೌಡ ಹೋದಾ.. ಶೆಟ್ಟರ್ ಬಂದ. ಈಗ ಶೆಟ್ಟರ್ ಹೋದ್ರು.. ಸಿದ್ದರಾಮಯ್ಯ ಬಂದ್ರು ಢುಂ..ಢುಂ ಅನೋ ರೀತಿಯ ಮಕ್ಕಳ ಕಥೆಯಾಗಿದೆ ಇವತ್ತಿನ ರಾಜಕೀಯ ಪರಿಸ್ಥಿತಿ. ನೇತಾರರು..ಪಕ್ಷಗಳೂ ಬದಲಾಗುತ್ತಿವೆ ಅಷ್ಟೇ ! ಆದರೆ ನೀತಿಗಳು ಬಡವರ ಪರವಾಗಿ ದುಡಿಯೋರಾ ಪರವಾಗಿ ಬದಲಾಗುತ್ತಿಲ್ಲ. ಈ ಕಾರಣದಿಂದ್ಲೇ. ಮೇಲ್ಕಂಡ ಮಹಿಳೆಯರೂ ಸೇರಿದಂತೆ ದುಡಿದು ತಿನ್ನೋ ಜನಕ್ಕೆಲ್ಲಾ ಹೋಟ್ಟೆ ತುಂಬಾ ಊಟ ಮಾಡಲಿಕ್ಕೆ ರೇಷನ್ ಬೇಕು ಅನ್ನೋ ಬೇಡಿಕೆಗಳಾಗಲಿ ಅಥವಾ ತಲೆಮೇಲೊಂದು ಎಲ್ಲಾರಿಗೂ ಸೂರು ಸಿಗಬೇಕೆಂಬ ಆಗ್ರಹಕ್ಕೆ ಹಿಂದಿನ ಬಿಜೆಪಿ ಸರ್ಕಾರದಲಂತೂ ಆದ್ಯತೆನೇ ಇರಲಿಲ್ಲ. ಕನಿಷ್ಟ ಕೂಲಿ ಬೇಕಂತಾ ಹೋರಾಟ ಮಾಡಿದ ಜನ್ರ ತಲೆ ಹೊಡ್ದು ಜೈಲಿಗೆ ಹಾಕಿದ್ರೇ ಹೂರತು ಬೇಡಿಕೆ ಈಡೇರಿಸಲಿಲ್ಲ. ಆದ್ರೆ ಇವತ್ತಿನ ಕಾಂಗ್ರೆಸ್ ಸರ್ಕಾರಕ್ಕಾದ್ರೂ ಇರೋ ಆಧ್ಯತೆ ಏನೂ ಅನ್ನೋದನ್ನ ಸಿದ್ದರಾಮಯ್ಯ ಬಜೆಟ್ನಲ್ಲಿ ತೋರಿಸಿದ್ದಾರೆ. 2011 ರ ಜನಸಂಖ್ಯೆ ಗಣತಿ ಪ್ರಕಾರ ರಾಜ್ಯದಲ್ಲಿರುವ ಅಸಂಘಟಿತ ಕಾರ್ಮಿಕರ ಸಂಖ್ಯೆ 2.90 ಕೋಟಿ! ಇಷ್ಟು ಜನರಿಗೆ ಮುಖ್ಯ ಮಂತ್ರಿಗಳು ಬಜೆಟ್ನಲ್ಲಿ ನೀಡಿರುವ ನ್ಯಾಯ ಏನು? ಅವರೇ ಉತ್ತರಿಸಬೇಕು. ಹೀಗಾಗಿಯೇ ದುಡಿಯೋ ಜನಕ್ಕೆ ಅವ್ರ ಬದುಕಬೇಕು ಅಂದ್ರೆ ಹೋರಾಟ ಮಾಡ್ದೆ ಬೇರೆ ದಾರಿಯೇ ಇಲ್ಲ.
ದುಡಿಯೋರಿಗೆ ಮಳೆ ಬಂದ್ರೆ ನೆರೆಹಾವಳಿ ಕಾಟ. ಬರ ಬಂದ್ರೆ ಕೂಲಿಗಾಗಿ ಪರದಾಟ. ಆದ್ರೆ ಅಧಿಕಾರಿಗಳು ಗುತ್ತಿಗೆದಾರರು ಮತ್ತು ಎಂಮೆಲ್ಲೆ-ಮಂತ್ರಿಗಳಿಗೆ ಬರಬಂದ್ರೂ ಲಾಭ..ನೆರೆ ಬಂದ್ರೂನೂ ಲಾಭನೇ. ಇದನ್ನೇ ಅಲ್ವ ಸಾಯಿನಾಥ್ ದೇಶದ ತುಂಬಾ ಓಡಾಡಿ ಕಂಡಿದ್ದನ್ನಾ ‘ಬರ ಅಂದ್ರೆ ಎಲ್ಲರಿಗೂ ಇಷ್ಟ ಅಂತಾ ಬರೆದಿದ್ದು. ಆದ್ರಿಂದ್ಲೇ..ಊರಾಗ ತುಂಬಾ ಮಳೆ ಬರ್ತಾಯಿದೆ. ಕೂಲಿ ಬೇರೆ ಇಲ್ಲ. ಮಾರ್ಕೆಟ್ಗಳೂ ನಡಿತಿಲ್ಲ. ಅಂತಾ ಬದುಕಿನಾ ಮ್ಯಾಲೆನೇ ಬೇಸ್ರ ಮಾಡ್ಕಂಡ ಜನ
ಬೆಂದೂರು..ಬೆವರೂರು
ಬಡತನದ ತವರೂರಾದ ಬೆಂಗಳೂರಿನತ್ತ.. ಅಹಿಂದಾ(ಅಲ್ಲಸಂಖ್ಯಾತರು-ಹಿಂದುಳಿದವರು- ದಲಿತರು) ಹೆಸರ್ನ್ಯಾಗ ಪೆಮಸ್ಸಾಗಿ ಈಗ ಮುಖ್ಯ ಮಂತ್ರಿ ಆಗಿರೋ ಸಿದ್ದರಾಮಣ್ಣ ಬಜೆಟ್ಟ್ನಲ್ಲಿ ಯಾಕ್ ನಮ್ಮತ್ರ ತಿರುಗಿಲ್ಲಾ ಅಂತಾ.. ಕೇಳೋಕೇ ಬಂದಿದ್ರು. ಹಿಂದಿನ ದಿನವೇ ತಮ್ಮತಮ್ಮ ಊರುಗಳಿಂದ ರೊಟ್ಟಿ ಬುತ್ತಿ ಕಟ್ಟಿಕೊಂಡು ಜುಲೈ 18 ರಂದು ಸಾವಿರಾರು ಸಂಖ್ಯೆಯಲ್ಲಿ ಮುಖ ಮಾಡಿದ್ರು…ದುರಂತ ಅಂದ್ರೆ ನೂರಾರು ಮೈಲಿ ರಾತ್ರಿ ನಿದ್ದೆಗೆಟ್ಟು ಹೂಟ್ಟೆ ಹಸಿದ್ಕೋಂಡು ಸಾವಿರಾರು ಜನ್ರು ಬಂದ್ರೆ ಸರ್ಕಾರದವ್ರರಿಗೆ ಹೋಗ್ಲೀ ಮೇನ್ ಸ್ಟ್ರೀಮ್ ಅಂತಾ ಹೇಳ್ಕೋಳ್ಳೋ ಮಿಡಿಯಾದವರ್ರಿಗೆ ಅದು ಸುದ್ದಿಯೇ ಆಗಲಿಲ್ಲ. ಇನ್ನೂ ‘ಗುಲಾಬಿ ನಗರದಾಗ ಬಡವರ್ರಗೇನು ಕೆಲ್ಸ’ ಅಂತಾ ಕೈಯಾಗಿನ ಅರ್ಜಿ ಕಸ್ಕೊಂಡಾ ಅಧಿಕಾರಿಗಳು ಒತ್ತಡ ಹಾಕಿ ಮತ್ ಅವ್ರನ್ನಾ ಊರಿಗೆ ಸಾಗಹಾಕಿದ್ರು.
ರಟ್ಟೇ ಬಿಟ್ರೇ.. ಆಸ್ತಿಯೇ ಇಲ್ಲದವ್ರು..
ರಾಜ್ಯದಲ್ಲಿರೋ 155 ಮುಖ್ಯ ಹಾಗೂ 355 ಉಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಾವಿರಾರು ಕಾರ್ಮಿಕರು ಕೇವಲ ಸೀಜನ್ ವೇಳೆಯಲ್ಲಿ ಮಾತ್ರ ಸಿಗುವ ಕೂಲಿ ಮಾತ್ರವೇ ನಂಬಿ ಕೆಲಸ ಮಾಡುತ್ತಿದ್ದಾರೆ. ಉಳಿದಂತೆ ಆರೇಳು ತಿಂಗಳು ನಿರುದ್ಯೊಗಿಗಳಾಗಿ ಬದುಕು ಸಾಗಿಸುವ ಪರಿಸ್ಥಿತಿ ಈ ಕುರಿತು ಕಾರ್ಮಿಕರು ಸರ್ಕಾರದ ಗಮನ ಸೆಳೆಯುವ ಹೋರಾಟ ನೆಡೆಸಿದ ಪರಿಣಾಮವಾಗಿ ಒಂದೆರಡು ಸೌಲಭ್ಯಗಳೇನೋ ಸಿಕ್ಕಿವೆ ಆದ್ರೆ ಉಳಿದ ಎಲ್ಲಾ ಬೇಡಿಕೆಗಳು ಕೇವಲ ಸುತ್ತೋಲೆಯಲ್ಲಿ ಮಾತ್ರವೇ ಸುತ್ತಾಡುತ್ತಿವೆ. ಅಲ್ಲಿ ಕೆಲ್ಸ ಮಾಡೋ ಕಾರ್ಮಿಕರಿಗೆ ಕೂಲಿಯೊಂದನ್ನು ಹೂರತುಪಡಿಸಿ ಯಾವುದೇ ಸಾಮಾಜಿಕ ಭದ್ರತೆ ಅನ್ನೋದು ಇಲ್ಲ. ಇನ್ನೂ 2011 ನೇ ಸಾಲಿನಲ್ಲಿ ರಾಜ್ಯದ ಎಪಿಎಂಸಿ ಮಾರುಕಟ್ಟೆಗಳು ಸುಮಾರು 23 ಸಾವಿರ ಕೋಟಿ ಕೃಷಿ ಉತ್ಪನ್ನ ವಹಿವಾಟು ನಡೆಸಿವೆ. ಅದರಲ್ಲಿ ಸುಮಾರು 316 ಕೋಟಿಯಷ್ಟು ಹಣ ಮಾರುಕಟ್ಟೆ ಹಾಗೂ ಲೈಸೆನ್ಸ್ ಶುಲ್ಕ ರೂಪದಲ್ಲಿ ಇಲಾಖೆ ಬೊಕ್ಕಸ ತುಂಬಿದೆ. ಆದ್ರೆ ಅದರಲ್ಲಿ ಹಮಾಲಿ ಕಾಮರ್ಿಕರ ಕಲ್ಯಾಣಕ್ಕಾಗಿ ಖರ್ಚು ಮಾಡಿರೋ ಹಣ ತುಂಬಾ ಕಡಿಮೆ. ಹೀಗಾಗಿಯೇ ಪ್ರತಿ ಎಪಿಎಂಸಿ ವಹಿವಾಟಿನ ಶೇ 10 ರಷ್ಟು ಹಣವನ್ನು ಇವ್ರ ಕಲ್ಯಾಣಕ್ಕಾಗಿ ಮೀಸಲಿರಿಸಬೇಕು. ಇಲಾಖೆಯಿಂದಲೇ ವಸತಿ ಯೋಜನೆ ಜಾರಿ ಮಾಡಬೇಕು ಅನ್ನೋದು ಈ ಬೆಂಗಳೂರು ಹೋರಾಟದ ಪ್ರಮುಖ ಬೇಡಿಕೆಯಾಗಿತ್ತು.
ಪುಸ್ತಕದ ಬದನೆಕಾಯಿ ಕಾನೂನು..
ಮತ್ತೊಂದು ಕಡೆ ಅಕ್ಕಿ ಗಿರಣಿ, ಎಣ್ಣೆ, ಬೇಳೆ ಮಿಲ್ಗಳಲ್ಲಿ, ಎಫ್ಸಿಐ ಗೋಡಾನ್. ಸೆಂಟ್ರಲ್ ಮತ್ತು ಸ್ಟೇಟ್ ವೇರ್ ಹೌಸ್, ಆಹಾರ ನಿಗಮ ಮತ್ತು ಪಾನೀಯ ನಿಗಮ, ರೇಷ್ಮೇ ಮಾರುಕಟ್ಟೆ ಮತ್ತು ರೇಲ್ವೇ ಗೂಡ್ ಶೆಡ್ ಹಾಗೂ ಸರ್ಕಾರಿ/ಖಾಸಗಿ ಬಸ್ ನಿಲ್ದಾಣಗಳು ಮತ್ತು ನಗರ/ಗ್ರಾಮೀಣ ಮಾರುಕಟ್ಟೆ (ಬಜಾರ್) ಪ್ರದೇಶಗಳಲ್ಲಿ ಕೂಡ ಸಾವಿರಾರು ಕಾರ್ಮಿಕರು ಹತ್ತಾರು ವರ್ಷಗಳಿಂದ ತಮ್ಮ ಬದುಕು ಸವೆಸುತ್ತಿದ್ದಾರೆ. ಈ ಕೆಲಸ ಮಾಡೋ ಕಾರ್ಮಿಕರಿಗಾಗಿಯೇ ಕನಿಷ್ಟ ಕೂಲಿ, ರಜಾ ಸೌಲಭ್ಯ, ಬೋನಸ್, ಗ್ರಾಚುಟಿ, ವಿಮಾ ಸೌಲಭ್ಯಗಳನ್ನು ಒದಗಿಸಬೇಕು ಅನ್ನೋ ಕಾನೂನುಗಳಿವೆ. ಆದರೆ ಅವೆಲ್ಲಾ ಪುಸ್ತಕದ ಬದನೆ ಕಾಯಿಗಳಾಗಿವೆ. ಮಾಲೀಕರು, ಕಾರ್ಮಿಕ ಅಧಿಕಾರಿಗಳು ಒಂದಾಗಿ ಈ ಎಲ್ಲಾ ಸೌಲಭ್ಯಗಳು ಕಾರ್ಮಿಕರಿಗೆ ನಿರಾಕರಿಸುತ್ತಿದ್ದಾರೆ.
ಮಂಡಳಿ ಲಾಭ ಅಧಿಕಾರಿಗಳಿಗೆ ಮಾತ್ರ !
ಇಂತಹ ಹಮಾಲರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗಾಗಿಯೇ ಸರ್ಕಾರ ‘ಸಾಮಾಜಿಕ ಮಂಡಳಿ’ಯನ್ನು ರಚಿಸಿದೆ. ಆದ್ರೆ ಅದು ಅನುದಾನ ಮತ್ತು ಸಂಪನ್ಮೂಲ ಕೊರತೆಯಿಂದಾಗಿ ಯಾವುದೇ ಕಾರ್ಯಕ್ರಮಗಳನ್ನು ಘೋಷಿಸಿಲ್ಲ. ಒಂದೇ ಮಾತಿನಲ್ಲಿ ಹೇಳೋದಾದ್ರೇ ಪ್ರತಿ ವರ್ಷದ ಬಜೆಟ್ನಲ್ಲಿ ಅತ್ಯಂತ ಕಡಿಮೆ ಅನುದಾನ ಪಡೆಯುವ ಇಲಾಖೆ ಎಂದರೆ ಅದು ಕಾರ್ಮಿಕ ಇಲಾಖೆ ಮಾತ್ರವೇ ! ಇನ್ನೂ ಅನುದಾನ ಸಿಕ್ಕ ಹಣದಲ್ಲಿ ಅಧಿಕಾರಿಗಳು ಕಾರು, ಫೋನು, ಕಚೇರಿ ಅಂತಾ ದುಂದು ವೆಚ್ಚ ಮಾಡುತ್ತಿದ್ದಾರೆ. ಕಾರ್ಮಿಕರಿಗೆ ಅಂತಾ ಖರ್ಚು ಮಾಡೋದು ಇಲ್ಲವೇ ಇಲ್ಲ. ಇದನ್ನೇ ಅಲ್ವಾ ಯಾರದೋ ದುಡ್ಡಿನ್ಯಾಗ ಯಲ್ಲವ್ವನ ಜಾತ್ರಿ ಮಾಡೋದು ಅಂತಾ ಕರಿಯೊದು?






ಯಾವುದೇ ಸರಕಾರ ಬಂದ್ರು ಈ ಗೋಳು ತಪ್ಪೋದಿಲ್ಲ. ಜನಸಾಮಾನ್ಯನಿಗೂ ಅಧಿಕಾರದವರಿಗೂ ಒಂದು ದೊಡ್ಡ ಅಂತರ ನಾನಾ ರೀತಿಯಲ್ಲಿ ಉಂಟಾಗುತ್ತಲೇ ಇರುತ್ತದೆ. ವಿಶ್ಲೇಷಣೆ ಚೆನ್ನಾಗಿದೆ.
ಯಾವುದೇ ಪೂರ್ವಸಿದ್ಧತೆ ಇಲ್ಲದೇ, ಯಾರಿಗೆ ಮುಟ್ಟುತ್ತೆ, ಎಲ್ಲಿ ಪೋಲಾಗುತ್ತೆ, ತಲುಪಬೇಕಾದವರಿಗೆ ಸರಿಯಾಗಿ ತಲುಪಿಸಲು ಕಾರ್ಯಯೋಜನೆ ಯಾವುದೂ ಇಲ್ಲದೇ ಬರುವ ಜನಪ್ರಿಯ ಯೋಜನೆಗಳು, ಕಾಗದಕ್ಕಷ್ಟೇ ಸಿಮೀತವಾಗಿರುವ ಕಾನೂನುಗಳು..ನಿಜವಾದ ಅವಶ್ಯಕತೆ ಇದ್ದವರಿಗೆ ಬಿ.ಪಿ.ಎಲ್ ಕಾರ್ಡಗಳೇ ಇಲ್ಲ..ಕಾರ್ಡ ಇದ್ದವರು, ೩೦ಕೆ.ಜಿಯಲ್ಲಿ ೧೫ ಕೆ.ಜಿ ಉಳಿಸಿಕೊಂಡು, ಉಳಿದ ೧೫ ಕೆಜಿಯನ್ನು ಕೆಜಿಗೆ ೧೦ರೂಪಾಯಿಯಂತೆ ಮತ್ತೆ ಉಳ್ಳವರಿಗೆ ಮಾರುತ್ತಿದ್ದಾರೆ..ದೋಸೆ ಮಾಡಲು!. ಯೋಜನೆಯ ಸುಸಂಬದ್ಧತೆ ಪ್ರಶ್ನಿಸಿದರೆ ಬಡವರ ವಿರೋಧಿಗಳು ಎಂಬ ಪಟ್ಟ ಮತ್ತು ಇತರ ಹಲವಾರು ಉಪದೇಶಗಳನ್ನು ಕೇಳುವ ಸದಾವಕಾಶ!