ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾಕ 'ಗದಗ- ಬೆಂಗಳೂರು ಬಸ್' ಕ್ಯಾನ್ಸಲ್ ಆಗ್ಯಾದೇನು..??

ಜಿ ಎನ್ ಮೋಹನ್ 

ನಾನು ಅವರನ್ನು ಬಹುವಚನದಲ್ಲಿ ಕರೆಯುತ್ತಿದ್ದೆ ಎನ್ನುವುದು ಬಿಟ್ಟರೆ ನನ್ನ ಮತ್ತು ಅವರ ಮಧ್ಯೆ ಇನ್ನಾವ ಗೋಡೆಯೂ ಇರಲಿಲ್ಲ.

ಹುಡುಗರನ್ನು ಇನ್ನಷ್ಟು ಹುಡುಗರನ್ನಾಗಿ, ವಯಸ್ಸಾದವರಿಗೂ ಇನ್ನಷ್ಟು ಹರಯ ನೀಡುವ ‘ಯಯಾತಿ’ತನ ಅವರಲ್ಲಿತ್ತು. ಅವರ ಸುತ್ತ ಸದಾ ಯುವಕರ ದಂಡು. ಅದರ ಜೊತೆಗೆ ಒಂದು ಹತ್ತು ಕೇಜಿಯಾದರೂ ಕುಲು ಕುಲು ನಗೆ.

ಅಲ್ಲಿದ್ದವರ ವಯಸ್ಸೆಷ್ಟು ಎಂದು ಕೇಳುವಂತಿಲ್ಲ. ಯಾಕೆಂದರೆ ಅಲ್ಲಿದ್ದವರಿಗೆಲ್ಲಾ ವಯಸ್ಸೆಷ್ಟೇ ಇದ್ದರೂ ತಮ್ಮ ಮಾಂತ್ರಿಕ ದಂಡದಿಂದ ಅವರದ್ದು ಯುವ ಮನಸ್ಸಾಗಿ ಮಾಡಿಬಿಡುವ, ಅವರಲ್ಲಿ ತುಂಟತನ ಹುಟ್ಟು ಹಾಕಿಬಿಡುವ ತಾಖತ್ತು ಅವರಲ್ಲಿ ಇತ್ತು- ಅವರು ವಾಜಪೇಯಿ, ಗೋಪಾಲ ವಾಜಪೇಯಿ.

14333764_10207987187460885_5853407641966829659_n

ಹಾಗಾಗಿ ಅವರು ತಾವೊಬ್ಬರೇ ಈ ಲೋಕದಿಂದ ಕಾಣೆಯಾಗಲಿಲ್ಲ. ನಮ್ಮ ಹದಿಹರೆಯವನ್ನು, ನಮ್ಮ ತುಂಟ ಮನಸ್ಸನ್ನೂ ಹೊತ್ತೊಯ್ದುಬಿಟ್ಟರು..

ಗೋಪಾಲ ವಾಜಪೇಯಿ ಇಲ್ಲದ ನಾವು ಈಗ ಅಬಾಲ ವೃದ್ಧರು.

ಯಾವುದೇ ಒಂದು ಕಾರ್ಯಕ್ರಮ, ಯಾವುದೇ ಒಂದು ಕೂಟ, ಯಾವುದೇ ಒಂದು ನಾಲ್ಕು ಜನ ಸೇರುವಲ್ಲಿ ವಾಜಪೇಯಿ ಬಂದರು ಎಂದರೆ ಅವರ ವಯಸ್ಸು ಮಾನ್ಯ ಮಾಡದೆ ಚೇಷ್ಟೆ ಮಾಡುವುದನ್ನು ಎಲ್ಲರೂ ಹಕ್ಕಾಗಿಸಿಕೊಂಡುಬಿಟ್ಟಿದ್ದೆವು.

ಅವರೋ ‘ಗಡ್ಡ ಎಳೆದವನಿಗೆ ಮಿಠಾಯಿ’ ಎನ್ನುವ ಸೂತ್ರವನ್ನು ಅಳವಡಿಸಿಕೊಂಡುಬಿಟ್ಟಿದ್ದರು. ನಾವೆಲ್ಲಾ ಅವರನ್ನು ಗೇಲಿ ಮಾಡಿ, ಅವರ ಹೊಟ್ಟೆ ತಟ್ಟಿ, ತೋಳು  ಹಿಂಡಿ, ಹೇಳಬಾರದ ಹಲಾಲುಕೋರ ಜೋಕನ್ನೆಲ್ಲಾ ಹೇಳಿದರೂ ಅವರು ಮಾತ್ರ ತಮ್ಮ ಆ ಒಂದು ಬ್ಯೂಟಿಫುಲ್ ನಗು ಎಸೆದು ಒಂದು ಮಿಠಾಯಿ ಕೊಟ್ಟುಬಿಡುತ್ತಿದ್ದರು.

14344776_10207987185380833_46420012029544866_nಗೋಪಾಲ ವಾಜಪೇಯಿ ಅವರನ್ನ ಕಾಕಾ, ದೊಡ್ಡಪ್ಪ, ಮಾಮ, ಅಜ್ಜ.. ಅಂತ ಕರೆಯುವ ಹಕ್ಕು, ಅದರೊಂದಿಗೆ ಇನ್ನೂ ನೂರೆಂಟು ಹೆಸರು ಹಚ್ಚುವ ಹಕ್ಕು ಎಲ್ಲರಿಗೂ ಇತ್ತು.

ಅವರನ್ನು ಥೇಟ್ ದೂರದ ಊರಿನಿಂದ ಯಾವಾಗಲೂ ಬೆಂಡು ಬತ್ತಾಸು ಮಿಠಾಯಿ ತರುವ ಮಾಮ ಯಾವಾಗ ಬರುತ್ತಾರೋ ಎಂದು ಚಿಕ್ಕ ಮಕ್ಕಳು ಕಣ್ಣಲ್ಲಿ ಕನಸು, ಮನದಲ್ಲಿ ಆಸೆ ಹೊತ್ತು ಕಾಯುತ್ತಾರಲ್ಲಾ.. ಹಾಗೆ.. ಹಾಗೇ ನಾವು ಕಾಯುತ್ತಿದ್ದೆವು.

ಅವರೋ ತಮ್ಮ ವಯಸ್ಸು ಎಷ್ಟು ಎನ್ನುವ ಲೆಕ್ಕವನ್ನು ತಮ್ಮ ಮನೆಯ ಕೋಣೆಯಲ್ಲೇ ಎಸೆದು ಬರುತ್ತಿದ್ದರು. ಸಿಕ್ಕವರ ಕೆನ್ನೆ ಹಿಂಡಿ, ಇನ್ನಷ್ಟು ಜನರ ಹೊಟ್ಟೆ ಮುಟ್ಟಿ, ಮತ್ತಷ್ಟು ಜನರಿಗೆ ಅಡ್ಡ ಹೆಸರು ಕಟ್ಟಿ ಕಿಸಿಕ್ ಎಂದು ನಗುತ್ತಿದ್ದರು. ಹೆಣ್ಣು ಮಕ್ಕಳು ಯಾರೇ ಆಗಿರಲಿ ‘ಅಕ್ಕ’ ಎನ್ನುವುದನ್ನು ಸೇರಿಸದೆ ಮಾತಾಡಿದ್ದು ಕಂಡೇ ಇಲ್ಲ

‘ಮಾಯಾದ ಮನದ ಭಾರ.. ತಗದಾಂಗ ಎಲ್ಲ ದ್ವಾರ.. ಏನಾ ಏನಿದೋ ಎಂತಾ ಬೆರಗಾ.. ‘ ಎನ್ನುವುದು ನಿಜಕ್ಕೂ ಅನ್ವಯಿಸುತ್ತಿದ್ದುದು ಅವರಿಗೆ.

ಅವರಿಗೆ ಎಲ್ಲವೂ ಬೆರಗು.. ಪುಟ್ಟ ಮಕ್ಕಳ ಕಣ್ಣಿತ್ತು ಅವರಿಗೆ. ಒಂದು ಬೆರಗಿನಿಂದಲೇ ಎಲ್ಲವನ್ನೂ ನೋಡುತ್ತಿದ್ದರು. ಹಾಗಾಗಿ ಜವರಾಯನಿಗೂ ಕನ್ಫ್ಯೂಷನ್ನು. ಕಂಬದ ಮೇಲಿನ ಗೊಂಬೆಯಂತೆ ಇವರ ಜೀವ ಸಾಕಷ್ಟು ವರ್ಷಗಳಿಂದ ಕುಳಿತಿತ್ತು. ಅವರು ತಮ್ಮ ಸುತ್ತ ನಾಗಮಂಡಲ ಕಟ್ಟಿಕೊಂಡೇ ಇನ್ನಷ್ಟು ವರ್ಷಗಳನ್ನು ಗೆದ್ದುಕೊಂಡು ಬಿಟ್ಟರು.

‘ಜವರಾಯ ಬಂದಾಗ ಬರಿಗೈಲಿ ಬರಲಿಲ್ಲ..’ ಎಂದ ತಕ್ಷಣ ನಾವೆಲ್ಲಾ ಆತ ಕುಡುಗೋಲು ಕತ್ತಿ ಹಿಡಿದು ಬಂದು ಬಿಟ್ಟ, ಒಳ್ಳೊಳ್ಳೆ ಮರವ ಕಡಿ ಬಂದ.. ಎಂದುಕೊಂಡು ಬಿಡುತ್ತೇವೆ. ಇಲ್ಲ ಕಾಕಾ ವಿಚಾರದಲ್ಲಿ ಹಾಗಾಗಲಿಲ್ಲ. ಆ ಜವರಾಯನೂ ಒಂದಿಷ್ಟು ಒಳ್ಳೆಯ ನೆನಪುಗಳನ್ನೇ ಹಿಡಿ ತುಂಬಾ ತಂದ.

ಗೋಪಾಲ ವಾಜಪೇಯಿ ಹಾಗೂ ನಾನು ಸಾಕಷ್ಟು ವರ್ಷಗಳನ್ನು ಗೆಳೆತನದ ಬೆಲ್ಲ ಹಂಚಿಕೊಂಡು ಕಳೆದೆವು. ಎಷ್ಟೋ ಜನರಿಗೆ ಗೊತ್ತಿಲ್ಲದ ಅವರ ಮುಖಗಳು ನನಗೆ ಗೊತ್ತಿದ್ದವು. ಅವರ ತಲ್ಲಣ, ತುಮುಲಗಳೂ..

ಅವರ ನಗುವ ಮುಖ, ಚೇಷ್ಠಿ ಮಾಡುವ ದನಿ ಖಾಸಗಿಯಾಗಿ ನನ್ನ ಬಳಿ ಎಷ್ಟೋ ಬಾರಿ ಬಿಕ್ಕುತ್ತಿತ್ತು, ಕಣ್ಣೀರಾಗುತ್ತಿತ್ತು..

ಗೋಪಾಲ ವಾಜಪೇಯಿ ಹಾಗೂ ‘ಅವಧಿ’ ಜೊತೆಗಿನ ಬಾಂಧವ್ಯವಂತೂ ಎಲ್ಲರಿಗೂ  ಗೊತ್ತು.

ಹೈದರಾಬಾದ್ ಬಿಟ್ಟು ಬೆಂಗಳೂರು ಸೇರಿದಾಗ ವಾಜಪೇಯಿ ತಬ್ಬಲಿಯಂತಾಗಿ ಹೋಗಿದ್ದರು. ‘ಅವಧಿ’ಗೆ ಬರೆಯಲೇಬೇಕು ಎಂದಾಗ ಕಂಪ್ಯೂಟರ್ ಕಷ್ಟ ಅಂದರು. ಗದರಿಕೊಂಡೆ. ನಿಮಗೆ ಸೋಮಾರಿತನ ಅಂತ. ಅಷ್ಟೇ ಅವರು ಮೌಸ್ ನ್ನು ಎಷ್ಟು ಪಳಗಿಸಿಕೊಂಡುಬಿಟ್ಟರೆಂದರೆ ‘ಅವಧಿ’ ಅವರ ಬರಹಗಳ ಸರಮಾಲೆಯೇ ಕಂಡಿತು.

gopala-vajapeyigopal-kakaಒಂಟಿತನ ಅನುಭವಿಸುತ್ತಿದ್ದ ಅವರಿಗೆ ಈಗ ಅಂತರ್ಜಾಲನೆಂಬ ಕೃಷ್ಣನ ಬಾಯಲ್ಲಿ ಜಗತ್ ದರ್ಶನವಾಗಿತ್ತು- ಅವರೇ ಬರೆದುಕೊಂಡರು ‘ಅವಧಿ ನನಗೆ ದೊಡ್ಡ ಬಳಗವನ್ನು ಕೊಟ್ಟುಬಿಟ್ಟಿತು. ನಾನು ಮತ್ತೆ ಹುಟ್ಟಿ ಬಂದೆ’ ಅಂತ. ಆ ಮಾತು ‘ಅವಧಿ’ಗೂ ಅಷ್ಟೇ ನಿಜ. ಅವರು ‘ಅವಧಿ’ಗೆ ಒಂದು ದೊಡ್ಡ ಬಳಗವನ್ನೇ ಕೊಟ್ಟುಬಿಟ್ಟರು

ಏನು ಬರೆದರೂ ‘ಅವಧಿ’ಯಲ್ಲಿ ಮೊದಲು ಬರಬೇಕು ಎನ್ನುವ ಅವರ ಕಾಳಜಿ ನನಗೆ ‘ಏನಾ ಏನಿದೋ..’ ಎನ್ನುವ ಬೆರಗನ್ನೇ ಹುಟ್ಟಿಹಾಕುತ್ತಿತ್ತು.

ಮತ್ತೆ ಅಂತಹದ್ದೇ ಸರಣಿಗೆ ಸಜ್ಜಾಗಿದ್ದೆವು. ವಾಜಪೇಯಿ ಎಂದರೆ ವಾಜಪೇಯಿಯೇ.. ಅವರ ಶಿಸ್ತು ಎಷ್ಟು ಮೈ ಜುಮ್ ಎನಿಸುತ್ತಿತ್ತು ಎಂದರೆ ಅವರು ಸಾಕಷ್ಟು ಮುಂಚೆಯೇ ತಮ್ಮ ಹತ್ತಾರು ಲೇಖನ, ಅದಕ್ಕೆ ಹೊಂದುವ ಚಿತ್ರ ಎಲ್ಲಾ ಕೊಟ್ಟು ‘ಹೆಂಗೆ?’ ಎನ್ನುವಂತೆ ನಮ್ಮ ಕಡೆ ಅದೇ ನಗೆ ಚೆಲ್ಲುತ್ತಿದ್ದರು

ಮೊನ್ನೆ ಎಂದರೆ ಮೊನ್ನೆ ಹೊಸ ಅಂಕಣ ಆರಂಭಿಸಿದೆವು. ಅವರ ಧಾರವಾಡ ಅವರ ಅಕ್ಷರದಲ್ಲಿ ಮೂಡಿದ ಸೊಬಗೇ ಬೇರೆ. ಆದರೆ ಧಾರವಾಡದಿಂದ ‘ಅಲ್ಲೇ ನನ್ನೂರು ಲಕ್ಷ್ಮೇಶ್ವರಕ್ಕೆ ಹೋಗಿ ಬರುತ್ತೇನೆ ‘ಎನ್ನುವಂತೆ ಎದ್ದು ನಡೆದೇಬಿಟ್ಟರು

ನಮಗೂ ಅಷ್ಟೇ ಅವರೇನು ‘ಜವರಾಯ ಎಕ್ಸ್ ಪ್ರೆಸ್’ ಏರಿದ್ದಾರೆ ಅಂತೇನೂ ಅನಿಸುತ್ತಿಲ್ಲ ಕಾಕಾ ಗದಗಿಗೆ ಹೋಗ್ಯಾರ, ಕಟಕ್ ರೊಟ್ಟಿ, ಹುಚ್ಚೆಳ್ಳು ಚಟ್ನಿ, ಶೇಂಗಾ ಹಿಂಡಿ ತಿಂದು ಬರ್ತಾರಾ.. ಬರುವಾಗ ಮತ್ತ ನಾವೆಲ್ಲಾ ಕಾಯ್ತಿರ್ತೀವಿ ಅಂತ ಅಲ್ಲೇ ಜಾತ್ರೇನಾಗ ಅಡ್ಡಾಡಿ ಬೆಂಡು ಬತ್ತಾಸು ತಂದೇ ತರ್ತಾರಾ ಅಂತ ಅನಿಸುತ್ತಿದೆ.

ಖಂಡಿತಾ ಬರ್ರೀ ಸರ, ಯಾಕ  ‘ಗದಗ- ಬೆಂಗಳೂರು ಬಸ್’ ಕ್ಯಾನ್ಸಲ್ ಆಗ್ಯಾದೇನು..??

 

‍ಲೇಖಕರು Admin

22 September, 2016

12 Comments

  1. ಬೀರು ದೇವರಮನಿ

    ಮನಸ್ಸು ಕಲಕುವ ಹಾಗೆ ಅವರ ಒಡನಾಟದ ಬಗ್ಗೆ ಬರೆದಿರುವೀರಿ ಸರ್, ಓದುವಾಗ ದುಃಖ ಉಮ್ಮಳಿಸಿ ಬರುತ್ತದೆ. ಅವರ ನಗು ಎಲ್ಲರನ್ನು ಸೆಳೆಯುತ್ತದೆ..ನಿಮ್ಮ ನಿರ್ಗಮನ ಬೇಸರ ತಂದಿದೆ..
    ಹೋಗಿ ಮತ್ತೆ ಬನ್ನಿ ಗೋವಾ ಕಾಕಾ..

  2. ಬಾಲಕೃಷ್ಣ

    ಅವರನ್ನು ಹತ್ತಿರದಿಂದ ಬಲ್ಲವರಿಗೆ ಅವರು ಎಂತಹ ಅದ್ಭುತ ವ್ಯಕ್ತಿ ಅಂದು ತಿಳಿಯುತ್ತದೆ. ತುಂಬಲಾರದ ನಷ್ಟ.

  3. lakshmikanth itnal

    ಸರಮಾಲೆಯ ನೆನಪುಗಳು, ಜಿಎನ್ ರವರ ಆಪ್ತತೆಯ ಭಾಗಗಳ ಅಕ್ಷರ ರೂಪಿ ನುಡಿನಮನಗಳು, ಮೆಚ್ಚಿದೆ ಸರ್, ಏನ್ ಚಂದ ಬಿಚ್ಚೀರಿ ಸರ್, ನೆನಪಿನ ಬುತ್ತಿ….. ಗೋಪಾಲ ವಾಜಪೇಯಿ ಕಾಕಾ ಗದಗಕ್ಕೆ ಹೋಗ್ಯಾರೋ, ಲಕ್ಷ್ಮೇಶ್ವರಕ್ಕೋ, ಅಂದ್ರಿ. ಓಡಿ ಹೋಗಿ, ಅವರಿಗೆ ರೊಟ್ಟಿ, ಮುಳ್ಳಗಾಯಿ ಬದನೇಕಾಯಿ ಪಲ್ಲೆ,, ಕೆಂಪು ಖಾರದ ಜೊತೆ ಬೆಣ್ಣಿ, ಸೇಂಗಾ ಚಟ್ನಿ, ಅಗಸಿ ಚಟ್ನಿ, ಗುರೆಳ್ಳ ಪುಡಿ, ಕೆನೆ ಮೊಸರು ಎಲ್ಲಾ, ಮಠದ ಹತ್ತಿರದ ಬದನೇಕಾಯಿ ಭಜಿ ಎಲ್ಲಾ ಹಿಡಕೊಂಡು ನಿಂತೀವಿ ಸರ್, ಆ ಬಸ್ ಇನ್ನೂ ಇಲ್ಲೆ ಬಂದೇ ಇಲ್ಲಾ, ಅಲ್ಲೇ ಎಲ್ಲೋ ನಿಂತಿರಬೇಕು, ಬ್ರೇಕ್ ಡೌನ್ ಆಗಿ. ಅಲ್ಲಿ ಇಲ್ಲ, ಇಲ್ಲೂ ಇಲ್ಲ, ಇನ್ನೆಲ್ಲಿ ಹೊತೋ! ಹೂತು ಹೋತೋ! ಎದ್ಯಾಗಿನ ನಿಲ್ದಾಣದಾಗ ಏನಾರ ಇಳದ್ರೋ ಹೆಂಗ! ಅರವತ್ತರ ಅರಳು ಮರಳು ಆಗೂ ಹಂಗೂ ಇಲ್ಲ ಅವರು. ಅವ್ರು ನೀವಅ ಹೇಳು ಹಂಗ ಮುದುಕರಿಗೂ ಹರೆಏ ಕೊಡೋ ಆಸಾಮಿ. ‘ಮಾಯಾದ ಮನದ ಭಾರ.. ತಗದಾಂಗ ಎಲ್ಲ ದ್ವಾರ.. ಏನಾ ಏನಿದೋ ಎಂತಾ ಬೆರಗಾ.. ‘ ಅನಕೋಂತ ಕಂಬದ ಮ್ಯಾಲ ಬೊಂಬೆ ಏನಾದರೂ ಆದರೋ ಹೆಂಗ!

  4. ಹ ವೆಂ ಕಾಖಂಡಿಕಿ

    ಆಪ್ತ ಬರಹ.
    ಗೋವಾ ಅವರನ್ನು ಕಳೆದುಕೊಂಡು ನೋವು ಅನುಭವಿಸುವ ಈ ಕ್ಷಣದಲ್ಲಿ ಈ ಅಂಕಣ ನೀಡಿದ
    ಸಮಾಧಾನ ಅಷ್ಟಿಷ್ಟಲ್ಲ.
    ಗೋವಾ ಅವರಿಗೆ ಗೌರವದ ನಮನಗಳು.

  5. ಪ್ರೇಮಲತ ಬಿ.

    ಇವತ್ತಿನ ಅವಧಿ ಯ ಪ್ರತಿ ಅಕ್ಶರವನ್ನು ಓದಿದೆ. ಗೋಪಾಲ ವಾಜಪೇಯಿಯವರ ದಿವ್ಯ ದರ್ಶನವಾಯ್ತು!!! ಅವರ ಬರಹದ ಮೄಷ್ಟಾನ್ನದ ಅನುಭವವಾಯ್ತು!! ಅವರ ಅಕಾಲಿಕ ಅಗಲಿಕೆಯ ನೋವು ತಟ್ಟಿತು.
    ಇವತ್ತಿನ ಆವ್ರುತ್ತಿ ಅವಧಿ ಸಲ್ಲಿಸಿದ ಉತ್ತಮ ಶ್ರದ್ದಾಂಜಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ.

  6. Sarojini Padasalagi

    ಈ ನಿಮ್ಮ ಲೇಖನ ಮನ ಕಲುಕಿ , ಅವರನ್ನ ನೋಡಿರದೇ ಬರೀ ಕೇಳಿದ ,ಅವರ ಬಗ್ಗೆ ಅಪಾರ ಗೌರವ ಹೊಂದಿದ ನನಗೆ ಕಣ್ಣೀರು ತಡೆಯಲಾಗಲಿಲ್ಲ .ಈ ಹುಚ್ಚು ಮನ ಯೋಚಿಸುತ್ತಿದೆ ,ಕನಸೊಳಗೆ ಜೀವನವೋ ,ಜೀವನವೇ. ಒಂದು ಕನಸೋ .ಉತ್ತರ ಎಲ್ಲಿ ಹುಡುಕಲಿ ಎಂಬಂತಾಗಿದೆ .ಇಲ್ಲೇ ಎಲ್ಲೋ ಹಸಿರು ಸಿರಿಯಲಿ ಮೈಮರೆತ ಗೋ.ವಾ.ಬಂದಾರು ಎಂಬ ಹಳವಂಡ .ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಆವರ ಅಮೋಘ ವ್ಯಕ್ತಿತ್ಪದ ನೆರಳಿನಲ್ಲಿದ್ದ ನೀವೇ ಸುದೈವಿಗಳು . ಅವರ ಆತ್ಮ ಶಾಂತಿಯಲ್ಲಿ ವಿರಮಿಸಲಿ

  7. Prema Achyut kulkarni

    ommomme `kambada mayalina gombeye’ e hadannu gunuguttale kelasa maduttidde. nanagag gottirallilla idu gova baredaddu endu. 2000 dalli samyukta karnatakakke seridaga avaragale allinda sarididdaru. adrashtavashat nivedita (nanna colige) manege hodaga avara bhettiyagittu. chennagi matanadisidaru. avdhiyalli avara baraha oduttidde. avarellu hogilla, avara lekhana, nataka, pustakagalli adagiddarashte. oduvagallomme aa naguva moga nenedare manada mallige araluttade.
    hogi banni sir, namaste.

  8. Anonymous

    ವಾಜಪೇಯಿ ಅವರನ್ನು ನೋಡಿ ವಿದಾಯ ಹೇಳಲು
    ಹೋದಾಗ ಅವರನಗುಮುಖವೇ ಇತ್ತು.
    ಪ್ರಮೋದ್ ಶಿಗ್ಗಾಂವ್ ಅವರು ಇನ್ನು ನೀವು ನಾಟಕಕ್ಕೆ ಬನ್ನಿ ಅಂತ ಇವರಿಗೆ ಹೇಳೊಹಾಗಿಲ್ಲ ಅಂದಾಗ ಅವರಿಗೂ,ನನಗೂ ಮನಭಾರವಾಯಿತು

  9. mm shaik

    ninne beLigge prajAvaani Odi khinnyautu manassu che… istu bega…sambandhikarobbarannu kaLedukonda novu..innuu bittlla aa sambndha besedukottiddu avadhi..devaru avara aatmakke shanti nidali..

  10. Sandhya

    ಪ್ರತಿಯೊಂದು ಬರಹ ಗೋಪಾಲ ವಾಜಪೇಯಿ ಅವರ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುವಂತೆ ಮಾಡುತ್ತಿದೆ. ಅವರು ಇಲ್ಲ ಎನ್ನುವ ವಿಷಯ ಸುಳ್ಳಾಗಲಿ ಅಂತ ಮನಸು ಬಯಸುತ್ತಿದೆ. ಒಮ್ಮೆಯಾದರು ಭೇಟಿಯಾಗುವ ಅವಕಾಶ ಸಿಗಬೇಕಿತ್ತು.

  11. ವಿನತೆ ಶರ್ಮ

    ಎಷ್ಟೋ ವರ್ಷಗಳ ಹಿಂದೆ ಅವರನ್ನ ಎರಡು ಸಂದರ್ಭಗಳಲ್ಲಿ, ಬೆಂಗಳೂರಿನಲ್ಲಿ ನೋಡಿದ್ದೆ. ಅವರ ಬಗ್ಗೆ ಗೊತ್ತಿರಲಿಲ್ಲ. ಯಾರೂ ಅವರನ್ನ ಆ ದಿನಗಳಲ್ಲಿ ಎತ್ತಿ ಕೊಂಡಾಡುತ್ತಿರಲಿಲ್ಲ. ಎಲೆ ಮರೆಯ ಆ ಕಾಯಿ ಅದು ಆಗಲೇ ತನ್ನ ಸಿಹಿ ಪಕ್ವವನ್ನು ಬೇಕಾದಷ್ಟು ಜನರಿಗೆ ಹಂಚುತಿತ್ತು. ಅವರ ಸಿಹಿಯನ್ನ ಹಂಚುವ ಕೆಲಸ ಈಗ ಬೇರೆಲ್ಲರ ಜವಾಬ್ದಾರಿ. ‘ಅವಧಿ’ಯಲ್ಲಿ ಅವರು ಬರೆದ “ಏಣಗಿ ನಟರಾಜ: ಒರಟ, ಆದರೂ ಒಳ್ಳೆಯ ನಟ…” ಬರಹ – ಆ ನಟರಾಜರ ಅದ್ಭುತ ನಟನೆಯನ್ನು ಹಲವಾರು ನಾಟಕಗಳಲ್ಲಿ ನೋಡಿದ್ದ ನನಗೆ – ಅತ್ಯಂತ ಇಷ್ಟವಾಗಿತ್ತು. ಈ ಲೋಕಕ್ಕೆ ಬಹಳಾ ಬೇಕಿದ್ದ ಮತ್ತೊಂದು ಅಪರೂಪದ ಜೀವ ಸುಮ್ಮನಾಯಿತಲ್ಲಾ.

  12. Anonymous

    ಲೇಖನ ಚೆನ್ನಾಗಿದೆ. ಎದುರಿಗೆ ಕೂತು ಮಾತುಗಳನ್ನು ಹಂಚಿಕೊಂಡಂತೆ ಆಪ್ತವಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading