ನಾಗ ಐತಾಳ
ಜೋಗಿಯವರು ಫೇಸ್ ಬುಕ್‌ನಲ್ಲಿ ಬರೆದ ‘…ಓದು ಸ್ವಂತಕ್ಕಾಗಿ…’ ಎಂಬ ಉಲ್ಲೇಖ ನನ್ನ ಗಮನ ಸೆಳೆದಿದ್ದು, ನಮ್ಮ ಮನೆಯಲ್ಲಿ ನರಹಳ್ಳಿಯವರು ಮಾಡಿದ ‘ಓದಿನ ಸುಖ’ ಭಾಷಣದ ನೆನಪು ತಂದಿತು. ಇತ್ತೀಚೆಗೆ ನರಹಳ್ಳಿಯವರು ಅಮೆರಿಕ ಸಂದರ್ಶಿಸಿದ್ದು, ಕೆಲವುಕಡೆ ಸಾಹಿತ್ಯಕ ವಿಚಾರವಾಗಿ ಭಾಷಣ ಮಾಡಿದ್ದರು. ಅವರು ನಮ್ಮಲ್ಲಿ ಮಾಡಿದ ಭಾಷಣದಲ್ಲಿ, ಮೊದಲಿಗೆ ಅವರು ಬಿ. ಆರ್. ಲಕ್ಷ್ಮಣ ರಾವ್ ಅವರ ‘ರುಚಿ’ ಕವನವನ್ನು ಉದ್ಧರಿಸಿದ್ದರು:
ಬಾಳೆ ಹಣ್ಣು ಜೀರ್ಣಕಾರಿ
ಕಿತ್ತಲೆ ಪುಷ್ಠಿದಾಯಕ
ಮಾವಿನ ಹಣ್ಣಲ್ಲಿದೆ ಪ್ರೋಟೀನು
ಕಲ್ಲಂಗಡಿ ರಕ್ತವರ್ಧಕ
ನೇರಳೆ ಹಣ್ಣಲ್ಲಿದೆ ಅಯೊಡಿನ್ನು
ಹಲಸಿನಲ್ಲಿದೆ ಫೈಬರ್ರು
ಪರಂಗಿ ಹಣ್ಣಲ್ಲಿದೆ ಖನಿಜಾಂಶ
ದ್ರಾಕ್ಷೆಯಲ್ಲಿ ಗ್ಲುಕೋಸು
ಕರ್ಬೂಜದಲ್ಲಿದೆ ಕಾರ್ಬೋಹೈಡ್ರೇಟು
ಸೇಬು ತಿಂದರೆ ನಿರೋಗ
ಅದು ಸರಿ, ಕೇವಲ ರುಚಿಗೆಂದೇ
ಹಣ್ಣು ಸವಿಯುವುದು ಯಾವಾಗ?
ಓದು, ಹಲವು ರೀತಿಯಲ್ಲಿ ವಾಚಕರನ್ನು ತೃಪ್ತಿಪಡಿಸುತ್ತದೆ. ಓದನ್ನು, ಓದಿನ ಸುಖಕ್ಕಾಗಿಯೇ ಓದಿ, (ವಿಮರ್ಶೆಗಾಗಲೀ, ಅಥವಾ ಬೇರಾವ ಉದ್ದೇಶದಿಂದಾಗಲೀ ಓದದೆ) ಅದರ ಸವಿಯನ್ನು ಅನುಭವಿಸುವುದೇ ಓದಿನ ಮಹತ್ವ!!! ಈ ನಿಟ್ಟಿನಲ್ಲಿ ಓದು ಸ್ವಂತ ರುಚಿ ಅನುಭವಿಸುವುದಕ್ಕಾಗಿ – ಎಂಬುದು ಅಕ್ಷರಶಃ ನಿಜ!!! ಬಿ.ಆರ್.ಎಲ್. ಅವರ ಕವನದಲ್ಲಿ, ಸಾಹಿತ್ಯಾಸಕ್ತರಿಗೆ ಒಂದು ಅನನ್ಯ ಸಂದೇಶವಡಗಿದೆ ಎಂದು ನರಹಳ್ಳಿಯವರು ಹೇಳಿದ್ದರು.
ಯಾಕೋ ಇದನ್ನು ಪೋಸ್ಟ್ ಮಾಡುವ ಮನಸ್ಸಾಯ್ತು.






That’s true! Odannu odina khushigagi odabeku.
ಹಲವು ಪುಸ್ತಕಗಳನ್ನು ಓದಿ ಸುಖಪಟ್ಟವನು/ಕಣ್ಣೀರಿಟ್ಟವನು ನಾನು.ಇದು ಸಾಂಕ್ರಾಮಿಕವಾಗಿ ನಮ್ಮ ಮನೆಯ ಒಳಗೆ,ಹೊರಗೆ ಹರಡಿದ್ದನ್ನು ನೋಡಿ ಬಹಳ ಸಂತೋಷ ಪಟ್ಟಿದ್ದೇನೆ.ಅದರಲ್ಲಿಯೂ ಕೇವಲ ಪ್ರಾಥಮಿಕ ಶಾಲೆಗೇ ಶಿಕ್ಷಣ ಮುಗಿಸ ಬೇಕಾಗಿ ಬಂದ ನಮ್ಮ ತಾಯಿ ಬಹಳ ಕಾಲದ ನಂತರ ಕಥೆ,ಕಾದಂಬರಿಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡದ್ದು,ತಮ್ಮ ವೃದ್ಧಾಪ್ಯವನ್ನು ಓದಿನ ಸುಖದಲ್ಲಿ ಕಾಲ ಕಳೆಯುತ್ತಿರುವುದು ಒಂದು ವಿಶೇಷ.
ಆದರೆ ನನ್ನ ಪ್ರಶ್ನೆಯೆಂದರೆ ಕೇವಲ ಓದಿನ ಸುಖಕ್ಕಾಗಿ ಓದು ಎಂಬುದೊಂದಿದೆಯೆ? ಸುಖವನ್ನು ಅನುಭವಿಸುವಾಗ ನಮ್ಮ ಮನಸ್ಸು ಅರಳುತ್ತದೆ.ನಮ್ಮ ಅರಿವು ವಿಸ್ತಾರವಾಗುತ್ತದೆ.ಅವರವರ ಪ್ರವೃತ್ತಿಗೆ ಅನುಗುಣವಾಗಿ ಅಂತಹ ಪುಸ್ತಕಗಳೇ ನಮಗೆ ಸುಖ ಕೊಡುತ್ತದೆ.ಇದು ಒಂದು.ಅಧ್ಯಯನಕ್ಕೆಂದು ನಾವು ಪುಸ್ತಕಗಳನ್ನು ಓದುವಾಗ ಹೊಸ ಎತ್ತರಕ್ಕೆ ನಮ್ಮನ್ನು ಕೊಂಡೊಯ್ಯುವ ಶೋಧ ಎದುರಾದರೆ ಸುಖವೆನ್ನಿಸುವುದಲ್ಲವೇ? ಸುಖವೆಂದರೆ ಏನು ಕೇವಲ ಮನರಂಜನೆಯೇ? ಈ ಪ್ರಶ್ನೆಗಳು ನನಗಿವೆ.
ನನ್ನಪ್ಪ ಓದುವುದು ನನ್ನಮ್ಮ ಕೇಳುವುದು, ನಾವು ಹುಡುಗರು ಸುತ್ತ ಕೂತು ಕೇಳುತ್ತಾ ಕೇಳುತ್ತಾ ಮಾಯಾಲೋಕಕ್ಕೇ ಹೋಗುತ್ತಿದ್ದ ಆ ಸುಖ ನಾನು ಪ್ರೊಫೆಸರ್ ಆದಮೇಲೆ ಎಲ್ಲಿ ಮಾಯವಾಗಿಹೋಯಿತೋ! ಅದು ಓದಿನ ಸುಖವಲ್ಲ ಅದಕ್ಕಿಂತ ಮಿಗಿಲಾದ ಅವರ್ಣನೀಯ ಸುಖ!