ಯಾಕೆ ಅಸಂಗತ|ಗಳು?
ಬಸವರಾಜ ಎಮ್ಮಿಯವರ
—–
ಅದಾಗಲೇ ಬೀಚಿಯವರ ಆತ್ಮಚರಿತ್ರೆಯಾಧಾರಿತ ‘ಮಾನಸ ಪುತ್ರ’ ಮತ್ತು ತ.ರಾ.ಸು ಅವರ ಕಂಬನಿಯ ಕುಯಿಲು ಆಧಾರಿತ ‘ಚಿಗರಿಗಂಗಳ ಚೆಲುವೆ’ ನಾಟಕಗಳನ್ನು ರಂಗದ ಮೇಲೆ ತಂದು ಒಂದಷ್ಟು ಯಶಸ್ವಿ ಪ್ರದರ್ಶನ ನೀಡಿದ್ದ ನಮ್ಮನ್ನು, ದಿಢೀರನೆ ಬಂದ ಕೊರೋನ ಎಲ್ಲರನ್ನೂ ಕೂರಿಸಿದ ಹಾಗೆ ನಮ್ಮನ್ನೂ ಸುಮ್ಮನೆ ಕೂರಿಸಿತು.
ಆ ಸಂದರ್ಭದಲ್ಲಿ ನಾವು ಹೊಸ ನಾಟಕಗಳ ಓದು ಮತ್ತು ಅವುಗಳ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾಗ ರಂಗಕರ್ಮಿ ಯತೀಶ್ ಎನ್. ಕೊಳ್ಳೆಗಾಲ ಅವರಿಂದ ಚಂದ್ರಶೇಖರ ಪಾಟೀಲರ ನಾಟಕಗಳ ಪರಿಚಯವಾಯಿತು. ಈ ನಾಟಕಗಳು ಮೊದಲ ಓದಿನಲ್ಲಿ ಹೆಚ್ಚಾಗಿ ಅಷ್ಟು ತಿಳಿಯದಾದರೂ ಆ ಪಠ್ಯಗಳಿದ್ದ ಲವಲವಿಕೆ ಮತ್ತು ನಿಗೂಢ ಅರ್ಥ ಸಾಧ್ಯತೆಗಳು ಮತ್ತೆ ಮತ್ತೆ ಓದಿಸಿಕೊಂಡು ನಮ್ಮ ನಮ್ಮಲ್ಲಿ ಹಲವು ಆಲೋಚನೆಗಳನ್ನು ಹುಟ್ಟಿಸತೊಡಿಗಿದವು. ಅಸಂಗತ ಅನ್ನುವ ಸಾಹಿತ್ಯ ಪ್ರಕಾರ ನಮಗೆ ಹೊಸತು. ನಮ್ಮಿಂದ ಅವುಗಳನ್ನು ಅರಿತುಕೊಳ್ಳುವ ನಿರಂತರ ಪ್ರಕ್ರಿಯೆ ಇಂದಿಗೂ ನಡೆಯುತ್ತಲೇ ಇದೆ.

ಚಂಪಾ ನಾಟಕಗಳಲ್ಲಿ ನಮಗೆ ಕಾಣಸಿಗುವ ಉತ್ತರ ಕರ್ನಾಟಕದ ಆಡು ನುಡಿ, ಅಲ್ಲಿನ ಜನ, ತಮ್ಮ ಪರಿಸರದ ಸುತ್ತಮುತ್ತಲಿನ ಒಡನಾಟ ಹಾಗೂ ಅಲ್ಲಿನ ಮನಸ್ಥಿತಿಗಳು ಹೇಗಿರುತ್ತವೆ ಎಂದು ಪರಿಚಯವಾಗತೊಡಗಿತು. ನಮ್ಮ ತಂಡದಲ್ಲಿ ಉತ್ತರ ಕರ್ನಾಟಕದ ಭಾಗದ ಕೆಲವು ಸದಸ್ಯರು ಇದ್ದರೂ ಕೂಡ ನಾಟಕದ ಮರು ಓದಿನಲ್ಲಿ ಕಾಡಿದ ಆಡು ನುಡಿಗಳ ಅರ್ಥಗಳನ್ನು ತಿಳಿದುಕೊಳ್ಳಲು ಉತ್ತರ ಕರ್ನಾಟಕದ ಶಾಲಾ ಶಿಕ್ಷಕರು ಹಾಗೂ ಅಲ್ಲಿನ ಹಿರಿಯನ್ನು ಸಂಪರ್ಕಿಸಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದೆವು. ನಾಟಕದ ಓದಿನಲ್ಲಿ ಕಾಡಿದ ಈ ನಾಟಕಗಳನ್ನು ರಂಗದ ಮೇಲೆ ತರಬೇಕು ಮತ್ತು ತಂಡದ ಕಲಾವಿದರಿಗೆ ಅಸಂಗತ ಸಾಹಿತ್ಯ ಪ್ರಕಾರವನ್ನು ಪರಿಚಯ ಮಾಡಬೇಕು ಎಂದು ನಾವು ಈ ನಾಟಕಗಳನ್ನು ಒಟ್ಟು ಸೇರಿಸಿ “ಅಸಂಗತ|ಗಳು” ಎನ್ನುವ ಶೀರ್ಷಿಕೆಯನ್ನು ಇಟ್ಟು ತಾಲೀಮು ಶುರು ಮಾಡಿದೆವು.
ಈಗಾಗಲೇ ಎರಡು ಪ್ರದರ್ಶನಗಳನ್ನು ನೀಡಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದ್ದರೂ ಈ ಪಠ್ಯಗಳಾಗಲಿ ಮತ್ತು ಅವುಗಳ ಸಾಧ್ಯತೆಗಳಾಗಲಿ ನಮಗೆ ಸಂಪೂರ್ಣ ದಕ್ಕಿವೆ ಎಂದು ಸ್ಪಷ್ಟವಾಗಿ ಇಂದೂ ಹೇಳಿಕೊಳ್ಳಲಾಗದು. ಪ್ರತಿಸಲ ತಾಲೀಮಿಗೆ ತೊಡಗಿದಾಗಲೂ ಯಾವುದೋ ಹೊಸ ಆಯಾಮವೊಂದು ತಲೆಗೆ ತಾಕಿ ಇಲ್ಲಿಯವರೆಗೂ ನಾವು ಭ್ರಮಿಸಿದ್ದ ಅರ್ಥಗಳನ್ನು ಅಳಿಸಿ ಹಾಕಿಬಿಡುವಂತಹ ಅನುಭವಗಳು ಆಗುತ್ತಲೇ ಇವೆ. ಹೀಗಾಗಿ ನಮಗೆ ಇವು ಕಲಿಕೆಗೆ ಮತ್ತು ಪ್ರದರ್ಶನಕ್ಕೆ ನಿರಂತರ ಸವಾಲು ಒಡ್ಡುತ್ತಲೇ ಇರುವ ನಾಟಕಗಳು. ಈಗ ಮೂರನೇ ಪ್ರದರ್ಶನವನ್ನು ದಿನಾಂಕ 02-ಸೆಪ್ಟೆಂಬರ್-2023 ಶನಿವಾರ ಸಂಜೆ 7:30ಕ್ಕೆ ಕಲಾಗ್ರಾಮ ಮಲ್ಲತಹಳ್ಳಿ ಬೆಂಗಳೂರು, ಇಲ್ಲಿ ಹಮ್ಮಿಕೊಂಡಿದ್ದರೂ ಇವುಗಳ ಹೊಸ ಹೊಸ ಸಾಧ್ಯತೆಗಳಿಗೆ ತರೆದುಕೊಂಡೇ ಹೆಜ್ಜೆ ಹಾಕುತ್ತಿದ್ದೇವೆ.

ಇಷ್ಟಲ್ಲದೆ “ಅಸಂಗತ” ನಾಟಕಗಳ ಮರು ಪ್ರಯೋಗ ಯಾಕೆ ಮುಖ್ಯ ಆಗುತ್ತದೆ ಅಂದರೆ? ಈ ರೀತಿಯ ನಾಟಕಗಳನ್ನು ಕಟ್ಟುವ ಪ್ರಕ್ರಿಯೆಯಲ್ಲಿ ವರ್ತಮಾನದ ವಿಷಯಗಳನ್ನು ಅಸಂಗತ (absurd) ಚೌಕಟ್ಟಿನ ಒಳಗೆ-ಹೊರಗೆ ಹೊಕ್ಕು ಇನ್ನೂ ಹೆಚ್ಚು ಹೆಚ್ಚು ಅಸಂಗತ ನಾಟಕಗಳನ್ನು ಬರೆಯುವ ಪ್ರಯತ್ನವನ್ನು ಈಗಿನ ಕಾಲದ ಯುವ ನಾಟಕಕಾರರು ಮಾಡಬೇಕು ಎನ್ನುವ ಆಶಯವನ್ನು ಕೂಡಾ ಹೊಂದಿದೆ.
ಅಸಂಗತ|ಗಳು ನಾಟಕದ ಪ್ರದರ್ಶನದ ವಿವರಗಳು:
ತಂಡ : ಕಲಾವಿಲಾಸಿ
ನಾಟಕ : ಅಸಂಗತ|ಗಳು
ರಚನೆ : ಚಂದ್ರಶೇಖರ ಪಾಟೀಲ
ನಿರ್ದೇಶನ : ಬಸವರಾಜ ಎಮ್ಮಿಯವರ
ದಿನಾಂಕ : 02-ಸೆಪ್ಟಂಬರ್-2023
ಸ್ಥಳ : ಕಲಾಗ್ರಾಮ, ಮಲ್ಲತ್ತಹಳ್ಳಿ – ಬೆಂಗಳೂರು
ಕಲಾವಿಲಾಸಿ ತಂಡವನ್ನು ಸಂಪರ್ಕಿಸಲು:
Mobile : 9663523904 / 9739398819
E-mail : [email protected]
0 ಪ್ರತಿಕ್ರಿಯೆಗಳು